• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೇಳೈಸೋ ಮೇಳಕ್ಕೆ ಹೋಗಿಬರೋಣ ಬನ್ನಿ

|

Synchronization (Sync) ಎಂಬ ಪದದ ಅರ್ಥ ಮೇಳೈಸುವಿಕೆ ಅಂತ. ಒಂದು ಕೆಲಸ ಆಗಬೇಕಾದಾಗ ಅದಕ್ಕೆ ಹೊಂದಿಕೊಂಡಂಥ ಎರಡು ಅಥವಾ ಹೆಚ್ಚು ಕ್ರಿಯೆಗಳು ಕ್ರಮಬದ್ದವಾಗಿ, ಲಯಬದ್ಧವಾಗಿ, ಏಕಕಾಲದಲ್ಲಿ ಉಂಟಾಗಿ ಕಾರ್ಯ ಪೂರ್ಣಗೊಳ್ಳುವ ಕ್ರಿಯೆಗೆ ಮೇಳೈಸುವಿಕೆ ಎನ್ನುತ್ತಾರೆ.

ಒಂದು ಸಣ್ಣ ಉದಾಹರಣೆ ಕೊಡುತ್ತೇನೆ. ಇಬ್ಬರ ಭೇಟಿಯಾದಾಗ ಹಲೋ ಎನ್ನುತ್ತಾ ಒಬ್ಬಾತ ಕೈ ಚಾಚುತ್ತಾನೆ. ಕಾರ್ಯ sync ಆದರೆ ಆ ಕಡೆಯ ಮತ್ತೊಬ್ಬನೂ ಕೈ ಚಾಚಿ ಕೈ ಕುಲುಕಿದಲ್ಲಿ ಕಾರ್ಯ ಸಮರ್ಪಕವಾಗಿ ಪೂರ್ಣವಾಗುತ್ತದೆ. Sync ಆಗದೇ ಹೋದಾಗ ಏನಾಗುತ್ತೆ? ಇಬ್ಬರ ಭೇಟಿಯಾಗಿ ಪರಿಚಯವಾದಾಗ ಮೊದಲಾತ ಕೈ ಚಾಚದೆ ಇದ್ದರೆ ಅಥವಾ ಮೊದಲಿಗ ಕೈಚಾಚಿದ್ದರೂ ಆ ಮತ್ತೊಬ್ಬ ಕೈ ನೀಡದೇ ಹೋದಾಗ ಅವರಲ್ಲೇನೋ ಮನಸ್ತಾಪ ಇದೆಯೇನೋ ಎಂಬ ಅರ್ಥ ಬರುತ್ತದೆ. Sync ಆಗದೇ ಹೋದಾಗ ಎಡ್ವಟ್ಟಾಗೋದಕ್ಕೆ asynchronus ಅನ್ನಲೇ ಬೇಕಿಲ್ಲ.

ಸ್ಪಾಟ್ ಲೈಟ್ ಅಥವಾ ಲೈಮ್ ಲೈಟ್ ಸಿಂಡ್ರೋಮ್

ಮತ್ತೊಂದು ಪುಟ್ಟ ಉದಾಹರಣೆ. ಇಟ್ಟಿಗೆಗಳನ್ನು ಜೋಡಿಸಿರುವ ಜಾಗದಿಂದ ಒಬ್ಬ ಎರಡು ಇಟ್ಟಿಗೆಗಳನ್ನು ತೆಗೆದುಕೊಂಡು ಕೊಂಚ ದೂರದಲ್ಲಿರೋ ಮತ್ತೊಬ್ಬನಿಗೆ ಎಸೆಯುತ್ತಾನೆ. ಅವನು ಅದನ್ನು ಹಿಡಿದು ಮತ್ತೊಬ್ಬನಿಗೆ ಹಾಗೆಯೇ ರವಾನಿಸುತ್ತಾನೆ. ಇವರ ಕೆಲಸ Sync ಆಗದೇ ಹೋಯಿತು ಎಂದುಕೊಳ್ಳಿ...

ಊಟ ಮಾಡುವಾಗ ಕೈಯಲ್ಲಿರೋ ತುತ್ತು ಬಾಯಿಗೆ ಹೋದಾಗ, ಬಾಯಿ ತೆರೆಯದೇ ಹೋದಾಗ ಏನಾಗುತ್ತೆ? ಅಯ್ಯಯ್ಯೋ ಎನ್ನುವ ಮುಂಚೆ 'ಯಾರ ಬಾಯಿ?’ ಅಂತ ಒಮ್ಮೆ ಯೋಚಿಸಿ. ನಿಮ್ಮದೇ ಕೈ ನಿಮ್ಮದೇ ಬಾಯಿ ಆದರೆ ಒಮ್ಮೆ ಯೋಚಿಸಬೇಕು. ಯಾಕೆ? ಎಂದರೆ ಕೈ ಬಾಯಿಯ ಕಡೆ ಹೋದಾಗ ಬಾಯಿ ತೆರೆಯಬೇಕು ಎಂಬ ಸಂದೇಶ ಮೆದುಳಲ್ಲಿ process ಆಗಬೇಕು. ಆಹಾರ ಹೊತ್ತ ಕೈ ಬಾಯಿಯ ಬಳಿ ಹೋದಾಗ ಬಾಯಿ ತೆರೆದುಕೊಳ್ಳಬೇಕು ಎಂಬ ಸಿಗ್ನಲ್ ಹೋಗದಿದ್ದರೆ ನೀವು ವೈದ್ಯರ ಬಳಿ ಹೋಗಬೇಕಾಗುತ್ತದೆ. ಈಗ ಎರಡನೇ ಸಂಗತಿ. ನಿಮ್ಮ ಕೈ ಆಗಿದ್ದು ಮತ್ತೊಬ್ಬರ ಬಾಯಿ ಆದರೆ ಇಂದ್ರನನ್ನೂ ಚಂದ್ರನನ್ನೋ ತೋರಿಸಿ ತಿನ್ನಿಸಬೇಕಾಗುತ್ತದೆ. ಇಲ್ಲೇನೂ ತೊಂದರೆ ಇಲ್ಲ.

ಲಯಬದ್ದ, ತಾಳಬದ್ದ, ಶಿಸ್ತು, Sync ಎಂಬುದೆಲ್ಲ ತಪ್ಪದೇ ಪ್ರತಿದಿನವೂ ನಡೆಯುವುದು 'ಸಮಯ'ದಲ್ಲಿ ಮಾತ್ರ. ಬೇರೆ ಯಾವುದೇ ನಿಂತರೂ ಈ ಕಾಲ ಅನ್ನೋದು ಮಾತ್ರ ನಿಲ್ಲೋಲ್ಲ. ಒಂದು ಗಡಿಯಾರ ತೆಗೆದುಕೊಂಡರೆ, ಸೆಕೆಂಡ್ ಮುಳ್ಳು 59 ದಾಟಿದಾಗ ನಿಮಿಷದ ಮುಳ್ಳು ಮುಂದಿನ ಸಂಖ್ಯೆಗೆ ಸಾಗುತ್ತದೆ. ಅದೇ ನಿಮಿಷದ ಮುಳ್ಳು 59 ದಾಟಿದಾಗ hour ಮುಳ್ಳು ಮುಂದಿನ ಸಂಖ್ಯೆಗೆ ಸಾಗುತ್ತದೆ. ಇವುಗಳಲ್ಲಿ ಒಂದು ಎಲ್ಲೋ ಎಡವಟ್ಟಾದರೆ ಈ ಜಗತ್ತಿನಲ್ಲಿ ಏನೆಲ್ಲಾ ಆಗಬಹುದು ಎಂದು ಒಮ್ಮೆ ಯೋಚಿಸಿದರೆ ಊಹೆಗೂ ನಿಲುಕದಷ್ಟು ಅನಾಹುತಗಳು ಆಗಬಹುದು.

ತಲ್ಲಣಸಿದಿರು ಕಂಡ್ಯ ತಾಳು ಮನವೆ . . . .

ಒಂದು ಫ್ಯಾಕ್ಟರಿಯಲ್ಲಿನ conveyor belt ವಿಚಾರವನ್ನು ಮನಸ್ಸಿನಲ್ಲಿ ತಂದುಕೊಳ್ಳಿ. ಒಂದು ಬಾಟ್ಲಿಗೆ ಯಾವುದೋ ದ್ರವ ತುಂಬಬೇಕು. ನಂತರ ಅದಕ್ಕೆ ಮುಚ್ಚಳ ಹಾಕಬೇಕು. ನಂತರ ಲೇಬಲ್ ಒತ್ತಬೇಕು. ಅದಕ್ಕೊಂದು expiry date ಇತ್ಯಾದಿ ಒತ್ತಬೇಕು. ನಂತರ ಅದನ್ನು ಒಂದು ಡಬ್ಬದ ಮುಂದೆ ನಿಲ್ಲಿಸಬೇಕು. ಅಲ್ಲೊಬ್ಬ ಅದನ್ನು ತೆಗೆದುಕೊಂಡು ಡಬ್ಬಕ್ಕೆ ತುಂಬುತ್ತಾನೆ. ಎಲ್ಲವೂ ಕ್ರಮಬದ್ಧ ಮತ್ತು ಶಿಸ್ತುಬದ್ಧ. ಎಲ್ಲೋ ಒಂದು ಕಡೆ sync ಆಗದೆ ಹೋದರೆ ದ್ರವ ಕೆಳಕ್ಕೆ ಚೆಲ್ಲಬಹುದು, ಮುಚ್ಚುಳ ಬಾಟ್ಲಿಗೆ ಬೀಳದೆ ಹೋಗಬಹುದು, ಲೇಬಲ್ ಹಚ್ಚದೆ ಹೋಗಬಹುದು ಅಥವಾ ಡಬ್ಬ ಮುಂದೆ ನಿಲ್ಲೋ ಆ ಬಾಟ್ಲಿ ನೆಲಕ್ಕೆ ಬೀಳಬಹುದು.

ಮಾತನಾಡೋದು ಒಂದು ಕಲೆ, ಆದರೆ ಕೆಲವರಿಗೆ ಅದೇ ಕಪ್ಪುಕಲೆ!

ಈ sync ಅನ್ನೋ ವಿಚಾರವನ್ನು ಒಬ್ಬರ ಜೀವನಕ್ಕೆ ಅಳವಡಿಸಿ. ತಮ್ಮ ಕೂಸು ಬೆಳಿಗ್ಗೆ ಏಳಬೇಕು, ನಿತ್ಯೋಪಕರ್ಮ ಮುಗಿಸಬೇಕು, ಹಾಲು ಕುಡೀಬೇಕು, ಆಟವಾಡಿಕೊಂಡಿರಬೇಕು, ಮಧ್ಯಾಹ್ನ ಊಟ ಮಾಡಬೇಕು, ನಿದ್ದೆ ಮಾಡಬೇಕು, ಸಂಜೆ ಹಾಲು ಕುಡೀಬೇಕು. ತಾವು ಸಿದ್ದ ಮಾಡಿದಂತೆ ಸಿದ್ಧವಾಗಬೇಕು. ಪಾರ್ಕ್'ಗೆ ಆಟಕ್ಕೆ ಕರೆದುಕೊಂಡು ಹೋದಾಗ ಅಲ್ಲಿ ಯಾರೊಂದಿಗೂ ಜಗಳವಾಡದೆ ಆಡಬೇಕು. ಮನೆಗೆ ಬಂದು ಊಟಕ್ಕೆ ತರಲೆ ಮಾಡದೇ ಊಟ ಮುಗಿಸಿ ನೆಮ್ಮದಿಯಾಗಿ ಮಲಗಬೇಕು …. ಅಬ್ಬಾಬ್ಬಾ! ಏನ್ ಸ್ವಾಮಿ ನಿಮಗೇನಾದರೂ ತಲೆ ಕೆಟ್ಟಿದೆಯೇ ಅನ್ನಬೇಡಿ. ಈಗ ಮುಂದಿನ large scale ವಿಷಯ ಓದಿ.

ಮಕ್ಕಳು ಶಾಲೆಗೆ ಹೋಗಬೇಕು, ಚೆನ್ನಾಗಿ ಕಲಿಯಬೇಕು. ಕ್ಲಾಸಿಗೆ ಮೊದಲಾಗಬೇಕು. ವರ್ಷಾನುವರ್ಷ ಕಲಿಯುತ್ತಾ ಸಾಗಬೇಕು. ಯಾವ ದುಶ್ಚಟವೂ ಇರಕೂಡದು. ಶಾಲೆಯಿಂದ ಯಾವ ಕಂಪ್ಲೇಂಟ್ ಮನೆಗೆ ಬರಬಾರದು. ಕಾಲೇಜಿಗೆ ಅಡಿಯಿಡಬೇಕು. ಅತ್ಯುತ್ತಮ ಅಂಕ ತೊಗೋಬೇಕು. ಎಂಜಿನಿಯರಿಂಗ್ / ಡಾಕ್ಟರ್ ಆಗಿ ಹೊರಗೆ ಬರಬೇಕು. ಅತ್ಯಂತ ಪ್ರಸಿದ್ಧರಾಗಬೇಕು. ನಾವು ತೋರಿಸಿದ ಹುಡುಗ/ಹುಡುಗಿಯನ್ನು ಮದುವೆಯಾಗಬೇಕು. ಮಕ್ಕಳು ಮರಿಯಾಗಬೇಕು. ನಮ್ಮನ್ನು ವೃದ್ದಾಪ್ಯದಲ್ಲೂ ಸಿಕ್ಕಾಪಟ್ಟೆ ಚೆನ್ನಾಗಿ ನೋಡಿಕೊಳ್ಳಬೇಕು…. ಸಾಕಾ? ಇದು ಒಂದು ಅತ್ಯಂತ ಮಾದರಿಯ Sync . . . ಎಲ್ಲ ಅಪ್ಪ-ಅಮ್ಮ ತಮ್ಮೆಲ್ಲ ಮಕ್ಕಳೂ ಹೀಗೆ ಇರಬೇಕು ಅಂತಲೇ ಬಯಸೋದು.

ಚಲನಚಿತ್ರದ ಒಂದು ಸನ್ನಿವೇಶ ತೆಗೆದುಕೊಳ್ಳಿ... ಮಾತುಗಳಲ್ಲಿ, ಹಾಡುಗಳಲ್ಲಿ ಲಿಪ್ sync ಆಗದೆ ಇದ್ದರೆ ನೋಡುಗರಿಗೆ ಪಾಯಸದಲ್ಲಿ ಕೂದಲು ಸಿಕ್ಕ ಹಾಗೆ ಅಲ್ಲವೇ? ಕೆಲವೊಮ್ಮೆ ವಾಟ್ಸಾಪ್ ಕರೆಗಳಲ್ಲಿ ಹೀಗೆ ಆಗುತ್ತೆ. ನಾವೇನೋ ಹೇಳಿದಾಗ ಅವರಿಗೆ ಅದು ಕೇಳಿಸಿ ಅವರು ಉತ್ತರ ಕೊಡುವಾಗ ನಮಗದು ಕೇಳಿಸುವಲ್ಲಿ sync ಆಗದೆ ಮಧ್ಯೆ ಸಿಕ್ಕಾಪಟ್ಟೆ ಲ್ಯಾಗ್ ಉಂಟಾಗಿ ಮಾತು ಸಹ್ಯವೇ ಎನಿಸುವುದಿಲ್ಲ.

ಇವೆಲ್ಲಾ ಯಾಕೆ ಹೇಳಿದೆ? ವಾರಾಂತ್ಯದಲ್ಲಿ ಒಂದು ಭರತನಾಟ್ಯದ ಅರಂಗೇಟ್ರಮ್ ಅಥವಾ ರಂಗಪ್ರವೇಶದ ಕಾರ್ಯಕ್ರಮಕ್ಕೆ ಹೋಗಿದ್ದೆ. ಮೃದಂಗ, ತಾಳ, ವಯೊಲಿನ್, ವೀಣೆ, ಕೊಳಲು, ಗಾಯನ ಇರುವ ವೃಂದ ಒಂದೆಡೆ ಮತ್ತು ಮುಖ್ಯವಾಗಿ ನಾಟ್ಯ... ಇಲ್ಲಿನ Sync ಎಷ್ಟರಮಟ್ಟಿಗೆ ಮುಖ್ಯವಾಗಬಹುದು. ರಂಗಪ್ರವೇಶದ ದಿನ ನಡೆಯಬಹುದಾದ ಸಂಪೂರ್ಣ ಕಾರ್ಯಕ್ರಮವನ್ನು ಆ ಮುಂಚೆಯೇ ಎರಡು ಅಥವಾ ಮೂರು ಬಾರಿ ಸಂಪೂರ್ಣವಾಗಿ ರಿಹರ್ಸಲ್ ನಡೆಸಿರುತ್ತಾರೆ.

ಆದರೂ…. ಆ ದಿನ ಗಾಯನದಲ್ಲೋ ಅಥವಾ ಭಾವ ವ್ಯಕ್ತಪಡಿಸುವಲ್ಲಿ ನೃತ್ಯಗಾರ್ತಿ ತಪ್ಪು ಮಾಡಿದಾಗಲೋ ಎಲ್ಲೋ ಒಂದು ತಪ್ಪಾದಾಗ ಅವರಲ್ಲಿ ವಿಶ್ವಾಸ ಕುಂದಿತು ಎಂದಾಗ ಮುಂದಿನ ಸರದಿಯಲ್ಲಿ ಬರುವ ನೃತ್ಯದ ಭಾಗಗಳಲ್ಲಿ ಅದರ effect ಕಂಡುಬರುತ್ತದೆ. ನಾ ಪ್ರೇಕ್ಷಕನಾಗಿ ಭಾಗವಹಿಸಿದ ಕಾರ್ಯಕ್ರಮದಲ್ಲಿ ಒಬ್ಬೊಬ್ಬರ ಪರಿಣಿತಿಯೂ ಎಷ್ಟರ ಮಟ್ಟಿಗೆ ಮೇಳೈಸಿತ್ತು ಎಂದರೆ ಅದೇನು ರಂಗಪ್ರವೇಶವೋ ಅಥವಾ ಅತ್ಯಂತ ನುರಿತವರ ನೃತ್ಯದ ಕಾರ್ಯಕ್ರಮವೋ ಎಂಬಂತಿತ್ತು. ಒಬ್ಬೊಬ್ಬರ ಪಾತ್ರವೂ ಸರಿಯಾಗಿ sync ಆಗಿ ಹಬ್ಬದಂತೆ ಇತ್ತು. ಆಂಗ್ಲದಲ್ಲಿ ಹೇಳುವಂತೆ 'stars were all lined up' ಎನ್ನುವಂತಿತ್ತು.

ಅಂದ ಹಾಗೆ ಈ 'stars were all lined up' ಅಂದರೇನು? ಇದೂ ಕೂಡ sync ಎಂಬುದಕ್ಕೆ ಉತ್ತಮ ಉದಾಹರಣೆ. ಎಲ್ಲರ ಎಲ್ಲ ಗ್ರಹಗಳೂ ಸರಿಯಾದ ಗತಿಯಲ್ಲಿ ಮೇಳೈಸಿದ್ದರೆ ಇಂದು ಯಾವ ಬ್ರಹ್ಮಾಂಡ ಜ್ಯೋತಿಷಿಗಳಿಗೂ ಕೆಲಸ ಇರುತ್ತಿರಲಿಲ್ಲ. ಏನು ಮಾಡೋದು ಹಲ್ಲಿದ್ದವರಿಗೆ ಕಡಲೆ ಇಲ್ಲ, ಕಡಲೆ ಇದ್ದವರಿಗೆ ಹಲ್ಲಿಲ್ಲ.

ಎಲ್ಲರಿಗೂ ಎಲ್ಲ ಭಾಗ್ಯಗಳೂ ಮೇಳೈಸಿರುವುದಿಲ್ಲ. ಎಲ್ಲರ ಜೀವನದಲ್ಲೂ ಒಂದಲ್ಲಾ ಒಂದು ಕುಂದು ಅನ್ನುವುದು ಇದ್ದೇ ಇರುತ್ತದೆ.

"ಅವರೇನು ಬಿಡ್ರಿ ಸಿಕ್ಕಾಪಟ್ಟೆ ಹಣ ಇಟ್ಟಿದ್ದಾರೆ. ಯಾವುದಕ್ಕೂ ಕೊರತೆ ಅನ್ನೋದೇ ಇಲ್ಲ" ಅನ್ನೋ ಮಾತು ಸರ್ವೇ ಸಾಮಾನ್ಯ. ಹಣಕ್ಕೆ ಕೊರತೆ ಇಲ್ಲದೆ ಇರಬಹುದು. ಆದರೆ ಆ ಆಸ್ತಿಯನ್ನು ಅನುಭವಿಸುವ ಮಕ್ಕಳು ಇಲ್ಲದೇ ಇರಬಹುದು ಅಥವಾ ಸಂಪಾದಿಸಿರುವ ಆ ಹಣದಿಂದ ಅವರಿಗೆ ನೆಮ್ಮದಿಯೇ ಇಲ್ಲದೆ ಇರಬಹುದು. ನಮಗೆ ಗೊತ್ತೇ?

ಸಂಗೀತ ಕ್ಷೇತ್ರದಲ್ಲಿ Sync ಎಂಬೋದು ಅತೀ ಮಹತ್ತರ ಪಾತ್ರ ವಹಿಸುತ್ತದೆ. ಏರಿಳಿತದ ಸ್ವರಗಳು ತಾಳಕ್ಕೆ ತಕ್ಕಂತೆ ಮೇಳೈಸಿದರೆ ಅದರ ರಸಾನುಭವವೇ ಬೇರೆ. ಒಮ್ಮೆ sync ತಪ್ಪಿದರೆ ಸಾಕು, ಸಂಗೀತ ಅನ್ನೋದು ಕರ್ಕಶವಾಗುತ್ತದೆ.

ಹಾಗೆಯೇ ಜೀವನವೂ ಒಂದು ಸಂಗೀತದಂತೆ. ಹಾಗಂತ ಜೀವನದಲ್ಲಿ ಎಲ್ಲ ಸಮಯವೂ ತಾಳಬದ್ಧವಾಗಿ ಸಾಗುತ್ತದೆ ಎನ್ನಲು ಸಾಧ್ಯವೇ? ಅಪಸ್ವರಗಳು, ಅಪಶ್ರುತಿಗಳು, ತಪ್ಪಿದ ತಾಳಗಳು, ಮರೆತ ಸಾಹಿತ್ಯ ಇದ್ದೇ ಇರುತ್ತವೆ. ಹೀಗಾದಾಗಲೆಲ್ಲಾ ಧೃತಿಗೆಡವುದು ಸಹಜ, ಅದನ್ನು ಗೆದ್ದು ಸರಿಪಡಿಸಿಕೊಂಡು ಮುಂದೆ ಸಾಗಿದಲ್ಲಿ ಜಯವಿದೆ.

English summary
Sometimes you are in sync with the times, sometimes you are in advance, sometimes you are late. Synchronization is the coordination of events to operate a system in unison.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X