ನಮ್ಮೊಳಗೇ ಕರೆಂಟ್ ಆಫ್ ಆದರೆ ಮತ್ತೊಬ್ಬರಿಗೆ ಇನ್ನೇನು ಬೆಳಕು ಕೊಟ್ಟೇವು?

By: ಶ್ರೀನಾಥ್ ಭಲ್ಲೆ, ರಿಚ್ಮಂಡ್
Subscribe to Oneindia Kannada

ದೀಪಾವಳಿ ಬಂತು ಎಂದರೆ ಎಲ್ಲಿಲ್ಲದ ಆನಂದ, ಉತ್ಸಾಹ ಪಟಪಟ ಅಂತ ಬರುತ್ತಿತ್ತು. ನೀರು ತುಂಬುವ ಹಬ್ಬ, ನರಕ ಚತುರ್ದಶಿ ಮತ್ತು ಅಮಾವಾಸ್ಯೆ ಎಂಬ ತ್ರಿವಳಿ ಮಜಾ ಎಂದರೆ ದೀಪಾವಳಿ. ಬಚ್ಚಲು ಮನೆ ತೊಳೆದು ಹಂಡೆ ಮತ್ತು boiler ಅನ್ನು ಥಳಗುಟ್ಟುವ ಹಾಗೆ ಹುಣಸೆ ಹಣ್ಣು ಹಚ್ಚಿ ತೊಳೆದು, ಅಲ್ಲೇ ಪುಟ್ಟದಾಗಿ ರಂಗೋಲಿಯನ್ನು ಅಮ್ಮ ಬಿಡಿಸಿದರು ಎಂದಾದ ಮೇಲೆ ಬಾವಿಯಿಂದ ನೀರು ಸೇದಿ ತುಂಬೋದು ನಮ್ಮ ಕೆಲಸ.

ಹುಣಸೆ ಹಣ್ಣು ಹಚ್ಚಿ ತೊಳೆಯೋದು, ರಂಗೋಲಿ ಬಿಡಿಸೋದು, ಹಬ್ಬದ ಅಡುಗೆ ಮಾಡೋದು ಅನ್ನೋದನ್ನ ಬಿಟ್ಟರೆ ಒಂದರ್ಥದಲ್ಲಿ ಮನೆಯಲ್ಲಿ ದಿನವೂ ನೀರು ತುಂಬೋ ಹಬ್ಬ ಅನ್ನಿ. "ಎಲ್ಲಾ ಹೇಳಿದ್ರಿ ಆದರೆ ಬಿಟ್ಟಿದ್ದು ಯಾವುದು?" ಅಂದ್ರಾ? "ಬಾವಿಯಿಂದ ನೀರು ಸೇದಿ ಹಂಡೆ ಮತ್ತು boiler ಗೆ ನೀರು ತುಂಬಿಸೋದು". "ಅದನ್ನೇ ನೇರವಾಗಿ ಹೇಳಬಹುದಿತ್ತಲ್ಲವೇ?".

ಪಾಡಿ ಪೊಗಳಿಸಿಕೊಳ್ಳದ ಪುಂಡರಲ್ಲದವರ ಪಾಡು

ಛೇ! ಹಬ್ಬದ ದಿನವೂ ಜನ ಸುಮ್ ಸುಮ್ನೆ ಸಿಟ್ ಮಾಡ್ಕೋತೀರಪ್ಪ !!!

Deepavali

ದೀಪಾವಳಿ ಅಂದ ತಕ್ಷಣ ಈ ಒಂದು ಘಟನೆ ನೆನಪಿಗೆ ಬಂದೇ ಬರುತ್ತದೆ. ನಮ್ಮ ಮನೆಯ ಬಳಿ 'ಸುಬ್ರಮಣಿ' ಅಂತ ಒಬ್ಬ ಇದ್ದ. ಅವರ ಮನೆಯಲ್ಲಿ ನಾಲ್ಕು ದಿನ ಮುಂಚೆ ಪಟಾಕಿ ತಂದು ನಂತರ ದಿನವೂ ಬಿಸಿಲಲ್ಲಿ ಚೆನ್ನಾಗಿ ಒಣಗಿಸಿ ಹಬ್ಬದ ದಿನ ಹಚ್ಚುತ್ತಿದ್ದರು.

ಹಚ್ಚಿದಾಗ ಪಟಾಕಿ ಠುಸ್ ಅನ್ನಬಾರದಲ್ಲಾ ಅದಕ್ಕೆ ಹಾಗೆ ಮಾಡುತ್ತಿದ್ದರು. ಹಬ್ಬದ ದಿನ ಬೆಳಗ್ಗೆ ಬೆಳಗ್ಗೆ ಸುಬ್ರಮಣಿ ಮನೆಗೆ ಬಂದು ಬಾಗಿಲು ಬಡಿದು ಹೋಗುತ್ತಿದ್ದ. ರಾಕೆಟ್ ಅಥವಾ ಲಕ್ಷ್ಮಿ ಪಟಾಕಿ ಹೊಡೆಯುವಾಗ ಅಪ್ಪನಿಗೆ "ಅಂಕಲ್, ಪಟಾಕಿ ಹಾಗೆ ಇಡಬೇಡಿ ಹೀಗೆ ಇಡಿ" ಅಂತಂದು ಊದಿನಕಡ್ಡಿಯನ್ನೂ ಕೈಗೆ ತೆಗೆದುಕೊಂಡು ತಾನೇ ಪಟಾಕಿ ಹಚ್ಚುತ್ತಿದ್ದ. ನಗು ಬರ್ತಿತ್ತು, ಸಿಟ್ಟು ಬರ್ತಿತ್ತು. ಏನಾದರೇನು ಎಷ್ಟೋ ವರ್ಷಗಳ ನಂತರ ಈಗಲೂ ನೆನಪಿದೆ ಅನ್ನೋದು ಮುಖ್ಯ.

ಹೃದಯ ಮುಟ್ಟಿ ಮನವನು ತಟ್ಟುವ ಅಳಿಸಲಾರದ ನೆನಪು

ಮಧ್ಯಮವರ್ಗದ ಪ್ರತೀಕವಾದ ಮನೆಯಲ್ಲಿ ಎಲ್ಲಕ್ಕೂ ಲಿಮಿಟ್ ಇರುವಂತೆ ನಮ್ಮ ಮನೆಯಲ್ಲೂ ಇತ್ತು. ತಂದಷ್ಟು ಪಟಾಕಿಯಲ್ಲಿ ಸ್ವಲ್ಪ 'ಉತ್ಥಾನ ದ್ವಾದಶಿ'ಗೆ ಅಂತ ಎತ್ತಿಡುತ್ತಿದ್ದೆವು. ಆದರೆ ಹಬ್ಬ ಮುಗಿದ ಹನ್ನೆರಡು ದಿನಗಳ ನಂತರ ಮತ್ತೆ ಪಟಾಕಿ ಹೊಡೆಯಲು ಮನಸ್ಸು ಬರುತ್ತಿರಲಿಲ್ಲ. ಅದಕ್ಕಿಂತಲೂ ಮತ್ತೊಂದು ವಿಷಯ ಎಂದರೆ, ಬೀದಿಯಲ್ಲಿ ನಮ್ಮನ್ನುಳಿದು ಮಿಕ್ಕವರ್ಯಾರೂ ದೀಪವನ್ನೂ ಬೆಳಗಿಸದೇ ಇದ್ದಾಗ ನಾವು ಮಾತ್ರ ಬೆಳಕು ಬೀರುವ ಪಟಾಕಿ ಹಚ್ಚುವುದು ಹೇಗೆ ಎನ್ನುವ ಮುಜುಗರ.

ನಮ್ಮ ಸಮಾಜದಲ್ಲಿ 'ಇನ್ನೊಬ್ಬರು ಏನಂದುಕೊಳ್ಳುವರೋ?' ಅಂತಲೇ ನಮ್ಮ ಬದುಕು! ನಾಲ್ಕು ಜನ ಮೆಚ್ಚುವ ಹಾಗಿರಬೇಕು ಅಂತ ಹಿರಿಯರು ಹೇಳ್ತಿದ್ರು. ಆ ನಾಲ್ಕು ಜನ ಯಾರು ಅಂತ ಇನ್ನೂ ಹುಡುಕುತ್ತಾ ಇದ್ದೀನಿ!

ಢಮ್ ಎಂದು ಸದ್ದು ಮಾಡುವ ಪಟಾಕಿ ಹೊಡೆಯುವಾಗ ಇನ್ನೇನು ಹೊತ್ತಿತು ಎನ್ನುವಾಗಲೇ ಮತ್ಯಾರೋ ಬೆದರಿಸೋದು ಮಾಮೂಲಿ ಟ್ರಿಕ್. ಆದರೆ ಪ್ರತಿ ಬಾರಿಯೂ ಆ ಟ್ರಿಕ್ ಗೆ ಬೀಳುತ್ತಿದ್ದುದು ಗ್ಯಾರಂಟಿ.

ಹಿಂದಿರುಗಿ ಓಡಿ ಬರುವ ಮುನ್ನವೇ ಪಟಾಕಿ ಢಮ್ ಎನ್ನುವುದು, ನೆಟ್ಟಗೆ ಇಟ್ಟಿದ್ದರೂ ಪಕ್ಕದ ಮನೆಗೆ ಹಾರುವ ರಾಕೆಟ್, ನಮ್ಮ ಕಾಲ ಬುಡಕ್ಕೆ ಬಂದು ಸಿಲುಕುವ ವಿಷ್ಣು ಚಕ್ರ, ಕೆಟ್ಟವಾಸನೆ ಬೀರುವ ಹಾವಿನ ಮಾತ್ರೆ ಪಟಾಕಿ, ಅತ್ಯಂತ ಅಪಾಯಕಾರಿ ಹಸಿರು ಆಟಂಬಾಂಬು, ಸದಾ ಉಲ್ಲಾಸ ನೀಡುವ ಸುರುಸುರು ಬತ್ತಿ ಮತ್ತು ಹೂವಿನ ಕುಂಡ ಎಲ್ಲದರ ನೆನಪೂ ನಿತ್ಯನೂತನ.

ಪಂಚೆ ಉಟ್ಟು ಢಮ್ ಪಟಾಕಿ ಹೊಡೆಯುವಾಗ ಅದು ಹತ್ತಿದೊಡನೆ ವಾಪಸ್ ಓಡಿಬರುವಾಗ ಆ ಪಂಚೆಯ ತುದಿ ಕಾಲಿಗೆ ತೊಡರಿ ಬೀಳುವುದೋ ಅಥವಾ ಪಂಚೆಯೇ ಉದುರಿ ಹೋಗುವ ಪಜೀತಿಯನ್ನೂ ಕಂಡು ಬೆಳೆದಿದ್ದೇವೆ.

ದಸರಾ ಹಬ್ಬವೆಂದರೆ ಮರೆಯದ ನೆನಪುಗಳ ನವರಾತ್ರಿ!

ಗನ್ ಕೊಳ್ಳದೇ ಕಲ್ಲಿನಿಂದಲೇ ರೋಲ್ ಪಟಾಕಿ ಹೊಡೆಯುವುದು, ಕೈಯಲ್ಲಿ ಕುದುರೆ / ಆನೆ ಪಟಾಕಿ ಅಂಟಿಸುವುದು, ಆನೆ ಪಟಾಕಿ ಸರ ಅಂಟಿಸಿದಾಗ ಅರ್ಧ ಮಾತ್ರ ಪಟಪಟ ಎಂದು ಮಿಕ್ಕೆಲ್ಲ ಠುಸ್ ಅನ್ನೋದು, ಸರಸರವನ್ನು ಬಿಡಿಸಿ ಒಂದೊಂದೇ ಪಟಾಕಿ ಹೊಡೆದು ನಂತರ bore ಆಯ್ತು ಅಂತ ಒಂದು ಪೊಟ್ಟಣದಲ್ಲಿ ಎಲ್ಲವನ್ನೂ ಹಾಕಿ ಬೆಂಕಿ ಅಂಟಿಸೋದು, ಸರ ಬಿಡಿಸಿದಾಗ ಮದ್ದು ಕಿತ್ತುಬಂದು ಬೋಳಾದಾಗ ದು:ಖ ಒತ್ತರಿಸಿ ಬರುವುದು ಎಲ್ಲ ನೆನಪುಗಳೂ ಹಚ್ಚನೆ ಹಸಿರು.

ದುಃಖ ಎಂದಾಗ ಮನಸ್ಸಿಗೆ ಬರೋದು ಚತುರ್ದಶಿಯ ದಿನದ ಬೆಳಗಿನ ಮಳೆ. ಈಗ ನಾನು ಮಳೆಯ ಬಗ್ಗೆ ಮಾತನಾಡಿದರೆ ಇಲ್ಲೆಲ್ಲರಿಗೂ ಟೆನ್ಷನ್ ಆಗೋದು ಗ್ಯಾರಂಟಿ. ಹಾಗಾಗಿ ಮುಂದಕ್ಕೆ ಹೋಗೋಣ !

ದೇಶ ಬಿಟ್ಟು ಬಂದ ಮೇಲೆ ಕೆಲವು ವರ್ಷ ದೀಪಾವಳಿ ಆಗಲಿಲ್ಲ ಬಿಡಿ. ಮೊದಲಿಗೆಲ್ಲಾ ಕೌಂಟಿ (county) ಅನುಮತಿ ಇಲ್ಲದೆ residential areaದಲ್ಲಿ ಪಟಾಕಿ ಹಚ್ಚುವಂತಿಲ್ಲ ಎಂದು ನಿರ್ಬಂಧ ಇದ್ದುದರಿಂದ ಅದರ ಬಗ್ಗೆ ಯೋಚಿಸಲೂ ಇಲ್ಲ. ನಂತರ ಸದ್ದು ಮಾಡದ, ಆದರೆ ಬೆಳಕ ಬೀರುವ ಪಟಾಕಿಗಳನ್ನು ತಂದು ಮನೆಯ ಮಟ್ಟಿಗೋ ಅಥವಾ ನಾಲ್ಕಾರು ಸಂಸಾರಗಳು ಕೂಡಿ ಆಚರಿಸಿದೆವು.

ಕಾಲ ಬದಲಾಯಿತು. ಈಗ ಸ್ಥಳೀಯ ದೇವಸ್ಥಾನದ ದೊಡ್ಡ ಅಂಗಳದಲ್ಲಿ ಸಾಮೂಹಿಕವಾಗಿ ಆಚರಿಸುವಷ್ಟು ಬೆಳೆದಿದ್ದೇವೆ.

ನಾವು ಹಾಕುವ ಕಸಕ್ಕೆ ನಾವೇ ಜವಾಬ್ದಾರಿ ಹೊರಬೇಕಾದ್ದರಿಂದ ಈವರೆಗೆ 'ದೀಪಾವಳಿ ಆಚರಿಸದಿರಿ' ಎಂಬ ಗುಲ್ಲು ಎಲ್ಲೂ ಎದ್ದಿಲ್ಲ. ಹಳೆಯ ನೆನಪುಗಳು ಆಯ್ತು ಸರಿ, ಜೊತೆಗೆ ಇಂದಿನ ಚಿತ್ರಣದ ಬಗ್ಗೆಯೂ ಮಾತನಾಡದೆ ಹೋದರೆ ಹೇಗೆ?

ಕೆಲವು ವರ್ಷಗಳಿಂದ ಯಾಕೋ ಏನೋ ಗೊತ್ತಿಲ್ಲ. ನವರಾತ್ರಿ ಮುಗಿದು, ವಿಜಯದಶಮಿ ನಂತರದ ಏಕಾದಶಿ ಬಂದ ಕೂಡಲೇ ಕೆಲವರ ವಕ್ರದೃಷ್ಟಿ ದೀಪಾವಳಿಯ ಮೇಲೆ. ಹೊಟ್ಟೆಗಳಲ್ಲಿ ಸುರುಸುರು ಬತ್ತಿ, ವಾಟ್ಸಾಪ್, ಫೇಸ್ಬುಕ್ಕು, ಟ್ವಿಟ್ಟರ್ ಅಂತ ಎಲ್ಲೆಡೆ ಏನೆಲ್ಲಾ ರಾಕೆಟ್ ಗಳು. ಹೂವಿನ ಕುಂಡದ ಬದಲಿಗೆ ಎಲ್ಲೆಡೆ ಅಗ್ನಿ ಕುಂಡಗಳು. ಸ್ಯಾಂಪಲ್ ಅಂತ ಒಂದೆರಡು ನೋಡೋಣ!

"happy diwali" ಅಂತ ದಯವಿಟ್ಟು ನನಗೆ ವಿಶ್ ಮಾಡಬೇಡಿ, ಈಗಾಗ್ಲೇ ನಾನು ದಿವಾಳಿ ಎದ್ಹೋಗಿದ್ದೀನಿ. happy deepavali ಅಂತ ಹೇಳಿ" ಅನ್ನುವಂಥಾ ಹೇಳಿಕೆ ಅಥವಾ ಬೇಡಿಕೆಗಳು ಅಥವಾ ಬೆದರಿಕೆಗಳು. ಖಂಡಿತ ತಪ್ಪಿಲ್ಲ. ಆದರೆ diwali ಪದದಲ್ಲಿ ಅದು "ಲ"ಕಾರ, "ಳ"ಕಾರ ಅಲ್ಲ ಎಂಬುದಷ್ಟೇ ನನ್ನ ಮಾತು.

ಅದು 'ದಿವಾಲಿ' ಅಂತ ಶುಭ ಕೋರುತ್ತಾರೆಯೇ ಹೊರತು 'ದಿವಾಳಿ' ಎಂದಲ್ಲ! ಕೆಲವು ಭಾಷೆಯಲ್ಲಿ "ಳ"ಕಾರ ಇಲ್ಲ. 'ದಿವಾಲಿ' ತಪ್ಪು, 'ದೀಪಾವಳಿ' ಸರಿ ಅನ್ನುವ ಬದಲಿಗೆ ವಿಶ್ ಮಾಡಿದಾಗ ಒಮ್ಮನದಿಂದ ಸ್ವೀಕರಿಸಿ ಅವರಿಗೆ ಶುಭ ಕೋರುವಾಗ 'ಹ್ಯಾಪಿ ದೀಪಾವಳಿ' ಎಂದರಾಯ್ತು. ಈಗಾಗ್ಲೇ ಜಗತ್ತಿನ ಪ್ರತಿ ಮೂಲೆಯಲ್ಲೂ ಒಂದಲ್ಲಾ ಒಂದು ಸಮಸ್ಯೆಗಳು ಕಾಡ್ತಾನೇ ಇದೆ. ಅದರ ಜೊತೆ ಇದೊಂದು ಯಾಕೆ ಅಂತ ಅಷ್ಟೇ. ಏನಂತೀರಾ?

ಇನ್ನು ದೀಪಾವಳಿಯಿಂದಾಗಿ ಪರಿಸರ ನಾಶ ಎಂಬ ಗುಲ್ಲು. ಅರ್ಥವೇ ಆಗೋಲ್ಲ ! ಧೂಳು, ಹೊಗೆ, ಎಲ್ಲೆಡೆ ಪೇಪರ್ ರಾಶಿ ನಿಜ, ಒಪ್ಪಿಕೊಳ್ಳೋಣ. ಪ್ರಾಣಿ- ಪಕ್ಷಿಗಳಿಗೆ ತೊಂದರೆ, ಮನೆಯಲ್ಲಿ ಪೇಷಂಟ್ಸ್ ಗೆ ತೊಂದರೆ, ಅಸ್ತಮಾ ಇದ್ದವರಿಗೆ ನರಕ ಸರಿಯೇ. ಆದರೆ ಮಗು ತೊಡೆಯ ಮೇಲೆ ಮೂತ್ರ ಮಾಡಿತು ಅಂತ ತೊಡೆಯನ್ನೇ ಕತ್ತರಿಸಿಕೊಳ್ಳುತ್ತಾರಾ?

ವಾತಾವರಣ ಕಲುಷಿತವಾಗುತ್ತದೆ ಅಂತ ಹಬ್ಬವನ್ನೇ ಮಾಡಕೂಡದು ಎಂದಾಗ ಮತೀಯ ಗಲಭೆ ಆಗದೇ ಇರುತ್ತದೆಯೇ? ಬೀದಿಯಲ್ಲಿ ಹೋದರೆ ಆಕ್ಸಿಡೆಂಟ್ ಆಗುತ್ತಂತೆ ಅಂತ ಹೇಳ್ಕೊಂಡ್ ಮನೆಯಲ್ಲೇ ಕೊಡುತ್ತೀರಾ? ಇಲ್ಲಾ ತಾನೇ? ಪರಿಸರ ಸಂರಕ್ಷಣೆಗೆ ಈ ಹಬ್ಬವೊಂದೇ ಕಾರಣವಾದರೆ ನಿಮಿಷಕ್ಕೆ ಲಕ್ಷ ವಾಹನಗಳು ಹೊರಹೊಮ್ಮುವ ಹೊಗೆಯ ಕಥೆ ಏನು? ಅದಕ್ಕೇನಾದರೂ ಪರಿಹಾರ ಹುಡುಕಿದ್ದೀವಾ?

ಪ್ರತಿ ನಿಮಿಷ ಕಲುಷಿತವಾಗುವ ವಾತಾವರಣದ ಬಗ್ಗೆ ಕಾಳಜಿ ವಹಿಸಿ ಪರಿಹಾರ ಕಂಡು ಹಿಡಿದರೆ ಈ ಹಬ್ಬಕ್ಕೂ ಅನ್ವಯವಾಗುತ್ತದೆ ಅಲ್ಲವೇ? ಜವಾಬ್ದಾರಿರಹಿತನಾಗಿ ಮಾತನಾಡುತ್ತಾ ಇದ್ದೀನಿ ಅಂದುಕೊಳ್ಳದಿರಿ. ಸಮಸ್ಯೆಯನ್ನು ಯೋಚಿಸುವ ಬದಲಿಗೆ ಪರಿಹಾರ ಹುಡುಕುತ್ತಿದ್ದೇನೆ.

ಬೀದಿ ಬೀದಿಯಲ್ಲಿ ಕಸ ಎನ್ನುವುದಕ್ಕೂ ಪ್ರೇಕ್ಷಣೀಯ ಸ್ಥಳಕ್ಕೆ ಹೋದಾಗ ಎಲ್ಲೆಡೆ ರೊಚ್ಚು ಮಾಡಿ ಬರುವುದಕ್ಕೂ ಏನೂ ವ್ಯತ್ಯಾಸವಿಲ್ಲ. ಜನರಲ್ಲಿ ಪರಿಸರದ ಬಗ್ಗೆ ಕಾಳಜಿ ಬರುವ ತನಕ ಈ ಗೋಳು ತಪ್ಪಿದ್ದಲ್ಲ.

ಸದ್ದು, ಹೊಗೆ, ವಾತಾವರಣ, ಪರಿಸರ, ಕಾಳಜಿ ಇವೆಲ್ಲಾ ಭಾಷಣಯೋಗ್ಯ ಪದಗಳು. ಇಂಥಾ ಸಮಸ್ಯೆಗಳು ಅಥವಾ ಉದಾತ್ತ ಚಿಂತನೆಗಳು ಪ್ರತಿ ವರ್ಷ ದೀಪಾವಳಿ ಸಮಯಕ್ಕೆ ಧುತ್ತನೆ ಎದ್ದು ಅಮಾವಾಸ್ಯೆ ಮುಗಿದು ಪಾಡ್ಯ ಮೂಡುತ್ತಿದ್ದಂತೆ ತೆರೆಮರೆಗೆ ಸರಿಯುತ್ತೆ.

ನನ್ನ ಮಾತು ಸರಿ ಅಂತ ಅನ್ನಿಸುತ್ತಿಲ್ಲ ಎನಿಸಿದರೆ ನೀವೇ ಯೋಚನೆ ಮಾಡಿ. ಪೇಂಟ್ ಹೊಡೆದು ತಯಾರಿಸಿದ ಗಣೇಶನ ವಿಗ್ರಹವನ್ನು ಕಂಡ ಕಂಡ ಕೆರೆಯಲ್ಲಿ ಮುಳುಗಿಸಿದರೆ ಪರಿಸರ ನಾಶ ಅಂತ ಈಗ ಯಾರಾದರೂ ಕೂಗಾಡ್ತಾ ಇದ್ದಾರಾ? ಇಲ್ಲಾ ತಾನೇ. ಪ್ರತೀ ಗಲಭೆಯೂ 'seasonal'. ಇದರಿಂದ ಮನಸ್ಸು ಕ್ಷೋಭೆಯಾಗುವುದು ಬಿಟ್ಟರೆ ಮತ್ತೇನೂ ಘನಕಾರ್ಯ ಸಾಧನೆ ಆಗುವುದಿಲ್ಲ.

ಅರಿವು ನಮ್ಮೊಳಗಿಂದ ಮೂಡಿ ಹೊರಹೊಮ್ಮಿದಾಗ ಮಿಕ್ಕೆಲ್ಲೆಡೆ ಹಬ್ಬುತ್ತದೆ. ನಮ್ಮೊಳಗೇ ಕರೆಂಟ್ ಆಫ್ ಆದರೆ ಮತ್ತೊಬ್ಬರಿಗೆ ಇನ್ನೇನು ಬೆಳಕು ಕೊಟ್ಟೇವು? ನಾವು ಹಾಕುವ ಕಸಕ್ಕೆ ನಾವೇ ಜವಾಬ್ದಾರಿ ಹೊತ್ತಾಗ ಕಸ ಏಕಾಗುತ್ತದೆ? ಈ ಕಸ ಪಟಾಕಿ ಕಸ ಮಾತ್ರ ಅಲ್ಲ ಬಾಯಿಂದ ಹೊರಹೊಮ್ಮುವ ಕಸ, ಸಾಮಾಜಿಕ ತಾಣದ ಕಸ ಅಂತ ಎಲ್ಲೆಡೆ ಅನ್ವಯವಾಗುತ್ತದೆ. ಹಬ್ಬದ ಆದಿಯಾಗಿ ಕಸ ಬಳಿದು ಬೆಳಕಿಗೆ ಆಸ್ಪದ ಮಾಡಿಕೊಡೋಣವೇ ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Oneindia Kannada columnist Srinath Bhalle remembers deepavali celebration of childhood days. How deepavali changed over a year and environment concern about deepavali discussed in the column.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ