ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಸಾಯನಿಕ ಸೂತ್ರಗಳ ರಹಸ್ಯ ಅರಿತವರು...

By Staff
|
Google Oneindia Kannada News
ವಿಚಿತ್ರಾನ್ನದ ‘ರಸಾಯನ ಶಾಸ್ತ್ರವೂ ರಾಮಾಯಣವೂ’ ಬಹಳ ಮಂದಿಗೆ ಇಷ್ಟವಾಗಿದೆ. ಬೇರಿಯಂನ ಅಣು ಸೋಡಿಯಂನ ಎರಡು ಅಣುಗಳೊಂದಿಗೆ ಸೇರಿ ಬಾಳೆಹಣ್ಣು ಸೃಷ್ಟಿಯಾಗುವ ರಹಸ್ಯವನ್ನೂ ಸಾಕಷ್ಟು ಮಂದಿ ತಿಳಿದುಕೊಂಡಿದ್ದಾರೆ. ‘ಭಾರತ್‌ಕೋ ಏಕ್‌ ಗರೀಬ್‌ ದೇಶ್‌ ಸೇ ಏಕ್‌ ಅಮೀರ್‌ ದೇಶ್‌ ಬನಾನಾ ಹೈ...’ ಎಂಬ ಮಾತು ದಿವಂಗತ ಪ್ರಧಾನಿ ರಾಜೀವ್‌ ಗಾಂಧಿಯವರ ಚುನಾವಣಾ ಭಾಷಣಗಳಲ್ಲಿ ಬಾರಿಬಾರಿ ಕೇಳುತ್ತಿದ್ದಾಗ ಅವರನ್ನು ‘ಬನಾನಾ’ ಪ್ರಧಾನಿ ಎನ್ನಲಾರಂಭಿಸಿದ್ದರು. ಅಂಥ ‘ಬನಾನಾ’ (ಬಾಳೆಹಣ್ಣು) ಉತ್ತರವಾಗಿ ಬರುವಂತೆ ತರಲೆಪ್ರಶ್ನೆಯಾಂದನ್ನು ಓದುಗರತ್ತ ಎಸೆಯಲಾಗಿತ್ತು. ಅದಕ್ಕುತ್ತರವಾಗಿ ಅವರೆಸೆದದ್ದು ಬಾಳೆಹಣ್ಣು !

ಓದುಗರ ಅಭಿಮಾನದ ಪತ್ರಗಳು ಇಲ್ಲಿವೆ. ವಿಚಿತ್ರಾನ್ನವನ್ನು ನಿರಂತರ ಪ್ರೋತ್ಸಾಹಿಸಿ ಅಂದಗೊಳಿಸಲು ನೆರವಾಗುತ್ತಿರುವ, ಹೊಸಹೊಸ ಟಾಪಿಕ್‌ಗಳನ್ನು ಸಜೆಸ್ಟಿಸುತ್ತಿರುವ ಓದುಗಮಿತ್ರರಿಗೆಲ್ಲ ಧನ್ಯವಾದಗಳು.
- ಶ್ರೀವತ್ಸ ಜೋಶಿ.


ನಮಸ್ಕಾರ.
ರಸಾಯನಶಾಸ್ತ್ರ ರಸಭರಿತವಾಗಿತ್ತು. ನಾನು ರಸಾಯನ ಶಾಸ್ತ್ರದ ವಿದ್ಯಾರ್ಥಿನಿಯೆನೋ ಹೌದು. ಆದರೆ ರಸಾಯನ ಶಾಸ್ತ್ರದ ರಸವನ್ನು ಸರಿಯಾಗಿ ಹೀರದೆ ಇದ್ದಿದ್ದರ ಪರಿಣಾಮವಾಗಿ ನಿಮ್ಮ ಪ್ರಶ್ನೆಗೆ ನಾನು ನಿರುತ್ತರಳಾಗಿದ್ದೇನೆ!

ವಂದನೆಗಳೊಂದಿಗೆ,
- ಲೀನಾ, ಬೆಂಗಳೂರು

*

ಮಾಸ್ತರೇ,

ವಿಚಿತ್ರಾನ್ನಕ್ಕೆ ನಾನೊಬ್ಬ ಹೊಸ ಓದುಗ. ‘ಟಾಪ್‌ ಟು ಬಾಟಮ್‌...’ ನಾನೋದಿದ (ನಾನುಂಡ) ಮೊದಲ ತುತ್ತು ಬಹಳ ಚೆನ್ನಾಗಿತ್ತು. ಅನ್ನವೇನೋ ಫೆಂಟಾಸ್ಟಿಕ್‌ ಆಗಿದೆ; ಆದರೆ ಅದಕ್ಕೆ ಒಂದಿಷ್ಟು ‘ಸೈಡ್ಸ್‌’ ಇರುತ್ತಿದ್ದರೆ ಇನ್ನೂ ಚೆನ್ನಾಗಿರೋದು. ಏನಂತೀರಾ?

- ಶಿವಮೂರ್ತಿ; ಹೊಸದೆಹಲಿ.

*

ನಮಸ್ಕಾರ ಜೋಶಿಯವರಿಗೆ,

ನಾನು ಬಸವರಾಜು. ಮೂಲತಃ ಮೈಸೂರಿನವನು, ಈಗ ಚೆನ್ನೈಯಲ್ಲಿ ಕೆಲಸ ಮಾಡುತ್ತಿದ್ದೇನೆ. ದಟ್ಸ್‌ಕನ್ನಡ ವೆಬ್‌ಸೈಟ್‌ಗೆ ದಿನಕ್ಕೆ ಒಂದೆರಡು ಬಾರಿಯಾದರೂ ನಾನು ಭೇಟಿ ನೀಡುವುದುಂಟು. ಎಲ್ಲ ವಿಭಾಗಗಳೂ ಚೆನ್ನಾಗಿವೆ. ನಿಮ್ಮ ವಿಚಿತ್ರಾನ್ನವಂತೂ ಆರಂಭದಿಂದಲೂ ಬಹಳ ಸೊಗಸಾಗಿದೆ. ಮೊನ್ನೆಯ ‘ಅಡಿಯಿಂದ ಮುಡಿವರೆಗೆ...’ ಕಂತನ್ನು ಓದಿದೆ. ನನ್ನ ಮನಸ್ಸಲ್ಲೊಂದು ಬಹುಕಾಲದಿಂದ ಪ್ರಶ್ನೆ ಇದೆ. ‘ಮೇಡ್‌ ಫಾರ್‌ ಈಚ್‌ ಅದರ್‌’ ಅಂತ ಇಂಗ್ಲೀಷಲ್ಲಿ ನಾವೇನು ಉಪಯೋಗಿಸುತ್ತೇವಲ್ಲ, ಅದಕ್ಕೆ ಸೂಕ್ತ ಕನ್ನಡ ಭಾಷಾಂತರ ಏನು? ಅದರ ಬಗ್ಗೆ ವಿಚಿತ್ರಾನ್ನದಲ್ಲಿ ಸ್ವಲ್ಪ ಬೆಳಕು ಚೆಲ್ಲುತ್ತೀರಾ ?

- ಎಂ. ಬಸವರಾಜು, ಚೆನ್ನೈ

*

ಜೋಶಿಯವರೇ,

ನಿಮ್ಮ ಲೇಖನಗಳನ್ನು ಮೊದಲಿಂದಲೂ ಆನಂದಿಸುತ್ತ ಬಂದಿದ್ದೇನೆ. ಅವುಗಳಲ್ಲಿ ಮೋಜಿನ ಜತೆಗೇ ಕೆಲವೊಮ್ಮೆ ಒಳ್ಳೆಯ ಮಾಹಿತಿಯೂ ಇರುವುದು ನನಗೆ ಇಷ್ಟವಾಗಿದೆ. ಈ ಸಲದ ಪ್ರಶ್ನೆಗೆ ಉತ್ತರ ನನಗೆ ಆರಾಮಾಗಿ ಗೊತ್ತಾಯಿತು. ಇದೇರೀತಿ ವಿಚಿತ್ರಾನ್ನ ತಯಾರಿಸಿ ಬಡಿಸಿ, ನಾವು ರೆಡಿ ಇದ್ದೇವೆ...

- ಜಯಕುಮಾರ್‌ ಸಿ.ಡಿ, ಬೆಂಗಳೂರು

*

ಕಳೆದ ವಾರಾಂತ್ಯ ನಮ್ಮಲ್ಲಿ ಬಾಳೆಹಣ್ಣಿನ ರಸಾಯನ ಮಾಡಿದ್ದೆವು. ಹಾಗಾಗಿ ಉತ್ತರ ಹೊಳೆಯುವುದು ತಡವಾಗಲಿಲ್ಲ. ನಮ್ಮ ಇಂಜನಿಯರಿಂಗ್‌ ಕಾಲೇಜ್‌ನಲ್ಲಿ ‘ಸಿಂಟಿಲೇಶನ್‌’ ಎಂಬ ಮ್ಯಾಗಜಿನ್‌ ಇತ್ತು. ಅದರಲ್ಲಿ ಬಂದಿದ್ದ ಒಂದು ನಗೆಹನಿ -

ಕೆಮಿಸ್ಟ್ರಿ ಪ್ರೊಫೆಸರ್‌: ‘ಪ್ಲೀಸ್‌ ಓಪನ್‌ ದ ವಿಂಡೋ. ಲೆಟ್‌ ದ ಎಟ್ಮೋಸ್ಫಿಯರ್‌ ಕಂ ಇನ್‌!’

- ದಿಲೀಪ್‌ ಚಕ್ರವರ್ತಿ , ಕೇಂಬ್ರಿಡ್ಜ್‌ (ಯುರೋಪ್‌)

*

ನಿಮ್ಮ ವಿಚಿತ್ರಾನ್ನವನ್ನು ಓದಿ ಆನಂದಿಸುವವರಲ್ಲಿ ನಾನೊಬ್ಬ. ಮೊನ್ನೆಯ ‘ಅಡಿಯಿಂದ ಮುಡಿಯವರೆಗೆ...’ ಓದಿದ ಮೇಲೆ ಏನಾಯ್ತೆಂದರೆ...

‘ದಿನ ಇಡೀ ಆಫೀಸಿನಲ್ಲಿ ಏನೇನೋ ಸಮಸ್ಯೆಗಳಿಗೆ ಉತ್ತರ ಹುಡುಕಿ ತರಪರಗೊಂಡು ಕೊನೆಗೂ ಇವತ್ತಿಗೆ ಸಾಕು ನಾಳೆ ನೋಡಿಕೊಳ್ಳುವಾ ಎಂದುಕೊಂಡು ಮನೆಗೆ ಹೊರಡಬೇಕೆನ್ನುವಾಗ ನೆನಪಾದದ್ದು ಹೆಂಡತಿಗೆ ಪ್ರಾಮಿಸ್‌ ಮಾಡಿದ್ದ ಸಿನಿಮಾ ಪಾರ್ಟಿ. ಸರಿ ರೋಮಿಯೋನ ಅಪರಾವತಾರದಂತೆ ಎರಡು ಗುಲಾಬಿ ಮೊಗ್ಗುಗಳನ್ನು ಕೈಲಿ ತೆಗೆದುಕೊಂಡು ತಡವಾದ ತಪ್ಪಿಗೆ ಕಾಣಿಕೆ ಕೊಟ್ಟು ಅವಳ ಕೈಲಿ ಗೆದ್ದೇನೆಂದುಕೊಂಡು ಮನೆಗೆ ಬಂದರೆ ಅವಳು, ‘ಇವತ್ತು ನನ್ನಲ್ಲೇನ್‌ ವಿಶೇಷ ಹೇಳಿ ?’ ಅನ್ನೋ ಯಕ್ಷ ಪ್ರಶ್ನೆ ಎಸೆಯಬೇಕೆ! ಚಂದ್ರಶೇಖರ್‌ ಎಸೆಯೋ ಗೂಗ್ಲಿಗೆ ಬಿದ್ದ ಗುಗ್ಗು ಆಗಿದ್ದೆ ಆಗ. ಅವ್ಳ ಹುಬ್ಬೋ, ಹೆರಳೋ, ಇಲ್ಲ ಕತ್ತಿನಲ್ಲಿರೋ ಹಾರವೋ ಅಥವಾ ಉಟ್ಟುಕೊಂಡಿರೊ ಸೀರೆ ಸ್ಟೈಲೋ ಎಲ್ಲೋ ಇರೋ ಹೊಸತನ ಗೊತ್ತಾಗದೆ ಪೆದ್ದು ಪೆದ್ದಾಗಿ ಅಡಿಯಿಂದ ಮುಡಿಯವರೆಗೆ ಪೆಚ್ಚಾಗಿ ನೋಡೋ ನನ್ನಂತ ಗಂಡಂದಿರ ಮುಖ ನೋಡ್ಬೇಕ್ರೀ...’

- ಲಕ್ಷ್ಮೀನಾರಾಯಣ ಗಣಪತಿ, ಕಾರಿ, ನಾರ್ತ್‌ ಕೆರೊಲಿನಾ

*

ಕೆಮೆಸ್ಟ್ರಿ ಮೇಲಿನ ವಿಚಿತ್ರಾನ್ನ ಬಹಳ ಸೊಗಸಾಗಿತ್ತು. ನಿಮ್ಮ ಕಾಮಿಡಿ ಸೆನ್ಸ್‌ ಸೂಪರ್‌ ಆಗಿದೆ...

-ಭಾಸ್ಕರ ಚಕ್ರಪಾಣಿ, ಮಿನಿಯಾಪೊಲಿಸ್‌

*

ನಾನು ತಪ್ಪದೇ ನಿಮ್ಮ ಲೇಖನಗಳನ್ನು ಓದುತ್ತಿರುತ್ತೇನೆ. ನಿಮಗೆ ಭಾಷೆಯ ಮೇಲೆ ಪ್ರಭುತ್ವ ಚೆನ್ನಾಗಿದೆ. ನೀವು ಪದ-ವಾಕ್ಯಗಳನ್ನು ಹೆಣೆಯುವ ರೀತಿ ತುಂಬ ಪರಿಣಾಮಕಾರಿಯಾಗಿರುತ್ತದೆ. ಪ್ರತಿ ವಾಕ್ಯವನ್ನೋದುವಾಗಲೂ ಸ್ವಾಭಾವಿಕವಾಗಿ ನಗು ಬಂದೇ ಬರುತ್ತದೆ. ಈ ಥರದ ಬರಹಗಳನ್ನೇ ಇನ್ನೂ ನಿರೀಕ್ಷಿಸುತ್ತೇನೆ. ಪ್ರತಿ ಲೇಖನವನ್ನೂ ಚೆನ್ನಾಗಿ ‘ಬಿಲ್ಡ್‌’ ಮಾಡಿ ಸುಂದರವಾಗಿ ಅಂತ್ಯಗೊಳಿಸುವ ನಿಮ್ಮ ಶೈಲಿ ಉತ್ತಮವಾದುದು. ‘ಲಂಕೇಶ್‌ ಪತ್ರಿಕೆ’ಯಲ್ಲಿ ಪುಂಡಲೀಕ್‌ ಶೇಟ್‌ ಎಂಬುವರೊಬ್ಬರು ‘ಹರಹರಾಪುಂಡಲೀಕೇಶ್ವರಾ...’ ಎಂದು ಲೇಖನಗಳನ್ನು ಅಂತ್ಯಗೊಳಿಸುತ್ತಿದ್ದರು. ನೀವು ಅಂತ್ಯಗೊಳಿಸುವ ರೀತಿ ಬಹಳ ಮೆಚ್ಚುವಂಥದ್ದು; ಓದು ಮುಗಿಸಿದ ನಂತರ ಮನ ಹಗುರಾಗುವುದಂತೂ ಹೌದು. ನಾನಂತೂ ಮಂಗಳವಾರ ಬರುವುದನ್ನೇ ಕಾಯುತ್ತಿರುತ್ತೇನೆ.

ವಂದನೆಗಳು,
-ಸಂತೋಷ್‌ ಕೋಟ್ನಿಸ್‌, ಬೌಲ್ಡರ್‌, ಕೊಲರಾಡೋ

*

ಜೋಶಿಯವರಿಗೆ,

‘ರಸಾಯನ ಶಾಸ್ತ್ರವೂ ರಾಮಾಯಣವೂ...’ ಚೆನ್ನಾಗಿದೆ. ಅದನ್ನು ಓದಿ ಸ್ವಲ್ಪ ಹೊತ್ತು ಹಳೆಯ ನೆನಪುಗಳನ್ನು ಮೆಲುಕು ಹಾಕಿದೆ. ಬೇರಿಯಂ ಮತ್ತು ಸೋಡಿಯಂಗಳ ‘ರಸಾಯನ ಶಾಸ್ತ್ರೋಕ್ತ’ ಮದುವೆ ಮಾಡಿಸಿ ಎಲ್ಲರಿಗೂ ‘ಬಾಳೆಹಣ್ಣು’ ಹಂಚಿದೆ. ಒಂದು ಬೇರಿಯಂ ಮತ್ತು ಎರಡು ಸೋಡಿಯಂಗಳು ಕೂಡಿ ‘ಬನಾನಾ’ ಆಯಿತು. ಮದುವೆ ಖರ್ಚು ಉಳಿಯಿತು.

ಅಕ್ಷರಗಳನ್ನು (ಎಲಿಮೆಂಟ್‌ ಸಿಂಬಲ್‌ ನಲ್ಲಿ) ಸ್ವಲ್ಪ ಅಕ್ಕ ಪಕ್ಕ ಮಾಡಿ ‘ಬಣ್ಣಾ’ ಮಾಡಲೂಬಹುದಲ್ಲವೇ?

ಇದೇ ರೀತಿಯಲ್ಲಿ ‘ಭೌತ ಶಾಸ್ತ್ರವೂ ಭಗವದ್ಗೀತೆಯೂ...’ ನಿರೀಕ್ಷಿಸುತ್ತಾ,

ನಿಮ್ಮ ವಿಶ್ವಾಸಿ,
-ದಾಶ್‌ ಘಟ್ಟು , ನ್ಯೂಜೆರ್ಸಿ.

*

ಮಾನ್ಯ ಜೋಶಿಯವರೆ,

ನಿಮ್ಮ ಪ್ರಶ್ನೆಗೆ ಉತ್ತರ ಸುಲಿದಿಟ್ಟ ಬಾಳೆಹಣ್ಣಿನಷ್ಟು ಸುಲಭ ಮತ್ತು ಬಾಳೆಹಣ್ಣಿನ ರಸಾಯನದಷ್ಟು ರುಚಿ! ನಿಮ್ಮ ವಿಚಿತ್ರಾನ್ನವೂ ರುಚಿಯಾಗಿರುತ್ತದೆ.

ಧನ್ಯವಾದಗಳು,
- ಚಂದ್ರಶೇಖರ್‌ ನೆಲೊಗಲ್‌, ಊರು ?

*

ಪಂಜೆಂಟ್‌ ಸ್ಮೆಲ್‌ನೊಂದಿಗೆ ಬಿಳಿ ಪ್ರೆಸಿಪಿಟೇಟ್‌ ಕೊಡುವ ಬೇರಿಯಂ ಸ ಲ್ಫೇಟ್‌ ಬಗ್ಗೆಯೂ ನೀವು ಮೆನ್ಷನ್‌ ಮಾಡಬೇಕಿತ್ತು :-) ಅಂದಹಾಗೆ ಪುಂಗಿಯಂತೆ ಪಿಪ್ಪೇಟ್ಟನ್ನು ಹಿಡಿದು ಆಕಡೆ ಈಕಡೆ ನೋಡುತ್ತಿದ್ದ ನಿಮ್ಮ ಸಹಪಾಠಿಯ ಹೆಸರು ನೆನಪಿಲ್ಲವೇ? ಪಿಯೂಸಿಗೆ ಬಂದೂ ಅವನು ಕಿವಿಹಿಂಡಿಸಿಕೊಳ್ಳಬೇಕಾಯಿತಲ್ಲಾ ಎಂದು ಕನಿಕರವಾಯಿತು...

- ಪ್ರಕಾಶ್‌ ಪಿ.ಎನ್‌, ಪೋರ್ಟ್‌ಲ್ಯಾಂಡ್‌, ಓರೆಗಾನ್‌

*
ಏನು ಸ್ವಾಮೀ, ಸುಲಿದ ಬಾಳೆಹಣ್ಣು ಅಂತ ನೀವೇ ಹೇಳಿದ್ದೀರಿ!!!!

- ಡಿ.ಎಸ್‌ ಫಣಿಕುಮಾರ್‌, ಮಿನಿಯಾಪೊಲಿಸ್‌, ಮಿನ್ನೆಸೋಟಾ

*

ದಟ್ಸ್‌ಕನ್ನಡ ವೆಬ್‌ಸೈಟ್‌ಗೆ ಕಾಯಂ ಭೇಟಿ ಕೊಡುತ್ತಿರುತ್ತೇವೆ. ನಿಮ್ಮ ವಿಚಿತ್ರಾನ್ನವನ್ನೂ ರೆಗ್ಯುಲರ್‌ ಆಗಿ ಸೇವಿಸಿ ಸವಿಯುತ್ತಿದ್ದೇವೆ. ಮೂಲತಃ ಉಡುಪಿಯವರಾದ ನಾವು ಈಗ್ಗೆ ಎಂಟು ವರ್ಷಗಳಿಂದಲೂ ಹಾಂಗ್‌ಕಾಂಗ್‌ನಲ್ಲಿ ವಾಸವಾಗಿದ್ದೇವೆ.

- ತ್ರಿಪುರಾನಂದ ವಾರಂಬಳ್ಳಿ, ಹಾಂಗ್‌ಕಾಂಗ್‌

*

ಹಲ್ಲೊ ಜೋಶಿಯವರೆ...

ನೀವು ಕೇಳಿದ ಪ್ರಶ್ನೆಗೆ ಉತ್ತರ ಸುಲಭ ಈ ಸಲ... ಬನಾನಾ :) ಈ ಸಲ ನಿಮಗೆ ನೂರಾರು ಈ ಮೈಲ್‌ಗಳು, ವಿಶೇಷತಃ ವಿಜ್ಞಾನ ವಿದ್ಯಾರ್ಥಿಗಳಿಂದ ಬರಬಹುದೆಂದುಕೊಂಡಿದ್ದೇನೆ. ನಮ್ಮ ಕಾಲೇಜಿನ ಕೆಮಿಸ್ಟ್ರಿ ಲೆಕ್ಚರರ್‌ ಮುಖಾರವಿಂದದಿಂದ ಹಿಡಿದು ‘ನಗುವ ಅನಿಲ’ ದವರೆಗೆ :) ಒಮ್ಮೆಲೆ ಎಲ್ಲವನ್ನೂ ನೆನಪು ಮಾಡಿಕೊಟ್ಟಿದ್ದಕ್ಕೆ ತುಂಬ ಥ್ಯಾಂಕ್ಸ್‌!

- ಜಯಶ್ರೀ ಎಚ್‌.ಆರ್‌, ಬೆಂಗಳೂರು

*

ಈ ಸಲದ ಟಾಪಿಕ್‌ ಚೆನ್ನಾಗಿದೆ. ಹಾಗೆಯೇ ಈ ಹಿಂದಿನ ‘ನಾಯಿಮರಿ ನಾಯಿಮರಿ...’, ‘ಚಿತ್ರಗೀತೆ ಒಗ್ಗರಣೆ...’ ಇತ್ಯಾದಿಯೂ ನನಗೆ ಇಷ್ಟವಾಗಿತ್ತು . ನಾನು ಮೂಲತಃ ಬಳ್ಳಾರಿಯವನು, ಸದ್ಯಕ್ಕೆ ಸಿಂಗಾಪುರ್‌ನಲ್ಲಿ ವಾಸವಾಗಿದ್ದೇನೆ.

- ವೆಂಕಟೇಶ್‌ ಇಯ್ಲಿ , ಸಿಂಗಾಪೂರ್‌

*

ಹಲೋ ಜೋಶಿಯವರೆ,

ವಿಚಿತ್ರಾನ್ನದ ರೆಗ್ಯುಲರ್‌ ಓದುಗರಲ್ಲಿ ನಾನೂ ಒಬ್ಬ. ಬಹಳ ಹಾಸ್ಯಮಯವಾಗಿದೆ. ಹೀಗೆ ಮುನ್ನಡೆಸಿ. ಅಂದಹಾಗೆ ನಾನೂ ಬಿ.ಡಿ.ಟಿ (ದಾವಣಗೆರೆ) ಕಾಲೇಜಿನ ಹಳೆವಿದ್ಯಾರ್ಥಿ. ಅಮೆರಿಕಕ್ಕೆ ಬಂದು ಎಂ.ಎಸ್‌ ಮಾಡಿದೆ. ಈಗ ನ್ಯೂಜೆರ್ಸಿಯಲ್ಲಿ ಸಾಫ್ಟ್‌ವೇರ್‌ ಉದ್ಯೋಗ. ದಟ್ಸ್‌ಕನ್ನಡದಲ್ಲಿ ಬರುವ ಕಾರ್ಟೂನ್‌ಗಳು (ಇನ್ನೊಬ್ಬ ಬಿ.ಡಿಟಿಯನ್‌ ಜನಾರ್ದನ ಸ್ವಾಮಿಯವರ ಪ್ರಸ್ತುತಿ) ಸೊಗಸಾಗಿರುತ್ತವೆ.

- ಜಗದೀಪ್‌ ಶೀರೂರು; ನ್ಯೂಜೆರ್ಸಿ

*

‘ಬನಾನಾ ರಿಪಬ್ಲಿಕ್‌’ ನ ಇತರ ಮೇಧಾವಿ ಪ್ರಜೆಗಳು...

ಶ್ರೀಲತಾ, ಬೆಂಗಳೂರು
ಹೇಮಲತಾ, ಸುಳ್ಯ
ಸುಮತಿ ಜೋಶಿ, ಫೀನಿಕ್ಸ್‌ , ಅರಿಜೋನಾ (ಮೂಲತಃ ಬೆಂಗಳೂರಿನವರು)
ಉಷಾರಾಣಿ, ಹೈದರಾಬಾದ್‌
ಗೀತಾ ಸಾಗರ್‌, ಫೀನಿಕ್ಸ್‌, ಅರಿಜೋನಾ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X