• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಲ್ಲಿಗೆ ಕ್ಲಿಪ್ಪೂ, ಗೌಳಿ ಶಾಸ್ತ್ರವೂ...

By Staff
|
Srivathsa Joshi *ಶ್ರೀವತ್ಸ ಜೋಶಿ

‘ಕಾಗೆ ಅಕ್ಕಿ ತೊಳೆದು ಅನ್ನಕ್ಕಿಡುತ್ತಿದೆ; ಅಂದ್ರೆ ಇವತ್ತು ಯಾರೋ ನೆಂಟರು ಬರ್ತಾರೆ...’ ಎಂಬ ಅರ್ಥ ಬರುವಂತಹ ‘ನಂಬಿಕೆ’ (superstition) ನಮ್ಮೂರ ಕಡೆ ಇದೆ. ಹಾಗೆಯೇ ಕಾಗೆ ‘ಕಾ ಕಾ...’ ಬದಲು ‘ಸಾ... ಸಾ...’ ಎಂದು ವಿಚಿತ್ರಧ್ವನಿ ಮಾಡಿದರೆ ಏನೋ ಸಾವಿನ ಸುದ್ದಿಯಿದೆಯೆಂದು ಅರ್ಥ! ಅಡಿಕೆ ತೋಟದಲ್ಲಿ ಕೆಂಬೂತ (ಸಾಂಬಾರ ಕಾಗೆ ಎನ್ನುವುದು ಇದನ್ನೇ?) ನೋಡಲು ಸಿಕ್ಕರೆ ಅವತ್ತು ಸಿಹಿ ತಿನ್ನಲು ಸಿಗುತ್ತದೆ..., ಮುಸ್ಸಂಜೆಯ ಹೊತ್ತು ಗೂಬೆ ‘ಹೂಂ’ಗುಡುವುದು ಕೇಳಿದರೆ ಅಡಿಕೆಗೆ ಧಾರಣೆ ಏರುತ್ತದೆ..., ದಾರಿಯಲ್ಲಿ ಬೆಕ್ಕು ಅಡ್ಡ ಬಂದರೆ ಅಶುಭ, ಬೆಕ್ಕು ತನ್ನ ಎಡಕೈಯಿಂದ (ಮುಂಗಾಲಿನಿಂದ) ಮುಖ ಒರೆಸಿಕೊಂಡರೆ ಏನೋ ಒಂದು... ಪಾರಿವಾಳ ಮನೆಯಾಳಗೆ ಗೂಡು ಕಟ್ಟಿ ಮೊಟ್ಟೆಗಳನ್ನಿಟ್ಟರೆ ಇನ್ನೊಂದು - ಹೀಗೆ ವಿಧವಿಧ ರೀತಿಯ ನಂಬಿಕೆಗಳು ತಲೆತಲಾಂತರಗಳಿಂದ ಬಂದಿರುವುದು ಒಂದು ಕುತೂಹಲಕರ ವಿಷಯ.

ಪ್ರಾಣಿ-ಪಕ್ಷಿ ಆಧಾರಿತ ಈ ನಂಬಿಕೆಗಳು ಎಷ್ಟು ಸತ್ಯ ಎಷ್ಟು ಸುಳ್ಳು, ಅವುಗಳಿಗೆ ವೈಜ್ಞಾನಿಕ ಆಧಾರವೇನಾದರೂ ಇದೆಯೇ, ಹಿಂದಿನಕಾಲದವರು ಯಾವುದೋ ಒಂದು ನಿರ್ದಿಷ್ಟ ಕಾರಣಕ್ಕಾಗಿ ಈ ರೀತಿಯ ನಂಬಿಕೆಗಳನ್ನು ಹುಟ್ಟುಹಾಕಿದರೇ.. ಇತ್ಯಾದಿ ಪ್ರಶ್ನೆಗಳು ಮೂಡುವುದು ಸಹಜ. ಇವೆಲ್ಲ ಒಂದು ನಮೂನೆಯಲ್ಲಿ ಜನಪದ ದಂತಕಥೆಗಳ ಮಾದರಿ. ಯಾರೋ ಕೆಲವರು ನಂಬುತ್ತಾರೆ, ಮತ್ತೆ ಕೆಲವರು ಕ್ಯಾರೇ ಅನ್ನೊಲ್ಲ.

ಆದರೆ ಸರೀಸೃಪಗಳ ವಿಷಯದಲ್ಲಿ, ಅದರಲ್ಲೂ ‘ಹಲ್ಲಿ’ಯ (lizard) ಬಗೆಗಿನ ನಂಬಿಕೆಗಳು ಮಾತ್ರ ಪ್ರಬಲವೂ, ಸ್ವಲ್ಪ ಹೆಚ್ಚೇ ಸರ್ವವ್ಯಾಪಿಯೂ ಇದ್ದಂತಿದೆ. ನಾವು ಮಾತನಾಡುವಾಗ ಅಕಸ್ಮಾತ್‌ ಅಲ್ಲೇ ಗೋಡೆಯ ಮೇಲಿರುವ ಹಲ್ಲಿ ಲೊಚಗುಟ್ಟಿದರೆ ನಾವಾಡಿದ ಮಾತು ಸತ್ಯವೇ ಆಗುತ್ತದೆ ಎಂಬ ಪ್ರತೀತಿಯನ್ನು ನೀವು ಕೇಳಿರಬಹುದು. ಹಲ್ಲಿಯೇನಾದರೂ ನಮ್ಮ ಮೈಮೇಲೆ ಬಿತ್ತೋ, ಓ ಅದೊಂದು ಮಹಾ ಶಕುನ ! ‘ಗೌಳಿ ಶಾಸ್ತ್ರ - ಗೌಳಿ ಪತನ ಫಲ’ ಎಂದೇ ಪ್ರಖ್ಯಾತವಾದ ಒಂದು ಅಧ್ಯಾಯವೇ ಶಾಸ್ತ್ರದಲ್ಲಿದೆ, ಹಲ್ಲಿ ನಮ್ಮ ಮೈಮೇಲೆ ಬಿದ್ದುದರ ಬಗ್ಗೆ ಎನಾಲೈಸ್‌ ಮಾಡಲು!

ಗೌಳಿ ಶಾಸ್ತ್ರದ ಸಂಕ್ಷಿಪ್ತ ರೂಪವನ್ನು ಒಂಟಿಕೊಪ್ಪಲ್‌ ಮೊದಲಾದ ‘ಪಂಚಾಂಗ’ದಲ್ಲೂ ಕೊಟ್ಟಿರುತ್ತಾರೆ. ಅದನ್ನು ನೀವೊಮ್ಮೆ ಓದಬೇಕು. ಭಲೇ ಮಜಾ ಇರುತ್ತದೆ ಆ ವಾಕ್ಯಗಳಲ್ಲಿ. ಇಲ್ಲಿ ಈ ವರ್ಷದ ಒಂಟಿಕೊಪ್ಪಲ್‌ ಲಘುಪಂಚಾಂಗದ 5ನೇ ಪುಟದಿಂದ ‘ಮಕ್ಕಿ ಕಾ ಮಕ್ಕಿ’ ನಕಲು ಮಾಡಿದ ಗೌಳಿಪತನಫಲ ಹೀಗಿದೆ ನೋಡಿ. ಗೌಳಿಶಾಸ್ತ್ರದಂಥದ್ದನ್ನು ನಂಬಿ ಎಂದು ಪ್ರೀಚಿಸುವುದಾಗಲೀ, ನಂಬಬೇಡಿ ಎಂದು ಕ್ರಾಂತಿಕಾರಕ ಸ್ಪೀಚಿಸುವುದಾಗಲಿ ಇಲ್ಲಿ ಅಪ್ರಸ್ತುತ. ಅದರಲ್ಲೇ ಸ್ವಲ್ಪ ಸ್ವಾರಸ್ಯ ಹುಡುಕೋಣ ಎಂದು ಯೋಚಿಸಿ ಅದನ್ನು ವಾಚಿಸುವುದು - ಇಷ್ಟೇ ನಮಗೆ ಬೇಕಾದ್ದು.

ಹಲ್ಲಿ ಬಿದ್ದುದಕ್ಕೆ ಶುಭಾಶುಭ ಫಲಗಳು:

ತಲೆಯ ಮೇಲೆ ಬಿದ್ದರೆ ಕಲಹ, ಮುಖದ ಮೇಲೆ ಧನಾಗಮವು. ಕಣ್ಣುಗಳ ಮೇಲೆ ತೇಜಸ್ಸು , ಕಣ್ಣುಗಳ ಮಧ್ಯಭಾಗದಲ್ಲಿ ರಾಜಾನುಗ್ರಹವು, ಮೂಗಿನ ಮೇಲೆ ಸುಗಂಧ ವಸ್ತು ಪ್ರಾಪ್ತಿ, ಮೇಲಿನ ತುಟಿಯ ಮೇಲೆ ಧನವ್ಯಯ, ಕೆಳಗಿನ ತುಟಿಯ ಮೇಲೆ ಧನಲಾಭ, ಮೂಗಿನ ಕೊನೆಯಲ್ಲಿ ವ್ಯಾಧಿ ಸಂಭವ, ಎಡ ಕಿವಿಯ ಮೇಲೆ ವ್ಯಾಪಾರ ಲಾಭ, ದವಡೆಯ ಮೇಲೆ ಸ್ತ್ರೀ ಸೌಖ್ಯ, ಎಡ ಭುಜದ ಮೇಲೆ ವ್ಯಥೆ, ಬಲ ತೋಳಿನ ಮೇಲೆ ಚೋರಭಯ, ಎಡತೋಳಿನ ಮೇಲೆ ಸುಖಪ್ರದ, ಬಲಗೈ ಮೇಲೆ ದ್ರವ್ಯಲಾಭ, ಬೆರಳುಗಳ ಮೇಲೆ ಶುಭ, ಎದೆಯ ಮೇಲೆ ಯಶಸ್ಸು, ಹೊಟ್ಟೆಯ ಮೇಲೆ ಧಾನ್ಯಲಾಭ, ಹೊಕ್ಕಳಿನ ಮೇಲೆ ಸೌಖ್ಯ, ಬಲಮೊಳಕಾಲಿನ ಮೇಲೆ ತೀರ್ಥಯಾತ್ರೆ, ಎಡಮೊಳಕಾಲಿನ ಮೇಲೆ ಕಾರ್ಯಸಿದ್ಧಿ, ಕಾಲುಗಳ ಮೇಲೆ ಪ್ರಯಾಣವು.

ಹಲ್ಲಿ ಬಿದ್ದ ದೋಷ ಪರಿಹಾರ

ಸಚೇಲ ಸ್ನಾನ ಮಾಡಿ ತಮ್ಮ ಇಷ್ಟದೇವರಿಗೆ ತುಪ್ಪದಿಂದ ದೀಪಹಚ್ಚಿ ಗಂಧ ಪುಷ್ಪದಿಂದ ಅರ್ಚನೆಯನ್ನು ಮಾಡಿ ನಮಸ್ಕರಿಸಿ ಪೀಡಾ ಪರಿಹಾರ ಮಾಡಬೇಕೆಂದು ಪ್ರಾರ್ಥಿಸಬೇಕು ಮತ್ತು ಭಾನುವಾರ ಬಿದ್ದರೆ ಮೊಸರನ್ನ, ಸೋಮವಾರ ಕ್ಷೀರಾನ್ನ, ತೈಲಪದಾರ್ಥ, ಮಂಗಳವಾರ ಚಿತ್ರಾನ್ನ, ಬುಧವಾರ ಗೋಧಿ ಪದಾರ್ಥ, ಗುರುವಾರ ಪಾಯಸ, ಶುಕ್ರವಾರ ದೋಸೆ, ಶನಿವಾರ ತಿಲಾನ್ನವನ್ನು ದೇವರಿಗೆ ನೈವೇದ್ಯ ಮಾಡಿ ಭುಂಜಿಸಬೇಕು. ಕಂಚಿಯಲ್ಲಿ ಚಿನ್ನದ ಹಲ್ಲಿ, ಬೆಳ್ಳಿಯ ಹಲ್ಲಿಯನ್ನು ದರ್ಶನ ಮಾಡಿದವರನ್ನು ಮಾತನಾಡಿಸಿದರೆ ದೋಷ ಪರಿಹಾರವೆಂಬುದು ವಾಡಿಕೆಯಲ್ಲಿದೆ.

ಇದಿಷ್ಟು ಈ ವಾರದ ವಿಚಿತ್ರಾನ್ನದ ಅಸಲಿ ಸೀರಿಯಸ್‌ ಭಾಗ. ಇನ್ನು ಮುಂದಿನದು ಪಕ್ಕಾ ರೀಲು, ಒಂದಿಷ್ಟು ರ್ಯಾಷನಲ್‌ ಥಿಂಕಿಂಗು, ಲ್ಯಾಟರಲ್‌ ಥಿಂಕಿಂಗು - ಜಸ್ಟ್‌ ಇನ್‌ ದ ನೇಮ್‌ ಆಫ್‌ ಹಲ್ಲಿ!

  • ಗೌಳಿಶಾಸ್ತ್ರವು ಪಂಚಾಂಗದಲ್ಲಿ ಸೇರ್ಪಡೆಯಾಗಲು ಏನು ಕಾರಣವೆಂಬುದು ಗೊತ್ತಾಗುವುದಿಲ್ಲ. ಆಶ್ಚರ್ಯವೆಂದರೆ ಪ್ರತಿ ವರ್ಷದ ಪಂಚಾಂಗದಲ್ಲೂ ಅದು ಒಂದೇ ತರ ಇರುತ್ತದೆ. ಹಾಗಾದರೆ ಹಲ್ಲಿ ಗ್ರಹ-ನಕ್ಷತ್ರಗಳ ಚಲನೆಯ ಪ್ರಭಾವದಿಂದ ಅತೀತವೇ?
  • ನಮಗೇನೋ ಹಲ್ಲಿ ಬಿದ್ದರೆ ಶುಭಾಶುಭ ನೋಡಲು ಪಂಚಾಂಗವಿದೆ, ಗೌಳಿಶಾಸ್ತ್ರವಿದೆ. ಆದರೆ ಬಡಪಾಯಿ ಹಲ್ಲಿ ಎಷ್ಟು ಹೆದರಿರಲಿಕ್ಕಿಲ್ಲ ! ಅದಕ್ಕಾದ ಮಾನಸಿಕ, ದೈಹಿಕ ಆಘಾತವನ್ನು ನಾವು ಎಂದಾದರೂ ಆಲೋಚಿಸಿದ್ದುಂಟೇ?
  • ಮೊದಲೇ ಹಲ್ಲಿ ಮೈಮೇಲೆ ಬಿದ್ದರೆ ‘ಓ ನನ್‌ ಮೈ ಮೇಲೆ ಏನೋ ಬಿತ್ತು...’ ಎಂದು ಹೇಸಿಗೆ ಭಯಗಳಿಂದ ಚೀರಿಡುತ್ತ ಮೈಕೊಡವಿಕೊಳ್ಳುತ್ತೇವೆಯೇ ಹೊರತು ಅದು ಯಾವ ಆ್ಯಂಗಲ್‌ನಲ್ಲಿ ಎಷ್ಟು ವೆಲಾಸಿಟಿಯಿಂದ ಎಲ್ಲಿ, ಹೇಗೆ ಬಿತ್ತು ಎಂದು ನೋಟ್‌ ಮಾಡುವ ವ್ಯವಧಾನ ನಮಗಿರುತ್ತದೆಯೇ?
  • ಮೂಗಿನ ಮೇಲೆ ಹಲ್ಲಿ ಬಿದ್ದರೆ ಸುಗಂಧವಸ್ತು ಪ್ರಾಪ್ತಿಯಂತೆ! ಏನು ಸುಗಂಧವಸ್ತುವೊ ಎಂಥ ಕತೆಯೋ!
  • ಮೇಲಿನ ತುಟಿಯ ಮೇಲೆ ಬಿದ್ದರೆ ಧನವ್ಯಯ, ಕೆಳಗಿನ ತುಟಿಯ ಮೇಲೆ ಬಿದ್ದರೆ ಧನಲಾಭ - ಇಷ್ಟು ರೇಜರ್‌ಶಾರ್ಪ್‌ ಬೌಂಡರಿಯನ್ನು ಹಲ್ಲಿ ಪಾಲಿಸಿದ್ದೇ ಆದರೆ ಅದರ ಬೀಳುವಿಕೆಯ ಚಾಕಚಕ್ಯತೆಯನ್ನು, ಕೌಶಲ್ಯವನ್ನು ಮೆಚ್ಚಲೇಬೇಕು!
  • ಅಥವಾ ಅದು ಹೀಗಿರಬಹುದು - ನಾವು ಆಕಳಿಸುವಾಗ ಇಲ್ಲವೇ ಬಾಯ್ತೆರೆದು ಗೊರಕೆ ಹೊಡೆಯುತ್ತ ನಿದ್ರಿಸಿದ್ದಾಗ (zzzzz......) ಮೇಲ್ದುಟಿ ಕೆಳದುಟಿಗಳ ನಡುವೆ ಹಲ್ಲಿಯ ಉದ್ದಗಲಗಳಿಗಿಂತ ಹೆಚ್ಚಿನ ದೂರವಿದ್ದರೆ ಆಗ ಹಲ್ಲಿ ಒಂದೋ ಮೇಲ್ದುಟಿಯ ಮೇಲೆ ಮಾತ್ರ, ಇಲ್ಲ ಕೆಳತುಟಿಯ ಮೇಲೆ ಮಾತ್ರ ಬೀಳುವುದಕ್ಕಡ್ಡಿಯಿಲ್ಲವಲ್ಲ !
  • ದೋಷ ಪರಿಹಾರದ ನೆಪದಲ್ಲಿಯೂ ನೋಡಿ, ನಮಗೆ ಭಕ್ಷ್ಯಭೋಜ್ಯ. ಪಾಪ ಆ ಹಲ್ಲಿ ಯಾವುದೋ ನೊಣವನ್ನು, ಹಾತೆಯನ್ನು ಹಿಡಿದು ತಿನ್ನಲು ಮುನ್ನುಗ್ಗಿದಾಗ ಆಯ ತಪ್ಪಿ ಬಿದ್ದುದಾಗಿರಬಹುದು. ಅದರ ಆಹಾರ ಹೇಗೂ ಹೋಯ್ತು ; ದೇವರಿಗೆ ಮತ್ತು ನಮಗೆ ನೈವೇದ್ಯ ಸೇವೆ ಬೇರೆ!
  • ಮಂಗಳವಾರದ ನೈವೇದ್ಯವನ್ನು ನೀವು ಗಮನಿಸಬೇಕು. ಅದರ ಬಗ್ಗೆ ಇನ್ನು ವಿಶೇಷ ನಾನೇನೂ ಹೇಳುವಂಥದ್ದಿಲ್ಲ !

* * *

ಇಷ್ಟರವರೆಗೂ ಗೌಳಿ, ಹಲ್ಲಿ , ಪಲ್ಲಿ ಎಂದೇ ಪುರಾಣ ವಾಚನವಾಯ್ತೇ ವಿನಃ ಇವತ್ತಿನ ಶೀರ್ಷಿಕೆಯಲ್ಲಿನ ಕ್ಲಿಪ್‌ನ ಸಂಗತಿ ಎಂಥದು ಅಂತ ಹೇಳಲೇ ಇಲ್ಲವಲ್ಲ ! ಅ(ಹ)ಲ್ಲಿ ಮಲಗಿದೆ ಬಿಂದು.

‘ಹಲ್ಲಿಗೆ ಕ್ಲಿಪ್‌ ಹಾಕಿಸಿದೆ...’ ಎಂದು ಮೊನ್ನೆ ಒಂದುದಿನ ಒಬ್ಬ ಸ್ನೇಹಿತರು ಚಾಟೋಕ್ತಿ ಟೈಪಿಸಿದ್ದರು (‘ನೇರ ಬರಹ’ ಉಪಯೋಗಿಸಿ ಯಾಹೂಹರಟೆಕಿಟಿಕಿಯಲ್ಲಿ ಕನ್ನಡದಲ್ಲೇ ಚಾಟುತ್ತೇವೆ ನಾವು ಕೆಲವೊಮ್ಮೆ). ಡೆಂಟಿಸ್ಟ್‌ ಬಳಿ ಎಪಾಯಿಂಟ್‌ಮೆಂಟ್‌ನ ಸಮಾಚಾರವದು ಎಂದು ಗೊತ್ತಿದ್ದರೂ ಬೇಕೆಂದೇ ‘You mean you clipped a lizard...?’ ಎಂಬ ನನ್ನ Queಶ್ನೆ ಗೆ ಅವರು ಮೈಮೇಲೆ ಹಲ್ಲಿ ಬಿದ್ದವರಂತೆ ತಬ್ಬಿಬ್ಬುಗೊಂಡರೋ ಏನೋ! ನಮ್ಮೂರಲ್ಲಿ ಮನೆಗಳಲ್ಲಿ ಗೋಡೆ ಮೇಲೆ ಕಾಣಸಿಗುವ ಹಲ್ಲಿಗಳು, ನೊಣವನ್ನು ಕಬಳಿಸಲು ನಾಲಿಗೆ ಚಾಚಿದ ಹಲ್ಲಿ, ಹಲ್ಲಿಯ ಬಾಲ ಕತ್ತರಿಸಲ್ಪಟ್ಟರೆ ಅದಕ್ಕೂ ಜೀವವಿದ್ದು ಚಲನೆಯಿರುವುದು... ಇತ್ಯಾದಿ ದೃಶ್ಯಗಳಿಂದ ಹಿಡಿದು ಪಂಚಾಂಗದಲ್ಲಿನ ಗೌಳಿಪತನಫಲದವರೆಗೆ ಎಲ್ಲ ಕಣ್ಮುಂದೆ ಸುಳಿದುವು, ‘ಹಲ್ಲಿಗೆ ಕ್ಲಿಪ್‌...’ ಸುದ್ದಿ ಕೇಳಿದ ಆ ಕ್ಷಣದಲ್ಲಿ !

ತಮಿಳ್ನಾಡಿನ ಕಂಚಿ ಕಾಮಾಕ್ಷಿ ದೇವಾಲಯದಲ್ಲಿ ಬಂಗಾರದ, ಬೆಳ್ಳಿಯ ಹಲ್ಲಿಗಳ ಮೂರ್ತಿಗಳಿದ್ದು ಭಕ್ತಾದಿಗಳು ಅವನ್ನೂ ದೇವರಂತೆ ದರ್ಶಿಸುತ್ತಾರೆ ಎಂದ ಮೇಲೆ ಹಲ್ಲಿಗೆ ಒಂದು ವಿಚಿತ್ರಾನ್ನವನ್ನು ಸಮರ್ಪಿಸುವ ಯೋಚನೆ ಬಂದುದರ ಫಲವೇ ಇದುವರೆಗೆ ನೀವೋದಿದ ಲೇಖನ.

ಈ ವಾರದ ‘ಇಂಟರಾಕ್ಟಿವ್‌ ಫೀಚರ್‌’: ನಿಮ್ಮ ಜ್ಞಾನಭಂಡಾರದಲ್ಲಿರುವ ಯಾವುದೇ ನಂಬಿಕೆ-ರಿವಾಜುಗಳು (ಪ್ರಾಣಿ-ಪಕ್ಷಿಗಳ ವಿಷಯದ್ದೇ ಎಂದೇನೂ ಇಲ್ಲ) ನೆನಪಿಗೆ ಬಂದರೆ ಬರೆದು ತಿಳಿಸಿ. ವಿವಿಧ ಮೂಲಗಳಿಂದ ಬಂದವನ್ನೆಲ್ಲ ಒಟ್ಟಿಗೆ ಪಟ್ಟಿ ಮಾಡಿದರೆ ಓದಲು ಮಜಾ ಆಗಿರುತ್ತದೆ. ವಿಳಾಸ- srivathsajoshi@yahoo.com

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more