ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಗುಣಿತ ಅಕ್ಷರಬಳ್ಳಿ ಕಲಿತ ನೆನಪಿದೆಯೇ?

By Staff
|
Google Oneindia Kannada News

*ಶ್ರೀವತ್ಸ ಜೋಶಿ

a aa i ie... bEkE bEkuu..ಕನ್ನಡ ವರ್ಣಮಾಲೆಯನ್ನು ಬರೆಯಲು, ಓದಲು ಕಲಿಯುತ್ತಿದ್ದ ನಿಮ್ಮ ಬಾಲ್ಯವನ್ನೊಮ್ಮೆ ನೆನಪಿಸಿಕೊಳ್ಳಿ. ಅ, ಆ ದಿಂದ ಹಿಡಿದು ಷ,ಸ,ಹ,ಳ ದವರೆಗೆ ಅಕ್ಷರಗಳೂ ಆಮೇಲೆ ಕ,ಕಾ, ಕಿ, ಕೀ ಕಾಗುಣಿತವನ್ನೂ ಬರೆಯುವುದು ನಿಮಗೆ ಅಭ್ಯಾಸವಾದಾಗ ಆದ ಆನಂದ ಎಷ್ಟಿತ್ತು ? ಈಗಲೂ ಒಮ್ಮೆ ಸಣ್ಣ ಮಗುವಾಗುವಿರಾ? ಅಥವಾ, ಅಕ್ಷರ ಕಲಿಯುವ ನಿಮ್ಮ ಮಗುವಿದ್ದರೆ ಅದರ ಜತೆಗೂಡಿಸುವಿರಾ? ಕನ್ನಡ ವರ್ಣಮಾಲೆಯನ್ನು, ಕಾಗುಣಿತ ಅಕ್ಷರ ಬಳ್ಳಿಯನ್ನು ಮೆಲುಕುಹಾಕಲು ನಿಮಗೆ ಅನುವಾಗುವಂತೆ ಎರಡು ಸುಂದರ ಕವಿತೆಗಳು ಈ ಸಲದ ಸ್ಪೇಷಲ್‌.

ಗಣೇಶ ಚೌತಿ...

ಅಪ್ಪನು ಮಾಡಿದ ಚೌತಿಯ ಪ್ರತಿಮೆಗೆ
ಆನೆಯ ಸೊಂಡಿಲ ಮೊಗವಿತ್ತು
ಇಲಿಯನ್ನೇರಿದ ಯಾರಿದು ಎಂದೆನು
ಈಶ್ವರಸುತನೆಂದನು ಅಪ್ಪ
ಉಮಾಕುಮಾರನ ಚೆಲುಹಬ್ಬದದಿನ
ಊಟಕೆ ಬಂದರು ಅತಿಥಿಗಳು
ಎಲೆಯನ್ನಿರಿಸಿ ಅನ್ನವ ಬಡಿಸಲು
ಏಕಾಗ್ರತೆಯಲಿ ಜನರುಣಲು
ಐದು ಬಗೆಯ ಸಿಹಿಭಕ್ಷ್ಯಗಳಿದ್ದುವು
ಒಗ್ಗರಣೆಯ ಹುಳಿಮೊಸರಿತ್ತು
ಓಡುವ ತಿಳಿಪಾಯಸವನು ಮೆಲ್ಲುತ
ಔತಣದೂಟವ ಹೊಗಳಿದರು
ಅಂದದ ಊಟದ ನಂತರ ಅಡಿಕೆಯ
ಅಃ ಎಂದರು ಜನ ಸವಿಯುತಲಿ ।।

ಇನ್ನೊಂದು ಕವಿತೆ,

ಬಾ ನವಿಲೆ...

ಕರೆಯುವೆ ನಿನ್ನ ಕಣ್ಮಣಿಯನ್ನ
ಕಾಡಿಗೆ ಕಣ್ಣಿನ ಓ ನವಿಲೇ
ಕಿಟಿಕಿಯಾಳಿಂದ ಬಾ ಮುದದಿಂದ
ಕೀಟಲೆ ಮಾಡೆನು ನಾ ನಿನಗೆ
ಕುಡಿಯಲು ಹಾಲು ತರಲೇನ್‌ ಹೇಳು
ಕೂಗುತ ನಲಿಯುತ ಬಂದುಬಿಡು
ಕೆಣಕುವುದಿಲ್ಲ ಮೋಸವಿದಲ್ಲ
ಕೇಕೇ ಗಾನವ ಮಾಡುತಿರು
ಕೈಯಲ್ಲಿರುವ ಹಣ್ಣನು ಕೊಡುವೆ
ಕೊರಳನು ಬಾಗುತ ಬಾ ಬಾ ಬಾ
ಕೋರಿಕೆಯನ್ನ ನೀ ಸಲಿಸೆನ್ನ
ಕೌತುಕ ಪಡುವೆನು ನಿನಗಾಗಿ
ಕಂದನ ಕರೆಯಿದು ಪ್ರೇಮದ ಕುರುಹಿದು
ಕಃ ಎನ್ನದೆ ಬಾ ಕುಣಿ ಕುಣಿ ।।

ಈ ಎರಡೂ ಕವಿತೆಗಳನ್ನು, ಮೊನ್ನೆ ಊರಿಗೆ ಹೋಗಿದ್ದಾಗ ಹಳೇ ಪುಸ್ತಕವೊಂದರಲ್ಲಿ ಓದಿದೆ. ಇವನ್ನು ಬರೆದ ಕವಿ ದಿವಂಗತ ಮುಂಡಾಜೆ ರಾಮಚಂದ್ರ ಭಟ್‌. 1947ರಿಂದ ಸುಮಾರು 1965ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ಪ್ರಾಥಮಿಕ ಶಾಲಾ ಅಧ್ಯಾಪಕರಾಗಿದ್ದ ರಾಮಚಂದ್ರ ಮಾಷ್ಟ್ರು ಸಂಗೀತದಲ್ಲೂ ಪರಿಣತರಾಗಿದ್ದರಂತೆ. ಮಕ್ಕಳಿಗಾಗಿ ಸುಂದರ ಕವಿತೆಗಳನ್ನು ರಚಿಸಿದ ಇವರ ಪ್ರಕಟಿತ ಸಂಕಲನಗಳೆಂದರೆ 'ತಮ್ಮನ ಕವಿತೆಗಳು", 'ಪೀಪೀ", 'ಪುಟ್ಟನ ಪಿಟೀಲು" ಇತ್ಯಾದಿ. ಇವರ 'ರೈಲು ಪ್ರವಾಸದ ಕನಸು" ಎಂಬ ಒಂದು ಕವಿತೆಯಂತೂ ಬಹಳ ಚೆನ್ನಾಗಿದೆ. ಮುಂದೆ ಯಾವಾಗಾದರೂ ಇಲ್ಲಿ ಅದನ್ನು ಬಳಸುತ್ತೇನೆ. ಕೆಲ ವರ್ಷಗಳ ಹಿಂದೆ ಬೊಳುವಾರು ಮಹಮ್ಮದ ಕುಞಿ ಅವರ ಸಂಪಾದಕತ್ವದಲ್ಲಿ ಹೊರಬಂದಿದ್ದ 'ತಟ್ಟು ಚಪ್ಪಾಳೆ ಪುಟ್ಟ ಮಗು" ಮಕ್ಕಳ ಕವಿತೆಗಳ ಸಂಗ್ರಹದಲ್ಲಿ ರಾಮಚಂದ್ರ ಭಟ್ಟರ ಒಂದೆರಡು ಕವಿತೆಗಳನ್ನೂ ಸೇರಿಸಲಾಗಿತ್ತು.

ಈಗ ರಾಮಚಂದ್ರ ಭಟ್ಟರದೇ ಒಂದು ಒಗಟಿನೊಂದಿಗೆ ಈ ಸಲದ ಬರಹ ಮುಕ್ತಾಯ. ಒಗಟಿನ ಉತ್ತರ ತಿಳಿದರೆ [email protected] ವಿಳಾಸಕ್ಕೆ ಬರೆಯಿರಿ.

ಒಗಟು: 'ಬಾನಿನ ಮೊದಲಲಿ ಕವನದ ನಡುವಲಿ ಬೇಲಿಯ ಕೊನೆಯಲ್ಲಿ..."
'ಮೂರಕ್ಷರಗಳ ಹೆಸರಿದು ಅಡಗಿದೆ ಥಟ್ಟನೆ ಪೇಳಿಲ್ಲಿ..."

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X