• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಿನವೊಂದರಲ್ಲಿ ನಾವು ಏನೇನೆಲ್ಲಾ ಕಟ್ಟುತ್ತೇವೆ ಅಲ್ಲವಾ?

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಹಬ್ಬ ಹರಿದಿನಗಳಲ್ಲಿ ಮಾರುಕಟ್ಟೆಯಲ್ಲಿ ಓಡಾಡೋದೇ ಒಂದು ಅನುಭವ ಅನ್ನಿ... ಉದಾಹರಣೆಗೆ ನಮ್ಮ ಘನ ಬೆಂಗಳೂರಿನ ಗಾಂಧಿಬಜಾರು, ಸಿಟಿ ಮಾರುಕಟ್ಟೆ, ಇತ್ಯಾದಿ ಬೀದಿಗಳು. ಇಡೀ ಫುಟ್ಪಾತ್ ಮೇಲೆ ಹೂವು, ಹಣ್ಣು, ತರಕಾರಿ ಮಾರುವ ವ್ಯಾಪಾರಿಗಳು. ಹೂವಿನ ವ್ಯಾಪಾರಿಗಳು ಹೂವನ್ನು ಕಟ್ಟಿ ಹಾರವನ್ನು ಮಾಡುವುದರಲ್ಲಿ ಅಥವಾ ಪೋಣಿಸುವುದರಲ್ಲಿ ತಲ್ಲೀನರಾಗಿರುತ್ತಾರೆ. ಜೊತೆಗೆ ಗ್ರಾಹಕರಿಗೆ ಮೊಳ, ಮಾರಿನ ಬೆಲೆ ಹೇಳುತ್ತಾ, ಕೊಂಡವರಿಗೆ ಹೂವನ್ನು ಕಾಗದದಲ್ಲಿ ಇಟ್ಟು ಕಟ್ಟಿಕೊಡುತ್ತಾರೆ ಕೂಡ. ಕೆಲವರು ಸುಗಂಧರಾಜ ಹೂವನ್ನು ಹಾರ ಮಾಡುತ್ತಾ ಅದಕ್ಕೆ ಕುಚ್ಚನ್ನೂ ಕಟ್ಟುತ್ತಾರೆ. ಪೂರ್ಣಗೊಂಡ ಹಾರವನ್ನು ತಮ್ಮ ಅಂಗಡಿಯ ಮುಂದೆ ತೂಗಿ ಹಾಕಿ ಕಟ್ಟುತ್ತಾರೆ. ಒಂದು ಸಣ್ಣ ಅಂಗಡಿಯಲ್ಲಿ ಏನೆಲ್ಲಾ ಕಟ್ಟುತ್ತಾರೆ ಅಲ್ಲವೇ?

ಈ ಕಟ್ಟಿದ ಸುಗಂಧರಾಜ ಹೂವಿನ ಹಾರ ಮದುವೆಯ ಮಂಟಪ ಸೇರಿದಾಗ ಅವು ಗಂಡು ಮತ್ತು ಹೆಣ್ಣಿನ ಕುತ್ತಿಗೆ ಅಲಂಕರಿಸುತ್ತದೆ. ಮದುವೆಯ ಸಂದರ್ಭದಲ್ಲಿ ಹೆಣ್ಣಿನ ಕುತ್ತಿಗೆಗೆ ಗಂಡು ತಾಳಿ ಕಟ್ಟುತ್ತಾನೆ. ಗಂಡಿನ ಉತ್ತರೀಯದ ತುದಿಯನ್ನು ಹೆಣ್ಣಿನ ಸೀರೆಯ ತುದಿಗೆ ಗಂಟು ಕಟ್ಟಿ ಅಗ್ನಿಕುಂಡದ ಸುತ್ತ ರೌಂಡ್ ಹಾಕಿಸುತ್ತಾರೆ. ಸಂಸಾರ ಜೀವನದಲ್ಲಿ ಎಷ್ಟೆಲ್ಲಾ ಹೊಂದಾಣಿಕೆಯ ನಡುವೆ, ಸಮಾಜದ ಕಟ್ಟು ಪಾಡುಗಳ ನಡುವೆ, ಈ ಕಟ್ಟಿದ ತಾಳಿ ಗಟ್ಟಿಯಾಗೇ ಇರುತ್ತೆ ಅಂದುಕೊಳ್ಳೋಣ. ಕೆಲವೊಮ್ಮೆ ಹೊಂದಾಣಿಕೆಯೇ ಆಗದೆ ಆ ತಾಳಿಯ ಕಟ್ಟು ಬಿಚ್ಚಿ ಹಾಕಲಾಗುತ್ತದೆ. ಹೊಂದಾಣಿಕೆ ಆಗದೆ ಹೋಗುವುದಕ್ಕೆ ಏನೆಲ್ಲಾ ಕಾರಣ ಇದ್ದರೂ ತಮ್ಮಲ್ಲಿನ ಅಹಮಿಕೆಯನ್ನು ಕಟ್ಟಿ ಹಾಕದೆ ಸಡಿಲ ಬಿಟ್ಟಾಗಲೇ ಜೀವನದಲ್ಲಿ ಏರುಪೇರುಗಳು ಜಾಸ್ತಿ ಆಗೋದು.

ನಾಟಕ ಮುಗಿದ ಮೇಲೆ ಕಳಚಿ ಇಡುವ ಪರಿ; ಎಲ್ಲದರಲ್ಲೂ ಶಿಸ್ತಿರಲಿ

ಗಂಡ, ಹೆಂಡತಿ, ಮಕ್ಕಳು ಅಂತಿರುವ ಒಂದು ಮನೆಯಲ್ಲಿ ಶಾಲೆ, ಕಾಲೇಜು, ಕೆಲಸ ಇತ್ಯಾದಿ ಅಂತ ಹೊರಗೆ ಅಡಿಯಿಡುವ ಪ್ರತೀ ದಿನದ ಬೆಳಿಗ್ಗೆ ಊಟದ ಡಬ್ಬಿ ಕಟ್ಟೋದೇ ಒಂದು ದೊಡ್ಡ ಕೆಲಸ. ಅಲಾರಂ ಹೊಡ್ಕೊಂಡ ಮೇಲೆ ಸರಿಯಾದ ಸಮಯಕ್ಕೇ ಎದ್ದರೂ, ಏನೇನೋ ಕಾರಣಕ್ಕೆ ಅಡುಗೆ ತಿಂಡಿ ನಿಧಾನವಾಗಿ ಬುತ್ತಿ ಕಟ್ಟೋದು ಸಾಧ್ಯವಾಗದೆ ಹೋಗುತ್ತದೆ. ಆಗ ಮನಸ್ಸಿನಲ್ಲಿ ಅಸಮಾಧಾನದ ಹೊಗೆ ಕಟ್ಟುತ್ತದೆ. ಅದೇ ಮನಸ್ಥಿತಿಯಲ್ಲಿ ಕಚೇರಿಗೆ ಹೋದರೆ ಗಾಯದ ಮೇಲೆ ಉಪ್ಪು ಎಂಬಂತೆ ಬಾಸ್ ಕಿರಿಕಿರಿ. ಅದೇ ಸಿಡಿಸಿಡಿ ಇಡೀ ದಿನ. ಮತ್ತೆ ಮನೆಗೆ ಬಂದ ಮೇಲೆ ಬಹುಶಃ ಟಿವಿ ಸೀರಿಯಲ್ ಗಲಭೆಯಿಂದ ಇನ್ನೂ ತಲೆ ಬಿಸಿ ಜಾಸ್ತಿಯಾಗಬಹುದು. ಒಂದು ಕಟ್ಟುವಿಕೆಯ ತಡ ಇಡೀ ದಿನದ ಮನಸ್ಥಿತಿ ಕಟ್ ಕಟ್ ಆಗುತ್ತೆ ನೋಡಿ. ಕಟ್ಟುವಿಕೆಯನ್ನು ಹಗುರವಾಗಿ ತೆಗೆದುಕೊಳ್ಳೋಕೆ ಆಗೋಲ್ಲ ಅಂತಾಯ್ತು.

ಇದೇ ನೆಪದಲ್ಲಿ ಹಲವು ಶ್ರಮಜೀವಿಗಳನ್ನು ನೆನಪಿಸಿಕೊಳ್ಳೋಣ. ಉಳುವಾ ಯೋಗಿಗೆ ಮಧ್ಯಾಹ್ನ ಊಟ ನೀಡುವ ಮನೆಯಾಕೆ ಕಟ್ಟುವ ಬುಟ್ಟಿಯನ್ನು ನೆನಪಿಸಿಕೊಳ್ಳಿ. ಒಗೆಯುವ ಬಟ್ಟೆಗಳನ್ನು ಕಟ್ಟಿಕೊಂಡು ಕತ್ತೆಯ ಮೇಲೆ ಹೊರೆಸಿಕೊಂಡು ಸಾಗುವ ಧೋಬಿಯನ್ನು ನೆನಪಿಸಿಕೊಳ್ಳಿ. ಟೊಂಕಕ್ಕೆ ಬಟ್ಟೆ ಕಟ್ಟಿಕೊಂಡು ಅಥವಾ ತಲೆಯ ಸುತ್ತ ಬಟ್ಟೆ ಕಟ್ಟಿಕೊಂಡು ಹೊರಗೆ ಕೆಲಸ ಮಾಡುವವರನ್ನು ನೆನಪಿಸಿಕೊಳ್ಳಿ. ಜೀವನದಲ್ಲಿ ಎಲ್ಲೆಲ್ಲೂ ಈ ಕಟ್ಟುಗಳು ಕಣ್ಣಿಗೆ ಬೀಳುತ್ತಲೇ ಇರುತ್ತದೆ ಅಲ್ಲವೇ?

ನಿಮಗೆ ಬಕೆಟ್ ಬಗ್ಗೆ ಗೊತ್ತಾ?, ಜೀವನದಲ್ಲಿ ಕೊಡದಂತಿರಬೇಕೆ? ಬಕೀಟಿನಂತಿರಬೇಕೆ?

ಸಿನಿಮಾಗಳಲ್ಲಿ ಈ ಕಟ್ಟುವಿಕೆ ಹೇಗೆ ಅಂತ ಒಂದೆರಡು ಉದಾಹರಣೆ ನೋಡೋಣ ಬನ್ನಿ. ಗಿರಿಕನ್ಯೆಯ "ಏನೆಂದು ನಾ ಹೇಳಲಿ, ಮಾನವನಾಸೆಗೆ ಕೊನೆಯಲ್ಲಿ" ಅನ್ನೋ ಹಾಡನ್ನು ನೆನಪಿಸಿಕೊಂಡು, ರಾಜ್ ಹಿಡಿದಿರುವ ಕೋಲಿಗೆ ಕಟ್ಟಿರುವ ಬುತ್ತಿ ಚೆನ್ನ. "ಶಿವ ಶಿವ ಎಂದರೆ ಭಯವಿಲ್ಲ" ಎಂದು ಹಾಡುತ್ತಾ ಸಾಗುವ ಸಿರಿಯಾಳನ ಕಟ್ಟಿರುವ ಕಟ್ಟಿಗೆ ಚೆನ್ನ. ಮಯೂರ ಸಿನಿಮಾದಲ್ಲಿ ರಾಜ್ ಕೈಕಾಲು ಕಟ್ಟಿ ಹಾಕಿ ನಂತರ ರಥಕ್ಕೆ ಕಟ್ಟಿ ಹಾಕಿ ಓಡಿಸಿಕೊಂಡು ಹೋಗುವ ದೃಶ್ಯ ನೆನಪಿದೆಯೇ? ಸಾಹಸ ಸಿಂಹ ಚಿತ್ರದಲ್ಲಿ ವಿಷ್ಣು ಅವರನ್ನು ಕಂಬಕ್ಕೆ ಕಟ್ಟಿ ಹಾಕಿ ಅವರ ಮೇಲೆ ದೊಡ್ಡ ಗಂಟೆಯನ್ನು ಮುಚ್ಚಿ ಅದನ್ನು ಬಾರಿಸಲು ಯತ್ನಿಸುವ ಸನ್ನಿವೇಶ, ಮುತ್ತಿನ ಹಾರ ಚಿತ್ರದಲ್ಲಿ ಕೈಕಾಲು ಕಟ್ಟಿ ಹಾಕಿ, ತಲೆಯನ್ನು ಬೋಳಿಸಿ ನೆತ್ತಿಯ ಮೇಲೆ ನೀರಿನ ಹನಿ ಬೀಳುವಂತೆ ಹಿಂಸಿಸುವ ದೃಶ್ಯ, ರಣಧೀರ ಕಟ್ಟುವ ಹಣೆಪಟ್ಟಿಗಳು ನೆನಪಿನಿಂದ ಮರೆಯಾಗೋದೇ ಇಲ್ಲ ಎನಿಸುತ್ತದೆ.

ಅಶ್ವಮೇಧ ಯಾಗದಲ್ಲಿ ಒಂದು ಭಾಗ ಎಂದರೆ ಪೂಜಿಸಲ್ಪಟ್ಟ ಕುದುರೆಯನ್ನು ಸ್ವೇಚ್ಛೆಯಾಗಿ ಅಡ್ಡಾಡಲು ಬಿಡುವುದು. ಕಪ್ಪಕಾಣಿಕೆ ನೀಡಿ ಸೋಲೊಪ್ಪಿಕೊಳ್ಳದೇ ಆ ಅಶ್ವವನ್ನು ಕಟ್ಟಿ ಹಾಕಿದವರು ಅಶ್ವದ ಜೊತೆ ಬಂದವರೊಂದಿಗೆ ಯುದ್ಧ ಮಾಡತಕ್ಕದ್ದು. ರಾಮಾಯಣದಲ್ಲಿ ಲವಕುಶರು ರಾಮನ ಸೈನ್ಯದ ವಿರುದ್ಧ ಹೋರಾಡಿದರು ಎಂಬ ಉಲ್ಲೇಖ ಇದೆ. ಬಭೃವಾಹನ ಪಾಂಡವರ ಅಶ್ವವನ್ನು ಕಟ್ಟಿ ಹಾಕಿ ಅರ್ಜುನನ ವಿರುದ್ಧ ಹೋರಾಡಿದ ಎಂಬ ಕಥೆ ಇದೆ. ಇನ್ನು ಈ ಕಟ್ಟುವಿಕೆ ಎಂಥ ಸಾಹಸ ಗಾಥೆಗೆ ಎಡೆಮಾಡಿಕೊಟ್ಟಿತು ಎಂಬುದಕ್ಕೆ ಭಗೀರಥನ ಗಂಗಾವತರಣಕ್ಕಿಂತ ಬೇರೆ ಉದಾಹರಣೆ ಇರಲಿಕ್ಕಿಲ್ಲ ಎನ್ನಬಹುದು.

ಇಲ್ಲಾ ಸ್ವಾಮಿ ಖಂಡಿತ ಇದೆ ಎಂದಿರಾ? ಹೌದು. ಸಗರನ ಮಕ್ಕಳು ಮುನಿವರ್ಯನ ಸಿಟ್ಟಿಗೆ ಗುರಿಯಾಗಿ ಬೂದಿಯಾದರು. ಭಗೀರಥ ಸಾವಿರಾರು ವರುಷಗಳ ಕಾಲ ತಪಸ್ಸು ಮಾಡಿ ಎರಡು ಹಂತದಲ್ಲಿ ಗಂಗೆಯನ್ನು ಭುವಿಗೆ ಕರೆತಂದು ಆ ಬೂದಿಯ ಬೆಟ್ಟದ ಮೇಲೆ ಹರಿಯುವಂತೆ ಮಾಡಿ ತನ್ನ ಹಿರಿಯರಿಗೆ ಸದ್ಗತಿ ತೋರಿದ ಎಂಬ ಸಾಹಸ ಖಂಡಿತ ಚಿಕ್ಕದಲ್ಲ. ಆದರೆ ಈ ಕಟ್ಟುವಿಕೆಯು ದ್ವಾಪರದಲ್ಲಿ ಒಂದು ವಂಶವನ್ನೇ ನಿರ್ಮೂಲನೆ ಮಾಡಿತು ಎಂದರೆ ಅದು ಕುರುವಂಶವೇ ಆಗಿರಬೇಕು ಅನ್ನೋ ಊಹೆ ಸರಿ ಬಿಡಿ. ದ್ರೌಪದಿ ಕಟ್ಟಿದ್ದ ಸೀರೆಯನ್ನು ಕಳಚಿದ್ದಕ್ಕೆ ಮತ್ತು ಆಕೆಯ ಕಟ್ಟಿದ್ದ ಮುಡಿಯನ್ನು ಹಿಡಿದೆಳೆದುದ್ದಕ್ಕೆ ತಾನೇ ಕುರುಕ್ಷೇತ್ರವಾಗಿದ್ದು? ದುಶ್ಯಾಸನನ ಬಿಸಿರಕ್ತ ಲೇಪಿಸಿದ ಮೇಲೆ ತಾನೇ ದ್ರೌಪದಿ ತನ್ನ ಮುಡಿ ಕಟ್ಟಿದ್ದು.

ತ್ರೇತಾಯುಗ ಮತ್ತು ದ್ವಾಪರ ಯುಗಗಳಲ್ಲಿ ಹೀಗಾಯ್ತು ಎಂದರೆ ಕಲಿಯುಗದಲ್ಲೇನೂ ಈ ಕಟ್ಟುವಿಕೆ ಕಡಿಮೆಯಿಲ್ಲ ಬಿಡಿ. ಒಂದು ಕಥೆಯ ಪ್ರಕಾರ ಅಹಂಕಾರಿ ಮತ್ತು ಕ್ರೂರಿ ಧನಾನಂದನನ್ನು ಸಿಂಹಾಸನದಿಂದ ಇಳಿಸಿ ಮತ್ತೋರ್ವ ರಾಜನನ್ನು ಕೂರಿಸುವ ತನಕ ತಾನು ಶಿಖೆಯನ್ನು ಕಟ್ಟುವುದಿಲ್ಲ ಎಂದೇ ಚಾಣಕ್ಯ ಶಪಥ ಮಾಡಿದ್ದನಂತೆ.

ಕಲಿಯುಗದ ಕಥಾನಕ ಮುಂದುವರೆಸಿದರೆ, ಸರ್ದಾರ್ಜಿಗಳು ತಲೆಗೆ ಟರ್ಬನ್ ಕಟ್ಟೋದು ನಿಮಗೆಲ್ಲಾ ಗೊತ್ತೇ ಇದೆ. ಗುರುದ್ವಾರದಲ್ಲಿ ನಡೆಯುವ ಲಂಗರ್ ನಲ್ಲಿ ಪಾಲ್ಗೊಳ್ಳಬೇಕು ಎಂದ ಗಂಡು, ಸಿಖ್ ಆಗಿಲ್ಲದೇ ಇದ್ದಲ್ಲಿ ಪಾರ್ಥನಾ ಮಂದಿರದಲ್ಲಿ ಪಾಲ್ಗೊಳ್ಳಬೇಕು ಎಂದಾಗ ತಲೆಗೆ ಏನಾದರೂ ಕಟ್ಟಿಕೊಳ್ಳಲೇಬೇಕು. ಇತರರಿಗೆ ಎಂದೇ ಗುರುದ್ವಾರದಲ್ಲಿ ಸ್ಕಾರ್ಫ್ ಗಳನ್ನೂ ಇಟ್ಟಿರುತ್ತಾರೆ. ಹಲವು ಬಾರಿ ಹೋಗಿದ್ದೇನೆ, ಹಾಗಾಗಿ ಗೊತ್ತು. ರಾಜಸ್ಥಾನಿಗಳು ತಲೆಗೆ ಕಟ್ಟಿಕೊಳ್ಳುವುದನ್ನು ಪಗರಿ ಎನ್ನುತ್ತಾರೆ. ನಮ್ಮಲ್ಲಿ ಕಟ್ಟಿಕೊಳ್ಳುವ ಮೈಸೂರು ಪೇಟ ಬಹಳ ಪ್ರಖ್ಯಾತ ಅಲ್ಲವೇ?

ಇತ್ಲಾಗೆ ತಲೆಗೂದಲು ಬಿರಿ ಹಾಕದೇ ಅತ್ಲಾಗೆ ಜಡೆ ಹೆಣೆಯುವುದಕ್ಕೂ ಸಮಯವಿರದೆ ಇರುವವರು ಒಂದೋ bobcut ಮಾಡಿಸಿರುತ್ತಾರೆ ಅಥವಾ ponytail ಕಟ್ಟುತ್ತಾರೆ. ನಾವೇನ್ ಕಡಿಮೆ ಅಂತ ಈಗ ಕೆಲವು ಗಂಡುಗಳೂ ponytail ಕಟ್ಟುತ್ತಾರೆ. ಈಗಿನವರು ಅಂತೇನಿಲ್ಲ ಖುರ್ಷಿದ್ ಬಾಟ್ಲಿವಾಲ, ಹರಿಹರನ್ ಅವರುಗಳೂ ಈ ರೀತಿ ponytail ಕಟ್ಟಿದ್ದಾರೆ.

ನಮ್ಮದು ಅಂತ ಒಂದು ಅಸ್ತಿತ್ವ ಇರಬೇಕು ಅಂತ ದೇಶ ಬಿಟ್ಟು ಹೊರದೇಶಕ್ಕೆ ಬಂದವರು ಆರಂಭದಲ್ಲಿ ಭಾರತೀಯರ ಒಂದು ಸಂಘ ಅಂತ ಕಟ್ಟಿಕೊಂಡರು. ವೈದ್ಯರು ತಮ್ಮದೇ ಆದ ವೈದ್ಯಸಂಘ ಕಟ್ಟಿಕೊಂಡರು. ಆನಂತರ ಹೀಗೆಯೇ ವೃತ್ತಿ/ ಆಸಕ್ತಿ ಇರುವ ತಮ್ಮ ತಮ್ಮದೇ ಸಂಘಗಳನ್ನು ಕಟ್ಟಿಕೊಂಡರು. ಅಂತರ್ಜಾಲ ಅಂತಾದ ಮೇಲೆ forum ಗಳು ಹುಟ್ಟಿಕೊಂಡವು. ಸಾಮಾಜಿಕ ತಾಣಗಳು ಹುಟ್ಟಿಕೊಂಡ, ಅದರಲ್ಲೂ ವಾಟ್ಸಪ್ ಹುಟ್ಟಿಕೊಂಡ ಮೇಲಂತೂ ಯಾವುದೋ ಒಂದು ಪೂಜೆ ಪುನಸ್ಕಾರ ಅಂದರೂ ಅಲ್ಲೊಂದು ಗುಂಪು ಕಟ್ಟಿಕೊಂಡು planning ಮಾತುಕತೆಗಳು ನಡೆಯುತ್ತದೆ.

ಮನೆ ಕಟ್ಟುವುದು, ಕನಸು ಕಟ್ಟುವುದು, ಸೇತುವೆಗಳನ್ನು ಕಟ್ಟುವುದು, ಮನೆಯ ಮುಂದೆ ತೋರಣ ಕಟ್ಟುವಿಕೆ ಹೀಗೆ ಏನೆಲ್ಲಾ ಕಟ್ಟುವುದು ಪ್ರಗತಿ/ಶುಭ ಅಂತಲೇ ಅಂದುಕೊಳ್ಳೋಣ. ಕೆಲವರು ತಮ್ಮ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ಸಾಕಿ ಸಲಹುತ್ತಾರೆ ಮತ್ತು ಎಷ್ಟೋ ಸಾರಿ ಅವರಿಂದಲೇ ನಿಂದಿತರಾಗುತ್ತಾರೆ. ಇದು ಖೇದನೀಯ. ಹಾಗಾಗಿ ಕಟ್ಟುವುದೆಲ್ಲಾ ಒಳ್ಳೆಯದೇ ಅಲ್ಲ. ಅಜೀರ್ಣವಾದಾಗ ಹೊಟ್ಟೆ ಕಟ್ಟುವುದು, ನೆಗಡಿಯಾದಾಗ ಮೂಗು ಕಟ್ಟೋದು, ಮಾತನಾಡಲಾಗದಂತೆ ಗಂಟಲು ಕಟ್ಟೋದು ಇವೆಲ್ಲಾ ಹಿಂಸಾತ್ಮಕ ,ಆದರೆ ತೀರಾ ಕೆಟ್ಟದ್ದೇನಲ್ಲ.

ಸಂಸ್ಥೆಗಳನ್ನು ಕಟ್ಟಿಕೊಂಡು ಸಮಾಜಘಾತುಕ ಕೆಲಸಗಳನ್ನು ಮಾಡುವುದು ಒಳಿತಲ್ಲ. ಗುಂಪುಗಳನ್ನು ಕಟ್ಟಿಕೊಂಡು ಸಮಾಜದಲ್ಲಿ ಭೀತಿ ಹುಟ್ಟಿಸುವಂತಹ ಕಾರ್ಯಗಳನ್ನು ಮಾಡುವುದು ಒಳಿತಲ್ಲ.

ಸಾಹಿತ್ಯವೋ, ಸಂಗೀತವೋ ಮತ್ಯಾವುದೋ ಕ್ಷೇತ್ರದ ಆಸಕ್ತರು ಕೈಜೋಡಿಸಿ ಕಾರ್ಯ ನಿರ್ವಹಿಸುತ್ತಿದ್ದರೆ ಸಾಧ್ಯವಾದರೆ ಕೈ ಜೋಡಿಸುವುದು ಉತ್ತಮ. ಏನೂ ಮಾಡದಿದ್ದರೂ ಸುಮ್ಮನೆ ಇದ್ದರೇ ಮಧ್ಯಮ. ಗುಂಪಿನಲ್ಲಿ ಸೇರಿಕೊಂಡು ಗಲಭೆ ಎಬ್ಬಿಸುವುದು ಅಧಮರ ಕೆಲಸ ಅಂತೀನಿ.

ನೀವೇನಂತೀರಿ?

English summary
There are so many things and emotions we use to tie in life. These tying will continue to be seen everywhere in life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X