ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಕೋಟಿನ ಬಗ್ಗೆ ಕೋಟ್ಸ್ ಹಾಕಿ ಒಂದೆರಡು ವಿಷಯ ಕೋಟ್ ಮಾಡೋಣ

By ಶ್ರೀನಾಥ್ ಭಲ್ಲೆ
|
Google Oneindia Kannada News

ಈ ತಲೆಬರಹವೇ ವಿಚಿತ್ರವಾಗಿದೆ ಎನ್ನಿಸಿದರೆ ಕೊಂಚ ಕನ್ನಡ, ಇಂಗ್ಲಿಷ್ ಬೆರೆಸಿ ನೋಡೋಣ ಬನ್ನಿ. Coatನ ಬಗ್ಗೆ quotes ಹಾಕಿ ಒಂದೆರಡು ವಿಷಯ quote ಮಾಡೋಣ ಬನ್ನಿ ಎಂಬ ಆಹ್ವಾನ.

ಹತ್ತಾರು ದಿನಗಳ ಹಿಂದೆಯೇ ನಮ್ಮಲ್ಲಿ ವಸಂತ ಮಾಸ ಆರಂಭವಾಯಿತು. ಸಾಮಾನ್ಯವಾಗಿ ಸಂಜೆಯ ವೇಳೆ ಕೊಂಚ ಹೆಚ್ಚು ತಂಪಾಗಿರುತ್ತದೆ ಮತ್ತು ಹಗಲಿನಲ್ಲಿ ಒಳ್ಳೆಯ ಬಿಸಿಲು ಇದ್ದು ವಾಕಿಂಗ್‌ಗೆ ಅನುಕೂಲ. ಗಿಡಮರಗಳು ಚಿಗುರುವ ಕಾಲ. ಹೀಗೆ ಹೇಳುವುದರ ಮೂಲಕ ಚಳಿಗಾಲ ಮುಗೀತು ಎಂದೂ ಹೇಳಬಹುದು. ಆದರೆ ಆರಂಭದ ನಾಲ್ಕಾರು ದಿನಗಳ ನಂತರ ರಪ ರಪ ಮಳೆ ಬಂತು, ನಲವತ್ತರಿಂದ ಐವತ್ತು ಡಿಗ್ರಿ ಕೆಳಕ್ಕೆ ಇಳಿಯೋದಾ? ಚಳಿಗಾಲ ಮುಗೀತು ಅಂತ ಒಗೆದು ಎತ್ತಿಟ್ಟ ಕೋಟು ಮತ್ತೆ ನಮ್ಮನ್ನು ಅಪ್ಪಿದ್ದು ಸುಳ್ಳಲ್ಲ. ಕೋಟು ಮೈಮೇಲೆ ಬಂದಾಗ, ಈ ಕೋಟಿನ ಮೇಲೆ ಒಂದು ಬರಹ ಏಕಾಗಬಾರದು ಅನ್ನಿಸಿತು. ಕೋಟಿನ ಮೇಲೆ ಬರೆಯುವುದು ಬ್ಯಾಡ ಮತ್ತೆ ಒಗೆಯಬೇಕು ಅಂತ, ಕೋಟಿನ ಬಗ್ಗೆ ಬರೆಯುವ ಯತ್ನ ಮಾಡಿದ್ದೇನೆ.

ಯಾರೋ ದೊಡ್ಡವರು ಒಂದು ಮಾತನ್ನು ಹೇಳಿ ಹೋಗಿದ್ದಾರೆ ಎಂದರೆ ಅದನ್ನು ಅವರ Quote ಎನ್ನುತ್ತೇವೆ. Quotes ನಲ್ಲಿ ಹೇಳಬಹುದಾದ Quote ಬಗ್ಗೆ ಒಂದು ಉದಾಹರಣೆ ಹೇಳಬಹುದು ಎಂದರೆ 'ಮಹಾಭಾರತದ ಯುದ್ಧ ಸಮಯದಲ್ಲಿ ಮಹಾಪರಾಕ್ರಮಿಯಾಗಿ ವಿಜೃಂಭಿಸುತ್ತಿದ್ದ ದ್ರೋಣರನ್ನು ಹತ್ತಿಕ್ಕಲು ಕೃಷ್ಣನ ಸಲಹೆಯಂತೆ ಭೀಮನು ಅಶ್ವತ್ಥಾಮ ಎಂಬ ಹೆಸರಿನ ಆನೆಯನ್ನು ಕೊಂದ ಮೇಲೆ, ಧರ್ಮಜನು ದ್ರೋಣರ ಬಳಿ ಸಾಗಿ, 'ಅಶ್ವತ್ತಾಮ ಹತಃ' ಎಂದು ನುಡಿದು ಮೆಲ್ಲಗೆ ಕುಂಜರಃ' ಎನ್ನುತ್ತಾನೆ.

Srinath Bhalle Column: Let Us Quote a Couple of Quotes About the Coat

ಅಶ್ವತ್ಥಾಮ ಹತಃ ಕುಂಜರಃ
ಧರ್ಮರಾಯನ ಬಗ್ಗೆ ಹೇಳುವಾಗ ಹಲವಾರು ವಿಚಾರಗಳು ತಲೆಗೆ ಬರುವಂತೆ, 'ಅಶ್ವತ್ಥಾಮ ಹತಃ ಕುಂಜರಃ' ಎಂಬ Quote ನೆನಪಿಗೆ ಬರುವುದು ಸರ್ವೇಸಾಮಾನ್ಯ. ನಾನು ಇಲ್ಲಿ ಆ ವಿಷಯ quote ಮಾಡುವಾಗ ಅದನ್ನು ಒಂದು ವಾಕ್ಯದೊಳಗೆ ಸೇರಿಸಿದ್ದೇನೆ. ಮೂಲ ವಾಕ್ಯವನ್ನು Double Quotes ನಲ್ಲಿ ಹೇಳುತ್ತಾ Quote ಅನ್ನು Single Quotes ನಲ್ಲಿ ಉಲ್ಲೇಖಿಸಿದ್ದೇನೆ. ಸಿಂಗಲ್ ಅಥವಾ ಡಬಲ್ Quotes ಎಂಬ ಬಳಕೆಯು ನಮ್ಮಲ್ಲಿ inverted comma ಎಂದು ಹೇಳುತ್ತೇವೆ.

ಈಗ Coat ವಿಷಯಕ್ಕೆ ಬರೋಣ. ಮೊನ್ನೆ ಒಂದು ಫಾರ್ಮಸಿಗೆ ಹೋಗಿದ್ದೆ. ಅಲ್ಲೊಂದು ಐರನ್ ಟ್ಯಾಬ್ಲೆಟ್ ಡಬ್ಬ ಕಣ್ಣಿಗೆ ಬಿತ್ತು. ಅದರ ಮೇಲೆ 'now ಡೈ ಫ್ರೀ' ಅಂತ ಇತ್ತು. ಅಯ್ಯಯ್ಯಪ್ಪಾ! ಅಂತೇನೂ ಅನ್ನಿಸಲಿಲ್ಲ ಯಾಕೆ ಅಂದ್ರೆ ಅದು now dye free ಅಂತ ಇದ್ದಿದ್ದು. Dye ಇಲ್ಲಾ ಅಂದ್ರೆ ಮೊದಲಿನ ರೂಪ ಹೇಗಿತ್ತು ಎಂದು ನೋಡುವಾ ಅಂತ ಗೂಗಲ್‌ನಲ್ಲಿ ಹುಡುಕಿದೆ. ಕೆಂಪುಕೆಂಪಾಗಿ ಮುದ್ದಾಗಿ ಟೇಬಲ್ ಈಗ ಕಳೆಗುಂದಿದ Grey ಅರ್ಥಾತ್ ಬೂದುಬಣ್ಣ. ಕೆಂಪು ಕೋಟ್ ಹೊಡೆದ ಮಾತ್ರೆ ಕೆಂಪುಕೆಂಪಾಗಿತ್ತು. ಈಗ ಕಳೆಗುಂದಿರುವ ಮಾತ್ರೆಯು non-coated. ಈ ವಿಷಯ ಓದಿದ ಮೇಲೆ ಮನಸ್ಸು ತಂತಾನೇ ಸೌಂದರ್ಯದ ಕಡೆಗೆ ಗಮನ ಹರಿಸಿತ್ತು.

ದೇವಲೋಕದ ಸುಂದರಿ ಎಂದೇ ಕಾಣಿಸುತ್ತಾರೆ
ಸಿನಿಮಾ ಪ್ರಪಂಚದಲ್ಲಿ ಕೋಟ್ ಇಲ್ಲದಿದ್ದರೆ ಸಾಧ್ಯವೇ ಇಲ್ಲ, ತೆರೆಯ ಮೇಲೆ ಅದ್ಬುತ ಸೌಂದರ್ಯ ಎಂಬಂತೆ ಕಾಣಿಸುವ ಎಷ್ಟೋ ತಾರಾಲೋಕದ ತಾರೆಯರು ಒಮ್ಮೆ ಆ ಮೇಕಪ್ ಅನ್ನು ತೆಗೆದರು ಎಂದರೆ ಅವರೇನಾ ಇವರು ಎಂಬಂತೆ ತೋರಿದರೆ ಅಚ್ಚರಿಯಿಲ್ಲ. ಮೇಕಪ್ ಇಲ್ಲದೇ ಅವರುಗಳು ಎದುರಿಗೆ ಬಂದರೆ ಹಲವೊಮ್ಮೆ ಅವರು ಗುರುತೇ ಸಿಗುವುದಿಲ್ಲ. ಮುಖದ ಮೇಲೆ ಬಳಿದುಕೊಳ್ಳುವ ಆ multi layer coat ಅರ್ಥಾತ್ ಬಹುಪದರದ ಬಣ್ಣವು ಅವರ ಮುಖದ ಮೇಲೆ ಬೀಳುವ ಬೆಳಕನ್ನು ಪ್ರತಿಫಲಿಸಿ ಅವರು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಅಂಥಾ ಬೆಳಕಿನಲ್ಲೇ ಅವರ ಚಿತ್ರಗಳನ್ನು ತೆಗೆದು, ಕಂಪ್ಯೂಟರ್ ಬಳಸಿ ಕುಂದುಕೊರತೆಗಳನ್ನು ತೆಗೆದು, ಸಿನಿಮಾ ಪತ್ರಿಕೆಗಳಲ್ಲಿ ಅಥವಾ ಅಂತರ್ಜಾಲದಲ್ಲಿ ತೇಲಿಬಿಟ್ಟಾಗ, ದೇವಲೋಕದ ಸುಂದರಿ ಎಂದೇ ಕಾಣಿಸುತ್ತಾರೆ.

ದಿನನಿತ್ಯ ಬಳಕೆಗೆ ಬರೀ ಪ್ರೈಮರ್ ಹಚ್ಚಿಕೊಳ್ಳುವ ಸುಂದರಿಯರು
ಈ ವಿಷಯದ ವಿಚಾರಗಳು ಮನಸ್ಸಿನಲ್ಲಿ ಮರಿ ಹಾಕಿದ್ದಾಗ, ನಮ್ಮ ಮನೆಗೆ ಪೈಂಟ್ ಮಾಡಿಸುವಾಗ ಬಂದಿದ್ದ ಪೈಂಟರ್ ಹೇಳಿದ್ದ ವಿಷಯಗಳು ನೆನಪಾದವು. ಹಳೆಯ ಪೇಂಟಿಂಗ್ ಅಥವಾ ಮೂಡಿರುವ ಕಲೆಗಳನ್ನು ಮುಚ್ಚಿ ಹಾಕಲು ಮೊದಲು ಪ್ರೈಮರ್ ಹೊಡೆಯಬೇಕು, ಆಗ ಕುಂದುಗಳು ಮುಚ್ಚುತ್ತವೆ. ಅದಾದ ಮೇಲೆ ಹಾಕುವ ಹೊಸ ಪೈಂಟ್ ಎರಡು ಬಾರಿ ಹೊಡೆಯಬೇಕು ಅಂತ. ಗೋಡೆಗೂ ಮುಖಕ್ಕೂ ಈ coating ವಿಷಯದಲ್ಲಿ ಏನೂ ವ್ಯತ್ಯಾಸವಿಲ್ಲ ಅಂತಾಯ್ತು. ಕೆಲವರ ಮುಖ ಬೆವರು ಮುಕ್ತ, ಕೆಲವರದ್ದು ಬೆವರುಯುಕ್ತ. ಮುಖದ ಮೇಲೆ ಹಚ್ಚುವ ಪ್ರೈಮರ್ ಕಣ್ಣಿಗೆ ಕಾಣದ ಅಥವಾ ಕಾಣುವ ಓರೆಕೋರೆಗಳನ್ನು ಮುಚ್ಚುತ್ತದೆ. ಪ್ರೈಮರ್ ಮೇಲೆ ಫೌಂಡೇಶನ್ ಮತ್ತು ಅದರ ಮೇಲೆ ಕಟ್ಟಡ ಕಟ್ಟುವಂತೆ ಮಿಕ್ಕ ಕೋಟ್‌ಗಳನ್ನೂ ಹೊಡೆದುಕೊಂಡಾಗ ಅವು ಜಾರದಂತೆ ಹಿಡಿದುಕೊಳ್ಳುತ್ತದೆ. ದಿನನಿತ್ಯದ ಬಳಕೆಗೆ ಬರೀ ಪ್ರೈಮರ್ ಹಚ್ಚಿಕೊಳ್ಳುವ ಸುಂದರಿಯರೂ ಇದ್ದಾರೆ.

ಗಂಡಿನ ಸೌಂದರ್ಯಕ್ಕೊಂದು ಕಳೆ ಕೊಡುವ coat
ಗಂಡಿನ ಸೌಂದರ್ಯಕ್ಕೊಂದು ಕಳೆ ಕೊಡುವಲ್ಲಿ coat ನದ್ದು ಬಹಳ ಮುಖ್ಯ ಪಾತ್ರವಿದೆ. ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಸೂಟಿನ ಕೋಟು ಬಹುಮುಖ್ಯ ಪಾತ್ರವಹಿಸುತ್ತದೆ. ಈ ಸೂಟಿನ ಕೋಟಿಗೆ ಹಲವಾರು ಹೆಸರುಗಳೂ ಇವೆ. ಠಾಕುಠೀಕು ಎಂದಾಗ ಕೋಟ್ ಎನಿಸಿಕೊಳ್ಳುವ ಇವು ಫಾರ್ಮಲ್ ಅಲ್ಲದೇ ಇರುವಾಗ blazer ಎನಿಸಿಕೊಳ್ಳುತ್ತದೆ.

ಈ ಬ್ಲೇಜರ್ ಅನ್ನು ಟೀ ಶರ್ಟಿನ ಮೇಲೂ ಧರಿಸಬಹುದು. ಈ coatಗಳ ಬಳಕೆಯಲ್ಲೂ ಹಲವು ರೀತಿ ಇದೆ. inner ಕೋಟ್ ಎಂಬುದೊಂದು, outer ಕೋಟ್ ಎಂಬುದು ಮಗದೊಂದು. ಅತೀ ಹೆಚ್ಚಿನ ಚಳಿ ಇರುವ ಪ್ರದೇಶಗಳಲ್ಲಿ, ಧರಿಸಿರುವ ದಿರಿಸಿನ ಮೇಲೆ ಒಂದು inner coat, ಅದರ ಮೇಲೆ ಒಂದು ಲಾಂಗ್ ಕೋಟ್ ಧರಿಸಿರುತ್ತಾರೆ. ಮನೆಯೊಳಗೆ ಕಾಲಿಟ್ಟ ಮೇಲೆ ಹೊರಗಿನ ಕೋಟ್ ತೆಗೆದು inner ಕೋಟಿನಲ್ಲೇ ಇರುತ್ತಾರೆ. ಸಾಮಾನ್ಯವಾಗಿ ಈ inner ಕೋಟ್ ಎಂಬುದು ಸ್ಲೇವ್ ಲೆಸ್ ಆಗಿರುತ್ತದೆ.

ಹರಿದ ಅಂಗಿಯನ್ನು ಮುಚ್ಚುವ ಒಂದು ವಸ್ತ್ರ
ಲಾಂಗ್ ಕೋಟ್ ಎಂದ ಕೂಡಲೇ ನೆನಪಿಗೆ ಬರುವವನೇ ಷರ್ಲಾಕ್ ಹೋಮ್ಸ್. ತಲೆಯ ಮೇಲೊಂದು ಹ್ಯಾಟ್, ಬಾಯಲ್ಲಿ ಸಿಗಾರ್, ಬೂಟು ಜೊತೆಗೆ ಉದ್ದನೆಯ ಕೋಟು ಕಣ್ಣಿಗೆ ಕಟ್ಟಿದಂತೆ ಇರುವ ದಿರಿಸು ಇಂದಿಗೂ ಬಲು ಪ್ರಖ್ಯಾತ ದಿರಿಸು. ಸಿಐಡಿ ಧಾರಾವಾಹಿಯಲ್ಲಿ ಪ್ರದ್ಯುಮನ್, ಡಾಕ್ಟರ್ ಸಾಲುಂಕೆ ಹೆಚ್ಚಾಗಿ ಸೂಟ್-ಬೂಟ್-ಕೋಟ್ ಧರಿಸಿದರೆ, ಅಭಿಜಿತ್ blazer ಧರಿಸುವಾತ.

ಬಹಳ ಹಿಂದೆ ಒಂದು ಸಿನಿಮಾ ನೋಡಿದ್ದೆ. ಅದರಲ್ಲಿ ನಾಯಕ ಸದಾ ಕೆಲಸಕ್ಕೆ ಕರೀ ಕೋಟು ಧರಿಸಿ ಬರುತ್ತಿರುತ್ತಾನೆ. ಕ್ರಮೇಣ ಅಲ್ಲಿನ ಜನ ಅವನನ್ನು ಆಡಿಕೊಂಡು ನಗೋದು, ಅವನು ಬಂದಾಗ ಮೂಗುಮುಚ್ಚಿಕೊಳ್ಳುತ್ತಾರೆ. ಕೊನೆಗೊಂದು ದಿನದ ಪರಿಸ್ಥಿತಿ ಕೈಮೀರಿದಾಗ ಅವನು ಕೋಟ್ ಅನ್ನು ತೆಗೆಯಬೇಕಾದ ಪ್ರಸಂಗ ಒದಗಿದಾಗ ಎಲ್ಲರಿಗೂ ಅರಿವಾಗುತ್ತದೆ ಆ ಕೋಟು ಅವನ ಸಿರಿವಂತಿಕೆ ಆಗಿರದೆ, ಫ್ಯಾಷನ್ ಆಗಿರದೇ, ಅವನಲ್ಲಿದ್ದ ಏಕೈಕ ಹರಿದ ಅಂಗಿಯನ್ನು ಮುಚ್ಚುವ ಒಂದು ವಸ್ತ್ರವೇ ಆಗಿರುತ್ತದೆ.

ಸರ್ ಎಂ.ವಿಶ್ವೇಶ್ವರಯ್ಯನವರು ಸದಾ ಕೋಟುಧಾರಿಗಳೇ
ಇನ್ನೂ ಹಲವಾರು ವಿಚಾರಗಳ ಸುತ್ತ ಈ ಕೋಟು ಸುತ್ತಿಕೊಂಡಿದೆ. ಚಿಕ್ಕ ಚಿಕ್ಕದಾಗಿ ಹೇಳಹೊರಟಿದ್ದೇನೆ ಆದರೆ ಅದರ ಆಳ ಮಾತ್ರ ಸಣ್ಣದಲ್ಲ. ತೇಪೆ ಹಾಕಿದ ಅಪ್ಪನ ಕೋಟು, ಬಡತನವನ್ನು ತೋರಿಸುವಾಗ ಬಳಸಿಕೊಳ್ಳುವ ಒಂದು ದಿರಿಸು. ಈ ಕೋಟು ಎಂಬುದು ಅಂದಿನ ಕಾಲದ ಖ್ಯಾತ ಕವಿಗಳ ಮೈಮೇಲೆ ಕಾಣುವ ಒಂದು ಸಾಮಾನ್ಯ ನೋಟ. ನಮ್ಮ ಕುವೆಂಪು, ದ.ರಾ. ಬೇಂದ್ರೆ ಅಜ್ಜ, ಕನ್ನಡದ ಆಸ್ತಿಯಾದ ಮಾಸ್ತಿ ಅಜ್ಜ, ಗೋಕಾಕರು ಮುಂತಾದವರೆಲ್ಲ ಕೋಟುಧಾರಿಗಳೇ. ನಮ್ಮ ಸರ್ ಎಂ.ವಿಶ್ವೇಶ್ವರಯ್ಯನವರು ಸದಾ ಕೋಟುಧಾರಿಗಳೇ ಆಗಿದ್ದರು.

ಹಾಸಿಗೆ ಇದ್ದಷ್ಟು ಕಾಲು ಚಾಚು
ಯಾವುದಾದರೂ ಒಂದು ಕೆಲಸಕ್ಕೆ ಎಷ್ಟು ಖರ್ಚಾಗಬಹುದು ಎಂಬುದಕ್ಕೆ quotation ಕೇಳುತ್ತೇವಲ್ಲ ಅದನ್ನೂ quote ಎಂದೇ ಕರೆಯುವುದು. ಮಳೆಗಾಲದಲ್ಲಿ ತಲೆಗೆ ಛತ್ರಿ ಬಳಸುತ್ತೇವೆ ಸರಿ ಆದರೆ ಬಟ್ಟೆ ಒದ್ದೆಯಾಗಬಾರದು ಎಂದರೆ ಬಟ್ಟೆಯ ಮೇಲೆ rain coat ಧರಿಸುತ್ತಾರೆ. ವೈದ್ಯಕೀಯ ಕಲಿಕೆಯ ಕ್ಷೇತ್ರಕ್ಕೆ ಕಾಲಿಡುವ ಮುನ್ನ ನಡೆಯುವ ವಿದ್ಯಾರ್ಥಿಗಳಿಗೆ ಬಿಳಿಯ ಕೋಟ್ ಹಾಕಿ ಅವರಿಂದ ಒಂದು oath ತೆಗೆದುಕೊಳ್ಳುವ ಕ್ರಿಯೆಯೇ White Coat ಸಮಾರಂಭ.

Cut your coat according to your cloth ಎಂಬುದು ಆಂಗ್ಲ ನುಡಿಗಟ್ಟು. Coat ಬಗ್ಗೆ ಇರುವ ಈ Quote ಅನ್ನು Quotes ಒಳಗೆ ಬರೆದು ಹೇಳಬೇಕು ಎಂದರೆ 'ಹಾಸಿಗೆ ಇದ್ದಷ್ಟು ಕಾಲು ಚಾಚು' ಅಂತ. ದೇಹವನ್ನು ಅಲಂಕರಿಸುವ ಕೋಟು ದೊಡ್ಡದಾಗಿದ್ದರೆ ಕೆಟ್ಟದಾಗಿ ಕಾಣುತ್ತೆ, ಚಿಕ್ಕದಾಗಿದ್ದರೆ ಇನ್ನೂ ಕೆಟ್ಟದಾಗಿ ಕಾಣುತ್ತೆ. ಸಂದರ್ಶನಕ್ಕೆ ಹೋಗುವಾಗ ಈ ವಿಷಯ ನೆನಪಿರಲಿ. Coat ಬಗ್ಗೆ ಹೇಳಿದ quotes ಬಗ್ಗೆ ನಿಮ್ಮ ಅನಿಸಿಕೆ ಹೇಳುವಿರಾ?

English summary
Srinath Bhalle Columns: If someone big person says something, it's called their Quote.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X