• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆಟ್ಟದ್ದೂ ಒಳಿತಿನ ನಡುವಿನ ಸೀಮಾರೇಖೆ ಹಾಕೋದು ಹೇಗೆ?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ವಿಳಂಬಿ ಸಂವತ್ಸರದ ಆರಂಭದಲ್ಲಿ, ಕೆಟ್ಟದ್ದು ಅಂದರೇನು ಅಥವಾ ಒಳ್ಳೆಯದು ಅಂದ್ರೆ ಏನು ಅಂತ ತಿಳಿದುಕೊಳ್ಳೋ ಯತ್ನ.

ಈ ರೇಖೆ ಎಳೆಯೋ ಕೆಲಸ ನಾನು ಇವತ್ತು ಪ್ರಯತ್ನ ಪಡುತ್ತಿರಬಹುದು. ಆದರೆ ಈ ಕೆಲಸ ತ್ರೇತಾಯುಗದಲ್ಲೇ ಶುರುವಾಗಿದೆ. ವಾಮನ ಮೂರು ಪಾದದ ಅಳತೆಯ ಜಾಗ ಕೇಳಿದಾಗ ಆಕಾಶ-ಭೂಮಿ-ಪಾತಾಳ ಎಂದು ಗೆರೆ ಎಳೆದಿದ್ದಾಗಿತ್ತು. ಎರಡು ಗೆರೆಗಳ ನಡುವೆ ಇದ್ದಿದ್ದು ಭೂಮಿ. ತ್ರಿವಿಕ್ರಮನಾದ ವಾಮನನ ಪಾದ ಸ್ವರ್ಗಕ್ಕೆ ಹೋದಾಗ ದೇವಗಂಗೆ ಹುಟ್ಟಿತು. ಪಾತಾಳ ಸೇರಿದಾಗ ಬಲಿಯ ಸಾಮ್ರಾಜ್ಯ ಸ್ಥಾಪನೆಯಾಯ್ತು ಮತ್ತು ಇಂದಿಗೂ ಬಲೀಂದ್ರ ಪೂಜನೀಯ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಕಿರಿಕ್ ಆಗಿದ್ದೇ ಭೂಮಿಯಲ್ಲಿ. ಗುರು ಶುಕ್ರಾಚಾರ್ಯರು ಕಮಂಡಲದ ಕೊಳವೆಯಲ್ಲಿ ದುಂಬಿಯಾಗಿ ಸೇರಿಕೊಂಡು ನೀರು ಹರಿಯದಂತೆ ಅಡ್ಡರೇಖೆ ಎಳೆಯಲು ಹೋಗಿ ಕಣ್ಣು ಕಳೆದುಕೊಂಡರು. ಸುರಾಸುರರ ನಡುವೆ ಭಗವಂತ ಹಾಕಿದ್ದ ರೇಖೆಯನ್ನು ಅಳಿಸುವಷ್ಟು ಆ ದುಂಬಿ ಪ್ರಬಲವಾಗಿರಲಿಲ್ಲವಲ್ಲ!

ಇನ್ನು ಪರಶುರಾಮ. ಕ್ಷತ್ರಿಯರೆಲ್ಲಾ ಕೆಡುಕರು ಎಂದು ಕ್ಷತ್ರಿಯರ ಮತ್ತಿತರರ ನಡುವೆ ರೇಖೆ ಎಳೆದು ಕ್ಷತ್ರಿಯರ ದಮನಕ್ಕೆ ಇಪ್ಪತ್ತೊಂದು ಬಾರಿ ಭೂಪ್ರದಕ್ಷಿಣೆ ಮಾಡಿದರಂತೆ!

ಶ್ರೀನಾಥ್ ಭಲ್ಲೆ ಕಾಲಂ: ನೆಲ ನುಣುಪಾಗುತ್ತಿದೆ, ಮನಸ್ಸು ಒರಟಾಗುತ್ತಿದೆ

ಇನ್ನು ರಾಮನ ಕಾಲದಲ್ಲಿ, ರಾಮನ ತಮ್ಮ ಲಕ್ಷ್ಮಣ ಹಾಕಿದ 'all time great' ಲಕ್ಷ್ಮಣ ರೇಖೆ. ಸೀತೆಗೆ ಲಕ್ಷ್ಮಣ ಹೇಳಿದ್ದು ರೇಖೆಯ ಒಳಗೆ ಇದ್ದರೆ ಆಪತ್ತಿಲ್ಲ ಅಂತ. ದಾಟಿದಲ್ಲಿ ಆಪತ್ತು ಆಗೇ ಆಗುತ್ತೆ ಅಂತ ಕಟು ನುಡಿದಿರಲಿಕ್ಕಿಲ್ಲ. Line Of Control ದಾಟದಿರಿ ಎಂದೇ ಎಲ್ಲರೂ ಹೇಳೋದು.

ಅಂದಿಗೂ ಇಂದಿಗೂ ಪ್ರತಿಯುಗದಲ್ಲೂ ಈ ರೇಖೆಗಳು ವೈವಿಧ್ಯ ತೋರಿದೆ. ಹೇಗೆ ಪ್ರತಿಯೊಬ್ಬರ ಹಸ್ತದ ಮೇಲಿನ ರೇಖೆಗಳು ಅನನ್ಯವೋ, ಹೇಗೆ ಒಬ್ಬೊಬ್ಬರ ಬೆರಳಚ್ಚು ಅನನ್ಯವೋ, ಹಾಗೆಯೇ ಪ್ರತಿಯೊಬ್ಬರ ಜೀವನದಲ್ಲೂ ಈ ರೇಖೆ ಬೇರೆ ಬೇರೆ ರೀತಿಯದ್ದೇ ಆಗಿರುತ್ತದೆ.

ನಾನಾವ ರೀತಿ ಗೆರೆಗಳನ್ನು ಹಾಕಿದ್ದೆ ನೋಡೋಣವೇ?

ಶಾಲಾದಿನಗಳಲ್ಲಿ ಒಮ್ಮೆ ನನ್ನ textbook ಒಂದನ್ನು ಯಾರೋ ಹುಡುಗ ತೆಗೆದುಕೊಂಡುಬಿಟ್ಟ! ಕೇಳಿದರೆ, ಅದು ತನ್ನದೇ ಅಂತ ವಾದಿಸಿದ. ಆ ಪುಸ್ತಕ ನನ್ನದೇ ಅಂತ ನನಗೆ ಗೊತ್ತಿತ್ತು. ಅಣ್ಣನನ್ನು ಶಾಲೆಗೆ ಕರೆದುಕೊಂಡು ಹೋಗಿ headmiss'ಗೆ ವಿಷಯ ಅರುಹಿ, ಆ ಹುಡುಗನನ್ನು ಪುಸ್ತಕದ ಸಮೇತ ಕರೆಸಿದೆವು. 'ಈ ಪುಸ್ತಕ ನಿನ್ನದೇ ಅಂತ ಏನು ಗ್ಯಾರಂಟಿ' ಅಂತ ಮಿಸ್ ನನ್ನನ್ನೇ ಕೇಳಿದರು! ಪುಸ್ತಕದ ಮಧ್ಯದ ಒಂದು ಹಾಳೆಯಲ್ಲಿ ನನ್ನ ಹೆಸರು ಬರೆದುಕೊಂಡಿದ್ದೆ. ಅದನ್ನು ತೋರಿಸಿದೆ. ಕೂಡಲೇ ಆ ಹುಡುಗ ತನ್ನ ತಪ್ಪು ಒಪ್ಪಿಕೊಂಡ. ನನ್ನ ಪಾಲಿಗೆ ಅಂದು ಅವನು ಕೆಟ್ಟವನು. ರೇಖೆ ಹಾಕಿಕೊಂಡೆ.

ಗವಿಪುರ ಗುಟ್ಟಹಳ್ಳಿಯ ನಮ್ಮ ಮನೆ ಬೀದಿಯಲ್ಲಿ ಒಮ್ಮೆ ಇದ್ದಕ್ಕಿದ್ದಂತೆ ಕೂಗಾಟ. 'ಕಳ್ಳ ಕಳ್ಳ ಕಳ್ಳ' ಅಂತ ಓಡುವಿಕೆ. ನಾನು ಹೋದೆ. ಏನಿಲ್ಲಾ ಅಂದ್ರೆ ಒಂದೈವತ್ತು ಜನ, ಒಬ್ಬನನ್ನು ಹಿಡ್ಕೊಂಡ್ ಬಡೀತಿದ್ರು. ವಾನರರ ಕೈಲಿ ಸಿಕ್ಕ ರಕ್ಕಸ ಹೊಡೆಸಿಕೊಂಡ ಹಾಗೆ ಆ ಕಳ್ಳನಿಗೆ ರಾಮದೇವರ ಗುಡಿಯ ಎದುರಿಗೆ ಧರ್ಮದೇಟು ಬೀಳ್ತಿತ್ತು. ಬಡಿಸಿಕೊಳ್ಳುತ್ತಿದ್ದವ ಬಡ್ಕೊತ್ತಿದ್ರೂ ಬಿಡ್ತಾನೇ ಸಜ್ಜನರು! ಏನ್ ಕದ್ದಿದ್ನೋ ಗೊತ್ತಿಲ್ಲ. "ಇಂಥವರನ್ನು ಬಿಡಬಾರದು, ಪೊಲೀಸರಿಗೆ ಹಿಡ್ಕೊಡಬೇಕು" ಅಂತ ಒಬ್ಬರು ಹಿರಿಯರು ಸಲಹೆ ನೀಡಿದರು. ಅವರು ಹೇಳಿದ್ದೇ ತಡ, ಅವನ ಕಾಲರ್ ಹಿಡಿದುಕೊಂಡು ಅಲ್ಲೇ ಪಕ್ಕದಲ್ಲೇ ಇದ್ದ ಠಾಣೆಗೆ ಹೋದರು. ಮುಂದೇನಾಯ್ತು ಅದು ಬೇರೆ ವಿಷಯ. ಕಳ್ಳತನ ಮಾಡುವವರೆಲ್ಲಾ ರೇಖೆಯಿಂದ ಆಚೆ.

ನವರಸಾಯನ: ಇಂಗ್ಲಿಷ್ ಅಂದಾಕ್ಷಣ ಶಾಪಗ್ರಸ್ತ ಕರ್ಣನ ನೆನಪು!

ನಮ್ಮದೇ ತರಗತಿಯ ಹುಡುಗರು ನಮ್ಮಲ್ಲೊಬ್ಬನ ಸ್ನೇಹಿತರ ಟೀಮಿನ ಜೊತೆ ಕ್ರಿಕೆಟ್ ಆಡಿದ್ದೆವು. ನಾವು ಗೆಲ್ಲೊ ಸಮಯಕ್ಕೆ ಆ ಟೀಮಿನವರು 'ನೀವು score ಅನ್ನು ಡುಬ್ಬಾ ಹಾಕಿದ್ದೀರಾ' ಅಂತ ತಗಾದೆ ತೆಗೆದು ಗಲಭೆ ಶುರುಮಾಡಿದ್ದೇ ತಡ, ಆ ಕಡೆಯ ಫಟಿಂಗನೊಬ್ಬ ಜೇಬಿನಿಂದ half ಬ್ಲೇಡ್ ತೆಗೆಯೋದಾ? ನಾವೆಲ್ಲಾ ದೌಡು. ಯಪ್ಪಾ! ಮತ್ತೊಂದು ರೇಖೆ ಮೂಡಿಬಂತು. ಬ್ಲೇಡ್'ಅನ್ನು ಆಯುಧದಂತೆ ಬಳಸೋ ಮಂದಿ ರೌಡಿಗಳು. ರೇಖೆಯಿಂದ ಆಚೆ.

ಹೋಳಿ ಹಬ್ಬದ ಸಮಯದಲ್ಲಿ ಹೆಣ್ಣುಗಳನ್ನು ಅಟಕಾಯಿಸಿ ಕೆಟ್ಟದಾಗಿ ಅವರ ಮೈಮುಟ್ಟಿ ಹಿಂಸೆ ಮಾಡುವ ರೀತಿಯಲ್ಲಿ ಬಣ್ಣ ಹಾಕುವ ಮಂದಿಯೆಲ್ಲ ನನ್ನ ರೇಖೆಯಿಂದ ಆಚೆ. ಹೈಸ್ಕೂಲಿನಲ್ಲಿ ಒಬ್ಬ ತರಳೆ ವಿದ್ಯಾರ್ಥಿ ಇದ್ದ. ಎಚ್.ಎ.ಎಲ್'ನಿಂದ ನನ್ನ ಜೊತೆಯಲ್ಲೇ ಬಸ್'ನಲ್ಲಿ ಬರುತ್ತಿದ್ದ. ಸ್ಟಾಪಿನಲ್ಲಿ ಇಳಿದು ಸ್ಕೂಲಿನ ಸಮೀಪ ಬರುತ್ತಿದ್ದಂತೆಯೇ ಮತ್ತೆಲ್ಲೋ ಹೋಗುತ್ತಿದ್ದ. ಎಲ್ಲಿಗೆ ಅಂತ ಗೊತ್ತಿಲ್ಲ. ಸಂಜೆ ಬಸ್ ಬಳಿ ಹಾಜರು. ಶಾಲೆ ಮಿಸ್ ಮಾಡೋ ವಿದ್ಯಾರ್ಥಿಗಳು ರೇಖೆಯಿಂದ ಆಚೆ!

ಆಗಾಗ ಒಮ್ಮೊಮ್ಮೆ ಮನೆಯವರೊಂದಿಗೆ ಸಿನಿಮಾಕ್ಕೆ ಹೋಗುತ್ತಿದ್ದೆ. ತುಂಬಾ ಸಿಂಪಲ್ ಸಿನಿಮಾಗಳು. ರಾಜ್, ವಿಷ್ಣು, ಶ್ರೀನಾಥ್ ಇವರುಗಳು ಹೀರೋಗಳು. ವಜ್ರಮುನಿ, ತೂಗುದೀಪ ಶ್ರೀನಿವಾಸ್, ಸುಧೀರ ಇದ್ದರೆ ಅವರುಗಳು ವಿಲನ್. ಮುಖನೋಡಿ ಮಣೆ ಹಾಕುವುದು ಅಂತಾರಲ್ಲಾ ಹಾಗೆ ಜನರನ್ನು ನೋಡಿ ಮನಸ್ಸಿನಲ್ಲೇ ಒಂದು ರೇಖೆ ಎಳೆದುಕೊಂಡಿದ್ದೆ. ಭಕ್ತಕುಂಬಾರ'ದಲ್ಲಿ ವಜ್ರಮುನಿ ಒಳ್ಳೆಯವನ ಪಾತ್ರದಲ್ಲಿ ಕಾಣಿಸಿಕೊಂಡಾಗ ಏನೋ ಒಂಥರಾ!

ಕಾಲೇಜಿಗೆ ಸೇರಿದ ಆರಂಭದಲ್ಲಿ, ಬೋನಿನಿಂದ ಹೊರಬಿದ್ದ ಹುಲಿಗಳಂತಾಗಿದ್ದರು ಕೆಲವು ಹುಡುಗರು. ಚಿಗುರುಮೀಸೆ ಗಂಡುಗಳು ಪಾಠ ಹೇಳೋ ಮೇಷ್ಟ್ರಿಗೇ ಅವಾಜ್ ಹಾಕುವಾಗ 'ಛೇ' ಎನಿಸಿತ್ತು. ಮಗದೊಂದು ಗೆರೆ. ಇಸ್ಪೀಟು ಆಡುವವರು, ಪೋಲಿ ಮಾತುಗಳನ್ನು ಆಡುವುದು ನಾವಲ್ಲ. ಹೀಗೆ ಒಂದರ ಮೇಲೊಂದು ಗೆರೆಗಳು ಮೂಡುತ್ತಾ ಹೋಯಿತು. ಒಂದು ಹಂತದಲ್ಲಿ ಗೆರೆಗಳೋ ಗೆರೆಗಳು.

ಮುಂದೆ ಶುರುವಾಯ್ತು ಗೊಂದಲದ ದಿನಗಳು. ನಾನು ಅಂದುಕೊಂಡದ್ದೆಲ್ಲಾ ಉಲ್ಟಾ ಹೊಡೆಯೋಕ್ಕೆ ಶುರುವಾಯ್ತು!

ಸಿನಿಮಾ ನೋಡಿದಾಗ ಹೀರೋ ಅನಿಸಿಕೊಂಡವ ಆರಂಭದಿಂದ ಹಿಡಿದು ಹೆಚ್ಚು ಕಮ್ಮಿ ಸಿನಿಮಾ ಮುಗಿಯುವ ತನಕ ಗೆರೆಯ ಆಚೆಯ ಕೆಲಸ ಮಾಡುತ್ತಾ ಸಾಗಿ ಕೊನೆಗೆ ಇದ್ದಕ್ಕಿದ್ದಂತೆ ಒಳ್ಳೆಯವನಾಗುತ್ತಾನೆ. ಹಾಗೆ ಆಡುವಾಗ "ಹುಟ್ಟುತ್ತಾ ಎಲ್ಲರೂ ಕೆಟ್ಟವರಾಗೇ ಹುಟ್ಟೋಲ್ಲ. ಸಂದರ್ಭ ಹಾಗೆ ಮಾಡಿಸುತ್ತದೆ" ಎಂಬ ವೇದಾಂತ ಬೇರೆ. ಮತ್ತೆ ಮನ ಹಿಂದಕ್ಕೆ ಓಡಿತ್ತು. ನನ್ನ ಪುಸ್ತಕ ಕದ್ದವನಿಗೆ ಅಂಥಾ ತೊಂದರೆ ಇರಲಿಲ್ಲವಲ್ಲ? ಗೆದ್ದವನಿಗೆ ಮುಕುಟ ನೀಡೋಲ್ಲ ಅಂತ ಗೊತ್ತಿದ್ರೂ ಬ್ಲೆಡ್ ತೆಗೆಯುವಂಥಾ ಪರಿಸ್ಥಿತಿ ಏನಿತ್ತು ಆ ರೌಡಿ ಹುಡುಗನಿಗೆ? ಮನೆಯಿಂದ ಶಾಲೆಗೇ ಬಂದು ಮತ್ತೆಲ್ಲೋ ಹೋಗುವ ವಿದ್ಯಾರ್ಥಿಗೆ ಅಂಥಾ ಕೆಲಸ ಏನಿತ್ತೋ? fully confused!

ಉನ್ನತವರ್ಗದವರ ಕೀಳುದರ್ಜೆ ಕೆಲಸಗಳು. ಖ್ಯಾತನಾಮರು ಎನಿಸಿಕೊಂಡವರ ಬಣ್ಣದ ಕಥೆಗಳು ಅರಿವಿಗೆ ಬರುತ್ತಿದ್ದಂತೆ ಗೊತ್ತಾಗಿದ್ದು, ಅವರ ಕೆಲಸಗಳು ನನ್ನ ಗೆರೆಯಿಂದ ಆಚೆಗಿದ್ದವೇ! ವೈದ್ಯನಾದವ ಕಿಡ್ನಿ ಅಪಹರಣ ಮಾಡ್ತಾನೆ! ಮುಖವಾಡ ಹೊತ್ತವರ ಅಸಲೀ ಕಥೆಗಳು, ಚಾಕೊಲೇಟ್ ಮುಖದ ಹಿಂದಿನ ಕ್ರೌರ್ಯ ಒಂದೇ ಎರಡೇ!

ನಂತರದ ದಿನಗಳಲ್ಲಿ ಜಗತ್ತಿನ ಅರಿವು ಮೂಡತೊಡಗಿತ್ತು. ನನಗೆ ಸರಿ ಅನ್ನಿಸಿದ್ದು ಮತ್ತೊಬ್ಬರಿಗೆ ಸರಿ ಕಾಣದೆ ಇರಬಹುದು. ಹಾಗಂತ ನಾನು ಸರಿ ನಡತೆಯವನು ಮತ್ತೊಬ್ಬರು ಕೆಡುಕರು ಎನ್ನಲಾದೀತೆ? ನಾನು ತಪ್ಪಿನ ಹೊರಗೆ ಇದ್ದು ಮತ್ತೊಂದನ್ನು ತಪ್ಪು ಎನ್ನಬಹುದು ಆದರೆ ತಪ್ಪಿನಲ್ಲೇ ಇದ್ದವನಿಗೆ ಅದು ಕಾಣುತ್ತದೆಯೇ?

ಎಲ್ಲರೂ ಅವರವರ ದೃಷ್ಟಿಯಲ್ಲಿ ಒಳ್ಳೆಯವರೇ! ಸಮಾಜಘಾತುಕರು ಎಂಬುವವರು ಕೆಟ್ಟವರಾದರೆ, ಅವರನ್ನು ಪೋಷಿಸುವ ಸಮಾಜವೂ ಕೆಟ್ಟದ್ದೇ, ಆಲ್ವಾ?

ಮುಖದ ಮೇಲೆ ಗೆರೆಗಳು ಮೂಡುತ್ತಾ ಸಾಗಿದಂತೆ ಮನಸ್ಸಿನಲ್ಲಿ ಹಾಕಿಕೊಂಡಿದ್ದ ಗೆರೆಗಳು ಒಂದೊಂದೇ ಮಸುಕಾಗತೊಡಗಿದೆ. ಇಲ್ಲಿ ಯಾರೂ ತಪ್ಪಿತಸ್ಥರಲ್ಲಾ. ನಾನು ಜನರನ್ನು ನೋಡ್ತಿರೋ ದೃಷ್ಟಿ ತಪ್ಪು ಅಂತ ಒಮ್ಮೆ ಅನ್ನಿಸುತ್ತೆ. ನನ್ನದೇ ಒಂದು ಚೌಕಟ್ಟು ಮಾಡಿಕೊಂಡು ಅದರಲ್ಲಿ ಕೂರದವರು ಕೆಟ್ಟವರು ಎಂದುಕೊಳ್ಳುವುದು ತರವಲ್ಲ ಎನಿಸಿದೆ. ಮನದ ಗೆರೆಗಳನ್ನು ಅಳಿಸೋದಕ್ಕೆ ಸಾಧನೆ ಬೇಕು. ಏರಿಳಿತದ ಗೆರೆಗಳು ಅಡ್ಡಾಗೋ ಮುನ್ನ ಅರಿವು ಮೂಡಿದವ ಭಾಗ್ಯವಂತ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Every tend put the line between good and bad in their life. But, what is good and what is bad is relative and differs from one to another. Did you every draw line like this in your life? An article by Srinath Bhalle, Richmond.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more