ಗ್ಲೋಬಲ್ ಕನ್ನಡ ಕುಲಬಾಂಧವರಿಗೆ ಯುನಿಕೋಡ್ ನಮಸ್ಕಾರ

Posted By:
Subscribe to Oneindia Kannada


ಏಕರೂಪ ನಾಗರಿಕ ಸಂಹಿತೆ ಮುಸ್ಲಿಂ ಬಾಂಧವರಿಗೂ ಅನ್ವಯವಾಗಬೇಕು ಎಂಬ ವಾದದಂತೆ ಕನ್ನಡ ಫಾಂಟುಗಳಿಗೂ ಒಂದು ಏಕರೂಪತೆ ಇರಬೇಕು ಹಾಗೂ ಅದು ‘ಜಾತ್ಯತೀತ’ವಾಗಿರಬೇಕು ಎಂದು ವಾದ ಹೂಡಿದರೆ ತಪ್ಪೇನು?

ಕವಿ, ಗದುಗಿನ ವೀರನಾರಾಯಣ; ನಾನು ಲಿಪಿಕಾರ ಮಾತ್ರ - ಎಂದ ಕುಮಾರವ್ಯಾಸ. ಹಾಗೆಂದು ಆ ಮಡಿಬ್ರಾಹ್ಮಣ ಹೇಳುವುದನ್ನು ಕೇಳುವಾಗ ಅವನ ಮಾತುಗಳಲ್ಲಿ ಸ್ಪಷ್ಟವಾದದ್ದು ಭಕ್ತಿ ಮತ್ತು ವಿನಮ್ರಭಾವ. ಕಾವ್ಯಮಾರ್ಗದಲ್ಲಿ ತೇಜಸ್ವಿಯಾಗಿ ನಡೆದರೂ ತನ್ನ ಕಾವ್ಯಕೃಷಿಯನ್ನು ಇಷ್ಟದೇವರಿಗೆ ಭಕ್ತಿಪುರಸ್ಸರವಾಗಿ ಅರ್ಪಿಸಿ ನಂತರ ಕನ್ನಡಬಲ್ಲವರಿಗೆ ಕಾವ್ಯಭಾಮಿನಿಯನ್ನು ವಿನೀತನಾಗಿ ಹಂಚಿ ಕಣ್ಮರೆಯಾದ ಆತ. ಚರ್ಚಾತೀತವಾಗಿಯೇ ಕಣ್ಮರೆಯಾದ ಕವಿಪುಂಗವರಲ್ಲಿ ಅವನೂ ಒಬ್ಬನಾಗಿ ಹೋದ.

ತನ್ನ ಕೃತಿಗಳ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದ ಆದಿಕವಿಪಂಪನಿಂದ ಲಿಪಿಕಾರ ವ್ಯಾಸನವರೆಗೆ ಬರೆಯಿಸಿಕೊಳ್ಳುತ್ತಾ ಬಂದ ಕನ್ನಡ ಲಿಪಿ ಪರಂಪರೆಗೆ ದೀರ್ಘ ಇತಿಹಾಸವಿದೆ.

ಅಲ್ಲಿಂದಿಲ್ಲಿಯವರೆವಿಗೆ ತಾಳೆಗರಿ‌ಓಲೆಗರಿಯಿಂದ ಆಕೃತಿ, ಆರತಿ, ಆಕಸ್ಮಿಕ, ಚಂದ್ರಿಕ, ತನುಜ, ಗಿರಿಜ, ಶೈಲಜ, ಪವನಜ ಎಂದು ಕರೆಯಿಸಿಕೊಳ್ಳುವ ಇವತ್ತಿನ ಲಿಪಿಗಳತನಕ ಕನ್ನಡ ಭಾಷೆ ಅನೇಕಾನೇಕ ಲಿಪಿವೇಷಗಳನ್ನು ತೊಟ್ಟುಕೊಂಡಿದೆ. ಕುಮಾರವ್ಯಾಸನಿಂದ ದೇವೇಗೌಡರ ಮಗ ಕುಮಾರಸ್ವಾಮಿತನಕ ಕನ್ನಡ ಅದೆಷ್ಟು ಲಿಪಿಗಳನ್ನು, ಲಿಪಿ ಮಾರ್ಪಾಟುಗಳನ್ನು ಕಂಡಿತೋ ವೀರನಾರಾಯಣನೇ ಬಲ್ಲ.

ಕನ್ನಡ ಅಕ್ಷರಗಳು ಮಧುರವಾಗಿ ನುಲಿಯುವ ಸ್ವರ ವ್ಯಂಜನಗಳನ್ನು ಆಲಿಸುವುದರಲ್ಲಿ ಮಗ್ನನಾಗುವ ಓದುಗನಿಗೆ ಲಿಪಿಯ ಬಗೆಗೆ ಅಷ್ಟು ಕಾಳಜಿ ಇರುವುದಿಲ್ಲ.ಭೈರಪ್ಪನವರ ಕಾದಂಬರಿಗಳನ್ನು ಸಣ್ಣಸಣ್ಣ ಅಕ್ಷರಗಳಲ್ಲಿ ಓದಿ‌ಓದಿ ಅಕಾಲ ಚಾಳೀಸು ಬಂತೆಂತಲೋ ಅಥವಾ ಇದೇನಿದು ದಪ್ಪದಪ್ಪ ಅಕ್ಷರ? ಕಾಡನೂರು ರಾಮಶೇಷನ ಮಕ್ಕಳ ಕಥೆ ಪುಸ್ತಕ ಮಾದರಿಯಿದೆ ಎಂತಲೋ ನಾವು ಹೇಳುವುದು ಬಿಟ್ಟರೆ ಲಿಪಿಯ ಮೇಲೆಯೇ ಕಣ್ಣಿದ್ದರೂ ದೃಷ್ಟಿ ಅದರತ್ತ ಹಾಯ್ದಿರುವುದಿಲ್ಲ.

ಕನ್ನಡ ಪ್ರಕಟಣಾ ಪ್ರಪಂಚದಲ್ಲಿ ಇವತ್ತು ಎಷ್ಟು ನಮೂನೆಯ ಲಿಪಿಗಳು ಚಾಲ್ತಿಯಲ್ಲಿವೆ ಅಂತ ಯಾರಾದರೂ ಬ್ಲಾಗಿಗಳು ಪಟ್ಟಿ ಮಾಡುವ ಉತ್ಸಾಹ ತೋರಿಸಬೇಕಿದೆ. ಉಚಿತವಾಗಿ ದಕ್ಕುವ ಲಿಪಿ, ದುಡ್ಡುಕೊಟ್ಟು ಕೊಳ್ಳುವ ಫಾಂಟು, ಒಪ್ಪಂದಮಾಡಿಕೊಂಡರೆ ಮಾತ್ರ ಬಳಸತಕ್ಕಂಥ ಫಾಂಟು, ಯಾರೂ ಉಪಯೋಗಿಸದ ಎಲ್ಲೋ ಕಳೆದು ಹೋದ ಲಿಪಿ.. ಓದುವುದಕ್ಕೆ ಕಷ್ಟವಾಗುವ ಬ್ರಹ್ಮಲಿಪಿ.. ಹೀಗೆ ನಮ್ಮಲ್ಲಿ ನಮಗೆ ಸಾಕಾಗಿ ನಿರ್ಯಾತ ಮಾಡುವಷ್ಟು ಫಾಂಟುಗಳಿವೆ. ಎಷ್ಟು ಫಾಂಟುಗಳಿವೆಯೋ ಅಷ್ಟು ಸಮಸ್ಯೆ ಇರುವುದು ಕನ್ನಡ ಭಾಷೆಯ ಹಿರಿಮೆಗಳಲ್ಲೊಂದು.

ಏಕರೂಪ ನಾಗರಿಕ ಸಂಹಿತೆ ಮುಂಸ್ಲಿಂ ಬಾಂಧವರಿಗೂ ಅನ್ವಯವಾಗಬೇಕು ಎಂಬ ವಾದದಂತೆ ಕನ್ನಡ ಫಾಂಟುಗಳಿಗೂ ಒಂದು ಏಕರೂಪತೆ ಇರಬೇಕು ಹಾಗೂ ಅದು ‘ಜಾತ್ಯತೀತ’ವಾಗಿರಬೇಕು ಎಂಬ ವಾದವಿದ್ದರೆ ತಪ್ಪಲ್ಲ. ಮಾಧ್ಯಮ ಪ್ರಪಂಚದಿಂದಾಚೆಗೆ ಶಿಕ್ಷಣ, ಉದ್ಯಮ ಪ್ರಪಂಚದಲ್ಲೂ ಕನ್ನಡ ಬಳಕೆ ಕಂಪ್ಯೂಟರ್‌ನಲ್ಲಿ ಹೆಚ್ಚಾಗುತ್ತಿರುವುದರಿಂದ ಎಲ್ಲರಿಗೂ ಸಲ್ಲುವ, ಎಲ್ಲೆಲ್ಲೂ ಲಭ್ಯವಾಗುವ ಮತ್ತು ದಕ್ಕುವ ಕನ್ನಡ ಲಿಪಿ ಕಂಪ್ಯೂಟರ್‌ನಲ್ಲಿ ಬಳಕೆಗೆ ಬರಬೇಕೆಂಬ ಆಲಾಪ ಆವಾಗಾವಾಗ ಕೇಳಿ ಬರತ್ತೆ. ಹಾಗೆ ಹಾಡುವವರು ಈಗ ತಂಬೂರಿ ಕೆಳಗಿಟ್ಟಿದ್ದಾರೆ. ಕೇಳಿಸಿಕೊಳ್ಳಬೇಕಾದವರಿಗೆ ಕಿವುಡು ಬಿದ್ದಿದೆ. ಹಾಗಾಗಿ ಕನ್ನಡ ಲಿಪಿ ಅವರವರ ಭಾವಕ್ಕೆ, ಅವರಿವರ ಭಕುತಿಗೆ, ತಾಳ್ಮೆಗೆ, ಅವರವರ ಕೌಶಲ್ಯಕ್ಕೆ ತಕ್ಕಂತಾಗಿದೆ ಎನ್ನುವಂತಾಗಿದೆ, ಇವತ್ತು.

ನನ್ನ ವಿಷ್ಯ ಹೇಳುವುದಾದರೆ ಸಣ್ಣಪುಟ್ಟ ಪತ್ರಿಕೆಗಳಲ್ಲಿ ನಾನು ನೌಕರಿ ಮಾಡುವಾಗ ಮೊಳೆ ಜೋಡಿಸುವ ಪದ್ದತಿ ಇತ್ತು. ಆ ಮೊಳೆಗಳಿಗೂ ಏನೋ ಒಂದು ಹೆಸರಿರುತ್ತಿತ್ತು. ಸಂಯುಕ್ತಕರ್ನಾಟಕದಲ್ಲೂ ಮೊಳೆಕಾಲ ಇರುವಾಗಲೇ ಇದ್ದೆನು ನಾನು. ಆನಂತರ ಕನ್ನಡಪ್ರಭದಲ್ಲಿ ಲೈನೋ ಟೈಪು ಮಾನೋ ಟೈಪು ಅಂತ ಇರ್‍ತಿತ್ತು. ಪುಟಗಳು ಪ್ರಿಂಟ್‌ಆದನಂತರ ಪೇಜುಗಳನ್ನು ಪೈ(ಪುಡಿಪುಡಿ) ಮಾಡಿ ಮತ್ತೆ ಫರ್‌ನೆಸ್‌ಗೆ ಹಾಕಿ ರಿಸೈಕಲ್ ಮಾಡುತ್ತಿದ್ದರು ಕಂಪೋಸಿಂಗ್ ಇಲಾಖೆಯವರು.

ಕಾಲಕ್ರಮೇಣ ದಿನಪತ್ರಿಕೆಗಳಲ್ಲಿ ಕಂಪ್ಯೂಟರ್ ಕಾಲಿಟ್ಟ ಮೇಲೆ ಒಂದೊಂದು ಪತ್ರಿಕೆಯವರು ಅವರಿಗೆ ಇಷ್ಟವಾದ ಫಾಂಟುಗಳನ್ನು ಆರಿಸಿಕೊಂಡರು. ನಾಳೆಯಿಂದ ಪತ್ರಿಕೆ ಓದುವಾಗ ಗಮನಿಸಿ.. ಒಂದೊಂದು ಪೇಪರ್‌ನ ಫಾಂಟ್ ಫೇಸ್ ಒಂದೊಂಥರಾ, ಏನೋ ಒಂಥರಾ ಇರತ್ತೆ.

ಈ ಮಧ್ಯೆ ಕರ್ನಾಟಕ ಏಕೀಕರಣವಾದಂತೆ ಕನ್ನಡ ಲಿಪಿಗಳ ಏಕೀಕರಣವೂ ಆಗಬೇಕು ಅಂತ ಯಾರೋ ಹೇಳಿದರು. ಕರ್ನಾಟಕ ಸರಕಾರದವರು ಅಹುದಹುದು ಎಂದರು. ಹೌದುಹೌದು ಎಂದು ತಲೆ ಅಲ್ಲಾಡಿಸಿದವರು ಕನ್ನಡದಲ್ಲಿ ಬರೆಯುವುದನ್ನು ನಿಲ್ಲಿಸಿ ಎಷ್ಟೋ ವರ್ಷಗಳಾಗಿವೆ.

ಯಾವ ಲಿಪಿ ಚೆನ್ನಾಗಿದೆ ? ಸರಕಾರ ಯಾವ ಲಿಪಿಯನ್ನು ಅಧಿಕೃತವಾಗಿ ಅಂಗೀಕರಿಸಬೇಕು? ಚರ್ಚೆಗಳು ನಡೆದುಹೋದವು. ಗಣಕಕ್ಕಾಗಿಯೇ ಹುಟ್ಟಿಕೊಂಡ ಗಣಕ ಪರಿಷತ್ ಎನ್ನುವ ಸಂಸ್ಥೆ ಕೆಲವು ಪರಿಹಾರಗಳನ್ನು ಸೂಚಿಸಿತು. ಶ್ರೀನಾಥ್‌ ಶಾಸ್ತ್ರಿಗಳ ನೇತೃತ್ವದಲ್ಲಿ ಸಾಕಷ್ಟು ಅಧ್ಯಯನ ನಡೆದು ಲಿಪಿ ಸಂಸ್ಕಾರ ಉಪಯೋಗಗಳ ಬಗ್ಗೆ ಪರಿಷತ್ ಉಪಯುಕ್ತ ಕೆಲಸ ಮಾಡಿತು. ಆದರೆ?

ಲಿಪಿ ವಿಷಯದಲ್ಲೂ ರಾಜಕೀಯ, ಜಾತಿ, ಸ್ವಪ್ರತಿಷ್ಠೆ ರಾರಾಜಿಸಿತು. ಒಳ್ಳೆ ಸಾಹಿತ್ಯ ಬರೆದ ಪೂರ್ಣಚಂದ್ರ ತೇಜಸ್ವಿ ಆದಿಯಾಗಿ ಕನ್ನಡದಲ್ಲಿ ಬರೆದದ್ದಕ್ಕೆ ಯಾವ ದಾಖಲೆಯೂ ಇಲ್ಲದ ಲಾಸ್‌ಏಂಜಲಿಸ್‌ನ ವಿ.ಎಂ.ಕುಮಾರಸ್ವಾಮಿಯವರೆಗೆ ಎಲ್ಲರೂ ತಮ್ಮ ತಮ್ಮ ಮೂಗಿನ ನೇರಕ್ಕೆ ಮಾತಾಡಿದರೆ ವಿನಾ ಸರ್ವಸಮ್ಮತವಾದ ಫಾಂಟು ಬಳಕೆ ಬಗ್ಗೆ ಒಮ್ಮತವೇ ಬರಲಿಲ್ಲ.

ಕಂಪ್ಯೂಟರ್‌ನಲ್ಲಿ ಕನ್ನಡ ಬಳಸುವವರಿಗೆ ಚೆನ್ನಾಗಿ ಗೊತ್ತಿರುವ ಲಿಪಿ ಎಂದರೆ ಇವತ್ತು ಬರಹ. ಸಂಘ ಸಂಸ್ಥೆಗಳು, ವಿಧಾನಸೌಧಗಳು ಏನಾದರೂ ಹೇಳಿಕೊಳ್ಳಲಿ . ಅನಧಿಕೃತವಾಗಿ ಕಂಪ್ಯೂಟರ್ ಜಗತ್ತಿನಲ್ಲಿ ಇವತ್ತಿನದಿನ ಕನ್ನಡ ಭಾಷೆಯನ್ನು ಆಳುತ್ತಿರುವ ಲಿಪಿ ಎಂದರೆ ಅದು ಬರಹ. ಬರಹ ಮಾತ್ರ.

ನಿಮ್ಮ ದಟ್ಸ್‌ಕನ್ನಡ ಡಾಟ್‌ಕಾಂ ಫಾಂಟುಗಳ ಅನೇಕಾರು ಪ್ರಯೋಗ ಮಾಡಿದೆ, ಕಿರಿಕಿರಿಗಳನ್ನು ಅನುಭವಿಸಿದೆ. ಇಸವಿ 2000ದಿಂದ ನಾವು ಆ ಕಾಲಕ್ಕೆ ಇಂಟರ್‌ನೆಟ್ಟಿಗೆ ತೊಡಿಸಲು ಯೋಗ್ಯವಾಗಿದ್ದ ಟ್ರೂಟೈಪ್ ಶ್ರೀಲಿಪಿ ಫಾಂಟು ಬಳಸುತ್ತಾ ಬಂದಿದ್ದೇವೆ. ಆದರೆ, ನಮಗೆ ಬರೆಯುವವರು ತಮಲ್ಲಿ ಲಭ್ಯವಿರುವ ಲಿಪಿ ಉಪಯೋಗಿಸಿ ಮಾಹಿತಿಗಳನ್ನು ಕಳಿಸುತ್ತಾರೆ. ಅವರ ಫಾಂಟು ನಾವು, ನಮ್ಮ ಫಾಂಟ್ ಅವರು ಬಳಸುವುದಿಲ್ಲ. ಬ್ರೌಸರ್ ಕಂಪ್ಯಾಟಿಬಿಲಿಟಿ, ಆಪರೇಟಿಂಗ್ ಸಿಸ್ಟಮ್ ಕಂಪ್ಯಾಟಿಬಿಲಿಟಿ ಒಬ್ಬೊಬ್ಬರದು ಒಂದೊಂದು ನಮೂನೆ. ಲಿಪಿ ವಿಷಯದಲ್ಲಿ ನಾನಾ ಗೊಂದಲಗಳು. ಒತ್ತು ,ಗುಡಿಸು, ದೀರ್ಘ, ಕಾಮ, ಫುಲ್‌ಸ್ಟಾಪು ಒಂದಕ್ಕೊಂದು ಮ್ಯಾಚ್ ಆಗುವುದಿಲ್ಲ.

ಈ ಸಮಸ್ಯೆಗೆ ನಮಗೆಲ್ಲ ಇವತ್ತು ಕಾಣುತ್ತಿರುವ ತಾತ್ಕಾಲಿಕ ಪರಿಹಾರವೆಂದರೆ ಯೂನಿಕೋಡ್. ಬರೆಯುವವರಿಗೆ ಮತ್ತು ಬರವಣಿಗೆಯನ್ನು ಇಂಟರ್‌ನೆಟ್ ಮೂಲಕ ಹಂಚುವವರಿಗೆ ತುಂಬ ಅನುಕೂಲ. ಸರಳವಾಗಿ ಹೇಳುವುದಾದರೆ ಪ್ರಪಂಚದ ಯಾವುದೇ ಭಾಷೆಯನ್ನು ಯೂನಿಕೋಡ್‌ಗೆ ಮಾರ್ಪಡಿಸಿದರೆ ಅದು ಇಂಗ್ಲಿಷ್‌ನಷ್ಟೇ ಸುಲಭವಾಗಿ ಆಯಾ ಭಾಷಿಕರನ್ನು ತಲಪುತ್ತದೆ. ಮತ್ತು ಗೂಗಲ್ ಯಾಹೂ, ಮುಂತಾದ ಸರ್ಚ್ ಎಂಜಿನ್‌ಗಳು ಕನ್ನಡ ಪದಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು ಆನ್‌ಲೈನ್‌ ಮಾಹಿತಿಯನ್ನು ತನ್ನ ಒಡಲಿಗೆ ಹೀರಿಕೊಳ್ಳುತ್ತದೆ. ಕನ್ನಡದ ಮೂಲಕ ಕನ್ನಡದ ಮಾಹಿತಿಯನ್ನು ಅಂತರ್‌ಜಾಲದಲ್ಲಿ ಹುಡುಕುವ ನಿಮ್ಮ ಪ್ರಯತ್ನ ನಿರೀಕ್ಷೆಗಿಂತ ಜಾಸ್ತಿ ಫಲ ಕೊಡುತ್ತದೆ.

ಇವೆಲ್ಲ ಶುಭಲಾಭಗಳನ್ನು ಗಮನದಲ್ಲಿಟ್ಟು ನಮ್ಮ ವೆಬ್‌ಸೈಟನ್ನು ಯೂನಿಕೋಡ್‌ಗೆ ಮಾರ್ಪಡಿಸಲಾಗಿದೆ. ಅಕ್ಷರಗಳು ಮುಂಚಿನಂತೆ ಮುದ್ದಾಗಿ ಕಂಡರೂ ಸರಾಗವಾಗಿ ಓದಲು ಸಾಧ್ಯವಾಗದಿರಬಹುದು ಅಥವ ಶ್ರೀಲಿಪಿಗೇ ಹೊಂದಿಕೊಂಡ ಕಣ್ಣುಗಳಿಗೆ ಕಷ್ಟವಾಗಬಹುದು. ಆದರೆ ಅಂತರ್‌ಜಾಲದ ಅನನ್ಯ ಅನುಕೂಲಗಳನ್ನು ಕನ್ನಡಕ್ಕಾಗಿ ದಕ್ಕಿಸಿಕೊಳ್ಳಲು ಬದಲಾದ ದಟ್ಸ್‌ಕನ್ನಡದ ಲಿಪಿರೂಪ ಇಂಬುಕೊಡುತ್ತದೆ ಎಂಬ ವಿಶ್ವಾಸ ನಮಗಿದೆ. ಹೇಗಿದ್ದರೂ ಈಗ ಇಂಟರ್‌ನೆಟ್ ಮಾರುಕಟ್ಟೆಯಲ್ಲಿ ವಿನ್‌ಡೋಸ್ ಎಕ್ಸ್‌ಪಿದ್ದೇ ಪಾರುಪತ್ಯ. ಈ ಸಿಸ್ಟಂನಲ್ಲಿ ಆಯಾ ಭಾಷೆಯ ಒಂದು ಯೂನಿಕೋಡ್ ಫಾಂಟು ಬೈ ಡಿಫಾಲ್ಟ್ಇದ್ದೇ ಇರುತ್ತದೆ. ಕನ್ನಡ ಓದುವುದು ಸಲೀಸಾಗುತ್ತದೆ.

ನಮ್ಮ ವೆಬ್‌ಸೈಟು ಆರಂಭವಾದದ್ದು ಏಪ್ರಿಲ್ 2000. ಅಲ್ಲಿಂದ ಇಲ್ಲಿಯವರೆಗಿನ ಲಕ್ಷಾಂತರ ಪುಟಗಳು ಯೂನಿಕೋಡ್‌ಗೆ ಹೊಂದಿಕೊಂಡಿವೆ. ಸರ್ಚ್ ಇಂಜಿನ್‌ನಲ್ಲಿ ನಿಮ್ಮ ಹುಡುಕಾಟ ಇನ್ನಷ್ಟು ಫಲಪ್ರದವಾಗಲಿ ಎನ್ನುವ ಉದ್ದೇಶದಿಂದ ದೇಸೀ ಭಾಷೆಯ ಗುರೂಜಿ ಸರ್ಚ್‌ಇಂಜಿನ್‌ನೊಂದಿಗೆ ದಟ್ಸ್‌ಕನ್ನಡ ಒಪ್ಪಂದ ಮಾಡಿಕೊಂಡಿದೆ. ಮಾಹಿತಿಯ ಹುಡುಕಾಟ ಅಷ್ಟರಮಟ್ಟಿಗೆ ಸುಲಭಸಾಧ್ಯ ಎನಿಸಿಕೊಳ್ಳುತ್ತದೆ.

ಓದುಗರ ಅಭಿರುಚಿಗೆ ತಕ್ಕಂತೆ ನಾವೂ ಬದಲಾಗಿದ್ದೇವೆ, ನಾವು ಇಟ್ಟ ಹೆಜ್ಜೆಗಳಿಗೆ ತಕ್ಕಂತೆ ಓದುಗರೂ ಬದಲಾಗುತ್ತಾರೆ ಎಂಬ ಆಶಯ ನಮ್ಮದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ