ನರಸಿಂಗರಾಯನಿಗೂ ಇತ್ತೊಂದು ಪ್ರೇಮ ಕಥೆ; ಆಕೆ ಹೆಸರು ಚಿನ್ನಕ್ಕ
ಒಂಟಿಯಾಗಿ ಜಗುಲಿಯಲ್ಲಿ ಕುಳಿತಿದ್ದ ನರಸಿಂಗರಾಯ, ಯಾರಾದರೂ ಇದ್ದಿದ್ದರೆ ಯಾಕೆಂದು ಕೇಳುವಂತೆ ನಕ್ಕ. ಅವನಿಗೆ ಚಿನ್ನಕ್ಕನ ಹೆಸರು ನೆನಪಿಗೆ ಬಂದಿತ್ತು. ಆದರೆ ಪ್ರಯತ್ನಿಸಿದಷ್ಟೂ ಪೂರ್ಣವಾಗಿ ಅವಳ ಮುಖಚಿತ್ರ ಮೂಡುತ್ತಿರಲಿಲ್ಲ. ಅವನಿಗಾಗ ಹೆಚ್ಚೆಂದರೆ ಹದಿನಾರು ವರ್ಷ. ಅವನಿಗೆ ತಾನು ಚಿನ್ನಕ್ಕನನ್ನು ಪ್ರೀತಿಸುತ್ತಿದ್ದೇನೆ ಅನ್ನಿಸಿತ್ತು.
ಅವನ ಪಕ್ಕದ ಹೊಲವೇ ಅವಳದೂ. ಅಲ್ಲಿಗವಳು ಕೆಲಸ ಬೊಗಸೆಗೆಂದು ಬರುತ್ತಿದ್ದಳು. ಅವಳ ಬೆನ್ನಿನ ಭಾಗದ ರವಿಕೆಯಡಿ ಬಾಡಿ ರೂಪಿಸಿದ್ದ ಬೆನ್ನಿನ ಅಂದ ಕಂಡೇ ಅವಳತ್ತ ಆಕರ್ಷಿತನಾದುದು. ಅವಳನ್ನು ಪ್ರೀತಿಸಬೇಕು ಅಂದುಕೊಂಡ. ಅದಕ್ಕಾಗಿ ಅವಳಿಗೇನಾದರೂ ಕೊಡುತ್ತ ಒಲಿಸಿಕೊಳ್ಳಬೇಕು ಅನ್ನಿಸಿತ್ತು.
ಅವಳ ಹೊಲದಲ್ಲಿದ್ದರೂ ತನ್ನ ಹೊಲದ ಅಲಸಂದೆ, ಅವರೆ, ತೊಗರಿಕಾಯಿ ಕಿತ್ತು ಕೊಡುವಾಗ ಅವಳ ಬೆರಳುಗಳಿಗೆ ತನ್ನ ಕೈ ತಾಗಿಸುತ್ತಿದ್ದ. ಅವಳು ಕಿಲಕಿಲ ನಕ್ಕಾಗಲೆಲ್ಲ ಅದು ತನ್ನ ಮೇಲಿನ ಪ್ರೀತಿಯಿಂದ ಎಂದು ರೋಮಾಂಚನಗೊಳ್ಳುತ್ತಿದ್ದ. ಹೀಗೊಮ್ಮೆ ಅವಳು ಅವನು ಕಿತ್ತುಕೊಟ್ಟ ಅಲಸಂದೆಕಾಯನ್ನು ಮಡಿಲಿಗೆ ಹಾಕಿಸಿಕೊಂಡು ಎದೆಯ ಮೇಲೆ ಇಳಿಬಿದ್ದಿದ್ದ ಜಡೆಯನ್ನು ಹಿಂದಕ್ಕೆ ಹಾಕಿಕೊಂಡಾಗ ಅದು ಅವನ ಎದೆ ಸವರಿ ಅವಳ ಬೆನ್ನಿನ ಹಿಂದೆ ತೂಗಾಡಿತು.

ಆಗ ಅವನಿಗೆ ಅದು ಅವಳ ಪ್ರೀತಿಯ ಸಂಕೇತವಾಗಿ ಕಂಡಿತ್ತು. ಎದೆಯಲ್ಲಿ ಡವಡವ ಹೆಚ್ಚಿತ್ತು. ಏನೋ ಸುಸ್ತು. 'ಚಿನ್ನೀ' ಎಂದು ಮೆಲ್ಲಗೆ ಕರೆದ. ಅವಳು 'ನರಸಿಂಗೂ' ಎಂದಳು. ನಕ್ಕಳು. ನರಸಿಂಗರಾಯ ಅವಳನ್ನು ಗೆದ್ದುಬಿಟ್ಟೆ ಎಂದು ಬೀಗಿದ್ದ. ಅವಳಿಗೆ ಪ್ರೀತಿಯ ಕಾಣಿಕೆಯಾಗಿ ಮಾಲೂರು ಸಂತೆಯಿಂದ ಪೌಡರ್ ಡಬ್ಬಿ ತಂದು ಕೊಡಲು ಅಪ್ಪನ ಜೇಬಿನಿಂದ ಎರಡು ರುಪಾಯಿ ನೋಟನ್ನು ಎಗರಿಸಿದ್ದ.
ತಂದುಕೊಟ್ಟು, ನಾಳೆ ಹಚ್ಚಿಕೊಂಡು ಬಾ ಎಂದ. ಅವಳು ತೆಗೆದುಕೊಳ್ಳುತ್ತ ಕಣ್ಣು ಮಿಟುಕಿಸಿದಳು. ನರಸಿಂಗರಾಯ ಸ್ವರ್ಗಕ್ಕೆ ಜಿಗಿದಿದ್ದ. ಚಿನ್ನಕ್ಕ ಮಾರನೇ ದಿನ ಆ ಪೌಡರನ್ನೇ ಪೂಸಿಕೊಂಡು ನಂಜಾರೆಡ್ಡಿಯ ಮುಂದೆ ಕುಳಿತಳು. ಅವನು ಮೆಚ್ಚಿಕೊಂಡ. ಮದುವೆಯೂ ಆಯಿತು. ನರಸಿಂಗರಾಯ ತೊಗರಿ ಗಿಡವನ್ನು ಅಪ್ಪಿಕೊಂಡು ಅತ್ತ.
ನರಸಿಂಗರಾಯ ಮತ್ತೆ ಮತ್ತೆ ಚಿನ್ನಕ್ಕನ ಇಡೀ ರೂಪಾಕೃತಿಯನ್ನು ಕಲ್ಪಿಸಿಕೊಳ್ಳಲು ಪ್ರಯತ್ನಿಸಿದ. ಆದರೆ ಅವನ ಕಣ್ಣಿಗೆ ಕಟ್ಟುತ್ತಿದ್ದುದು ಅವಳ ಬೆನ್ನಿನ ಭಾಗದ ಬ್ರಾ ಮಾತ್ರ.












Click it and Unblock the Notifications