ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮಗೆ ಸುಳ್ಳು ಹೇಳೋಕ್ಕೆ ಬರುತ್ತಾ? ಸುಳ್ಳು ಹೇಳಬೇಡಿ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|
Google Oneindia Kannada News

ಬೆಳ್ ಬೆಳಿಗ್ಗೆ ಏನ್ರೀ ಜೋಕ್ ಇದೂ? ಸುಳ್ಳು ಹೇಳೋಕ್ಕೆ ಬರುತ್ತಾ ಅಂದ್ರಾ? ಅದು ಬರುತ್ತೆ, ಇರುತ್ತೆ, ಹೋಗುತ್ತೆ... ಅಲ್ಲಲ್ಲಾ ಅದು ತನ್ನಷ್ಟಕ್ಕೆ ಹೋಗೋಲ್ಲಾ ಅವರವರು ಹೋದಾಗ ಅವರ ಹಿಂದೇನೇ ಹೋಗುತ್ತೆ!

'ಸುಳ್ಳು ನಮ್ಮಲ್ಲಿಲ್ಲವಯ್ಯಾ ಸುಳ್ಳೇ ನಮ್ಮನೆ ದೇವರೂ' ಅಂತ ದಾಸರೇ ಹೇಳಿದ್ದಾರೆ. ನಮ್ಮನ್ನು ನಾವು 'ಕಾಡು' ಎಂದುಕೊಂಡರೆ ಸುಳ್ಳು ಎಂಬೋದು ಅಲ್ಲಿನ ಹಸಿರು. ನಮ್ಮಲ್ಲಿನ ಅವಿಭಾಜ್ಯ ಅಂಗ ಈ ಸುಳ್ಳು. ಒಂದು ಸುಳ್ಳು ಸತ್ತರೆ ಮತ್ತೊಂದು ಚಿಗುರುತ್ತೆ! ಪ್ರತಿ ಬಾರಿ ಸುಳ್ಳಾಡಿದಾಗ Pinocchio ಮೂಗು ಉದ್ದವಾಗುವಂತೆ!

'ಝೂಟ್ ಬೋಲೇ ಕವ್ವಾ ಕಾಟೆ' ಅಂತ ಒಂದು ಮಾತಿದೆ. ಇದರ ಅರ್ಥ ಏನಂದರೆ 'ಸುಳ್ಳು ಹೇಳಿದರೆ ಕಾಗೆ ಕಚ್ಚುತ್ತೆ' ಅಂತ! ಸುಳ್ಳು ಹೇಳದಿರಿ ಎಂಬುದನ್ನು ನೇರವಾಗಿ ಹೇಳಿದರೆ ಕೇಳೋದಿಲ್ಲ ಅಂತ ಹೀಗೂ ಹೆದರಿಸಿದ್ದರು ಅಂತ ಕಾಣುತ್ತೆ ಅಂದಿನ ಕಾಲದಲ್ಲಿ!

A lie told often enough becomes the truth

ಆದರೆ ಇದರ ಅರ್ಥವನ್ನು ಈ ರೀತಿಯೂ ಹೇಳುತ್ತಾರೆ... ಸುಳ್ಳನ್ನಾಡಿದರೆ ಕಾಗೆ ಕಚ್ಚುತ್ತೆ. ಆದರೆ ಕಾಗೆ ಕಚ್ಚೋದು ಎಂದರೆ ಏನು? ಅದು ಸಾವನ್ನು ಬರಮಾಡಿಕೊಳ್ಳೋದು ಅಂತ. ಕಾಗೆ ಶನಿಯ ವಾಹನ. ಕಾಗೆ ಕಚ್ಚೋದು ಎಂದರೆ ಶನಿಕಾಟ ಅಂತರ್ಥ. ಸಿಕ್ಕಾಪಟ್ಟೆ ಒಳಾರ್ಥ ಇದೆ, ಎಲ್ಲಾ ತಿಳಿದುಕೊಳ್ಳೋದಕ್ಕೆ ಯಾರಿಗೆ ಟೈಮ್ ಇದೆ?

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಅಂತ ಒಂದು ಗಾದೆ ಮಾತಿದೆ ನಮ್ಮಲ್ಲಿ. ಈ ಸುಳ್ಳು ಎಲ್ಲಿ ಶುರುವಾಗುತ್ತೆ ಅಂದರೆ potential ವರ (ಅರ್ಥಾತ್ ಹೆಣ್ಣನ್ನು ನೋಡಲು ಬಂದ ಹುಡುಗ) ಮತ್ತು ಮನೆಯವರು ಹುಡುಗಿಯ ಮನೆಗೆ ಬಂದಾಗ ತಿಂಡಿ-ಕಾಫಿ ಕೊಟ್ಟು 'ಎಲ್ಲಾ ನಮ್ಮ ಹುಡುಗೀನೇ ಮಾಡಿದ್ದು' ಅನ್ನೋ ಸುಳ್ಳು.

ಸುಳ್ಳು ಹೇಳದೆ ಮದುವೆ ಮಾಡೋದು ಹೇಗೆ? ಹುಡುಗಿಗೆ ಏನೇನು ಬರುತ್ತೆ ಅಂತ ಪ್ರಶ್ನೆ ಮಾಡಿದಾಗ "ಬೇಸಿಗೆಯಲ್ಲಿ ಬಿಸಿಲಿಗೆ ತಲೆನೋವು ಬರುತ್ತೆ, ಚಳಿಗೆ ನೆಗಡಿ ಬರುತ್ತೆ" ಅಂತ ನಿಜ ಹೇಳೋಕ್ಕಾಗುತ್ತಾ?

ದಿನನಿತ್ಯದಲ್ಲಿ ನಾವು ಕಾಣೋ ಈ ಸುಳ್ಳು ಸಿಕ್ಕಾಪಟ್ಟೆ ಸರ್ವೇಸಾಮಾನ್ಯ. ಒಂದು ಸಮಾರಂಭ. ಮುಖ್ಯ ಅತಿಥಿಗಳನ್ನು ಪರಿಚಯ ಮಾಡಿಕೊಡುತ್ತಾ ಅವರನ್ನು ಅಟ್ಟದ ಮೇಲೆ ಕೂರಿಸುವ ಯತ್ನದಲ್ಲಿ "ಗಣ್ಯರು ಸಿಕ್ಕಾಪಟ್ಟೆ ಬಿಜಿಯಾಗಿದ್ದರೂ ಸಹ, ನಮ್ಮ ಕಾರ್ಯಕ್ರಮಕ್ಕೆ ಬರುವುದಾಗಿ ಒಪ್ಪಿಕೊಂಡು ಇಲ್ಲಿಯವರೆಗೆ ಬಂದಿದ್ದಾರೆ" ಅಂತೆಲ್ಲಾ ಕಥೆ ಹೊಡೆಯುತ್ತಾರೆ. ಅತಿಥಿಗಳೋ, ಬಿಲ್ಡ್-ಅಪ್ ಕೊಡಲು, ಖಾಲಿ ಇದ್ದರೂ ಬೇಕೋ ಅಂತಲೇ ತಡವಾಗಿ ಬಂದು ಬೇಗ ಹೋಗುತ್ತಾರೆ!

ಪ್ರೀತಿ ಮಾಡು ತಮಾಷೆ ನೋಡು, ಹಾಲು ಜೇನು, ಭಾಗ್ಯದಾ ಲಕ್ಷ್ಮಿ ಬಾರಮ್ಮ ಇತ್ಯಾದಿ ಸಿನಿಮಾಗಳನ್ನೆಲ್ಲಾ ನಿಮ್ಮ ಸ್ಮೃತಿಪಟಲದಿಂದ ಹೊರತನ್ನಿ. ಸುಳ್ಳು ಹೇಳೋದು, ಸಿಕ್ಕಿಬೀಳೋದು ಈ ಚಿತ್ರಗಳ ಸಾಮಾನ್ಯ ಅಂಶ. ಸುಳ್ಳು ಯಾಕೆ ಹೇಳಿರ್ತಾರೆ ಅನ್ನೋದು ಇಲ್ಲಿ ಮುಖ್ಯವಲ್ಲ.

ಇನ್ನು ಹಾಸ್ಯ ಧಾರಾವಾಹಿಗಳು. ಎಲ್ಲಿದೆ ಅಂತ ಕೇಳಬೇಡಿ, ಆದರೆ ಧಾರಾವಾಹಿಯಲ್ಲಿ ಹಾಸ್ಯ ಹುಟ್ಟಿಸೋದು ಎಂದರೆ ಯಾವನೋ ಒಬ್ಬ ರೀಲ್ ಬಿಡುವವ ಇರಲೇಬೇಕು, ಪೇಚಿಗೆ ಸಿಕ್ಕಲೇಬೇಕು. ಧಾರಾವಾಹಿ ಎಳೆಯಬೇಕು ಎಂದಾಗ ಮೊದಲು ಹೇಳಿದ ಸುಳ್ಳನ್ನು ಮುಚ್ಚಲು ಮತ್ತೊಂದು ಮಗದೊಂದು ಅಂತ ಎಪಿಸೋಡ್'ಗೊಂದು ಹೊಸಾ ಸುಳ್ಳು ಹೊಸೆಯಲೇಬೇಕು. ಏನು ಸುಳ್ಳು ಹೇಳಬೇಕೂ ಅನ್ನೋ ಯೋಚನೆಯಲ್ಲೇ ಆ ಬರಹಗಾರರಿಗೆ ಮನೆಯಲ್ಲೂ ರೀಲ್ ಬಿಡೋದು ಅಭ್ಯಾಸ ಆಗಿಹೋಗಿರುತ್ತೆ!

ಎಲ್ಲೆಡೆ ಸುಳ್ಳಿನ ಕಂತೆಯನ್ನೇ ಒಗೆಯುತ್ತಿದ್ದರೂ ಒಂದು ಸುಳ್ಳು ಹೇಳಿದ ಧರ್ಮರಾಜನಿಗೆ ನರಕ ದರ್ಶನವಾಗಿಯೇ ತೀರಿತು. ಆದರೂ ಒಂದೇ ಸುಳ್ಳಿಗೆ ನರಕದರ್ಶನವೇ? ಹಾಗೇನಿಲ್ಲ, ಅವನು ಒಂದು ಸುಳ್ಳು ಹೇಳಿ ನರಕಕ್ಕೆ ವಿಸಿಟ್ ಮಾಡಿದಾಗ, ಅಲ್ಲಿ ಶಿಕ್ಷೆ ಅನುಭವಿಸುತ್ತಿದ್ದವರಿಗೆ ಏನೋ ಒಂದು ರೀತಿ ಹಾಯಾದ ಅನುಭವಾಯ್ತಂತೆ. ಅವನು ಅಲ್ಲಿರುವಷ್ಟೂ ಹೊತ್ತು ಅವರುಗಳಿಗೆ ಯಾವ ನೋವೂ ಕಾಣಲಿಲ್ಲವಂತೆ.

ಅಮೆರಿಕಾದಲ್ಲಿ ಆರೋಗ್ಯ ಕೆಡೋದು ಅಂದರೆ ಸ್ವಲ್ಪ ಹಿಂಸೆಯೇ ಸರಿ. ಪೇಟೆ ಬೀದಿಯಲ್ಲಿರೋ ಕ್ಲಿನಿಕ್'ಗೆ ಹೋಗಿ ಬರ್ತೀನಿ ಅಂತ ಹೋಗಿ ಬರೋದಕ್ಕೆ ಆಗೋಲ್ಲ. ತುರ್ತುಚಿಕಿತ್ಸೆಗೆ ದೊಡ್ಡ ಆಸ್ಪತ್ರೆಯ 'ER - Emergency Room' ಘಟಕಕ್ಕೆ ಹೋಗಬೇಕು. ಮೊದಲ ದರ್ಶನ ನರ್ಸಮ್ಮನದು. ಏನಾಗಿದೆ? ನೋವಿನ ಲೆವೆಲ್ (scale of 1 to 10) ಎಷ್ಟಿದೆ? ಅಂತ ಕೇಳಿದಾಗ ನಾವೊಮ್ಮೆ 'ಅಂಥಾದ್ದೇನಿಲ್ಲ, ಜಸ್ಟ್ 3 ಅಂತ ಹೇಳಿದ್ವಿ'. ಮೂರು ತಾನೇ ಅಂತ ಅಲ್ಲಿಂದ ಮೂರು ಘಂಟೆಗಳಾದ ಮೇಲೆಯೇ ನಮ್ಮ ಟರ್ನ್ ಬಂದು ಡಾಕ್ಟರ್ ನೋಡಿದ್ದು. ನಮಗಿಂತಾ ಹಳಬರ ಮುಂದೆ ಈ ಮಾತಾಡಿದಾಗ ಅವರು ಹೇಳಿದ್ದು "ನಿಮ್ಮ ನೋವು 3 ಇರಲಿ, ಆದರೆ ಅವರು ಕೇಳಿದಾಗ 9 ಅಥವಾ ಹತ್ತು ಅನ್ನಿ, ಬೇಗ ಕರೀತಾರೆ"! ಬಂದೋರೆಲ್ಲಾ 9 ಅಥವಾ 10 ಎಂದರೆ ಮೊದಲಲ್ಲಿ ಯಾರನ್ನು ಕರೀತಾರೆ?

ರಾಜಕೀಯ ಬಿಟ್ಟರೆ ಸುಳ್ಳು ಎಂಬೋದು ಇನ್ನೆಲ್ಲಿ ತಾಂಡವವಾಡುತ್ತದೆ ಗೊತ್ತೇ? ಕೆಲಸದ ಇಂಟರ್ವ್ಯೂ'ನಲ್ಲಿ...

ಕೆಲಸ ಖಾಲಿ ಇದೆ, ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ ಎಂದು ಜಾಹೀರಾತು ಹಾಕಿದ ಮೇಲೆ ಬರೋ ಜಾತಕಗಳನ್ನು ನೋಡಿದರೆ ಕೆಲವೊಂದು ಬೆಚ್ಚಿಬೀಳಿಸುತ್ತದೆ. ನಾನಿರೋ ಐಟಿ ಕ್ಷೇತ್ರದಲ್ಲಿ, ಎಷ್ಟರ ಮಟ್ಟಿಗೆ ರೀಲು ಬಿಡಬಹುದೋ ಅಷ್ಟೂ ಬಿಡಲಾಗಿರುತ್ತದೆ ಅವರವರ ಜಾತಕದಲ್ಲಿ. ಹತ್ತು ಪ್ರತಿಶತ ಸುಳ್ಳು ಇರಬಹುದು ಎಂಬುದು ಎಲ್ಲರಿಗೂ ವೇದ್ಯವೇ ಆಗಿದ್ದರೂ ಕೆಲವರ ಜಾತಕ ಬರೀ ಹತ್ತು ಪ್ರತಿಶತ ನಿಜವಾಗಿರುತ್ತದೆ.

ತಮಗೆ ಅದು ಗೊತ್ತು ಇದು ಗೊತ್ತು ಎಂದು ಅರ್ಜಿ ಹಾಕಿ, telephonic interview ಆದಾಗ ಇವರ ಬದಲಿಗೆ ಮತ್ತೊಬ್ಬ ಮಾತನಾಡುತ್ತಾನೆ. ಮುಖತಃ ಭೇಟಿಯ ಇಂಟರ್ವ್ಯೂ ಸಮಯದಲ್ಲಿ ಆ ಎಂದರೆ ಟೋ ಎನ್ನಲಿಕ್ಕೂ ಬಾರದ ಇವನನ್ನು ನೋಡಿ, 'ಇವನೇನಾ ದೂರವಾಣಿಯಲ್ಲಿ ಅದ್ಭುತವಾಗಿ ಮಾತನಾಡಿದವನು?' ಅಂತ ಅಲ್ಲಿಂದ ಓಡಿಸಿರುವ ಬೇಕಾದಷ್ಟು ಉದಾಹರಣೆಗಳಿವೆ.

ಅಮೆರಿಕಾದಲ್ಲಿ 'ಲೈ ಡಿಟೆಕ್ಷನ್' ಅಥವಾ 'ಪಾಲಿಗ್ರಾಫ್ ಟೆಸ್ಟ್'ನ ಬಳಕೆ ಬಹಳಷ್ಟಿದೆ. ಅಮೆರಿಕಾದ ಹೊರಗೆ ಬೇರೆ ದೇಶಗಳಲ್ಲಿ ಇದರ ಬಳಕೆ ಅಷ್ಟಿಲ್ಲ. ಘನ ಭಾರತದಲ್ಲಿ ದೊಡ್ಡ ಜನಕ್ಕೆ ಈ ಯಂತ್ರ ಜೋಡಿಸಿ ನಿಜ ಬಾಯಿಬಿಡಸಲು ತೊಡಗಿದರು ಎನ್ನಿ, ಬಹುಶಃ ಆ ಮೆಷೀನ್'ಗೇ ತಲೆಕೆಟ್ಟು ಕೆಲಸ ಮಾಡೋದು ನಿಲ್ಲಿಸಬಹುದು. ಇದರರ್ಥ ನಮ್ಮವರು ಸುಳ್ಳು ಆಡ್ತಾರೆ ಅಂತಲ್ಲ. ನುಣುಚಿಕೊಳ್ಳಲು ಅಥವಾ ಇಂಥವರನ್ನು ನುಣುಚಿಕೊಳ್ಳಲು ಸಹಾಯ ಮಾಡುವ ಮಂದಿ ಬೇಕಾದಷ್ಟು ಮಂದಿ ಸಿದ್ಧವಾಗಿರುತ್ತಾರೆ ಅಂತರ್ಥ. ಇಲ್ಲದಿದ್ದರೆ ಏನೆಲ್ಲಾ ತಪ್ಪು ಮಾಡಿರುವವರು ಕ್ಲೀನ್ ಚಿಟ್ ಪಡೆದು ಹೊರಗೆ ಇರುತ್ತಿರಲಿಲ್ಲ.

ಒಂದು ಸಮೀಕ್ಷೆಯ ಪ್ರಕಾರ, ಜಗತ್ತಿನ ಪ್ರತಿಯೊಬ್ಬರೂ ಸುಳ್ಳು ಹೇಳುತ್ತಾರಂತೆ. ಇದಕ್ಕೆ ಸಮೀಕ್ಷೆಯೇ ಬೇಕಿತ್ತಾ ಎನ್ನಬೇಡಿ. ನಮ್ಮಲ್ಲಿ ಹೇಗಪ್ಪಾ ಎಂದರೆ 'ನಾನು' ಹೇಳಿದೆ ಎಂದರೆ ಒಂದು ವಿಷಯದ ಬಗ್ಗೆ ಅಷ್ಟು ಆಸಕ್ತಿ ಹುಟ್ಟದೇ ಇರಬಹುದು. ಇದರ ಬದಲು ಹಾರ್ವರ್ಡ್ ರಿಸರ್ಚ್ ಪ್ರಕಾರ 'ತಣ್ಣಗಾಗಿರುವ ಇದ್ದಿಲಿನ ಬಣ್ಣ ಕಪ್ಪು' ಎಂದರೆ ಹೌದಾ ಅಂತ ಬಾಯಿಬಿಡ್ತಾರೆ!

ಸುಳ್ಳು ಹೇಳೋದಾದ್ರೂ ಏಕೆ? ಚಿಕ್ಕ ಉದಾಹರಣೆ, ನಾವು ಇಲ್ಲಿಂದ ಭಾರತಕ್ಕೆ ಕರೆ ಮಾಡಿ ಅಪ್ಪ-ಅಮ್ಮನ ಜೊತೆ ಮಾತಾಡುವಾಗ ಆರೋಗ್ಯ ವಿಚಾರಿಸಿದಾಗ "ಏನೂ ತೊಂದರೆ ಇಲ್ಲ. ಎಲ್ಲ ಆರಾಮ್" ಅಂತಾರೆ. ಇದು ಬಿಳೀ ಸುಳ್ಳು. ಅವರ ಅನಾರೋಗ್ಯ ನಮ್ಮ ಮನಃಶಾಂತಿಗೆ ಎಲ್ಲಿ ಧಕ್ಕೆ ಬರುತ್ತೋ, ನಾವು ಅವರ ಬಗ್ಗೆ ಯೋಚಿಸುತ್ತೀವಿ ಅಂತ ಹಾಗೆ ಹೇಳುತ್ತಾರೆ. ಒಬ್ಬರ ಒಳಿತಿಗೆ ಸುಳ್ಳು ಹೇಳಿದರೆ ಅಡ್ಡಿಯಿಲ್ಲವಂತೆ.

ಹೆಣ್ಣು ಮತ್ತು ಗಂಡು ಸರಿಸಮನಾಗಿ ಸುಳ್ಳು ಹೇಳುತ್ತಾರಂತೆ. ಗಂಡು ತನಗಾಗಿ ಸುಳ್ಳು ಹೇಳಿಕೊಂಡರೆ ಹೆಣ್ಣು ಇನ್ನೊಬ್ಬರನ್ನು ಮೆಚ್ಚಿಸಲು ಸುಳ್ಳು ಹೇಳುವುದಂತೆ. ತವರು ಮನೆಗೆ ಹೋದ ಹೆಣ್ಣು 'ತನ್ನ ಗಂಡ ಹಾಗೆ ಹೀಗೆ ಅಂತ ಎತ್ತರಕ್ಕೆ ಕೂಡಿಸೋಲ್ವೇ?'. ಸಂಸಾರದ ಗುಟ್ಟನ್ನು ಹೀಗೆ ಸುಳ್ಳು ಹೇಳಿ ಕಾಪಾಡಿಕೊಳ್ಳುತ್ತಿದ್ದರು ಅಂದಿನ ಕಾಲದವರು. ಇಂದು ಬಿಡಿ ಪ್ರತಿ ವಿಷಯ ಫೇಸ್ಬುಕ್'ನಲ್ಲೆ ಸಿಗುತ್ತೆ.

ಆಯ್ತು... ಈವರೆಗೂ ಸುಳ್ಳಿನ ಬಗ್ಗೆ ಹೇಳಿದ ವಿಷಯವೆಲ್ಲಾ ನಿಜ ಅಂತ ಅಂದುಕೊಳ್ಳುತ್ತೇನೆ! ನೀವು ಒಂದಷ್ಟು ನಿಮ್ಮ ವಿಷಯ ಹೇಳಿ ಮತ್ತೆ! ಸುಳ್ಳು ಮಾತ್ರ ಹೇಳಬೇಡಿ!

English summary
A lie told often enough becomes the truth. The most common lie is that which one lies to himself; lying to others is relatively an exception. Never say that you never lie. Tell only the truth. Humorous write up by Srinath Bhalle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X