• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹುಣಸೂರು ಕೃಷ್ಣಮೂರ್ತಿ ; ಕನ್ನಡ ಚಿತ್ರರಂಗದ ಪುರಂದರದಾಸರು!

By Staff
|
Google Oneindia Kannada News

ಹುಣಸೂರು ಕೃಷ್ಣಮೂರ್ತಿ ; ಕನ್ನಡ ಚಿತ್ರರಂಗದ ಪುರಂದರದಾಸರು!
ಪೌರಾಣಿಕ, ಭಕ್ತಿಪ್ರಧಾನ ಮತ್ತು ಐತಿಹಾಸಿಕ ಚಿತ್ರಗಳು ಇಂದೇಕೆ ಬರುತ್ತಿಲ್ಲ ಎಂದರೆ, ಹುಣಸೂರುರಂಥವರ ಕೊರತೆ ಇದೆ ಎಂದು ಹೇಳಬೇಕಾಗುತ್ತದೆ! ತಮ್ಮ ಸಂಭಾಷಣೆ, ಗೀತ ಸಾಹಿತ್ಯ ಮತ್ತು ನಿರ್ದೇಶನದಲ್ಲಿ ತಮ್ಮ ಛಾಪನ್ನು ಒತ್ತಿರುವ ಹುಣಸೂರು, ಕನ್ನಡ ಚಿತ್ರರಂಗದಲ್ಲಿ ಎಂದೆದಿಗೂ ಧ್ರುವತಾರೆ. ಈ ಮಾತುಗಳ ಕೇಳಿದಾಗ ನಿಮಗೆ ‘ಭಕ್ತಕುಂಬಾರ’ ನೆನಪಾಗಬಹುದು!

sampige_srinivas2 ಸಂಪಿಗೆ ಶ್ರೀನಿವಾಸ, ಬೆಂಗಳೂರು
sampiges@hotmail.com

ಕನ್ನಡ ಚಿತ್ರಗಳ ಇತಿಹಾಸದಲ್ಲಿ ಭಕ್ತಿಭಾವ ಪ್ರಧಾನ ಚಿತ್ರಗಳ ಕುರಿತು ಹಿನ್ನೋಟ ಬೀರಿದರೆ ನಮ್ಮ ನೆನಪಿಗೆ ಬರುವುದು ಭಕ್ತ ಕನಕದಾಸ, ಭಕ್ತ ಕುಂಬಾರ, ಸಂತ ತುಕಾರಾಂ, ಭಕ್ತ ಜ್ಞಾನದೇವ, ಭಕ್ತ ಸಿರಿಯಾಳ, ಪುರಂದರದಾಸರು(ನವಕೋಟಿನಾರಾಯಣ), ಮಂತ್ರಾಲಯ ಮಹಾತ್ಮೆ ಮುಂತಾದ ಚಿತ್ರಗಳು.

ಭಕ್ತ ಕನಕದಾಸ, ಭಕ್ತ ಕುಂಬಾರ, ಪುರಂದರದಾಸರ ಪಾತ್ರದಲ್ಲಿ ಕನ್ನಡದ ಮೇರು ನಟ ಡಾ. ರಾಜ್‌ ಅಮೋಘವಾಗಿ ನಟಿಸಿದ್ದಾರೆ ಎನ್ನುವ ಬದಲು ಡಾ.ರಾಜ್‌ ಆ ಪಾತ್ರಗಳಲ್ಲೇ ಒಂದಾಗಿದ್ದಾರೆ ಎನ್ನಬಹುದು. ಅಷ್ಟು ತನ್ಮಯತೆಯಿಂದ ಭಕ್ತಿರಸವನ್ನು ತಮ್ಮ ಅಭಿನಯದಲ್ಲಿ ಹೊಮ್ಮಿಸಿದ್ದಾರೆ.

ನಮಗೆ ಇಂದಿಗೂ ಶ್ರೀ ಕನಕದಾಸರನ್ನಾಗಲಿ, ಭಕ್ತ ಕುಂಬಾರನನ್ನಾಗಲೀ ಅಥವಾ ಪುರಂದರದಾಸರನ್ನಾಗಲೀ ನೆನೆಸಿಕೊಂಡರೆ ಡಾ. ರಾಜ್‌ ಅವರೇ ನಮ್ಮ ಕಣ್ಣಮುಂದೆ ಬಂದು ನಿಲ್ಲುತ್ತಾರೆ. ಅದರಲ್ಲೂ ಭಕ್ತ ಕುಂಬಾರದಲ್ಲಿನ ಪುರಂದರ ವಿಠಲನ ಭಕ್ತನಾದ ಗೋರನ ಪಾತ್ರದ ಅಭಿನಯ ಎಲ್ಲಾ ಭಕ್ತಿ ಪಾತ್ರಗಳನ್ನೂ ಮೀರಿಸುತ್ತದೆ ಎಂದರೆ ತಪ್ಪಾಗಲಾರದು. ಡಾ.ರಾಜ್‌ ಮೂಲಕ ಕನ್ನಡಿಗರಿಗೆ ಭಕ್ತಿರಸ ಉಣಿಸಿದ ಕೀರ್ತಿ ಕನ್ನಡದ ಶ್ರೇಷ್ಠ ನಿರ್ದೇಶಕರಲ್ಲೊಬ್ಬರಾದ ದಿವಂಗತ ಹುಣಸೂರು ಕೃಷ್ಣಮೂರ್ತಿಯವರಿಗೆ ಸಲ್ಲಬೇಕು.

Bhakta Kumbaraಹುಣಸೂರು ಕೃಷ್ಣಮೂರ್ತಿಯವರು ಒಳ್ಳೆಯ ನಿರ್ದೇಶಕರಾಗಿದ್ದರಲ್ಲದೇ, ಶ್ರೇಷ್ಠ ಸಾಹಿತಿಯೂ ಆಗಿದ್ದರು. ಅವರು ನಿರ್ದೇಶಿಸಿದ ಚಿತ್ರಗಳು ಬಹುಪಾಲು ಪೌರಾಣಿಕ, ಐತಿಹಾಸಿಕ ಮತ್ತು ಭಕ್ತಿ ಪ್ರಧಾನ ಚಿತ್ರಗಳಾಗಿದ್ದವು. ಶ್ರೀಕೃಷ್ಣಗಾರುಡಿ, ಆಶಾಸುಂದರಿ, ರತ್ನಮಂಜರಿ, ವೀರಸಂಕಲ್ಪ, ಸತ್ಯ ಹರಿಶ್ಚಂದ್ರ, ಮದುವೆ ಮಾಡಿ ನೋಡು, ಶ್ರೀಕನ್ನಿಕಾಪರಮೇಶ್ವರಿ ಕಥೆ, ದೇವರ ಗೆದ್ದ ಮಾನವ, ಜಗ ಮೆಚ್ಚಿದ ಮಗ, ಭಕ್ತ ಕುಂಬಾರ, ವೀರ ಸಿಂಧೂರ ಲಕ್ಷಣ, ಬಭ್ರುವಾಹನ, ಗುರು ಸಾರ್ವಭೌಮ ಶ್ರೀರಾಘವೇಂದ್ರ ಕರುಣೆ, ಭಕ್ತ ಸಿರಿಯಾಳ, ಶ್ರೀ ಎಡೆಯೂರು ಸಿದ್ಧಲಿಂಗೇಶ್ವರ ಮಹಿಮೆ, ಭಕ್ತ ಜ್ಞಾನದೇವ ಮತ್ತು ಶಿವಕನ್ಯೆ ಅವರು ನಿರ್ದೇಶಿಸಿದ ಚಿತ್ರಗಳಲ್ಲಿ ಮುಖ್ಯವಾದವು. ಕನ್ನಡದಲ್ಲಿ ಭಕ್ತಿ ಪ್ರಧಾನ ಚಿತ್ರಗಳನ್ನು ಅವರಷ್ಟು ಪರಿಣಾಮಕಾರಿಯಾಗಿ ಚಿತ್ರಿಸಿದವರು ಅತ್ಯಂತ ವಿರಳವಾಗಿದ್ದಾರೆ.

ಈಗ ಭಕ್ತ ಕುಂಬಾರ ಚಿತ್ರವನ್ನೇ ತೆಗೆದುಕೊಳ್ಳೋಣ. ಈ ಚಿತ್ರದಲ್ಲಿ ಹುಣಸೂರರು ಬರೆದ ಒಂದೊಂದು ಗೀತೆಯೂ ಭಕ್ತಿರಸದಲ್ಲಿ ನಮ್ಮ ಮನಸನ್ನು ಮೀಯಿಸುತ್ತದೆ. ಈ ಚಿತ್ರದ ‘ಮಾನವ ಮೂಳೇ ಮಾಂಸದ ತಡಿಕೆ’ ಗೀತೆಯ ಉನ್ನತ ಸಾಹಿತ್ಯ, ಅತ್ಯುತ್ತಮ ಸಂಗೀತ ಹಾಗೂ ಡಾ.ರಾಜ್‌ ಅವರ ಅಮೋಘ ಅಭಿನಯ ನಮ್ಮನ್ನು ಆಧ್ಯಾತ್ಮಿಕ ಚಿಂತನೆಗೆ ದೂಡುತ್ತದೆ.

ಪರತತ್ವವನು ಬಲ್ಲ ಪಂಡಿತನು ನಾನಲ್ಲ
ಹರಿನಾಮವೊಂದುಳಿದು ನನಗೇನು ತಿಳಿದಿಲ್ಲ
ನನಗೇನು ತಿಳಿದಿಲ್ಲ...

ಮಾನವ ದೇಹವು ಮೂಳೆ ಮಾಂಸದ ತಡಿಕೆ
ಇದರ ಮೇಲಿದೆ ತೊಗಲಿನ ಹೊದಿಕೆ
ತುಂಬಿದೆ ಒಳಗೆ ಕಾಮಾದಿ ಬಯಕೆ ।।

ಮಾನವ ಮೂಳೆ..

ನವಮಾಸಗಳು ಹೊಲಸಲಿ ಕಳೆದು
ನವರಂದ್ರಗಳ ತಳೆದು ಬೆಳೆದು ।
ಬಂದಿದೆ ಭುವಿಗೆ ಈ ನರ ಬೊಂಬೆ
ನಂಬಲು ಏನಿದೆ ಸೌಭಾಗ್ಯವೆಂಬೇ ।।

ಮಾನವ ಮೂಳೆ...

ಉಸಿರಾಡುವ ತನಕ ನಾನು ನನದೆಂಬ ಮಮಕಾರ
ನಿಂತ ಮರುಗಳಿಗೆ ಮಸಣದೆ ಸಂಸ್ಕಾರ ।
ಮಣ್ಣಲಿ ಬೆರೆತು ಮೆಲ್ಲಗೆ ಕೊಳೆತು
ಮುಗಿಯುವ ದೇಹಕೆ ವ್ಯಾಮೋಹವೇಕೆ ।।

ಮಾನವ ಮೂಳೆ...

ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ
ಬಂದು ಹೋಗುವ ನಡುವೆ ಬರಿ ಕತ್ತಲೆ ।।
ಭಕ್ತಿಯ ಬೆಳಕು ಬಾಳಿಗೆ ಬೇಕು
ಮುಕ್ತಿಗೆ ವಿಠಲನ ಕೊಂಡಾಡಬೇಕು ।।

ಮಾನವ ಮೂಳೆ ಮಾಂಸದ ತಡಿಕೆ
ದೇಹವು ಮೂಳೆ ಮಾಂಸದ ತಡಿಕೆ
ಇದರ ಮೇಲಿದೆ ತೊಗಲಿನ ಹೊದಿಕೆ
ತುಂಬಿದೆ ಒಳಗೆ ಕಾಮಾದಿ ಬಯಕೆ ।।

ವಿಠಲ ವಿಠಲ ಪಾಂಡುರಂಗ ವಿಠಲ
ವಿಠಲ ವಿಠಲ ಪಾಂಡುರಂಗ ವಿಠಲ ।।

ಜೀವನದಲ್ಲಿ ತಿಂದುಂಡು, ಮಜಾಮಾಡುವುದೇ ಸುಖವೆಂದು ನಾವಂದುಕೊಂಡಿರುತ್ತೇವೆ. ಆದರೆ ಅದನ್ನು ಮೀರಿದ ಒಂದು ಸುಖ ಭಗವಂತನಲ್ಲಿ ನಮಗೆ ಭಕ್ತಿಯಿಂದ ಸಿಗುತ್ತದೆ, ಅದು ನಮಗೆ ಮುಕ್ತಿಗೂ ದಾರಿಯಾಗುತ್ತದೆ ಎಂದು ಸರಳವಾಗಿ ನಮಗೆ ಹುಣಸೂರರು ಮೇಲಿನ ಗೀತೆಯಲ್ಲಿ ತಿಳಿಸಿಕೊಡುತ್ತಾರೆ. ಈ ಗೀತೆ ನನಗೆ ಶ್ರೀ ಪುರಂದರದಾಸರ ‘ಮನುಜ ಶರೀರವಿದೇನು ಸುಖ..’ ಎಂಬ ಗೀತೆಯನ್ನು ನೆನಪಿಸುತ್ತದೆ.

ಭಕ್ತ ಕುಂಬಾರದಲ್ಲಿನ ಅವರ ಈ ಕೆಳಗಿನ ಗೀತೆಯಲ್ಲಿ,

ಹರಿನಾಮವೇ ಚೆಂದ ಅದ ನಂಬಿಕೋ ಕಂದ
ಹಿಂದಿನ ಸಾಲ ತೀರಿಸಲೆಂದು ಬಂದಿಹೆವಯ್ಯ ಜನ್ಮವ ತಳೆದು
ಮುಂದಿನ ಬದುಕು ಬಂದುರವೆನಿಸೋ ಗುರಿಸಾಧಿಸೋ ಕಂದ
ಹರಿನಾಮವೇ ಚೆಂದ...

ಗೋರನ ಮೂಲಕ ಕರ್ಮಬಂಧನದ ವಿಷಯವನ್ನು ನಮಗೆ ತಿಳಿಸುತ್ತಾರೆ. ನಾವು ಹಿಂದಿನ ಜನ್ಮಗಳಲ್ಲಿ ಮಾಡಿದ ಕರ್ಮದ ಫಲವನ್ನು ಅನುಭವಿಸಲು ಈ ಜನ್ಮವೆತ್ತಿದ್ದೇವೆ. ನಾವು ಹರಿಯಲ್ಲಿ ಭಕ್ತಿಮಾಡಿ, ಶಾಸ್ತ್ರಸಮ್ಮತವಾದ ಎಲ್ಲ ಕೆಲಸವನ್ನು ಅವನಿಗೇ ಅರ್ಪಿಸಿ, ಫಲದ ಆಸೆಯಿಲ್ಲದೆ ಮಾಡಿದರೆ ಆ ಕರ್ಮಗಳ ಫಲ ನಮಗೆ ಬಂಧನವಾಗುವುದಿಲ್ಲ ಎಂಬ ಭಗವದ್ಗೀತೆಯ ಶ್ರೀಕೃಷ್ಣನ ಅಮರ ಸಂದೇಶವನ್ನು ಮೇಲಿನ ಗೀತೆಯ ಮೂಲಕ ನಮಗೆ ನೀಡಿದ್ದಾರೆ.

ಈ ಗೀತೆಯನ್ನು ಪಾಂಡುರಂಗನ ಧ್ಯಾನಮಾಡುತ್ತ ಗೋರ ಮೈಮರೆತು ಹಾಡುತ್ತಿರುವಾಗ, ತನ್ನ ಮಗುವನ್ನೇ ತುಳಿದು ಸಾಯಿಸುವ ದೃಶ್ಯ ಮತ್ತು ಅದನ್ನು ನೋಡಿ ಕರುಳುಹಿಂಡುವಂತೆ ಮರುಗುವ ತಾಯಿಯ ಪಾತ್ರವನ್ನು ಲೀಲಾವತಿಯವರ ಅಭಿನಯದಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ ಹುಣಸೂರರು.

ಕಂಡೆ ಹರಿಯ ಕಂಡೆ ದೇವಾದಿ ದೇವ ದನುಜಾದಿ ವಂದ್ಯ ಧರಣೀಶನ
ಪಾವನವಾಯಿತು ಕುಲಕೋಟಿಗಳು ಪುಟಿದು ಹೋದವು ಪರಿತಾಪಗಳು
ಬೇರೇನು ಬೇಕಿಲ್ಲ ಸಾಕು ಇದುವೆ ಅನಂತ ಭಾಗ್ಯ
ಕಂಡೆ ಹರಿಯ ಕಂಡೆ...

ಭಕ್ತಗೋರ ಕನಸಿನಲ್ಲಿ ಶ್ರೀಕೃಷ್ಣನು ರಾಧೆಯೊಡನೆ ರಾಸಲೀಲೆ ಆಡುವ ದೃಶ್ಯವನ್ನು ಕಂಡು ಆನಂದದಿಂದ ಹಾಡುವು ಮೇಲಿನ ಗೀತೆಯನ್ನು ಹುಣಸೂರರು ಬಲು ಸೊಗಸಾಗಿ ಚಿತ್ರಿಸಿದ್ದಾರೆ.

ವಿಠಲ... ಪಾಂಡುರಂಗ ವಿಠಲ...
ನಾನು ನೀನು ನೆಂಟರಯ್ಯ ನಮಗೆ ಭೇದ ಇಲ್ಲವಯ್ಯ

ಮಣ್ಣಲಿ ಮಡಿಕೆ ಕುಡಿಕೆ ಮಾಡೋ
ಕಾಯಕ ಹಿಡಿದ ಕುಂಬಾರ ನಾನು
ಜೀವಿಗಳೆಂಬೋ ಬೊಂಬೆಯ ಮಾಡೋ
ಬ್ರಹ್ಮನ ತಂದೆ ಕುಂಬಾರ ನೀನು

ಯಾಗವನೊಲ್ಲೆ ಯೋಗವನೊಲ್ಲೆ
ರಾಗದೆ ಮುಳುಗೋ ವೈಭೋಗವೊಲ್ಲೆ
ಮಾಧವ ನಿನ್ನ ನಾಮಾಮೃತದ
ಸಾಧನೆ ಒಂದೆ ಸಾಕಯ್ಯ ತಂದೆ

ಪುಂಡರೀಕ ವರದ ಜಯ ಪಾಂಡುರಂಗ
ವಿಠಲ... ಪಾಂಡುರಂಗ ವಿಠಲ...

ಈ ಗೀತೆಯಲ್ಲಿ ಹುಣಸೂರರು ಮಣ್ಣಲಿ ಮಡಿಕೆ ಮಾಡೋ ಕುಂಬಾರನ ಕಾಯಕವನ್ನು ಪ್ರಪಂಚದ ಸಕಲ ಚರಾಚರ ಜೀವಿಗಳನ್ನು ಸೃಷ್ಟಿಸುವ ಬ್ರಹ್ಮನ ತಂದೆಯಾದ ಶ್ರೀಹರಿಯ ಕಾರ್ಯಕ್ಕೆ ಹೋಲಿಸಿ ಭಗವಂತನ ಶ್ರೇಷ್ಠತೆಯನ್ನು ಎತ್ತಿ ತೋರಿಸಿದ್ದಾರೆ.

ಈ ಚಿತ್ರದ ಕೊನೆಯಲ್ಲಿ ನಡೆಯುವ ಘಟನೆ ಹೀಗಿದೆ. ಗೋರನ ಮನೆಯಲ್ಲಿ ಶ್ರೀಹರಿಯೇ ರಂಗನೆಂಬ ಹೆಸರಿನ ಸೇವಕನಾಗಿ ಬಂದು ಸೇರಿ ಎರಡು ಕೈಗಳನ್ನು ಕಳೆದುಕೊಂಡಿದ್ದ ಗೋರನ ಸೇವೆ ಮಾಡುತ್ತಿದ್ದನ್ನು. ಭಕ್ತರಾದ ನಾಮದೇವರು, ಜ್ಞಾನದೇವರು ಪಾಂಡುರಂಗನೇ ರಂಗನಾಗಿ ಗೋರನ ಮನೆಯಲ್ಲಿ ಇದ್ದಾನೆಂದು ಹುಡುಕಿಕೊಂಡು ಬಂದರು. ಆದರೆ ಅಷ್ಟರಲ್ಲಿ ರಂಗನ ವೇಷದಲ್ಲಿದ್ದ ಪಾಂಡುರಂಗ ಮಾಯವಾಗಿದ್ದ. ಪಾಂಡುರಂಗನೇ ತನ್ನ ಮನೆಯಲ್ಲಿ ರಂಗನಾಗಿ ತನ್ನ ಸೇವೆ ಮಾಡುತ್ತಿದ್ದನೆಂದು ಅರಿತ ಗೋರನು ಭಗವಂತನೇ ಇಷ್ಟು ದಿನ ತನ್ನೊಂದಿಗಿದ್ದರೂ ತಿಳಿಯದಿದ್ದಕ್ಕಾಗಿ ಪಶ್ಚಾತ್ತಾಪಪಡುತ್ತಾನೆ. ರಂಗನನ್ನು ಮನೆಯಲ್ಲೆಲ್ಲಾ ಹುಡುಕಿದರೂ ಕಾಣಿಸದಿದ್ದಾಗ ಬಲು ಸಂಕಟಪಡುತ್ತಾ ಹುಣಸೂರರೇ ಬರೆದ

ವಿಠಲ ರಂಗಾ ಪಾಂಡುರಂಗ..
ಎಲ್ಲಿ ಮರೆಯಾದೆ ರಂಗ ಏಕೆ ದೂರಾದೆ ವಿಠಲ ಏಕೆ ದೂರಾದೆ
ದೇವರ ದೇವ ಎಂಬುದ ಮರೆತೆ ಸೇವಕನಂತೆ ನನ್ನೆಡೆ ನಿಂತೆ
ಮಾಧವ ನಿನ್ನ ಮಾಯಾಜಾಲ ಮಾನವ ನಾನು ತಿಳಿಯಲಿಲ್ಲ
ವಿಠಲ ರಂಗಾ...

ಸಾಧಿಸಿ ಹರಿಯ ಪ್ರೀತಿಯ ಒಲವು ಪ್ರಜಿಸಿದಂಥ ಪ್ರಜ್ಯರು ನೀವು
ಬಲ್ಲಿರಿ ಅವನ ಅಂತರಂಗ ಬಲ್ಲಿರಿ ಅವನ ಅಂತರಂಗ
ಎಲ್ಲಿಹ ಹೇಳಿ ಪಾಂಡುರಂಗ
ವಿಠಲ ರಂಗಾ...

ಎತ್ತೆತ್ತಲೀಗ ಕಗ್ಗತ್ತಲಾಯ್ತು ಗೋತ್ತಾಗದಾಯ್ತೆ ವಿಠಲ
ಮುತ್ತಂಥ ನಿನ್ನ ಕೈತ್ತುತ್ತ ತಿನ್ನೋ ಹೊತ್ತಾಯ್ತು ಬಾರೋ ವಿಠಲ
ಬತ್ತಿರೋ ಬದುಕನೆತ್ತಿ ನೀ ಬೆಳಕ ಹತ್ತಿಸಿ ಕಾಯೋ ವಿಠಲ
ಹೆತ್ತವಳಂಥೆ ನೀನೆತ್ತಿಕೊಂಡು ನನ್ನತ್ತ ನೋಡೋ ವಿಠಲ

ನೀ ಎನ್ನ ಧನ ನೀ ಎನ್ನ ಮನ ನೀ ಪ್ರಾಣ ವಿಠಲ
ಎನ್ನಾತ್ಮ ನಿಧಿಯೇ ಮುಖತೋರೋ ಧೊರೆಯೇ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ
ವಿಠ್ಠಲ ವಿಠ್ಠಲ ಜೈ ಜೈ ವಿಠ್ಠಲ

ಎನ್ನುವ ಮನೋಜ್ಞವಾದ ಗೀತೆಯನ್ನು ಹಾಡುತ್ತ ಗೋರ ಪಾಂಡುರಂಗನನ್ನು ಹುಡುಕುತ್ತ ಪಂಡರಾಪುರದ ವಿಠಲನ ಗುಡಿಗೆ ಬಂದು ಪಾಂಡುರಂಗನನ್ನು ಅನನ್ಯ ಭಕ್ತಿಯಿಂದ ಭಜಿಸುವ ಸನ್ನಿವೇಶವನ್ನು ಹುಣಸೂರು ಕೃಷ್ಣಮೂರ್ತಿಯವರು ರಾಜಣ್ಣನವರ ಮೇರು ಅಭಿನಯದಲ್ಲಿ ಚಿತ್ರಿಸಿ ನೋಡುವ ನಮ್ಮನ್ನೂ ಭಕ್ತಿಭಾವಪರವಶರಾಗುವಂತೆ ಮಾಡಿದ್ದಾರೆ.

ಭಕ್ತ ಕುಂಬಾರದಂತಹ ಭಕ್ತಿಕಡಲಿನಲ್ಲಿ ತೇಲಿಸುವಂಥ ಚಿತ್ರಗಳನ್ನು, ಗೀತೆಗಳನ್ನು ನಮಗೆ ನೀಡಿದ ಹುಣಸೂರು ಕೃಷ್ಣಮೂರ್ತಿಯವರು ಕನ್ನಡ ಚಿತ್ರರಂಗದ ಪುರಂದರದಾಸರಾಗಿದ್ದಾರೆ!


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion