ಕ್ಷೌರಿಕರ ಕೈಯಲ್ಲಿ ನನ್ನ ತಲೆಯೆಂಬ ರುಬ್ಬುಗುಂಡು!

Posted By: ಶ್ರೀನಾಥ್ ಭಲ್ಲೆ, ರಿಚ್ಮಂಡ್
Subscribe to Oneindia Kannada

"ಪ್ರಹ್ಲಾದನಾ ಪಿತ ಬಾಧಿಸುತಿರುವಾಗ ನಾರಸಿಂಹಾ ಎಂಬ ನಾಮವೇ ಕಾಯ್ತೋ" ಅಂತ ಗುರುಗಳು ಸಂಗೀತ ಪಾಠ ಹೇಳಿಕೊಡುತ್ತಿದ್ದರು. ನನ್ನಂಥಾ ವಿದ್ಯಾರ್ಥಿ ಗುರುಗಳು ಹೇಳಿಕೊಟ್ಟಂತೆ ಹೇಳ ಹೊರಟವ "ಪ್ರಹ್ಲಾದ ನಾಪಿತ ಬಾಧಿಸುತ್ತಿರುವಾಗ..." ಆಗ ಗುರುಗಳು "ಲೋ! ಅವಿವೇಕಿ! ಪ್ರಹ್ಲಾದನಿಗೆ ನಾಪಿತ ಬಾಧಿಸಲಿಲ್ಲವೋ, ಅವನ ಪಿತ ಬಾಧಿಸಿದ್ದು!" "ಗುರುಗಳೇ! ನಾಪಿತ ಅಂದ್ರೇನು?"

ಆ ನಾಪಿತನ ಕ್ಷೇತ್ರದ ಮಾತುಗಳನ್ನೇ ಇಂದು ಆಡ್ತಾ ಇರೋದು!

ಇದು ಒಂದು ಮೊಟ್ಟೆಯ ಕಥೆಯಲ್ಲ, ಹಲವು ಕೂದಲ ಕಥೆ!

ಕಾಲ ಒಂದಿತ್ತು... ಅಪ್ಪ ಕ್ಷೌರದ ಅಂಗಡಿ ಬಾಗಿಲಿಗೆ ಬಂದು ನನ್ನನ್ನು ಒಳಗೆ ಕಳಿಸಿ, ಆ ಕ್ಷೌರಿಕನಿಗೆ ಚಿಕ್ಕದಾಗಿ ಕತ್ತರಿಸು ಅಂತ ಹೇಳಿ ಹೊರಟುಹೋಗುತ್ತಿದ್ದರು. ಅಲ್ಲಿಂದ ಕನಿಷ್ಠ ಎರಡು ಘಂಟೆಗಳ ಕಾಲ ನಾನು ಕೂತಿದ್ದೆಡೆಗೇ ಕೂತಿರುತ್ತಿದ್ದೆ. ಯಾಕೆ? ಸರದಿ ಪ್ರಕಾರ ಕರೆಯೋದು ಅನ್ನೋ ಪದ್ಧತಿ ನಮ್ಮಲ್ಲಿ ಎಲ್ಲಿತ್ತು ಹೇಳಿ? ಅವನು ಯಾವಾಗ ಕರೀತಾನೋ ಆಗ ಹೋಗಿ ಸೀಟಿನ ಮೇಲೆ ಕೂರಬೇಕು ಅಷ್ಟೇ!

The pleasure of getting a haircut in barber shop

ನನಗಿಂತ ಮುಂಚೆ ಬಂದವರದ್ದು ಮುಗೀತಾ ಬಂದಂತೆ ನಾನು ಎದ್ದು ನಿಂತಾಗ, ಅವನೋ, ಕೈಯಲ್ಲಿರೋ ಕತ್ತರಿ ಅಥವಾ ಚಾಕುವಿನಲ್ಲೇ ಕೂತ್ಕೋ ಅಂತ ಸನ್ನೆ ಮಾಡ್ತಿದ್ದ. ಮೊದಲೇ ಚಿಕ್ಕವನು ನಾನು. ಎದುರಾಡೋ ಧೈರ್ಯ ಎಲ್ಲಿಂದ ಬರಬೇಕು? ಸರಿ ಆಯ್ತು ಇನ್ಯಾರೂ ಇಲ್ಲ ಅಂತ ಎದ್ದು ನಿಂತಾಗ ಮತ್ಯಾವನೋ ಬರ್ತಾನೆ. ಗಟ್ಟಿಯಾಗಿ ಮಾತನಾಡಿದವರೆಲ್ಲಾ ದಾದಾಗಳು ತಾನೇ? ಅವನು ಜೋರಾಗಿ ಮಾತನಾಡುತ್ತ ಒಳಗೆ ಬರ್ತಾನೆ, ಕುರ್ಚಿ ಏರ್ತಾನೆ ಅಷ್ಟೇ. ಎದ್ದು ನಿಂತವನ ನಾನು ಮತ್ತೆ ಕೂರಲೇಬೇಕು! ವಿಧಿಯಿಲ್ಲ.

ನನಗೋ ಅಷ್ಟು ಬೇಜಾರು ಖಂಡಿತ ಆಗುತ್ತಿರಲಿಲ್ಲ. ಯಾಕೆ ಅಂದ್ರೆ, ನಾನು ಸಾಮಾನ್ಯ ಹೋಗುತ್ತಿದ್ದುದೇ ಭಾನುವಾರ. ಅವನ ಅಂಗಡಿಯಲ್ಲಿ ಎಲ್ಲಾ ಥರ ಪೇಪರುಗಳು ಇರುತ್ತಿದ್ದವು. ಕಳೆದ ಎರಡು ವಾರದ್ದೂ ಸೇರಿ. ಅದರಲ್ಲಿ ಶುಕ್ರವಾರದ ಕನ್ನಡಪ್ರಭ'ದಿಂದ ಹಿಡಿದು ಭಾನುವಾರದ ರಾಮನ್'ವರೆಗೂ ಓದಿದ್ದೇ ಓದಿದ್ದು. ಅವನು ಕರೆಯೋಷ್ಟರಲ್ಲಿ ಅಷ್ಟೂ ಪೇಪರುಗಳನ್ನು ತಿರುವಿ ಹಾಕಿದ್ದಾಗಿರುತ್ತಿತ್ತು.

ಏನ್ ಕಣೇ, ನಾನು ಏನಾದ್ರೂ ಸ್ವಲ್ಪ ಹೆಲ್ಪ್ ಮಾಡ್ಲಾ?

ಅವನು ಕರೆದ ಮೇಲೆ ಸಿಂಹಾಸನ ಏರಿ ಕೂರದೆ, ಕುರ್ಚಿಯ ಕೈಗಳ ಮೇಲೆ ಇಡುತ್ತಿದ್ದ ಮಣೆಯನ್ನೇರಿ ಕೂರುತ್ತಿದ್ದೆ. ನಾವೇನು ಸಾಮಾನ್ಯ ಅಂದುಕೊಂಡಿರಾ? ಬೃಹದಾಕಾರ ಸ್ವಾಮಿ. ಅವನ ಸಹಾಯಕ್ಕೆ ಯಾರೂ ಇರುತ್ತಿರಲಿಲ್ಲ ಎಂದರೆ ಅವನೇ ನನ್ನ ಕೂದಲನ್ನು ಮುಟ್ಟುವ ಧೈರ್ಯ ತೋರುತ್ತಿದ್ದ. ಇಲ್ಲಾ ಎಂದರೆ ಸಾಮಾನ್ಯವಾಗಿ (ಪ್ರತೀ ಬಾರಿ) ಪ್ರೊಬೆಷನರಿ ಕೈಗೆ ನನ್ನ ತಲೆ ಗ್ಯಾರಂಟಿ!

The pleasure of getting a haircut in barber shop

ಒಮ್ಮೆ ಹೀಗಾಯ್ತು... ಬೇಸಿಗೆ ರಜೆಯಲ್ಲಿ ವಾರದ ದಿನದಲ್ಲಿ ಕ್ಷೌರಕ್ಕೆ ಹೋದೆ. ಯಾರೂ ಇಲ್ಲ! ಅರ್ಥಾತ್ ಕ್ಷೌರಿಕನೇ ಇಲ್ಲ. ಅಂಗಡಿ ತೆಗೆದಿದೆ ಆದರೆ ಅವನಿಲ್ಲ. ಆಗ ಮತ್ಯಾರೋ (ದೊಡ್ಡವರು) ಬಂದರು. ಅವರನ್ನು ಕಂಡ ಕೂಡಲೇ ಪಕ್ಕದ ಅಂಗಡಿಯವನು 'ಅವರು ಹೊರಗೆ ಹೋಗಿದ್ದಾರೆ, ಈಗ ಬರ್ತಾರೆ ಕೂತಿರಿ' ಅಂದ.

ಎಲಾ ಬಾಲವಿಲ್ಲದ ಕುನ್ನಿ! ನಾನು ಬಂದಿದ್ದು ನೋಡಿದರೂ ನನಗೇನೂ ಮಾಹಿತಿ ಕೊಡದೆ ಇವರಿಗೆ ಮಾತ್ರ ಹೇಳಿದೆಯಾ? ಏನ್ ಮಾಡೋದು ಹೇಳಿ, ಚಿಕ್ಕವರು ಎಲ್ಲ ಕಾಲಕ್ಕೂ ಎಲ್ಲ ವಯಸ್ಸಿನಲ್ಲೂ ನಗಣ್ಯ.

ದೊಡ್ಡವರು ಕಾಯಲಿಲ್ಲ, ಹೊರಟುಹೋದರು. ಆಮೇಲೆ ಅಂಗಡಿಯವನು ಬಂದ. ಹೊಸಾ ವಿಷಯ ಗೊತ್ತಾಯ್ತು. ಮದುವೆ ಮನೆಯ ಡೋಲು ವಾದಕ ಅವನು! ಅರ್ಥಾತ್ ಕ್ಷೌರದ ಜೊತೆ ಈ ಕೆಲಸವೂ ಇದೆ ಅವನದು. ಕತ್ತರಿಸೋದರ ಜೊತೆ ಚಚ್ಚೋದು ಕೂಡ. ಡೋಲು ತಂದು ಅಂಗಡಿ ಒಳಗೆ ಇಟ್ಟ. ನನ್ನನ್ನು ಕೂಡೋಕ್ಕೆ ಹೇಳಿ ಒಂದು ಬದಿಯಲ್ಲಿ ಕತ್ತರಿಸಲು ಆರಂಭಿಸಿದ. 'ಒಂದು ನಿಮಿಷ ಬಂದೆ' ಅಂತ ಹೊರಗೆ ಹೋದವ ಕಾಲುಘಂಟೆ ಪತ್ತೆಯೇ ಇಲ್ಲ. ನಾನು ಎದ್ದುಹೋಗೊಲ್ಲ ಅಂತ ಅವನಿಗೆ guarantee. ಆಮೇಲೆ ಬಂದವನ ಬಾಯಿಂದ ಸಿಗರೇಟ್ ವಾಸನೆ. ಏನಂಥಾ urgent ಅಂತೀನಿ!

ಅಂದೇ ಕೊನೆ ಆ ಅಂಗಡಿಗೆ. ಅಂದ್ರೆ ಮುಂದೆ ಕ್ಷೌರ ಮಾಡಿಸಲಿಲ್ಲ ಅಂತಲ್ಲಾ. ಇಂದಿಗೂ ಭಗವಂತ ತಲೆಗೂದಲು ಕೊಟ್ಟಿದ್ದಾನೆ, ಹೋಗ್ತಿದ್ದೀನಿ! ಬೇರೆ ಅಂಗಡಿಗೆ ಹೋಗಲು ಆರಂಭಿಸಿದೆ ಅನ್ನಿ!

ಈ ನಾಪಿತ ಸಿಕ್ಕಾಪಟ್ಟೆ ಮಾತುಗಾರ. ನನ್ನ ಜೊತೆ ಅಲ್ಲಾ, ಬೇರೆಯವರ ಜೊತೆ. ಊರಿನವರ ವಿಷಯವೆಲ್ಲಾ ಗೊತ್ತಿರುತ್ತೆ. ಅಂಗಡಿ ಒಳಗೆ ಬರುವವರೆಲ್ಲಾ ಅವನ ಪರಿಚತರೇ. ಅವನ ಕೈಲಿರೋ ನನ್ನ ತಲೆ ಒಂದು ರೀತಿ ರುಬ್ಬುಗುಂಡಿನಂತೆ. ತನಗೆ ಬೇಕಾದ ರೀತಿ ತಿರುಗಿಸುತ್ತಿದ್ದ. Razor ಅನ್ನು ಕೈಲಿ ಹಿಡಿದು ತಲೆಹಿಂಬದಿಯಲ್ಲಿ ಕೆರೆಯುವಾಗ ನನಗೋ ಮುಳುಮುಳು. ಅಲುಗಾಡಿದರೆ ಇಲ್ಲಾ ಬೈಸಿಕೊಳ್ಳಬೇಕು ಅಥವಾ ತಲೆಯ ಮೇಲೆ ಲೊಟ್ ಅಂತ ಮೊಟಕಿಸಿಕೊಳ್ಳಬೇಕು. ಅಲ್ಲಾ! ಇವನ ಕೈಲಿ ನಾನು ತಟ್ಟಿಸಿಕೊಳ್ಳೋದೇ? ಮನದಾಳದಲ್ಲಿ ದುಃಖ, ಮುಂದಿನ ಸಾರಿ ಬರೋ ತನಕ ನಿನ್ನ ಮುಖ ಮತ್ತೆ ನೋಡಲಾರೆ ಎಂಬ ಆಕ್ರೋಶದಿಂದ ಮನೆಗೆ ಬರ್ತಿದ್ದೆ.

ನಾನಿರುವುದೇ ಅರಿಯದ ವಯಸ್ಸಿನಿಂದ, ತುದಿಗಣ್ಣಿಂದ ನೋಡಿ ಕೂತ್ಕೋ ಅನ್ನೋ ವಯಸ್ಸಿನಿಂದ ಮುಂದುವರೆದು ನಾನೂ ಕೂಡ "ಬನ್ನಿ ಸಾರ್, ಕೂತ್ಕೊಳ್ಳಿ. ಐದು ನಿಮಿಷ ಅಷ್ಟೇ ಅನ್ನುವವರೆಗೂ (ದೇಹ) ಬೆಳೆದೆ."

ಕಾಲೇಜಿನ ದಿನಗಳಲ್ಲಿ ಇನ್ನೊಂದು ರೀತಿ. ತಲೆಕೂದಲು ಕತ್ತರಿಸಿಕೊಳ್ಳಬೇಕು ಎಂದರೆ ಒಂಥರಾ ಸಂಕಟ. ನೀಟಾಗಿ ಕೂದಲು ಕತ್ತರಿಸಿಕೊಂಡು ಲಕ್ಷಣವಾಗಿ ದಿರಿಸು ಧರಿಸಿ ಕಾಲೇಜಿಗೆ ಹೋದರೆ 'ಏನೋ ಉಗಾದಿ ಹಬ್ಬದ ಖಳೆ' ಅನ್ನೋ ರೀತಿ ನೋಡ್ತಿದ್ರು. ಇನ್ನು ಕಾಲೇಜಿನ ಹೆಣ್ ಮಕ್ಕಳು. ಕಟಿಂಗ್ ಮಾಡಿಸಿಕೊಂಡ 2-3 ದಿನಗಳು ಅವರ ಕಣ್ಣಿಗೆ ಬೀಳದಂತೆ ಓಡಾಡುತ್ತಿದ್ದೆ. ಯಾರೂ ನನ್ನನ್ನು ನೋಡ್ತಿರಲಿಲ್ಲ, ಆದರೆ ಎಲ್ರೂ ನನ್ನನ್ನೇ ನೋಡ್ತಿದ್ದಾರೆ ಅನ್ನೋ ಅರ್ಥವಿಲ್ಲದ ಭಾವ.

ಆ ದಿನಗಳಲ್ಲಿ ತಲೆಗೂದಲು ಕತ್ತರಿಸಿದ ಮೇಲೆ, ಶೇವ್ ಮಾಡ್ಲಾ ಸಾರ್ ಎಂದಾಗ ಏನೋ ಹೆಮ್ಮೆ. ಆದರೂ ಏನೋ ಕಾಡುತ್ತಿತ್ತು. ಚಿಕ್ಕವನಿರುವಾಗ, ಅವನು ನನ್ನನ್ನು ಬೇಗ ಕರೆಯದೆ ಇರುವಾಗ, ಅಲ್ಲಿರೋ ಪತ್ರಿಕೆಗಳನ್ನೆಲ್ಲಾ ಓದಿ ಎಂಜಾಯ್ ಮಾಡ್ತಿದ್ದೆ. ಈಗ ಅಂಗಡಿ ಒಳಗೆ ಹೋದ ಐದು ನಿಮಿಷದಲ್ಲಿ ನನ್ನ ಸರದಿ! ಬೇಕಿತ್ತಾ? ಇಲ್ಲ! ನನ್ನ ಕೆಲಸ ಮುಗಿಸಿಕೊಂಡು ಸೀಟಿನಿಂದ ಎದ್ದು ಹೊರಡುವಾಗ ಅಲ್ಲಿ ಎಲ್ಲಾದರೂ ಎರಡು ಜೊತೆ ಪುಟ್ಟಕಣ್ಣುಗಳು ನನ್ನ ಕಡೆ ನೋಡಿದರೆ ಮತ್ತೆ ಬಾಲ್ಯಕ್ಕೆ ಹೊರಟೇ ಹೋಗುತ್ತೇನೆ.

ಆಯ್ತು, ಅಲ್ಲಿಂದ ವಿದೇಶಕ್ಕೆ ಬಂದೆ. ದೊಡ್ಡ ಅಂಗಡಿ. ಝಗಮಗಿಸೋ ದೀಪಗಳು. ಹಲವಾರು ವಾರಪತ್ರಿಕೆಗಳು. ಸರದಿಯ ಪ್ರಕಾರ ಎಂಬ ಶಿಸ್ತು. ಇದರ ಜೊತೆ, ನಿಮಗೆ ಯಾರಾದರೂ preferred haircutter ಇದ್ದಾರಾ ಅಂತ ಬೇರೆ ಕೇಳ್ತಾರೆ. ಕೂದಲು ಕತ್ತರಿಸುವವರು ಹೆಂಗಳು. ಕೆಲವರು ಒರಟು, ಕೆಲವರು ಮೃದು, ಕೆಲವರಿಗೆ ನನ್ನ ಮಾತು ಅರ್ಥವಾಗೋದಿಲ್ಲ, ಕೆಲವರ ಮಾತು ನನಗೆ ಅರ್ಥವಾಗೋಲ್ಲ ಹೀಗೇ ಸಾಗಿತ್ತು ಜೀವನ. ಕೆಲವೊಮ್ಮೆ ಸಕತ್ ಕಟ್ ಎನಿಸಿದರೆ, ಕೆಲವೊಮ್ಮೆ ಒಂದು ಕಡೆ ಕೂದಲು ಉದ್ದ ಇದ್ದ ಹಾಗಿದೆಯೆಲ್ಲಾ ಎನಿಸುತ್ತಿತ್ತು.

ಕಾಲ ಮುಂದುವರೆದಂತೆ, ಈಗ ಅಂಗಡಿ ಹೊಕ್ಕ ತಕ್ಷಣ ಹಲವಾರು ಗಿರಾಕಿಗಳು ಕಾಯುತ್ತಾ ಇದ್ದರೂ ಒಬ್ಬರೂ ಒಂದು ಪುಸ್ತಕ ಮುಟ್ಟೋಲ್ಲ. ಎಲ್ಲರ ಕೈಲೂ ಫೋನು. ನಾನೊಬ್ಬನೇ ಇರಬೇಕು ಪುಸ್ತಕ ಓದುವವನು!

ಮೊನ್ನೆ ಅಂಗಡಿಗೆ ಹೋದಾಗ ಕಂಡ ದೃಶ್ಯ. ಸಿಕ್ಕಾಪಟ್ಟೆ ತಲೆಗೂದಲು ಮತ್ತು ಗಡ್ಡ ಬಿಟ್ಟವನು ಅಲ್ಲಿಗೆ ಬಂದಿದ್ದು ಬರೀ ಟ್ರಿಮ್ ಮಾಡಿಸಿಕೊಳ್ಳಲು ಅಷ್ಟೇ. ಅವನಿಗೆ service ಕೊಟ್ಟ ಗಂಡಸು. ಪೂರಾ ಬೋಳು ತಲೆ. ಆತನೇ ನನ್ನ ಹೆಸರನ್ನೂ ಕರೆದ. ಎಷ್ಟೋ ವರ್ಷಗಳ ನಂತರ ನನ್ನ ತಲೆಗೂದಲು ಕತ್ತರಿಸಲು / ಮುಟ್ಟಲು ಒಬ್ಬ ಗಂಡಸು ಮುಂದೆ ಬಂದಿದ್ದ ಅಂದ್ರೆ ಹೇಗಿರುತ್ತೆ.

ಕೂದಲು ಕತ್ತರಿಸುವಾಗ ಯಥಾ ಪ್ರಕಾರ ರುಬ್ಬುಗುಂಡು ಆದರೆ ಜೋರಾಗಿ ಅಲ್ಲ ಮೃದುವಾಗಿ. ಮಾತಿಲ್ಲ ಕಥೆಯಿಲ್ಲದ ಮಾನವ.

ಎಷ್ಟೆಲ್ಲಾ ಸರ್ತಿ ಈ ಹಿಂದೆ ನನ್ನ ತಲೆಯನ್ನು ನಾಪಿತನ ಕೈಯಲ್ಲಿ ಇರಿಸಿದ್ದೇನೋ ಲೆಕ್ಕವಿಲ್ಲ. ಆದರೆ ಈ ಬಾರಿ ಸ್ವಲ್ಪ ಭಿನ್ನವಾಗಿತ್ತು. ನನ್ನ ತಲೆಯಲ್ಲಿ ಯಾವ ನರ ಮುಟ್ಟಿದನೋ ಈ ನರಮಾನವ, ನರನರಗಳಲ್ಲಿ ಸೇರಿ ಹೋಗಿದ್ದ ನೆನಪುಗಳನ್ನು ದರದರಾ ಅಂತ ಹೊರಗೆ ಎಳೆದಿದ್ದ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Barber shops are not just place to get haircut, but they are creators of several interesting stories. Just keep your eyes and ears open, as the hair cut to pieces, several stories get generated. Srinath Bhalle from Richmond, USA goes down the memory lane.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ