• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಪ್ರತಿಮ ಸೇನಾನಿ ಲಚಿತ್ ಬೋರ್ ಫುಕಾನ್ ಬಗ್ಗೆ ನಿಮಗೆಷ್ಟು ಗೊತ್ತು?

By ವಸಂತ ಕುಲಕರ್ಣಿ, ಸಿಂಗಪುರ
|

ಇತಿಹಾಸವನ್ನು ಓದುವುದು ಮತ್ತು ಪಠ್ಯಕ್ರಮದಲ್ಲಿರುವ ಇತಿಹಾಸಕ್ಕೂ ಮೀರಿ ಹೆಚ್ಚಿನ ಇತಿಹಾಸವನ್ನು ತಿಳಿದುಕೊಳ್ಳುವುದು ನನ್ನ ಒಂದು ಅಭಿರುಚಿ. ಬೆಳಗಾವಿಯಲ್ಲಿ ನನ್ನ ಶಾಲೆ ಮತ್ತು ಕಾಲೇಜು ಜೀವನವನ್ನು ಕಳೆದ ನನಗೆ ಛತ್ರಪತಿ ಶಿವಾಜಿ ಮಹಾರಾಜರ ಅಮೋಘ ಜೀವನ ಮತ್ತು ಔರಂಗಜೇಬನ ವಿರುದ್ಧದ ಅವರ ಹೋರಾಟಗಳ ಬಗ್ಗೆ ಹಾಗೂ ನಂತರ ಬಂದ ಮರಾಠರ ಇತಿಹಾಸದ ಬಗ್ಗೆ ಸ್ಥೂಲ ಪರಿಚಯವಿರುವುದು ಸಹಜವೇ. ಅದೇ ರೀತಿಯಾಗಿ ಔರಂಗಜೇಬನ ಧರ್ಮಾಂಧತೆಯ ವಿರುದ್ಧದ ಸಿಖ್ ಗುರುಗಳಾದ ತೇಗ ಬಹಾದುರ್ ಮತ್ತು ಗೋಬಿಂದ್ ಸಿಂಗ್ ಅವರ ಹೋರಾಟದ ಬಗ್ಗೆಯೂ ಸ್ವಲ್ಪ ಮಟ್ಟಿಗೆ ಗೊತ್ತು. ಭಾರತದ ಇತಿಹಾಸಕ್ಕೆ ಒಂದು ಹೊಸ ತಿರುವನ್ನು ನೀಡುವಲ್ಲಿ ಇವರ ಪಾತ್ರ ಅತ್ಯಂತ ಹಿರಿದು.

ಆದರೆ ಇತಿಹಾಸದ ಈ ನಿರ್ಣಾಯಕ ಘಟ್ಟದಲ್ಲಿ ಇನ್ನೂ ಅನೇಕರು ಮಹತ್ತರ ಪಾತ್ರವಹಿಸಿದ್ದಾರೆ. ಅವರಲ್ಲಿ ಬುಂದೇಲ್‍ಖಂಡದ ಮಹಾರಾಜ ಛತ್ರಸಾಲ ಒಬ್ಬರಾದರೆ ಅಸ್ಸಾಂನ ಅಹೋಮ್ ರಾಜ್ಯದ ಮಹಾರಾಜ ಚಕ್ರಧ್ವಜಸಿಂಗಾ ಅವರು ಇನ್ನೊಬ್ಬರು. ಮಹಾರಾಜ ಛತ್ರಸಾಲ ಶಿವಾಜಿ ಮಹಾರಾಜರಿಂದ ಪ್ರೇರಿತರಾಗಿ ಬುಂದೇಲ್‍ಖಂಡದಲ್ಲಿ ಕೇವಲ ಐದು ಕುದುರೆ ಮತ್ತು 25 ಪದಾತಿಗಳ ಸಹಾಯದಿಂದ ಪ್ರತಿಭಟನೆಯ ಕಹಳೆ ಊದಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಕೊನೆಗೊಮ್ಮೆ ಜಯಶೀಲರಾದರೆ, ಅಹೋಮ್ ಜನತೆ ಮೊಘಲರ ವಿರುದ್ಧ ಸತತವಾಗಿ ಸುಮಾರು ಎಪ್ಪತ್ತು ವರ್ಷಗಳ ಸುದೀರ್ಘ ಹೋರಾಟ ನಡೆಸಿ ಕೊನೆಗೆ ಔರಂಗಜೇಬನ ಆಡಳಿತದ ವಿರುದ್ಧ ನಿರ್ಣಾಯಕವಾದ ಜಯ ಗಳಿಸಿದರು ಎಂಬುದು ಅಭೂತಪೂರ್ವವಾದದ್ದಲ್ಲವೆ?

ಅಂದು ಬಂಗಾಲದಲ್ಲಿ ತಮ್ಮ ಆಡಳಿತವನ್ನು ಭದ್ರಪಡಿಸಿದ ಮೊಘಲರು ನೈಸರ್ಗಿಕ ಸಂಪತ್ತಿನಲ್ಲಿ ಸಮೃದ್ಧವಾದ ಅಸ್ಸಾಂ ಪ್ರದೇಶದತ್ತ ತಮ್ಮ ಕಣ್ಣು ತಿರುಗಿಸಿದರು. 1615ರಿಂದ ಶುರುವಾದ ಮೊಘಲರ ದಾಳಿಯನ್ನು ಅಹೋಮ್ ಸೇನೆ ಅನೇಕ ಬಾರಿ ಹಿಮ್ಮೆಟ್ಟಿಸಿತು. ಶಹಾಜಹಾನ್‍ನ ಕಾಲದಲ್ಲಿ ಅನೇಕ ಬಾರಿ ನಡೆದ ಹೋರಾಟಗಳಲ್ಲಿ ಅಹೋಮ್ ಜನರ ಶೌರ್ಯ ಮತ್ತು ಅವರ ಯುದ್ಧ ತಂತ್ರಗಳು ಮೊಘಲ್ ಸೇನೆಯನ್ನು ಮಣ್ಣು ಮುಕ್ಕಿಸಿದವು. ಆದರೆ ಸತತವಾಗಿ ನಡೆದ ಯುದ್ಧಗಳಿಂದ ಬೇಸತ್ತ ಅಹೋಮ್ ಜನ ಮೊಘಲರು ನೀಡಿದ ಒಪ್ಪಂದದ ಕರೆಯನ್ನು ಮನ್ನಿಸಿದರು. ಪಶ್ಚಿಮ ಅಸ್ಸಾಂ ಪ್ರಾಂತ್ಯವನ್ನು ಮೊಘಲರ ರಾಜ್ಯ ಎಂದು ಅಹೋಮ್ ರಾಜ ಹಾಗೂ ಪೂರ್ವ ಅಸ್ಸಾಂ ಪ್ರಾಂತ್ಯ ಅಹೋಮ್ ಜನರ ಸ್ವತಂತ್ರ ರಾಜ್ಯ ಎಂದು ಮೊಘಲರು ಪರಸ್ಪರ ಗುರುತಿಸಿ ಒಪ್ಪಂದ ಮಾಡಿಕೊಂಡರು.

ವಿನಾಶಕಾರಿ ಮಾರ್ಗದತ್ತ ಸಾಗದಿರಲಿ ಮಾನವನ ರಚನಾತ್ಮಕ ಬುದ್ಧಿ

ಆದರೆ ಈ ಒಪ್ಪಂದ ಬಹಳಕಾಲ ನಿಲ್ಲಲಿಲ್ಲ. ಎರಡೂ ಬಣಗಳ ನಡುವೆ ಅನೇಕ ಬಾರಿ ಚಿಕ್ಕಪುಟ್ಟ ಘರ್ಷಣೆಗಳು ಉಂಟಾದವು. ಶಹಾಜಹಾನ್‍ನ ಮರಣದ ನಂತರ ಅಹೋಮ್ ರಾಜನಾದ ಸಿಂಗಧ್ವಜನು ಮೊಘಲರನ್ನು ಗುವಾಹಾಟಿ ಮತ್ತು ಕಾಮರೂಪಗಳಿಂದ ಓಡಿಸಿದನು. ಅಲ್ಲದೇ ಢಾಕಾ ಪ್ರದೇಶದ ಮೇಲೆ ದಾಳಿ ಮಾಡಿ ಅನೇಕ ಮೊಘಲ ಪ್ರತಿನಿಧಿಗಳನ್ನು ಬಂಧಿಸಿದನು. ನಂತರ ದೆಹಲಿಯ ಸಿಂಹಾಸನವೇರಿದ ಔರಂಗಜೇಬನು ಅಸ್ಸಾಂ ಪ್ರದೇಶದ ಮೇಲೆ ಮತ್ತೆ ಮತ್ತೆ ದಾಳಿ ಮಾಡಿಸಿದನು. ಅನೇಕ ಬಾರಿ ಅವರನ್ನು ಸೋಲಿಸಿದರೂ, ಮೊಘಲ ಸೇನೆಯ ನಿರಂತರ ದಾಳಿಗಳಿಂದ ತಪ್ಪಿಸಿಕೊಳ್ಳಲು ಕೊನೆಗೊಮ್ಮೆ ಅಹೋಮ್ ರಾಜನು ಮತ್ತೊಮ್ಮೆ ಒಪ್ಪಂದ ಮಾಡಿಕೊಳ್ಳಲು ಮೊಘಲರನ್ನು ಆಹ್ವಾನಿಸಿದನು. ಆದರೆ ಮೊಘಲರು ತಮ್ಮ ಅಪಾರ ಸೇನೆ ಮತ್ತು ಆರ್ಥಿಕ ಬಲದಿಂದ ಅಹೋಮ್ ರಾಜನನ್ನು ಮಣಿಸಿ ಅವನ ಮೇಲೆ ಅತ್ಯಂತ ಹೀನಾಯಕರ ಕರಾರುಗಳನ್ನು ಹೇರಿದರು.

1663ರಲ್ಲಿ ಗಿಲಾಜರಿಘಾಟ್‍ನಲ್ಲಿ ನಡೆದ ಈ ಒಪ್ಪಂದದ ಪ್ರಕಾರ, ಸಂಪೂರ್ಣ ಪಶ್ಚಿಮ ಅಸ್ಸಾಂ ಪ್ರಾಂತ್ಯ ಮೊಘಲರ ವಶವಾಯಿತು. ಅಹೋಮ್ ರಾಜ ಮೂರು ಲಕ್ಷ ರೂಪಾಯಿಗಳನ್ನು ಪರಿಹಾರ ಧನ ಎಂದು ನೀಡಬೇಕಾಯಿತು. ಅಲ್ಲದೇ ತನ್ನ ಒಬ್ಬಳೇ ಮಗಳಾದ ರಮಣಿ ಗಭಾರು ಮತ್ತು ತಮ್ಮನ ಮಗಳನ್ನು ಮೊಘಲ ದೊರೆಯ ಜನಾನಾಕ್ಕೆ ಕಳುಹಿಸಿಕೊಡಬೇಕಾಯಿತು. ಸ್ವಾಭಿಮಾನಿಗಳಾದ ಅಹೋಮ್ ಜನತೆಗೆ ಇದು ತಡೆಯಲಾರದ ಪೆಟ್ಟಾಯಿತು. ಈ ಶೋಕ ಮತ್ತು ಆಘಾತದಿಂದ ತಪ್ತನಾದ ಅಹೋಮ್ ದೊರೆ ಸಿಂಗಧ್ವಜ ತೀರಿಕೊಂಡನು.

ನಂತರ ಸಿಂಹಾಸನವೇರಿದ ಚಕ್ರಧ್ವಜಸಿಂಗಾ ಮಹಾರಾಜನು ಸೇಡು ತೀರಿಸಿಕೊಳ್ಳಲು ನಿರ್ಧರಿಸಿದನು. ಈ ಪರಾಕ್ರಮಿ ಮಹಾರಾಜನು ಮತ್ತೊಮ್ಮೆ ಮೊಘಲರ ಮೇಲೆ ದಾಳಿ ನಡೆಸಿ ಕೇವಲ ಎರಡು ತಿಂಗಳಲ್ಲಿ ಗುವಾಹಾಟಿ ಸಮೇತ ಸಂಪೂರ್ಣ ಪಶ್ಚಿಮ ಅಸ್ಸಾಂ ಅನ್ನು ಮತ್ತೊಮ್ಮೆ ಕೈವಶಪಡಿಸಿಕೊಂಡನು. ಅಸ್ಸಾಂ ಪ್ರಾಂತ್ಯದ ಈ ಸೋಲಿನಿಂದ ಸಿಟ್ಟಿಗೆದ್ದ ಔರಂಗಜೇಬನು ಅಹೋಮ್ ರಾಜನನ್ನು ಮಣಿಸಲು ಅತ್ಯಂತ ದೊಡ್ಡ ಪಡೆಯನ್ನು ಅಂಬರ್ ರಾಜ ರಾಮ್ ಸಿಂಗ್ ಮತ್ತು ಜೈಪುರದ ರಾಜ ಜೈ ಸಿಂಗ್ ಅವರ ನೇತೃತ್ವದಲ್ಲಿ ಕಳುಹಿಸಿಕೊಟ್ಟನು.

ಆಗ ಅಹೋಮ್ ಪ್ರದೇಶವನ್ನು ರಕ್ಷಿಸಲು ಮಹಾರಾಜನು ತನ್ನ ಸಮರ್ಥ ಸೇನಾನಿ ಲಚಿತ್ ಬೋರ್ ಫುಕಾನ್‍ನನ್ನು ತನ್ನ ಚಿಕ್ಕ ಸೇನೆಯೊಂದಿಗೆ ಕಳುಹಿಸಿಕೊಟ್ಟನು. ಈ ಲಚಿತ್ ಬೋರ್ ಫುಕಾನ್ ಭಾರತ ಕಂಡ ಅತ್ಯಂತ ಮಹಾನ್ ರಣವೀರರಲ್ಲಿ ಒಬ್ಬ. ತನ್ನ ಯುದ್ಧ ತಂತ್ರಗಳಿಂದ ಮತ್ತು ಶೌರ್ಯದಿಂದ ಸೈರಾಘಾಟ್ ಎಂಬಲ್ಲಿ ನಡೆದ ಯುದ್ಧದಲ್ಲಿ ತನ್ನ ಸೇನೆಯ ಸುಮಾರು ಹತ್ತು ಪಾಲು ದೊಡ್ಡದಾದ ಮೊಘಲರ ಸೇನೆಯನ್ನು ಸಂಪೂರ್ಣವಾಗಿ ಸೋಲಿಸಿ ಓಡಿಸಿದ ಲಚಿತ್ ಬೋರ್ ಫುಕಾನ್, ಮಹಾರಾಜ ತನ್ನಲ್ಲಿಟ್ಟ ನಂಬಿಕೆಗೆ ಸಂಪೂರ್ಣ ನ್ಯಾಯ ಸಲ್ಲಿಸಿದನು.

ಯುದ್ಧದ ಮೊದ ಮೊದಲಿಗೆ ಅಹೋಮ್ ಸೇನೆ ನಷ್ಟ ಅನುಭವಿಸಿದರೂ, ತನ್ನ ಸ್ವಂತದ ಅನಾರೋಗ್ಯವನ್ನು ಗಮನಿಸದೇ ಸಂಗ್ರಾಮಕ್ಕಿಳಿದ ಸೇನಾನಿ ಲಚಿತ್ ಬೋರ್ ಫುಕಾನ್‍ನ ರಣಾವೇಶದಿಂದ ಪ್ರೋತ್ಸಾಹ ಪಡೆದು ವೀರಾವೇಶದಿಂದ ಹೋರಾಡಿ ತಮ್ಮ ರಾಜ್ಯಕ್ಕೆ ವಿಜಯ ತಂದು ಕೊಟ್ಟಿತು. ಇಂದು ಭಾರತದ ರಾಷ್ಟ್ರೀಯ ರಕ್ಷಣಾ ಸಂಸ್ಥೆ (National Defence Academy) ತನ್ನ ಅತ್ಯುತ್ತಮ ವಿದ್ಯಾರ್ಥಿಗೆ ಲಚಿತ್ ಬೋರ್ ಫುಕಾನ್‍ನ ಹೆಸರಿನಲ್ಲಿ ಸ್ವರ್ಣ ಪದಕ ನೀಡುತ್ತದೆ.

ಆದರೂ ಬಹುಪಾಲು ಭಾರತೀಯರಿಗೆ ಲಚಿತ್ ಬೋರ್ ಫುಕಾನ್ ಮತ್ತು "ಪರದೇಶೀಯರ ಆಳ್ವಿಕೆಗಿಂತ ಮರಣವೇ ಉತ್ತಮ" ಎಂದು ಘೋಷಿಸಿದ ವೀರ ಮಹಾರಾಜ ಚಕ್ರಧ್ವಜಸಿಂಗಾ ಅವರ ಬಗ್ಗೆ ಗೊತ್ತೇ ಇಲ್ಲ ಎಂಬುದು ವಿಷಾದನೀಯ. ನಿಜ ಹೇಳಬೇಕೆಂದರೆ ಛತ್ರಸಾಲ ಮಹಾರಾಜರನ್ನು ಕುರಿತು ಹೆಚ್ಚಿಗೆ ತಿಳಿಯಲು ಅಂತರ್ಜಾಲವನ್ನು ತಡಕಾಡುತ್ತಿದ್ದಾಗ ನನಗೆ ಅಹೋಮ್ ಜನತೆಯ ವೀರ ಸಂಘರ್ಷವನ್ನು ಕುರಿತು ಹೆಚ್ಚಿಗೆ ತಿಳಿಯುವ ಲೇಖನವೊಂದು ಅಕಸ್ಮಾತ್ತಾಗಿ ದೊರಕಿತು. ಆ ಲಿಂಕ್ ಇಲ್ಲಿದೆ

ಬಹುಪಾಲು ಇತಿಹಾಸಕಾರರ ದೃಷ್ಟಿ ಕೇವಲ ದಿಲ್ಲಿಯಿಂದ ನಡೆದ ಆಡಳಿತದ ಮೇಲೆಯೇ ಕೇಂದ್ರೀಕೃತವಾಗಿದ್ದುದೇ ಇದಕ್ಕೆ ಮುಖ್ಯ ಕಾರಣ. ಭಾರತದ ಇತಿಹಾಸದ ಮೇಲೆ ದಿಲ್ಲಿಯ ದೃಷ್ಟಿಕೋನದ್ದೇ ಮೇಲುಗೈ ಎಂದು ಕಾಣುತ್ತದೆ. ದಿಲ್ಲಿಯ ಆಡಳಿತದ ಕಥೆಯೇ ಇತಿಹಾಸದ ಮೂರು ಪಾಲು ತುಂಬಿಕೊಂಡಿದೆ ಎನ್ನಬಹುದು. ಆದರೆ ಭಾರತವೆಂದರೆ ದಿಲ್ಲಿ ಮತ್ತು ಉತ್ತರ ಭಾರತಗಳು ಮಾತ್ರವಲ್ಲ. ಕೇವಲ ಸಮ್ರಾಟ್ ಅಶೋಕ, ಮಹಾರಾಜಾ ಹರ್ಷವರ್ಧನ ಮತ್ತು ಅಕ್ಬರ್ ಬಾದಶಹರು ಮಾತ್ರ ಭಾರತದ ಮಹಾನ್ ರಾಜರಲ್ಲ.

ಭಾರತದ ಇತರ ಪ್ರದೇಶಗಳಲ್ಲಿಯೂ ಭಾರತೀಯರೆಲ್ಲರೂ ಅಭಿಮಾನ ಪಡುವಂತಹ ಮಹಾರಾಜರುಗಳು ರಾಜ್ಯವಾಳಿದ್ದಾರೆ. ಇಮ್ಮಡಿ ಪುಲಕೇಶಿ, ರಾಜ ರಾಜ ಚೋಳ, ರಾಷ್ಟ್ರಕೂಟರ ಮೂರನೆಯ ಗೋವಿಂದ, ಅವನ ಮಗ ಅಮೋಘವರ್ಷ ನೃಪತುಂಗ, ಹೊಯ್ಸಳ ವಿಷ್ಣುವರ್ಧನ, ವಿಜಯನಗರದ ಶ್ರೀಕೃಷ್ಣದೇವರಾಯ, ಛತ್ರಪತಿ ಶಿವಾಜಿ ಮಹಾರಾಜ, ಬಾಜೀರಾವ್ ಮುಂತಾದ ರಾಜರುಗಳು ಮಾಡಿದ ಸಾಧನೆ ಅಪ್ರತಿಮವಾದದ್ದು. ಅವರ ಪರಾಕ್ರಮ ಮತ್ತು ಆಡಳಿತಗಳು ಉತ್ತರದ ಯಾವುದೇ ಮಹಾರಾಜರಗಳಿಗಿಂತ ಕಡಿಮೆಯಾಗಿರಲಿಲ್ಲ. ಆದರೂ ಭಾರತದ ಇತಿಹಾಸದಲ್ಲಿ ಈ ಮಹಾನುಭಾವರ ಹೆಸರು ಮತ್ತು ಸಾಧನೆಗಳು ಕೆಲವೇ ಸಾಲುಗಳಲ್ಲಿ ಮುಗಿದು ಹೋಗುತ್ತವೆ.

ಅದರೆ ಭಾರತದ ವಿವಿಧತೆಯ ಪುಂಗಿಯನ್ನು ಊದುವ ಮಹಾನುಭಾವರುಗಳಿಗೆ ಈ ವಿಷಯವೇ ಕಾಣುವುದಿಲ್ಲ. ಅದರಂತೆಯೇ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ತರ ಕಾರ್ಯವಹಿಸಿದ ಲೋಕಮಾನ್ಯ ಬಾಲಗಂಗಾಧರ ತಿಲಕ್, ಗೋಪಾಲಕೃಷ್ಣ ಗೋಖಲೆ, ಆಲೂರು ವೆಂಕಟರಾಯರು, ಸುಬ್ರಮಣ್ಯ ಭಾರತಿ ಮುಂತಾದ ಮಹಾತ್ಮರ ಹೆಸರು ನಮ್ಮ ಇತಿಹಾಸದಲ್ಲಿ ಚೆದುರಿದಂತೆ ಅಲ್ಲಲ್ಲಿ ಕಾಣಬರುತ್ತದೆ. ಇತಿಹಾಸದ ಎಲ್ಲ ಮುಖಗಳ ಬಗ್ಗೆ ಸಮಗ್ರವಾದ ಸಂಶೋಧನೆಯಾಗಿ ನಮ್ಮ ಇತಿಹಾಸದ ಎಲ್ಲ ಮಹಾನುಭಾವರುಗಳ ಮತ್ತು ಅವರ ಸಾಧನೆಗಳ ಬಗ್ಗೆ ಎಲ್ಲ ಭಾರತೀಯರಿಗೆ ತಿಳಿಯುವಂತಾಗಲಿ ಎಂಬುದು ನನ್ನ ಆಶಯ.

English summary
Lachit Borphukan, The Hero and Pride of Assam. How many know this warrior, who fought against Mughals? Vasant Kulkarni from Singapore writes about several unknown heroes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X