• search

ಗಣೇಶನ ಹಬ್ಬಕ್ಕೂ ಸುಬ್ಬನಿಗೂ ಏನ್ ನಂಟು ಅಂತೀರಿ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಗೌರಿ ಗಣೇಶನ ಹಬ್ಬ ಬಂತೂ ಅಂದ್ರೆ ನಮ್ಮ ಸುಬ್ಬನಿಗೆ ಎಲ್ಲಿಲ್ಲದ ಆಸಕ್ತಿ. ಎದ್ಗೊಂಡ್ ಒದ್ಗೊಂಡ್ ಬರುತ್ತೆ. ಇದು ಇಂದು ನೆನ್ನೆಯದಲ್ಲಾ, ಬಾಲ್ಯದಿಂದಲೂ ಅವನು ಹೀಗೇನೇ....

  ಗವಿಪುರ ಗುಟ್ಟಹಳ್ಳಿಯ ಹಿನ್ನೆಲೆಯಲ್ಲೇ ಸುಬ್ಬನ ಜನನ. ಒಂದೊಂದು ಬೀದಿಯ ಸುವಾಸನೆಯೂ ಸುಬ್ಬನಿಗೆ ಗೊತ್ತು. ಅರ್ಥಾತ್ ಅವನನ್ನು ಯಾವುದೇ ಬೀದಿಗೆ ಬಿಟ್ಟರೂ ಆ ವಾಸನೆ ಹಿಡಿದು ಎಲ್ಲಿದ್ದೇನೆ ಎಂಬ ಅರಿವು ಮೂಡಿಸಿಕೊಂಡು ತನ್ನ ಮನೆಯನ್ನು ಸೇರಬಲ್ಲ ಚಾಕಚಕ್ಯತೆ ಹೊಂದಿದ್ದ. ಬೀದಿಬೀದಿಯಲ್ಲೂ ಸ್ನೇಹಿತರನ್ನು ಹೊಂದಿದ್ದ ಸುಬ್ಬನನ್ನು ಕಂಡರೆ ಎಲ್ಲರಿಗೂ ಅದೇನೋ ಪ್ರೀತಿ. ಏನೂ ಬೇಸರಿಸಿಕೊಳ್ಳದೇ ಎಲ್ಲರಿಗೂ ಸಹಾಯ ಹಸ್ತ ಚಾಚುವ ಇವನನ್ನು ಗಣೇಶನನ್ನು ಕೂಡಿಸುವ ಸಲುವಾಗಿ ಎತ್ತುವ ಚಂದಾ ಕಲೆಕ್ಷನ್'ಗೆ ಹಸ್ತ ಚಾಚಲು ಬಳಸಿಕೊಳ್ಳಲು ಎಲ್ಲರೂ ಮುಂದಾಗುತ್ತಿದ್ದರು. ಎಲ್ಲರ ಕೈಹಿಡಿದು ಸಲಹುವ ಆಪದ್ಬಾಂಧವ ಈ ಸುಬ್ಬ.

  ಗಣೇಶ ಚತುರ್ಥಿ ಸ್ಪೆಷಲ್: ಕರಾವಳಿಯ ಐತಿಹಾಸಿಕ ಆರು ವಿನಾಯಕ ದೇವಾಲಯಗಳ ರೌಂಡ್ ಅಪ್

  ಹೊಸ್ತಿಲಿನ ಹೊರಗಿನ ಕೆಲಸಗಳನ್ನು ನಿಭಾಯಿಸೋ ತಾಕತ್ ಇರೋ ಸುಬ್ಬನಿಗೆ ಸೂಕ್ಷ್ಮ ಕೆಲಸಗಳೆಲ್ಲಾ ತಲೆಗೆ ಹೋಗುತ್ತಿರಲಿಲ್ಲ. ಒಮ್ಮೆ ಮನೆಯಲ್ಲಿ ಹೆಂಗಳನ್ನು ಅರಿಶಿನ ಕುಂಕುಮಕ್ಕೆ ಅವನಮ್ಮ ಕರೆದಿದ್ದರು. ಭರಣಿಯಿಂದ ಕುಂಕುಮ ತೆಗೆದುಕೊಂಡವರು ಹೆಬ್ಬೆಟ್ಟು ಮತ್ತು ತೋರುಬೆರಳಿನಿಂದ ಕೊಂಚ ಕುಂಕುಮ ತೆಗೆದುಕೊಂಡು ಸಣ್ಣಗೆ ಕೊಡವಿ, ಉಫ್ ಎಂದು ನಂತರ ಹಣೆಗೆ ಮತ್ತು ತಾಳಿಗೆ ಹಚ್ಚಿಕೊಳ್ಳುತ್ತಿದ್ದರು. ಎಲ್ಲವೂ ಅರ್ಥವಾದರೂ ಈ ಉಫ್ ಅನ್ನೋದು ಅರ್ಥವಾಗಲಿಲ್ಲ. ಹಾಗೆ ಮಾಡುವ ಒಬ್ಬರನ್ನು 'ಕುಂಕುಮ ಬಿಸಿ ಇದೆಯಾ?' ಅಂತ ಕೇಳಿ ಅವರನ್ನು ಬೆಚ್ಚಿ ಬೀಳಿಸಿದ್ದ.

  Ganesha Chaturthi festival and peculiar Subba

  ಒಮ್ಮೆ ಮನೆಯಲ್ಲಿ ನಡೆಯೋ ಪೂಜೆಗೆ ಅವನನ್ನು ಮನೆಯಲ್ಲೇ ಕಟ್ಟಿ ಹಾಕಬೇಕು ಅಂತ, ಅಮ್ಮ ಅವನಿಗೆ ಚಿಕ್ಕಪುಟ್ಟ ಕೆಲಸಗಳನ್ನು ಹೇಳುತ್ತಾ ಪೂಜೆಗೆ ಹಣ್ಣು ತೆಗೆದುಕೊಂಡು ಬಾ ಅಂತ ಕೆಲಸ ಹಚ್ಚಿದರು. ಸುಬ್ಬನಿಗೆ ಯಾವ ಹಣ್ಣು ತರಬೇಕೂ ಅಂತಲೇ ತಿಳಿಯದೆ ಹುಣಿಸೆಹಣ್ಣು, ನಿಂಬೆಹಣ್ಣು ತಂದಿದ್ದ. ಈ ಎಳೆನಿಂಬೆಕಾಯಿ ಮಾಗಲು ಇನ್ನೂ ಬಹಳಾ ಸಮಯ ಇದೆ ಅಂತ ಅವರಮ್ಮನಿಗೆ ಅರಿವಾಗಿದ್ದು ಆಗಲೇ!

  ಬೀದಿಯಲ್ಲಿನ ಪೆಂಡಾಲ್'ಗಳಿಗೆ ಸಂಜೆಯಾದ ಮೇಲೆ ಮನೆಯಿಂದ ಹೊರಟವ ಆ ಬೀದಿಯಲ್ಲಿ ಆರ್ಕೆಸ್ಟ್ರಾ, ಈ ಬೀದಿಯಲ್ಲಿ ಸಿನಿಮಾ, ಅಂತೆಲ್ಲಾ ಒಂದು ಬೀದಿಯಿಂದ ಇನ್ನೊಂದು ಬೀದಿಗೆ ಹೋಗುತ್ತಿದವನನ್ನು ಚಿಕ್ಕಂದಿನಲ್ಲಿ ಅಪ್ಪನೋ ಅಮ್ಮನೋ ಹುಡುಕಿಕೊಂಡು ಮನೆಗೆ ಕರೆದುಕೊಂಡು ಬರುತ್ತಿದ್ದರು.

  ದೊಡ್ಡವರನ್ನೂ ಹೊಸ ಲೋಕಕ್ಕೆ ಕೊಂಡೊಯ್ಯುವ ಮಕ್ಕಳ ಧಾರಾವಾಹಿಗಳು!

  ಮುಂಚಿನ ದಿನಗಳಲ್ಲಿ ಪಟದ ಬಾಲಂಗೋಚಿಯಾಗಿಯೇ ಎಲ್ಲರ ಹಿಂದೆ ಓಡಾಡುತ್ತಿದ್ದ ಸುಬ್ಬ, ಕ್ರಮೇಣ ಬೆಳೆದು ಸೂತ್ರವೇ ಆದ. ಕೆಲವೊಮ್ಮೆ ಹೇಗಾಗುತ್ತಿತ್ತು ಎಂದರೆ ಎರಡು ಬೀದಿಯವರ ಕಲೆಕ್ಷನ್'ಗಳು ಅಷ್ಟು ಚೆನ್ನಾಗಿ ಆಗದೆ ಹೋದಾಗ ಎರಡೂ ಬೀದಿಯ ಹುಡುಗರ ಮಧ್ಯಸ್ಥಿಕೆ ವಹಿಸಿ ಅವರುಗಳನ್ನು ಒಪ್ಪಿಸಿ ಚಂದಾದ ಹಣ ಕೂಡಿಸಿ ಒಂದು ಗಣೇಶನನ್ನು ಕೂಡಿಸುವಂತೆ ನೋಡಿಕೊಂಡಿದ್ದ.

  Ganesha Chaturthi festival and peculiar Subba

  ಇಂಥಾ ಸುಬ್ಬನಿಗೂ ವಯಸ್ಸಾಯಿತು ನೋಡಿ. ಬೀದಿ ಗಣೇಶ, ಚಂದಾ ಎತ್ತೋದು, ಪೆಂಡಾಲ್ ಇತ್ಯಾದಿಗಳನ್ನೆಲ್ಲಾ ಬದಿಗಿರಿಸಿ, ಪುರೋಹಿತರನ್ನು ಮನೆಗೆ ಕರೆಸಿಕೊಂಡು ಪೂಜೆ ಮಾಡಿಸುವಷ್ಟು ಬೆಳೆದ ಅನ್ನಿ. ಇದು ಹೋದ ವರ್ಷದ ಮಾತು. ಕೆಲವರು ಬೆಳೆಯೋದು ಲೇಟು, ಏನ್ ಮಾಡೋಕ್ಕಾಗುತ್ತೆ?

  ಗಣೇಶನನ್ನು ಅಂಗಡಿಯಿಂದ ತರುವ ಪುಣ್ಯ ಕೆಲಸಕ್ಕೆ ಶುಭ್ರವಾದ ಪಂಚೆಯುಟ್ಟು, ಬಿಳೀ ಅಂಗಿ ತೊಟ್ಟು, ಒಂದು ದೊಡ್ಡ ಪರಾತ ಮತ್ತು ಅಕ್ಕಿಯ ಸಮೇತ ನನ್ನೊಡನೆ ಹೊರಟ. ಮೊದಲು ಗಣೇಶನನ್ನು ಕೊಂಡುಕೊಳ್ಳೋಣ, ಮನೆ ಬಾಗಿಲಿಗೆ ಬಂದ ಮೇಲೆ formalities ಮಾಡೋಣ ಎಂದರೆ ಅವನೆಲ್ಲಿ ಕೇಳ್ತಾನೆ? ಸರಿ, ಅಂಗಡಿಗೆ ಹೋಗಿ ಯಾವ ಗಣೇಶನನ್ನು ಕೊಂಡುಕೊಳ್ಳೋದು ಅಂತ ನೋಡಿದಾಗ full confusion. ಗಣೇಶನ ಹಣೆಯ ಮೇಲೆ ಅಡ್ಡಪಟ್ಟಿ ಇರಬೇಕೋ, ತಿಲಕ ಇರಬೇಕೋ, ಅಂಗಾರ-ಅಕ್ಷತೆ, ತ್ರಿಶೂಲಾಕಾರದ ಚಿನ್ಹೆ ಇರಬೇಕೋ ಅನ್ನೋದು ಮೊದಲು ಜಿಜ್ಞಾಸೆ. ತಿಲಕ ಇರಲಿ ಅಂತಾದ ಮೇಲೆ, ಸೊಂಡಿಲು ಬಲಕ್ಕೆ ತಿರುಗಿರಬೇಕೋ, ಎಡಕ್ಕೆ ತಿರುಗಿರಬೇಕೋ ಎಂಬ confusion. ಅದಕ್ಕೆ ನಾನು 'ಮೋದಕ ತಿನ್ನುವಾಗ ಅವನ ಸೊಂಡಿಲು ಯಾವ ಕಡೆ ತಿರುಗಿಸಿರುತ್ತಾನೋ ಹಾಗೆ' ಅಂತಂದು ಅವನಿಗೆ ನಾನೇ ಮತ್ತೊಂದು confusion'ಗೆ ಎಡೆ ಮಾಡಿಕೊಟ್ಟೆ.

  ಗಣೇಶ ಚತುರ್ಥಿ ವಿಶೇಷ: ಗಜಮುಖನಿಗ್ಯಾಕೆ ಇಷ್ಟೊಂದು ಹೆಸರು?

  ಹಾಗಿದ್ರೆ ಮೋದಕ ಎಡಗೈಲಿ ಇರಬೇಕೋ ಬಲಗೈಲಿ ಇರಬೇಕೋ? ನಾನೆಂದೆ 'ಎಡಗೈಲಿ ಮೋದಕದ ಪಾತ್ರೆಯನ್ನು ಹಿಡಿದು ಸೊಂಡಿಲಲ್ಲಿ ತಿನ್ನೋದು ಕಣೋ, ನೀನು ಹೇಗೆ ರವೇ ಉಂಡೆಯನ್ನು ಎಡಗೈಲಿ ಹಿಡಿದು ಬಲಗೈಲಿ ಮುರ್ಕೊಂಡ್ ತಿಂತೀಯೋ ಹಾಗೆ' ಅಂತಂದೆ. ಅದಕ್ಕವನು 'ನನಗೆ ಎರಡು ಕೈ ಇದೆ ಹಾಗಾಗಿ ಎಡಗೈಲಿ ರವೇ ಉಂಡೆ ಬಲಗೈಲಿ ತಿನ್ನೋದು. ಆದರೆ ಗಣೇಶ ಹೇಗಿದ್ರೂ ಸೊಂಡಿಲಲ್ಲೇ ತಾನೇ ತಿನ್ನೋದು. ಬಲಗೈಲಿ ಮೋದಕ ಇಟ್ಟುಕೊಂಡ್ರೆ ತಪ್ಪೇನು?'

  Ganesha Chaturthi festival and peculiar Subba

  ಸರಿ ಇವನ requirements ಪ್ರಕಾರ ಗಣೇಶನನ್ನು ಹುಡುಕಿದರೆ ಒಂದು ಕಡೆ ಅಂತೂ ಕಾಣಿಸಿತು. ಆದರೇನು? ಆ ಗಣೇಶ ಹತ್ತು ಅಡಿ ಎತ್ತರ ಇದ್ದ. ಮನೆಯಲ್ಲಿ ಕೂಡಿಸೋ ಗಣಪ ಅಲ್ಲ. ಅದೂ ಅಲ್ದೇ, ಅದರ ಮೇಲೆ 'preorder - sold' ಅನ್ನೋ ಬೋರ್ಡು! ಅರ್ಥಾತ್ ಯಾರೋ ಬೀದಿಯಲ್ಲಿ ಪೆಂಡಾಲ್ ಹಾಕಿ ಗಣೇಶನನ್ನು ಕೂಡಿಸುವ ಮಂದಿಯ reserved category ಗಣಪ ಅವನು. ಒಟ್ಟಾರೆ ಹೇಗೋ ಅವನನ್ನು ಸಮಾಧಾನಪಡಿಸಿ ಅವನ ಮನೆ ಮಂಟಪದಲ್ಲಿ ಕೂಡಿಸಬಹುದು ಎನ್ನಬಹುದಾದ ಗಣೇಶನನ್ನು ಕೊಂಡೆವು ಅನ್ನಿ.

  ಮರುದಿನ ಅಂದರೆ ಹಬ್ಬದ ದಿನ ಪುರೋಹಿತರು ಮನೆಗೆ ಬಂದು 'ಎಲ್ಲಾ ಸಿದ್ಧವಿದೆಯೇ?' ಅಂದರು. "ಪೂಜೆ ಬಿಟ್ಟು ಎಲ್ಲಾ ಆಗಿದೆ ಗುರುಗಳೇ" ಅಂದ ಸುಬ್ಬ. "ಎಲ್ಲಾ ಆಗಿದೆ ಅಂದರೆ ಸಿದ್ಧವಾಗಿದೆ ಅಂತ ತಾನೇ?" ಅಂದರು ಇವನ ಕ್ಲಿಷ್ಟ ಉತ್ತರ ಅರ್ಥವಾಗದ ಪುರೋಹಿತರು. "ಹೌದು ಗುರುಗಳೇ, ನೀವು ಬರೋದು ತಡ ಆಯ್ತು ಅಂತ ಅರ್ಧ ಘಂಟೆ ಬಸ್ಕಿ ಕೂಡ ಹೊಡೆದು ಮುಗಿಸಿದೆ" ಅಂದನಾ ಸುಬ್ಬ! "ಅಲ್ಲಯ್ಯಾ ಅರ್ಧ ಘಂಟೆ ಬಸ್ಕಿ ಹೊಡೆದೆ ಅಂದ್ರೆ 2100 ಬಸ್ಕಿ ಹೊಡೆದೆಯೋ ಹೇಗೆ?" . . . "ಅಲ್ಲಾ ಗುರುಗಳೇ, ನನಗೆ 21 ಬಸ್ಕಿ ಹೊಡೆಯೋಕ್ಕೆ ಅರ್ಧ ಘಂಟೆ ಬೇಕು. ಕೂತರೆ ಏಳೋದ್ ಕಷ್ಟ, ಎದ್ರೆ ಕೂಡೋದು ಕಷ್ಟ. ಅದಿರಲಿ ಗುರುಗಳೇ ಈ ಬಸ್ಕಿ ಅನ್ನೋದನ್ನ ಪೂಜೆಗೆ ಮುನ್ನ ಮಾಡಿದರೆ ದೋಷ ಇಲ್ಲಾ ತಾನೇ?"

  "ಹಾಗೇನಿಲ್ಲಪ್ಪ, ನಿನಗೆ ಅನುಮಾನ ಆದ್ರೆ ಪೂಜೆ ಮುಗಿಸಿ ನಾನು ಹೊರಟ ಮೇಲೆ ನೀನು ಇನ್ನೊಂದು ಇಪ್ಪತ್ತೊಂದು ಬಸ್ಕಿ ಹೊಡಿ ಅಡ್ಡಿಯೇನಿಲ್ಲ" ಅಂತಂದು ಪೂಜೆ ಮುಗಿಸಿದರು ಪುರೋಹಿತರು. ಅಂದ್ರೆ ಪೂಜೆ ಶುರುವಿನಿಂದ ಕೊನೆಯವರೆಗೂ ಎಲ್ಲವೂ ಸುಖಾಂತ ಅಂತಲ್ಲಾ... ಪೂಜೆ ಉದ್ದಕ್ಕೂ ಏನಾದ್ರೂ ಬೇಕಾದಾಗ ಸುಬ್ಬನನ್ನು ಮೇಲೆಬ್ಬಿಸಿ ಕಳಿಸಿ ಬೇಕಾದ್ದನ್ನು ತರಿಸುವಷ್ಟರಲ್ಲಿ ಇವರಿಗೆ ಸಾಕಾಗುತ್ತಿತ್ತು. ಬೇಕಾದಾಗ ಸಲೀಸಾಗಿ ಎದ್ದೇಳಲು ಸಹಾಯಕವಾಗಲಿ ಅಂತ ಚೇರಿನ ಮೇಲೆ ಕೂತು ಪೂಜೆ ಮಾಡಲು ಸುಬ್ಬನಿಗೆ ಮನಸ್ಸಿಲ್ಲ.

  ಪೂಜೆಯಾದ ನಂತರ ಪುರೋಹಿತರು "ಉಪಾಯನ ದಾನ ಮತ್ತು ನೀನು ಕೊಟ್ಟ ಹಣ್ಣು ಹಂಪಲು ಮನೆಗೇ ತಂದುಕೊಟ್ಟುಬಿಡಪ್ಪಾ. ನನಗೆ ಎಲ್ಲಾ ಹೊತ್ಕೊಂಡು ಹೋಗೋಕ್ಕಾಗಲ್ಲ. ನಾನು ಹೋಗಿರ್ತೀನಿ, ನೀನು ಸುಧಾರಿಸಿಕೊಂಡು ಆಮೇಲೆ ಬಾ" ಅಂತಂದು ಅವರು ಹೋದರು. ಪೂಜೆಯಾದ ಮೇಲೆ ಗುರುಗಳು ಹೇಳಿದಂತೆ ಮತ್ತೆ 21 ಬಸ್ಕಿ ಹೊಡೆದ ಸುಬ್ಬ.

  ಪಂಚೆ ಉಟ್ಟುಕೊಂಡೇ ಹೋಗುತ್ತೇನೆ ಎಂದು ಮನಸ್ಸು ಗಟ್ಟಿ ಮಾಡಿಕೊಂಡಿದ್ದೇ ಅಲ್ಲದೇ, ಪಂಚೆಯನ್ನೂ ಗಟ್ಟಿಯಾಗಿ ಕಟ್ಟಿಕೊಂಡು ಹೊರಟ. ಹಣ್ಣು ಹಂಪಲುಗಳನ್ನು ಒಂದು ಬ್ಯಾಗಿನಲ್ಲಿ ಹಾಕಿಕೊಂಡು ಹೆಗಲಿನ ಒಂದು ಬದಿಗೆ ಏರಿಸಿ, ತಟ್ಟೆಯಲ್ಲಿ ಅಕ್ಕಿ, ತೆಂಗಿನಕಾಯಿಗಳನ್ನು ಇಟ್ಟುಕೊಂಡು ಅದರ ಮೇಲೆ ಬಾಳೆ ಎಲೆಯನ್ನು ಮುಚ್ಚಿಕೊಂಡು ಹೊರಟಿತ್ತು ಸುಬ್ಬನ ಸವಾರಿ. ಹಾದಿಯುದ್ದಕ್ಕೂ ನಾನಾ ವಿಧವಾದ ತೊಂದರೆಗಳು. 42 ಬಸ್ಕಿ ಹೊಡೆದ ನಂತರ ಅವನ ತೊಡೆಗಳಲ್ಲಿ ನೋವು ಕಾಣಿಸಿಕೊಂಡು ಹೆಜ್ಜೆ ಇಡಲು ಕಷ್ಟವಾಗುತ್ತಿತ್ತು. ಗಾಳಿಗೆ ಹಾರುವ ಬಾಳೆಎಲೆಯನ್ನು ಹಿಡಿದರೆ, ಸಿಲ್ಕ್ ಶರಟಿನ ಮೇಲೆ ತೂಗುಬಿಟ್ಟಿದ್ದ ಬದಿಗೆ ಹಾಕಿಕೊಂಡ ಚೀಲ ಜಾರುತ್ತಿತ್ತು. ಒಟ್ಟಾರೆ ಹೇಗೋ ಮಾಡಿ ಗುರುಗಳ ಮನೆಗೆ ಹೋಗಿ ಬಲಗೈಲಿ ಬೆಲ್ ಬಾರಿಸಿದಾಗ...

  ಚೀಲ ಮುಂದಕ್ಕೆ ಜಾರಿತ್ತು... ಅದು ಕೆಳಕ್ಕೆ ಬೀಳದಿರಲಿ ಎಂದು ಹಿಡಿಯಲು ಬಾಗಿಲ ಮೇಲೆ ಕೈ ಇರಿಸಿದಾಗ ಎಡಗೈಲಿದ್ದ ತಟ್ಟೆ ಸೊಟ್ಟಗೆ ತಿರುಗಿತ್ತು... ಬಾಗಿಲು ತೆರೆಯಿತು... ಪುರೋಹಿತರು ನಿಂತಿದ್ದರು. ತೆರೆದ ಬಾಗಿಲನ್ನು ಹಿಡಿದುಕೊಂಡಿದ್ದ ಬಾಗಿದ ಸುಬ್ಬನ ದೇಹ ದೊಪ್ಪನೆ ಬಿದ್ದಿತ್ತು. ಪುರೋಹಿತರ ಪಾದ ಮೇಲೆ ಚೀಲ, ಚೀಲದ ಮೇಲೆ ಸುಬ್ಬ. ಸುಬ್ಬನ ಮೇಲೆ ತಟ್ಟೆಯಲ್ಲಿನ ಅಕ್ಕಿ, ತೆಂಗು, ಎಲೆ!

  ಹೊಸ್ತಿಲ ಒಳಗೆ ಅಕ್ಕಿ ಚೆಲ್ಲಿತ್ತು. ಎಲೆ ಹರಿದಿತ್ತು. "ಮನೆಗೆ ತಂದುಕೊಡು ಅಂದರೆ ಪಾದಕ್ಕೆ ಅರ್ಪಿಸಿದೆಯೆಲ್ಲೋ ಸುಬ್ಬಾ. ಹಣ್ಣು ಹಂಪಲು ಈಗ fruit ಸಲಾಡ್ ಆಗಿರಬಹುದು, ನೀನೇ ತೊಗೊಂಡ್ ಹೋಗಿ ತಿಂದುಬಿಡು. ಅಕ್ಕಿಯೆಲ್ಲ ಧೂಳಾಯ್ತಲ್ಲೋ. ತೊಳೆದರಾಯ್ತು ಬಿಡು. ಸದ್ಯಕ್ಕೆ ಸರಿಯಾಗಿರೋದು ತೆಂಗಿನಕಾಯಿಗಳು ಮಾತ್ರ!" "ಗುರುಗಳೇ ನನ್ನನ್ನ ಎಬ್ಬಿಸಿ..." "ಅಷ್ಟು ಚೈತನ್ಯ ಇಲ್ವೋ" ಅಂತಂದು ಅವರ ಮಗನನ್ನು ಕರೆದು ಇವನನ್ನು ಎಬ್ಬಿಸಿ ಮನೆಗೆ ತಲುಪೋ ಹಾಗೆ ಮಾಡಿದರು.

  ಈ ವರ್ಷಾನೂ ಗಣೇಶ ಹಬ್ಬ ಮಾಡ್ತೀನಿ ಅನ್ನೋ ಹುಮ್ಮಸ್ಸಿನಲ್ಲಿ ಸುಬ್ಬ ಮತ್ತೆ ಸಿದ್ಧವಾಗಿದ್ದಾನೆ. ಮರಳಿ ಯತ್ನವ ಮಾಡು ಎಂಬುದನ್ನು ಸುಬ್ಬನನ್ನು ನೋಡಿ ಕಲೀಬೇಕು. ಇರಲಿ, ನಿಮ್ಮೆಲ್ಲರಿಗೂ ಗೌರಿ - ಗಣೇಶ ಹಬ್ಬದ ಶುಭಾಶಯಗಳು. ಸುಬ್ಬನನ್ನು ಹೊತ್ತುಕೊಂಡು... ಅಲ್ಲಲ್ಲ, ಸುಬ್ಬನ ವಿಷಯವನ್ನು ಹೊತ್ತುಕೊಂಡು ಮತ್ತೊಮ್ಮೆ ಬರುತ್ತೇನೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Happy Ganesha Chaturthi to all the readers. On the occasion of this auspicious festival of Karnataka, Srinath Bhalle from Richmond, USA tells you the story of auspicious peculiar character called Subba.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more