ಕೆಂಪು ಚಂದ್ರ ದರ್ಶನ, ತಾರಸಿಯಿಂದ ಲೈವ್!
ಭಾರತೀಯ ಕಾಲಮಾನ ಅಕ್ಟೋಬರ್ 8, ಬುಧವಾರ ಸಂಜೆ 7 ಗಂಟೆಗೆ ಭೂಮಿಯ ಈಚೆ ಬದಿಯ ಆಕಾಶದಲ್ಲಿ ಒಂದು ಚಮತ್ಕಾರ ನಡೆಯತ್ತೆ. ಟಿಕೇಟು, ಪಾಸು ಇಲ್ಲದೆ ಅದನ್ನು ನೀವು ನೋಡಬಹುದು, ಆದರೆ ಅದಕ್ಕೆ ಕೆಲವು ಕಂಡೀಷನ್ನುಗಳಿವೆ. ಮೊದಲು ಆಕಾಶ ಸ್ವಚ್ಛವಾಗಿರಬೇಕು, ಎರಡನೇದು ಕರೆಂಟು ಹೋಗಬೇಕು. ಮತ್ತು, ಒಂದು ವಿಶಿಷ್ಟವಾದ ಆಸನ ಹಾಕುವುದನ್ನು ನೀವು ಇವತ್ತೇ ಕಲಿಯಬೇಕು. ನಾಳೆಯ ಫುಟ್ ಬಾಲ್ ಪಂದ್ಯಕ್ಕೆ ಇವತ್ತೇ ತಯ್ಯಾರಾಗುವಂತೆ ಕೇವಲ 2% ಚಂದ್ರಕಾಂತಿಯಲ್ಲಿ ಮೀಯಲು ಬೆಂಗಳೂರಿನ ಓರ್ವ ಪ್ರಜೆ, ಪತ್ನೀಸಮೇತ ಸಜ್ಜಾಗುತ್ತಿದ್ದಾರೆ. ಆಸಕ್ತರು ಅವರ ಗುಂಪಿಗೆ ಸೇರಿಕೊಳ್ಳಬಹುದು. ಹೆಚ್ಚಿನ ವಿವರಗಳು ಈ ಕೆಳಕಂಡಂತಿವೆ - ಸಂಪಾದಕ.
ಇಂದು (ಬುಧವಾರ) ಸಂಜೆ ಏಳು ಗಂಟೆಗೆ ಪೂರ್ವ ಕ್ಷಿತಿಜದಲ್ಲಿ ಪೂಣ೯ಚಂದ್ರ ಉದಯಿಸುವುದನ್ನೇ ಕಾಯುತ್ತೇನೆ. ಗ್ರಹಣ ಶೇಕಡಾ 98ರಷ್ಟು ಮುಗಿದಿರುತ್ತದೆ. ಮೋಡ ಇಲ್ಲದಿದ್ದರೆ ಕೊನೆಯ ಐದು ನಿಮಿಷಗಳಷ್ಟು ಮಾತ್ರ ಕಾಣುತ್ತದೆ. ಗ್ರಹಣ ಮುಗಿಸಿದ ಕೆಂಬಣ್ಣದ ಚಂದ್ರನ ಪೂಣ೯ ಬಿಂಬ ತುಂಬ ಸುಂದರ.
ನೋಡಲು ಎರಡು ಕಣ್ಣು ಸಾಲದೆಂದು ಪತ್ನೀಮಣಿಯನ್ನೂ ಜತೆಗೆ ಕೂರಿಸಿಕೊಳ್ಳುತ್ತೇನೆ. ಈಗಿನದು 'Blood Moon' ಎಂತಲೂ Impossible Eclipse ಎಂತಲೂ ಖಗೋಳ ವೀಕ್ಷಕರು ಈಗಲೇ ವಣಿ೯ಸಿದ್ದಾರೆ. ಅದೇನೊ ತೀರ ಅಪರೂಪದ Horizontal Eclipse ಆಗಲಿದೆಯಂತೆ. ನಮಗೆ ನೋಡಲು ಅದೃಷ್ಟವಿಲ್ಲ.
ಅದೇನಿದ್ದರೂ ಭೂಮಿಯ ಆಚೆ ಮಗ್ಗುಲಿನವರಿಗೆ ಕಾಣುತ್ತದಷ್ಟೆ. ಆದರೂ ಟಿವಿಯಲ್ಲಿ 4.24ರಿಂದ ಅಧ೯ಗಂಟೆಯ ಕಾಲ ಅಮೆರಿಕದ ಪೂಣ೯ಗ್ರಹಣವನ್ನು ಇಲ್ಲಿ ಅದೇ ವೇಳೆಗೆ ನೋಡಬಹುದು. ಆಮೇಲೆ ಏಳುಗಂಟೆಗೆ ನೇರವಾಗಿ ಕ್ಷಿತಿಜದಂಚಿನಲ್ಲಿ ಚಂದ್ರ ಮೂಡಿಬಂದರೆ ಈ ಬಾರಿ ಆತ ಎಂದಿಗಿಂತ ದೊಡ್ಡದಾಗಿ ಕಾಣಲಿದ್ದಾನಂತೆ. ಆಗ ಒಂದು ಟ್ರಿಕ್ ಮಾಡಬೇಕು:
ಚಂದ್ರನಿಗೆ ಬೆನ್ನುಮಾಡಿ, ಶರೀರವನ್ನು ಪೂತಿ೯ ಬಗ್ಗಿಸಿ, ಕಾಲುಗಳ ಮಧ್ಯೆಯಿಂದ ಚಂದ್ರಬಿಂಬವನ್ನು ನೋಡಬೇಕು. ಆಗ ಆ ದೊಡ್ಡ ಚಂದ್ರ ತೀರ ಸಾಮಾನ್ಯ ಚಂದ್ರನಂತೆ ಕಾಣುತ್ತಾನಂತೆ! (ಟಿವಿಯ ಎದುರು ಹಾಗೆ ಮಾಡಿದರೆ ಪ್ರಯೋಜನವಿಲ್ಲ) ಇಂದು ಸಂಜೆ ಪ್ರಾಕ್ಟೀಸ್ ಮಾಡಲೆಂದು ದೂರದ ಲೈಟ್ ಕಂಬದ ದೀಪವನ್ನು ಹಾಗೆ ನೋಡಿದೆ- ಏನೂ ವ್ಯತ್ಯಾಸ ಕಾಣಲಿಲ್ಲ. ಬೆನ್ನಿಗೆ ಜೋಮು ಬಂತು! ನಾಳೆ ನೋಡಬೇಕು.
ನನ್ನ ಮನೆಯಿಂದ ಪೂವ೯ ಕ್ಷಿತಿಜದಲ್ಲಿ ಸಂಜೆಯಾಗುತ್ತಲೇ ಬೆಂಗಳೂರಿನ ಗಗನಪ್ರಭೆ ಕಾಣುತ್ತಿರುತ್ತದೆ. ನಗರದ ಇತರ ಮಾಲಿನ್ಯಗಳಿಂದ ದೂರ ಬಂದರೂ ಬೆಳಕಿನ ಮಾಲಿನ್ಯದಿಂದ ಬಚಾವಾಗಲು ಸಾಧ್ಯವಿಲ್ಲ. ಬೆಸ್ಕಾಮ್‍ನವರು ಬುಧವಾರ ಏಳರಿಂದ ಏಳೂಕಾಲರವರೆಗಾದರೂ ರಾಜಧಾನಿಯಲ್ಲಿ ಲೋಡ್ ಶೆಡ್ಡಿಂಗ್ ಮಾಡಿದರೆ (ಮತ್ತು ಮೇಘರಾಜ ಕೃಪೆ ಮಾಡಿ ತುಸು ದೂರ ಸರಿದಿದ್ದರೆ) ನಮ್ಮ ಅದೃಷ್ಟ.
ನಮಗೆ ನಾವೇ ಶುಭ ಹಾರೈಸಿಕೊಳ್ಳಬೇಕು. [ಯಾವ ರಾಶಿಗೆ ಏನು ಫಲ?]













Click it and Unblock the Notifications