• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೃಂದಾವನದಲಿ ಆಡುವನಾರೇ?

By Staff
|
K. Triveni Srinivasarao, Illinois, US ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ

ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ

venivas@hotmail.com

ಹುಟ್ಟಿದ್ದು ಮಧುರೆ, ಬೆಳೆದಿದ್ದು ಗೋಕುಲ, ಜಲಕ್ರೀಡೆಯಾಡಿದ್ದು ಯಮುನಾತೀರಾ.... ಇದು ಜಗತ್ತಿನ ಪಾಲಿಗೆ ಲಭ್ಯವಾಗಿರುವ ಅವನ ಬಯೋಡೇಟ. ಅವನನ್ನು ದೇವಕಿಕಂದ ಮುಕುಂದನೆಂದರೂ ಒಪ್ಪುತ್ತದೆ, ಯಶೋದಾನಂದನ ಗೋವಿಂದನೆಂದರೂ ತಪ್ಪೇನಿಲ್ಲ , ವಸುದೇವನ ಮಗನಾದ ವಾಸುದೇವನೇ ಎಂದರೂ ಓಗೊಡದೆ ಇರಲಾರ. ಅವನು ಶ್ರೀಕೃಷ್ಣ !

ಕೃಷ್ಣಕಥೆ ನಮ್ಮೆಲ್ಲರ ಬದುಕಿನಲ್ಲಿ ಹಾಸುಹೊಕ್ಕು. ಕೃಷ್ಣನ ತುಂಟಾಟ, ಬಾಲಲೀಲೆಗಳನ್ನು ನಾವು ಯಾವುದೇ ಪುರಾಣ-ಪುಣ್ಯಕಥೆಗಳನ್ನು ಓದಿ ತಿಳಿದವರಲ್ಲ , ಅವು ನಮ್ಮ ಮನೆಯಲ್ಲೇ, ನಮ್ಮ ಕಣ್ಣ ಮುಂದೆಯೇ ನಡೆದಿರುವುದೇನೋ ಎಂಬಷ್ಟು ನಮಗೆ ಚಿರಪರಿಚಿತ, ಆತ್ಮೀಯ! ಯಾರದೋ ಮಡಿಲಲ್ಲಿ ನಗುತ್ತಿರುವ ಮುದ್ದುಮಗುವನ್ನು ನೋಡಿದರೂ, ನಮಗೆ ಮೊದಲು ನೆನಪಾಗುವವನು ಈ ಗೋಕುಲದ ಗೊಲ್ಲನೇ. ಎಲ್ಲೋ ಹುಟ್ಟಿ , ಇನ್ನೆಲ್ಲೋ ಬೆಳೆದು, ಜಗದಗಲ, ಮುಗಿಲಗಲ ವ್ಯಾಪಿಸಿ ನಿಂತಿರುವ ಈ ಶೃಂಗಾರಶೀಲ, ಸಂಗೀತಲೋಲ ನಮ್ಮೆಲ್ಲರ ಮನೆಮನದ ಬೃಂದಾವನದಲ್ಲೇ ನಲಿದಾಡುವ ಚಿಣ್ಣ ಬಾಲ!

Hare Krishna Hare Krishna.....ಗೋಕುಲದ ಮನೆಗಳಲ್ಲಿ ಮೊಸರು, ಬೆಣ್ಣೆ ಕದ್ದ ಈ ಕೃಷ್ಣ, ಕನ್ನಡಕವಿಗಳ ಮನಸ್ಸನ್ನು ಕದಿಯದೆ ಬಿಟ್ಟಾನೆಯೇ? ಮೊದಲೇ ಮಲ್ಲಿಗೆ ಹೃದಯಿಗಳಾದ ನಮ್ಮ ಕವಿಗಳು ಈ ತುಂಟನ ಮುಂದೆ, ಬಿಸಿ ತಗುಲಿದ ಬೆಣ್ಣೆಯಂತೆ ಕರಗಿ ಹೋಗಿದ್ದಾರೆ. ನಾವೆಲ್ಲಾ ನವೆಂಬರ್‌ ತಿಂಗಳನ್ನು ರಾಜ್ಯೋತ್ಸವದ ತಿಂಗಳು ಎಂದು ಪ್ರೀತಿಯಿಂದ ನೆನಪಿಟ್ಟುಕೊಳ್ಳುವುದಿಲ್ಲವೇ? ಬೇಂದ್ರೆಯವರಿಗೆ ಶ್ರಾವಣ ಮಾಸದ ಬಗ್ಗೆ ಹಾಗೊಂದು ಸವಿನೆನಪಿದೆ. ಶ್ರಾವಣ ಹಬ್ಬಗಳ ಮಾಸ. ಅನೇಕ ಹಬ್ಬಗಳ ಸಾಲುಸಾಲೇ ಇಲ್ಲಿದ್ದರೂ, ಬೇಂದ್ರೆಯವರು ಶ್ರಾವಣವನ್ನು ನೆನಪಿಸಿಕೊಳ್ಳುವುದು ‘ಜಗದ್ಗುರು ಹುಟ್ಟಿದ ಮಾಸ’ ಎಂದೇ. ಜಗದ್ಗುರು ಅಂದರೆ ಬಸವರಾಜ ಕಟ್ಟೀಮನೆಯವರ ಜರತಾರಿ ಜಗದ್ಗುರುಗಳಲ್ಲ ; ಕೃಷ್ಣ ಹುಟ್ಟಿದ ದಿನವಾದ ಗೋಕುಲಾಷ್ಟಮಿ ಶ್ರಾವಣಮಾಸದಲ್ಲೇ ಬರುವ ಒಂದು ಸಂಭ್ರಮದ ಹಬ್ಬ!

ಬಿಳಿಯ ಬಣ್ಣವನ್ನು ಮಾತ್ರ ಸೌಂದರ್ಯ ಎಂದು ಕೆಲವರು ಭ್ರಮಿಸಿರುವುದುಂಟು. ಅದು ಸರಿಯಲ್ಲ. ನಾವು ಪೂಜಿಸುವ ಸಾಲಿಗ್ರಾಮ ಕಪ್ಪು, ಕಂಪಿನ ಕಸ್ತೂರಿಯೂ ಕಪ್ಪು, ಕೃಷ್ಣನ ಮೈಬಣ್ಣ ಕೂಡ ಮೋಡದಂತೆ ಕಪ್ಪು. ಆದ್ದರಿಂದಲೇ ಅವನು ಮೇಘಶ್ಯಾಮ, ಶ್ಯಾಮಸುಂದರ! ಆದರೆ ಈ ಕಪ್ಪು ಹುಡುಗನನ್ನು ಕಂಡು ಗೇಲಿ ಮಾಡುವುದಿರಲಿ, ಅವನ ಮನಮೋಹಕ ಚೆಲುವಿನ ಮುಂದೆ ಮೈಮರೆತು, ಶರಣಾಗದಿದ್ದರೆ, ನಿಮ್ಮ ಜನ್ಮವೇ ವ್ಯರ್ಥವೆಂದು ಬೆದರಿಕೆ ಹಾಕುತ್ತಿದ್ದಾರೆ ಇಲ್ಲಿ ಬನ್ನಂಜೆ ಗೋವಿಂದಾಚಾರ್ಯರು -

ಕಡಗೋಲು ಕೈಯ, ಕಡುನೀಲಿ ಮೈಯ

ಈ ಬಾಲ ರೂಪ ಕಂಡು

ಪೊಡಮಡದ ಶಿರವೋ, ಜೋಡಿಸದ ಕರವೋ

ಬರೀ ಹುಲ್ಲು , ಮಣ್ಣು , ಜೊಂಡು!

Suvrath - son of K. Triveni Srinivasa Rao in ‘BalaKrishna’ Dressಹಾಲನ್ನು ಕೊಂಡು ಅದಕ್ಕೆ ತಕ್ಕಷ್ಟು ಬೆಲೆ ಕೊಡುವುದು ಸಹಜ. ಆದರೆ ಇಲ್ಲಿ ಆಗಿರುವುದೇನು? ಕೊಂಡ ಹಾಲಿಗೆ ಪ್ರತಿಯಾಗಿ ಯಾರಾದರೂ ತಮ್ಮನ್ನೇ ತಾವು ಕೊಟ್ಟುಬಿಡುವುದುಂಟೇ? ಬೃಂದಾವನಕ್ಕೆ ಹಾಲು ಮಾರಲು ಹೋಗಿದ್ದ ಈ ಚಾಲಾಕಿನ ಹೆಣ್ಣುಗಳು, ಮುಗ್ಧ ಹಳ್ಳಿಗನಾದ ಗೋಪಾಲನನ್ನು, ತಮ್ಮ ಸವಿ ಮಾತುಗಳಿಂದ ವಂಚಿಸಿ, ಸರಿಯಾಗಿಯೇ ಟೋಪಿ ಹಾಕಿ ಬಂದಿದ್ದಾರೆ. ಅಷ್ಟಕ್ಕೂ ಗೋಪಿಕೆಯರು ಮಾರಿ ಬಂದ, ಕೃಷ್ಣ ಕೊಂಡ ಆ ಹಾಲಾದರೂ ಯಾವುದು? ಅದು ಪಾಶ್ಚೀಕರಿಸಿದ ನಂದಿನಿ ಹಾಲಲ್ಲ , ಹೃದಯವೆಂಬ ಮಡಿಕೆಯಲ್ಲಿ ತುಂಬಿ ತಂದ ಭಕ್ತಿಭಾವವೆಂಬ ಗಟ್ಟಿ ಹಾಲು!

ಇಡೀ ದಿನದ ವಹಿವಾಟನ್ನು ಮುಗಿಸಿಕೊಂಡು ಬಂದ ಸಣ್ಣ ವ್ಯಾಪಾರಿಗಳು ಅಂದಿನ ಲಾಭ-ನಷ್ಟಗಳನ್ನು ಲೆಕ್ಕಹಾಕುವಂತೆಯೇ, ಇಲ್ಲಿ ಈ ಗೋಪಿಯರು ಅಂದಿನ ಹಾಲು ಮಾರಾಟದಿಂದ ತಮಗಾಗಿರುವ ಭಾರೀ ಲಾಭವನ್ನು ಕುರಿತು ಹಿಗ್ಗಿ ಮಾತಾಡಿಕೊಳ್ಳುತ್ತಿದ್ದಾರೆ. ಅದು ಬಾಯಿಂದ ಬಾಯಿಗೆ ಹರಡಿ, ಮಲೆನಾಡಿಗೂ ತಲುಪಿ, ಅದು ಹೇಗೋ ರಾಷ್ಟ್ರಕವಿ ಕುವೆಂಪು ಅವರಿಗೂ ತಿಳಿದುಹೋಗಿದೆ-

ನಮ್ಮೀ ಲಾಭವ ಮೀರುವ ಲಾಭವು

ಬೇರಿನ್ನುಹುದೇ ಹೇಳೆ ಸಖಿ?

ಹಾಲನು ಮಾರಿ ಹರಿಯನು ಕೊಳ್ಳುವ

ನಾವೇ ಧನ್ಯರು ಕಮಲಮುಖಿ!

ಈ ಮೋಸದ ವ್ಯಾಪಾರದ ಕತೆ ಹಾಗಿರಲಿ, ಇಲ್ಲಿ ಮತ್ತೊಂದು ಭಾರೀ ಹಗರಣವೇ ನಡೆದುಹೋಗಿದೆ. ಮಳೆಗಾಲದ ಕವಿ ಎಚ್‌. ಎಸ್‌. ವೆಂಕಟೇಶಮೂರ್ತಿಯವರು ಪತ್ತೆ ಮಾಡಿ ತಂದಿರುವ ಪ್ರಕರಣದ ವಿವರಗಳು ಹೀಗಿವೆ - ಬೃಂದಾವನದಲಿ ಅಂದು ಸಂಜೆ ಪವರ್‌ಕಟ್‌. ನಂದಗೋಪನ ಮನೆಯಲ್ಲೂ ಕರೆಂಟ್‌ ಇಲ್ಲ. ಯಶೋದೆ ಭಯಪಡುತ್ತಿರುವ ಚಿಕ್ಕ ಕೃಷ್ಣನನ್ನು ಅಲ್ಲೇ ಬಿಟ್ಟು , ದೀಪವನ್ನು ತರಲು ಒಳಗೆ ಹೋಗಿದ್ದಾಳೆ. ಅವಳು ದೀಪದೊಡನೆ ಬರುವಷ್ಟರಲ್ಲಿ ಈ ಅನಾಹುತ ನಡೆದುಹೋಗಿದೆ! ತಾಯಿಯ ಮುಂದೆ ತಪ್ಪೊಪ್ಪಿಗೆಯ ದನಿಯಲ್ಲಿ ಕೃಷ್ಣ ಹೇಳುತ್ತಿದ್ದಾನೆ -

ದೀಪದೊಡನೆ ಬಂದಮ್ಮಗೆ ಕೃಷ್ಣ

ಸುಳ್ಳೇ ನಾಚಿ ಅಂಗಲಾಚುವನು

ಕತ್ತಲಲ್ಲಿ ಈ ರಾಧೆಯ ನಾನು

ಕಂಬವೆಂದಂಜಿ ತಬ್ಬಿದೆನು

ಬೈಯದಿರಮ್ಮ ಎನ್ನುವನು...

ಆಹಾ! ಕಳ್ಳ! ಇವನಿಗೆ ಮಲ್ಲಿಗೆ ಹೂವಿನಂತೆ ಕೋಮಲ ಮೈಯವಳಾದ ರಾಧೆಗೂ, ಒರಟು ಒರಟಾಗಿರುವ ಕಲ್ಲಿನ ಕಂಬಕ್ಕೂ ಇರುವ ವ್ಯತ್ಯಾಸ ತಿಳಿಯಲಿಲ್ಲವೇ? ಎಂತೆಂತಹ ಸತ್ಯವಂತ ರಾಜಕಾರಣಿಗಳ ಮಾತನ್ನೇ ನಂಬದ ನಾವು ಹಸಿಹಸಿ ಸುಳ್ಳು ಹೇಳುವ ಈ ಚೋರನ ಮಾತನ್ನು, ಅಷ್ಟು ಸುಲಭವಾಗಿ ನಂಬಿ ಬಿಡುತ್ತೇವೆಯೇ?

ಕೃಷ್ಣನ ಇಂಪಾದ ವೇಣುಗಾನಕ್ಕೆ ಮರುಳಾಗಿ ಅವನನ್ನು ಹಿಂಬಾಲಿಸಿದವರೆಲ್ಲ ನವತರುಣಿಯರೇನಲ್ಲ. ಅವರಲ್ಲಿ ಗಂಡ, ಮಕ್ಕಳೊಡನೆ ಸುಖಸಂಸಾರ ನಡೆಸುತ್ತಿದ್ದ ಸದ್ಗೃಹಿಣಿಯರೂ ಇದ್ದರಂತೆ. ಮಡಿಲಲ್ಲಿ ಹಾಲೂಡುತ್ತಿದ್ದ ಎಳೆಯ ಮಗುವನ್ನೂ ಅಲ್ಲೇ ಕುಕ್ಕರುಬಡಿದು, ದುರುಗುಟ್ಟಿ ನೋಡುತ್ತಿರುವ ಗಂಡಂದಿರನ್ನೂ ಕೇರ್‌ ಮಾಡದೆ , ಮುರಳೀನಾದದ ಜಾಡನ್ನು ಅರಸಿ, ದಡಬಡಿಸಿ ಓಡುತ್ತಿರುವ, ಆ ಲಲನಾಮಣಿಗಳ ಸಡಗರವನ್ನು ವರ್ಣಿಸಲು ನನ್ನಲ್ಲಿರುವ ಪದಗಳು ಏನೇನೂ ಸಾಲವು. ಒಂದು ಕೆಲಸ ಮಾಡಿ, ನೀವು ಶತಮಾನೋತ್ಸವದ ಕವಿ ಪುತಿನ ಅವರನ್ನೇ ಮೊರೆ ಹೋಗಿಬಿಡಿ-

ತೊಟ್ಟಿಲಿನ ಹಸುಗೂಸ ಮರೆ ಮರೆ

ಪಕ್ಕದ ಗಂಡನ ತೊರೆತೊರೆ

ಬೃಂದಾವನಕೆ ತ್ವರೆ....ತ್ವರೆ

ಕೃಷ್ಣನ ಕೊಳಲಿನ ಕರೆ....

ಆಲಿಸು....ಕೃಷ್ಣನ ಕೊಳಲಿನ ಕರೆ!

ಇದು ಸತ್ಯಕತೆಯೇನಲ್ಲ. ಕವಿ ಕಲ್ಪನೆ. ನಾವು ಆಕಾಶದ ಮುಗಿಲನ್ನೇ ತದೇಕಚಿತ್ತದಿಂದ ನೋಡುತ್ತಿದ್ದರೆ, ಅವು ಅನೇಕ ಆಕಾರಗಳನ್ನು ಪಡೆದಂತೆ ತೋರುತ್ತದಲ್ಲವೇ? ಅದೇ ರೀತಿ ನರಸಿಂಹಸ್ವಾಮಿಯವರ ಕಣ್ಣಿಗೆ ಕಂಡ ಮೇಘವಿಲಾಸವಿದು. ಕವಿಯ ಕಣ್ಣಿಗೆ ಮೋಡಗಳು ಹೀಗೆ ಕಾಣುತ್ತಿವೆ - ‘ಶ್ರೀಕೃಷ್ಣನಂತೊಂದು ಮುಗಿಲು, ರಾಧೆಯಂತಿನ್ನೊಂದು ಮುಗಿಲು.’ ಅಷ್ಟೇ ಅಲ್ಲ , ಅವರಿಗೆ ರಾಧೆ ಮುಗಿಲು ಉಟ್ಟಿರುವ ಜರತಾರಿ ಸೀರೆಯ ಸೆರಗೂ ಕಾಣುತ್ತಿದೆ, ಕೃಷ್ಣನ ತುಟಿಯಲ್ಲಿರುವ ಕೊಳಲೂ ಕೂಡ ಸ್ವಷ್ಟವಾಗಿ ಗೋಚರಿಸುತ್ತಿದೆ. ಮಲ್ಲಿಗೆ ಕವಿಯ ಕಲ್ಪನೆಯ ದೃಷ್ಟಿ ಅದಿನ್ನೆಷ್ಟು ಹರಿತವೆಂದರೆ, ಕೃಷ್ಣನ ಯಾವುದೋ ರಸಿಕ ಮಾತಿಗೆ ನಾಚಿಕೊಂಡಿರುವ ರಾಧೆಯ ಗುಲಾಬಿ ಬಣ್ಣದ ಕೆನ್ನೆ ಕೂಡ ಅವರಿಗೆ ಈ ದೂರದಿಂದಲೇ ಕಾಣಿಸುತ್ತಿದೆ!

ಬಾ ಬಾರೆ ಎನ್ನುವ ಮುಗಿಲು

ಅಲ್ಲಿ ಬರಲಾರೆ ಎನ್ನುವ ಮುಗಿಲು

ಕೆನ್ನೆ ಕೆಂಪಾದೊಂದು ಮುಗಿಲು

ಇನ್ನೊಂದು ಮುತ್ತೆನುವ ಮುಗಿಲು!

ಗೋಕುಲಾಷ್ಟಮಿಗೂ ಇಮಾಮಸಾಹೇಬರಿಗೂ ಏನಾದರೂ ಸಂಬಂಧವಿದೆಯೋ ಇಲ್ಲವೋ. ನನ್ನಲ್ಲಿ ಆ ಬಗ್ಗೆ ಮಾಹಿತಿಯಿಲ್ಲ. ಆದರೆ ಬೆಣ್ಣೆ ಕದ್ದ ಆ ಬಾಲಕೃಷ್ಣನಿಗೂ, ನಮ್ಮ ಸಜ್ಜನ ಕವಿ ನಿಸಾರ್‌ ಅಹಮದ್‌ರಿಗೂ ಬಹಳ ಹತ್ತಿರದ ಸಂಬಂಧವಿರುವುದಂತೂ ನನಗೆ ಚೆನ್ನಾಗಿ ಗೊತ್ತು. ಇಲ್ಲದಿದ್ದರೆ ಅವರು ಅಷ್ಟು ಮುದ್ದು ಮುದ್ದಾದ ಪದಗಳನ್ನು ಹುಡುಕಿ ತೆಗೆದು ‘ಬೆಣ್ಣೆ ಕದ್ದ ನಮ್ಮ ಕೃಷ್ಣ’ ಅಂತ ಹೀಗೊಂದು ಲಲ್ಲೆಗರೆಯುವಂತಿರುವ ಹಾಡನ್ನು ಬರೆಯುತ್ತಿದ್ದರೇ?

ಬೆಣ್ಣೆ ಕದ್ದ ನಮ್ಮ ಕೃಷ್ಣ

ಬೆಣ್ಣೆ ಕದ್ದನಮ್ಮಾ...

ಬಿಂದಿಗೆ ಬಿದ್ದು, ಸಿಡಿಯಲು ಸದ್ದು

ಬೆಚ್ಚಿದ ಗೋಪಿಯ ತುಂಟನಮ್ಮಾ...

ಬೇರೆ ದೇವಾನುದೇವತೆಗಳೆಲ್ಲ ತಮ್ಮ ಕೈಯಲ್ಲಿ ಶಂಖ, ಚಕ್ರ, ಬಿಲ್ಲು, ಬಾಣ, ಕಮಲ ಹೀಗೆ ಏನೆಲ್ಲಾ ಚಂದ ಚಂದದ ವಸ್ತುಗಳನ್ನು ಹಿಡಿದು ಠೀವಿಯಿಂದ, ನಗುತ್ತಾ ನಿಂತಿದ್ದಾರೆ. ಆದರೆ ಈ ಉಡುಪಿ ಕೃಷ್ಣನ ಕೈಯಲ್ಲಿ? ಒಂದು ಕೈಯಲ್ಲಿ ಹಗ್ಗ, ಇನ್ನೊಂದು ಕೈಯಲ್ಲಿ ಕಡಗೋಲು! ಯಾಕೆ ಇವನಿಗೆ ಇದೇ ಬೇಕಾಯಿತು? ಈ ಪ್ರಶ್ನೆಗೆ ನವನೀತ ಸಾಲುಗಳನ್ನು ಮೂಡಿಸಬಲ್ಲ ಸಿನಿಮಾ ಕವಿ ಅರ್‌. ಎನ್‌. ಜಯಗೋಪಾಲ್‌, ಹೀಗೊಂದು ಊಹೆಯನ್ನು ನಮ್ಮ ಮುಂದಿಡುತ್ತಾರೆ-

ಸಂಸಾರವೆಂಬ ಸಾಗರವನ್ನು

ಮಥಿಸಲು ಕಡಗೋಲು ಪಿಡಿದಿಹೆಯಾ?

ಹಗ್ಗವ ಹಿಡಿದು ಭಕ್ತರನೆಲ್ಲಾ

ಮುಕ್ತಿಯ ತೀರಕೆ ಒಯ್ಯುವೆಯಾ?

ಕೃಷ್ಣ ಕವಿಗಳಿಗೆ ಮಾತ್ರವಲ್ಲ , ಹನಿಗವಿಗಳಿಗೂ ಸ್ಫೂರ್ತಿಯಾಗಿದ್ದಿದೆ. ಇಂಗ್ಲೀಷ್‌ನ ‘ಲಕ್ಕಿ’ ಪದಕ್ಕೆ ವಿರುದ್ಧ ಪದ ಏನು ಗೊತ್ತಾ ? ನೀವು ‘ಅನ್‌ಲಕ್ಕಿ’ ಅಂದುಕೊಂಡಿದ್ದರೆ ತಪ್ಪು. ಅದು ‘ಅವಲಕ್ಕಿ’ ಅನ್ನುತ್ತಾ ಕಣ್ಣುಮಿಟುಕಿಸಿ ನಗುತ್ತದೆ ಈ ಹನಿಗವಿತೆ-

ಕೃಷ್ಣ ಲಕ್ಕಿ

ಅದಕ್ಕೆ ರಾಜನಾದ

ಸುಧಾಮ ಪಾಪ

ಅವಲಕ್ಕಿ!

ಕೃಷ್ಣ ಈ ಭುವಿಯಿಂದ ಮರೆಯಾಗಿ ಹೋಗುವ ಮೊದಲು, ಪ್ರಪಂಚದಲ್ಲಿ ಧರ್ಮವು ಪೂರ್ತಿ ನಶಿಸಿಹೋದಾಗ ಅದನ್ನು ಮತ್ತೆ ಸಂಸ್ಥಾಪಿಸಲು, ಹಿಂತಿರುಗಿ ಬರುತ್ತೇನೆಂದು ವಚನ ಕೊಟ್ಟಿದ್ದಾನಂತೆ. ಹಾಗಾದರೆ ಈಗ ಕೃಷ್ಣಾವತಾರಕ್ಕೆ ಕಾಲ ಸನ್ನಿಹಿತ ಆಗಿರಬಹುದಾ? ತುಂಟಕವಿ ಬಿ.ಆರ್‌. ಲಕ್ಷ್ಮಣರಾವ್‌ ಅಪ್ಪಣೆ ಕೊಡಿಸಿದಂತೆ - ‘ಆಸ್ತಿಕರೆಲ್ಲ ಹರಿ hurry ಎನ್ನಿ, ಆಗಲಿ ಬೇಗ ಅವತಾರ!’ ಇನ್ನೇಕೆ ತಡ ? ನಿಷ್ಕಳಂಕ ನಗೆಯ ಮುದ್ದುಮೋಹನನ ಅವತಾರ ಈಗಲೇ ಆಗಿಬಿಡಲಿ.

ಬಾರೋ ಕೃಷ್ಣಯ್ಯಾ...ಒಡೆದ ಹೃದಯಗಳಿಗೊಂದು ಒಲುಮೆಯ ಬೆಸುಗೆ ಹಾಕಲು ಬಾ , ಮುನಿದ ಮನಸ್ಸುಗಳಲ್ಲಿ ಮೈತ್ರಿ ಗೀತೆ ಹಾಡಲು ಬಾ, ಬೇಸತ್ತ ಬದುಕಿಗೊಂದು ಭಾಗ್ಯರೇಖೆ ಬರೆಯಲು ಬಾ, ಗೆಳೆಯ, ಇನಿಯ, ಕಂದ, ಗುರು.... ಮತ್ತೆ ಇನ್ನಾವ ರೂಪದಲ್ಲಾದರೂ ಸರಿ, ನೀ ಬಾರೋ. ನಿನ್ನ ಅಗತ್ಯ ಈಗ ನಮಗಿದೆ. ಕೃಷ್ಣಾ...ನೀ.. ಬೇಗನೆ ಬಾರೋ....!

ಪೂರಕ ಗದ್ಯ : ಕೃಷ್ಣ - ದೇವರುಗಳ ನಡುವಿನ ಮನುಷ್ಯ

ಪೂರಕ ಪದ್ಯ : ಕೃಷ್ಣ ಜಯಂತಿ ದಿನ

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more