ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ ಕ್ಷಣ ಯಾರಾದರೊಬ್ಬರು ನಿಲ್ಲಿಸಿ ಮಾತನಾಡಿಸಿದ್ದರೆ!

By ಸ ರಘುನಾಥ, ಕೋಲಾರ
|
Google Oneindia Kannada News

ಈ ಬದುಕೇ ಒಂದು ವಿಚಿತ್ರ. ಏನೇನೋ ಕನಸುಗಳನ್ನು ಕಟ್ಟಿಕೊಂಡು ಬಂದವರು ಇನ್ನೇನೋ ಆಗಿರುತ್ತೇವೆ. ಕೆಲವರು ಸಾಧನೆಯ ಹಾದಿಯಲ್ಲಿ ನಿರಂತರ ಸೈಕಲ್ ತುಳಿಯುತ್ತಿರುತ್ತಾರೆ, ಕೆಲವರು ಎಲ್ಲ ಮುಗಿದೇಹೋಯಿತು ಎಂಬಂತೆ ಹಳಿಯ ಮೇಲೆ ಬಂದು ನಿಂತಿರುತ್ತಾರೆ. ಆದರೆ, ಆ ಬದುಕು ಕಲಿಸುವ ಪಾಠವಿದೆಯಲ್ಲ, ಅದು ಇತರರಿಗೆ ಸ್ಫೂರ್ತಿಯ ಸೆಲೆಯಾಗಬೇಕು, ಇನ್ನೊಮ್ಮೆ ಬದುಕಿ ತೋರಿಸು ಎಂದು ಕತ್ತುಹಿಡಿದು ನಿಲ್ಲಿಸಬೇಕು. ಬದುಕಿನ ಎಲ್ಲ ವೈರುಧ್ಯಗಳನ್ನು ಮೆಟ್ಟಿನಿಂತು, ವಿದ್ಯಾರ್ಥಿಗಳಿಗೆ ಆದರ್ಶವಾಗಿರುವ ಕೋಲಾರದ ಮೇಷ್ಟ್ರು ಸ. ರಘುನಾಥ ಅವರ ಜೀವನದೊಂದಿಗೆ ಹಾಸುಹೊಕ್ಕಾದ ಅಂತಹದೊಂದು ಪಾಸಿಟಿವ್ ಕಥೆ ಇಲ್ಲಿದೆ, ದಯವಿಟ್ಟು ಓದಿರಿ. - ಸಂಪಾದಕ.

***
ನಾನು ಮಾಡಿದ ತಪ್ಪು ಇನ್ನೊಬ್ಬರು ಮಾಡದಂತೆ ತಡೆಯುವುದಾದರೆ ನನ್ನೆಲ್ಲ ಹಿಂಜರಿಕೆಯನ್ನು ಬದಿಗಿಟ್ಟು ಪ್ರಚುರ ಪಡಿಸುವುದಾದರೆ, ಆ ತಪ್ಪಿಗೂ ಒಂದು ಬೆಲೆ ಸಕ್ಕೀತೆಂದು ಒನ್ಇಂಡಿಯಾದ ಶ್ರೀನಿವಾಸ್ ತಿಳಿಸಿದ್ದರಿಂದ ಇದನ್ನು ಬರೆಯುತ್ತಿರುವೆ. ಇದರಲ್ಲಿ ಕೊಂಚವೂ ಉತ್ಪ್ರೇಕ್ಷೆ ಇಲ್ಲ. ಬದಲಿಗೆ ಗುಣಪಾಠವಿದೆ.

Only I can change my life. No one can do it for me

1973ರ ಏಪ್ರಿಲ್ 24 ನನ್ನ ದುಡುಕು ಮತ್ತು ಅವಿವೇಕದ ದಿನವೆಂದು ಯಾರಿಗಾದರೂ ಅನ್ನಿಸುವುದು ಸಹಜವೇ. ಅಂದಿನ ಸಮಯ ಸಂಜೆ 6.45. ಎರಡು ದಿನದ ಹಸಿವೆ ಭಿಕ್ಷೆಗೆ ಪ್ರೇರೇಪಿಸಿತ್ತು. ಬೆಂಗಳೂರಿನ ಚಾಮರಾಜಪೇಟೆಯ ಮೂರನೇ ಮುಖ್ಯರಸ್ತೆಯ ಮೂರು ಮನೆಗಳ ಮುಂದೆ ನಿಂತು ಅನ್ನ ಬೇಡಿದಾಗ ಮುಂದೆ ಹೋಗೆಂಬ ಮಾತು ನಾನು ಆತ್ಮಹತ್ಯೆ ಮಾಡಿಕೊಳ್ಳುವ ನಿಲುವಿಗೆ ಕಾರಣವಾಯಿತು. ಇದಕ್ಕೆ ಖಂಡಿತಾ ಅವರನ್ನು ನಿಂದಿಸುವುದಿಲ್ಲ. ಅವರವರ ಪರಿಸ್ಥಿತಿ ಅವರವರದು.

ಎಲ್ಲೆ ಮೀರಿಯೂ ಎಲ್ಲೇ ಇದ್ದರೂ ಶರಣಯ್ಯ ಶ್ರದ್ಧಾಳು ವೈದ್ಯರಿಗೆಎಲ್ಲೆ ಮೀರಿಯೂ ಎಲ್ಲೇ ಇದ್ದರೂ ಶರಣಯ್ಯ ಶ್ರದ್ಧಾಳು ವೈದ್ಯರಿಗೆ

ಬದುಕು ನಮ್ಮ ಅಧೀನವೇನೋ. ಸಾವಂತೂ ಅಲ್ಲವೇ ಅಲ್ಲ. ಇದು ನನ್ನ ಸ್ವಾನುಭವ. ನನ್ನಂತೆ ಅನುಭವ ಪಡೆದವರನ್ನು ನಾನು ಬಲ್ಲೆ. ಸಾವು ನಾವು ಬಯಸಿದಾಗ, ಬಯಸಿದಂತೆ ಬರಲು ಒಪ್ಪುವುದಿಲ್ಲ. ಅದನ್ನು ಒತ್ತಾಯಸಿದರೆ ಆಗುವುದು ದೇಹ ಮತ್ತು ಬದುಕಿನ ಯಾವುದೇ ಅಂಗದ ಊನ. ಇದಕ್ಕೆ ನಾನು, ನನ್ನಂತಾದವರು ನಿದರ್ಶನ. ಆತ್ಮಹತ್ಯೆ ಹೇಡಿ ಲಕ್ಷಣವಲ್ಲ; ದುಸ್ಸಾಹಸದ ಲಕ್ಷಣ ಅನ್ನಿಸುತ್ತೆ.

Only I can change my life. No one can do it for me

ಭಿಕ್ಷೆಗೂ ಅರ್ಹವಲ್ಲದ ಈ ಜನ್ಮವೇಕೆ ಅನ್ನಿಸಿದ್ದೇ ಅಂದಿನ ನನ್ನ ವಿವೇಕ ಶೂನ್ಯತೆ ಅನ್ನುವುದು ಸುಲಭ. ಆದರೆ ಪ್ರೇರಣೆ ಪರಿಸ್ಥಿತಿಯದು ಎಂಬುದು ಸತ್ಯ. ಆ ಪರಿಸ್ಥಿತಿಯನ್ನು ಮೀರದೆ ಹೋದುದು ನನ್ನ ದೌರ್ಬಲ್ಯವೆ? ಪ್ರಶ್ನೆ ಉಳಿದಿದೆ.

ನೂರಹತ್ತು ವರ್ಷದ ವನಸುಮ ಸಾಕಲೋಳ್ಳ ವೆಂಕಟಮ್ಮನೂರಹತ್ತು ವರ್ಷದ ವನಸುಮ ಸಾಕಲೋಳ್ಳ ವೆಂಕಟಮ್ಮ

ಆತ್ಮಹತ್ಯೆಗೆ ನಿಶ್ಚಯಿಸಿದ್ದಾಗಿತ್ತು. ಮಾರ್ಗ ಅನ್ನಿಸಿದ್ದು ರೈಲಿಗೆ ಸಿಕ್ಕುವುದು. ಆಯ್ಕೆಯಾದುದು, ಶೇಷಾದ್ರಿಪುರದಲ್ಲಿದ ಅಂದಿನ ಕಿನೋ ಟಾಕಿಸಿನ ಬಳಿಯ ಕಲ್ಲುಗಳ ನಡುವೆ ಹಾದು ಹೋಗಿದ್ದ ರೈಲು ಹಳಿ. ರೈಲು ಐಲ್ಯಾಂಡ್ ಎಕ್ಸ್‌ಪ್ರೆಸ್. ಚಾಮರಾಜಪೇಟೆ-ಗೂಡ್ಸ್‌ಷೆಡ್ ರಸ್ತೆ- ಆನಂದರಾವ್ ಸರ್ಕಲ್ ರೈಲು ಹಳಿ.

Only I can change my life. No one can do it for me

ಅಂದು ನನ್ನ ಪ್ರಜ್ಞೆಯಲ್ಲಿ ಬೆಂಗಳೂರಿಗೆ ಬೆಂಗಳೂರೇ ಸ್ತಬ್ಧ. ಮೇಲೆ ಹೇಳಿದ ಮಾರ್ಗ ಬಿಟ್ಟರೆ ಎಲ್ಲೆಲ್ಲೂ ಕತ್ತಲು. ಹಳಿಗಳ ನಡುವೆ ನಿಂತುದಷ್ಟೇ ಕೊನೆಯ ನೆನಪು. ದೇಹದ ಎಲ್ಲ ಜ್ಞಾನೇಂದ್ರಿಯಗಳೂ ಅಚೇತನ. ಇಂಜನ್ನಿನ ಪ್ರಖರ ಬೆಳಕಿಗೆ ಕಣ್ಣು ಕುರುಡು, ಅದರ ಕರ್ಕಶ ಶಬ್ದ, ಕೂಗಿಗೆ ಕಿವಿ ಸಂಪೂರ್ಣ ಕಿವುಡು. ಪ್ರಜ್ಞೆ ಬಂದಾಗ ಬೌರಿಂಗ್ ಆಸ್ಪತ್ರೆಯಲ್ಲಿ. ಬಲಗಾಲಿನ ತೊಡೆ ಕೆಳಭಾಗ ಹುಟ್ಟಿಯೇ ಇರಲಿಲ್ಲವೆಂಬಂತೆ. ಜಿನುಗುತ್ತಿದ್ದ ರಕ್ತ, ಗರಗಸದಲ್ಲಿ ಕುಯ್ದಂತೆ ನೋವು. ತಾನಾಗಿ ಬಾರದ ಸಾವನ್ನು ಬಲಾತ್ಕರಿಸಿದ್ದಕ್ಕೆ ಅದು ಪಡೆದುಕೊಂಡ ಶುಲ್ಕ ಬಲಗಾಲು. ಕೊಟ್ಟುಕೊಂಡ ಶಿಕ್ಷೆ ಅಂಗವಿಕಲತೆ.

ಬದುಕು ಬಯಸಿದಂತೆ ಕೊನೆಗೊಳ್ಳಲಿಲ್ಲ. ಬದಲಿಗೆ ಮುಂದಿನ ಹೋರಾಟಕ್ಕೆ ಅಣಿಯಾಗಿಸಿತು. ಆಗ ಅನುಭವಿಸಿದ ಅಪಮಾನಗಳು, ಅವಹೇಳನಗಳು ಮುಂದಿನ ಬದುಕಿನ ಹೋರಾಟದ ಧೈರ್ಯಕ್ಕೆ ಪಾಜಿಟೀವ್ ಮನೋಭಾವದ ಕಠಿಣ ಶಿಕ್ಷೆ ಅನ್ನಿಸಿತು. ಪ್ರತಿಯೊಬ್ಬ ಅಂಗವಿಕಲ ಇಲ್ಲಿ ಗಟ್ಟಿಗೊಳ್ಳಬೇಕು ಅನ್ನಿಸುವುದು.

Only I can change my life. No one can do it for me

ಮಗುವಾಗಿದ್ದಾಗ ನಡಿಗೆಯನ್ನು ಅಜ್ಜಿಯ ಕೈಹಿಡಿದು ಕಲಿತಿದ್ದೆ. ಈಗ ಅಂಥ ಕೈ ಆಸರೆಯಿಲ್ಲದೆ ನಡಿಗೆ ಕಲಿಯುತ್ತ ಯೋಚಿಸಿದೆ. ಆ ದಿನ ಹೊರಟೆನಲ್ಲ ಸಾಯಬೇಕೆಂದು, ಆಗ ಯಾರಾದರೊಬ್ಬರು ಕ್ಷಣ ನಿಲ್ಲಿಸಿ ಒಂದೆರಡು ಮಾತಾಡಿಸಿದ್ದರೆ, ಅವರ ಆ ಮಾತುಗಳು ನನ್ನನ್ನು ಬದುಕಿನತ್ತ ಮುಖ ಮಾಡಿಸುತ್ತಿದ್ದವೇನೊ? ಹಾಗಾಗಿದ್ದರೆ ಅವರ ಪಾದಕ್ಕೆ ಶರಣಾಗುತ್ತಿದ್ದೆ. ಆದರೆ ಹಾಗಾಗಲಿಲ್ಲ.

ಈ ಹಿನ್ನೆಲೆಯಲ್ಲಿ ಹೇಳುವುದಿಷ್ಟೆ. ಇಂಥ ಅದೃಷ್ಟಹೀನ ನಿರ್ಣಯಕ್ಕೆ ಮನಸ್ಸು ಹರಿದ ಕೂಡಲೇ ಯಾರೊಂದಿಗಾದರೂ ಸರಿ ಮಾತನಾಡಿ. ನಿರ್ಣಯಕ್ಕೆ ಬಂದ ಸ್ಥಳವನ್ನು ಬಿಟ್ಟು ಗೆಳೆಯರೋ, ಪರಿಚಿತರೋ ಇರುವಲ್ಲಿಗೆ ಹೋಗಿ. ಆಗದಿದ್ದರೆ ದಯವಿಟ್ಟು ಗಟ್ಟಿ ಮನಸ್ಸು ಮಾಡಿ ಯಾರೊಂದಿಗಾದರೂ ಕಾಲು ಕೆರೆದು ಜಗಳವನ್ನಾದರೂ ಮಾಡಿ. ಆಹ್ವಾನಿಸಿದ ದುರಂತದಿಂದ ಪಾರಾಗಬಹುದು. ಹೀಗಾದುದಕ್ಕೆ ಹಿನ್ನೆಲೆಯಾದ ನನ್ನ ಬದುಕಿನ ವಿವರಗಳು ಬೇಕಿತ್ತು ಅನ್ನಿಸೀತು. ಅದು ದೀರ್ಘವಾದುದು. ಮತು ಇಲ್ಲಿಗೆ ಅಪ್ರಸ್ತುತ ಅಂದುಕೊಳ್ಳುವುದು ಸದ್ಯಕ್ಕೆ ಸೂಕ್ತ.

ಒಂದು ಮಾತು ಖಚಿತ. ನಾನು ಅನುಕಂಪ ಗಳಿಸಲು ಇದನ್ನು ಬರೆದಿಲ್ಲ. ಈ ಅಂಗವಿಕಲತೆಯ ಈ 44ನೇ ವರ್ಷದಲ್ಲಿ ಅದರ ಅಗತ್ಯವಿಲ್ಲ. ಇದರಿಂದ ಇಂಥ ಆಲೋಚನೆ, ಅನಿಸಿಕೆ ಅಥವಾ ಪ್ರಯತ್ನವಿದ್ದರೆ ಇದನ್ನು ಆಪ್ತ ಸಮಾಲೋಚನೆ(ಕೌನ್ಸೆಲಿಂಗ್) ಎಂದು ಸ್ವೀಕರಿಸಿ ಆ ಮೂಡ್ನಿಂದ ಹೊರಬರಲಿ ಎಂಬ ಆಶಯ, ನಿರೀಕ್ಷೆ.

English summary
Life can push you to any extreme. Sometimes we may feel, it is enough. But, challenges inspire us to achieve more for a better life. Here is a human interest story of a retired teacher from Kolar, who had tried to commit suicide, but survived to proved what life is worth for.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X