• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ ರಾಜಕೀಯದ ಮಿನುಗುತಾರೆ ಅಟಲ್ ಬಿಹಾರಿ ವಾಜಪೇಯಿ

By ವಸಂತ ಕುಲಕರ್ಣಿ, ಸಿಂಗಪುರ
|

ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ನಾನು ಮೊತ್ತಮೊದಲು ಕೇಳಿದ್ದು 1980-81ರಲ್ಲಿ ಎಂದೆನಿಸುತ್ತದೆ. ನಾನಾಗ ಹತ್ತು ವರ್ಷದ ಪೋರ. ಅವರ ಹೆಸರನ್ನು ಕೇಳಿದ್ದು ಸ್ಕೂಲಿನಲ್ಲಿ. ನಾವೆಲ್ಲ ಹುಡುಗರು ಕಾಂಗ್ರೆಸ್ಸಿಗೆ ವೋಟು ಹಾಕಬೇಕು ಇಲ್ಲವೇ ಜನತಾ ಪಕ್ಷಕ್ಕೆ ವೋಟು ಹಾಕಬೇಕು ಎಂದೋ ಅಥವಾ ಇಂದಿರಾ ಗಾಂಧಿ ಪ್ರಧಾನಿ ಆಗಬೇಕು ಅಥವಾ ಮೊರಾರ್ಜಿ ದೇಸಾಯಿ ಅವರು ಪ್ರಧಾನಿಯಾಗಬೇಕು ಎಂದೋ ಮಾತನಾಡಿಕೊಳ್ಳುತ್ತಿದ್ದೆವು ಎಂಬ ನೆನಪು.

ಆಗ ನಮ್ಮ ಕ್ಲಾಸ್ ಮೇಟ್ ಒಬ್ಬ "ನನ್ನ ವೋಟು ಭಾರತೀಯ ಜನತಾ ಪಕ್ಷಕ್ಕೆ ಮತ್ತು ನನ್ನ ಪ್ರಕಾರ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದ ಪ್ರಧಾನಿ ಆಗಬೇಕು" ಎಂದು ಘೋಷಿಸಿದಾಗ ನಾವೆಲ್ಲ ಬೆರಗಾಗಿ ಅವನತ್ತ ನೋಡಿದೆವು. ಆ ಹೆಸರು ನಮಗೆಲ್ಲ ಹೊಚ್ಚ ಹೊಸದು.

'ಭಾರತದ ರಾಜಕೀಯ ಭೀಷ್ಮ'ನ ರಾಜಕಾರಣದ ಮೈಲುಗಲ್ಲುಗಳು

ಮುಂದಿನ ವರ್ಷಗಳಲ್ಲಿ ಅಟಲ್ ಅವರ ಹೆಸರನ್ನು ಹತ್ತು ಹಲವು ಬಾರಿ ಕೇಳಿದೆ. ಅದು ಹೇಗೆ ಮುರಾರ್ಜಿ ಸರಕಾರದ ವಿದೇಶ ಮಂತ್ರಿಯಾಗಿ, ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಪ್ರಪ್ರಥಮ ಭಾರತೀಯರಾದರು ಎಂಬ ವಿಷಯ ನಮ್ಮಲ್ಲಿ ಒಂದು ರೀತಿಯ ಅಭಿಮಾನದ ಅಂಶವಾಗಿತ್ತು. ಭಾರತದ ಇತರ ರಾಜಕಾರಣಿಗಳಿಗಿಂತ ಭಿನ್ನ, ಒಬ್ಬ ರಾಷ್ಟ್ರಭಕ್ತ, ಸ್ವಚ್ಛ ವ್ಯಕ್ತಿತ್ವದ, ಕವಿ ಮನಸ್ಸಿನ ಈ ರಾಜಕಾರಣಿಯ ಬಗ್ಗೆ ಕೇಳಿ ತಿಳಿದಂತೆಲ್ಲ ನನ್ನ ಮನಸ್ಸಿನಲ್ಲಿ ಒಬ್ಬ ಆದರ್ಶವಾದಿ ರಾಜಕಾರಣಿಯಾಗಿ ಅವರ ಪ್ರಭೆ ಬೆಳೆಯುತ್ತ ಹೋಯಿತು.

ಆದರೆ 80ರ ದಶಕದಲ್ಲಿ ಅವರು ಕಟ್ಟಿದ ಭಾರತೀಯ ಜನತಾ ಪಕ್ಷ ಆಗ ಇನ್ನೂ ಸದೃಢವಾಗಿರಲಿಲ್ಲ. 1984ರ ಚುನಾವಣೆಯ ಲೋಕಸಭೆಯಲ್ಲಿ ಅವರ ಸಂಖ್ಯೆ ಇಲ್ಲವೆನಿಸುವಷ್ಟು ಕಡಿಮೆಯಾಗಿದ್ದನ್ನು ನೋಡಿ ನನಗೆ ಅವರೊಬ್ಬ ಆದರ್ಶ ದೇಶಭಕ್ತರಾಗಿರಬಹುದು, ಆದರೆ ಅವರು ದೇಶದ ಬಹುಪಾಲು ಜನರ ಮನಸ್ಸನ್ನು ಗೆದ್ದು ಮುಂದೊಮ್ಮೆ ಪ್ರಧಾನಿಯಾಗಬಹುದು ಎಂದೆನಿಸಲಿಲ್ಲ.

80ರ ದಶಕದ ಕೊನೆಯ ವರ್ಷಗಳವು. ಬೋಫೋರ್ಸ್ ಹಗರಣ ಪೂರಾ ರಾಜಕೀಯ ವ್ಯವಸ್ಥೆಯ ಮೇಲಿನ ನಮ್ಮ ನಂಬಿಕೆಯನ್ನು ಅಲುಗಾಡಿಸಿಬಿಟ್ಟಿತ್ತು. ವಿ ಪಿ ಸಿಂಗ್ ಅವರು ಆಗ ಪ್ರವರ್ಧಮಾನಕ್ಕೆ ಬರುತ್ತಿದ್ದ ದಿನಗಳು. ಬೋಫೋರ್ಸ್ ಪ್ರಕರಣದಲ್ಲಿ ಅಂದಿನ ಸರಕಾರವನ್ನು ವಿರೋಧಿಸಿ ಅಧಿಕಾರ ತ್ಯಜಿಸಿದ ವಿ ಪಿ ಸಿಂಗ್ ನಮ್ಮ ಹದಿವಯಸ್ಸಿಗೆ ಅತ್ಯಂತ ಆದರ್ಶಪ್ರಾಯರಾಗಿ ಕಂಡಿದ್ದರು. ಯುವ ಮನಸ್ಸುಗಳ ಬೆಂಬಲ ಅವರ ಕಡೆಗೆ ವಾಲಿತ್ತು.

ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ (1924-2018) ವ್ಯಕ್ತಿಚಿತ್ರ

ಅದೇ ಸಮಯದಲ್ಲಿ ನನಗೆ ನನ್ನೂರು ಬೆಳಗಾವಿಯಲ್ಲಿ ಬಿಜೆಪಿಯ ಕಾರ್ಯಕರ್ತರೊಬ್ಬರ ಪರಿಚಯವಾಯಿತು. ಇನ್ನೂ ಹದಿ ವಯಸ್ಸಿನ ನನಗೆ ಆ ಕಾರ್ಯಕರ್ತರು ತಮ್ಮ ಪಕ್ಷ ಸಮಾಜದ ಮೂಲಭೂತ ಸ್ತರದಲ್ಲಿ ಬಹಳ ಕೆಲಸ ಮಾಡುತ್ತಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ಬಿಜೆಪಿ ಅನೇಕ ಸ್ಥಾನಗಳನ್ನು ಗೆಲ್ಲಲಿದೆ ಎಂದು ನುಡಿದರು. ನಾನು ಅವರ ಈ ಮಾತನ್ನು ನಂಬದೇ, ಬಿಜೆಪಿಯದು "Receding Trend" ಎಂದು ಗೇಲಿ ಮಾಡಿದ್ದೆ. ಆಗ ಅವರು "Receding Trend ಅಲ್ಲ, ಇದು uptrend". ನೋಡ್ತಾ ಇರಿ, ಕೆಲವೇ ವರ್ಷಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆಗುತ್ತಾರೆ" ಎಂದು ಸ್ವಲ್ಪ ಆವೇಶದಿಂದಲೇ ಹೇಳಿದ್ದರು. ಅಂದು ನನ್ನ ಹುಡುಗು ಬುದ್ಧಿಗೆ ಅಸಾಧ್ಯವಾದ ಮಾತು ಎಂದೆನಿಸಿದ್ದರೂ, ಕೇವಲ ಎಂಟೇ ವರ್ಷಗಳಲ್ಲಿ ಅಟಲ್ ಪ್ರಧಾನಿಯಾಗಿ ಅವರ ಭವಿಷ್ಯವಾಣಿಯನ್ನು ನನಸಾಗಿಸಿದ್ದರು.

ಅಟಲ್ ಕೇವಲ ಹದಿಮೂರು ದಿನಗಳಷ್ಟು ಮಾತ್ರ ಪ್ರಧಾನಿಯಾಗಿದ್ದರೂ, ಮೊತ್ತ ಮೊದಲ ಬಾರಿಗೆ ನನ್ನಂತಹ ಅನೇಕ ಯುವ ಮನಸ್ಸುಗಳಿಗೆ ಅವರು ಅಂಧಕಾರ ತುಂಬಿದ ಆಕಾಶದಲ್ಲಿ ಒಂದು ಆಶಾಕಿರಣವಾಗಿ ಮೂಡಿದ್ದರು. ಆದರೆ ಅವರು ಎರಡನೇ ಬಾರಿ ಪ್ರಧಾನಮಂತ್ರಿಯಾದಾಗ ಮೊತ್ತ ಮೊದಲ ಬಾರಿ ಕಾಂಗ್ರೆಸ್ ಪಕ್ಷದ ಏಕಪಕ್ಷೀಯ ಆಡಳಿತ ದೇಶದಲ್ಲಿ ಕೊನೆಗೊಂಡಿತು ಎಂದು ಒಂದು ರೀತಿಯ ವಿಶ್ವಾಸ ಮೂಡಿತ್ತು. ಆಗ ಅವರ ನೇತೃತ್ವದಲ್ಲಿ ಬಿಜೆಪಿ 181 ಸ್ಥಾನಗಳನ್ನು ಗೆದ್ದು ಇತರ ಪಕ್ಷಗಳೊಂದಿಗೆ ಸಮ್ಮಿಶ್ರ ಸರಕಾರ ರಚಿಸಿದರೂ ಅವರಿಂದ ಒಂದು ನಿರ್ಣಾಯಕ ಆಡಳಿತದ ಅಪೇಕ್ಷೆ ಇತ್ತು. ಈ ಬಾರಿ ಅವರು ಕೇವಲ ಹದಿಮೂರು ತಿಂಗಳು ಮಾತ್ರ ಅಧಿಕಾರದಲ್ಲಿದ್ದರೂ ಅವರು ಪೊಖ್ರಾನ್ 2, ಲಾಹೋರ್ ಬಸ್ ಸರ್ವಿಸ್ (ಪಾಕಿಸ್ತಾನದ ಜೊತೆ ಮೈತ್ರಿ) ಮತ್ತು ಕಾರ್ಗಿಲ್ ಕದನಗಳಲ್ಲಿ ತಮ್ಮ ನಿರ್ಣಾಯಕ ಆಡಳಿತದ ಮಿಂಚನ್ನು ತೋರಿಸಿದರು.

ಭಾರತ ಪ್ರಕಾಶಿಸುವಂತೆ ಮಾಡಿದ ವಾಜಪೇಯಿಯ 5 ನಿರ್ಣಯಗಳು

1999ರಲ್ಲಿ ಮೂರನೆಯ ಬಾರಿ ಬಹುಮತದಿಂದ ಗೆದ್ದು ಬಂದ ಅಟಲ್ ಬಿಹಾರಿ ವಾಜಪೇಯಿ ಮುಂದಿನ ಐದು ವರ್ಷ ಸಮರ್ಥ ಆಡಳಿತ ನೀಡಿದರು. ಅವರ ಸರ್ವ ಶಿಕ್ಷಾ ಅಭಿಯಾನ್ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಡ್ಡಾಯಗೊಳಿಸಿ ಉಚಿತವಾಗಿಸಿತು. ಈ ಕಾರ್ಯಕ್ರಮದಿಂದ ಅಸಂಖ್ಯ ಬಡ ಮಕ್ಕಳು ವಿದ್ಯೆಯನ್ನು ಪಡೆಯುವಂತಾಯಿತು. ಅವರ ಮತ್ತೊಂದು ಮಹತ್ವದ ಕಾರ್ಯಕ್ರಮವಾದ "Golden Quadrilateral"ನಿಂದಾಗಿ ಭಾರತ ಮೊತ್ತಮೊದಲ ಬಾರಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಹೆದ್ದಾರಿಗಳನ್ನು ಪಡೆಯಿತು. ಹಿಂದೊಮ್ಮೆ ನನ್ನೂರಾದ ಬೆಳಗಾವಿಯಿಂದ ಬೆಂಗಳೂರಿಗೆ ಬರಲು 12 ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತಿತ್ತು. ಈ ಹೆದ್ದಾರಿಯಿಂದ ಈಗ ಅದು ಸುಮಾರು ಎಂಟು ಗಂಟೆಗೆ ಇಳಿದಿದೆ. "ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನಾ" ಕಾರ್ಯಕ್ರಮದಿಂದ ಅನೇಕ ಗ್ರಾಮಗಳು ಉತ್ತಮ ದರ್ಜೆಯ ರಸ್ತೆಗಳನ್ನು ಪಡೆಯುವಂತಾಯಿತು.

ಎಲ್ಲಕ್ಕಿಂತ ಮುಖ್ಯವಾಗಿ ವಾಜಪೇಯಿ ಅವರು ಭಾರತದ ಅರ್ಥ ವ್ಯವಸ್ಥೆಯನ್ನು ಮುಕ್ತಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಸರಕಾರದ ಸ್ವಾಮ್ಯದಲ್ಲಿದ್ದ ಅನೇಕ ಕಂಪನಿಗಳ ಖಾಸಗೀಕರಣಗೊಳಿಸಿದರು. ವಿದೇಶ ಸಂಚಾರ ನಿಗಮ, ಹಿಂದೂಸ್ತಾನ್ ಝಿಂಕ್, ಭಾರತ್ ಅಲ್ಯುಮಿನಿಯಂ ಮತ್ತು ಮಾರುತಿ ಉದ್ಯೋಗ್ ಅವುಗಳಲ್ಲಿ ಪ್ರಮುಖವಾದವು. ಅವರ ಐದು ವರ್ಷಗಳ ಅವಧಿಯಲ್ಲಿ ಭಾರತದ ಜಿಡಿಪಿ (Gross Domestic Product) ಹೆಚ್ಚಳ ಪ್ರತೀ ವರ್ಷ ಶೇಕಡಾ ಏಳಕ್ಕಿಂತ ಹೆಚ್ಚು ಇತ್ತು. ಆ ಅವಧಿಯಲ್ಲಿ ಭಾರತದಲ್ಲಿ ವಿದೇಶಿ ಬಂಡವಾಳ ಹರಿದು ಬಂದಿತು. ಇಂತಹ ಅಮೋಘ ಪ್ರಧಾನ ಮಂತ್ರಿಯನ್ನು ಅದೇಕೋ ಭಾರತದ ಪ್ರಜೆಗಳು ಮತ್ತೊಮ್ಮೆ ಆರಿಸಲಿಲ್ಲ. ನನ್ನ ಪ್ರಕಾರ ಭಾರತೀಯರ ಐತಿಹಾಸಿಕ ತಪ್ಪುಗಳಲ್ಲಿ ಅದೂ ಒಂದು.

ಈ ಸೋಲಿನ ನಂತರ ಭಾರತೀಯ ರಾಜಕೀಯದ ಭೀಷ್ಮ ಪಿತಾಮಹ ಎಂದು ಹೆಸರಾದ ವಾಜಪೇಯಿ ಸಕ್ರಿಯ ರಾಜಕೀಯದಿಂದ ಹಿಂದೆ ಸರಿದರು. 2005ರಲ್ಲಿ ನಿವೃತ್ತರಾದರು. ಅನಾರೋಗ್ಯ ಅವರನ್ನು ಕಾಡತೊಡಗಿತು. 2009ರಲ್ಲಿ ಅವರಿಗೆ ಸ್ಟ್ರೋಕ್ ಉಂಟಾಯಿತು. ಅಲ್ಲಿಂದ ಅವರು ಗಾಲಿಕುರ್ಚಿಗೆ ಸೀಮಿತರಾದರು. ಮರೆವು ಕೂಡ ಕಾಡತೊಡಗಿತು.

ಮೊನ್ನೆ ಆಗಸ್ಟ್ 16ರಂದು ಆಫೀಸಿನಿಂದ ಬಂದ ಮೇಲೆ ಊಟ ಮುಗಿಸಿ ಹೊರಗೆ ವಾಕಿಂಗ್‍ಗೆ ಹೋಗಿದ್ದೆ. ಮೇಲೆ ಆಕಾಶದಲ್ಲಿ ಅನೇಕ ಗ್ರಹ ತಾರೆಗಳು ಎಂದಿಗಿಂತ ಹೆಚ್ಚು ಹೊಳೆಯತೊಡಗಿದ್ದವು. ತಲೆಯೆತ್ತಿ ನೋಡಿದರೆ ಗುರು, ಮಂಗಳ, ಶನಿ ಮತ್ತು ಶುಕ್ರಗ್ರಹಗಳು ತೀಕ್ಷ್ಣವಾಗಿ ಮಿನುಗುತ್ತಿದ್ದವು. ಮೋಬೈಲಿನಲ್ಲಿ ಯಾವುದೋ ಸುದ್ದಿ ಗುಣುಗುಟ್ಟಿತು. ಎತ್ತಿ ನೋಡಿದರೆ ಆಘಾತಕರ ಸುದ್ದಿ. ಆಜಾತಶತ್ರು ಅಟಲ್ ಬಿಹಾರಿ ಅವರ ನಿಧನದ ಸುದ್ದಿ! ಆಕಾಶದ ಈ ಮಿನುಗುತಾರೆಗಳು ಅಟಲ್ ಅವರನ್ನು ತಮ್ಮ ಲೋಕಕ್ಕ ಸ್ವಾಗತಿಸಲೆಂದೇ ಹೀಗೆ ಹೊಳೆಯುತ್ತಿವೆ ಎಂದು ಭಾಸವಾಯಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Atal Bihari Vajyapee - sparkling star of Indian politics. Vasant Kulkarni from Singapore remembers the former Prime Minister of India, the poet and legendary politician, who passed away on August 16, 2018 after prolonged illness
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more