• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿವರಾತ್ರಿ ಕಳೆದ ವಾರಕ್ಕೆ ಸದಾರಮೆ ನಾಟಕ

By ಸ ರಘುನಾಥ, ಕೋಲಾರ
|

ನಾಟಕದ ಸಾಹಿತ್ಯ ಅಂತಿಮ ಹಂತ ತಲುಪುತ್ತಿದ್ದಂತೆ ಊರಿನ ಮುಖ್ಯಸ್ಥರಾದ ದುಗ್ಗಪ್ಪ, ಮುನಿವೆಂಟೇಗೌಡ, ಮುನಿಕೃಷ್ಣಪ್ಪ, ಯಾಲಗಿರೆಪ್ಪ, ತೋಟಿಗರ ತಬಲ ಮೋಟಪ್ಪ, ನಾರಾಯಣಪ್ಪರೊಂದಿಗೆ ಬೋಡೆಪ್ಪ, ಪಿಲ್ಲಣ್ಣ, ಮುನೆಕ್ಕ ಚಲ್ಲಾಪುರಮ್ಮನ ಗುಡಿ ಒಪ್ಪಾರದಲ್ಲಿ ಸೇರಿದರು. ಅಪ್ಪಯ್ಯ ಸವಿವರವಾಗಿ ಎಲ್ಲವನ್ನೂ ಮನವರಿಕೆ ಮಾಡಿಕೊಟ್ಟು, ನಾಟಕದಲ್ಲಿ ಮಾಡಿದ ಬದಲಾವಣೆಗಳನ್ನು ತಿಳಿಸಿ ಒಪ್ಪಿಗೆ ಕೇಳಿದ. ದುಗ್ಗಪ್ಪ ಕೈಯೆತ್ತಿ, ಒಪ್ಪಿಗೆಯಾದರೆ ಮುಂದಿನ ಮಾತು ಎಂದ. ಎಲ್ಲರೂ ಕೈಯೆತ್ತಿದರು.

ನಾಟಕ ಎಂದಿಗಾಗಲಿ ಎಂದ ಮೋಟಪ್ಪ. ಪೂಜಾರ್ರ ಶೇಷಪ್ಪ ಪಂಚಾಂಗ ತೆಗೆದು ನೋಡಿ, ರಾಮನವಮಿಗೆ ಅಂದ. ಹಬ್ಬದ ದಿನ ಬೇಡವೆಂದಾಯಿತು. ಶಿವರಾತ್ರಿ ದಿನ ಎಂಬ ಮಾತು ಬಂದಿತು. ಜನ ಜಾಗರಣೆಗೆ ಎಲ್ಲಿಲ್ಲಿಗೋ ಹೋಗಿರುತ್ತಾರೆ. ಬೇಡ ಅಂದ ದುಗ್ಗಪ್ಪ. ಶಿವರಾತ್ರಿ ಕಳೆದ ವಾರಕ್ಕೆ ಆದೀತೋ ಎಂದ ಶೇಷಪ್ಪ. ಆದೀತು ಎಂಬ ಅನುಮೋದನೆ ಸಿಕ್ಕಿತು. ಊರಲ್ಲಾವುದೂ ಸಾವಾಗದಿದ್ದರೆ, ಆವತ್ತೇ. ಹಾಗೇನಾದರು ಆದರೆ ಅದರ ಮುಂದಿನ ಹದಿನೈದು ದಿನಕ್ಕೆ ಅಂದುಕೊಳ್ಳೋಣ ಅಂದ ಮುನಿವೆಂಕಟೇಗೌಡ. ಎಲ್ಲರೂ ಸರಿ ಎಂದರು.

ಸುನಂದಾ ತೆರೆದ ಮುನೆಕ್ಕನ ಲೆಕ್ಕದ ಖಾತೆಗಳು

ಈ ಸಲ ನರಸಿಂಗ ನಾಟಕದ ಮೇಷ್ಟ್ರು ಆಗ್ತಾನೆ ಅಂದ ಅಪ್ಪಯ್ಯ. ಮತ್ತೆ ನೀನೋ ಎಂದರು ಜನ. ನಾನು ಜೊತೇಗಿರ್ತೇನೆ. ಮುಂದೆ ಈ ಜವಾಬ್ದಾರಿ ಅವನದೇ ತಾನೆ ಅಂದ. ದುಗ್ಗಪ್ಪ ಅದೂ ನಿಜನೆ, ಸರಿಯೇ ಅಂದ. ಅಪ್ಪ ಮಗ ಸೇರಿ ಖರ್ಚುವೆಚ್ಚ ಲೆಕ್ಕ ಹಾಕಿಡಿ. ಮುಂದಿನ ಬೇಸ್ತವಾರ ಪಾರ್ಟುದಾರರು ಯಾರುಯಾರೆಂದು ತೀರ್ಮಾನ ಮಾಡೋಕೆ ಇಲ್ಲೇ ಸೇರೋಣ. ಮೋಟಪ್ಪ ಹಾಂಗಂತ ನಿನ್ನ ತಮ್ಮ ಮುನಿನಾರಾಯಣಿಗೆ ನಾಳೇನೆ ಟಮುಕು ಹಾಕೋಕೆ ಹೇಳು ಅಂದ ನಾರಾಯಣಪ್ಪ. ಇನ್ನೇನಾದ್ರು ಕಡೇ ಮಾತಂತ ಹೇಳೋದು ಯಾರಿಗಾದ್ರು ಇದೆಯೋ ಎಂದ ದುಗ್ಗಪ್ಪ. ಯಾರೂ ಇದೆ ಅನ್ನಲಿಲ್ಲ.

ಸರಿ ಶೇಷಪ್ಪ, ಅಮ್ಮನಿಗೆ ಮಂಗಳಾರತಿ ಆಗಲಿ. ಎಲ್ಲಾ ಸುಸೂತ್ರ ನಡೀಲಿ ಅಂತ ಅಮ್ಮನ್ನ ಕೇಳ್ಕಳಿ ಎಂದು ಮುನಿಕೃಷ್ಣಪ್ಪ ಹೇಳಿದಾಗ ಎಲ್ಲರೂ ನಿಂತು ಕಣ್ಣು ಮುಚ್ಚಿ ಕೈ ಮುಗಿದರು. ಮಂಗಳಾರತಿ ತಟ್ಟೆಯೊಂದಿಗೆ ಬಂದ ಶೇಷಪ್ಪ 'ಅಮ್ಮ ಬಲಗಡೆ ಹೂ ಕೊಟ್ಟಳು' ಎಂದ. ಎಲ್ಲರೂ ಶ್ರೀ ಮದ್ರಮಾರಮಣ ಗೋವಿಂದೋ ಗೋವಿಂದ. ಗೋಪಾಲ ಸ್ವಾಮಿ ಪಾದಾರವಿಂದ ಗೋವಿಂದೋ ಗೋವಿಂದ, ಚಲ್ಲಪುರಮ್ಮ ಪಾದಾಲ ಗೋವಿಂದೋ ಗೋವಿಂದ ಎಂದು ಕೆನ್ನೆ ಬಡಿದುಕೊಂಡರು. ಮನೆಯಲ್ಲಿದ್ದು ಇದನ್ನು ಕೇಳಿಸಿಕೊಂಡ ಅಮ್ಮ ತನ್ನ ದನಿಯನ್ನೂ ಕೂಡಿಸಿ, ಸುನಂದಾಳ ಹಣೆಗೆ ಕುಂಕುಮವಿಟ್ಟು, ಅಪ್ಪ ಮಗ ಬಂದು ಹೇಳುವುದಕ್ಕಿಂತ ಮುನೆಕ್ಕ ಹೇಳುವುದೇ ಜಾಸ್ತಿ. ಬೇಕಾದರೆ ನೋಡ್ತಿರು ಅಂದಳು ಅಮ್ಮ.

ಮಾತಿಗೆ ಕೂರುವ ಮುಂಚೆ ಪೂಜೆಗೆ ಒಡೆದಿದ್ದ ಕಾಯಿ ಹೋಳುಗಳೊಂದಿಗೆ ಮಂಗಳಾರತಿಗೆ ಮುಂಚೆ ಒಡೆದ ಕಾಯಿ ಹೋಳುಗಳನ್ನು ತಂದು ಮುನಿಕೃಷ್ಣಪ್ಪನ ಕೈಗೆ ಕೊಟ್ಟ ಶೇಷಪ್ಪ. ಅವನು ಉಡಿದಾರದಲ್ಲಿ ಕಬ್ಬಿಣಪೆಟ್ಟಿಗೆ ಬೀಗದ ಕೈಯೊಂದಿಗೆ ನೇತಾಡುತ್ತಿದ್ದ ಮಡಿಚುಚಾಕುವಿನಿಂದ ಕೊಬ್ಬರಿಯನ್ನು ಹೆಟ್ಟಿ ಹೆಟ್ಟಿ ತೆಗೆದು ಚೂರು ಮಾಡಿ ಎಲ್ಲರಿಗೂ ಒಂದೊಂದು ಚೂರನ್ನು ಪ್ರಸಾದವಾಗಿ ಹಂಚಿ, ಉಳಿದ ನಾಲ್ಕು ತುಂಡುಗಳನ್ನು ಮುನೆಕ್ಕನ ಕೈಗೆ ಹಾಕಿದ. ಅವಳು ಅವನ್ನು ಸೆರಗಿನ ತುದಿಯಲ್ಲಿ ಗಂಟು ಹಾಕಿದಳು.

ಸುನಂದಾಳ ರೂಪಿನ ಬೆಳದಿಂಗಳು...

ಅಪ್ಪ ಮಗ ಹೇಳಿ ಮುಗಿಸಿದ ಮೇಲೆ ಮುನೆಕ್ಕ ಅವರು ಹೇಳದೆ ಬಿಟ್ಟುದನ್ನು ಸೇರಿಸುತ್ತ ಅವರು ಹೇಳಿದನ್ನೇ ಮತ್ತೆ ಹೇಳಿ ಮುಗಿಸುವ ಹೊತ್ತಿಗೆ ನಡುರಾತ್ರಿಯಾಗಿತ್ತು. ಸುನಂದಾಳೊಂದಿಗೆ ಮನೆಗೆ ಹೋಗಲು ಎದ್ದಾಗ ಸೆರಗಿನ ಗಂಟು ಕೈಗೆ ತಾಕಿ ಪ್ರಸಾದ ಕೊಡಲಿಲ್ಲವೆಂಬುದನ್ನು ನೆನಪಿಸಿತು. ಗಂಟು ಬಿಚ್ಚಿ ಅಮ್ಮ, ಸುನಂದಾಳಿಗೆ ಒಂದೊಂದು ಚೂರು ಕೊಟ್ಟು, ತಾನೊಂದು ಚೂರನ್ನು ಕಣ್ಣಿಗೊತ್ತಿಕೊಂಡು ಬಾಯಿಗೆ ಹಾಕಿಕೊಂಡಳು. ಉಳಿದೊಂದು ಚೂರನ್ನು ಅಂಗಳದಲ್ಲಿ ಮಲಗಿದ್ದ ಹಸು ಕರುವಿನ ಬಾಯಿಗೆ ಕೊಟ್ಟಳು.

English summary
The leaders of village decided to conduct sadarame drama after one week of shivaratri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X