• search

ಸೆಲೂನಿನಲ್ಲೊಂದು ಮುಂಜಾನೆ ತೆರೆದುಕೊಂಡ ಹೊಸದೊಂದು ಲೋಕ

By ಸ.ರಘುನಾಥ, ಕೋಲಾರ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಕಳೆದ ರಾತ್ರಿಯಷ್ಟೆ 'ಮನೆಯಿಂದ ಮನೆಗೆ' ಎಂಬ ಕೆ.ಎಸ್.ನರಸಿಂಹಸ್ವಾಮಿಯವರ ಕವಿತೆಯನ್ನು ನೆನಪಿಸಿಕೊಳ್ಳುತ್ತಾ ಬಾಡಿಗೆ ಮನೆಗೆ ಬಂದು ಸೇರಿಕೊಂಡಿದ್ದೆವು. ಸಾಮಾನು ಸರಂಜಾಮು ತುಂಬಿಕೊಂಡು ನನ್ನನ್ನೂ ಕೂರಿಸಿಕೊಂಡು ಹೊರಟಿದ್ದ ಲಾರಿ, ದಾರಿಯಲ್ಲಿ ಕೆಟ್ಟು ನಿಂತದ್ದರಿಂದ ಮಧ್ಯ ರಾತ್ರಿ ಮನೆ ತಲುಪಿದ್ದೆ.

  ವರ್ಷಗಟ್ಟಲೆ ನಿದ್ದೆ ತ್ಯಾಗ ಮಾಡಿ, ಗಂಡನ ಸಲುಹಿದ ಮಹಾತಾಯಿ ವಿಜಯಮ್ಮ

  ನನ್ನ ಮುಖದಲ್ಲಿ ಒಂದು ಸೆಂಟಿಮೀಟರಿನಷ್ಟು ಒರಟು ಬಿಳಿಕೂದಲು ಅಲಂಕರಣಗೊಂಡಿತ್ತು. ಇದು ಮಡದಿಗೆ ಮುಜುಗರ. ಷೇವಿಂಗಿಗೆ ಹೋಗಲು ಅಪ್ಪಣೆ ಮಾಡಿದಳು. ವಿನೀತನಾಗಿ ಹೊರಟೆ. ಹತ್ತು ಹೆಜ್ಜೆ ಹಾಕುವಷ್ಟರಲ್ಲಿ 'ವೆಂಕಟೇಶ್ವರ ಹೇರ್ ಡ್ರೆಸರ್ಸ್. ಗಂಡಸರ ಬ್ಯೂಟಿ ಪಾರ್ಲರ್' ಎಂಬ ಬೋರ್ಡು ಕಂಡಿತು. ಹೋಗುವ ಅಂದುಕೊಳ್ಳುತ್ತಿರುವಾಗಲೆ ಹಾಲಿನ ಕ್ಯಾನು ಕಟ್ಟಿದ ಸೈಕಲ್ ಸವಾರನೊಬ್ಬ ಅದರ ಮುಂದೆ ಸೈಕಲ್ಲು ನಿಲ್ಲಿಸಿ ನನಗೂ ಮೊದಲಿಗನಾದ.

  One morning in the saloon shop

  ಸೆಲೂನಿನಾತ ಕಸ ಹೊಡೆದು, ಬಾಗಿಲ ಮುಂದೆ ನೀರು ಚುಮುಕಿಸಿದ. ಆಗ ಕೊಂಚ ಕುಂಟುತ್ತ ವ್ಯಕ್ತಿಯೊಬ್ಬ ಹಾಜರಾದ. ಅಂಗಡಿಯಾತ ಗಿರಾಕಿಗಳು ಇದ್ದಾರೆಂಬುದನ್ನೇ ಮರೆತು ಅವನೊಂದಿಗೆ ಮಾತನಾಡುತ್ತ ನಿಂತ. ಮೊದಲಿಗೆ ಅವರ ಮಾತಿನಿಂದ ಬೇಸರ ಉಂಟಾಯಿತು. ಮರುಕ್ಷಣದಲ್ಲಿ ಅವರ ಮಾತಿನಲ್ಲಿ ನನಗೆ ಆಸಕ್ತಿ ಹುಟ್ಟಿತು.

  ಕ್ಷೌರಿಕನ ಹೆಸರು ವೆಂಕಟೇಸುಲು. ಬಂದವನ ಹೆಸರು ಮಣಿ ಎಂದು ಅವರ ಮಾತಿನಿಂದ ತಿಳಿಯಿತು. ಮಣಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ಹೊಸಕೋಟೆಯವನು. ಕಟ್ಟಡ ನಿರ್ಮಾಣದ ಕೂಲಿಯಾಗಿ ವಲಸೆ ಬಂದವನಂತೆ. ಕನ್ನಡ, ತೆಲುಗು, ತಮಿಳು ಭಾಷೆಗಳ ಮಿಶ್ರಣ ಅವನ ಮಾತಿನಲ್ಲಿತ್ತು.

  ಊರಿನ ರಹಸ್ಯವನ್ನೆಲ್ಲ ಬೀದಿಗೆಳೆಯುತ್ತಿದ್ದ 'ಡೋಂಟ್ ಕೇರ್' ಮುನೆಪ್ಪ

  ಮಣಿಯ ಬಲಗಾಲು ಕೊಂಚ ಊನು. ಹಾಗಾಗಿ ಇಟ್ಟಿಗೆ ಹೊರುವುದು, ಮಣ್ಣು, ಸಿಮೆಂಟಿನ ಬಾಂಡಲಿ ಎತ್ತುವುದು ಮಾಡುತ್ತಿರಲಿಲ್ಲ. ಮೇಸ್ತ್ರಿಗೆ ಬಂಟನಾಗಿದ್ದ. ಅವನ ದಿನಗೂಲಿ ಒಂದುನೂರ ಐವತ್ತು ಮಾತ್ರ. ಉಳಿದವರಿಗೆ ಮುನ್ನೂರು, ಮನ್ನೂರೈವತ್ತು. ಎಲ್ಲರಿಗೂ ಸಂತೆ ದಿನವಾದ ಶನಿವಾರವೇ ಬಟವಾಡೆಯಾಗುತ್ತಿತ್ತು. ಇವನಿಗೆ ಅಂದೂ ಆಗಬಹುದಿತ್ತು, ಬೇರೊಂದು ದಿನವೂ ಆಗಬಹುದಿತ್ತು. ಇದು ಅವನಿಗೆ ಬೇಸರ.

  One morning in the saloon shop

  ಆದರೆ, ಮೇಸ್ತ್ರಿಗೆ ಮಾತ್ರ ಅದನ್ನು ತಿಳಿಯಗೊಡುತ್ತಿರಲಿಲ್ಲ. ಈ ಮಾತು ಬಂದಾಗ 'ಅಳುವುದೊ ನಗುವುದೊ ನೀವೇ ಹೇಳಿ/ ಇರುವುದೊ ಬಿಡುವುದೊ ಈ ಊರಿನಲಿ' ಎಂದು ಹೇಳಿ, ರಾಜಕುಮಾರ್ ನಮ್ಮಂತಹವರಿಗೆ ಹಾಡಿದ್ದು ಎಂದು, 'ಮನಸು ಗತಿಯಿಂತೆ/ ಮನಿಸಿ ಬತುಕಿಂತೆ/ ಮನಸುನ್ನ ಮನಿಸಿಕಿ ಸುಕಮು ಲೇದಂತೆ' (ಮನದ ಗತಿ ಇಷ್ಟೆ/ ಮನುಷ್ಯನ ಬದುಕಿಷ್ಟೆ/ ಮನಸುಳ್ಳ ಮನುಷ್ಯಗೆ ಸುಖವು ಇಲ್ಲಷ್ಟೆ) ಎಂದು ನಾಗೇಶ್ವರರಾವ್ 'ಪ್ರೇಮನಗರ್' ಸಿನೆಮಾದಲ್ಲಿ ಹಾಡಿದ್ದಾನೆ ಎಂದು ಅವನದೇ ರಾಗದಲ್ಲಿ ಹಾಡಿದ.

  ಹಾಗಿದ್ದ ಮೇಲೆ ಅವನ ಹತ್ತಿರಾನೆ ನಾಲ್ಕು ವರ್ಷದಿಂದ ಯಾಕೆ ಬಿದ್ದಿದ್ದಿ ಎಂದು ವೇಂಕಟೇಸುಲು ಕೇಳಿದ. ಅದಕ್ಕವನು ಹಾಡಿದ್ದು ತಮಿಳು ಸಿನೆಮಾ ಒಂದರ 'ಪೋನಾಲ್ ಪೋಗುಟುಮು ಪೋಡ' (ಹೋದರೆ ಹೋಗಲಿ ಹೋಗೊ) ಎಂಬ ಹಾಡು. ತನಗೆ ಮೇಸ್ತ್ರಿ ಹೇಳುವುದು ಹೀಗೆಯೇ ಎಂದು ಹೇಳದೆಯೆ ಹೇಳಿದ. ಬೇರೆಯವರ ಬಳಿ ತನಗೆ ಹೊತ್ತು ಬರದು ಎಂದು ಅವನಿಗೆ ಗೊತ್ತಿತ್ತು.

  ಮತ್ತಿನ್ನಾವ ಹಾಡು ಹಾಡುತ್ತಿದ್ದನೊ? ವೆಂಕಟೇಸುಲು 'ರಾತ್ರಿ ಟೀ' ಎಷ್ಟಾಯ್ತು ಎಂದ. ಒಂದು ಕ್ವಾರ್ಟ್ರು ಅಷ್ಟೆ ಎಂದು, 'ಈ ದಿನ ಮಜ' ಎಂದು ಹಾಡಿದ. ಯಾಕೆ ಅಂದದ್ದಕ್ಕೆ ನಾಳೆ ಮನೆಗೆ ಹೋಗುತ್ತೇನೆಂದ. ಇವತ್ತು 'ರಾತ್ರಿ ಟೀ'ಗೆ ಇದ್ಯ ಅಂದ ವೆಂಕಟೇಸುಲು. ಕಾಸೇನೊ ಇದೆ. ಆದ್ರೆ ಟೀಕಲ್ಲ. ಮನೇ ದುಡ್ಡು ಅಂದ.

  One morning in the saloon shop

  ಟೀಕೇನು ಮಾಡ್ತಿ ಅಂದಿದ್ದಕ್ಕೆ 'ಮೂರು ಮಕ, ಎರಡು ತಲೆ ನನಗೆ ಬಿಟ್ಟುಕೊಡು' ಅಂದ. ನನಗೇ ತಂದ್ಯ ಬಿಗುನಾದಿ ಅಂದಿದ್ದಕ್ಕೆ, 'ನೀನೇ ಅಲ್ವ ಟೈಮುಗೆ ಆಗತದೆ ಅಂತೇಳಿ ಕೆಲ್ಸ ಕಲ್ಸಿದ್ದು. ನಿನಗೆ ಬರಬೇಕಾದ್ನ ಹಿಡಕೊ. ಅದರಲ್ಲಿ ಏನಿದೆ. ನೀನು ಮಾಡುವುದೇನಿದೆ ಪಾರ್ಥ? ಮಾಡಿಸುವುದು ನಾನೆ, ಮಾಡಿದ್ದಕ್ಕೆ ಕೊಡುವವನು ನಾನೆ' ಎಂದು ಕೃಷ್ಣಪರಮಾತ್ಮನು 'ಕುರುಕ್ಷೇತ್ರ' ನಾಟಕದಲ್ಲಿ ಹೇಳಿಲ್ವ? ನಾನೇ ಪಾರ್ಥ, ನೀನೇ ಕೃಷ್ಣ.

  ಮಾಡಿಸುವವನು ನೀನೆ, ಕೊಡುವವನು ನೀನೆ ಅಂದ. ಅದಕ್ಕೆ ವೆಂಕಟೇಸುಲು ಬೋ ಗಟ್ಟಿಗ ನೀನು ಅಂದು, ಮಕ್ಕೆರಡು ನೀರು ಹಾಕ್ಕೊಂಡು ಬಂದು ಕತ್ತಿ ಹಿಡಿ ಅಂದ. 'ದಯವಾದುದೆ ಪರಮಾತ್ಮ/ ನಿನಗೆ ನನ್ನೊಳು/ ದಯವಾದುದೆ' ಎಂದು ರಾಗ ತೆಗೆದು, 'ನೀರಿಗೆ ಬಕೆಟನ್ನು ಕೊಡುವವನಾಗು ಪರಮಾತ್ಮ' ಎಂದು ರಾಗ ತೆಗೆದ.

  ಮಣಿ ಮುಖ ತೊಳೆದು ಬಂದ. ವೆಂಕಟರಮಣಸ್ವಾಮಿ ಫೋಟೋಗೆ ಹಚ್ಚಿದ್ದ ಕುಂಕಮವನ್ನು ತೋರುಬೆರಳಿನಿಂದ ತೆಗೆದುಕೊಂಡು, ಕನ್ನಡಿಯನ್ನು ನೋಡದೆಯೆ ಎರಡು ಹುಬ್ಬಿನ ನಡುವೆ ದುಂಡಗೆ ಹಚ್ಚಿಕೊಂಡು ಕೈಮುಗಿದ. ಭಯ ಇಲ್ಲದೆ ಬಂದು ಕುಂತುಕೊ ಸಾ ಎಂದು ನನ್ನನ್ನು ಕುರ್ಚಿಗೆ ಆಹ್ವಾನಿಸಿದ.

  ನಾನು ಕುಳಿತ ಮೇಲೆ ನುಣುಪಾದ ಬಟ್ಟೆಯನ್ನು ನನ್ನ ಕತ್ತಿನ ಸುತ್ತ ಹೊಚ್ಚಿ, ಸರಿಪಡಿಸಿ, ಕತ್ತರಿಯನ್ನು ತೆಗೆದುಕೊಂಡು ಕಣ್ಣಿಗೆ ಒತ್ತಿಕೊಂಡು, ಅದಕ್ಕೆ ಹೂ ಮುತ್ತು ಕೊಟ್ಟು ಸ್ವಾಮಿ ಎಂದು ಪಿಸುಗುಟ್ಟಿದ. ಪಿಚಕಾರಿ ಬಾಟಲಿಯಿಂದ ತಲೆಗೆ ನೀರು ಚಿಮುಕಿಸಿ ಬಾಚಣಿಗೆ ಹಾಕಿ ಕೂದಲನ್ನು ಎತ್ತಿ ಕತ್ತರಿ ಆಡಿಸುತ್ತ, ನೀನು ಹೊಸಬನಿರಬೋದು ಸಾ. ಆದರೆ ತಲೆಗಳು ನನಗೆ ಹೊಸವೇನಲ್ಲ ಅಂದ. ಆ ಹೊತ್ತಿಗೆ ಅಲ್ಲಿ ನಾವಾರೂ ಹೊಸಬರಾಗಿರಲಿಲ್ಲ.

  ಅವನು ಹೊಸಬ ಎಂದ ಮಾತು ನಾವು ಎಲ್ಲಿಯವರೆಗೆ ಹೊಸಬರು ಅನ್ನುವ ಪ್ರಶ್ನೆಯನ್ನು ಹುಟ್ಟಿಸಿತು. ಮುಖ ಪರಿಚಯವಾದಾಗ ಹೊಸತು ಅನ್ನುವುದರಲ್ಲಿ ಅರ್ಧ ಹೋಗಿರುತ್ತೆ. ನಾಕಾರು ಮಾತು ಅಡುವುದರಲ್ಲಿ ಉಳಿದರ್ಧ ಅಳಿಸಿ ಹೋಗಿರುತ್ತೆ. ಹೊಸತು ಅನ್ನುವುದು ಹೊಸತಾಗಿಯೇ ಉಳಿದಿರುವುದಿಲ್ಲ ಅಲ್ಲವೆ?

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Oneindia columnist Sa Raghunath shares his experience in the saloon shop.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more