ಮನುಕುಲದ ಸರ್ವನಾಶಕ್ಕೆ ಗಣನೆ ಆರಂಭವಾಗಿದೆಯಾ?

By: ವಸಂತ ಕುಲಕರ್ಣಿ, ಸಿಂಗಪುರ
Subscribe to Oneindia Kannada

ನನ್ನ ಆಫೀಸಿನ ಯುರೋಪಿಯನ್ ಮಿತ್ರನೊಬ್ಬ ಟೀ ಟೈಮ್ನಲ್ಲಿ ನಡೆದ ಚರ್ಚೆಯಲ್ಲಿ ಭಾರತದ ಜನಸಂಖ್ಯಾ ಸ್ಫೋಟವನ್ನು ಕುರಿತು ಸ್ವಲ್ಪ ಹಗುರವಾಗಿ ಮಾತನಾಡಿದ. ಇನ್ನು ಕೆಲವೇ ವರ್ಷಗಳಲ್ಲಿ ಭಾರತ ಜನಸಂಖ್ಯೆಯಲ್ಲಿ ಜಗತ್ತಿನಲ್ಲಿಯೇ ಪ್ರಥಮ ಸ್ಥಾನ ಪಡೆಯುತ್ತದೆ ಎಂಬುದು ಆತನ ಕಟುವಾದ, ಆದರೆ ಸತ್ಯವಾದ ಮಾತಾಗಿತ್ತು.

ನಾನು ಸಹಜವಾಗಿ ಅವನನ್ನು ವಿರೋಧಿಸಲು ಸ್ವಲ್ಪ ತುಲನಾತ್ಮಕ ಅಂಕಿ ಸಂಖ್ಯೆಯನ್ನು ನೀಡಿದೆ. ಆತನ ದೇಶವನ್ನು ಭಾರತದ ಒಂದು ರಾಜ್ಯಕ್ಕೆ ಹೋಲಿಸಿ ಜನಸಂಖ್ಯೆ ಮತ್ತು ವಿಸ್ತಾರಗಳಲ್ಲಿ ಅಷ್ಟೇನೂ ವ್ಯತ್ಯಾಸವಿಲ್ಲದಿರುವುದನ್ನು ತೋರಿಸಿದೆ. ಅಲ್ಲದೇ ಎರಡನೇ ಮಹಾಯುದ್ಧದಲ್ಲಿ ಯುರೋಪು ಬಹಳಷ್ಟು ಜನರನ್ನು ಕಳೆದುಕೊಂಡರೂ ಇಷ್ಟೊಂದು ಜನಸಂಖ್ಯೆಯನ್ನು ಹೊಂದಿದೆ ಎಂಬುದನ್ನು ಒತ್ತಿ ಹೇಳಿದೆ. ಭಾರತವನ್ನು ಯುರೋಪಿನ ಕೇವಲ ಒಂದು ದೇಶಕ್ಕೆ ಮಾತ್ರ ಹೋಲಿಸದೇ ಸಂಪೂರ್ಣ ಪಶ್ಚಿಮ ಯುರೋಪಿಗೆ ಹೋಲಿಸಲು ಸಲಹೆ ನೀಡಿದೆ. ಅಲ್ಲದೇ ಔದ್ಯೋಗೀಕರಣದಲ್ಲಿ ಎರಡು ನೂರು ವರ್ಷಗಳ ಮುನ್ನಡೆ ಪಡೆದ ಯುರೋಪು ಪ್ರಪಂಚದ ಅನೇಕ ಖಂಡಗಳನ್ನು ಆಕ್ರಮಿಸಿಕೊಂಡಿದ್ದು ಅಲ್ಲಿ ಕೂಡ ತನ್ನ ಜನಸಂಖ್ಯೆಯನ್ನು ಬೆಳೆಸಿದೆ ಎಂದು ಕೂಡ ಒತ್ತಿ ಹೇಳಿದೆ.[ವಿಧ್ವಂಸಕ ಆಯುಧಗಳನ್ನು ಸಂಪೂರ್ಣ ನಾಶಗೊಳಿಸಿ]

Increasing population and unforeseen destruction of mankind

ನನ್ನ ವಾದವನ್ನು ಒಪ್ಪಿಕೊಂಡನೋ ಅಥವಾ ನನ್ನೊಂದಿಗೆ ವಾದ ಮಾಡಲು ಇಷ್ಟವಿರಲಿಲ್ಲವೋ, ಒಟ್ಟಿನಲ್ಲಿ ಆತ ಅಲ್ಲಿಯೇ ಚರ್ಚೆ ನಿಲ್ಲಿಸಿ ಜನಸಂಖ್ಯೆ ಕೇವಲ ಒಂದು ದೇಶದ ಸಮಸ್ಯೆ ಅಲ್ಲ ಇಡೀ ಜಗತ್ತಿನ ಸಮಸ್ಯೆ ಎಂದು ಪ್ರಾಂಜಲವಾಗಿ ನುಡಿದ. ಚರ್ಚೆಯಲ್ಲಿ ಮೇಲುಗೈ ಪಡೆದ ಬಗ್ಗೆ ಅನವಶ್ಯಕ ಹೆಮ್ಮೆಯುಂಟಾದರೂ, ಅವನ ಮಾತಿನಲ್ಲಿದ್ದ ಸತ್ಯ ನನ್ನ ಮನಸ್ಸನ್ನು ಕೊರೆಯತೊಡಗಿತು. ಈಗಾಗಲೇ 130 ಕೋಟಿಗಿಂತಲೂ ಹೆಚ್ಚಾಗಿರುವ ಮತ್ತು ಇನ್ನೂ ಬೆಳೆಯುತ್ತಲೇ ಇರುವ ನಮ್ಮ ದೇಶದ ಜನಸಂಖ್ಯೆಯ ಸಮಸ್ಯೆ, ಈಗಾಗಲೇ ಜನಸಂಖ್ಯೆಯ ಮೇಲೆ ನಿಯಂತ್ರಣ ಸಾಧಿಸಿರುವ ಪಶ್ಚಿಮ ಯುರೋಪಿನ ಸಮಸ್ಯೆಗಿಂತ ಅನೇಕ ಪಟ್ಟು ಜಾಸ್ತಿ ಎಂಬುದನ್ನು ಮನಸ್ಸು ಒತ್ತಿ ಒತ್ತಿ ಹೇಳತೊಡಗಿತು.[ಚಂದಮಾಮಾದ ಚೆಂದದ ಪೌರಾಣಿಕ ಕಥೆಗಳ ಯುಗಾಂತ್ಯ]

ಜಗತ್ತಿನಲ್ಲಿಯ ಕೆಲವು ದೇಶಗಳ ಪ್ರಜನನ ಗತಿ (ಪ್ರತಿ ಮಹಿಳೆಗೆ ಹುಟ್ಟುವ ಮಕ್ಕಳ ಸಂಖ್ಯೆ)ಯನ್ನು ಭಾರತದೊಂದಿಗೆ ಹೋಲಿಸಿ ನೋಡಿದೆ. ಆಗ ಕಂಡು ಬಂದ ವಿಷಯ ಈ ಕೆಳಗಿನಂತಿದೆ
(ಆಕರ: https://www.cia.gov/library/publications/the-world-factbook/fields/2127.html)
ಭಾರತ - 2.45
ಚೀನಾ - 1.6
ಜರ್ಮನಿ - 1.44
ಅಮೆರಿಕಾ - 1.87
ಸಿಂಗಪುರ - 1.2
ಬ್ರೆಜಿಲ್ - 1.76
ಸೌದಿ ಅರೇಬಿಯ - 2.11
ಇಂಡೋನೇಶಿಯ - 2.13
ಜಪಾನ್ - 1.41
ಜನಸಂಖ್ಯೆಯನ್ನು ಬದಲಿಸುವ ಗತಿ - 2.11

ಈ ಅಂಕಿ ಅಂಶಗಳನ್ನು ಗಮನಿಸಿದರೆ ಮುಂದುವರೆದ ದೇಶಗಳಾದ ಸಿಂಗಪುರ, ಜರ್ಮನಿ, ಜಪಾನ್ ಮತ್ತು ಅಮೆರಿಕಗಳು ತಮ್ಮ ಪ್ರಜನನ ಗತಿಯನ್ನು ಸಂಪೂರ್ಣವಾಗಿ ಹತೋಟಿಗೆ ತಂದಿವೆ. ಅವುಗಳ ಪ್ರಜನನ ಗತಿ, ಜನಸಂಖ್ಯೆಯನ್ನು ಬದಲಿಸುವ ಗತಿಗಿಂತ ಸಾಕಷ್ಟು ಕೆಳಗಿದ್ದು, ಜನಸಂಖ್ಯೆಯ ಸ್ಫೋಟದಲ್ಲಿ ಹಿನ್ನಡೆತ ಆರಂಭವಾಗಿದೆ. ಪ್ರಗತಿಯತ್ತ ದಾಪುಗಾಲಿಡುತ್ತಿರುವ ಚೀನ ಕೂಡ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಸೌದಿ ಅರೇಬಿಯ, ಬ್ರೆಜಿಲ್ ಮತ್ತು ಇಂಡೋನೇಶಿಯದಂತಹ ರಾಷ್ಟ್ರಗಳು ಕೂಡ ಈ ನಿಟ್ಟಿನಲ್ಲಿ ಭಾರತಕ್ಕಿಂತ ಹೆಚ್ಚಿನ ಪ್ರಗತಿ ಸಾಧಿಸಿವೆ. ಆದರೆ ಭಾರತ ಮತ್ತು ಇನ್ನೂ ಅನೇಕ ಹಿಂದುಳಿದ ದೇಶಗಳಲ್ಲಿ ಪ್ರಜನನ ಸಂಖ್ಯೆ ಜನಸಂಖ್ಯಾ ಬದಲಿಸುವ ಗತಿಗಿಂತ ಹೆಚ್ಚು ತೀವ್ರವಾಗಿದ್ದು ಮುಂಬರುವ ಕಾಲದಲ್ಲಿ ಜನಸಂಖ್ಯೆ ಇನ್ನೂ ಹೆಚ್ಚಾಗಲಿದೆ.[ಸಿಂಗಪುರದಲ್ಲಿಯೂ ಇಣುಕುತ್ತಿದೆ ಉದ್ಯೋಗದ ಅಭದ್ರತೆ!]

Increasing population and unforeseen destruction of mankind

ಕಳೆದ ಶತಮಾನದಲ್ಲಿ ವೈದ್ಯಕೀಯ ವಿಜ್ಞಾನದಲ್ಲಿ ಸಾಕಷ್ಟು ಪ್ರಗತಿಯುಂಟಾಗಿ ಪ್ಲೇಗ್, ಕಾಲರಾ, ಟಿಬಿ ಮತ್ತು ಮಲೇರಿಯಾದಂತಹ ಭಯಂಕರ ರೋಗಗಳ ನಿವಾರಣೆಯನ್ನು ಕಂಡು ಹಿಡಿದ ಕಾರಣ ಮರಣದ ಗತಿ ಕಡಿಮೆಯಾದುದಲ್ಲದೇ ಮನುಷ್ಯನ ಸರಾಸರಿ ಆಯುಷ್ಯ ಹೆಚ್ಚಾಗಿದೆ. ಹಸಿರು ಕ್ರಾಂತಿಯಿಂದ ಆಹಾರದ ಒಟ್ಟು ಉತ್ಪಾದನೆ ಕೂಡ ಹೆಚ್ಚಾಗಿ ಹಸಿವಿನಿಂದ ಬಳಲುವವರ ಸಂಖ್ಯೆ ಕಡಿಮೆಯಾಗಿದೆ. ಆದುದರಿಂದ ಜನನದ ಗತಿ ಕೂಡ ಹೆಚ್ಚಾಗಿ ಜಗತ್ತಿನ ಜನಸಂಖ್ಯೆಯಲ್ಲಿ ಹಿಂದೆಂದೂ ಕಾಣದಷ್ಟು ವೃದ್ಧಿಯುಂಟಾಗಿದೆ.

ಆಕರ: http://www.worldometers.info/world-population/

ಕ್ರಿ.ಶ 1ರಿಂದ ಕ್ರಿ.ಶ 1800ರ ವರೆಗೆ ಜನಸಂಖ್ಯೆಯಲ್ಲಿ ಗಣನೀಯವಾಗಿ ವೃದ್ಧಿ ಕಾಣದಿದ್ದರೂ, ಕ್ರಿ.ಶ. 1801ರಿಂದ ಇಲ್ಲಿಯವರೆಗೆ ಅನೇಕ ಪಟ್ಟು ಹೆಚ್ಚಾಗಿದೆ ಮತ್ತು ಹಾಗೆಯೇ ಮುಂದುವರೆಯಲಿದೆ. ಜನಸಂಖ್ಯೆಯ ಹೆಚ್ಚಳದ ತೀವ್ರಗತಿಯನ್ನು ತಿಳಿಯಲು ಒಂದು ಉದಾಹರಣೆ.

ನಾನು ಹುಟ್ಟಿದ ವರ್ಷ 1971ರಲ್ಲಿ ಜಗತ್ತಿನ ಜನಸಂಖ್ಯೆ 3.8 ಬಿಲಿಯನ್ ಆಗಿತ್ತು. ಈಗ 2017ರಲ್ಲಿ, ಎಂದರೆ ಕೇವಲ ನಲವತ್ತೈದು ವರ್ಷಗಳಲ್ಲಿ ಜಗತ್ತಿನ ಜನಸಂಖ್ಯೆ 7.5 ಬಿಲಿಯನ್ನಷ್ಟಾಗಿದೆ. ಅಂದರೆ ಎರಡುಪಟ್ಟು ಹೆಚ್ಚು! ಹೀಗೆಯೇ ಮುಂದುವರೆದರೆ, ಪರಿಣಮಿಸುವ ಜನಸಾಂದ್ರತೆಯಿಂದ, ಪರಿಸರ ಮಾಲಿನ್ಯ, ಅರಣ್ಯ ನಾಶ, ಕಲುಷಿತ ನೀರು ಮತ್ತು ಆಹಾರ, ಮೀನು ಮತ್ತು ಇತರ ಪ್ರಾಣಿ ಪಕ್ಷಿಗಳ ವಿನಾಶ, ಆಹಾರ ಕೊರತೆ ಮತ್ತು ಕೊನೆಗೆ ಮಾನವ ಕುಲದ ಸರ್ವನಾಶ ಕಟ್ಟಿಟ್ಟದ್ದು.

ಈ ಹತೋಟಿಯಿರದ ಜನಸಂಖ್ಯೆಯ ಸ್ಫೋಟಕ್ಕೆ ಕೇವಲ ವೈಜ್ಞಾನಿಕ ಪ್ರಗತಿ ಕಾರಣವಲ್ಲ. ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಶಕ್ತಿಗಳು ಕೂಡಾ ಕಾರಣ. ತಮ್ಮ ಬೇಳೆ ಬೇಯಿಸಿಕೊಳ್ಳಲು ದೂರದೃಷ್ಟಿಯಿರದ ರಾಜಕೀಯ ಮತ್ತು ಧಾರ್ಮಿಕ ನಾಯಕರು ಬೇಜವಾಬ್ದಾರಿಯಿಂದ ಜನರ ಮೌಢ್ಯವನ್ನು ಪೋಷಿಸುತ್ತಿದ್ದಾರೆ. ಜನಸಂಖ್ಯೆಯನ್ನು ಇನ್ನೂ ಹೆಚ್ಚು ಬೆಳೆಸಲು ಕರೆ ನೀಡುತ್ತಿದ್ದಾರೆ. ಜನರ ಸಾಮಾಜಿಕ ಮೌಢ್ಯ ಕೂಡ ದೋಷಿಯಾಗಿದೆ. ತಮ್ಮ ಗುಂಪನ್ನು ಇತರರ ಗುಂಪಿಗಿಂತ ಹೆಚ್ಚಿಸಲು ಜನ ಕೂಡ ಜನಸಂಖ್ಯೆಯ ಸ್ಫೋಟಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಮುಂಬರುವ ಪ್ರಳಯಕ್ಕೆ ಅರಿವಿಲ್ಲದೇ ಕಾರಣರಾಗುತ್ತಿದ್ದಾರೆ.

Increasing population and unforeseen destruction of mankind

ಆದುದರಿಂದ ಈ ಸಮಸ್ಯೆಯನ್ನು ಬಗೆಹರಿಸಲು ಬಹು ಆಯಾಮದ ಉಪಾಯಗಳನ್ನು ಮಾಡಬೇಕಿದೆ. ಈ ಸಮಸ್ಯೆಯನ್ನು ಸಾಮಾಜಿಕ, ಧಾರ್ಮಿಕ, ರಾಜಕೀಯ ಮತ್ತು ಆರ್ಥಿಕ ಆಯಾಮಗಳಲ್ಲಿ ವಿಶ್ಲೇಷಿಸಿ ಪರಿಹಾರಗಳನ್ನು ಕಂಡುಹಿಡಿದು ಅವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಾಗಿದೆ. ಮಹಿಳಾ ಸಬಲೀಕರಣ, ಶಿಕ್ಷಣದ ಹರಡುವಿಕೆ, ಶಿಶು ವಿವಾಹದ ನಿಯಂತ್ರಣ ಮುಂತಾದವುಗಳಲ್ಲದೇ, ಸಣ್ಣ ಕುಟುಂಬ ಹೊಂದಿದವರಿಗೆ ಬಹುಮಾನವಾಗಿ ಆರ್ಥಿಕ ನೆರವು ನೀಡುವಂತಹ ಪದ್ಧತಿಗಳನ್ನು ಜಾರಿಗೆ ತರಬೇಕು. ಹೊಸ ಮಾಧ್ಯಮಗಳಾದ ಅಂತರ್ಜಾಲ ಮತ್ತು ಸಾಮಾಜಿಕ ಜಾಲ ತಾಣಗಳನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳಬೇಕು.

ಕೆಲವು ವರ್ಷಗಳ ಹಿಂದೆ ನಾನು ಕೆಲಸ ಮಾಡುತ್ತಿದ್ದ ಕಂಪನಿಯೊಂದರಲ್ಲಿ ನನ್ನ ವಿದ್ಯಾವಂತ ಸಹೋದ್ಯೋಗಿಯೊಬ್ಬರು ಏಳು ಮಕ್ಕಳ ತಂದೆಯಾಗಿದ್ದರು. ಅವರ ಪತ್ನಿ ಮತ್ತೆ ಗರ್ಭಿಣಿಯಾದಾಗ ನನ್ನ ಇತರ ಸಹೋದ್ಯೋಗಿಗಳು ಅವರನ್ನು ಗೇಲಿ ಮಾಡಿದರು. ಅದರಿಂದ ಅವರು ವಿಚಲಿತರಾಗಲಿಲ್ಲ. ಕೆಲವರು ಈ ವಿಷಯವಾಗಿ ಅವರ ಜೊತೆ ಗಂಭೀರವಾದ ಚರ್ಚೆಗಿಳಿದರೂ, ಅವರು "ಮಕ್ಕಳು ದೇವರ ಪ್ರಸಾದ. ಆದುದರಿಂದ ಅದನ್ನು ಮನುಷ್ಯಮಾತ್ರರಾದ ತಾವು ತಡೆಗಟ್ಟಬಾರದು, ಅದು ಮಹಾಪಾಪ" ಎಂಬ ಮೊಂಡುವಾದಕ್ಕಿಳಿದರು. "ಅದೇ ದೇವರು ನಮಗೆ ಬುದ್ಧಿಯನ್ನು ಕೊಟ್ಟಿದ್ದಾನೆ. ಆ ಬುದ್ಧಿಯನ್ನು ನಾವು ಉಪಯೋಗಿಸಿ ಜನಸಂಖ್ಯಾ ಸ್ಫೋಟದ ಪರಿಣಾಮ ಅರಿಯಬೇಕು" ಎಂದು ಎಷ್ಟು ಹೇಳಿದರೂ, ಅದು ಅವರ ಮನಸ್ಸನ್ನು ತಟ್ಟಲೇ ಇಲ್ಲ. ಈ ಮಹಾನುಭಾವರ ಮನಸ್ಸತ್ವ ನಮಗೆ ಅರ್ಥವಾಗಲೇ ಇಲ್ಲ!

ಇಂತಹ ಮೌಢ್ಯದ ಪರಮಾವಧಿಯನ್ನು ಗಮನಿಸಿದರೆ, ಕೆಲವು ಬಾರಿ ಚೀನಾ ಜನಸಂಖ್ಯೆ ನಿಯಂತ್ರಣದಲ್ಲಿ ತೋರಿಸಿದ ರಾಜಕೀಯ ಗಟ್ಟಿತನವನ್ನು ಸ್ವಲ್ಪ ಅವಧಿಯವರೆಗೆ ನಮ್ಮ ದೇಶದ ನಾಯಕರು ಕೂಡ ತೋರಿಸಲೇಬೇಕು. ಆದರೆ ಪರಸ್ಪರ ದೋಷಾರೂಪಣೆಯಲ್ಲಿ ತೊಡಗಿ ತಮ್ಮ ಕಾಲವನ್ನು ಕಳೆದು, ತಮ್ಮ ತಮ್ಮ ಖಜಾನೆಯನ್ನು ಭರ್ತಿ ಮಾಡಲು ಮಾತ್ರ ಓಡಾಡುವ ನಾಯಕರು ಈ ಮಟ್ಟಿಗಿನ ಮುತ್ಸದ್ದಿತನವನ್ನು ತೋರಿಸಬಲ್ಲರೇ? ಸಮೀಪದ ಕಾಲಾವಧಿಯಲ್ಲಿ ಅದು ಸಾಧ್ಯವಿಲ್ಲ ಎಂದೇ ಭಾಸವಾಗುತ್ತದೆ. ಅದಕ್ಕೆ ಬೇಕಾಗುವ ರಾಜಕೀಯ ವಿಚಕ್ಷಣೆ ಮತ್ತು ಸಂಕಲ್ಪಶಕ್ತಿ ನಮ್ಮ ಅನೇಕ ದೂರದೃಷ್ಟಿಹೀನ ನಾಯಕರಿಗಿಲ್ಲ ಎಂಬುದೇ ನನ್ನ ಭಾವನೆ. ನಿಮ್ಮ ಅಭಿಪ್ರಾಯವೇನು ದಯವಿಟ್ಟು ತಿಳಿಸಿರಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The world has become small due to technology. Man is capable of inventing anything and everything, except birth and death. But, the population is not controlled in many parts of the world including India, it may face many unforeseen problems. Vasant Kulkarni, Singapore writes.
Please Wait while comments are loading...