ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಲೆ ಹೊತ್ತಿಸುವ ಮುನ್ನ ಅಕ್ಷರ ಬಾಣಸಿಗನ ಸ್ವಗತಗಳು !

By Staff
|
Google Oneindia Kannada News
ಒಲೆ ಹೊತ್ತಿಸುವ ಮುನ್ನ ಅಕ್ಷರ ಬಾಣಸಿಗನ ಸ್ವಗತಗಳು ! Sampige marada hasirele naduve...

*ಎಸ್ಕೆ. ಶಾಮಸುಂದರ

S.K. Shama Sundaraಬಿಡುವಿನ ಸಮಯವನ್ನು ನೀವು ಹೇಗೆ ಕಳೆಯುತ್ತೀರಿ ?

ಗಂಡಸರು - ಹೆಂಗಸರು, ಯುವಕರು - ವಯಸ್ಸಾದವರು , ಉದ್ಯೋಗಿಗಳು- ನಿರುದ್ಯೋಗಿಗಳು ಎಂಬ ಯಾವ ತಾರತಮ್ಯವನ್ನೂ ಮಾಡದೆ ನಿಮಗೆ ಈ ಪ್ರಶ್ನೆ ಕೇಳುತ್ತಿದ್ದೇನೆ, ಕೋಪ ಮಾಡ್ಕೋಬಾರದು ! ಯಾಕೆಂದರೆ ‘ ಹಗಲೂ ಮೂರ್ಹೊತ್ತು ಕತ್ತೆ ಥರ ದುಡಿತೀವಿ. ಬಿಡುವಿನ ಸಮಯ ಎಲ್ಲಿಂದ ತರೋಣ ಶಾಮ್‌’ ಅಂತ ನೀವು ತಿರುಗಿಸಿ ನನಗೆ ಪ್ರಶ್ನೆ ಕೇಳಬಹುದು. ಕೇಳಿ ಪರವಾಗಿಲ್ಲ. ನಾನೂ ನಿಮ್ಮಂತೆಯೇ ಬಹಳ ಬಿಜಿ ಕಣ್ರೀ. ಆದರೆ, ಇದ್ದಕ್ಕಿದ್ದಂತೆ ಲಾಟರಿ ಹೊಡೆದ ಹಾಗೆ ಸ್ವಲ್ಪ ಸಮಯ ಸಿಕ್ಕಿ ಬಿಡತ್ತೆ ಅನ್ಕೊಳ್ಳಿ. ಆಗ ನಾವುಗಳೆಲ್ಲ ಏನು ಮಾಡ್ತೀವಿ ಅನ್ನೋದಷ್ಟೆ ನನ್ನ ಕುತೂಹಲ. ನಿಮ್ಮ ಕುತೂಹಲವೂ ಇದೇನಾ ?

ನಿಮಗೆ ನೆನಪಿರಬಹುದು. ಕೆಲಸಕ್ಕೆ ಅರ್ಜಿ ಹಾಕುವಾಗ Extra Curricular Activities ಎನ್ನುವ ಕಾಲಂ ಅಪ್ಲಿಕೇಷನ್‌ ಫಾರಂನಲ್ಲಿ ಇರತ್ತೆ. ಅದರಲ್ಲಿ ಸಾಮಾನ್ಯವಾಗಿ ಅಭ್ಯರ್ಥಿಗಳು Reading, Sports, Music, Cricket, Travelling ಅಂತ ಏನೇನೋ ಬರೆದಿರ್ತಾರೆ. ಆದರೆ ಅವರ ಪಠ್ಯೇತರ ಚಟುವಟಿಕೆಗಳು ನಿಜಕ್ಕೂ ಅಲ್ಲಿ ಬರೆದಿರುವುದೊಂದು ಬಿಟ್ಟು ಬೇರೆ ಇನ್ನೇನೋ ಆಗಿರುತ್ತದೆ. ಓದುವುದು ಎಂದರೆ ಕೆಲವರು ನ್ಯೂಸ್‌ ಪೇಪರ್‌ ಅಂತ ಭಾವಿಸಿರುತ್ತಾರೆ. ಮಿಡಲ್‌ ಸ್ಕೂಲ್‌ನಲ್ಲಿ ಯಾವತ್ತೋ ಒಂದು ದಿವಸ ಫುಟ್‌ ಬಾಲ್‌ ಆಡಿದ್ದರೂ ‘ ಖಾಲಿ ಬಿಟ್ಟಿರುವ ಜಾಗದಲ್ಲಿ ಸಾಕರ್‌’ ಅಂತ ಬರೆಯುವುದಕ್ಕೆ ಅವರು ಹಿಂಜರಿಯುವುದಿಲ್ಲ . ಪ್ರವಾಸವನ್ನು ಎಕ್ಸ್‌ಟ್ರಾ ಕರಿಕುಲರ್‌ ಅಂತ ತಾವೇ ಪರಿಗಣಿಸಿಕೊಂಡಿರುವವರ ಹಣೆಬರಹವೂ ಅಷ್ಟೆ. ಅಕ್ಕನ ಮಗಳ ಮದುವೆಗೆ ಹೋಗಲೇಬೇಕು ಇಲ್ಲದಿದ್ದರೆ ತಪ್ಪು ತಿಳಿದುಕೊಳ್ಳುತ್ತಾರೆ ಎಂಬ ಒಂದೇ ಕಾರಣದಿಂದ ಒಮ್ಮೆ ಮುಳಬಾಗಿಲಿನಿಂದ ಬಾಗಲಕೋಟೆಗೆ ಕಷ್ಟಪಟ್ಟು ಹೋಗಿಬಂದದ್ದೂ ಅವರ ಪ್ರವಾಸದ ಮರೆಯಲಾಗದ ಅನುಭವವಾಗಿ ಮತ್ತು ಅದೇ ಹವ್ಯಾಸವಾಗಿಯೂ ಅವರಿಗೆ ಗೋಚರಿಸಿರುತ್ತದೆ !

ನಾನು ಅಂದುಕೊಂಡಿರುವ ಹಾಗೆ ಓದುವುದು ಎಂದರೆ ‘ಒಬ್ಬ ಲೇಖಕ ಅಥವಾ ಒಂದು ನಿರ್ದಿಷ್ಟ ವಿಷಯ ಕುರಿತ ಓದಿಗೆ ನಾವು ಎಡಬಿಡದೆ ತೊಡಗಿಕೊಳ್ಳುವುದು. ಹೊಸತು ಮತ್ತು ಹಳತು ವಿಷಯಗಳ ಬಗ್ಗೆ ಹೊಸ ಬೆಳಕು ಚೆಲ್ಲುವ ಹೊಸ ಪುಸ್ತಕ ಯಾವುದು ಬಂದಿದೆ ? ಹುಡುಕಬೇಕು. ಮಾರುಕಟ್ಟೆ ಮತ್ತು ವಿಮರ್ಶೆಗಳತ್ತ ಒಂದು ಕಣ್ಣಿಟ್ಟಿರಬೇಕು. ಆ ಪುಸ್ತಕ ಎಲ್ಲೇ ಇರಲಿ ಹುಡುಕಿ ಕೊಂಡು ತಂದು ಒಂದೇ ಏಟಿಗೆ ಓದಿ ಮುಗಿಸಬೇಕು. ನನ್ನ ದೃಷ್ಟಿಯಲ್ಲಿ ಓದುವುದು ಹವ್ಯಾಸವಲ್ಲವೇ ಅಲ್ಲ ; ಅದು ನಮ್ಮ ಬದುಕಿನ ಒಂದು ಅವಿಭಾಜ್ಯ ಅಂಗ’ .

ಇದೇ ಮಾತನ್ನು ಆಟದ ಕುರಿತು ಹೇಳಲಾಗದು. ಗೋಲಿ ಬುಗುರಿ ಆಡುವ ವಯಸ್ಸು ದಾಟಿರುತ್ತದೆ. ಕ್ರಿಕೆಟ್ಟು ಟೆನಿಸ್‌ ಆಡುವುದಕ್ಕೆ ಬರಲ್ಲ. ಅಂದಕಾಲತ್ತಿಲೆ ಆಡಿದ್ದರೂ ಈಗ ತೋಳಲ್ಲಿ , ಮೀನಖಂಡದಲ್ಲಿ ಶಕ್ತಿ ಇರುವುದಿಲ್ಲ. ಸೆರೆನಾ ವಿಲಿಯಂಸ್‌ ಸೋದರಿಯರ ಬಿರುಸಾದ ಟೆನಿಸ್‌ ಆಟ ಮುಗಿದಾಗ ಬೇರೇ ಚಾನೆಲ್‌ಗೆ ಹೋಗುವುದಕ್ಕೆ ರಿಮೋಟ್‌ ಕಂಟ್ರೋಲ್‌ ಬಟನ್‌ ಒತ್ತುವುದಕ್ಕೂ ಎಷ್ಟೋ ಜನಕ್ಕೆ ಬೆರಳಲ್ಲಿ ಶಕ್ತಿ ಇರುವುದಿಲ್ಲ. ಹೋಗಲಿ ಬಿಡಿ, ಏನೂ ಮಾಡಕ್ಕಾಗಲ್ಲ !

*

ಈ ಮೇಲಿನ ನನ್ನ ವರಾತಗಳು ನಿಮಗೆ ಪಥ್ಯವಾಗುತ್ತದೋ ಇಲ್ಲವೋ ಗೊತ್ತಿಲ್ಲ. ನನ್ನ ಬದುಕಿಗೆ ಹತ್ತಿರವಾದ ಸಂಗತಿಗಳನ್ನು ಮಾತ್ರ ವರದಿ ಮಾಡುತ್ತಿದ್ದೇನೆ. ಬಿಎ ಪರೀಕ್ಷೆ ಪಾಸಾದ ನಂತರ ಅಲ್ಲಿ ಇಲ್ಲಿ ಕೆಲಸಕ್ಕೆ ಅರ್ಜಿ ಹಾಕುತ್ತಿದ್ದೆ . ಕೆನರಾ ಬ್ಯಾಂಕಿಗೆ ಅರ್ಜಿ ಹಾಕಿದಾಗ ನನ್ನ ಎಕ್ಸ್‌ಟ್ರಾ ಕರಿಕುಲರ್‌ ಆಕ್ಟಿವಿಟಿ ‘ ಬ್ಯಾಸ್ಕೆಟ್‌ ಬಾಲ್‌ ’ ಆಗಿತ್ತು. ಕಾಲೇಜಿನಲ್ಲಿದ್ದಾಗ ಆಡುವುದಕ್ಕೆ ಇಷ್ಟವಿತ್ತು ಎಂಬ ಏಕಮಾತ್ರ ಕಾರಣದಿಂದ ಹಾಗೆ ಬರೆದಿದ್ದೆ. ಆವತ್ತಿನಿಂದ ಇವತ್ತಿನವರೆಗೂ ಬ್ಯಾಸ್ಕೆಟ್‌ ಬಾಲ್‌ ಆಡುವುದಕ್ಕೆ ಸಾಧ್ಯವಾಗಿಲ್ಲ , ಸಾಧ್ಯವಾಗುವುದೂ ಇಲ್ಲ.

ಹೀಗೆಲ್ಲ ಆಗತ್ತೆ ಅಂತ ಗೊತ್ತಿದ್ದರಿಂದಲೇ ನಾನು ಜಾಣನಾದೆ. ಅಷ್ಟುಇಷ್ಟು ಅಡುಗೆ ಮಾಡುವುದನ್ನು ಕಲಿತುಬಿಟ್ಟೆ. ಅಡುಗೆ ಎನ್ನುವುದಕ್ಕಿಂತ ಅಡುಗೆ ಮನೆಯ ಹವಾಗುಣಕ್ಕೆ ತಕ್ಕಂತೆ ಬೆಳಗಿನ ಉಪಹಾರ, ಮಧ್ಯಾನ್ಹದ ಊಟ, ಸಂಜೆಗಾಲದ ಟಿಫಿನ್‌ ಕೊನೆಗೆ ರಾತ್ರಿಭೋಜನಕ್ಕೆ ಪರಿಕರಗಳನ್ನು ಜೋಡಿಸಿಕೊಂಡು ಬಂದವರಿಗೆ ಎರಡು ತುತ್ತು ಊಟ ಬಡಿಸಿ ಆಮೇಲೆ ನಾನು ಊಟ ಮಾಡುವ ಪದ್ಧತಿಯನ್ನು ರೂಢಿಸಿಕೊಂಡೆ. ಅಡುಗೆ ಮಾಡುವುದನ್ನು ಅಷ್ಟುಇಷ್ಟು ಕಲಿತು ಬಿಟ್ಟರೆ ಜೀವನದಲ್ಲಿ ಬಚಾವ್‌ ಅಂತ ನನಗೆ ಗೊತ್ತಾಗಿ ಎಷ್ಟೋ ವರ್ಷಗಳು ಸರಿದು ಹೋದವು. ಇಂಥ ಕಲೆಯನ್ನು ಎಕ್ಸ್‌ಟ್ರಾ ಕರಿಕುಲರ್‌ ಆಕ್ಟಿವಿಟಿ ಮಾಡಿಕೊಳ್ಳುವುದರ ಲಾಭಗಳು ಮೂರು. ನನಗೆ ಏನು ಬೇಕೋ ಅದನ್ನೇ ಮಾಡಿಕೊಂಡು ತಿನ್ನುವುದು ಮೊದಲನೆಯ ಲಾಭ. ಆಹಾರಕ್ಕೆ ಬೇರೆಯವರ ಕೈ ಕಾಯದೆ ನಮ್ಮ ಏರ್ಪಾಟನ್ನು ನಾವೇ ಮಾಡಿಕೊಂಡು ಪರತಂತ್ರದಿಂದ ತಪ್ಪಿಸಿಕೊಳ್ಳುವುದು ದ್ವಿತೀಯ ಲಾಭ. ಮನೆಗೆ ಬಂದವರಿಗೆ ಪ್ಲೇಟ್‌ನಲ್ಲಿ ಇಟ್ಟುಕೊಡುವುದಕ್ಕೆ ಏನಾದರೂ ಪದಾರ್ಥ ಬೇಕಲ್ಲ . ಅದು Last but not the least ಲಾಭ.

ಈಚೆಗೆ ನನಗೆ ಮತ್ತೆ ಲಾಭವಾಯಿತು. ಅಮೆರಿಕಾದಿಂದ ನಮ್ಮ ಮನೆಗೆ ಅತಿಥಿಗಳು ಬಂದಿದ್ದರು. ಪ್ರತಿದಿನ ಏನಾದರೊಂದು ಕಾರ್ಯಕ್ರಮ ಇದ್ದೇ ಇರುತ್ತಿತ್ತು. ಯಾರದೋ ಮನೆಗೆ ಔತಣಕ್ಕೆ ಹೋಗುವುದು. ಶಾಪಿಂಗ್‌, ಟೈಲರ್‌, ಬ್ಯಾಂಕು, ಮನಿ ಎಕ್ಸ್‌ಛೇಂಜ್‌, ಸೈಟು ರಿಜಿಸ್ಟ್ರೇಷನ್ನು, ಟಿಕೆಟ್‌ ಕನ್‌ಫರ್‌ಮೇಷನ್ನು... ಹೀಗೆ ಏನಾದರೊಂದು ಕೆಲಸ. ಅವರು ಹೋದಕಡೆ ಎಲ್ಲಾ ನಾನೂ ಹೋಗುವುದು ಸರಿಯಲ್ಲ ; ಸಾಧ್ಯವೂ ಅಲ್ಲ.

ನಮ್ಮ ಮನೆಯವರು ಮತ್ತು ಅತಿಥಿಗಳು ಎಲ್ಲಾದರೂ ಹೋಗುವುದನ್ನೇ ಕಾಯುತ್ತಿರುತ್ತಿದ್ದೆ. ‘ ನೀವೆಲ್ಲಾ ಹೋಗಿ. ಹೋಗಿ ಬರುವ ಹೊತ್ತಿಗೆ ಸುಸ್ತಾಗಿರತ್ತೆ. ನಾನು ಅಡುಗೆ ಮಾಡಿಟ್ಟಿರ್ತೀನಿ’ ಅಂತ ಹೇಳಿ ಅವರನ್ನೆಲ್ಲ ಸಾಗಹಾಕಿ ಇ-ಮೇಲ್‌ ಚೆಕ್‌ ಮಾಡಿ ಅಡುಗೆ ಮನೆ ಸೇರಿಕೊಳ್ಳುತ್ತಿದ್ದೆ.

ಕಳೆದ 45 ದಿವಸಗಳಲ್ಲಿ ನಾನು ಮಾಡಿ ಬಡಿಸಿದ ಪದಾರ್ಥಗಳು ಒಂದೇ ಎರಡೇ ! ಅನೇಕರು ದ್ವೇಷಿಸುವ ಆದರೆ ಕೆಲವರು ತಮ್ಮ ಹೆಂಡತಿಗಿಂತಲೂ ಹೆಚ್ಚಾಗಿ ಪ್ರೀತಿಸುವ ಉಪ್ಪಿಟ್ಟಿನಿಂದ ಮೊದಲುಗೊಂಡು ಸಾರು, ಬೇಳೆಹುಳಿ, ಬೇಳೆ ಹಾಕದೆ ಹುರಿದು ತಿರುವಿ ಮಾಡುವ ಸಾಂಬಾರು, ತರಹೇವಾರಿ ಪಲ್ಯಗಳು, ತಿನ್ನುತ್ತಿದ್ದರೆ ನಾನೇ ಚಕಿತಗೊಳ್ಳುವ ತೆಂಗಿನಕಾಯಿ ಚಟ್ನಿ, ಕಡಿಮೆ ಎಣ್ಣೆ ಹಾಕಿ ಮಾಡುವ ಮೃದುವಾದ ಉದ್ದಿನ ಖಾಲಿ ದೋಸೆ, ಲಘುವಾದ ಅಕ್ಕಿರೊಟ್ಟಿ, ಯೋಗ್ಯರಾಗಿರೊಟ್ಟಿ, ಡಿಲೈಟ್‌ಫುಲ್‌ ಮಜ್ಜಿಗೆ ಹುಳಿ, ಕಾಳು ಪಲಾವ್‌, ಎಗ್‌ ಬುರ್ಜಿ, ಹಾವೇರಿ ಮಂಡಕ್ಕಿ ಉಸಳಿ, ಮೊಳಕೆ ಬಂದ ಹೆಸರು ಕಾಳಿನ ಹಸಿ ಕೋಸಂಬರಿ..!

ಈ ಅಡುಗೆಗಳನ್ನು ಯಾರೂ ಮಾಡುತ್ತಾರೆ. ಆದರೆ, ಎಲ್ಲರಿಗೂ ಅವರದ್ದೇ ಆದ ಹದ ಇರತ್ತೆ , ಇರಬೇಕು ಕೂಡ. ಮುಖ್ಯವಾಗಿ ಇರಬೇಕಾದದ್ದು ರುಚಿಯಲ್ಲ ರೀ, ಅಭಿರುಚಿ. ಜೊತೆಗೆ ಕೈಗುಣ ! ನನ್ನ ಕೈಗುಣ ಹೇಗಿದೆ ಎಂದು ತಿಳಿಯಬೇಕಾದರೆ ನೀವು ರಿಟರ್ನ ಟಿಕೆಟ್‌ ಕನ್‌ಫಮ್‌ ಮಾಡಿಸಿಕೊಂಡು ಅಲ್ಲಿಂದ ಸೀದಾ ನಮ್ಮ ಮನೆಗೇ ಬರಬೇಕು. ಬರಲಿಕ್ಕಾಗದಿದ್ದವರ ಪ್ರಯೋಜನಕ್ಕೆಂದು ನಮ್ಮ ಇಂಟರ್‌ನೆಟ್‌ ಅಡುಗೆ ಮನೆಯಲ್ಲಿ ಸೋಮವಾರದಿಂದ ಒಲೆ ಹೊತ್ತಿಸುತ್ತೇನೆ. ನಾನು ಆಗಾಗ ಅಡುಗೆ ಮಾಡುತ್ತಾ ಹೋಗುತ್ತೇನೆ. ನನ್ನ ರುಚಿ ಮತ್ತು ಅಭಿರುಚಿ ನಿಮ್ಮ ಅಡುಗೆ ಮನೆಗಳಲ್ಲಿ Duplication or Replication ಆಗುವುದು ನನಗೆ ಇಷ್ಟವಿಲ್ಲ.

I appreciate your Reflections !

Thank you for choosing Thatskannada.com
[email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X