ಸವಿಯುವ ಗುರಿಯೊಂದಿಗೆ ಸಾಗಲಿ ಬದುಕಿನ ಓಟ!

Posted By: ಶ್ರೀನಾಥ್ ಭಲ್ಲೆ, ರಿಚ್ಮಂಡ್
Subscribe to Oneindia Kannada

ಮುಲ್ಲಾ ನಸೀರುದ್ದೀನನ ಕಥೆಯೇ ಇರಬೇಕು ಎನಿಸುತ್ತದೆ. ಒಮ್ಮೆ ಮುಲ್ಲಾ ಹಾದಿಯಲ್ಲಿ ನಡೆದು ಹೋಗುವಾಗ ಒಂದಷ್ಟು ಮಕ್ಕಳು ಆಟವಾಡುತ್ತಿದ್ದುದನ್ನು ಕಂಡ. ಕೀಟಲೆ ಮಾಡುವ ಉದ್ದೇಶದಿಂದ ಅವರನ್ನು ಕುರಿತು 'ಊರಿನ ಸಾಹುಕಾರ ತನ್ನ ಹುಟ್ಟುಹಬ್ಬದ ಸಲುವಾಗಿ ಎಲ್ಲರಿಗೂ ಲಡ್ಡು ಕೊಡುತ್ತಿದ್ದಾನೆ. ನಾನೂ ಅಲ್ಲಿಗೇ ಹೋಗ್ತಿದ್ದೀನಿ' ಎಂದು ನುಡಿದು ಮುಂದೆ ಹೋದ. ಎಷ್ಟೋ ಸಾರಿ ಹೀಗೆಯೇ ಕೀಟಲೆ ಮಾಡಿದ್ದರಿಂದ, ತನ್ನ ಮಾತನ್ನು ಅವರಾರು ನಂಬುವುದಿಲ್ಲ ಎಂಬುದು ಅವನಿಗೆ ನಂಬಿಕೆ.

ನಾನು ಸ್ವಚ್ಛತೆ ಎಂದರೆ ದೇವರೆಂದು ನಂಬಿದ್ದೇನೆ, ನೀವು?

ಹಾಗೆ ನಡೆಯುತ್ತಿರಲು, ಒಬ್ಬ ಹುಡುಗ ಓಡಿದ. ಹಾಗೆ ನೋಡುತ್ತಿರಲು ಮತ್ತಿಬ್ಬರು. ಆನಂತರವೋ, ಬರೀ ಚಿಕ್ಕ ಮಕ್ಕಳೇ ಅಲ್ಲದೆ ದೊಡ್ಡ ಮಕ್ಕಳೂ ಆ ದಿಕ್ಕಿನಲ್ಲಿ ಓಡುತ್ತಿದ್ದರು. ಒಬ್ಬನನ್ನು ಹಿಡಿದು ಎಲ್ಲಿಗೆ ಓಡುತ್ತಿದ್ದೀರಾ ಎಂದು ಕೇಳಲು ಅವನು "ಸಾಹುಕಾರರು ಲಡ್ಡು ಕೊಡುತ್ತಿದ್ದಾರಂತೆ, ಬೇಗ ಓಡಬೇಕು ಬಿಡಿ ನನ್ನ" ಅಂತ ಬಿಡಿಸಿಕೊಂಡು ಓಡಿದ. ಇದನ್ನು ಕೇಳಿದ ಕೂಡಲೇ ಮುಲ್ಲಾ ಲಡ್ಡುವಿನ ಆಸೆಯಿಂದ ತಾನೂ ಅವರೊಂದಿಗೆ ಓಡತೊಡಗಿದ. ತಾನು ಹೇಳಿದ್ದು ನಿಜ ಇದ್ದರೂ ಇರಬಹುದು ಅಂತ.

Everyone runs behind something without any goal

ಯಾರೋ ಒಬ್ಬರು ತಾವು ಊಹಿಸಿದ್ದನ್ನು ಮತ್ತೊಬ್ಬರೊಂದಿಗೆ ಹೇಳಿಕೊಂಡಿರುತ್ತಾರೆ. ಅದನ್ನು ಪಡೆಯಲು ಒಬ್ಬರು ಓಡುತ್ತಾರೆ. ಅದನ್ನು ಕಂಡು ಇನ್ನೊಬ್ಬರು ಓಡುತ್ತಾರೆ, ಹಾಗೆ ಮತ್ತೊಬ್ಬರು. ಈ ದಿಕ್ಕಿನಲ್ಲಿ ಓಡಿದರೆ ಏನೋ ಸಿಗುತ್ತದೆ ಎಂಬುದರ ಹುಟ್ಟು ಹೀಗೆ. ನಮ್ಮೆಲ್ಲರ ಜೀವನದ ವಿದ್ಯಾಭ್ಯಾಸವೂ ಹೀಗೆ ನಡೆಯುತ್ತಿರುವುದು. ಇದು ಒಂದು ರೀತಿಯ ಓಟ. ಈ ಓಟ ದಾರಿ ಸವೆಸುತ್ತಾ ಓಡುವುದೇ ವಿನಃ ಹಾದಿ ಸವಿಯುತ್ತಾ ಓಡುವುದಲ್ಲ!

ಈಗ ಅಸಲಿ ವಿಷಯಕ್ಕೆ ಬರೋಣ.

"ಓಟ" ಕಿರುಚಿತ್ರದತ್ತ ಒಂದು ಕಿರುನೋಟ.

ಪ್ರತಿಯೊಬ್ಬರ ಜೀವನದ ಅನಿವಾರ್ಯ ಅಂಗ ಈ ಓಟ ಎಂದರೆ ತಪ್ಪಾಗಲಾರದು. ಎಷ್ಟರ ಮಟ್ಟಿಗೆ ನಮ್ಮ ಜೀವನದಲ್ಲಿ ಈ ಓಟ ಹಾಸುಹೊಕ್ಕಾಗಿದೆ ಎಂದರೆ ದೇಹದಲ್ಲಿನ ಉಸಿರಿನಂತೆ. ನಮಗೆ ಅರಿವಿಲ್ಲದೆ ಹೇಗೆ ಉಸಿರಾಡುತ್ತಾ ಜೀವಿಸುತ್ತೇವೆಯೋ ಹಾಗೆ. ಬಾಲ್ಯದಲ್ಲಿ ಕಲಿಯದ ವಿದ್ಯೆ ಈ ಓಟ!

ಯಾವಾಗ ನೋಡಿದಾಗ್ಲೂ ಅದೇ ಸ್ಟೈಲು ಅದೇ ಲುಕ್ಕು!

Everyone runs behind something without any goal

ಹೊರಳುತ್ತ ಕೂರುತ್ತಾ ಏಳುತ್ತ ನಿಲ್ಲುತ್ತ
ನಡೆಯುದ ಕಲಿತೆ, ಓ ಮನುಜ
ಇಂದೇಕೆ ಓಡುತಿರುವೆ ಮನುಜ

ಈ ಪ್ರಶ್ನೆಯನ್ನು ಮನುಕುಲಕ್ಕೆ ಒಗೆದು ಅರ್ಥೈಸಿಕೊಳ್ಳುವ ಯತ್ನವೇ "ಓಟ" ಕಿರುಚಿತ್ರದ ಜೀವಕಥೆ.

ಒಮ್ಮೆ ಈ ಓಟ ಆರಂಭಿಸಿದ ಮೇಲೆ ಅದು ಕಡಿಮೆಯಾಗುವ ಸಾಧ್ಯತೆ ಕಡಿಮೆ. ಈ ಓಟದಲ್ಲಿ ಆಯಾಸ ಇದೆ, ಒದ್ದಾಟ ಇದೆ, ಸಂಕಟ ಇದೆ. ಆದರೆ ಇವೆಲ್ಲವೂ ಇದೆ ಎಂಬುದರ ಅರಿವು ಮಾತ್ರ ಇರುವುದಿಲ್ಲ ಅಷ್ಟೇ.

ಕೂತಲ್ಲಿ ಕೂರಲಾರೆ ನಿಂತಲ್ಲಿ ನಿಲ್ಲಲಾರೆ
ಏನೀ ಪರಿಯೋ ಓ ಮನುಜಾ
ನಿನ್ನೂಟಿಗ್ ಓಡುವವರ್ಯಾರೋ ಓ ಮನುಜಾ

ಎಂದು ಕೇಳಿ ಉತ್ತರ ಪಡೆದುಕೊಳ್ಳುವ ಯತ್ನವೇ "ಓಟ" ಕಿರುಚಿತ್ರದ ಮೂಲಕಥೆ.

Everyone runs behind something without any goal

ಒಬ್ಬೊಬ್ಬರ ಓಟ ಒಂದೊಂದರ ಹಿಂದೆ. ಅದು ಬೇಕು ಇದು ಬೇಕು ಎನ್ನುತ್ತಾ ಹಾದಿಯುದ್ದಕ್ಕೂ ದೊರೆವ 'ಫಲ'ವನ್ನು ಕಿತ್ತುಕೊಳ್ಳುತ್ತಾ ಸಾಗುವುದೇ ಈ ಓಟ. ಪ್ರತಿಯೊಂದು ಸಾಧನೆಯೂ ಗರಿಯಂತೆ ತಲೆಗೆ ಏರುತ್ತದೆ. ಸಾಧನೆಗಳ 'ಫಲಗಳ' ಮೂಟೆ ಬೆನ್ನ ಮೇಲೆ ಕೂತು ಮುಂದೊಂದು ದಿನ ಬೆನ್ನು ಬಾಗುತ್ತದೆಯೇ ವಿನಃ ಆ ಮೂಟೆಯ ಫಲ ಉಣ್ಣಲು ಸಮಯವೇ ಇರೋದಿಲ್ಲ. ಕೊಳೆತು ನಾರುವ ಸಾಧನೆಗಳನ್ನು ಹೊತ್ತುಕೊಂಡೊಯ್ಯುವುದೆಲ್ಲಿಗೆ? ಅದಾವ ಸಂತಸಕ್ಕೆ ಫಲಗಳನ್ನು ಆಯ್ದದ್ದು?

ಓಡುತ್ತ ಚಾಚಿದಷ್ಟೂ ಕೈ, ನಿನ್ನ ಗುರಿ
ಇನ್ನೂ ದೂರವಿದೆಯಲ್ಲೋ ಓ ಮನುಜಾ
ಗುರಿ ನೀ ಮುಟ್ಟುವೆಯೇನೋ ಓ ಮನುಜಾ

ಎಂಬುದಾಗಿ ಹೇಳುತ್ತಾ, ನಿನ್ನ ಗುರಿಯಾದರೂ ಏನು? ಹಾಗಿದ್ದಲ್ಲಿ ಅದನ್ನು ಮುಟ್ಟುವುದಾದರೂ ಎಂತು? ಎಂಬುದನ್ನು ಕೇಳುವುದೇ 'ಓಟ' ಕಿರುಚಿತ್ರದ ಕಳಕಳಿಯ ಕಥೆ.

Everyone runs behind something without any goal

ಕೆಲವರದ್ದು ನಿಲ್ಲದ ಓಟವಾದರೆ ಮತ್ತೆ ಕೆಲವರದ್ದು "ಓಡದೇ, ಬರೀ ನಿಲ್ಲಾಟ". 'ನಾಳೆ ಓಡಿದರಾಯ್ತು' ಎಂಬ ನಿಲುವು. ಅರಿವಿಲ್ಲದೆ ಓಡುತ್ತಲೇ ಇರುವುದು ಎಷ್ಟು ಅರ್ಥಹೀನವೋ, ಓಡಲು ಆರಂಭಿಸದೇ ಇರುವುದೂ ಅಷ್ಟೇ ನಿರರ್ಥಕ ಜೀವನ.

ಸದಾ ಕೆಲಸದಲ್ಲೇ ತೊಡಗಿ ದಿನ ನಿತ್ಯದ ಸಂತಸದಿಂದ ವಂಚಿತನಾಗಿ ಓಡುತ್ತಿರುವ ನಾಯಕ ಗಳಿಸಿದ್ದೇನು? ಕಳೆದುಕೊಂಡಿದ್ದೇನು? ಏನನ್ನೋ ಸಾಧಿಸಬೇಕು ಎಂಬ ಮನದಾಳದ ಬಯಕೆಯನ್ನು ಹೊಂದಿದ್ದ ಮತ್ತೋರ್ವ ನಾಯಕ, ಪ್ರಯತ್ನವನ್ನೇ ಮಾಡದೇ, ಮುಟ್ಟಬೇಕೆಂದಿದ್ದ ಆ ಗುರಿ ಏನು? ತನ್ನ ಗುರಿ ಮುಟ್ಟಿದನೇ?

ಈ ಎರಡು ಧ್ರುವಗಳಲ್ಲಿರುವ ವ್ಯಕ್ತಿಗಳ ಜೀವನದಲ್ಲಿ ಆಗಬೇಕಾಗಿದ್ದುದು ಒಂದೇ... ಅದೇ "ಬದಲಾವಣೆ". ಇಬ್ಬರ ಜೀವನದಲ್ಲಿ ಬೀಸಬೇಕಿದ್ದುದು ಬದಲಾವಣೆ ಎಂಬ ಗಾಳಿ. ಈ ಗಾಳಿ ಸೋಕಿದ ಮೇಲೆ ಬರೀ ಅವರದ್ದೇ ಜೀವನವಲ್ಲದೆ ಅವರೊಂದಿಗಿರುವವರ ಜೀವನವೂ ಸುಂದರವಾಗಿ ಬದಲಾಗಿದ್ದು ಅಚ್ಚರಿಯ ಮಾತಲ್ಲ.

ಆಗಬೇಕಯ್ಯಾ ನೀ ಬದಲಾಗಬೇಕು
ಬದಲಾಗಿ ನೀ ಬದುಕಿ ಬದುಕುಣಿಸಬೇಕು
ಬದುಕ ಸವಿಯೋದು ಗುರಿಯಾಗಿರಲಿ

ಎಂಬುದಾಗಿ ಆಶಿಸಿ ಬದಲಾವಣೆಯನ್ನು ಕಂಡು ಹಿಗ್ಗುವುದೇ "ಓಟ" ಕಿರುಚಿತ್ರದ ನೈಜಕಥೆ.

Everyone runs behind something without any goal

ನಮ್ಮೂರಿನ ಕೆಲವು ಸಮಾನ ಮನಸ್ಕರು ಒಂದೆಡೆ ಕೂತು ಚರ್ಚಿಸಿದ ವಿಷಯದ ಫಲವೇ ಈ ಕಿರುಚಿತ್ರ. ಈಗಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಎದುರಿಸುತ್ತಿರುವ ಬವಣೆಯನ್ನು ಎತ್ತಿ ಹಿಡಿದು ಅದಕ್ಕೆ ಪರಿಹಾರವನ್ನೂ ಸೂಚಿಸುವ ಯತ್ನವೇ ಈ ಕಿರುಚಿತ್ರದ ಮೂಲ ಉದ್ದೇಶ. ನಿಮಗೂ ಈ ಕಿರುಚಿತ್ರ ಇಷ್ಟವಾಗಬಹುದು ಎಂದು ನಂಬಿದ್ದೇನೆ.

ಇನ್ನು ತಡವೇಕೆ? ಬನ್ನಿ 'ಓಟ'ದೊಂದಿಗೆ ಓಡುತ್ತಾ ನಮ್ಮಲ್ಲೂ ಬದಲಾವಣೆ ತಂದುಕೊಳ್ಳುವ ಯತ್ನವ ಮಾಡೋಣ. ಕಿರುಚಿತ್ರಕ್ಕೆ ಇಲ್ಲಿ ಕ್ಲಿಕ್ ಮಾಡಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
This is a short story that revolves around the run. This run is part of everyone’s life. Every person is running behind something. While some people have the realization about what they are running after, most people do not.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ