ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಮುಂದೆ ಬನ್ನಿ ಇನ್ನಾದರೂ ಜೀವನದಲ್ಲಿ ಮುಂದೆ ಬನ್ನಿ

|
Google Oneindia Kannada News

ಬೆಂಗಳೂರಿನ ರೋಡಲ್ಲೆಲ್ಲಾ ಹಾಡು ಹಾಡಿಕೊಂಡು, ಅಡ್ಡಾಡಿಕೊಂಡು ಹೋದ ಕೆಂಪು ಬಸ್ಸಿನ ಸನ್ನಿವೇಶ ಮತ್ತು ಕಮಲ್ ಹಾಸನ್ ಅಭಿನಯದ ಈ ಹಾಡು ಯಾರಿಗೆ ತಾನೇ ಗೊತ್ತಿಲ್ಲ? 'ಮುಂದೆ ಬನ್ನಿ' ಎಂಬ ಹಾಡಿನ ಕರೆಯಿಂದ ಪ್ರೇರಿತ ನಾನು, ಮುಂದೆ ಮುಂದೆ ಬಂದೂ ಬಂದೂ ಒಮ್ಮೆ Indian Ocean ಹತ್ತಿರ ಬಂದು ಬಿಟ್ಟೆ.

ಉತ್ತರಾಭಿಮುಖಾವಾಗಿ ಹೋದರೆ Up ಇರುತ್ತೆ ಅಂತ ಅಂದುಕೊಂಡು ದಕ್ಷಿಣಾಭಿಮುಖವಾಗಿ ಸಾಗಿದ್ದೆ Down ಇರುತ್ತೆ ಅಂತ ಮುಂದೆ ಮುಂದೆ ಬಂದಿದ್ದೆ. ಇದೆಲ್ಲಾ ಆದ ಮೇಲೆಯೇ ಒಂದು ದಿನ ಪೆಸಿಫಿಕ್ ಮಹಾ ಸಮುದ್ರದ ಮೇಲೆ ಹಾರಿ, ಅಟ್ಲಾಂಟಿಕ್ ಮಹಾಸಮುದ್ರದ ಸಮೀಪದ ಊರಿನಲ್ಲಿ ಇಳಿದುಕೊಂಡಿದ್ದು. ಈಗ ಸ್ವಲ್ಪ ಗಂಭೀರವಾಗಿ ಒಂದಿಷ್ಟು ವಿಚಾರ ನೋಡೋಣ.

ಹಲವು ವರ್ಷಗಳ ಹಿಂದೆ ನನ್ನ ಸ್ನೇಹಿತರೊಬ್ಬರು ಹೇಳಿದ್ದ ಮಾತುಗಳು ಈಗಲೂ ಹಚ್ಚಹಸಿರಾಗಿ ನೆನಪಿದೆ.
ಅಂದು:
ಮುಂದೆ ಗುರಿಯಿತ್ತು
ಹಿಂದೆ ಗುರುವಿದ್ದ
ಸಾಗುತ್ತಿತ್ತು ರಣಧೀರರ ಗುಂಪು

ಇಂದು:
ಮುಂದೆ ಗುರಿಯಿಲ್ಲ
ಹಿಂದೆ ಗುರುವಿಲ್ಲಾ
ಸಾಗುತ್ತಿದೆ ರಣಹೇಡಿಗಳ ಗುಂಪು

Srinath Bhalle Column: Come Forward and Keep Moving in Life

ಛಲವೇ ನಾವು ಮುಂದೆ ಸಾಗಲು ದಾರಿದೀಪ
ಏನಾದರೂ ಮಾಡಬೇಕು ಎಂಬ ಉದ್ದೇಶ ಅಥವಾ ಛಲವೇ ನಾವು ಮುಂದೆ ಸಾಗಲು ದಾರಿದೀಪ. ನಾ ತಿಳಿದಂತೆ ಉದ್ದೇಶ ರಹಿತ ಜೀವನ ಯಾರೂ ಸಾಗಿಸುತ್ತಿಲ್ಲ. ಈ ಉದ್ದೇಶಗಳು ಅಥವಾ ಗುರಿ ಸದಾ ಮುಂದೆಯೇ ಏಕೆ ಇರುತ್ತದೆ? ಹಿಂದೇಕೆ ಇರುವುದಿಲ್ಲ? ಸಿಂಪಲ್ ವಿಷಯ ಅಲ್ಲವೇ? ಮುಂದೆ ಗುರಿ ಇರುವುದರಿಂದ ಮುಂದೆ ಸಾಗುತ್ತಾರೆ, ಹಿಂದಕ್ಕೆ ಇದ್ದರೆ ಹಿಂದೆ ನಡೆಯಬೇಕು ಅಲ್ಲವೇ? ಪ್ರಶ್ನೆ ಇಷ್ಟು ಸರಳ ವಿಷಯ ಆಗಿದ್ದರೆ ಯಾಕೆ ಉದ್ಭವವಾಗುತ್ತಿತ್ತು?

ಗುರಿ ಹಿಂದೆ ಇದೆ ಅಂದ್ರೆ, ನಾವು ಮುಂದೆ ಸಾಗಿ ಬಂದಿದ್ದೇವೆ ಅಂತ ಅಲ್ಲವೇ? ಅರ್ಥಾತ್ ಗುರಿ ದಾಟಿಯಾಗಿದೆ ಅಂತ. ಗುರಿಗಳು ಸದಾ ಹಿಂದೆ ಇದೆ ಅಂದ್ರೆ ಇದರಲ್ಲಿ ಎರಡು ವಿಷಯಗಳಿವೆ. ಒಂದು, ನೀವು ಎಲ್ಲವನ್ನೂ ಸಾಗಿ ಮುಂದೆ ಇದ್ದೀರಿ ಅರ್ಥಾತ್ ಅಂದುಕೊಂಡ ಕೆಲಸ ಸಾಧನೆಯಾಗಿದೆ ಅಂತ. ಎರಡು, ನಿಮ್ಮ ಪಾಡಿಗೆ ನೀವು ಸಾಗುತ್ತಿದ್ದೀರಿ, ಯಾವ ಗುರಿಗಳೂ ಯಾವುದೂ ಸಾಧನೆಯಾಗದೆ ಹಿಂದೆ ಬಿದ್ದು ಹೋಗಿದೆ ಅಂತ. ಕೆಲಸಗಳನ್ನು ಮುಂದಕ್ಕೆ ಹಾಕುತ್ತಾ ಸಾಗಿದರೆ, ನಿಮ್ಮೊಂದಿಗೇ ಇದ್ದು ಗಮನ ಸಿಗದೇ ಸುಸ್ತಾಗಿ, ಗುರಿಗಳು ಹಿಂದೆ ಬಿದ್ದು ಹೋಗುವುದರಲ್ಲಿ ಯಾವ ಅನುಮಾನವೂ ಇಲ್ಲ.

ನೀವು ಗುರುವಾಗುವ ದಿನ
ಜೀವನ ಅಂದ್ರೆ ಮೂರು ದಿನದ ಬಾಳು ಅಂತಾರೆ. ನಾನು ಇದನ್ನು ಮೂರು ಹೊತ್ತಿಗೆ ಇಳಿಸಿಬಿಡುತ್ತೇನೆ. ವಿಷಯವನ್ನು ಸರಳವಾಗಿ ಅರ್ಥ ಮಾಡಿಕೊಳ್ಳಬೇಕು ಅಂತ ಒಂದು ದಿನದ ಮೂರು ಹೊತ್ತಿಗೆ ಇಳಿಸಿದ್ದೇನೆ ಅಷ್ಟೇ. ಪೂರ್ವಾಭಿಮುಖವಾಗಿ ಸಾಗುವ ಈ ಜೀವನದಲ್ಲಿ ನೆರಳು ನಮ್ಮ ಹಿಂದೆ ಇರುತ್ತದೆ. ಯಾನದ ಆರಂಭದಲ್ಲಿ ಮುಂದೆ ಗುರಿ ಇರಲಿ, ನೆರಳಾಗಿ ಗುರುವು ಹಿಂದೆ ಇರುತ್ತಾನೆ. ಒಂದು ಹಂತದಲ್ಲಿ ಆ ಗುರಿಯನ್ನು ತಲುಪಿದಾಗ ಗುರು ನಿಮ್ಮಲ್ಲಿ ಒಂದಾಗುತ್ತಾನೆ. ಇದುವೇ ಜೀವನದ ಮಧ್ಯಂತರ. ನೀವು ಗುರುವಾಗುವ ದಿನ. ನಂತರದ ಭಾಗದಲ್ಲಿ ನೆರಳು ಮುಂದೆ ಇರುತ್ತದೆ. ಅರ್ಥಾತ್ ನೀವು ಗುರುವಾಗಿ ಮುನ್ನಡೆದು ಇತರರಿಗೆ ಮಾರ್ಗದರ್ಶಕರಾಗಿರಬೇಕು ಅಂತ. ಕಲಿಯೋಣ, ಅರ್ಥೈಸಿಕೊಳ್ಳೋಣ, ಕಲಿಸುತ್ತಾ ಮುಂದೆ ಸಾಗುವ ಯತ್ನವನ್ನು ನಿರಂತರವಾಗಿ ಮಾಡೋಣ.

ಮುಂದೇನು ಮಾಡಬೇಕೋ ಅಂತಿದ್ದೀಯಾ?
ಸರಿ, ಈಗ ಮುಂದ? ಓದಿನ ಜೀವನದಲ್ಲಿ ಬೇಕಾದಷ್ಟು ಮೈಲಿಗಲ್ಲುಗಳು ಇವೆ. ಹೈಸ್ಕೂಲ್ ಮುಗಿದ ಮೇಲೆ ಕೇಳಿ ಬರುವ ಪ್ರಶ್ನೆ 'ಮುಂದೇನು ಮಾಡಬೇಕೋ ಅಂತಿದ್ದೀಯಾ?'. ಸೈನ್ಸ್, ಕಾಮರ್ಸ್ ಅಥವಾ ಆರ್ಟ್ಸ್ ಇವುಗಳಲ್ಲಿ ಯಾವ ದಿಕ್ಕು ಅಂತ ಪ್ರಶ್ನೆಯ ಉದ್ದೇಶ. ಈ ಪ್ರಶ್ನೆ ಬರೋದು ಬೇರೆಯವರಿಂದ, ಮಾತಾಪಿತೃಗಳಿಂದ ಅಲ್ಲ. ಏಕೆಂದರೆ ಪೋಷಕರು ನಿರ್ಧಾರ ಮಾಡಿಯೇ ಇರುತ್ತಾರೆ ಅಲ್ಲವೇ? ಸೈನ್ಸ್ ಅಂತಾದರೆ ಎರಡನೆಯ ಪಿಯುಸಿ ಹಂತದಲ್ಲಿ ಮೂಡಿ ಬರುವ ಪ್ರಶ್ನೆಯ ಸ್ವರೂಪ ಮತ್ತೂ ಭಿನ್ನ.

ಬುದ್ದಿವಂತ ವಿದ್ಯಾರ್ಥಿಯಾಗಿದ್ದು, ಅಂಕಗಳೂ overflow ಆಗುವಷ್ಟು ಇದ್ದರೆ, 'ಮುಂದೇನು ಮಾಡಬೇಕೋ ಅಂತಿದ್ದೀಯಾ?' ಎಂಬುದು ಡಾಕ್ಟ್ರರೋ? ಇಂಜಿನಿಯರೋ? ಅಂತ ಅರ್ಥ. ಸೈನ್ಸ್ ತೆಗೆದುಕೊಂಡು ಕಡಿಮೆ ಅಂಕ ಪಡೆದಿದ್ದರೆ 'ಮುಂದೇನು?' ಎಂಬುದು ಒಂದು ರೀತಿ ಸಂತಾಪ ಸೂಚಕ ಎನ್ನಬಹುದು. ಇಂಜಿನಿಯರೂ ಅಲ್ಲಾ, ಡಾಕ್ಟ್ರೂ ಅಲ್ಲ ಅಂದ ಮೇಲೆ ಏನಪ್ಪಾ ನಿನ್ನ ಜೀವನ? ನಿನ್ನ ಗತಿ ಮುಂದೇನು? ಎಂಬ ಸಂತಾಪ ಸೂಚಕ.

ಗಂಡು ಹುಡುಕ್ತಾ ಇದ್ದೀವಿ
ಇಂಜಿನಿಯರಿಂಗ್ ಮುಗೀತು ಅಂದ್ರೆ 'ಮುಂದೇನು ಮಾಡಬೇಕೋ ಅಂತಿದ್ದೀಯಾ?' ಎಂಬ ಸ್ವರೂಪ ಮತ್ತೂ ಭಿನ್ನ. ಇಲ್ಲೇ ಸಿಕ್ಕ ಕೆಲಸಕ್ಕೆ ತೃಪ್ತಿ ಪಡ್ತೀಯೋ? ಅಥವಾ ಎಂಎಸ್ ಅಂತ ಅಮೆರಿಕಕ್ಕೆ ಹೋಗ್ತೀಯೋ ಅಂತ. ಇನ್ನು ಹೆಣ್ಣುಮಕ್ಕಳ ವಿಷಯವೇ ಬೇರೆ. ಡಿಗ್ರಿ ಆಯ್ತು ಅಂತ ಇರುವಾಗ ಈ 'ಮುಂದೇನು?' ಎಂಬುದು ಪೋಷಕರಿಗೆ ಉದ್ದೇಶಿಸಿರುತ್ತದೆ. ಆ ಮುಂದೇನು ಎಂಬುದಕ್ಕೆ ಅವರ ನಿರೀಕ್ಷೆ 'ಇನ್ನೇನು ಮದುವೆ ಅಷ್ಟೇ!' ಅಂತಾನೋ ಅಥವಾ 'ಗಂಡು ಹುಡುಕ್ತಾ ಇದ್ದೀವಿ' ಎಂಬುದೇ ಉತ್ತರದ ನಿರೀಕ್ಷೆ. ಇನ್ನೂ ಓದಬೇಕು ಅಂತಿದ್ದಾಳೆ ಅಂತೇನಾದರೂ ಉತ್ತರ ಬಂದರೆ ಅಲ್ಲಿಗೆ ಪ್ರಶ್ನೆಗಳು ನಿಂತು ಉಪದೇಶಗಳು ಆರಂಭ. ಈ 'ಮುಂದ'ಗಳ ಸ್ವರೂಪ ಬಹಳಾ ಇದೆ ಅದರಲ್ಲೂ ಇಂದಿನ ದಿನದ ಸ್ವರೂಪ ಜೀರ್ಣ ಮಾಡಿಕೊಳ್ಳಲಾಗದ್ದೇ ಆಗಿರುತ್ತದೆ.

ಪಾಪ, ಮುಂದೆ ಹೇಗಂತೆ?
ಈ ಮುಂದೇನು ಎಂಬುದರ ಮತ್ತೊಂದು ಆಯಾಮಕ್ಕೆ ಸಾಗೋಣ. ಒಂದು ಸಂಸಾರ ನೆಮ್ಮದಿಯಾಗಿ ಸಾಗುತ್ತಿರುತ್ತದೆ ಅಂದುಕೊಳ್ಳಿ. ಮನೆಯ ಯಜಮಾನ ಅಕಸ್ಮಾತ್ ಹರಿಪಾದದಲ್ಲಿ ಲೀನನಾದರೆ, ಮನೆಯ ಪರಿಸ್ಥಿತಿಯ ಆಧಾರಿತ 'ಪಾಪ, ಮುಂದೆ ಹೇಗಂತೆ?' ಎಂಬ ಪ್ರಶ್ನೆ ಎದುರಾಗುತ್ತದೆ. ಮುಂದಿನ ದಾರಿ ಹೇಗೆ ಎಂಬುದೇ ಗೊತ್ತಾಗದೆ ಹೊಸ ಜೀವನ ಆರಂಭಿಸಿರುವ ಮಂದಿ, ಒತ್ತಡದಿಂದ depressionಗೆ ಒಳಗಾಗುವವರು, ನಿಂತು ನಿಭಾಯಿಸುವೆ ಎಂಬ ಛಲದಂಕಮಲ್ಲರು ಎಂಬೆಲ್ಲಾ ರೀತಿಯ ಸಂಸಾರಗಳನ್ನು ನೋಡಿಕೊಂಡೇ ಬಂದಿದ್ದೇವೆ ಅಲ್ಲವೇ? ಒಂದು ಕಡೆ ತೀರಿಹೋದವರ ವಯಸ್ಸು ಗಣನೆಗೆ ಬಂದರೆ, ಹಲವೊಮ್ಮೆ ಉಳಿದುಕೊಂಡವರ ವಯಸ್ಸು ಮತ್ತು ಪರಿಸ್ಥಿತಿಗಳು ಎದುರಿಗೆ ಬಂದು ಕೂರುತ್ತದೆ.

ನಡೆ ಮುಂದೆ, ನುಗ್ಗಿ ನಡೆ ಮುಂದೆ
ಇಂಥಾ ಹಂತದಲ್ಲೇ ಎಲ್ಲರೂ ಪಾಲಿಸಬೇಕಿರುವ ಒಂದು ಧನಾತ್ಮಕ ವಿಚಾರ ಎಂದರೆ 'ಏನಾಗಲಿ ಮುಂದೆ ಸಾಗು ನೀ' ಎಂಬುದು. ಅಯ್ಯೋ ಹಿಂಗಾಯ್ತು ಅಂತ ಕೊರಗಿಕೊಂಡು ಕೂರದೇ, ಆಗಿದ್ದಾಯ್ತು ಅಂತ ಅಂದುಕೊಂಡು ಮುಂದೆ ಸಾಗಬೇಕು ಎಂಬುದು ನೀತಿ. "ಆದದ್ದೆಲ್ಲಾ ಒಳಿತೇ ಆಯಿತು' ಎಂದುಕೊಳ್ಳುವುದು ಆಧ್ಯಾತ್ಮ. ಹಂತಹಂತವಾಗಿ ಬೆಳೆಯೋಣ. 'ನಡೆ ಮುಂದೆ, ನುಗ್ಗಿ ನಡೆ ಮುಂದೆ' ಎನ್ನುತ್ತಾ ಸಾಗಲೇಬೇಕು. ಇದನ್ನು ಯುದ್ಧ ನೀತಿಯಲ್ಲೂ ಕಾಣಬಹುದು. 'ಆಕ್ರಮಣ' ಎಂದು ಕೂಗುತ್ತಾ ಮುಂದೆ ನುಗ್ಗುವುದನ್ನು ಟಿವಿ ಧಾರಾವಾಹಿಗಳಲ್ಲಿ ನೋಡಿದ್ದೇವೆ. ಭೀತಿಯಿಂದ ಹಿಂದೆ ತಿರುಗಿ ಓಡಿದವನು ಉತ್ತರಕುಮಾರ. ವೈರಿಪಡೆಯು ಸೋಲನ್ನು ಅನುಭವಿಸಿ ಹಿಂದಿರುಗಿ ಓಡಿದರು ಎಂಬ ವಿಷಯವನ್ನು ಓದುವಾಗಲೂ, ನಮ್ಮ ಮನದಲ್ಲಿ ಅಚ್ಚಳಿಯದೆ ಕೂರುವ ವಿಷಯವೇ ಮುಂದೆ ಸಾಗೋದು ಎಂದರೆ ಪ್ರಗತಿ ಅಂತ.

ಹಿಂದೆ- ಮುಂದೆಗಳನ್ನು ಸಮಾನವಾಗಿ ಸ್ವೀಕರಿಸಿ
ಮುಂದೆ ಸಾಗುವಾಗ ಹಿಂದಕ್ಕೆ ನೋಡಬಾರದು ಎಂಬುದನ್ನು ತೀರಿಕೊಂಡವರ ಸನ್ನಿವೇಶದಲ್ಲಿ ಮಾಡುವ ಕೆಲಸಗಳಲ್ಲಿ ಒಂದು ಕಾರ್ಯ ಮಾಡುವಾಗ ಹೇಳುವ ಒಂದು ಸನ್ನಿವೇಶವಿದೆ. ಅದನ್ನು ಅಲ್ಲೇ ಬಿಟ್ಟು ಮತ್ತೊಂದು ರೀತಿ ಯೋಚಿಸಿದರೆ, ಮುಂದಕ್ಕೆ ಸಾಗಿರುವಾಗ ಒಮ್ಮೆ ನಡೆದು ಬಂದ ಹಾದಿಯನ್ನು ನೋಡಿಕೊಳ್ಳಬೇಕು ಎಂದೂ ಹೇಳುತ್ತಾರೆ. ಹಾಗೆ ನೋಡಿಕೊಂಡಾಗ ಸಾಧನೆಯ ಬಗ್ಗೆ ಹೆಮ್ಮೆ ಇರಲಿ ಆದರೆ ಹಿಂದಕ್ಕೇ ಉಳಿದುಕೊಂಡವರ ಬಗ್ಗೆ ಅಸಡ್ಡೆ ಬೇಡ ಅಷ್ಟೇ.

ಹಿಂದೆ ಸಾಗಿದ್ದು ಮೆಲುಕು ಹಾಕಲು ಯೋಗ್ಯ. ಹಿಂದೆ ನಡೆದದ್ದನ್ನು ನೆನೆಸಿಕೊಂಡು ಕೊರಗುವುದನ್ನು ಕಡಿಮೆ ಮಾಡಿಕೊಳ್ಳೋಣ. 'ಇಂದಿಗಿಂತ ಅಂದೇನೇ ಚೆಂದವು' ಅಂತ ಹೇಳೋದನ್ನು ಕೇಳೋದಕ್ಕೆ ಚೆನ್ನಾಗಿದೆ ಅಷ್ಟೇ. ಆದರೆ ಈ ಮಾತುಗಳು ಇಂದಿನವರ ಜೊತೆ ಬೆರೆಯುವುದನ್ನು ಅಡ್ಡಿಪಡಿಸಿ, ಎರಡು ಜನರೇಶನ್ ನಡುವೆ ಕಂದಕ ಏರ್ಪಡಿಸುತ್ತದೆ. ಜೋಕಾಲಿಯಾಡುವಾಗ ಮುಂದಕ್ಕೆ ಹೋದರೂ, ಹಿಂದಕ್ಕೆ ಹೋದರೂ ಸಮನಾಗಿ ಆನಂದಿಸುವಂತೆ, ಜೀವನ ಜೋಕಾಲಿಯಲ್ಲಿ ಈ ಹಿಂದೆ- ಮುಂದೆಗಳನ್ನು ಸಮಾನವಾಗಿ ಸ್ವೀಕರಿಸಲು ಯತ್ನ ಮಾಡೋಣ. ಸಾಧನೆ ಆಮೇಲಿನ ವಿಷಯ.

English summary
Srinath Bhalle Column: The elders have said that keep moving in life it is a sign of progress in life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X