• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉತ್ತರಗಳೇ ಇಲ್ಲದ ಪ್ರಶ್ನೆಗಳು, ಪ್ರಶ್ನೆಗಳಿಗೆ ನಿಲುಕದ ಉತ್ತರಗಳು!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಹೊಸ ವರ್ಷದ ಶುಭಾರಂಭದಲ್ಲಿ ನಿಮಗೊಂದು ಪ್ರಶ್ನೆ ಕೇಳುತ್ತಾ ಈ ಲೇಖನ ಆರಂಭಿಸುತ್ತೇನೆ. ಕೆಲವು ಮಂದಿ ಪ್ರಶ್ನೆ ಕೇಳ್ತಾರಲ್ಲಾ ಅದರ ಹಿಂದಿನ ಮರ್ಮ ಏನು? ಕೆಲವರಂತೂ ಹಗಲಿಲ್ಲ ಇರುಳಿಲ್ಲ ಸುಮ್ನೆ ತಲೆ ತಿನ್ತಾರೆ. ಯಾರ ಬಗ್ಗೆ ಹೇಳಿದೆ ಅಂತೀರಾ? ಅದೇ, ಸಮಯಾಸಮಯವಿಲ್ಲದೆ "ನಿಮಗೆ ಕ್ರೆಡಿಟ್ ಕಾರ್ಡ್ ಬೇಕಿತ್ತೇ?" ಅಂತ ಕೇಳ್ತಾರಲ್ಲಾ ಅವರ ಬಗ್ಗೆ! ಈ ಪ್ರಶ್ನೆಗಳ ಸುತ್ತ ಒಂದಷ್ಟು ಓಡಾಡಿಕೊಂಡು ಬರೋಣ ಬನ್ನಿ.

ಅತಿಯಾಗಿ ಪ್ರಶ್ನೆ ಕೇಳುವವರಾರು? ಎಲ್ಲರಿಗೂ ಗೊತ್ತೇ ಇದೆ. ಚಿಕ್ಕ ಮಕ್ಕಳು! ಮಕ್ಕಳೇ ಏಕೆ ಪ್ರಶ್ನೆಗಳನ್ನು ಕೇಳುತ್ತಾರೆ ಅಂತ ನಿಮಗೆ ಅನ್ನಿಸಬಹುದು. ಇಲ್ಲ ಬಿಡಿ, ಪ್ರಶ್ನೆಗಳು ಎಲ್ಲರಲ್ಲೂ ಇರುತ್ತೆ. ಮಕ್ಕಳಿಗೆ ಪ್ರಶ್ನೆ ಕೇಳೋಕ್ಕೆ ಹಿಂಜರಿಕೆ ಇರೋದಿಲ್ಲ. ಪ್ರಶ್ನೆ ಕೇಳಿದರೆ ಯಾರೇನು ಅಂದುಕೊಳ್ಳುತ್ತಾರೆ ಎಂಬ ಚಿಂತೆಯೇ ಇರೋದಿಲ್ಲ. ಹಿರಿಯರ ಹಾಗೆ ಅವರಿಗೆ ಮುಖವಾಡ ಇರೋದಿಲ್ಲ. ಬೆಳೀತಾ ಬೆಳೀತಾ face mask ಮೂಡುತ್ತಾ ಹೋಗುತ್ತೆ.

ನಮ್ಮನ್ನು ನಾವು ನೋಡಿಕೊಳ್ಳುವಷ್ಟು ಕಾಳಜಿ ನಮ್ಮದಾಗಲಿ

ಈ ಚಿಕ್ಕ ಮಕ್ಕಳು ಪ್ರಶ್ನೆ ಮಾಡಿದಾಗ ನಮ್ಮ ಮನಸ್ಸಿನಲ್ಲಿ ಒಂದು ರೀತಿಯ ದೊಡ್ಡಸ್ತಿಕೆ ಆವರಿಸುತ್ತದೆ. ತನಗೆಲ್ಲಾ ಗೊತ್ತು ಮಕ್ಕಳು ಕೇಳೋದಕ್ಕೆ ಅರ್ಥವಿಲ್ಲ ಇತ್ಯಾದಿ. ಆದರೆ ಪ್ರಶ್ನೆ ಕ್ಲಿಷ್ಟವಾಗಿದ್ದರೆ ಅಥವಾ ಕೇಳಿದ ಪ್ರಶ್ನೆಗೆ ಉತ್ತರ ಗೊತ್ತಿಲ್ಲದೇ ಇದ್ದಾಗ frustration ಉಂಟಾಗಿ ಅವರ ಮೇಲೆ ರೇಗಿ ದೂರ ಕಳಿಸುತ್ತೇವೆ. ಈ ಪ್ರಶ್ನೆಗೆ ನಾನು ಉತ್ತರ ನೀಡದಿದ್ದರೆ ನನ್ನ ಮರ್ಯಾದೆ ಮೂರು ಕಾಸಿಗೆ ಹರಾಜಾಗುತ್ತದೆ ಎಂಬ ಭೀತಿ ಬೇಡ.

ಪ್ರಶ್ನೆಯನ್ನು ಉತ್ತರಿಸುವುದಕ್ಕೆ ಸಮಯ ತೆಗೆದುಕೊಳ್ಳುವುದು ತಪ್ಪಲ್ಲ, ಆದರೆ ತಪ್ಪಾಗಿ ಉತ್ತರಿಸೋದು ಅಪರಾಧ. "ನಾನು ಸದ್ಯಕ್ಕೆ ಬ್ಯುಸಿ ಇದ್ದೀನಿ, ಆಮೇಲೆ ಹೇಳಲಾ?" ಎಂದರೆ ತಪ್ಪಿಲ್ಲ. ಆದರೆ ಸದಾ ಇದೇ ಉತ್ತರ ನೀಡಿ ಜಾರಿಕೊಳ್ಳೋದು ತಪ್ಪು.

ಕನಸುಗಳ ಮಾತು ಮಧುರ, ವಿಶಿಷ್ಟ ಲೋಕದಲ್ಲೊಂದು ವಿಹಾರ

ಈಗ ದೊಡ್ಡವರ ವಿಷಯಕ್ಕೆ ಬರೋಣ. ಯಾರೋ ಒಬ್ಬರು ಒಂದು ಪ್ರಶ್ನೆ ಕೇಳಿದ ಕೂಡಲೇ ಆ ಕ್ಷಣದಲ್ಲಿ ಆ ಪ್ರಶ್ನೆಯು ಮನಸ್ಸನ್ನು ಹೈಜಾಕ್ ಮಾಡಿಬಿಡುತ್ತದೆ. ನಿಮ್ಮ ದೃಷ್ಟಿ ಏನಿದ್ದರೂ ಅದನ್ನು ಉತ್ತರಿಸಬೇಕು ಅನ್ನೋದನ್ನೇ ಆಲೋಚಿಸುತ್ತಾ ಇರುತ್ತದೆ. ಪ್ರಶ್ನೆ ಅರ್ಥವಾಗದೆ ಹೋದಾಗ, ಅಥವಾ ಪ್ರಶ್ನೆ ಅರ್ಥವಾಗಿ ಉತ್ತರ ಗೊತ್ತಾಗದೇ ಹೋದಾಗ, ಅಥವಾ ಕೇಳಿದ ಪ್ರಶ್ನೆಗೆ ನಿರ್ದಿಷ್ಟ ಉತ್ತರ ಇಲ್ಲ ಎಂದಾದಾಗ ಮನಸ್ಸು blank ಆಗುತ್ತೆ. ಹೃದಯದ ಒತ್ತಡ ಏರುತ್ತದೆ. ಸದಾ ಕಾಲ ಹೀಗಾಗೋಲ್ಲ. ಪ್ರಶ್ನೆ ಕೇಳಿದವರು statusನಲ್ಲಿ ದೊಡ್ಡವರಾಗಿದ್ದಾರೆ ಹೀಗಾಗುತ್ತದೆ. ಉದಾಹರಣೆಗೆ ಮನೆಯಲ್ಲಿನ ನೀವು ಗೌರವಿಸುವ ಹಿರಿಯರು ಅಥವಾ ಟೀಚರ್ / ಪ್ರೊಫೆಸರ್, ನಿಮ್ಮ ಮ್ಯಾನೇಜರ್ ಹೀಗೆ.

ಸಾಮಾನ್ಯವಾಗಿ ಮೀಟಿಂಗ್'ಗಳಲ್ಲಿ ಹೀಗಾಗುತ್ತೆ. ಯಾರೋ ನಿಮ್ಮನ್ನು ಒಂದು ಪ್ರಶ್ನೆ ಕೇಳಲು ಆರಂಭಿಸುತ್ತಾರೆ. ಪ್ರಶ್ನೆ ಮೂಡಿ ಬರುತ್ತಲೇ ಕೇಳುಗರಾದ ನಿಮ್ಮ ಮನಸ್ಸು ಉತ್ತರ process ಮಾಡಲು ಶುರು ಮಾಡಿದರೆ ಅಲ್ಲೇ ಎಡವಿದಿರಿ ಅಂತರ್ಥ. ಮೊದಲಿಗೆ ತಿಳಿಮನಸ್ಸಿನಿಂದ ಕೇಳುಗರಿಗೆ ಕಿವಿಯನ್ನು ನೀಡಿ. ಪ್ರಶ್ನೆಯನ್ನು ಮನನ ಮಾಡಿ. ಕೇಳಿದ ಪ್ರಶ್ನೆಯನ್ನೇ ಮತ್ತೊಮ್ಮೆ ಅವರಿಗೆ ಹೇಳಿ ಅಥವಾ ಇನ್ನೊಂದು ರೀತಿಯಲ್ಲಿ ಹೇಳಿ 'ನೀವು ಕೇಳಿದ್ದು ಇದೇನಾ?' ಅಂತ confirm ಮಾಡಿಕೊಳ್ಳಿ. ಸರಿ ಅಂತಾದ ಮೇಲೆ ಉತ್ತರ ನೀಡಲು ಆರಂಭಿಸಿ. Interviewಗಳಲ್ಲಿ ಈ ಪದ್ಧತಿ ಬಹಳ ಸಹಾಯಕಾರಿ. ಹೀಗೆ ಮಾಡದೆ ಸುಮ್ಮನೆ ಉತ್ತರ ನೀಡಿದಿರಿ ಅಂದುಕೊಳ್ಳಿ ಆಗ ಇಂಟರ್ವ್ಯೂ ಮಾಡುವಾತ ನಾನು ಕೇಳಿದ ಪ್ರಶ್ನೆಗೆ ಇದು ಉತ್ತರವಲ್ಲ, ನಿಮಗೆ ಪ್ರಶ್ನೆ ಅರ್ಥವಾದ ಹಾಗಿಲ್ಲ ಅಂತಂದರೆ ಅಲ್ಲಿಗೆ interview ಮುಗೀತು ಎಂದೇ ಅಂದುಕೊಳ್ಳಬಹುದು.

ಕೆಲವರ ಮನಸ್ಸಿನಲ್ಲಿ ಪ್ರಶ್ನೆ ಇರುತ್ತದೆ ಆದರೆ communication ತೊಂದರೆ ಇದ್ದು ಏನೋ ಕೇಳಲು ಹೋಗಿ ಮತ್ತೇನೋ ಕೇಳಲೂಬಹುದು. ಪ್ರಶ್ನೆ ಕೇಳುವಾಗಲೇ ನೀವು ಉತ್ತರ ರೆಡಿ ಮಾಡಿಕೊಂಡರೆ ಬಹುಶ: ಪೂರ್ತಿಯಾಗಿ ಪ್ರಶ್ನೆ ಕೇಳಿಸಿಕೊಂಡಿಲ್ಲ ಅಂತಾಗಬಹುದು. ಪ್ರಶ್ನೆ ಮುಗಿಯುವ ಮುನ್ನವೇ ಉತ್ತರಿಸಲು ಹೋದಾಗ ಕೇಳಿದವರಿಗೂ, ಕೇಳಿಸಿಕೊಳ್ಳುತ್ತಿರುವವರಿಗೂ ಬರೀ confusion ಆಗುತ್ತದೆ.

ಸಭೆಯಲ್ಲಿ ನಿಮಗೊಂದು ಪ್ರಶ್ನೆ ಎದುರಾಗಿ ಅದಕ್ಕೆ ನಿಮ್ಮಲ್ಲಿ ಉತ್ತರವಿಲ್ಲ ಎಂದಾದಾಗ, ಆಗಲೇ ಹೇಳಿದಂತೆ, ಸಮಯ ತೆಗೆದುಕೊಳ್ಳಬಹುದು. ಪ್ರಶ್ನೆಯನ್ನು ನೋಟ್ ಮಾಡಿಕೊಂಡು ಉತ್ತರ ತಿಳಿದುಕೊಂಡು ಅವರಿಗೆ ಉತ್ತರ ನೀಡೋ ಜವಾಬ್ದಾರಿ ಇರಬೇಕು. ಇದು ಬಹಳ ಮುಖ್ಯ.

ಮರೆಯಬೇಕು ಅನ್ನೋದನ್ನ ನೆನಪಿಟ್ಟುಕೊಳ್ಳುವುದನ್ನು ಮರೆಯದಿರಿ!

ಪ್ರಶ್ನೆ ಕೇಳುವವರಲ್ಲೇ ಹಲವಾರು ವಿಧ ಇದೆ. ಪ್ರಶ್ನೆ ಕೇಳುವವರೆಲ್ಲ ಒಂದೇ ರೀತಿಯವರಲ್ಲ. ಕೆಲವರಿಗೆ ನಿಜಕ್ಕೂ ಉತ್ತರ ಗೊತ್ತಿರುವುದಿಲ್ಲ. ಹಾಗಾಗಿ ಕೇಳುತ್ತಾರೆ. ಕೆಲವರಿಗೆ ಉತ್ತರ ಗೊತ್ತಿರುತ್ತೆ ಆದರೆ ಗ್ಯಾರಂಟೀ ಇರೋದಿಲ್ಲ. ಹಾಗಾಗಿ ಕೇಳ್ತಾರೆ. ಕೆಲವರಿಗೆ ಪ್ರಶ್ನೆ ಕೇಳುವ ಸಮಯದಲ್ಲಿರುವ ಆಸಕ್ತಿ ಉತ್ತರ ಬರುವ ವೇಳೆಗೆ ಇರೋದಿಲ್ಲ. ಅವರ ಕೆಲಸ ಪ್ರಶ್ನೆ ಕೇಳೋದಷ್ಟೇ. ನಿಮ್ಮ ಉತ್ತರ ಆಲಿಸುವುದಾಗಲಿ ಅಥವಾ ಓದುವುದಾಗಲೀ ಅವರ ಇರಾದೆ ಅಲ್ಲ. ಅಂಥವರ ಪ್ರಶ್ನೆ ಕೇಳಿ ಸಾಕು, ಉತ್ತರಿಸುವ ಗೋಜಿಗೆ ಹೋಗದಿರಿ. ಮತ್ತೊಮ್ಮೆ ಹೇಳುತ್ತೇನೆ, ಪ್ರಶ್ನೆ ಕೇಳುವವರು ಯಾರು ಎಂಬುದುದರ ಮೇಲೆ ಈ ಉಪದೇಶವನ್ನು ಕಾರ್ಯಗತಗೊಳಿಸಿ. ಕೇಳಿದವರು ನಿಮ್ಮ ಮ್ಯಾನೇಜರ್ ಆದರೆ ಅವರಿಗೆ ಉತ್ತರಿಸೋದು ನಿಮ್ಮ ಕರ್ತವ್ಯ.

ಕೆಲವರು ಉತ್ತರ ಗೊತ್ತಿದ್ದೂ ಪ್ರಶ್ನೆ ಕೇಳ್ತಾರೆ. ಹೀಗೆ ಕೇಳೋದು ಯಾಕೆ ಅಂತ ನಿಮಗೆ ಅನ್ನಿಸಬಹುದು. ಕೆಲವರು, ತಮಗೆ ಗೊತ್ತಿದೆ ಅಂತ ಮತ್ತೊಬ್ಬರಿಗೆ ತಿಳಿಸುವ ಇರಾದೆ ಇಟ್ಟುಕೊಂಡು ಜ್ಞಾನ ಪ್ರದರ್ಶನ ಮಾಡುತ್ತಾರೆ. ಮತ್ತೂ ಕೆಲವರು ಮತ್ತೊಬ್ಬರು ತಮ್ಮ ಪ್ರಶ್ನೆಗೆ ತಿಣುಕಾಡಿ ಒದ್ದಾಡಲಿ ಅಂತಲೇ ಕೇಳುತ್ತಾರೆ. ಇವು ಯಾವುದೂ ಅಲ್ಲದ ಮತ್ತೊಂದು ಪಂಗಡ ಇದೆ.

ನಾಮಕರಣ, ಮರುನಾಮಕರಣ - ಅಂದು ಇಂದು ಎಂದೆಂದೂ!

ತಮಗೆ ತಿಳಿದಿರುವುದನ್ನು ಪ್ರಶ್ನೆ ಕೇಳುವುದರ ಮೂಲಕ ಮತ್ತೊಬ್ಬರನ್ನು ಆಲೋಚಿಸುವಂತೆ ಮಾಡಿ ಉತ್ತರ ತೆಗೆಯುತ್ತಾರೆ. ಹಾಗೆ ಮಾಡುವುದು ಏಕೆ ಎಂದರೆ ಮತ್ತೊಬ್ಬರ ತಲೆಗೂ ಕೆಲಸ ಕೊಟ್ಟು ಅವರಿಂದ ಮತ್ತೊಂದಷ್ಟು ಮಾಹಿತಿ ಪಡೆದುಕೊಳ್ಳೋದು ಮತ್ತು ಅದನ್ನೇ ಮತ್ತೆಲ್ಲರಿಗೂ ಉಣಬಡಿಸೋದು. ಹೀಗೆ ಮಾಡುವವರು ಯಾರು ಅಂದ್ರಾ? ಗುರುಗಳು ಅಲಿಯಾಸ್ ಮೇಷ್ಟ್ರುಗಳು. ನಿಮ್ಮ ಜೀವನವನ್ನೇ ಒಮ್ಮೆ ಅವಲೋಕಿಸಿ ನೋಡಿ. ಯಾರು ಪಾಠ ಹೇಳಿಕೊಡುವಾಗ ನಿಮ್ಮನ್ನು ಪ್ರಶ್ನೆಗಳನ್ನು ಕೇಳಿ involve ಮಾಡಿರುತ್ತಾರೋ ಅವರ ನೆನಪು ಮತ್ತು ಅವರು ಕಲಿಸಿದ್ದು ಸದಾ ನೆನಪಿನಲ್ಲಿ ಇರುತ್ತದೆ. ಒಂದು ವಿಷಯ ಹೇಳುವಾಗ ಅದರ ಸುತ್ತಲಿರುವ ಒಂದಷ್ಟು ವಿಚಾರಗಳನ್ನೂ ಹೇಳಿ ಪ್ರಶ್ನೆಗಳಿಂದ ಸ್ವಾರಸ್ಯ ಹುಟ್ಟಿಸಿ ಪಾಲ್ಗೊಳ್ಳುವಂತೆ ಮಾಡಿದಾಗ effectiveness ಹೆಚ್ಚುತ್ತೆ.

ನಿಮ್ಮದೇ ಮನೆಗಳಲ್ಲಿ ಮಕ್ಕಳಿಗೆ ಕಥೆ ಹೇಳುವಾಗ ಪ್ರಶ್ನೆಗಳನ್ನು ಹಾಕಿ ಉತ್ತರ ತೆಗೆಯಿರಿ. ಅವರನ್ನು ಆಲೋಚಿಸುವಂತೆ ಪ್ರೇರೇಪಿಸಿ. ಕಚೇರಿಯ ಮೀಟಿಂಗ್'ಗಳಲ್ಲಿ presentation ಕೊಡುವಾಗ ಸುಮ್ಮನೆ ಹೇಳ್ತಾ ಹೋದರೆ ಒಂದೋ ಮಂದಿ ನಿದ್ದೆ ಮಾಡುತ್ತಾರೆ, ಇಲ್ಲ ಅಂದ್ರೆ ಅವರಲ್ಲೇ ಮಾತುಕತೆಗಳು ಶುರುಮಾಡುತ್ತಾರೆ. ಅವರನ್ನು involve ಮಾಡಬೇಕು ಎಂದರೆ ಪ್ರಶ್ನೆ ಮಾಡಬೇಕು.

ಪ್ರಶ್ನೆ ಕೇಳೋದೂ ಒಂದು ಕಲೆ. ಪ್ರಶ್ನೆಗಳನ್ನು ಕೇಳೋದಕ್ಕೆ ಎಲ್ಲರಿಗೂ ಇಷ್ಟ ಇರಬಹುದು, ಆದರೆ ತಮಗೆ ಯಾರಾದರೂ ಪ್ರಶ್ನೆ ಮಾಡಿದಾಗ ಅವರ ಅಹಂ'ಗೆ ಪೆಟ್ಟು ನೀಡಿದಂತೆ ನಡುವಳಿಕೆ ತೋರುತ್ತಾರೆ, ಹಾಗಾಗಿ ಪ್ರಶ್ನೆ ಕೇಳುವ ಕಲೆಯನ್ನು ಬೆಳೆಸಿಕೊಳ್ಳುಬೇಕು. ಮತ್ತೆ interview ಉದಾಹರಣೆಯನ್ನೇ ತೆಗೆದುಕೊಂಡರೆ, ನಿಮಗೇನಾದರೂ ಪ್ರಶ್ನೆ ಇದೆಯೇ ಅಂತ ಸಾಮಾನ್ಯವಾಗಿ ಅಲ್ಲಿ ಕೇಳುತ್ತಾರೆ. ಆಗ ನೀವು ಕೇಳುವ ಪ್ರಶ್ನೆಗಳಿಗೆ ಅವರುಗಳು ಉತ್ತರ ನೀಡುವಾಗ ನಿಮ್ಮ ಅಭಿಪ್ರಾಯವನ್ನೂ ಕೇಳುವ ಹಾಗಿದ್ದರೆ ನಿಮಗೆ ಕೆಲಸ ಸಿಗುವ ಸಂಭವ ಹೆಚ್ಚು.

ಪ್ರಶ್ನೆಗಳನ್ನು ಕೇಳುವುದನ್ನು ಬೆಳೆಸಿಕೊಳ್ಳುವಂತೆಯೇ, ಉತ್ತರಗಳನ್ನು ಹುಡುಕುವುದನ್ನು ಬೆಳೆಸಿಕೊಳ್ಳಿ. ಉತ್ತರ ಕೈಲಿಟ್ಟುಕೊಂಡು ಅದರ ಸುತ್ತ ಪ್ರಶ್ನೆ ಹಾಕಬಹುದು. ಉದಾಹರಣೆಗೆ ದೇವಸ್ಥಾನದ ಸುತ್ತಲಿನ ಗೋಡೆಗೆ ಕೆಂಪು ಬಿಳಿ ಪಟ್ಟಿಗಳನ್ನು ಬಳೆದಿರುತ್ತಾರೆ ಅನ್ನೋದು ವಿಷಯ. ಅದು ಏಕೆ? ಅಂತ ಪ್ರಶ್ನೆ ಹಾಕಿಕೊಂಡು ಅದಕ್ಕೆ ಉತ್ತರ ಹುಡುಕಬಹುದು.

ಪ್ರಶ್ನೆ ಕೇಳೋ ವಿಷಯದಲ್ಲಿ ಹಿಂಜರಿಕೆ ಇರಬಾರದು. ಗೊತ್ತಿಲ್ಲದೇ ಇರೋದನ್ನು ಕಲಿಯೋದಕ್ಕೆ ಪ್ರಶ್ನೆಗಳನ್ನು ಕೇಳಬೇಕು. ನಮ್ಮನ್ನೇ ನಾವು ಪ್ರಶ್ನೆ ಹಾಕಿಕೊಂಡು ಉತ್ತರ ಅರಸುತ್ತಾ ಸಾಗಬೇಕು. ಹಾಗೆ ಅರಿವಾದ ಸತ್ಯವನ್ನು ಬಗಲಲ್ಲಿ ಇಟ್ಟುಕೊಂಡು ತಿರುಗಬಾರದು. ಹಂಚಬೇಕು.

ಈ ಜಗತ್ತಿನಲ್ಲಿ ಉತ್ತರಗಳೇ ಇಲ್ಲದಷ್ಟು ಪ್ರಶ್ನೆಗಳಿವೆಯೇ? ಅಥವಾ ಪ್ರಶ್ನೆಗಳಿಗೆ ನಿಲುಕದಷ್ಟು ಉತ್ತರಗಳಿವೆಯೇ? ಹೀಗೆ ಪ್ರಶ್ನೆ ಹಾಕಿಕೊಂಡರೆ ಧನಾತ್ಮಕ ಮತ್ತು ಋಣಾತ್ಮಕ ಅಂದರೇನು ಅಂತ ಉತ್ತರ ಸಿಕ್ಕಿರಬಹುದು ಈಗ, ಅಲ್ಲವೇ?

English summary
Why do people ask questions? Do you know answer? There are many question which do not have any answer and there are many answers which do not have any questions. Beautiful write up by Srinath Bhalle on questioning and finding ansers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X