• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೃದ್ಧರ ಪಾಲಿನ ನಂದಗೋಕುಲ ಪೇಜಾವರ ಶ್ರೀಧಾಮ

By * ಶಾಮ್
|
ಮುಪ್ಪು ಆವರಿಸಿದವರಿಗೆ ಸಾವಿನ ಅಂಜಿಕೆ ಇರುವುದಿಲ್ಲ, ಬದುಕುವುದು ಹೇಗೆ ಎಂಬ ಭಯ ಮಾತ್ರ ಅವರನ್ನು ಕ್ಷಣಕ್ಷಣಕ್ಕೂ ಕಾಡದೆ ಬಿಡುವುದಿಲ್ಲ. ಆಧುನಿಕತೆ, ಕುಟುಂಬ ವಿಘಟನೆ ಮತ್ತು ಪಾಶ್ಚಾತ್ಯ ಜೀವನಶೈಲಿಗಳು ಕನ್ನಡಿಗರ ಮೈ ಮನ ಮನೆಗಳನ್ನು ಆಕ್ರಮಿಸಿಕೊಂಡಿರುವುದರಿಂದ ಹಿರಿಯ ಜೀವಿಗಳ ಬದುಕು ತೀರಾ ಅತಂತ್ರವಾಗುತ್ತಿದೆ. ಸಿರಿತನ ಬಡತನದ ಹಂಗುಮೀರಿದ, ಪರಂತು, ದಿಕ್ಕಿಲ್ಲದ ಅನೇಕ ವಯೋವೃದ್ಧರು ಒಂಟಿ ಜೀವಿಗಳಾಗಿ ಬದುಕು ನೂಕಬೇಕಾದ ಇವತ್ತಿನ ಪರಿಸ್ಥಿತಿಗೆ ಕಾರಣಗಳು ದಂಡಿಯಾಗಿವೆ. ಹೀನಾಯ ಪರಿಸ್ಥಿತಿಗೆ ಯಾರನ್ನೂ ದೂರುವ ಹಾಗಿಲ್ಲ. ಆದರೆ ಅಪ್ಪ, ಅಮ್ಮ, ಅಜ್ಜಿ, ತಾತನನ್ನು ಅವರ ಜೀವನ ಸಂಧ್ಯಾಕಾಲದಲ್ಲಿ ನೋಡಿಕೊಳ್ಳವವರು ಯಾರು ಎಂಬ ಪ್ರಶ್ನೆಗೆ ಉತ್ತರಗಳೇ ಸಿಗುತ್ತಿಲ್ಲ.

ಒಂದೇ ಸೂರಿನಲ್ಲಿ ಆಕಳು ಕರು, ಕುರಿ ಕೋಳಿ ಸಮೇತ ಸಮಸ್ತ ಕುಟುಂಬವರ್ಗ ಬದುಕನ್ನು ಸಾಧ್ಯಮಾಡಿಕೊಂಡಿದ್ದ ಕಾಲ ಈಗ ಕೆಟ್ಟು ಎಕ್ಕುಟ್ಟಿ ಹೋಗಿರುವುದರಿಂದ ಮನೆಮಂದಿಯೆಲ್ಲರೂ ಒಂದೊಂದು ದಿಕ್ಕಾಗಿದ್ದಾರೆ. ಏನಕೇನ ಪ್ರಕಾರೇಣ ನಮ್ಮ ಸಾಮಾಜಿಕ ವ್ಯವಸ್ಥೆಯೇ ಪಲ್ಲಟವಾಗಿರುವುದರಿಂದ ವಯೋವೃದ್ಧರು ನೆಮ್ಮದಿಯಿಂದ ಬದುಕುವ ಅವಕಾಶಗಳು ಕಡಿಮೆ ಆಗಿ, ಸವಾಲುಗಳು ಬೆಟ್ಟದಷ್ಟಾಗಿವೆ. ಮುಪ್ಪಡರಿದವರ ಜೀವನ ಹೇಗಾದರೂ ಇರಲಿ, ಹಿರಿಯರಿಗೆ ಅಯ್ಯೋಪಾಪ ಎನ್ನುವುದನ್ನು ಬಿಟ್ಟು ಇನ್ನೇನನ್ನೂ ಮಾಡಲಾಗದ ನಿಸ್ಸಹಾಯಕ ಮಕ್ಕಳು ಮೊಮ್ಮಕ್ಕಳ ನೆರವಿಗೆ ವೃದ್ಧಾಶ್ರಮಗಳು ಒದಗಿಬಂದಿವೆ ಎನ್ನೋಣವೇ?

ಮೈಯಲ್ಲಿ ರಕ್ತ ಬಿಸಿಯಾಗಿರುವ ತನಕ ಯುವಕ ಯುವತಿಯರಿಗೆ ಅಂದರೆ ಇನ್ನೂವರೆಗೆ ನಲವತ್ತು ವಯಸ್ಸು ದಾಟದ ಅತ್ತಿಗೆ, ನಾದಿನಿ, ಓರಗಿತ್ತಿ, ಭಾವ, ಭಾವಮೈದ, ಅಣ್ಣ ತಮ್ಮಂದಿರಿಗೆ ಪ್ರಾಂಬ್ಲಂ ಇಲ್ಲ. ಅವರೆಲ್ಲ ಚೆನ್ನಾಗಿರಲಿ. ಇಂಥವರಿಗೆ ಯಾವುದೋ ಒಂದು ಊರಿಗೆ ವರ್ಗವಾಗಿದೆ ಎಂದಿಟ್ಟುಕೊಳ್ಳಿ. ಸಾಮಾನು ಸರಂಜಾಮು ರವಾನಿಸಲು ಅವರು ಪ್ಯಾಕರ್ಸ್ ಅಂಡ್ ಮೂವರ್ಸ್ ಗೆ ಫೋನಾಯಿಸಿ ಆಗಿದೆ ಎಂದಿಟ್ಟುಕೊಳ್ಳಿ. ಆದರೆ, ಮೂಲೆಯಲ್ಲಿ ಕೆಮ್ಮುತ್ತಾ ಕುಳಿತಿರುವ ತಾತ, ಲಲಿತಾ ಸಹಸ್ರನಾಮದ ಪುಸ್ತಕ ಪಠಿಸುತ್ತಾ ಅಂಬೆಗಾಲಿಡುತ್ತಿರುವ ಮಗುವಿನ ಚಲನವಲನದ ಮೇಲೆ ಸದಾ ಒಂದು ಕಣ್ಣಿಟ್ಟಿರುವ ಅಜ್ಜಿಯನ್ನು ಎಲ್ಲಿಗೆ ಪಾರ್ಸಲ್ ಮಾಡೋಣ?

ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಅಷ್ಟು ಸುಲಭವೇನಲ್ಲ. ಅವರವರ ಮನೆಮಟ್ಟಿಗೆ ತಾತ್ಕಾಲಿಕ ಪರಿಹಾರಗಳನ್ನು ಅವರವರೇ ಕಂಡುಕೊಂಡರೂ ಸಹ ಇದ್ದುದರಲ್ಲೇ ಶಾಶ್ವತ ಎನಿಸುವಂತಹ ತಾಣಗಳು ಇಲ್ಲಿ ಹೆಚ್ಚಾಗಿ ಕಾಣಿಸುತ್ತಿಲ್ಲ. ಅಲ್ಲೊಂದು ಇಲ್ಲೊಂದು ವೃದ್ಧಾಶ್ರಮಗಳು ನಮ್ಮ ಕಣ್ಣಿಗೆ ಬೀಳಬಹುದು. ಆದರೆ "ಅಪ್ಪ ಅಮ್ಮನನ್ನು ಈ ವಯಸ್ಸಿನಲ್ಲಿ ವೃದ್ಧಾಶ್ರಮಕ್ಕೆ ತಳ್ಳಿದರು" ಎಂಬ ಸರೀಕರ ಅಪವಾದಕ್ಕೆ ಹೆದರುವ ಮಂದಿಯಿಂದಾಗಿ ಕನ್ನಡ ನಾಡಿನ ಎಷ್ಟೋ ವೃದ್ಧಾಶ್ರಮಗಳು ಬಳಕೆ ಆಗುತ್ತಿಲ್ಲ. ಹಾಗಂತ ಹಿರಿಯರು ಮನೆಯಲ್ಲೂ ನೆಮ್ಮದಿಯಿಂದ ಇದ್ದಾರೆಂದು ಭಾವಿಸುವಂತಿಲ್ಲ. ಹಾಗೇನೇ, ಬಳಕೆ ಆಗುತ್ತಿರುವ ಆಶ್ರಮಗಳನ್ನು ಪೋಷಿಸುವವರಿಲ್ಲ.

ಇವೆಲ್ಲವುಗಳ ನಡುವೆ, ಅದರಲ್ಲೂ ಕಣ್ಣುಕೋರೈಸುವ 2009ರ ದಸರಾ ಮಹೋತ್ಸವದ ನಡುವೆ ನನ್ನ ಗಮನವನ್ನು ಸೆಳೆಯುತ್ತಿರುವ ಮೈಸೂರಿನ ವೃದ್ಧಾಶ್ರಮದ ಹೆಸರು "ಶ್ರೀ ಪೇಜಾವರ ಶ್ರೀಧಾಮ". There is more to Mysore than Dasara Festival. ಮಾನವೀಯತೆ ಎಲ್ಲೆಲ್ಲಿ ಗಮನವನ್ನು ಸೆಳೆಯುತ್ತದೆಯೋ, ಅಲ್ಲಿ ಹೃದಯ ಮಿಡಿಯುವ ಶ್ರೀ ಪೇಜಾವರ ಸ್ವಾಮಿಗಳ ಪರಿಶ್ರಮದ ಫಲವೇ ಈ ಆಶ್ರಮ. ಅಗತ್ಯವಿರುವವರಿಗೆ, ಯೋಗ್ಯ ಫಲಾನುಭವಿಗಳ ಪ್ರಯೋಜನಕ್ಕಾಗಿ ತೆರೆದುಕೊಂಡಿರುವ ಶ್ರೀಧಾಮ ವೃದ್ಧಾಶ್ರಮದ ಓದು ಮತ್ತು ಬಳಕೆಗೆ ನಿಮಗೆ ಆಹ್ವಾನ.

ವೃದ್ಧಾಶ್ರಮವೆಂದರೆ ಮುದುಕರು ವಾಸಿಸುವ ಕೊಂಪೆಯಾಗಬಾರದು, ಅಲ್ಲಿ ವಾಸಿಸುವ ಹಿರಿಯನಾಗರಿಕರ ಸಾಂಸ್ಕೃತಿಕ ಮತ್ತು ಕೌಟುಂಬಿಕ ಮನೋಭೀಷ್ಟೆಗಳಿಗೆ ಕುಂದು ಬರಬಾರದು ಎಂಬುದು ಪೇಜಾವರರ ಮೊದಲ ಸಂಕಲ್ಪ. ಈ ಉದ್ದೇಶದಿಂದ ಜನ್ಮತಾಳಿದ ಆಶ್ರಮ ಮೈಸೂರಿನ ಜೆಪಿ ನಗರದಲ್ಲಿದೆ. ಶ್ರೀರಾಮವಿಠ್ಠಲ ಟ್ರಸ್ಟ್ ಮತ್ತು ಶ್ರೀಪೇಜಾವರರ ಕೃಪಾಪೋಷಿತ ಸಂಸ್ಥೆಯನ್ನು ಸಮರ್ಥ ಆಡಳಿತಗಾರರ ತಂಡ ಮುನ್ನಡೆಸುತ್ತಿದೆ.

ಇಲ್ಲಿ ವೃದ್ಧರಿಗೆ ಅಗತ್ಯವಾಗುವ ಮೂಲಭೂತ ಸೌಕರ್ಯಗಳು ಇವೆ. ತಮ್ಮ ಖರ್ಚುವೆಚ್ಚಗಳನ್ನು ತಾವೇ ನಿಭಾಯಿಸಿಕೊಳ್ಳುವ ವೃದ್ಧರಿಗೆ ಒಂದು ವಿಭಾಗ ಇದೆ. ಆದರೆ, ನನಗೆ ಯಾರೂ ಗತಿಯಿಲ್ಲ ದೇವರೇ ಗತಿ ಎನ್ನುವ ಕಡುಬಡವರಿಗೂ ಒಂದು ವಿಭಾಗವಿದೆ. ಆಶ್ರಮಕ್ಕೆ ಸೇರಲು ಅಥವಾ ಸೇರಿಸಲು ಬಯಸುವವರು ಆಶ್ರಮದ ಉಸ್ತುವಾರಿ ನೋಡಿಕೊಳ್ಳುವ ಎಚ್.ಎಂ. ಗುರುನಾಥ್ ಅವರನ್ನು ಸಂಪರ್ಕಿಸಬಹುದು. ಅವರ ಇಮೇಲ್ ವಿಳಾಸ hmgurunath@gmail.com. ಫೋನ್ ನಂ 97412 08808.

ಆಶ್ರಮಕ್ಕೆ ಸೇರುವುದಿಲ್ಲ, ನಮ್ಮ ಹಿರಿಯರನ್ನು ಸೇರಿಸುವ ಅವಶ್ಯಕತೆಯಿಲ್ಲ. ಆದರೆ ಇಂಥ ಉದಾತ್ತ ಧ್ಯೇಯಕ್ಕಾಗಿ ತನ್ನನ್ನು ಮುಡಿಪಾಗಿಟ್ಟಿರುವ ಆಶ್ರಮಕ್ಕೆ ಬೆಂಬಲ ನೀಡುತ್ತೇವೆ ಎನ್ನುವವರೂ ಗುರುನಾಥ್ ಅವರನ್ನು ಸಂಪರ್ಕಿಸಬಹುದು. ದೇಣಿಗೆ ಕೊಡುವುದಾದರೆ ಆದಾಯ ತೆರಿಗೆ ಸೆಕ್ಷನ್ 88gg ಅನ್ವಯ ವಿನಾಯಿತಿ ಸಿಗುತ್ತದೆ. ದೇಣಿಗೆಗಳನ್ನು Sri Pejawara Sridhama ಹೆಸರಿಗೆ ಸಲ್ಲುವಂತೆ ಬರೆಯಬೇಕು. ಶ್ರೀಧಾಮದ ವಿಳಾಸ ಗುರುತುಹಾಕಿಕೊಳ್ಳಿ.

Pejawara Sridhama, sy.no. 106/1, Nachanahally, kuppalur III stage, J.P.nagar, E block, MYSORE - 500 008.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more