• search

ನಾಮಕ್ಕೆ ಹಣೆ, ಟೋಪಿಗೆ ತಲೆ ಸದಾ ಸಿದ್ಧವಾಗಿರಲಿ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಘನ ಬೆಂಗಳೂರಿನ ಮೈಸೂರು ಬ್ಯಾಂಕ್'ನಲ್ಲಿ ಯಾವುದೋ ಹಣ ಪಾವತಿಗಾಗಿ ಹೋಗಿದ್ದರು ಒಬ್ಬರು ಹಿರಿಯರು. ಹನುಮಂತನ ಬಾಲದಂಥಾ ಸಾಲನ್ನು ಕಂಡೇ ಅಧೀರರಾಗಿ ಇನ್ನೆಷ್ಟು ಹೊತ್ತು ಇಲ್ಲಿ ಕಳೆಯಬೇಕೋ ಎಂದು ಹಲುಬುತ್ತಾ ಸಾಲಿನ ಕೊನೆಯಲ್ಲಿ ನಿಂತರು. ಇವರ ಹಿಂದೆ ಮತ್ತೊಬ್ಬ ಮಗದೊಬ್ಬ ಅಂತ ಸೇರಿಕೊಂಡರು.

  ಅಟ್ಟದ ಮೇಲೆ ಇಟ್ಟಿರಿ ಯಾವಾಗ್ಲಾದ್ರೂ ಬೇಕಾಗತ್ತೆ!

  ಹಿರಿಯರ ಹಿಂದೆ ನಿಂತಿದ್ದವ ತನ್ನ ಫೋನಿನಲ್ಲಿ 'ಅಲ್ಲಿಗೆ ಬರ್ಲಾ? ಮಾಡಿಕೊಡ್ತೀಯಾ? ಅರ್ಜೆಂಟ್ ಕೆಲಸ ಇದೆ ಕಣೋ ಜಯನಗರದಲ್ಲಿ, ಬೇಗ ಹೋಗಬೇಕು.. ಥ್ಯಾಂಕ್ಸ್ ಗುರೂ' ಅಂತ ಮಾತನಾಡುತ್ತಿದ್ದ. ನಿರೀಕ್ಷೆಯಂತೇ ಹಿರಿಯರು ಹಿಂದೆ ತಿರುಗಿದರು. ಆತ "ನನ್ನ ಸ್ನೇಹಿತ ಕೌಂಟರ್ ಹಿಂದೆ ಇದ್ದಾನೆ. ಕೆಲಸ ಮಾಡಿಕೊಡ್ತೀನಿ ಅಂದ. ಯಾವುದಕ್ಕೂ ನನ್ನ ಜಾಗ ನೋಡ್ಕೋತೀರಾ?" ಎಂದವ, ನಂತರ ಅವರತ್ತ ಮರುಕದಿಂದ (?) ನೋಡಿ "ಎಷ್ಟು ಹೊತ್ತೂ ಅಂತ ನಿಲ್ಲುತ್ತೀರಾ, ನಿಮ್ಮ ಹಣ ಕೂಡ ಕಟ್ಟುತ್ತೇನೆ ಬೇಕಿದ್ರೆ, ಹಣ ಮತ್ತು ಬಿಲ್ ಕೊಡಿ" ಅಂದ. ಹಿರಿಯರು ಕೊಟ್ಟರು. ಹೋದವ ಮತ್ತೆ ಬರಲೇ ಇಲ್ಲ. ಅವನನ್ನು ಹುಡುಕುತ್ತಾ ಹೊರಟ ಹಿರಿಯರಿಗೆ ಅಲ್ಲೆಲ್ಲೋ ಬಿದ್ದಿದ್ದ ಅವರ ಬಿಲ್ ಸಿಕ್ಕಿತು ಅಷ್ಟೇ!

  Getting cheated is our birthright

  ಮಲ್ಲೇಶ್ವರದ ಎಂಟನೇ ಕ್ರಾಸ್'ನಲ್ಲಿರೋ ರಸ್ತೆ ಬದಿಯ ಗಾಡಿಯಲ್ಲಿ ಸೇಬಿನ ಹಣ್ಣು ನಳನಳಿಸುತ್ತಿತ್ತು! ಕಾಲೇಜು ದಿನಗಳಲ್ಲಿ ನಳನಳಿಸುತ್ತಿದ್ದ ನಳಿನಿಗೆ ಮನಸೋತು ಅಭ್ಯಾಸವಾಗಿದ್ದ ರಾಯರಿಗೆ, ಸೇಬು ಆಕರ್ಷಿಸಿದ್ದು ಅಚ್ಚರಿಯ ಮಾತಲ್ಲ. ಗಾಡಿಯ ಮುಂದೆ ನಿಂತು, ಬೆಲೆ ವಿಚಾರಿಸಿ, ಚೌಕಾಸಿ ಮಾಡದೆ, ತಮಗೆ ಬೇಕಿದ್ದ ಹಣ್ಣುಗಳನ್ನು ಆಯ್ದುಕೊಂಡು ಅವನಿಗೆ ದುಡ್ಡು ಕೊಡುವ ವೇಳೆಗೆ ಸರಿಯಾಗಿ ರಾಯರ ಮಠದಲ್ಲಿ ಘಂಟೆಯ ನಾದ ಕೇಳಿಸಿತು.

  ಒಮ್ಮೆ ಕಣ್ಮುಚ್ಚಿ ಧ್ಯಾನಿಸಿ ಕಣ್ತೆರೆದು ಗಾಡಿಯಾತನಿಗೆ ದುಡ್ಡು ತೆತ್ತಿ, ಮನೆಗೆ ಬಂದು ನಳಿನಿಯವರಿಗೆ ಸ್ಟೈಲಾಗಿ ಹಣ್ಣನ್ನ ನೀಡಿದರು. ಆಕೆ ಮಂದಹಾಸದಿಂದ ಪ್ಯಾಕೆಟ್ ತೆರೆದು ನೋಡಿ ಕೆಟ್ಟು ಹೋದ ಹಣ್ಣು ನೋಡಿ "ನಿಮ್ಮ ಮಂದ ಬುದ್ದಿಗೆ ಏನು ಹೇಳಬೇಕೋ ಗೊತ್ತಿಲ್ಲ" ಅಂತ ಬೈಸಿಕೊಂಡರು ಎಂಬಲ್ಲಿ ನಾನು ಹೇಳಬೇಕಿರೋ ವಿಚಾರದ ಆರಂಭ!

  ಹಿರಿಯರ ಅಸಹಾಯತೆಯನ್ನು ಕಂಡೇ ಸಮಯ ಸಾಧಿಸಿ ಮೋಸ ಮಾಡಿದ್ದ ಒಬ್ಬಾತ. ರಾಯರು ಕಣ್ಣು ಮುಚ್ಚಿ, ರಾಯರಿಗೆ ನಮಿಸಿ, ಕಣ್ ತೆರೆಯುವಷ್ಟರಲ್ಲಿ ಈ ಗಾಡಿರಾಯ, ರಾಯರು ಕೊಟ್ಟ ಹಣ್ಣುಗಳನ್ನು ಬದಿಗಿರಿಸಿ ಕೆಟ್ಟು ಹೋದ ಹಣ್ಣುಗಳನ್ನು ಪ್ಯಾಕ್ ಮಾಡಿ ರಾಯರಿಗೆ ಮೋಸಮಾಡಿದ್ದ!

  ಶಾಲೆಯ ದಿನಗಳು - ಹನ್ನೆರಡೊಂಬೋತ್ಲಾ ಎಷ್ಟೋ?

  ನಮ್ಮ ಮನೆಯಲ್ಲಿ ಒಂದು ಮಾತಿದೆ "ಬಗ್ಗಿದ್ರೆ ಕತ್ತರಿಸ್ತಾರೆ" ಅಂತ. ನನಗೆ ಗೊತ್ತಿರೋ ಇದರ ಅರ್ಥ ಏನಂದರೆ ಕಣ್ಮುಚ್ಚಿ ಕಣ್ ತೆರೆಯೋಷ್ಟರಲ್ಲಿ ನಾಮ ಹಾಕ್ತಾರೆ ಅಂತ! ನೀವು ಮೋಸ ಹೋಗಲು ಕಣ್ಣು ಮುಚ್ಚಲೇಬೇಕಿಲ್ಲ, ಧಾರಾವಾಹಿ ಹೆಣ್ಣುಗಳಂತೆ ಇಷ್ಟಗಲ ಕಣ್ಣು ತೆರೆದೇ ನೋಡುತ್ತಿದ್ದರೂ, ಮೋಸ ಮಾಡುವುದನ್ನು ಕರಗತ ಮಾಡಿಕೊಂಡಿರುವವರಿಗೆ ಹಣೆ ಸೈಜು ಮುಖ್ಯವಲ್ಲ, ನಾಮ ಹಾಕೋಕ್ಕೆ!

  Getting cheated is our birthright

  ಹೂವಿನ ಬುಟ್ಟಿಯಲ್ಲಿನ ಕಟ್ಟಿದ ಹೂವು ಎಷ್ಟು ವಿಚಿತ್ರ / ವಿಶೇಷ ಎಂದರೆ ಆಕೆ ತನ್ನ ನೀಳವಾದ ಕೈಯಲ್ಲಿ ಎರಡು ಮೊಳ ಅಳೆದು ಕೊಟ್ಟಿದ್ದನ್ನ ಮನೆಗೆ ಬಂದು ಅಳೆದಾಗ ನನ್ನ ಮೋಟು ಕೈಯಲ್ಲಿ ಬರೀ ಒಂದು ಮೊಳ ಆಗಿರುತ್ತದೆ! ನಾನು ವಾಪಸ್ ಬರೋ ದಾರಿಯಲ್ಲಿ ಯಾರಾದರೂ ಒಂದು ಮೊಳ ಹೂವನ್ನು ಹೊಡೆದರಾ? ಅಥವಾ ಒಂದು ಮೊಳ ಹೂವನ್ನು ದಾರವೇ ನುಂಗಿಬಿಡ್ತಾ? ಒಂದೂ ಅರ್ಥವಾಗಲ್ಲ! "ಅವಳು ಅಳೆಯೋದನ್ನ ಹುಷಾರಾಗಿ ನೋಡಿ ತೊಗೊಂಡ್ ಬನ್ನಿ ಅಂದ್ರೆ ಅವಳನ್ನೇ ನೋಡ್ಕೊಂಡ್ ನಾಮ ಹಾಕಿಸಿಕೊಂಡ ಬಂದಿದ್ದೀರಿ, ಥತ್" ಅಂತ ಮನೆಯಲ್ಲಿ ಬೈಸಿಕೊಳ್ಳೋದ್ ತಪ್ಪೋಲ್ಲ!

  ಒಂದಾನೊಂದು ಕಾಲದಲ್ಲಿ ಮನೆಗೆ ಬಂದ ಅತಿಥಿಯೊಬ್ಬರು "ಕಾಶ್ಮೀರದ್ದು" ಅಂತ ಹೇಳಿ ಅರ್ಧ ಡಜನ್ ಆಪಲ್ ತಂದುಕೊಟ್ಟರು. ಇತ್ತೀಚಿಗೆ ದೆಹಲಿಗೆ ಹೋಗಿದ್ದರು ಅಂತ ಗೊತ್ತಿತ್ತು. ಅಲ್ಲಿಂದ ಕಾಶ್ಮೀರಕ್ಕೂ ಹೋಗಿದ್ದೆ ಅಂತ ಅವರೇ ಹೇಳಿದ್ದರು. ಅವರು ಅಲ್ಲಿಂದ ವಾಪಸ್ ಬೆಂಗಳೂರಿಗೆ ಬಂದು, ವಾರದ ನಂತರ ನಮ್ಮ ಮನೆಗೆ ಬಂದು ಹಣ್ಣು ಕೊಟ್ಟಾಗಲೂ ಆ ಹೆಣ್ಣಿನ ಮೇಲಿನ ನೀರಿನ ಹನಿ ಕಾಶ್ಮೀರದ್ದೇ ಅಂತ ನಾನು ನಂಬಿದ್ದೆ! ನಂಬುಗೆಯೇ ಮೋಸಕ್ಕೆ ದಾರಿ ಅಂತ ನನ್ನ ನಂಬುಗೆ. ಥತ್! ಮತ್ತದೇ ನಂಬುಗೆಯ ಮಾತು!

  Getting cheated is our birthright

  ಮೋಸಗಳು ಎಲ್ಲೆಲ್ಲಿ ನಡೆಯುತ್ತದೆ? ಅಯ್ಯೋ! ಸ್ವಾಮಿ, ಏನು ಈ ಪಾಟಿ ನಗ್ತಾ ಇದ್ದೀರಾ? ಬಿಡಿ, ನನಗೆ ಅರ್ಥವಾಗಿರೋ ಮಟ್ಟಿಗೆ ದುಡ್ಡು ಎಲ್ಲೆಲ್ಲಿ ನಡೆಯುತ್ತೋ ಅಲ್ಲೆಲ್ಲಾ ಮೋಸ ನಡೆಯುತ್ತೆ! ದುಡ್ಡು ನಡೆಯದೇ ಇರೋ ಜಾಗವೇ ಇಲ್ಲ ಅಂದ ಮೇಲೆ ಮೋಸವಿಲ್ಲದೆ ಇರೋ ಜಾಗವೇ ಇಲ್ಲ!

  ಜಗತ್ತಿನಾದ್ಯಂತ ನಡೆಯೋ ಒಂದು ಹೈ-ಟೆಕ್ ಮೋಸ ಎಂದರೆ ತಂಗುದಾಣದ್ದು ಅರ್ಥಾತ್ lodging. ಅಂತರ್ಜಾಲದಲ್ಲಿ ಎಂಥಾ ಅದ್ಭುತವಾದ ಚಿತ್ರಗಳನ್ನು ಹಾಕಿರ್ತಾರೆ ಅಂದರೆ ಒಂದು ನಾಲ್ಕು ಕಾಸು ಹೋದರೆ ಹೋಗಲಿ ಅಂತ ಬೇಗ reserve ಮಾಡಿಸಿ ನಂತರ ಅಲ್ಲಿಗೆ ಹೋಗಿ ನೋಡಿದರೆ ಶಾಕ್ ಆಗುತ್ತದೆ. ಹಾಗಂತ ಅವನನ್ನು ಹೋಗಿ ಕೇಳಿದರೆ, 'ನಾವು advertisement department ಅಲ್ಲ' ಅನ್ನಬಹುದು ಅಥವಾ 'ಚಿತ್ರದಲ್ಲಿರೋದು ಬೇರೆ ಲೊಕೇಶನ್' ಅನ್ನಬಹುದು ಅಥವಾ 'renovation ನಡೀತಿದೆ' ಅಂತಲೂ ಅನ್ನಬಹುದು. ಕೆಲವೊಮ್ಮೆ "we are sorry to hear that!" ಅಂತಂದು ನಿಮ್ಮ ಮುಂದಿನ ತಂಗುವಿಕೆಗೆ ಹತ್ತು ಪರ್ಸೆಂಟ್ ಡಿಸ್ಕೌಂಟ್ ಕೊಡ್ತೀವಿ ಅಂತಾರೆ. ಮತ್ತೊಮ್ಮೆ ತಲೆ ಸವರುತ್ತೇವೆ ಬನ್ನಿ ಅಂತ. ದಿನೇ ದಿನೇ ಯಾಕೆ ಮೊಟ್ಟೆತಲೆಗಳು ಹೆಚ್ಚುತ್ತಿವೆ ಗೊತ್ತಾಯ್ತಲ್ಲ?

  ಫೋಟೋ ನೋಡಿ ಮೋಸ ಹೋದವರ ಬಗ್ಗೆ ಮದುವೆ ಮನೆಗಳಲ್ಲೂ ಬೇಕಾದಷ್ಟು ಗಲಾಟೆಗಳಾಗಿ ದುಡ್ಡು ಬಾಯಿ ಮುಚ್ಚಿಸಿರುತ್ತದೆ ಅಥವಾ ಮದುವೆಗಳೇ ಮುರಿದು ಹೋಗಿರುತ್ತದೆ!

  ಡಾಕ್ಟರ್ ಬಳಿ ಹೋಗುತ್ತೀರಾ. ಅಲ್ಲೊಂದಷ್ಟು ಜನ ಈಗಾಗಲೇ ಜಮಾಯಿಸಿರುತ್ತಾರೆ. ನಿಮ್ಮ ಸರದಿ ಬಂತು ಮತ್ತು ಹೆಸರೂ ಕೂಗುತ್ತಾರೆ ಅನ್ನಿ. ಇನ್ನೇನ್ ಎದ್ದು ಹೋಗ್ತೀರಾ ಅನ್ನುವಾಗ ಇನ್ಯಾರೋ ಸ್ವಾಗತಕಾರಿಣಿ ಬಳಿ ಹೋಗಿ ಗುಸುಗುಸಾಯಿಸಿ ಒಳಗೆ ಹೋಗ್ತಾರೆ. ನೀವು ಆ ಹೆಣ್ಣಿನ ಬಳಿ ಹೋಗಿ "ಏನ್ ಮೇಡಂ, ಇದು ನನ್ನ ಸರದಿ, ಅದು ಹೇಗೆ ಅವರನ್ನು ಬಿಟ್ಟಿರಿ?" ಅಂತ ಕೇಳಿದರೆ, ಆ ಸುಂದರಿ "ಅವರು ಡಾಕ್ಟರ್ ಹೆಂಡತಿ ತಮ್ಮ" ಅಂತಲೋ, "ಅವರು ನಿಮಗಿಂತಾ ಮುಂಚೇನೇ ಬಂದಿದ್ದರು" ಅಂತಲೋ ಅಥವಾ "ಅವರಿಗೆ ಎಮರ್ಜನ್ಸಿ" ಅಂತಲೂ ಅನ್ನಬಹುದು! ಹೆಂಡತಿ ತಮ್ಮ ಅಂದರೆ ವಿಶೇಷ ಕಾಯಿಲೆಯೇ? ಎರಡು ಘಂಟೆ ಕಾಯ್ತಾ ಕೂತಿದ್ದೀನಿ ಇವರು ಕಣ್ಣಿಗೆ ಬೀಳಲೇ ಇಲ್ಲ, ಮುಂಚೆ ಯಾವಾಗ ಬಂದಿದ್ದರು? ಒಬ್ಬರೇ ಕಾರು ಓಡಿಸಿಕೊಂಡು ಬಂದರು, ಎಮರ್ಜೆನ್ಸಿ ಎಲ್ಲಿಂದ ಬಂತು? ಅಂತೆಲ್ಲಾ ತಲೆಕೆಡಿಸಿಕೊಂಡರೆ ಉತ್ತರ ಸಿಗುತ್ತೆ ಅಂದುಕೊಳ್ಳದಿರಿ!

  Getting cheated is our birthright

  ಪೆಟ್ರೋಲ್ ಪಂಪ್'ಗೆ ಹೋಗ್ತೀರಾ. ಬೇಡಾ ಬೇಡಾ ಅಂದರೂ ಕೈಗೊಬ್ಬ ಕಾಲಿಗೊಬ್ಬ ಆಳು. ಇಪ್ಪತ್ತು ಲೀಟರ್ ಹಾಕಿ ಅಂತೀರಾ. ಹಿಂದಿನವ ಹತ್ತು ಲೀಟರ್ ಹಾಕಿಸಿಕೊಂಡು ಹೋಗಿರ್ತಾನೆ. ಅದನ್ನು ಜೀರೋ ಮಾಡದೇ ಹತ್ತು ಲೀಟರ್ ಹಾಕಿ ಇಪ್ಪತ್ತು ಲೀಟರ್ ದುಡ್ಡು ಪಡೀತಾನೆ. ಕೆಲವೊಮ್ಮೆ ಜೀರೋ ಮಾಡಿದರೂ ದುಡ್ಡು ಪಡೆಯುವವನು ಅಡ್ಡ ನಿಂತು ದುಡ್ಡು ಪಡೆಯೋಷ್ಟರಲ್ಲಿ ಪೆಟ್ರೋಲ್ ಸುರಿಯುವವನು ಅರ್ಧಕ್ಕೆ ನಿಲ್ಲಿಸಿ ಜೀರೋ ಮಾಡಿರ್ತಾನೆ. ಮತ್ತೆ ಕೆಲವು ಸಾರಿ ಮೂರೋ ನಾಲ್ಕೋ ರೂಪಾಯಿ ಚೇಂಜ್ ಇಲ್ಲ ಅಂತ ಇನ್ನೊಂದಿಷ್ಟು ಪೆಟ್ರೋಲ್ ಸುರೀತಾನೆ. ಅವನು ಹಾಕೋ ಪೆಟ್ರೋಲ್'ಗೆ ಮೂರೋ ನಾಲ್ಕೋ ರೂಪಾಯಿ ಸರಿಯಾ ಅಂತ ಲೆಕ್ಕ ಹಾಕದಿರಿ. ಈ ಜನ್ಮಕ್ಕೆ ಆ ಲೆಕ್ಕ ನಿಮಗೆ ಅರ್ಥ ಆಗಲ್ಲ! ಪಂಪ್'ಗೆ ಹೋಗುವ ಮುನ್ನ ಹಣೆ ಮಾತ್ರ ಕ್ಲೀನ್ ಆಗಿರಲಿ ಅಷ್ಟೇ!

  ಇದು ಅಂದಿನ ದಿನಗಳು. ಸೀಮೆಎಣ್ಣೆ ಕೊಳ್ಳಲು ಅವನ ಗಾಡಿ ಬರುವ ಒಂದು ಘಂಟೆಯ ಮುಂಚೆಯೇ ಕ್ಯೂ ನಿಂತ ದಿನಗಳು! ಗಾಡಿಯ 'ನಲ್ಲಿ' ಬಿಟ್ಟು, ಅಣತಿ ದೂರ ಹಿಡಿದ ಅವನ ಅಳತೆಯ ಪಾತ್ರೆಯಲ್ಲಿ ಎಣ್ಣೆಗಿಂತ ನೊರೆಯೇ ತುಂಬುತ್ತಿತ್ತು. ಅವನು ಹಾಕಿದಷ್ಟೇ, ಕೊಟ್ಟಷ್ಟೇ ತೆಗೆದುಕೊಂಡು ಪೂರ್ತಿ ಹಣ ಕೊಡೋದು ಗ್ರಾಹಕನ ಕರ್ತವ್ಯ. ದುರಾದೃಷ್ಟ ಎಂದರೆ ಆ ಗಾಡಿಯವನ ಜೊತೆ ಗಲಾಟೆ ಮಾಡಿದರೆ ನಮ್ಮ ಹಿಂದೆ ಸಾಲಿನಲ್ಲಿ ನಿಂತವರೇ 'ನಿಮ್ಮ ಗಲಾಟೆ ಆಮೇಲೆ ಇಟ್ಕೊಳ್ರಿ. ಆ ಕಡೆ ಹೋಗಿ' ಎನ್ನುವಂಥಾ ಸಪೋರ್ಟ್.

  ನಮ್ಮ ಮನೆಗೆ ಹಾಲು ತಂದುಕೊಡುತ್ತಿದ್ದ ಹುಡುಗಿ "ಏನಮ್ಮಾ ಹಾಲು ಇಷ್ಟು ನೀರಾಗಿದೆ?" ಎಂದರೆ "ಹೌದಾ ಅಣ್ಣಾ, ನಿನ್ನೆ ಹಸ ನೀರು ಜಾಸ್ತಿ ಕುಡಿದುಬಿಟ್ಟೈತೆ" ಅನ್ನುತ್ತಿದ್ದಳು! ಅವಳಿಗೆ ತಂದು ಹಾಕೋದು ಅಷ್ಟೇ ಕೆಲಸ. ನೀರು ಹಾಕುತ್ತಿದ್ದವರು ಬೇರೆ ಯಾರೋ!

  ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ! ಆದರೆ ಬರೀ ತಮ್ಮ ಹೊಟ್ಟೆಗಾಗಿ ತಮ್ಮದೇ ಗೇಣು ಬಟ್ಟೆಗಾಗಿ ಅಲ್ಲದೇ, ಮುಂದಿನ ಎರಡು ಮೂರು ತಲೆಮಾರಿಗೂ ಇರಲಿ ಎಂಬಂತೆ ಇನ್ನೊಬ್ಬರ ತಲೆ ಒಡೆದು ನುಂಗುತ್ತಿರುವುದೇ ಅತ್ಯಂತ ದುರಾದೃಷ್ಟ.

  Getting cheated is our birthright

  ಕೆಲಸ ಹುಡುಕುವಾಗ ಅದಕ್ಕೆ ಬೇಕಾಗಿರುವ ಜಾತಕದಲ್ಲಿ (ಬಯೋಡೇಟಾ) ತಮ್ಮ ಬಗ್ಗೆ ಹೇಳಿಕೊಳ್ಳುವ ತರಾತುರಿಯಲ್ಲಿ ಎಷ್ಟೆಷ್ಟು ರೀಲು ಸುತ್ತಿರುತ್ತಾರೆ ಎಂದರೆ ಊಹಿಸಲೂ ಸಾಧ್ಯವಿಲ್ಲ. ಇದೂ ಮೋಸದ ಒಂದು ಪರಿ. ಅಮೆರಿಕಾದಲ್ಲಿ ಒಂದು ಗುಂಪಿನ ಜನ ಮಾಡುವ ಅದ್ಬುತ ಮೋಸ ಎಂದರೆ ತಮ್ಮ ಕೆಲಸಕ್ಕೆ ಇನ್ನೊಬ್ಬನು ಇಂಟರ್ವ್ಯೂ ತೆಗೆದುಕೊಳ್ಳುವಂತೆ ಮಾಡಿ, ಕೆಲಸಕ್ಕೆ ಸೇರಿ, ಕಚೇರಿಯಲ್ಲಿ ಹೇಳುವ ಕೆಲಸವನ್ನು ಮತ್ತೊಬ್ಬನಿಂದ ಮಾಡಿಸುವುದು! ಎಷ್ಟೋ ಸಾರಿ ಇಂಥಾ ಜನ ರೆಡ್ ಹ್ಯಾಂಡ್ ಆಗಿ ಸಿಕ್ಕಿಕೊಂಡಿದ್ದಾರೆ! ಮತ್ತೂ ಕೆಲವು ಕಡೆ ಎರಡನೇ ಇಂಟರ್ವ್ಯೂ'ಗೆ ಕರೆ ಬಂದು ನಂತರ ಅಲ್ಲಿಗೆ ಹೋಗಿ 'ಅಂದು ಇಂಟರ್ವ್ಯೂ ಕೊಟ್ಟವನು ನೀನಲ್ಲ' ಎಂದು ಉಗಿಸಿಕೊಂಡು ಬಂದವರೂ ಇದ್ದಾರೆ. ಇಂದಿಗೆ ಭಾರತೀಯರ ಬಗ್ಗೆ ಅನುಮಾನದಿಂದ ನೋಡುವಷ್ಟರ ಮಟ್ಟಿಗೆ ಈ ಪಿಡುಗು ಬೆಳೆದಿದೆ.

  ಹೊರಡುವ ಮುನ್ನ ನಿಮ್ಮ ಮುಂದೆ ಒಂದು ಪ್ರಶ್ನೆ "ಇನ್ನೊಬ್ಬರ ಕೈಯಲ್ಲಿ ಸದಾ ಮೋಸ ಮಾಡಿಸಿಕೊಂಡು ಮೂರ್ಖರಾಗೋ ನಾವು, ನಾವೂ ಅವರಿಗೆ ಹಾಗೆ ಮಾಡೋಣ, ಆಗ ಅವರಿಗೆ ಬುದ್ದಿ ಬರುತ್ತೆ ಎಂದು ಯತ್ನಿಸಿ ಮೊದಲು ಸುತ್ತಿನಲ್ಲೇ ಸಿಕ್ಕಿಬೀಳೋದ್ಯಾಕೆ?"

  ಈ ಮೋಸ ಮಾಡೋವ್ರೆಲ್ಲಾ "ಮೂವತ್ತು ದಿನದಲ್ಲಿ ಮೋಸ ಮಾಡೋದು ಕಲಿಯಿರಿ" ಎಂಬ ಕೋರ್ಸ್ ಮಾಡಿದ್ದಾರೋ ಅಥವಾ ವಂಶಪಾರಂಪರೆಯೋ ನನಗಂತೂ ಗೊತ್ತಿಲ್ಲ! ನಿಮಗೇನಾದ್ರೂ ಗೊತ್ತೋ?

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Have you ever got cheated by anyone? Conmen or conwomen are everywhere wherever we innocent people are. Getting cheated has become our birthright. Srinath Bhalle recalls some of the interesting incidents of innocents getted cheated.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more