• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀನಾಥ್ ಭಲ್ಲೆ ಅಂಕಣ: ಚಿಪ್ಸ್ ತಿನ್ಕೊಂಡು ಚಿಪ್ಪಿನ ಬಗ್ಗೆ ಮಾತನಾಡೋಣ

|
Google Oneindia Kannada News

ಆಲೂಗಡ್ಡೆ ಚಿಪ್ಸ್ ಯಾರು ತಾನೇ ತಿಂದಿಲ್ಲ ಎಂದು ಕೇಳುವುದಕ್ಕಿಂತಾ ಹಲವಾರು ಮಂದಿ ತಿಂದೇ ಇರುತ್ತೀರಿ ಎನ್ನೋಣ. ಈಗ ಅಂಗಡಿಯಲ್ಲಿ ದೊರೆಯುವ ಚಿಪ್ಸ್ ಪ್ಯಾಕೆಟ್ ಬಗ್ಗೆ ಮಾತನಾಡೋಣ. ಎಣ್ಣೆಯಲ್ಲಿ ಕರೆದ ಚಿಪ್ಸ್ ಅನ್ನು ಸುಮ್ಮನೆ ಒಂದು ಕವರಿನಲ್ಲಿ ತುಂಬಿದರೆ ಹಾಳಾಗುವುದು ಖಂಡಿತ. ಗಮಟು ವಾಸನೆ ಬರುತ್ತದೆ. ಇದಕ್ಕಾಗಿ ಒಂದಷ್ಟು ಗಾಳಿ ತುಂಬಲೇಬೇಕು. ನೈಟ್ರೋಜನ್ ಅನ್ನು ಚಿಪ್ಸ್ ಜೊತೆಗೆ ಒಂದು ಕವರಿನಲ್ಲಿ ತುಂಬಿ ಸೀಲ್ ಮಾಡಿದರೆ ಕವರಿನ ಒಡಲ ಒಳಗಿನ ಚಿಪ್ಸ್ ಹಲವು ಕಾಲ ಫ್ರೆಶ್ ಆಗಿ ಇರುವುದು ಖಂಡಿತ. ಬರೀ ಗಾಳಿ ತುಂಬಿ ವ್ಯಾಪಾರ ಮಾಡ್ತಾರೆ ಅನ್ನೋದು ವಿಷಯವಲ್ಲ. ಈಗ ಚಿಪ್ಸ್ ತಿಂದು ಫ್ರೆಶ್ ಆಗಿ ಮುಂದಿನ ವಿಷಯಗಳನ್ನು ಅರಿಯೋಣ.

ಪ್ರಾಣಿಗಳಲ್ಲಿ ಎರಡು ವಿಧಗಳು ಅಂತ ನಿಮಗೂ ಗೊತ್ತಿದೆ. ಕೆಲವಕ್ಕೆ ಬೆನ್ನು ಮೂಳೆಗಳು ಇರುವುದಿಲ್ಲ. ಹಲವಕ್ಕೆ ಬೆನ್ನು ಮೂಳೆ ಇರುತ್ತದೆ. ಬೆನ್ನು ಮೂಳೆ ಇರುವವರು ನಿಲ್ಲದೇ, ಕೂರದೇ, ಓಡಾಡದೇ, ಸೋಫಾ ಮೇಲೆ ಬಿದ್ದುಗೊಂಡಿದ್ದರೆ ಅವರನ್ನು ಬೆನ್ನುಮೂಳೆ ರಹಿತರು ಎಂದೂ ಕರೆಯುತ್ತಾರೆ. ಬೆನ್ನುಮೂಳೆ ರಹಿತ ಪ್ರಾಣಿಗಳನ್ನು ಮೃದ್ವಂಗಿಗಳು ಎಂದೂ ಕರೆಯುತ್ತಾರೆ. ಇಂಥಾ ಮೃದ್ವಂಗಿಗಳು ಸಾಮಾನ್ಯವಾಗಿ ಸಮುದ್ರದಲ್ಲಿ ಇರುತ್ತವೆ. ಇವು ಹಾಗೆಯೇ ಓಡಾಡಿಕೊಂಡಿದ್ದರೆ ಅವನ್ನು ನುಂಗುವ ಪ್ರಾಣಿಗಳು ಹೇರಳ. ಹೀಗಾಗಿ ತಮ್ಮನ್ನು ತಾವು ಕಾಪಾಡಿಕೊಳ್ಳಲು ಮಾಡುವುದೇನು?

ಸತ್ತ ಮೇಲೆ ಈ ಚಿಪ್ಪುಗಳು ಸಮುದ್ರದ ದಡಕ್ಕೆ
ಸಮುದ್ರದಲ್ಲಿರುವ ಕ್ಯಾಲ್ಸಿಯಂ ಕಾರ್ಬೋನೇಟ್ ಬಳಸಿಕೊಂಡು ಈ ಮೃದ್ವಂಗಿಗಳು ತಮ್ಮ ಸುತ್ತಲೂ ಶೆಲ್ ಅಥವಾ ಕೋಟೆಯನ್ನು ಕಟ್ಟಿಕೊಳ್ಳುತ್ತದೆ. ಇದುವೇ ಚಿಪ್ಪು. ಮೊದಲ ಪ್ರಶ್ನೆ ಇದನ್ನೇಕೆ ಕಪ್ಪೆ ಚಿಪ್ಪು ಅಂತ ಕರೆಯುತ್ತಾರೆ ಅಂತ ಹೇಳಿಬಿಡಿ ಆಯ್ತಾ? ಮೃದ್ವಂಗಿಗಳು ತಮ್ಮ ಸುತ್ತ ಕೋಟೆ ಕಟ್ಟಿಕೊಳ್ಳುತ್ತದೆಯೇ ಹೊರತು ಅವಕ್ಕೆ ಅಂಟಿಕೊಂಡಿರೋದಿಲ್ಲ. ಅವು ಸತ್ತ ಮೇಲೆ ಈ ಚಿಪ್ಪುಗಳು ಸಮುದ್ರದ ದಡಕ್ಕೆ ಕೊಚ್ಚಿಕೊಂಡು ಬರುತ್ತವೆ. ಇಂಥಾ ಚಿಪ್ಪುಗಳಲ್ಲಿ ಎಷ್ಟು ವಿಧ? ಇದು ತುಂಬಾ ಕಷ್ಟದ ಪ್ರಶ್ನೆ ಬಿಡಿ. ನನಗಂತೂ ಅದೆಷ್ಟು ಪ್ರಭೇದಗಳಿವೆ ಎಂದು ಗೊತ್ತಿಲ್ಲ. ಚಿಕ್ಕಪುಟ್ಟ ಚಿಪ್ಪಿನಿಂದ ಹಿಡಿದು ಶಂಖದ ಚಿಪ್ಪುಗಳೂ ಸಮುದ್ರದ ಒಡಲಲ್ಲಿ ಇರುತ್ತದೆ.


ನಾವು ಚಿಪ್ಪಿನೊಳಗೋ? ನಮ್ಮೊಳು ಚಿಪ್ಪು ಇರುವುದೋ? ಮೃದ್ವಂಗಿಗಳು ಚಿಪ್ಪಿನೊಳಗೆ. ಆದರೆ ನಮ್ಮಲ್ಲಿ ಚಿಪ್ಪು ಇರುತ್ತದೆ. ಅದೇ ತಲೆಚಿಪ್ಪು ಅಲಿಯಾಸ್ skill. ಈ ಚಿಪ್ಪು ಢಮ್ ಎಂದರೆ ನಾವು ಇರುವುದಿಲ್ಲ ಅಕಸ್ಮಾತ್ ಇದ್ದರೂ ಪ್ರಯೋಜನವಿಲ್ಲ. ಈ ಚಿಪ್ಪಿನ ನೆತ್ತಿಯ ಭಾಗ ಪಟಕ್ ಎಂದರೆ ಪ್ರಾಣವಾಯು ಸುಯ್ ಎಂದು ಹೊರಗೆ ಓಡುತ್ತದೆ. ಹೀಗಾಗದಿರಲಿ ಎಂದೇ, ಗಾಡಿ ಓಡಿಸುವಾಗ ಅಥವಾ ವೇಗದ ಬಾಲ್ ಅನ್ನು ಎದುರಿಸುವಾಗ, ಈ ತಲೆ ಚಿಪ್ಪಿನ ಮೇಲೆ ಶಿರಸ್ತ್ರಾಣ ಅಥವಾ ಹೆಲ್ಮೆಟ್ ಎಂಬ ಚಿಪ್ಪು ಧರಿಸಿ ಎಂದು ಹೇಳುವುದು. ಈ ತಲೆಚಿಪ್ಪು, ಒಳಗಿರುವ ಮೆದುಳಿಗೆ ರಕ್ಷಕ. ಈ ಚಿಪ್ಪಿಗೆ ಮೆಲ್ಲನೆ ಬಡಿದು "ಅರ್ಧ ಬೆಂದ ಮಡಿಕೆ, ಪೂರ್ಣ ಬೆಂದ ಮಡಿಕೆ' ಎಂದು ಹೇಳಬಲ್ಲ ಭಕ್ತ ಕುಂಬಾರ, ನಮ್ಮ ಚಿಪ್ಪಿನ ಮೇಲೆ ಬಡಿದರೆ "ಇದು ಮಡಕೆಯೇ ಅಲ್ಲ' ಎನ್ನಬಹುದೇ?

ಅಂತರ್ಮುಖಿಗಳು ಹಿಂಜರಿಕೆಯಲ್ಲಿ ಪ್ರಸಿದ್ಧರು
ಬೆನ್ನು ಮೂಳೆ ರಹಿತರಾದ ನಮ್ಮೊಳಗೇ ಚಿಪ್ಪು ಇರೋದು ಎಂದಿದ್ದು ದೈಹಿಕವಾಗಿ ನೋಡುವಾಗ ಮಾತ್ರ. ಆದರೆ, ತಾರ್ಕಿಕವಾಗಿ ಅರ್ಥಾತ್ logically ನೋಡಿದಾಗ ಹಲವು ಬಾರಿ ಭಿನ್ನವೂ ಆಗಬಹುದು. ಭೀತಿ ಆವರಿಸಿದಾಗ ನಮಗೇ ಅರಿವಿಲ್ಲದೆ ಚಿಪ್ಪಿನೊಳಗೆ ಸೇರಿಕೊಳ್ಳುತ್ತೇವೆ. Introvert ಅಥವಾ ಅಂತರ್ಮುಖಿಗಳು ಹಿಂಜರಿಕೆಯಲ್ಲಿ ಪ್ರಸಿದ್ಧರು. ಜನರ ಮಧ್ಯೆ ಇದ್ದರೂ ಬೆರೆಯಲಾರರು. ಕೇಳಿದ ಪ್ರಶ್ನೆಗೆ ಉತ್ತರ ಎಂಬಂತೆ ಇವರ ಗುಣವೂ ಆಗಿರುತ್ತದೆ. ಹಾಗಂತ ಇವರು ಸಾಧಕರಲ್ಲಾ ಎಂಬುದು ತಪ್ಪು. ತಮ್ಮದೇ ಚಿಪ್ಪಿನಲ್ಲಿ ಒಂದು ಸಾಮ್ರಾಜ್ಯ ನಿರ್ಮಿಸಿಕೊಂಡು ಅದರ ಅಧಿಪತಿಗಳೇ ಆಗಿರುತ್ತಾರೆ. ಉದಾಹರಣೆ ತೆಗೆದುಕೊಂಡರೆ Albert Einstein ಗಿಂತ ಉತ್ತಮ ಉದಾಹರಣೆ ಇಲ್ಲ.

ಒಂದು ಮುತ್ತಿನ ಚಿಪ್ಪಿನ ಕಥೆ
ಅಂತರಮುಖಿಗಳು ಹೊರಗೆ ಹೇಳಿಕೊಳ್ಳಲಾರರು ಎಂಬುದು, ಅವರು ಕೆಲವೊಮ್ಮೆ ಅತೀ ಬುದ್ಧಿವಂತರೂ ಆಗಬಹುದು ಅಥವಾ ಎಷ್ಟೋ ಸಾರಿ depressionಗೆ ಒಳಗಾಗುತ್ತಾರೆ ಕೂಡ. ತಮ್ಮೊಳಗೆ ಕೊರಗುತ್ತಾರೆ ಅಥವಾ ಇನ್ನೇನೋ ದುರ್ವ್ಯಸನಿಗಳಾಗುತ್ತಾರೆ. ಅಂತರಮುಖಿಗಳೆಲ್ಲಾ ಅವರದ್ದೇ ರಾಜ್ಯದ ಅಧಿಪತಿಗಳು ಆಗಿರಬಹುದು ಆದರೆ ಇವರ ಕೊಡುಗೆ ಏನು ಎಂಬುದನ್ನು ನೋಡಿದಾಗ ಇಂಥದ್ದೇ ಎಂದು ಹೇಳಲಾಗದು. ಬಹಿರ್ಮುಖಿಗಳೂ ಕೂಡ ಹೀಗೇನೆ. ವಟವಟ ಎಂದ ಮಾತ್ರಕ್ಕೆ ಭಯಂಕರ ಸಾಧಕರು ಅಂತಲ್ಲ. ಈ ಮಾತನ್ನು ಯಾವುದಕ್ಕೆ ಹೋಲಿಸಬಹುದು ಎಂದರೆ ಎಲ್ಲಾ oyster ಚಿಪ್ಪಿನಿಂದಲೂ ಒಂದು ಮುತ್ತು ಹುಟ್ಟುತ್ತದೆ ಎಂದು ಅಂದುಕೊಂಡಂತೆ. ಹತ್ತು ಸಾವಿರದಲ್ಲೊಂದು ಶ್ರೇಷ್ಠ ಮುತ್ತಾಗುತ್ತದಂತೆ. ಶ್ರೇಷ್ಠವಲ್ಲದ್ದು ಹಲವು ಮುತ್ತುಗಳು ಹುಟ್ಟಿದರೂ ವ್ಯಾವಹಾರಿಕ ಜಗತ್ತಿನಲ್ಲಿ ಇವಕ್ಕೆ ಮೌಲ್ಯವಿರುವುದಿಲ್ಲ. ಇದು "ಒಂದು ಮುತ್ತಿನ ಚಿಪ್ಪಿನ ಕಥೆ'.

ಈ ಸಲಾನೂ ಕಪ್ಪು ನಮ್ಮದಲ್ಲ
ಕ್ರಿಕೆಟ್ ವಿಷಯವನ್ನೇ ತೆಗೆದುಕೊಂಡರೆ, RCB ಮಾತನ್ನೇ ಆಡುತ್ತೇವೆ ಅಲ್ಲವೇ? ಬೆಂಗಳೂರು ಪಡೆಯಿಂದ "ಈ ಸಲಾನೂ ಕಪ್ಪು ನಮ್ಮದಲ್ಲ' ಎಂದರೆ ಮತ್ತೇನು ಎಂದು ಕೇಳಿದಾಗ ನಿಮ್ಮ ಉತ್ತರ? ಚಿಪ್ಪು ತಾನೇ? ಇದಾವ ಚಿಪ್ಪು? ಇದುವೇ ತೆಂಗಿನ ಚಿಪ್ಪು. ಮರದಲ್ಲಿರುವ ತೆಂಗಿಗೆ ದಪ್ಪನೆಯ ನಾರುಗಳ ಹೊರ ಕವಚ ಇರುತ್ತದೆ ಅದನ್ನು ಸುಲಿದರೆ ಅದ್ಭುತವಾದ ಚಿಪ್ಪಿನ ಕವಚ. ಅದನ್ನೂ ಸೀಳಲು ಇರುವುದೇ ಕೊಬ್ಬರಿ ಅಂಶ. ಅದನ್ನೂ ಬಗೆದರೆ ಸಿಗುವುದೇ ಎಳನೀರು. ಸಿಹಿಯಾದ ಮತ್ತು ಪರಿಶುದ್ಧವಾದ ಎಳನೀರು. ಒಂದು ಯತ್ನದ ಫಲ ಸಿಗಬೇಕು ಎಂದರೆ ಅದಕ್ಕೆ ಕಷ್ಟ ಪಡಬೇಕು ಎಂಬುದನ್ನು ಸಾರುವ ಸಿಹಿ ಸಾರ. ಕಾಯಿ ಒಣಗಿದ್ದೇ ಆದರೆ ಅಲ್ಲಿ ನೀರು ಇರುವುದಿಲ್ಲ. ಹೀಗಿರುವಾಗ ಚಿಪ್ಪಿಗೂ ಕೊಬ್ಬರಿಗೂ ನಂಟೂ ಕಡಿಮೆಯೇ ಇರುತ್ತದೆ. ಹಾಗಾಗಿ ಒಡೆದಾಗ ಕೈಗೆ ಸಿಗುವುದೇ ಚಿಪ್ಪು. ಇದು ಖಾದ್ಯ ಯೋಗ್ಯವಲ್ಲ ಆದರೆ ವಾದ್ಯ ಯೋಗ್ಯ ಹೌದು. ಯಾವ ಲಲಿತ ಕಲೆಯೂ ಅರಿಯದವಗೆ ಈ ಚಿಪ್ಪು ಸಿಕ್ಕರೆ ಅವ ಮಾಡೋದೇನು? ಇದೇ ಕೈಗೆ ಬಂದ ತೆಂಗಿನ ಚಿಪ್ಪಿನ ವೃತ್ತಾಂತ, ಆದರೆ ಚಿಪ್ಪಿನ ಉಪಯೋಗ ಬಹಳಷ್ಟಿದೆ.

ಚಿಪ್ಪಿನೊಂದಿಗೆ ನಮ್ಮ ಜೀವನವೋ? ನಮ್ಮ ಜೀವನವೇ ಚಿಪ್ಪೋ?
ಈವರೆಗೆ ಆಡಿದ ಎಲ್ಲ ವಿಷಯಗಳ ಆಚೆ ಮತ್ತೊಂದು ಚಿಪ್ಪು ಇದೆ ಅದರ ಬಗ್ಗೆಯೇ ಆಗಲೇ ಹೇಳಿದ್ದು ಮಾತನಾಡೋಣ ಅಂತ. ಈಗ ಆಡುವ ಚಿಪ್ಪಿನ ಬಗೆಗಿನ ವಿಷಯಕ್ಕೆ "ಚಿಪ್ಪಿನೊಂದಿಗೆ ನಮ್ಮ ಜೀವನವೋ? ನಮ್ಮ ಜೀವನವೇ ಚಿಪ್ಪೋ?' ಎಂಬುದು ಸಲ್ಲುತ್ತದೆ. ಇದಾವ Chip ಎಂಬುದು ನಿಮಗೆ ಗೊತ್ತೇ ಇದೆ. ಈ ಜಗತ್ತಿನಲ್ಲಿ ಅತೀ ಹೆಚ್ಚು ಚಿಪ್ ತಯಾರಿಸುವ ದೇಶಗಳು ತೈವಾನ್ ಮತ್ತು ದಕ್ಷಿಣ ಕೊರಿಯಾ. ಅಮೆರಿಕದಲ್ಲಿ ಚಿಪ್ ತಯಾರಿಕೆಯ ಹೊಣೆ ಹೊತ್ತಿರುವವರು ಇಂಟೆಲ್ ಮತ್ತಿತರರು. ನಿರಂತರವಾದ demand ಮತ್ತು ನಿರಂತರವಾದ supply ಕೂಡಾ ಇದ್ದುದರಿಂದ ಆವಿಷ್ಕಾರಗಳಿಗೆ ಕೊನೆ ಇರದಿದ್ದ ಕಾಲದಲ್ಲಿ ವಿಶ್ವ ಬರೀ ಓಡುವುದಲ್ಲದೆ ನಾಗಾಲೋಟದಲ್ಲಿ ಓಡುತ್ತಿತ್ತು. ಒಮ್ಮೆ ಕೋವಿಡ್ ಬಂದು ಬಡಿಯಿತೋ ಇಲ್ಲವೋ ಹಲವಾರು ತಯಾರಿಕಾ ಘಟಕಗಳು ಬಂದ್ ಆಯಿತು. ಎಲ್ಲೆಡೆ ಬೇಡಿಕೆ ಹಾಗೆಯೇ ಇತ್ತು ಆದರೆ ಪೂರೈಕೆ ನಿಂತಂತಾಗಿ ಒಂದೊಂದೂ ವಸ್ತುವಿಗೆ ಹಲವಾರು ತಿಂಗಳು ಕಾಯುವಂತೆ ಆಯಿತು.

ಈ ಚಿಪ್ಪಿಗೂ, ಜೀವನಕ್ಕೂ ಏನು ಬಂಧ?
ನಮಗೂ ಈ ಚಿಪ್ಪಿಗೂ ಅಂಥಾ ಸಂಬಂಧವೇನಿಲ್ಲ. ನಾವಾಯ್ತು, ನಮ್ಮ ಮನೆ ಆಯಿತು, ಬಿಡುವಾದಾಗ ನಮ್ಮ ಮೊಬೈಲ್ ಆಯಿತು ಎನ್ನಬಹುದು. ಆದರೆ ವಿಷಯ ಇರುವುದೇ ಇಲ್ಲಿ ನೋಡಿ. "ಈ ಚಿಪ್ಪಿಗೂ, ಜೀವನಕ್ಕೂ ಏನು ಬಂಧವೋ?' ಎಂದಿರಾ? ಕಾಲ ಒಂದಿತ್ತು, ಕಂಪ್ಯೂಟರ್‌ಗಳನ್ನು ಒಂದು ಶೀತಲವಾದ ರೂಮಿನಲ್ಲಿ ಇರಿಸುತ್ತಿದ್ದರು. ಒಳಗೆ ಚಪ್ಪಲಿ ಅಥವಾ ಶೂಸ್ ಧರಿಸಿ ಹೋಗುವಂತಿರಲಿಲ್ಲ. ಕಾರಣ ಇಷ್ಟೇ, ಅಂದು ಬಳಕೆಯಾಗುತ್ತಿದ್ದುದು Vaccume Tubes. ಇದರಿಂದ ಬಹಳಷ್ಟು ಶಾಖ ಉತ್ಪನ್ನವಾಗುತ್ತಿದ್ದುದರಿಂದ AC ರೂಮ್ ಅತ್ಯಗತ್ಯವಾಗಿತ್ತು. ಆಮೇಲೆ ಹುಟ್ಟಿದ್ದೇ ಈ ಚಿಪ್ಪು. ಒಮ್ಮೆ ಚಿಪ್ಪಿನ ಆವಿಷ್ಕಾರ ಆಗಿದ್ದೇ ತಡ, ಕಂಪ್ಯೂಟರ್ಸ್‌ಗಳು ಟಾಯ್ಲೆಟ್‌ಗೂ ಪ್ರವೇಶ ಪಡೆಯಿತು. ಇಂದಿನ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರುವ ಕಂಪ್ಯೂಟರ್ಸ್, ಮೊಬೈಲ್ ಫೋನುಗಳು, ಓವೆನ್, ಕಾರು, Hearing Aid ಹೀಗೆ ಯಾವುದೇ ಆಗಿರಬಹುದು ಅಲ್ಲೆಲ್ಲಾ ಈ ಚಿಪ್ಪು ಇರಲೇಬೇಕು ಎಂಬಂತಾಗಿದೆ. Chip Technology ಎಂಬುದು ಇಂದು ಎಲ್ಲೆಲ್ಲೂ ಆವರಿಸಿದೆ.

ಕೈಲಿ chip ಇಲ್ಲಾ ಎಂದರೆ ಜೀವನ ಶೂನ್ಯ
ಅಂಗೈಯಲ್ಲಿ ಚಿಪ್ಪು ಬಂದರೆ ಜೀವನವೇ ಶೂನ್ಯ ಎಂಬುದನ್ನು 180 ಡಿಗ್ರಿ ತಿರುಗಿಸಿ ನೋಡಿದಾಗ ಅರಿವಾಗುತ್ತದೆ ನಾವು ಎಲ್ಲಿಗೆ ತಲುಪಿದ್ದೇವೆ ಅಂತ. ಹೀಗೇಕೆ ಹೇಳಿದೆ ಎಂದಿರಾ? ಇಂದು ಕೈಲಿ chip ಇಲ್ಲಾ ಎಂದರೆ ಜೀವನ ಶೂನ್ಯ ಎಂಬಂತಾಗಿದೆ. ಕಳೆದ ವಾರದಲ್ಲಿ ಫೇಸ್‌ಬುಕ್, ವಾಟ್ಸಪ್, ಇನ್‌ಸ್ಟಾಗ್ರಾಮ್ ಇತ್ಯಾದಿಗಳು ಮಲಗಿ ನಿದ್ದೆ ಮಾಡಿದಾಗ, ಎಷ್ಟೋ ಮಂದಿಗೆ ಹೇಗೆ ಸಮಯ ಕಳೆಯಬೇಕು ಅಂತ ತಿಳಿಯಲೇ ಇಲ್ಲವಂತೆ. ನಾವೇನು ಮಾಡಿದ್ದು ಅಂತ ಕೇಳಿದಿರಾ? ಗೊಂಬೆ ಕೂಡಿಸಲು ಮೆಟ್ಟಿಲು ಮಾಡಬೇಕಾಗಿತ್ತು. ಐದು ಮೆಟ್ಟಿಲ ಒಂದು ರಚನೆಯನ್ನು ಮಾಡುವುದಕ್ಕೆ ಎರಡು ಮೂರು ಘಂಟೆಗಳು ಬೇಕಾಗಿತ್ತು. ಇದಕ್ಕಿಂತಾ ಒಳ್ಳೆಯ ಸಮಯ ಎಲ್ಲಿ ಸಿಕ್ಕೀತು? ಸಮಯ ಕಳೆಯಲಿಲ್ಲ, ಸಮಯ ಗಳಿಸಿದೆವು ಎಂಬುದೇ ಅತ್ಯಂತ ಸಂತಸದ ವಿಷಯ. ನೀವೇನು ಮಾಡಿದಿರಿ ಈ ಚಿಪ್ಪು ಅಲ್ಲ chip ಕೈಕೊಟ್ಟಾಗ?

English summary
Srinath Bhalle Column: Let’s Talk About Shells During Eat Chips. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X