ಪುಟ್ಟ ಹಕ್ಕಿ ಮೊದಲ ಬಾರಿ ರೆಕ್ಕೆ ಬಿಚ್ಚಿ ಹಾರಿದೆ ಬಾನಿಗೆ!

By: ವಸಂತ ಕುಲಕರ್ಣಿ, ಸಿಂಗಪುರ
Subscribe to Oneindia Kannada

ಈಗ ಸುಮಾರು ಎರಡು ವಾರಗಳಿಂದ ಮಂಗಳೂರಿನಲ್ಲಿ ನನ್ನ ಕುಟುಂಬದೊಂದಿಗೆ ನನ್ನ ಠಿಕಾಣಿ. ನೋಡು ನೋಡುತ್ತಲೇ ಎರಡು ವಾರ ಕಳೆಯಿತು ಮತ್ತು ನಾನು ವಾಪಸ್ ಆಗುವ ಸಮಯ ಬಂದಿತು. ಬರುವಾಗ ಆತಂಕ, ಭಯ, ಸಂತೋಷ, ಉತ್ಸಾಹಗಳಂತಹ ಭಾವನೆಗಳ ಮಿಶ್ರಣವನ್ನೇ ಹೊತ್ತು ಬಂದೆ. ಈಗ ಹೋಗುವಾಗ ಆತಂಕ ಮತ್ತು ಭಯಗಳೆರಡೂ ಸಾಕಷ್ಟು ಕಮ್ಮಿಯಾಗಿದೆಯಾದರೂ ಮಗಳನ್ನು ಒಬ್ಬಳೇ ಇಲ್ಲಿ ಬಿಟ್ಟು ಹೋಗಬೇಕಲ್ಲ ಎಂಬ ದುಃಖ ಭಾವನೆಗಳ ಮಿಶ್ರಣದಲ್ಲಿ ಸೇರಿಕೊಂಡಿದೆ.

ಪ್ರಥಮ ಬಾರಿಗೆ ಮಂಗಳೂರಿಗೆ ಬಂದರೂ ಈ ಊರು ಕೇವಲ ಎರಡು ವಾರಗಳಲ್ಲಿ ಆತ್ಮೀಯ ಎನಿಸಿಬಿಟ್ಟಿದೆ. ಇಲ್ಲಿಯ ಜನರ ಸಭ್ಯ ಸುಸಂಸ್ಕೃತ ನಡವಳಿಕೆ ಮತ್ತು ನೆರವು ನೀಡುವ ಸ್ವಭಾವ ನನ್ನಲ್ಲಿರುವ ಪರಕೀಯ ಮನೋಭಾವವನ್ನು ಹೊಡೆದೋಡಿಸಿ ಇದು ನನ್ನದೇ ಊರು ಎನಿಸುವ ಮಟ್ಟಿಗೆ ಅಪ್ಯಾಯಮಾನವೆನಿಸಿದೆ.

A daughter may outgrow your lap but she’ll never outgrow your heart

ಈ ಊರಿಗೆ ಬಂದಿದ್ದರ ಮುಖ್ಯ ಉದ್ದೇಶವೆಂದರೆ, ನನ್ನ ಮಗಳಿಗೆ ಇಲ್ಲಿಗೆ ಸಮೀಪದಲ್ಲಿರುವ ಪ್ರತಿಷ್ಠಿತ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (ಎನ್ಐಟಿಕೆ) ಸುರತ್ಕಲ್‍ನಲ್ಲಿ ಪ್ರವೇಶ ಪಡೆಯುವುದಕ್ಕಾಗಿ. ಒಮ್ಮೆಲೇ ಸಿಂಗಪುರದಿಂದ ಇಷ್ಟು ದೂರದಲ್ಲಿ ಅಪರಿಚಿತ ಜಾಗದಲ್ಲಿ ಅದು ಹೇಗಪ್ಪಾ ನನ್ನ ಟೀನೇಜರ್ ಮಗಳನ್ನು ಬಿಟ್ಟು ಹೋಗುವುದು ಎಂದು ಕಾಡುತ್ತಿರುವ ಅಳುಕಿನಲ್ಲಿಯೇ ಈ ಊರನ್ನು ಪ್ರವೇಶಿಸಿದ್ದೆ.

ಅಯ್ಯೋ ದೇವ್ರೆ, ಏನ್ ನಡೀತಿದೆ ನಮ್ಮ ಭಾರತದಲ್ಲಿ?

ಮಿತ್ರರಾದ ಸುರೇಶ ಭಟ್ಟರು "ತುಂಬಾ ಒಳ್ಳೆಯ ಜನ, ಏನೂ ತೊಂದರೆಯಾಗುವುದಿಲ್ಲ ಹೋಗಿ ಬನ್ನಿ" ಎಂದು ಹೇಳಿ ತಮ್ಮ ಬಂಧುಗಳಾದ ಶ್ರೀಧರ ಶಾಸ್ತ್ರಿಗಳನ್ನು ವಾಟ್ಸಪ್ ಮೂಲಕ ಪರಿಚಯಿಸಿದರು. ಹೋಗಿ ಅಲ್ಲಿನ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ತಮ್ಮ ತುಂಬು ನಗೆಯೊಂದಿಗೆ ನಮ್ಮನ್ನು ಅನೇಕ ವರ್ಷಗಳಿಂದ ಬಲ್ಲವರಂತೆ ಆತ್ಮೀಯವಾಗಿ ಸ್ವಾಗತಿಸಿ, ತಮ್ಮ ಮನೆಗೆ ಕರೆದುಕೊಂಡು ಹೋಗಿ ಟೀ ತಿಂಡಿಗಳ ಅತಿಥ್ಯವನ್ನಿತ್ತು, ನಂತರ ತಾವೇ ಪ್ರಯತ್ನಿಸಿ ನಮಗಾಗಿ ಕಾದಿರಿಸಿದ ಎನ್ ಐ ಟಿ ಕೆ ಅತಿಥಿಗೃಹದ ರೂಮಿನಲ್ಲಿ ನಮ್ಮನ್ನು ಬಿಟ್ಟು, ಮನೆಗೆ ಹೊರಟು ನಿಂತ ಶ್ರೀಧರ ಶಾಸ್ತ್ರಿಗಳು ಮುಂದೆ ಕೂಡ ಅನೇಕ ವಿಷಯಗಳಲ್ಲಿ ಸಮಯೋಚಿತ ಸಲಹಗಳನ್ನು ನೀಡಿ ನೆರವಾದರು. ನಮ್ಮ ಮಂಗಳೂರಿನ ವಾಸ ಇಷ್ಟೊಂದು ಸುಲಭ ಸಾಧ್ಯವಾಗಲು ಶ್ರೀಧರ ಶಾಸ್ತ್ರಿಗಳ ಮತ್ತು ಅವರ ಮನೆಯವರ ಆಪ್ತ ನಡವಳಿಕೆಯೇ ಕಾರಣ ಎನ್ನಬಹುದು.

ಕಳೆದ ಒಂದು ವರ್ಷದಿಂದ ನಾನು ಮತ್ತು ನನ್ನ ಮಡದಿ ನನ್ನ ಮಗಳನ್ನು ಅವಳ 12ನೇ ತರಗತಿಯ ಪರೀಕ್ಷೆಗಾಗಿ ಅಣಿಗೊಳಿಸುತ್ತಿದ್ದೆವು. ಒಂದು ಕಡೆ ಸಾಧ್ಯವಾದಷ್ಟು ಚೆನ್ನಾಗಿ ಓದಿ ಉತ್ತಮ ಫಲಿತಾಂಶ ಪಡೆಯಲು ಪ್ರೋತ್ಸಾಹ ಮಾಡುತ್ತಿದ್ದೆವಾದರೆ, ಇನ್ನೊಂದು ಕಡೆ ನಮ್ಮ ಈ ಪ್ರೋತ್ಸಾಹ ನಮಗೇ ಅರಿವಿರದೇ ಎಲ್ಲಿ ಒತ್ತಡವಾಗಿ ಮಾರ್ಪಡುತ್ತದೋ ಎಂಬ ಭಯ. ಒಂದು ಕಡೆ ಸಾಧ್ಯವಾದಷ್ಟು ಸಮಯವನ್ನು ಪ್ರಯೋಜನಕಾರಿ ಓದಿಗೆ ಬಳಸಲು ಸಲಹೆ ನೀಡುತ್ತಿದ್ದೆವಾದರೆ ಇನ್ನೊಂದು ಕಡೆ ಅವಳೆಲ್ಲಿ ತನ್ನ ಶಕ್ತಿಮೀರಿ ಓದಿ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಾಳೋ ಎಂಬ ಭಯ ಕಾಡುತ್ತಿತ್ತು. ಬೋರ್ಡ್ ಪರೀಕ್ಷೆಯನ್ನು ಎದುರಿಸುತ್ತಿರುವ ಎಲ್ಲ ಮಕ್ಕಳ ತಂದೆ ತಾಯಿಯರಿಗೆ ಇರುವ ಆತಂಕ, ಆತುರ ಮತ್ತು ನಿರೀಕ್ಷೆಗಳ ಪ್ರತ್ಯಕ್ಷ ಅನುಭವವನ್ನು ಹಂತ ಹಂತವಾಗಿ ಪಡೆಯುತ್ತಿದ್ದೆವು.

ಪ್ರೊ ಯುಆರ್ ರಾವ್ ಅವರು ನಿಜಕ್ಕೂ 'ಭಾರತದ ರತ್ನ'!

12ನೇ ತರಗತಿಯ ನಂತರ ಯಾವ ವಿಶ್ವವಿದ್ಯಾಲಯಕ್ಕೆ ಪ್ರವೇಶ ದೊರೆಯುವುದೋ ಎಲ್ಲಿ ಅವಳು ಹೋಗಿ ಒಬ್ಬಳೇ ಇರಬೇಕಾಗುವುದೋ ಎಂಬ ಆತಂಕ ಬೇರೆ ಹಂತ ಹಂತವಾಗಿ ನಮ್ಮಲ್ಲೇ ಬೆಳೆಯುತ್ತಿತ್ತು. ಕೊನೆಗೂ 12ನೇ ತರಗತಿಯ ಪರೀಕ್ಷೆ ಮುಗಿದು, ಹತ್ತು ಹಲವು ಪ್ರವೇಶ ಪರೀಕ್ಷೆಗಳನ್ನು ಎದುರಿಸಿ, ಹಲವಾರು ಗೊಂದಲಗಳನ್ನೆದುರಿಸಿ ಕೊನೆಗೂ ಅವಳು ಎನ್ ಐ ಟಿ ಕೆ ಸುರತ್ಕಲ್‍ನಲ್ಲಿ ಅವಳ ಮೆಚ್ಚಿನ ಸಿವಿಲ್ ಎಂಜಿನೀಯರಿಂಗ್‍ನಲ್ಲಿ ಪ್ರವೇಶ ಪಡೆದಾಗ, ಒಂದು ಕಡೆ ಒಂದು ಮಹತ್ವದ ಹಂತವನ್ನು ಯಶಸ್ವಿಯಾಗಿ ಮುಗಿಸಿದ ತೃಪ್ತಿಯಾದರೆ, ಇನ್ನೊಂದು ಕಡೆ ಅವಳು ನಮ್ಮನ್ನು ಬಿಟ್ಟು ಎಲ್ಲಿಯೋ ತುಂಬಾ ದೂರದಲ್ಲಿ ಇರಬೇಕಾಗುವುದಲ್ಲ ಎಂಬ ಆತಂಕ.

A daughter may outgrow your lap but she’ll never outgrow your heart

ಈ ಆತಂಕ ಇಲ್ಲಿ ಬಂದ ಮೇಲೆ ಶ್ರೀಧರ ಶಾಸ್ತ್ರಿಗಳು, ಮತ್ತು ಬೆಳಗಾವಿಯವರೇ ಆದ ನನ್ನ ಮಿತ್ರನ ತಂಗಿ ಸುಚೇತಾ ಅವರ ಕುಟುಂಬವನ್ನು ಭೇಟಿಯಾದ ನಂತರ ತುಂಬಾ ಕಡಿಮಯಾಯಿತು. ಮಗಳನ್ನು ತೀರ ಅಪರಿಚಿತ ಪ್ರದೇಶದಲ್ಲಿ ಬಿಟ್ಟು ಹೋಗುತ್ತಿಲ್ಲ ಎಂಬ ಭಾವನೆ ಮೊಳೆಯಿತು. ಇಲ್ಲಿ ಪರಿಚಯವಾದವರೆಲ್ಲ "ಎನ್ ಐ ಟಿ ಕೆ ಸುರತ್ಕಲ್‍ ಬಹಳ ಪ್ರತಿಷ್ಠಿತ ಸಂಸ್ಥೆ. ಇಲ್ಲಿ ಪ್ರವೇಶ ಪಡೆದಿರುವುದು ಬಹಳ ಒಳ್ಳೆಯ ಅವಕಾಶ, ಅದನ್ನು ಸಮರ್ಥವಾಗಿ ಬಳಸಿಕೋ" ಎಂದು ಮಗಳಿಗೆ ಸಲಹೆ ಮಾಡುತ್ತಿದ್ದರು. ಅಲ್ಲದೇ "ಎನ್ ಐ ಟಿ ಕೆ ಸುರತ್ಕಲ್‍ ತುಂಬಾ ಸುರಕ್ಷಿತ. ಏನೇನೂ ತೊಂದರೆಯಾಗದು, ಹಾಗೇನಾದರೂ ಸಮಸ್ಯೆ ಬಂದರೆ ನಮ್ಮನ್ನು ಕೂಡಲೇ ಬಂದು ಕಾಣು" ಎಂದು ಹೇಳಿ ಅವಳ ಮತ್ತು ನಮ್ಮ ಆತಂಕವನ್ನು ಸಾಕಷ್ಟು ಕಡಿಮೆ ಮಾಡುತ್ತಿದ್ದರು.

ಒಂದೆಡೆ ನಮ್ಮ ಆತಂಕ ಪರಿಹಾರವಾದರೂ ಚಿಕ್ಕಂದಿನಿಂದ ನಮ್ಮನ್ನು ಎಂದಿಗೂ ಬಿಟ್ಟಿರದ ಮಗಳು ಈಗ ಹೇಗೆ ಇಲ್ಲಿ ಹೊಂದಿಕೊಳ್ಳುತ್ತಾಳೆ ಎಂಬ ಅವ್ಯಕ್ತ ಭಯ ಮನದಲ್ಲಿ ಕಾಡುತ್ತಿತ್ತು. ಅದು ನನ್ನ ಮಗಳ ಮೊಗದಲ್ಲಿ ಕೂಡ ವ್ಯಕ್ತವಾಗುತ್ತಿತ್ತು. ಮೊಟ್ಟ ಮೊದಲ ಬಾರಿಗೆ ಅಮ್ಮ ಅಪ್ಪನನ್ನು ಬಿಟ್ಟು ಇಷ್ಟು ದೊಡ್ಡ ವಿದ್ಯಾಲಯದ ಹಾಸ್ಟೆಲ್‍ನಲ್ಲಿ ಹೊಸದಾಗಿ ಪರಿಚಯವಾದ ಗೆಳತಿಯರೊಂದಿಗೆ ಸೌಹಾರ್ದವಾಗಿ ತಾನೊಬ್ಬಳೆ ಇರಬಲ್ಲೆನೇ ಎಂಬ ಅವಳ ಮನಸ್ಸಿನಲ್ಲಿಯ ತುಮುಲ ನಮಗೆ ಅರ್ಥವಾಗುತ್ತಿತ್ತು. ಇಲ್ಲಿಯವರೆಗೆ ತನ್ನ ಮನೆಯಲ್ಲಿಯೇ ಇಟ್ಟ ತನ್ನ ಬಟ್ಟೆಗಳನ್ನು ಹುಡುಕಿಕೊಳ್ಳುವುದರಿಂದ ಹಿಡಿದು ತನಗೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳುವವರೆಗೆ ಅಮ್ಮನ ಮೇಲೆ ಅವಲಂಬಿಸಿದ ಅವಳು, ಇಲ್ಲಿಯ ನಂತರ ತನ್ನ ಚಿಕ್ಕ ಮತ್ತು ದೊಡ್ಡ ಕೆಲಸಗಳನ್ನ ತಾನೇ ಮಾಡಬೇಕಾಗುತ್ತದೆ ಎಂಬ ಅರಿವು ಅವಳಲ್ಲಿಯೂ ಮೂಡಿ ಅವಳೂ ಸ್ವಲ್ಪ ಮಟ್ಟಿಗೆ ಅಧೀರಳಾಗಿದ್ದು ಕಂಡು ಬಂದಿತು.

A daughter may outgrow your lap but she’ll never outgrow your heart

ಆದರೆ ಚಳಿ ನೀರಲ್ಲಿ ಇಳಿಯುವ ತನಕ ತಾನೇ? ಈಗ ಕಳೆದ ನಾಲ್ಕೈದು ದಿನಗಳಿಂದ ಹಾಸ್ಟೆಲ್‍ನಲ್ಲಿ ಇದ್ದ ಮೇಲೆ ಅವಳಿಗೂ ಸಾಕಷ್ಟು ಧೈರ್ಯ ಬಂದಿದೆ ಎಂದೆನಿಸಿತು. ಕೊನೆಯ ದಿನ ಬಿಟ್ಟು ಬರುವಾಗ ಅವಳ ಅಮ್ಮನ ಕಣ್ಣಿನಲ್ಲಿ ನಿರಂತರ ಕಣ್ಣೀರು. ಅವಳೇ ಅಮ್ಮನನ್ನು ಸಂತೈಸಿದಳು. "ನಾನು ಇಲ್ಲಿ ಚೆನ್ನಾಗಿಯೇ ಇರುತ್ತೇನೆ, ದಿನವೂ ವಾಟ್ಸಾಪ್‍ನಲ್ಲಿ ವಿಡಿಯೋ ಕರೆ ಮಾಡುತ್ತೇನೆ" ಎಂದೆಲ್ಲ ಹೇಳಿ ನಗುತ್ತಲೇ ನಮ್ಮನ್ನು ಬೀಳ್ಕೊಟ್ಟಳು. ಹೆಂಗಸರು ತಮ್ಮ ದುಗುಡವನ್ನು ಅತ್ತು ಕಡಿಮೆ ಮಾಡಿಕೊಳ್ಳುತ್ತಾರೆ. ನಾವು ಗಂಡಸರಿಗ ಅಳುವುದು ಅಸಾಧ್ಯ, ಆದರೆ ನನ್ನಲ್ಲಿನ ಆತಂಕವನ್ನು ಕಡಿಮೆ ಮಾಡಿಕೊಳ್ಳಲು ಮೇಲಿಂದ ಮೇಲೆ ಹೇಳಿದ್ದ ಎಚ್ಚರಿಕೆಗಳನ್ನೇ ಅವಳಿಗೆ ಬಾರಿ ಬಾರಿ ಹೇಳುತ್ತಾ ಅವಳಲ್ಲಿ ಬೇಸರಿಕೆ ತಂದೆ.

ಕೆಲವೇ ವರ್ಷಗಳ ಹಿಂದೆ ಪುಟ್ಟ ಮಗುವಾಗಿದ್ದ ಅವಳನ್ನು ಕರೆದುಕಂಡು ಸಿಂಗಪುರಕ್ಕೆ ಬಂದ ನಾನು, ಅವಳನ್ನೆತ್ತಿಕೊಂಡು ಸಿಂಗಪುರದಲ್ಲಿಯ ಬೇರೆ ಬೇರೆ ಬಣ್ಣಗಳ ಕಾರುಗಳನ್ನು ತೋರಿಸುತ್ತ ಅವಳ ಮುಗ್ಧ ಮಗುವಿನ ಮುಖದಲ್ಲಾಗುತ್ತಿದ್ದ ಸಂತಸ ಮತ್ತು ಆಶ್ಚರ್ಯಗಳನ್ನು ಕಂಡು ಆನಂದಿಸುತ್ತಿದ್ದ ನೆನಪು ಮತ್ತು ಶಾಲೆಗೆ ಹೋಗುವ ಮೊದಲು ಅವಳು ತಯಾರಾಗುತ್ತಿದ್ದ ನೆನಪು ಮತ್ತು ಸ್ಕೂಲಿನ ಮೊದಲ ದಿನದಂದು ಅತ್ತು ನಾನು ಹೋಗುವುದಿಲ್ಲ ಎಂದ ನೆನಪು ನನಗೆ ಬಾರಿ ಬಾರಿ ಉಂಟಾಯಿತು.

Mangaluru : CCB Police arrests 3 Ganja Peddlers

ಇಷ್ಟು ಬೇಗ ಇವಳು ಎಂಜಿನೀಯರಿಂಗ್ ಓದುವಷ್ಟು ಬೆಳೆದು ದೊಡ್ಡವಳಾದಳೇ ಎಂಬ ಅಚ್ಚರಿ! ಸಿಂಗಪುರದಲ್ಲಿ ಸಮಯ ಸಾಗುವುದಿಲ್ಲ ರೆಕ್ಕೆ ಹಚ್ಚಿ ಹಾರುತ್ತದೆ ಎಂದು ಹೇಳುತ್ತಾರೆ. ಕೆಲವೇ ವರ್ಷಗಳ ಹಿಂದೆ ತನ್ನ ಪುಟ್ಟ ಪುಟ್ಟ ಕಾಲುಗಳಿಂದ ಚಿಕ್ಕ ಚಿಕ್ಕ ಹೆಜ್ಜೆಯಿಡುತ್ತಿದ್ದ ಈ ಪೋರಿ ಇಂದು ಕಾಲೇಜಿಗೆ ಹೋಗಲು ನಮ್ಮನ್ನು ದೂರದ ಸಿಂಗಪುರದಲ್ಲಿ ಬಿಟ್ಟು ಹೊರಟು ನಿಂತ ಅವಳನ್ನು ನೋಡಿದರೆ ಅದು ಸತ್ಯವೆನಿಸುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
How difficult it is to leave your daughter to study in a place far away from your abode, for the first time in their life? Vasant Kulkarni from Singapore shares his heart warm feeling when he left his daughter to study in NITK Suratkal, Mangaluru. But, the little bird has to learn to fly some day.
Please Wait while comments are loading...