• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಾನೆ ದಾನೆ ಪೆ ಲಿಖಾ ಹೈ...

By Staff
|
Srivathsa Joshi *ಶ್ರೀವತ್ಸ ಜೋಶಿ

Rice Grain Venkatesh1957ರ ಹಿಂದಿ ಚಲನಚಿತ್ರ ‘ಬಾರಿಷ್‌’ನಲ್ಲಿ ಒಂದು ಚಿತ್ರಗೀತೆ. ಬರೆದದ್ದು ರಾಜೇಂದ್ರ ಕಿಷನ್‌. ‘ದಾನೆ ದಾನೆ ಪೆ ಲಿಖಾ ಹೈ ಖಾನೆವಾಲೆ ಕಾ ನಾಮ್‌... ಲೇನೆವಾಲೆ ಕರೋಡ್‌... ದೇನೆವಾಲೆ ಏಕ್‌ ರಾಮ್‌...’ ಎಂಬ ಸಾಲುಗಳು. ಆಧ್ಯಾತ್ಮ ಸಂದೇಶವುಳ್ಳ ಈ ಸಾಲುಗಳನ್ನು, ಅವರವರ ನಸೀಬು-ಹಣೆಬರಹ-ಅದೃಷ್ಟ ಇತ್ಯಾದಿಯ ಬಗ್ಗೆ ಮಾತಾಡುವಾಗ ನಾವೂ ಉಪಯೋಗಿಸಿಕೊಳ್ಳುತ್ತೇವೆ. (ನಾನು ಮತ್ತು ನಿಮ್ಮಲ್ಲಿ ಹೆಚ್ಚಿನವರು 1957ರಲ್ಲಿ ಈ ಹಾಡು ಪ್ರಚಲಿತವಿದ್ದಾಗ ಇನ್ನೂ ಹುಟ್ಟಿರದಿದ್ದವರಾದರೂ...)

ಮೊನ್ನೆ ರಿಜಿಸ್ಟರ್ಡ್‌ ಅಂಚೆಯಲ್ಲಿ ನನಗೊಂದು ಲಕೋಟೆ ಬಂತು. ಅದರಲ್ಲಿ ಬರೇ ಕಾಗದ ಮಾತ್ರವಲ್ಲದೆ ಏನೋ ಸಣ್ಣ ಪ್ಯಾಕೆಟ್‌ ಇದೆ ಎಂದು ಮೇಲಿನಿಂದಲೇ ಗೊತ್ತಾಗುವಂತಿತ್ತು. ಇಲ್ಲಿ ವಾಷಿಂಗ್ಟನ್‌ ಪರಿಸರದಲ್ಲಿ ಕಳೆದ ವರ್ಷ ಆಂತ್ರಾಕ್ಸ್‌ ಭೀತಿ ವ್ಯಾಪಕವಾಗಿತ್ತಾದರೂ ಈಗ ಅಂಥದೇನೂ ಇರಲಾರದೆಂಬ ಧೈರ್ಯ. ಲಕೋಟೆಯನ್ನು ಕಳಿಸಿದವರ ಹೆಸರು, ವಿಳಾಸ ಪೂರ್ತಿ ಸ್ಪಷ್ಟವಾಗಿಯೇ ಇತ್ತು. ಲಕೋಟೆ ಒಡೆದು ನೋಡಿದರೆ ಆತ್ಮೀಯ ಪತ್ರದೊಂದಿಗಿನ ಸಣ್ಣ ಪ್ಯಾಕೆಟ್‌ನಲ್ಲಿ ಮೂರು ಅಕ್ಕಿ ಕಾಳು! ಅಂದವಾದ ಒಂದು ಬಿಲ್ಲೆಗೆ ಅಂಟಿಸಿದ್ದ ಅಕ್ಕಿ ಕಾಳುಗಳ ಮೇಲೆ ನೋಡಿದರೆ, ದಾನೆ ದಾನೆ ಪೆ ಲಿಖಾ ಹೈ.. ಹಮ್‌ ಲೋಗೋಂಕಾ ನಾಮ್‌! ಒಂದರಲ್ಲಿ ಶ್ರೀವತ್ಸ, ಇನ್ನೊಂದರಲ್ಲಿ ಸಹನಾ ಮತ್ತೊಂದರಲ್ಲಿ ಸೃಜನ್‌ ಎಂದು ಸುಂದರ ಅಕ್ಷರಗಳಲ್ಲಿ ಮೂಡಿದ ಹೆಸರುಗಳು!

ಪರಿಚಯಿಸುತ್ತಿದ್ದೇನೆ ನನ್ನೊಬ್ಬ ಹೊಸ ಸ್ನೇಹಿತನನ್ನು - ‘ಅಕ್ಕಿಕಾಳು ಬರಹ’ದ ಚಿಕ್ಕಮಗಳೂರಿನ ‘ರೈಸ್‌ ಗ್ರೈನ್‌ ವೆಂಕಟೇಶ್‌’! ಇವರನ್ನು ದಟ್ಸ್‌ಕನ್ನಡ ಓದುಗರಿಗೆ ಪರಿಚಯಿಸಲು ನಾನು ಬೇರೆಯೇ ಒಂದು ಲೇಖನವನ್ನು ಬರೆಯಬಹುದಿತ್ತು. ಆದರೆ, ಈ ‘ವಿಚಿತ್ರಾನ್ನ’ವೆಂಬ ಅಂಕಣದಲ್ಲಿ ನಾನು ಅಕ್ಷರಗಳೆಂಬ ಅಕ್ಕಿಯನ್ನು ಉಪಯೋಗಿಸಿ ಹೇಗಿದ್ದರೂ ರುಚಿಕರ ಚಿತ್ರಾನ್ನ ಬೇಯಿಸುವ ಪ್ರಯತ್ನ ವಾರವಾರವೂ ಮಾಡಬೇಕು; ಹಾಗಿರಲು ಅಕ್ಕಿಯ ಮೇಲೆ ಅಕ್ಷರಗಳನ್ನು ಬರೆಯುವವರ ಬಗ್ಗೆಯೇ ಒಂದು ವಿಚಿತ್ರಾನ್ನ ಬೇಯಿಸಿದರೆ ಒಳ್ಳೆಯದಾಗಬಹುದು ಎಂಬ ದೃಷ್ಟಿಯಿಂದ ಈ ವಾರ ಇದೊಂದು ‘ಪರಿಚಯ ಲೇಖನ’. ಆಗಬಹುದೇ?

ವೃತ್ತಿಯಲ್ಲಿ ಶೇರುಮಾರುಕಟ್ಟೆಯ ದಲ್ಲಾಳಿಯಾಗಿರುವ ವೆಂಕಟೇಶ್‌ ಚಿಕ್ಕಮಗಳೂರು ಮತ್ತು ದಾವಣಗೆರೆಯಲ್ಲಿ ಒಬ್ಬ ಬಿಸಿನೆಸ್‌ ಮ್ಯಾನ್‌. ಸಮಾಜಸೇವೆಗಾಗಿ ಚಿಕ್ಕಮಗಳೂರಿನ ಜ್ಯೂನಿಯರ್‌ ಚೇಂಬರ್ಸ್‌ ಸದಸ್ಯ. ಪ್ರವೃತ್ತಿಯಾಗಿ ಬಿಡುವಿನ ವೇಳೆಯನ್ನು ಕಲಾತ್ಮಕವಾಗಿ, ಕ್ರಿಯಾತ್ಮಕವಾಗಿ ಕಳೆಯಲು ವೆಂಕಟೇಶ್‌ ಎತ್ತಿಕೊಳ್ಳುವುದು ರೈಸ್‌ ಗ್ರೈನ್‌! ‘ಮೈಕ್ರೋ ಆರ್ಟ್‌’ ಎಂದು ಕರೆಯಲ್ಪಡುವ ಈ ಸಾಧನೆಯ ಕೆಲವೇ ಕೆಲವು ಮಂದಿಯಲ್ಲೊಬ್ಬರು ವೆಂಕಟೇಶ್‌. ಪ್ರಾಚೀನ ಕಾಲದಲ್ಲಿ ಭಾರತದಲ್ಲೇ ಶುರುವಾದ ಈ ವಿಶೇಷ ಕಲೆಯನ್ನು ಶತಮಾನಗಳಷ್ಟು ಹಿಂದೆಯೇ, ಒಬ್ಬ ರಾಜನಿಂದ ಇನ್ನೊಬ್ಬ ರಾಜನಿಗೆ ರಹಸ್ಯ ಸಂದೇಶಗಳನ್ನು ಕಳಿಸಲು ಬಳಸಲಾಗುತ್ತಿತ್ತಂತೆ! ಅಗಾಧವಾಗಿ ತಾಳ್ಮೆ, ತಾದಾತ್ಮ್ಯತೆ ಮತ್ತು ತತ್ಪರತೆ ಇರಲೇಬೇಕಾದ ಈ ಕಲೆಯನ್ನು ಉಳಿಸಿ ಬೆಳೆಸುತ್ತಿರುವವರು ಇಂದು ಬೆರಳೆಣಿಕೆಯಷ್ಟೇ ಜನ.

Art on Riceಒಂದು ಅಕ್ಕಿಕಾಳಿನ ಮೇಲೆ ನಾಲ್ಕು ಅಕ್ಷರಗಳನ್ನು ಬರೆಯುವುದರ ಮೂಲಕ ಆರಂಭಿಸಿದ ವೆಂಕಟೇಶ್‌ ಈಗ ಒಂದು ಕಾಳಿನ ಮೇಲೆ 578 ಅಕ್ಷರಗಳನ್ನು ಬರೆದು ದಾಖಲೆ ನಿರ್ಮಿಸಿದ್ದಾರೆ! ಒಂದು ಎಳ್ಳಿನ ಮೇಲೆ 62 ಅಕ್ಷರ ಬರೆದಿದ್ದಾರೆ (ಇದು, ಮತ್ತು ಅತ್ಯಂತ ಪುಟ್ಟ ಗ್ರೀಟಿಂಗ್‌ ಕಾರ್ಡ್‌ ರಚನೆ - ಇವೆರಡು ವೆಂಕಟೇಶ್‌ ಹೆಸರನ್ನು ‘ವರ್ಲ್ಡ್‌ ರೆಕಾರ್ಡ್‌’ ಎಂದು ಸದ್ಯದಲ್ಲೇ ಗಿನ್ನೆಸ್‌ ದಾಖಲೆಗಳ ಪುಸ್ತಕಕ್ಕೆ ಸೇರಿಸಲಿವೆ). ಅಕ್ಕಿ ಕಾಳಿನ ಮೇಲೆ ಗೀತಾಬೋಧನೆಯ ಚಿತ್ರ, ರಾಮಾಯಣ-ಮಹಾಭಾರತದ ಶ್ಲೋಕಗಳು-ಚಿತ್ರಗಳು, ಗಣೇಶ, ಬೈಸಿಕಲ್‌... ಹೀಗೆ ವೈವಿಧ್ಯಮಯ ಪರಿಣತಿ ಸಾಧಿಸಿದ್ದಾರೆ. ಭಾರತದ ವಿವಿಧೆಡೆಗಳಲ್ಲಿ ಮಾತ್ರವಲ್ಲದೆ ಯುರೋಪ್‌ನ ಕೆಲವು ಕಲಾಶಾಲೆ, ಮ್ಯೂಸಿಯಂಗಳಲ್ಲಿ ತಮ್ಮ ಕಲಾಪ್ರದರ್ಶನಗಳನ್ನು ಮತ್ತು ಮೈಕ್ರೋ ಆರ್ಟ್‌ ವರ್ಕ್‌ಶಾಪ್‌ಗಳನ್ನು ನಡೆಸಿದ್ದಾರೆ. ಇದೀಗ ಜೂನ್‌ನಲ್ಲಿ ಮತ್ತೆ ಯುರೋಪ್‌ಗೆ ವಿಮಾನ ಹತ್ತಲಿದ್ದಾರೆ ವೆಂಕಟೇಶ್‌, ಒಂದು ತಿಂಗಳ ಅವಧಿಯ ಕಾರ್ಯಾಗಾರವನ್ನು ನಡೆಸಿಕೊಡಲು.

ಅಕ್ಕಿಕಾಳಿನ ಮೇಲೆ ವೆಂಕಟೇಶ್‌ ರಚಿಸಿದ ಕಲಾಕೃತಿಗಳು ಏಷ್ಯಾ ಪೆಸಿಫಿಕ್‌ ಮ್ಯೂಸಿಯಂ, ವಾರ್ಸಾ (ಪೋಲಾಂಡ್‌), ಮೆಲ್ಬೋರ್ನ್‌ನ ಎಂ.ಸಿ.ಜಿ ಮ್ಯೂಸಿಯಂ, ಫಿಲಿಪೈನ್ಸ್‌ನ ಅಕ್ಕಿ ಸಂಶೋಧನಾ ಸಂಗ್ರಹಾಲಯ, ಗ್ವಾಲಿಯರ್‌ನ ಭಾರತೀಯ ವಾಯುಸೇನಾ ಸಂಗ್ರಹಾಲಯ - ಹೀಗೆ ಪ್ರಪಂಚದ ಬೇರೆಬೇರೆ ಮೂಲೆಗಳಲ್ಲಿ ರಾರಾಜಿಸುತ್ತಿವೆ. ಇವರಿಗೆ ಅಭಿನಂದನಾ ಪತ್ರಗಳನ್ನು ಕಳಿಸಿದವರ ಪಟ್ಟಿಯನ್ನೊಮ್ಮೆ ನೀವು ನೋಡಿದರೆ ಅದರಲ್ಲಿ ರಾಜೀವ್‌ ಗಾಂಧಿ, ಜೆ.ಆರ್‌.ಡಿ.ಟಾಟಾ, ಎಲ್‌.ಕೆ.ಆಡ್ವಾಣಿ, ನವಾಜ್‌ ಶರೀಫ್‌, ಬಿಲ್‌ ಕ್ಲಿಂಟನ್‌ ಇತ್ಯಾದಿ ಹೆಸರುಗಳು ಕಾಣಸಿಗುತ್ತವೆ! ಈಗಾಗಲೇ ಕೆಲವು ಮಂದಿ ವೆಂಕಟೇಶ್‌ ಅವರಿಂದ ಪ್ರಭಾವಿತರಾಗಿ, ಪ್ರಶಿಕ್ಷಣ ಪಡೆದು ಅಕ್ಕಿಕಾಳುಬರಹ ಕಲೆಯನ್ನು ಕರಗತಮಾಡಿಕೊಂಡವರೂ ಇದ್ದಾರೆ. ಶಿವಮೊಗ್ಗದ ಆರ್‌.ಮಂಜುನಾಥ್‌ ಎಂಬ ಕಾಲೇಜು ವಿದ್ಯಾರ್ಥಿ ವೆಂಕಟೇಶ್‌ ಗರಡಿಯಲ್ಲಿ ಪಳಗಿ ಅಕ್ಕಿಕಾಳಿನ ಮೇಲೆ ತ್ರಿವರ್ಣ ಧ್ವಜ, ರಾಷ್ಟ್ರಗೀತೆ, ಮುನ್ನೂರಕ್ಕೂ ಹೆಚ್ಚು ಅಕ್ಷರಗಳನ್ನು ಬರೆಯಬಲ್ಲವರಾಗಿದ್ದಾರಂತೆ!

ಅಪ್ಪಟ ಸಂಸ್ಕೃತಾಭಿಮಾನಿಯೂ ಆಗಿರುವ (15 ವರ್ಷ ಸಂಸ್ಕೃತಾಭ್ಯಾಸ ಮಾಡಿ) ವೆಂಕಟೇಶ್‌ ತನ್ನ ಉದ್ಯಮಗಳಿಗೆ ಇಟ್ಟಿರುವ ಹೆಸರು ‘ತಂದುಲ ಆರ್ಟ್ಸ್‌ ಇಂಟರ್ನ್ಯಾಷನಲ್‌’, ‘ತಂದುಲ ಆರ್ಟ್ಸ್‌ ಫೀಚರ್ಸ್‌’ ಇತ್ಯಾದಿ. ‘ತಂದುಲ’ ಎಂದರೆ ಸಂಸ್ಕೃತದಲ್ಲಿ ಅಕ್ಕಿ ಎಂದರ್ಥ. ಈ ಹೆಸರಿಂದ ವೆಂಕಟೇಶ್‌ ಅವರ ಸಂಸ್ಕೃತ ಪ್ರೀತಿ, ಅಕ್ಕಿಯ ಬಗೆಗಿನ ಮಹತ್ವ - ಎರಡೂ ಮೇಳೈಸಿದಂತಾಯಿತು.

ಅದೆಲ್ಲ ಇರಲಿ, ನನಗೆ ವೆಂಕಟೇಶ್‌ ಪರಿಚಯ ಹೇಗಾಯಿತು ಎಂಬ ಕುತೂಹಲ ನಿಮ್ಮ ಮನದ ಮೂಲೆಯಲ್ಲಿದ್ದರೆ ತಿಳಿಸುತ್ತೇನೆ. ಇಲ್ಲಿ ಸಾಮಾನ್ಯ ಸೂತ್ರ (common thread) ನೀವು ಈಗಾಗಲೇ ಊಹಿಸಿರುವಂತೆ - ‘ವಿಚಿತ್ರಾನ್ನ’! ಅಕ್ಷರಗಳೆಂಬ ಅಕ್ಕಿಯಿಂದ ಮಾಡಿದ ವಿಚಿತ್ರಾನ್ನದ ಒಂದು ಪೊಟ್ಟಣ ಅಂತರ್ಜಾಲದ ಮೂಲಕ, ಅಕ್ಕಿಯ ಮೇಲೆ ಅಕ್ಷರ ಮೂಡಿಸುವ ವೆಂಕಟೇಶ್‌ ಕಣ್ಣೆದುರಿಗೆ ಬಂತು. ಆಮೇಲೆ ಈಮೈಲ್‌ ವಿನಿಮಯ ಮತ್ತು ಯಾಹೂ ಹರಟೆಕಿಟಕಿಯ ಮೂಲಕ ನಾವು ಸ್ನೇಹಿತರಾದೆವು!

ವೆಂಕಟೇಶ್‌ ಅವರ ಮೈಕ್ರೋ-ಆರ್ಟ್‌ ಬಗ್ಗೆ ಇನ್ನಿತರ ವಿವರಗಳೂ ಸಿಕ್ಕಂತಾಗುತ್ತದೆ, ನೀವೂ ಅವರಿಗೆ ಈಮೈಲ್‌ ಮೂಲಕ ಅಭಿನಂದನೆ ಸಲ್ಲಿಸೋಣವೆಂದಿದ್ದರೆ ಅವರ ಈ ಮೈಲ್‌ ವಿಳಾಸವೂ ಸಿಗುತ್ತದೆ. ಅದಕ್ಕಾಗಿ ಭೇಟಿ ಕೊಡಿ ವೆಂಕಟೇಶ್‌ ಅವರ ಅಂತರ್ಜಾಲ ತಾಣಕ್ಕೆ: http://riceartist.tripod.com

ಹಾಂ! ಇನ್ನೊಂದು ವಿಷಯ. ಅಭಿನಂದನೆ ಸಲ್ಲಿಸುವಾಗ ಇದೊಂದು ಸಾಲನ್ನೂ ಸೇರಿಸಲು ಮರೆಯಬೇಡಿ. ಮೊನ್ನೆ ಏಪ್ರಿಲ್‌ 29ರಂದು ರಂದು ವೆಂಕಟೇಶ್‌-ಅರುಣಾ ದಂಪತಿ ಗಂಡುಮಗುವಿನ ತಂದೆತಾಯಿಯಾಗಿದ್ದಾರೆ! ನಾಮಕರಣದ ದಿನ ಮಗುವಿನ ಹೆಸರನ್ನು, ಹರಿವಾಣದಲ್ಲಿ ತುಂಬಿದ ಅಕ್ಕಿಕಾಳುಗಳ ಮೇಲೆ ಚಿನ್ನದುಂಗುರದಿಂದ ಬರೆಯುವುದು ಕ್ರಮ. ಇವರು ಅಲ್ಲೇ ಪುರೋಹಿತರನ್ನು ಸ್ವಲ್ಪ ನಿಧಾನಿಸುವಂತೆ ಹೇಳಿ ಹರಿವಾಣದಲ್ಲಿರುವ ಒಂದೊಂದು ಅಕ್ಕಿಕಾಳಿನ ಮೇಲೂ ಮಗುವಿನ ಹೆಸರು ಬರೆಯುತ್ತಾರೋ ಏನೋ!

‘ಅಕ್ಕಿಕಾಳು ವೆಂಕಟೇಶ್‌’ ಅವರನ್ನು ಪರಿಚಯಿಸಿದ ವಿಚಿತ್ರಾನ್ನ ನಿಮಗಿಷ್ಟವಾಯಿತೋ ಇಲ್ಲವೋ ಎಂದು ತಿಳಿಸಲು ನನಗೆ ಅಕ್ಕಿಯ ಮೇಲೆ ಅಲ್ಲದಿದ್ದರೂ ಕಂಪ್ಯೂಟರ್‌ ಪರದೆಯ ಮೇಲೆ ಈಮೈಲ್‌ ಮೂಡಿಸಿ ಕಳಿಸುವವರಿದ್ದೀರಾದರೆ ವಿಳಾಸ- sjoshim@hotmail.com

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more