ಸ. ರಘುನಾಥ ಅಂಕಣ: ನರಸಿಂಗ ಮತ್ತವನ ಗೆಳೆಯರು ಕದಿಯುತ್ತಿದ್ದ ರೀತಿ
ನರಸಿಂಗ ಮತ್ತವನ ಸ್ನೇಹಿತರು ಹಣ್ಣುಕಾಯಿಗಳ ಹೊರತು ಬೇರೇನನ್ನೂ ಕದ್ದವರಲ್ಲ. ಗಿಡಮರಗಳಲ್ಲಿನ ಹಣ್ಣುಕಾಯಿ ಕದ್ದು ತಿನ್ನುವುದರಲ್ಲಿ ಸದಾ ಮುಂದು. ಯಾವಾಗ, ಹೇಗೆ ಕದಿಯಬೇಕೆನ್ನುವುದನ್ನು ತಿಳಿದಿದ್ದರು. ಇವರ ಕಳ್ಳತನವನ್ನು ಬಲ್ಲ ಹಿರಿಯರಲ್ಲಿ ಕೆಲವರು, ನಾವು ಮಾಡಿದ್ದೇ ಅಲ್ಲವೆ ಎಂದು ನಕ್ಕು ಮಾಫೀ ಮಾಡಿಬಿಡುತ್ತಿದ್ದರು. ಯಾರಾದರು ಇವರನ್ನು ಹಿಡಿದು ಶಿಕ್ಷಿಸುವ ಮಾತಾಡಿದರೆ, ಇದು ಕೆಲವು ದಿನಗಳ ಹುಡುಗಾಟವಷ್ಟೆ. ಕೃಷ್ಣ ಬೆಣ್ಣೆ ಕದ್ದ, ಇಂದು ಮಕ್ಕಳು ಕದಿಯಲು ಅದಿಲ್ಲ. ಕಾಯಿಕಸರು ಕದೀತಾರೆ. ಇದರಿಂದೇನು ಅವರು ಕಳ್ಳರಾಗಿಬಿಡುವುದಿಲ್ಲ. ಸರಿ ಹೋಗುತ್ತಾರೆ ಬಿಡಿ. ಅನ್ನುತ್ತಿದ್ದರು. ಮುಂದೆ ಆದುದೇ ಹೀಗೆ.
ಹೇಗೆ ಕೀಳಬೇಕೆಂಬುದರಲ್ಲಿ ಇವರಿಗೆ ಪರಿಣತಿಯಿತ್ತು
ಯಾವ ಕಾಯಿ, ಹಣ್ಣನ್ನು ಹೇಗೆ ಕೀಳಬೇಕೆಂಬುದರಲ್ಲಿ ಇವರಿಗೆ ಪರಿಣತಿಯಿತ್ತು. ಮಾವಿನ ಕಾಯಿ ಕೀಳುವುದನ್ನು ಒಮ್ಮೆ ನನಗೆ ಹೇಳಿ, ತೋರಿಸಿಕೊಟ್ಟವನು ಪಿಲ್ಲಣ್ಣ. ಹೊರಗೆ ಕಾಣುವಂತೆ ಜೋತಾಡುವ ಕಾಯಿಗಳನ್ನು ಕೀಳಕೂಡದು. ಎಲೆಗಳ ಮರೆಯಲ್ಲಿರುವ ಕಾಯಿ ಕೀಳಬೇಕು. ಕಾಯಿಯ ಮೂಲದಲ್ಲಿರುವ ತೊಟ್ಟನ್ನು ಕೀಳದೆ, ರೆಂಬೆಯ ಮೂಲದಿಂದ ಹೊರಟ ತೊಟ್ಟನ್ನು ಮುರಿದರೆ ತಿಳಿಯುವುದಿಲ್ಲ. ಸೀಬೆಕಾಯನ್ನೂ ಹೀಗೆಯೇ ಕೀಳಬೇಕು. ಕಿತ್ತ ಯಾವ ಕಾಯಿಯ ತೊಟ್ಟನ್ನೂ ಗಿಡದಲ್ಲಿ ಬಿಡಬಾರದು. ಹಣ್ಣುಗಳಾದರೆ ಗಿಡವನ್ನೋ ಕೊಂಬೆಯನ್ನೋ ಅಲ್ಲಾಡಿಸಬೇಕು. ಉದುರಿದ ಎಲ್ಲ ಹಣ್ಣುಗಳನ್ನು ಆರಿಸಿಕೊಳ್ಳಕೂಡದು. ಕೆಲವನ್ನು ಮರದಡಿಯೇ ಬಿಡಬೇಕು. ನೋಡಿದರೆ ಮಾಗಿ ಉದುರಿವೆ, ಇಲ್ಲವೆ ಗಾಳಿಗುದುರಿವೆ ಅನ್ನಿಸಬೇಕು.
ಮರ ಹತ್ತುವುದರಲ್ಲಿ ಥೇಟ್ ಕೋತಿಗಳೇ
ಅವರು ತಾವು ಮಾಡಿದ್ದನ್ನು ಗುಟ್ಟಾಗಿ ಇಡುತ್ತಿರಲಿಲ್ಲ. ಶಾಲೆಯಲ್ಲೋ ಆಟ ಆಡುವಾಗಲೋ ನಮಗೆ ಹೇಳುತ್ತಿದ್ದರು. ನಾವು ಹೀಗೀಗಂತೆ ಎಂದು ಮನೆಗಳಲ್ಲಿ ಹೇಳಿದರೆ, ಅವರು ಹಾಳಾಗಿದ್ದಾರೆ. ಅವರ ಜೊತೆ ಸೇರಿದರೆ ನೀವೂ ಹಾಗೇ ಆಗುತ್ತೀರಿ ಜೋಕೆ ಎಂದು ಬುದ್ಧಿ ಹೇಳುತ್ತಿದ್ದರು. ನರಸಿಂಗನೇ ಅಲ್ಲ, ಅವನ ಗೆಳೆಯರೆಲ್ಲ ಮರ ಹತ್ತುವುದರಲ್ಲಿ ಥೇಟ್ ಕೋತಿಗಳೇ. ಇದರಲ್ಲಿ ನರಸಿಂಗ ಒಂದು ಹೆಜ್ಜೆ ಮುಂದು. ಅವನು ಹಲಸಿನ ಮರದಡಿ ನಿಂತೇ ಇಂಥ ಕಾಯಿ ಹಣ್ಣಾಗಿದೆ ಎಂದು ಹೇಳುತ್ತಿದ್ದ. ಅಂದರೆ ಆ ರಾತ್ರಿ ಆ ಕಾಯಿ ಮರದಿಂದ ಮಾಯವಾಗುವುದು ನಿಶ್ಚಿತ.

ಮರ ಹತ್ತುತ್ತಿದ್ದವನು ನರಸಿಂಗನೊಬ್ಬನೇ
ರಾತ್ರಿಯಲ್ಲಿ ಹಲಸಿನ ಹಣ್ಣು ಕೀಳಲು ಮರ ಹತ್ತುತ್ತಿದ್ದವನು ನರಸಿಂಗನೊಬ್ಬನೇ. ಅಪ್ಪ ಊರಿನಲ್ಲಿ ಇಲ್ಲದ ದಿನ ನಾನು ಅಮ್ಮನನ್ನು ಒಪ್ಪಿಸಿ, ಅವರೊಂದಿಗೆ ಸೇರುತ್ತಿದ್ದೆ. ಅವಳಿಗೆ ಮಗನನ್ನು ಹೊರಗೆ ಓಡಾಡಿ ಬರಲು ಬಿಡದಿರುವುದು ಸರಿಯಲ್ಲ ಅನ್ನಿಸುತ್ತಿದ್ದುದರಿಂದ ಈ ಅವಕಾಶ ನೀಡುತ್ತಿದ್ದಳು. ನೀನು ಅವರ ಜೊತೆಗೆ ಹೋದರೂ ಅವರು ಮಾಡಿದ್ದನ್ನೆಲ್ಲ ಮಾಡಬೇಡವೆಂದು ಬುದ್ಧಿ ಹೇಳಿಯೇ ಕಳುಹಿಸುತ್ತಿದ್ದಳು. ಅವಳು ಹೇಳದಿದ್ದರೂ ನನ್ನಲ್ಲಿ ಎಲ್ಲಿಂದ ಬರಬೇಕಿತ್ತು ಅಂಥ ಧೈರ್ಯ?
ಬೆಳದಿಂಗಳ ರಾತ್ರಿಯಲ್ಲಿ ನರಸಿಂಗ ದೆವ್ವದ ಕತೆ
ನರಸಿಂಗ ಹಸಿನ ಮರವೇರಿ ಕಾಯಿ ಕಿತ್ತು ಕೆಳಕ್ಕೆ ಹಾಕುತ್ತಿರಲಿಲ್ಲ. ಹಾಗೆ ಮಾಡಿದರೆ ದೊಡ್ಡ ಶಬ್ದವಾಗಿ ಯಾರಿಗಾದರೂ ಕೇಳಿಸಿಬಿಡುತ್ತಿತ್ತು. ಇದು ಅಪಾಯ. ಅವನು ಮರ ಹತ್ತಿ ಕಾಯಿಯ ತೊಟ್ಟನ್ನು ಹಲ್ಲುಗಳ ನಡುವೆ ಕಚ್ಚಿ ಹಿಡಿದು ಕೆಳಗಿದ್ದವರ ಕೈಗೆ ಎಟುಕುವಷ್ಟು ಕೆಳಕ್ಕೆ ಇಳಿದು ಕೊಡುತ್ತಿದ್ದ. ಅಂದು ನಮ್ಮ ಹಲಸಿನ ಮರಕ್ಕೆ ಏರಿ, ಹೀಗೆ ಕಾಯಿ ಇಳಿಸಿದ್ದನ್ನು ನಾನು ಕಣ್ಣಾರೆ ಕಂಡೆ. ಇದು ಅವನಿಗೆ ಹೇಗೆ ಸಾಧ್ಯವೆಂದು ನನಗೆ ಇಂದಿಗೂ ಪ್ರಶ್ನೆಯೇ.
ಊರಿನ ಆಚೆಯ ದೊಡ್ಡ ಕಲ್ಲುಬಂಡೆಯ ಮೇಲೆ ಬಿಡಿಸಿಟ್ಟ ತೊಳೆಗಳ ಗುಡ್ಡೆಯ ಸುತ್ತ ಕುಳಿತು, ಬಾಯಿಗೆ ಬಂದಂತೆ ಹರಟುತ್ತ, ಭಕ್ಷಿಸುವ ಸುಖವನ್ನು ಅಂದು ಮೊದಲಿಗೆ ಅನುಭವಿಸಿದೆ. ನಂತರದ ದಿನಗಳಲ್ಲಿ ನನಗೆ ಅಂಥ ಅವಕಾಶ ಸಿಕ್ಕಿದ್ದಿಲ್ಲ. ಆ ಬೆಳದಿಂಗಳ ರಾತ್ರಿಯಲ್ಲಿ ನರಸಿಂಗ ದೆವ್ವದ ಕತೆ ಹೇಳಿದ.












Click it and Unblock the Notifications