ಓ ಗೆಳತಿ, ಒಲುಮೆಯ ಹೂವೆ ನೀಹೋದೆ ಎಲ್ಲಿಗೆ?

Subscribe to Oneindia Kannada
SK Shama Sundara
ಕಾಡುಬೆಳದಿಂಗಳ ರಾತ್ರಿಯಲ್ಲಿ ತಂಗಾಳಿಗೆ ಮೈಯೊಡ್ಡಿ ವಿಹಾರಕ್ಕೆಂದು ಹೊರಟವರು ನಾವು. ಇಂದು ಹಾಲುಜೇನಿನ ಚಕ್ರತೀರ್ಥದ ಸುಳಿಗೆ ಸಿಲುಕಿಕೊಂಡಿದ್ದೇವೆ. ಗತ್ಯಂತರವೇ ಇಲ್ಲ. ಅಲ್ಲೇ ನಿಂತು ನಕ್ಷತ್ರಗಳತ್ತ ಕೈಚಾಚೋಣ. ಕೆಲವಾದರೂ ನಮ್ಮದಾಗಬಹುದು. ಯೋಗ ಇದ್ದರೆ ಎಲ್ಲವೂ..

* ಎಸ್.ಕೆ. ಶಾಮಸುಂದರ

'ಓ ಬಸಂತಿ ಪವನ ಪಾಗಲ್‌ ನಾಜಾರೆ ನಾಜಾ.. ರೂಕೋ ಕೋಯೀ .. ಓ ಬಸಂತಿ"

ನಮ್ಮದೊಂದು ದಿವ್ಯ ಪ್ರೇಮ ಆಗಿತ್ತು ಅಲ್ವಾ? ಮಧುಮತಿ.

ಹೌದು. ಇವತ್ತಿನ ದಿವಸಗಳಲ್ಲಿ 'ದಿವ್ಯ" ಎಂಬ ಪದವೇ ನಿನಗೆ ಅಸಹ್ಯ ತರುತ್ತದೆ. ಇರಲಿ. ನಿನ್ನ ಮನೋವ್ಯಾಪಾರ, ಮಾನಸಿಕ ಸ್ಥಿತಿ ಎಲ್ಲರಿಗಿಂತ ನನಗೆ ಚೆನ್ನಾಗಿ ಅರ್ಥವಾಗಿದೆ. ಮನನವಾಗಿದೆ. ಮರೆಯುವೆನೆಂದರೂ ಮರೆಯಲಾಗದ ಒಂದು ಚಿತ್ರವನ್ನು ಮತ್ತೆ ಬರೆಯುತ್ತೇನೆ. ನೋಡುವಂಥವಳಾಗು.

ಪ್ರೇಮದ, ದುಗುಡದ, ಯೌವನದ, ಬಯಕೆಯ, ಭಾಗ್ಯೋದಯಕ್ಕೆ ಹಪಹಪಿಸುವ ಅತಂತ್ರದ ದಿನಗಳವು. ನಾನಾಡುವ ದಿವ್ಯ ಎನ್ನುವ ಶಬ್ದ ಕೇಳಿದಾಗಲೆಲ್ಲ ನೀನು ಸಂಭ್ರಮದಿಂದ ನಗುತ್ತಿದ್ದೆ. ನನ್ನ ಹೆಸರೇ ಒಂದು ಅಮೃತದ ಕಡಲೆಂದು ಭಾವಿಸಿ ಸಂಭ್ರಮಿಸುತ್ತಿದ್ದೆ. ಇರಲಿ. ನಮ್ಮ ಪ್ರೇಮಕ್ಕೆ ದಶಕಗಳ ಮೊಹರು ಬಿದ್ದ ನಂತರವೂ, ಈಗಲೂ, ನಮ್ಮದು 'ದಿವ್ಯ ಪ್ರೇಮ" ಎಂದೇ ನನಗನ್ನಿಸುತ್ತಿದೆ. ಅದೊಂದು ಪದವನ್ನು ಮಾತ್ರ ನಾನು ಬಿಟ್ಟುಕೊಡಲಾರೆ.

ನಾನೂ ಮನುಷ್ಯನೇ. ಸಾವಿರ ತಪ್ಪುಗಳ ಸರದಾರನೇ, ಹೌದು. ಅದೇ ನನ್ನ ಆಸ್ತಿ ಮತ್ತು ಅಸ್ತಿತ್ವ. ಅವೆಲ್ಲವನ್ನೂ ಒಂದೇ ಏಟಿಗೆ ಅಳಿಸುವ ಯಾವೊಂದು ತಪ್ಪನ್ನೂ ನೀನು ಮಾಡಬಾರದೆಂದು ಬಿನ್ನಹ. ಆದರೆ, ಶುದ್ಧ ಪ್ರೇಮದ ವಿಷಯಕ್ಕೆ ಮಾತು ಎಳಸಿದರೆ ನಾನು ನಿಷ್ಕಲ್ಮಷ, ನಿನ್ನಾಣೆ. ಕಣ್ಣೆದುರಿಗಿನ ಕಿಟಕಿಯ ಗಾಜಿನಾಚೆಯ ದಿಗಂತದಲ್ಲಿ ಮುಳುಗುತ್ತಿರುವ ಸೂರ್ಯನನ್ನು ಆಗಾಗ ನೋಡುತ್ತಾ, ಅಕ್ಷರಗಳ ಮೂಲಕ ನನ್ನ ಪ್ರೇಮವ ನಿವೇದಿಸಿಕೊಳ್ಳುತ್ತಿರುವ ಈ ಗುರುವಾರದ ಸಂಜೆಯಲ್ಲೂ ನಮ್ಮದು ದಿವ್ಯ ಪ್ರೇಮ. ಇದೇ ಭರತವಾಕ್ಯ.

ಯಾಕೋ ಗೊತ್ತಿಲ್ಲ: ರಾಧೆ ನೆನಪಾಗುತ್ತಿದ್ದಾಳೆ. ಮನೆಯಿದ್ದು, ಗಂಡನಿದ್ದು, ಕೃಷ್ಣನ ಮೋಹನ ಮುರಳಿಗೆ ಓಗೊಟ್ಟವಳು ರಾಧೆ. ಹದಿನಾರು ಸಾವಿರ ಪ್ರೇಯಸಿಯರಿದ್ದೂ ರಾಧೆಯ ಪ್ರೇಮಕ್ಕೆ ಒಲಿದವನು ಕೃಷ್ಣ. ಅವರ ಪ್ರೇಮವನ್ನು ಲೋಕ ಸಂಶಯದ ಕಣ್ಣಿನಿಂದ ಕಾಣಲಿಲ್ಲ; ಬದಲಾಗಿ ಅದನ್ನು 'ದೈವಿಕ ಪ್ರೇಮ"ವೆಂದು ಗೌರವಿಸಿತು. ರಾಧಾಮಾಧವರದು ದಿವ್ಯ ಪ್ರೇಮ ಆಗುವುದಾದರೆ ನಮ್ಮದು? ಅಗ್ನಿದಿವ್ಯನಾ?

ನನಗೆ ಗೊತ್ತು. ಪ್ರೇಮ ತರ್ಕದ ಮೇಲೆ ನಿಲ್ಲುವುದಿಲ್ಲ. ಷರತ್ತುಗಳಿಲ್ಲದ ನಮ್ಮ ಪ್ರೇಮದ ಆಳ, ವಿಸ್ತಾರ ನಮ್ಮಿಬ್ಬರಿಗಷ್ಟೇ ಗೊತ್ತು. ಅದನ್ನು ಅರ್ಥ ಮಾಡಿಕೊಳ್ಳಲೂ ಸಾಧ್ಯವಾಗದಂತೆ, ಸರಕಿನಂತೆ ಬೆಲೆ ಕಟ್ಟಲೂ ಆಗದಂತೆ ಗುಪ್ತಗಾಮಿನಿಯಾಗಿ ನಮ್ಮ ಪ್ರೀತಿ ಹರಿದದ್ದು ದಾಖಲಿಸಲಾಗದ ಅಧ್ಯಾಯ. ನಿನಗದು ನೆನಪುಂಟಾ? ಯಾರೂ ಊಹಿಸದ, ಅನುಭವಿಸದ ಸಾಧ್ಯವಾಗದ ಪ್ರೇಮ ಸಮುದ್ರದಲ್ಲಿ ಜೀವರಕ್ಷಕ ಸಾಧನಗಳನ್ನು ಕಟ್ಟಿಕೊಳ್ಳದೆ ಈಜಿದವರು ನಾವಿಬ್ಬರು, ಕಣ್ಣು ಮುಚ್ಚಿ ಒಮ್ಮೆ ಹಿಂತಿರುಗಿ ನೋಡು.

'ಉತ್ಸವ್‌" ಚಿತ್ರದ ' ದಿಲ್‌ ಕ್ಯು ಮೆಹಕಾರೆ, ಮೆಹಕಾ..ಆಧಿರಾತ್‌ಕೊ"

ಗುನುಗುನಿಸುತ್ತಿದ್ದವಳು ನೀನೆ ತಾನೆ? ಮರೆತು ಹೋಗುವಂತಹ, ಅಳಿಸಿ ಹೋಗುವಂತಹ ಪ್ರೇಮ ನಮ್ಮ ಮಧ್ಯೆ ಎಂದೂ ಇರಲಿಲ್ಲ. (ಅಳಿಸಿಹೋಗುವುದಾದರೆ ಅದು ಪ್ರೇಮ ಹೇಗಾಗುತ್ತದೆಯೆ? ಅದನ್ನು ಪ್ರೀತಿ ಅಂತ ಕರೇತಾರೇನೇ ? ) ಬದುಕು ಸಿನಿಮಾದಂತೆ ಎರಡೂವರೆ ಮೂರು ಗಂಟೆಗೆ ಮುಗಿಯುವುದಿಲ್ಲ. ನಡುವೆ ಇಂಟರ್ವೆಲ್‌ ಕೂಡಾ ಇಲ್ಲ. ಅದು ನಾಟಕವೂ ಅಲ್ಲ. ದಣಿವಾರಿಸಿಕೊಳ್ಳಲು ಬದುಕಲ್ಲಿ ಗ್ರೀನ್‌ರೂಮ್‌ ಅಂತೂ ಇಲ್ಲವೇ ಇಲ್ಲ. ಬೇಸರದಿಂದ ಮಗುಚಿಡಲು ಬದುಕು ವಾರಪತ್ರಿಕೆ ಅಲ್ಲ. ಆದರೆ ಜೀವನ ಇವೆಲ್ಲವೂ ಹೌದು. ಈ ವಿರೋಧಾಭಾಸವೇ ಬದುಕಿನ ಒಳಗುಟ್ಟು. ಇಲ್ಲಿ ಪ್ರತಿ ದಿನವೂ, ಪ್ರತಿ ಕ್ಷಣವೂ ನಾನು ನೀನಾಗಿ ಬದುಕಬೇಕು, ನೀನು ನಾನಾಗಿ ಬದುಕಲೇಬೇಕು. ಬಿಟ್ಟೆನೆಂದರೂ ಬಿಡದ ನಂಟಲ್ಲವೇ ನಮ್ಮದು.

ನಿನ್ನ ತೋಳುಗಳ ಆಸರೆಯಲ್ಲಿ ಎಷ್ಟೊಂದು ಭರವಸೆ...

ನಿಲುಕದ್ದಕ್ಕೆ ಕೈಚಾಚದೆ, ಬಂದದ್ದನ್ನು ಸ್ವೀಕರಿಸುತ್ತ, ಕನಸುಗಳಲ್ಲಿ ಮುಂಗುರಳು ನೇವರಿಸುತ್ತಾ ಯುಗಳ ಗೀತೆ ಹಾಡಿಕೊಂಡವರು ನಾವು. ನಾವು ಬದುಕಿದ್ದು ಹಾಗೇನೆ ಅಲ್ವಾ? ಕೆರೆ ನೀರು, ಬಾವಿ ನೀರು, ಬೋರ್‌ವೆಲ್‌ ನೀರು.. ಈ ಬದುಕಿನಲ್ಲಿ ಎಷ್ಟೊಂದು ನೀರು ಹರಿಯಿತು ನೋಡು. ಆ ನೀರ ಹರಿವಿನಲ್ಲಿ ಇಬ್ಬರೂ ಒಂದೊಂದು ಕವಲಾಗಿ ಹರಿದು, ದಾರಿಗುಂಟ ಏನೆಲ್ಲವನ್ನು ಬದುಕಿಗೆ ಕೂಡಿಸಿಕೊಂಡು ನಡೆದೆವು. ಈ ಪಯಣದಲ್ಲಿ ನಾವು ಗಳಿಸಿದ್ದೇನು, ಕಳಕೊಂಡಿದ್ದೇನು? ಲೆಕ್ಕಕ್ಕೆ ಕೂತಾಗಲೂ ನಿನ್ನದೇ ನೆನಪು. ಅಂತರ್ಜಾಲದಿಂದ ಜಗತ್ತು ಅಂಗೈಯಲ್ಲಿ ಸಿಲುಕಿತು ಎಂದು ಬೀಗುವ ನಾವು, ಜಾಲದಲ್ಲಿ ಮುಖ್ಯವಾದದ್ದೇನೋ ನುಸುಳಿಹೋದದ್ದನ್ನು ಮರೆತಿದ್ದೇವೆ ಅನ್ನಿಸಿ, ಖಿನ್ನತೆಯಲ್ಲಿ ಮುಳುಗಿದ್ದೇನೆ. ಹಿಂದೆ ಅದೆಷ್ಟು ಬಾರಿ ಹೀಗೆ ಸೋತು ಕೂತಿದ್ದೆ. ಆಗೆಲ್ಲ ನಿನ್ನ ತೋಳುಗಳ ಭರವಸೆ ಇರುತ್ತಿತ್ತು. ಈಗ ಬೆರಳುಗಳಿಗೂ ಬರಬಂತೆ?

ಹಲವು ತರಹದ
ಮೈಮರೆಸುವಾಟವಿದು
ನಿಜವತೋರದಲ್ಲ
ಇದು ಬಾಳು ನೋಡು
ಅರಿತೆನೆಂದರೂ
ಅರಿತ ಧೀರನಿಲ್ಲ

ನಿನಗೊಂದು ಸತ್ಯ ಹೇಳಬೇಕು. ನಿನ್ನಾಣೆ, ಆ ಮಾತಿನಲ್ಲಿ ಪ್ರಶ್ನೆ ಅಡಗಿಲ್ಲ. (ನೀನೋ ಪ್ರಶ್ನೆ ಕೇಳಿದರೆ ಹಾವು ತುಳಿದಂತೆ ಬೆಚ್ಚಿಬೀಳುವ ಮಾನಿನಿ!) ನಿವೇದನೆ ಎಂದಾದರೂ ಭಾವಿಸಿಕೊ. ಸಂದರ್ಭ ಅಥವಾ ಪರಿಸ್ಥಿತಿಗಳನ್ನು ರೂಪಿಸಿಕೊಳ್ಳುವವರು ನಾವು. ಪಕ್ಕದಮನೆಯವರಲ್ಲ. ಅದು ಅನವರತ ನಡೆಯುವ ಪ್ರಕ್ರಿಯೆ. ಈ ರೂಪಾಂತರ ನಮ್ಮ ಇಷ್ಟದಂತೆಯೇ ದಷ್ಟಪುಷ್ಟವಾಗಿರಲಿ ಎಂದು ಆಶಿಸುತ್ತೇವೆ. ಮಾನವನ ಇತಿಮಿತಿಯೋ ಅಥವಾ ನಿಸರ್ಗದ ನಿಯಮಗಳೇ ಹಾಗಿರುತ್ತವೋ? ಒಂದು ಕಾಲಘಟ್ಟದಲ್ಲಿ ಪರಿಸ್ಥಿತಿಗಳು ನಮ್ಮನ್ನು ಮೀರಿ, ನಮ್ಮ ಮೇಲೆ ಸವಾರಿ ಮಾಡಲಾರಂಭಿಸುತ್ತವೆ. ಕೆಲವೊಮ್ಮೆ, ಈಗಿನ ಹಾಗೆ ಹಣ್ಣುಗಾಯಿ ನೀರುಗಾಯಿ ಮಾಡಿ ನಲುಗಿಸಿ, ನರಳಿಸಿ, ನಗುತ್ತವೆ. ನೀನೊಪ್ಪು ಬಿಡು, ನಮ್ಮ ನಡುವೆ ತಾನೇತಾನಾಗಿರುವ ಪ್ರಶ್ನೆ ಎಂದರೆ ಅದೇ. ಈ ಪ್ರಶ್ನೆಯಲ್ಲಿ ನಮ್ಮ ಗತ, ವರ್ತಮಾನಗಳು ಇವೆಯಲ್ಲವೇ? ಭವಿಷ್ಯದ ಬಗ್ಗೆ ನಾನು ಮಾತನಾಡುವುದಿಲ್ಲ. ಪ್ರೇಮಕ್ಕೆ ನಾಳಿನ ಚಿಂತೆಯಿಲ್ಲ!

ತಪ್ಪಿದ್ದು ಬರಿಯ ಚುಕ್ಕಿಗಳ ಲೆಕ್ಕವಾ...

ನಿನಗೆ ಗೊತ್ತಿಲ್ಲ. ತನ್ನನ್ನು ಮರೆತು ಇನ್ನೊಬ್ಬರನ್ನು ಉತ್ತೇಜಿಸುವ, ನಗಿಸುವ ಶಾಮನನ್ನು ಮಾತ್ರ ನೀನು ನೋಡಿದವಳು. ನಿದ್ದೆ ಬಾರದ ರಾತ್ರಿಗಳಲ್ಲಿ ಚುಕ್ಕಿಗಳನ್ನು ಎಣಿಸುತ್ತ, ಲೆಕ್ಕ ತಪ್ಪುತ್ತಾ, ಅವುಗಳಲ್ಲಿ ನಿನ್ನನ್ನು ಕಾಣುತ್ತ ಬಳಲಿದ್ದೇನೆ. ತಪ್ಪಿದ್ದು ಬರಿಯ ಚುಕ್ಕಿಗಳ ಲೆಕ್ಕವಾ ಎಂದು ಮಂಡೆ ಬಿಸಿ ಮಾಡಿಕೊಂಡಿದ್ದೇನೆ. ಸುಳಿಗಾಳಿಯ ಸದ್ದನ್ನು ನಿನ್ನ ಹೃದಯದ ಬಡಿತವೆಂದು ತಿಳಿದು ಕಿವಿಗೊಟ್ಟು ಆಲಿಸಿದ್ದೇನೆ. ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿಯುವುದೆ ಜೀವನ? ಹೇಳಲಾಗದ ಮಾತುಗಳು, ಬರೆಯಲಾಗದ ಸಾಲುಗಳು, ವಿವರಿಸಲಾಗದ ತಳಮಳಗಳು ಎಷ್ಟಿವೆ? ಅವು ನಿನ್ನಲ್ಲೂ ಇವೆ, ಆದರೆ, ಹೇಳಲು ನಿನ್ನ ಸಮಯ ಮಾಗಬೇಕು. ಸುಮಕ್ಕೆ ಸೌರಭ ಬರುವ ವೇಳೆಯವರೆಗೂ ಕಾಯೋಣವಾ?

ಆಯ್ತು : ಪ್ರಪಂಚದ ಯಾವುದೋ ವಿರುದ್ಧ ಮೂಲೆಗಳಲ್ಲಿ ಕುಳಿತವರಂತೆ ನಾವಿಬ್ಬರೂ ಪರಿತಪಿಸುವ ಪರಿಸ್ಥಿತಿಗೆ ಯಾರನ್ನು ಹೊಣೆ ಮಾಡೋಣ ಹೇಳಮ್ಮ. ಇದಕ್ಕೆ ದೇವರೇ ತಕ್ಕ ವ್ಯಕ್ತಿ. ಕರೆದಾಗ ಕೈಗೆ ಸಿಕ್ಕುವ, ಅಪಾಯವಿಲ್ಲದ, ಗಾಸಿಪ್‌ ಮಾಡದ, ಎಲ್ಲ ಆರೋಪಗಳನ್ನು ಸಿಗ್ಗಿಲ್ಲದೇ ಹೊರುವ ಆ ಏಕೈಕ ವ್ಯಕ್ತಿಯನ್ನೇ ನಾವೂ ಹೊಣೆಗಾರನನ್ನಾಗಿ ಮಾಡೋಣ. ಸದ್ಯಕ್ಕೆ ಅದೊಂದೇ ದಾರಿ. ಅದೊಂದೇ ಪರಿಹಾರ.

ಸೋನಿಯರ್‌ ಬಟ್‌ ಸೋಫಾರ್‌ ಎಂಬಂಥ ಇವತ್ತಿನ ಸ್ಥಿತಿಗೆ ನಾನು ನಿನ್ನ ಮೇಲೆ, ನೀನು ನನ್ನ ಮೇಲೆ ದೂರುಗಳನ್ನು ಹೊರಿಸಬಹುದು. ಅದು ನನಗಿಂತ ನಿನಗೆ ಸುಲಭ. ಆದರೆ ಇಬ್ಬರಲ್ಲೂ ಸಾಸಿವೆ ಕಾಳಿನಷ್ಟು ಅಹಂ ಇತ್ತೆಂಬ ಸಂಗತಿಯನ್ನು ಒಪ್ಪಲೇಬೇಕು. ಅಂದು ಸೋತಿದ್ದರೆ, ಇಂದು ಗೆಲ್ಲುತ್ತಿದ್ದೆವು. ಇಂದು ಸೋತರೆ ನಾಳೆ ಗೆಲುವು ಖಂಡಿತ. ಗೆಲುವಿನಲ್ಲಿ ಸೋಲನ್ನು, ಸೋಲಿನಲ್ಲಿ ಗೆಲುವನ್ನು ಹುಡುಕುವ ಅಂತಃಕರಣ ನಮ್ಮಿಬ್ಬರಿಗೂ ಇದೆ. ಆದರೂ ಸಂದರ್ಭ ನಮ್ಮಿಬ್ಬರ ಪಾಲಿಗೆ ವಿಲನ್‌ ಆಗಿದೆ. ನಮ್ಮಿಬ್ಬರ ಮಧ್ಯೆ, ಎಂದೋ ಬಿದ್ದುಹೋಗಿದ್ದ ಆ ಜರ್ಮನ್‌ ಗೋಡೆ ಮತ್ತೆ ಎದ್ದು ನಿಂತಿದೆ. ಗೋಡೆ ನಿಜವಾಗಿಯೂ ಇದೆಯಾ? ಅಥವಾ ಅದು ನಮ್ಮ ಭ್ರಮೆಯಾ?

ನನ್ನ ಶರ್ಮಿಷ್ಠೆ ಎಂದಾದರೂ ಬರಲಿ...

ಏನ ಹೇಳಲಿ ನಿನ್ನ ಬಳಿ ಬಂದು. ಕಿತ್ತು ತಿನ್ನುವ ನನದೇ ನೋವುಗಳ ನಡುವೆಯೂ ಆಗಾಗ ಹೃದಯದ ಯಾವುದೋ ಮೂಲೆಯಲ್ಲಿ ಒಂದು ಸಣ್ಣ ಕಲರವ, ಸರಿಗಮದ ಸ್ವರಮಾಧುರ್ಯ. ಈ ಸ್ಥಿತಿಯನ್ನು ದಾಟಿ ಬರುವುದು ಕಷ್ಟ ಎಂಬುದು ಇಬ್ಬರಿಗೂ ಗೊತ್ತು. ನೀನೇ ಹೇಳುವ ಹಾಗೆ ಟೈಂ ಬೇಕು. ಕಾಲಮಿಂಚಿಹೋಗುವ ಮುನ್ನ ನಿನದೇ ಆದ ಆ ಟೈಂ ಬರಲಿ. ಆ ಕಾಲವನ್ನು ಮೀರಿದಾಗ ಸಿಗುವ ಆನಂದವನ್ನು ವರ್ಣಿಸುವುದಾದರೂ ಹೇಗೆ? ಅದೊಂದು ಅತಿಶಯ. ಅನಿರ್ವಚನೀಯ. ಆ ದಿವ್ಯ ಕ್ಷಣಕ್ಕಾಗಿ ನಾನಂತೂ ಕಾಯುತ್ತಿದ್ದೇನೆ. ಖಾಂಡೇಕರರು ಹೇಳುವ ಹಾಗೆ, 'ನನ್ನ ಶರ್ಮಿಷ್ಠೆ ಎಂದಾದರೂ ಬರಲಿ, ಸ್ವಾಗತಿಸುತ್ತೇನೆ".

ನಮಗೇ ಅರಿವಿಲ್ಲ. ನಮ್ಮಿಬ್ಬರ ನಡುವೆ ಅಸಾಮಾನ್ಯ ಯೋಚನೆಗಳಿವೆ. ಸಾಮ್ಯಗಳಿವೆ. ಎಲ್ಲಿಂದಲೋ ಮತ್ತು ಹೇಗೋ ನಮ್ಮಿಬ್ಬರ ಹೃದಯಗಳು ನೆಟ್‌ವರ್ಕ್‌ ಬಿಜಿಯ ನಡುವೆಯೂ ಮಾತನಾಡುತ್ತವೆ. ಅದಕ್ಕೆ ಟೆಲಿಪತಿ ಎಂದು ಜಗತ್ತು ಕರೆದರೆ ನನ್ನ ಅಭ್ಯಂತರವಿಲ್ಲ. ಮೊಬೈಲ್‌, ಎಸ್‌ಎಂ ಎಸ್ಸು , ಚಾಟಿಂಗ್‌ನಂತಹ ಮಾಧ್ಯಮಗಳು ನಮ್ಮ ಒಲವಿಗೆ ಬೇಕಿಲ್ಲ. ನಮ್ಮ ಒಲವನ್ನು ಭರಿಸುವ ಶಕ್ತಿ ಆ ಬಡಪಾಯಿ ಸಾಧನಗಳಿಗೆ ಎಲ್ಲಿಂದ ಬರಬೇಕು?

ಮಧುಮತಿ ... ವಿಷಾದ, ಕ್ಷಮೆ, ಪ್ರೀತಿ, ಅಸಹನೆಗಳನ್ನಲ್ಲದೆ ದೈವಿಕವಾದ ನಂಬಿಕೆ ಮತ್ತು ಪೈಶಾಚಿಕ ಅಪನಂಬಿಕೆಗಳನ್ನು ಮೆಟ್ಟಿನಿಂತು ನಮ್ಮ ಆಲೋಚನಾ ಕ್ರಮವನ್ನು ಹೊಸದಾಗಿ ರೂಪಿಸಿಕೊಳ್ಳುವ ಸಂದರ್ಭ ನಮ್ಮೆದುರಿಗೆ ನಿಂತಿದೆ. ಹಣ ಅದರಪಾಡಿಗೆ ಬರುತ್ತದೆ, ಹೋಗುತ್ತದೆ. ಚಿಂತಿಸದಿರು. ಜಗಲಿಯ ಮೇಲೆ ಕುಳಿತು ಯೋಚಿಸು. Now or Never! Sooner or Later! ಇದನ್ನು ಅರ್ಥ ಮಾಡಿಕೊಳ್ಳಬೇಕಾದವರೂ ನಾವೇ. ಮೆಟ್ಟಿನಿಲ್ಲಬೇಕಾದವರೂ ನಾವೇ. ನೇಗಿಲ ನೊಗಕ್ಕೆ ನಾಳೆ ಹೆಗಲು ಕೊಡುವವರೂ ನಾವೇ.

ಬೇಕೋ ಬೇಡವೋ ಎಳೆಯಬೇಕು. ಛೆ ಛೆ . ಅದು ಖಿನ್ನ ಮನಸ್ಸಿನ ನಿಟ್ಟುಸಿರಾಯಿತು. ಸರಸ ಸಂತೋಷದಿಂದ ಎಳೆಯೋಣ. ಎಳೆಯಲೇಬೇಕಾದ ಜರೂರತ್ತು ಇರುವುದರಿಂದ ಉಳಿದ ದಿವಸಗಳನ್ನು ಸಹನೀಯವಾಗಿಸಿಕೊಳ್ಳಲು ಮೌನದಿಂದ ಶ್ರಮಿಸೋಣ. ಅದಕ್ಕೊಂದಿಷ್ಟು ಸಹನೆ ಬೇಕು. ತ್ಯಾಗವೂ ಬೇಕು. ಇದಕ್ಕೆಲ್ಲ ಕಾಲ ಕೂಡಿಬರಬೇಕು, ಬರುತ್ತದೆ. ವಿಶ್ವಾಸವಿದೆ. ತಾಳ್ಮೆಯೂ ಇದೆ. ಇವೆರಡು ಬಿಟ್ಟು ನನ್ನಲ್ಲಿ ಇನ್ನೇನಿದೆ, ಹೇಳೇ?

ಕಾವಾರಿದ ಮೇಲೆ ಉಳಿದರೆ ಅದು ಪ್ರೀತಿ!

ರೈಲ್ವೆ ಹಳಿಗಳಂತೆ ಎರಡು ಸಮಾನಂತರ ರೇಖೆಗಳು ಎಂದಿಗೂ ಸಂಧಿಸುವುದಿಲ್ಲ. ಆದರೆ ನಾನು ಅಕ್ಷಾಂಶ. ನೀನು ರೇಖಾಂಶ. ಭೂಮಿಯ ಯಾವುದೋ ಭಾಗದಲ್ಲಿ ಸಂಧಿಸಲೇಬೇಕು. ಅದು ಸೃಷ್ಟಿನಿಯಮ. ನಮ್ಮಿಬ್ಬರ ನಡುವಿನ ದಿವ್ಯಪ್ರೇಮ ಈಗ ಪಕ್ವವಾಗಿದೆ ಅನ್ನಿಸುತ್ತದೆ. ನಿಜವಾದ ಪ್ರೇಮ ಶುರುವಾಗುವುದೇ ಸಂಜೆ ವಯಸ್ಸಿನಲ್ಲಿ ಎಂದು ಪ್ರೇಮ ವ್ಯಾಕರಣ ಅರಿತವರು ಹೇಳುತ್ತಾರೆ. ನಿನಗೆ ವಯಸ್ಸಾಗಿಲ್ಲವಾ? ಕಾವಾರಿದ ಮೇಲೆ ಉಳಿದರೆ ಅದು ಪ್ರೀತಿ.

ದಿಗಂತದ ತುಂಬ ಕಂತುತ್ತಿರುವ ಸೂರ್ಯನ ಕೆಂಬಣ್ಣ ಚೆಲ್ಲಿದೆ. ನನ್ನೆದೆಯಲ್ಲೋ ಪ್ರೇಮದ ನೆನಪುಗಳ ಕಿಚ್ಚು. ಆ ಕಿಚ್ಚನ್ನೇ ಅಕ್ಷರಗಳಲ್ಲಿ ತುಂಬಿ ನಿನಗೆ ಸ್ಮರಣಿಕೆಯಾಗಿ ರವಾನಿಸುತ್ತಿದ್ದೇನೆ. ನನಗೆ ಗೊತ್ತು, ಈ ಪತ್ರ ಓದುವಾಗ ನಿನ್ನ ಮೊಗದಲ್ಲಿ ಉಷೆಯ ಓಕುಳಿ ತುಂಬಿಕೊಂಡಿರುತ್ತದೆ. ಉಹುಂ, ನೀನು ಓದುತ್ತಿರುವುದು ಬರಿಯ ಪತ್ರವನ್ನಲ್ಲ. ಬೇಜವಾಬ್ದಾರಿ ಪ್ರೇಮಿಯ ಆತ್ಮ ನಿವೇದನೆಯನ್ನು. ಅಥವಾ ನಿನ್ನನ್ನೇ ನೀನು ಓದಿಕೊಳ್ಳುತ್ತಿರುವೆ ಎಂದು ನಿನಗೆ ಅನ್ನಿಸಲೂಬಹುದೇನೋ? ನಮ್ಮಗಳಿಗೆ ಸ್ವಂತ ಅಸ್ತಿತ್ವವಾದರೂ ಎಲ್ಲಿದೆ ಎಂದರೆ ನೀನು ಸಿಟ್ಟಾಗುವುದಿಲ್ಲ ತಾನೆ?

ನೆನಪಿದ್ದರೆ ಕರೆದುಕೊ : ಅಂದು ಸಂಜೆ ಆರು ಗಂಟೆ ಹೊತ್ತಿನಲ್ಲಿ ಕೆರೆಯಂಗಳದ ಕಟ್ಟೆಯ ಮೇಲೆ ಕುಳಿತಿದ್ವಿ. ಮಾತುಮಾತಾಗಿ ಕಾಡುಬೆಳದಿಂಗಳ ರಾತ್ರಿಯ ವಿಹಾರಕ್ಕೆಂದು ಹೊರಟು ನಿಂತ್ವಿ. ಇಂದು ? ಹಾಲುಜೇನಿನ ಚಕ್ರತೀರ್ಥದಲ್ಲಿ ಸಿಲುಕಿಕೊಂಡಿದ್ದೇವೆ. ಪರವಾಗಿಲ್ಲ. ಅಲ್ಲೇ ನಿಂತು ನಕ್ಷತ್ರಗಳತ್ತ ಕೈಚಾಚೋಣ. ಕೆಲವಾದರೂ ನಮ್ಮದಾಗುತ್ತವೆ. ಯೋಗ ಇದ್ದರೆ ಎಲ್ಲವೂ...

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Please Wait while comments are loading...