ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖಪುಟ

By Staff
|
Google Oneindia Kannada News

*ಶ್ರೀವತ್ಸ ಜೋಶಿ

Srivathsa Joshi Thatskannada columnistಇಂಗ್ಲೀಷ್‌ನಲ್ಲಿ ನಾಲ್ಕಕ್ಷರಗಳ ಪದಗಳು (four letter words) ಅಂದರೆ ಅವಾಚ್ಯ ಶಬ್ದಗಳು ಎಂದೇ ಅರ್ಥೈಸಿಕೊಳ್ಳಬಹುದು. ಅವು ಯಾವುವೆಂದು ಇಲ್ಲಿ ಉದಾಹರಣೆ ಕೊಟ್ಟು ನಮ್ಮ ಚಿತ್ರಾನ್ನದ ರುಚಿ ಕೆಡಿಸುವುದು ಬೇಡ. ಆದರೆ ಸಮಾಧಾನವೆಂದರೆ ನಮ್ಮ ಸಿರಿಗನ್ನಡದಲ್ಲಿ ಹಾಗೇನೂ ಇಲ್ಲವಲ ್ಲ ! ನಮ್ಮ ರಾಜ್ಯದ ಹೆಸರೇ ನಾಲ್ಕಕ್ಷರಗಳ ಪದ. ರಾಜಧಾನಿಯೂ ನಾಲ್ಕಕ್ಷರ. ಅಂದ ಮೇಲೆ ನಾಲ್ಕಕ್ಷರಗಳ ಪದಗಳು ಕೆಟ್ಟವು ಎಂಬ ಭಾವನೆಯೇ ಬರಲಿಕ್ಕೆ ಸಾಧ್ಯವಿಲ್ಲ.

ಉಪಕಾರ, ಕೃತಜ್ಞತೆ, ಉಡುಗೊರೆ, ಆಶೀರ್ವಾದ, ಬಹುಮಾನ, ಸಮಾಧಾನ... ಎಷ್ಟೆಲ್ಲ ಚಂದದ ನಾಲ್ಕಕ್ಷರ-ಪದಗಳಿವೆ ನಮ್ಮ ಭಾಷೆಯಲ್ಲಿ ! ಇನ್ನು, ಉಪಾಸನೆ, ಸಾಕ್ಷಾತ್ಕಾರ, ಗೆಜ್ಜೆಪೂಜೆ, ಸಂಧ್ಯಾರಾಗ, ಆಕಸ್ಮಿಕ, ಧ್ರುವತಾರೆ... ಚಲನಚಿತ್ರಗಳ ಹೆಸರುಗಳು. ಆಗಲೇ ಎಂದಂತೆ ಕರ್ನಾಟಕದ ರಾಜಧಾನಿಯಷ್ಟೇ ಅಲ್ಲದೆ, ಮಂಗಳೂರು, ಭದ್ರಾವತಿ, ತುಮಕೂರು, ಧಾರವಾಡ, ಬಿಜಾಪುರ, ಶಿವಮೊಗ್ಗ, ಹರಿಹರ, ಚಿತ್ರದುರ್ಗ, ಕಾರವಾರ.... ವ್ಹಾ! ಕರ್ನಾಟಕದ ಎಲ್ಲ ಪ್ರಖ್ಯಾತ ಊರುಗಳೂ ನಾಲ್ಕಕ್ಷರವೋ ಎಂಬಂತೆ!

ನಾಲ್ಕಕ್ಷರಗಳ ಒಂದು ಹೆಸರು ಇದೆ - ‘ಶಾಂತಾರಾಮ’. ಇದನ್ನು ನೀವು ಗಮನಿಸಿದ್ದೀರಾ? ಈ ಹೆಸರಿನಲ್ಲಿ ಶಾಂತಾ, ತಾರಾ, ರಾಮ, ಮತ್ತು ಶಾಮ ಎಂಬ ಇನ್ನೂ ನಾಲ್ಕು ಹೆಸರುಗಳು ಅಡಗಿರುವುದು? ಈ ತರಹ ಬೇರಾವುದಾದರೂ ಸ್ಪೆಷಲ್‌ ನಾಲ್ಕಕ್ಷರ ಪದ ಅಥವಾ ಹೆಸರು ಗೊತ್ತೇ ನಿಮಗೆ? ಇನ್ನೊಂದು. ನೀವು ಪದಬಂಧ ಬಿಡಿಸುವ ಶೋಕಿಯವರಾದರೆ, ‘ಮನುಷ್ಯನಲ್ಲಿ ಬೆಣ್ಣೆ ಇರುವುದರಿಂದಲೇ ನಿಮಗೆ ಭೇಟಿಯಾದಾಗ ಹೀಗಂದು ಹಲ್ಕಿರಿಯುತ್ತಾನೆ!’ ಎಂಬ ಕ್ಲೂ ಇದ್ದರೆ, ನಾಲ್ಕಕ್ಷರದ ಉತ್ತರ - ‘ನಮಸ್ಕಾರ’!

ಇಷ್ಟೆಲ್ಲ ಪೀಠಿಕೆ ಯಾಕೆ ಬರೆದೆನೆಂದರೆ, ನಮ್ಮ ಈ ಹೊಸ ಅಂಕಣಕ್ಕೆ ಚಿತ್ರಾನ್ನದ ಬದಲು ವಿಚಿತ್ರಾನ್ನ ಅಂತ ಯಾಕೆ ಹೆಸರು ಎಂದು ಇನ್ನೂ ಕೆಲವರಿಗೆ ಸಂದೇಹ ಇದೆ, ಕಳೆದ ವಾರವೇ ನಾನು ಸೂಕ್ತ ಸಮಜಾಯಿಷಿ ಕೊಟ್ಟಿದ್ದರೂ! ಈಗಲಾದರೂ ಅವರಿಗೆಲ್ಲ ನಾಲ್ಕಕ್ಷರಗಳ ಮಹಿಮೆಯ ಅರ್ಥವಾಗಿ ವಿಚಿತ್ರಾನ್ನವನ್ನು ಅವರು ಅಂಗೀಕರಿಸಬಹುದು ಎಂದು ಭಾವಿಸಿದ್ದೇನೆ. ಈ ಮಧ್ಯೆ ವಿಚಿತ್ರಾನ್ನದ ಮೊದಲ ತುತ್ತು ತುಂಬ ರುಚಿಕರವಾಗಿತ್ತು ಎಂದು ಕೆಲವರು ಬರೆದು ತಿಳಿಸಿದ್ದಾರೆ. ಅವರಿಗೆಲ್ಲ ನನ್ನ ಕೃತಜ್ಞತೆಗಳು. ಕೆಟ್ಟದಾಗಿದ್ದರೂ ಬರೆದು ತಿಳಿಸಿ - ಮುಲಾಜಿಲ್ಲದೆ!

ಈಗೊಂದು ಸವಾಲು ನಿಮಗೆ. ಕರ್ನಾಟಕ ಅಥವಾ ಕನ್ನಡಕ್ಕೆ ಸಂಬಂಧಿಸಿದಂತೆ ಯಾವುದೇ ಒಂದು ಕ್ಯಾಟಗರಿ ಆಯ್ಕೆ ಮಾಡಿ ನಾಲ್ಕಕ್ಷರಗಳ ಪದಗಳ ಲಿಸ್ಟ್‌ ಮಾಡಿ ನೀವು ಕಳಿಸಬೇಕು. ಉದಾಹರಣೆಗೆ - ಕರ್ನಾಟಕದ ನದಿಗಳು: ತುಂಗಭದ್ರಾ, ಹೆಮಾವತಿ, ಘಟಪ್ರಭಾ, ಗೋದಾವರಿ, ನೇತ್ರಾವತಿ, ಶರಾವತಿ.... ಹೀಗೆಯೇ ಪುಣ್ಯಕ್ಷೇತ್ರಗಳ ಪಟ್ಟಿಯಾಗಬಹುದು, ಸಿನೆಮಾ ಥಿಯೇಟರ್‌ಗಳದಾಗಬಹುದು, ಕಾದಂಬರಿಗಳದಾಗಬಹುದು - ಅಂತೂ ನಾಮಪದಗಳಾಗಬೇಕು.

ಕ್ಷಮಿಸಿ, ಇದು ಒಂದನೇ, ಎರಡನೇ ಕ್ಲಾಸಿನವರಿಗೆ ಸೂಟೇಬಲ್‌ ಅಭ್ಯಾಸ ಎಂದು ನೀವಂದುಕೊಳ್ಳಬಹುದಾದರೂ ಕರ್ನಾಟಕ/ಕನ್ನಡದ ಬಗ್ಗೆ ಹೆಮ್ಮೆ ಮೂಡಿಸುವಲ್ಲಿ ನಿಮಗೂ (ನೀವು ಹಿರಿಯರಾದರೆ ನಿಮ್ಮ ಮಕ್ಕಳಿಗೂ) ಸಹಾಯವಾಗುತ್ತದೋ ನೋಡಿ! ನಿಮ್ಮ ಲಿಸ್ಟನ್ನು ಕಳಿಸಬೇಕಾದ ವಿಳಾಸ - [email protected]. ಅತ್ಯುತ್ತಮ ಲಿಸ್ಟ್‌ಗೆ ಆಕರ್ಷಕ ಬಹುಮಾನ ಇದೆ! ಮುಂದೆಯೂ ಆಗಾಗ ಒಗಟು-ಜಾಣ್ಮೆಲೆಕ್ಕ ಇತ್ಯಾದಿ ಕೆಲವು ಸಣ್ಣಸಣ್ಣ ಸ್ಪರ್ಧೆಗಳು ಬರುತ್ತವೆ ಈ ವಿಚಿತ್ರಾನ್ನ ಅಂಕಣದಲ್ಲಿ. ಇದು ನಿಮ್ಮ ಅಂಕಣ, ನಿಮ್ಮ ಭಾಗವಹಿಸುವಿಕೆಯೂ ಬೇಕು ಎಂಬುದಕ್ಕಾಗಿ. ಈ ರೀತಿ ಸವಾಲುಗಳಿಗೆಲ್ಲ ಕನ್ಸಿಸ್ಟೆಂಟಾಗಿ ಜವಾಬು ಕಳಿಸುವ (ಸರಿಯೇ ಆಗಬೇಕೆಂದೇನಿಲ್ಲ) ಓದುಗರಿಗೆ, ‘ಬಹುಮಾನಕ್ಕಿಂತ ಭಾಗವಹಿಸುವುದು ಮುಖ್ಯ’ ಎಂಬ ಉತ್ಸಾಹವುಳ್ಳ ಜಾಣರಾದ್ದರಿಂದ ಖಂಡಿತ ಬಹುಮಾನವಿದೆ. ಹಾಗೆಯೇ ನೀವೂ ಯಾವುದಾದರೂ ಸವಾಲು, ಜಾಣ್ಮೆಲೆಕ್ಕವನ್ನು ಓದುಗರಿಗೆ ’ತ್ರೋ’ ಮಾಡುವುದಕ್ಕೂ ಆಹ್ವಾನವಿದೆ. ಒಟ್ಟಿನಲ್ಲಿ ಇದೊಂದು ಆನಂದದಾಯಕ ಚಟುವಟಿಕೆ ಆಗುವ ಸಾಧ್ಯತೆಗಳಿವೆ - ನೀವು ಮನಸ್ಸು ಮಾಡಿದರೆ!

* *

ಅಮೆರಿಕದಲ್ಲಿ ಅಥವಾ ಸಾಮಾನ್ಯವಾಗಿ ಪಾಶ್ಚಾತ್ಯ ದೇಶಗಳಲ್ಲೆಲ್ಲ ವೃತ್ತಿಯ ಬಗ್ಗೆ ಕೀಳರಿಮೆ ಇಲ್ಲ ; ಇರಕೂಡದು. ಆದರೆ ನಮ್ಮ ಭಾರತದಲ್ಲಿ ದುರದೃಷ್ಟವಶಾತ್‌ ವ್ಯಕ್ತಿಯನ್ನು ಅವನ ವೃತ್ತಿಯನ್ನವಲಂಬಿಸಿ ಗೌರವಿಸುವ ಪದ್ಧತಿ ಇದೆ. ಇದು ಸಮಾಜದ ಬೆಳವಣಿಗೆಗೆ ಒಳ್ಳೆಯದಲ್ಲ. ಸರ್‌.ಎಂ.ವಿಶ್ವೇಶ್ವರಯ್ಯನವರು ಈ ಬಗ್ಗೆ ಅದೆಷ್ಟು ಚೆನ್ನಾಗಿ ಹೇಳಿದ್ದಾರೆ ನೋಡಿ. ಈ ‘ಕೊಟೇಶನ್‌’ನೊಂದಿಗೆ ವಿಚಿತ್ರಾನ್ನದ ಎರಡನೇ ತುತ್ತು ಮುಗಿಯುತ್ತದೆ. ಹೇಗನಿಸಿತು? ಬರೆಯಿರಿ.

Remember your work may only to sweep a railway crossing, but it is your duty to keep it so clean that no other crossing in the world is as clean as yours.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X