ನರಸಿಂಗರಾಯನಿಗೆ ಆ ಸುಖದುಸಿರು ಪ್ರಣಯ ಗೀತೆಯಾಗಿ ಧ್ವನಿಸುತ್ತಿತ್ತು
'ಸುಖನಿದ್ರಾನ್ ಆವಾಹಯಾಮಿ' ಎಂದು ಮೂರು ಸಲ ಹೇಳಿಕೊಂಡು ಕಣ್ಣು ಮುಚ್ಚಿದರೂ ನಿದ್ದೆ ಹತ್ತದ ನರಸಿಂಗರಾಯ, ಮಂತ್ರೋಚ್ಚಾರಣೆಯಲ್ಲಿ ತಪ್ಪಿತ್ತೇ ಅಂದುಕೊಂಡು ಮತ್ತೊಮ್ಮೆ ನೆನಪಿಸಿಕೊಂಡ. ಅದು ಹಾಗೆಯೇ ಬಂದಿತು. ಅದನ್ನು 'ಸುಖ ನಿದ್ರೆಯನ್ನು ಆವಾಹಿಸುತ್ತಿರುವೆ' ಎಂದು ಅನುವಾದಿಸಿಕೊಂಡು ಮೂರು ಬಾರಿ ಉಚ್ಚರಿಸಿದ.
ಆಗಲೂ ನಿದ್ದೆ ಬರಲಿಲ್ಲ. ನೂರೆಂಟು ಸಲ ಜಪಿಸಬೇಕೇನೋ ಅಂದುಕೊಂಡು ಜಪಿಸಿದ. ಸಾವಿರ ಸಲ ಜಪಿಸಿದರೂ ಬಾರೆನು ಎಂಬಂತೆ ನಿದುರಮ್ಮ ಕಣ್ಣಿನೊಳಗೆ ಸುಳಿಯಲಿಲ್ಲ.
ಸರ್ಪಪ್ರಣಯದ ದಶ್ಯಗಳು ಕಣ್ಣ ಮುಂದೆ ಚಲಿಸುತ್ತಿದ್ದವು. ಅವು ಬಿಡುತ್ತಿದ್ದ ಸುಖದುಸಿರು ಪ್ರಣಯ ಗೀತೆಯಾಗಿ ಧ್ವನಿಸುತ್ತಿತ್ತು. ಮಂಪರು ಮಂಪರು. ತಾನು ನಾಗನಾದಂತೆ, ಎಸ್‍ಎಲ್ಸಿ ಲಕ್ಷ್ಮಿಯೋ, ಗೌರಿಯೋ, ಸುನಂದಳೋ ತಿಳಿಯುತ್ತಿಲ್ಲ ನಾಗಿನಿಯಾದಂತೆ, ಕೇದಗೆ ವನದಲ್ಲಿ ಎಣೆಯಾಡಿದಂತೆ ಕನಸು. ಎಚ್ಚರ. ನಿದ್ದೆ ಬರದು. ಹೊರಳಾಟ.

ಲಕ್ಷ್ಮಿಯನ್ನು ಪ್ರೀತಿಸಿಬಿಡಬೇಕಿತ್ತು, ಗೌರಿಯಿಂದ ಓಡಿ ಬರಬಾರದಿತ್ತು. ಅವಳು ಬಿಟ್ಟ ಉಸಿರು ಹಾವುಗಳ ಉಸಿರಿನಂತೆಯೇ ಇತ್ತಲ್ಲ. ಸುನಂದಳ ಅಮಲೇರಿದ ಕಣ್ಣುಗಳನ್ನು ಚುಂಬಿಸಿ... ಛೀ ನಾನೆಂಥ ಗಂಡಸು ಎಂದು ತೆಗಳಿಕೊಂಡ.
ಚಿನ್ನಕ್ಕ ನೆನಪಿಗೆ ಬಂದಳು. ಅವಳು ಹಾಗೆ ಮಾಡದೆ ಹೋಗಿದ್ದರೆ ನಾನು ಈ ಯಾರನ್ನೂ ಬಿಡುತ್ತಿರಲಿಲ್ಲವೇನೊ ಅನ್ನಿಸಿತು. ಅವಳು ಮಾಡಿದ್ದು ಸರಿಯೇನೊ? ಒಪ್ಪಿದ್ದರೆ ತಾನೆ ಆ ವಯಸ್ಸಿನಲ್ಲಿ ಮದುವೆ ಎಲ್ಲಿ ಆಗುತ್ತಿದ್ದೆ? ಅನುಭವಿಸಬಹುದಿತ್ತಷ್ಟೆ. ಯೋಚನೆ ದಾರಿ ತಪ್ಪಿದ್ದು ಅನ್ನಿಸಿದಾಗ ಮುನೆಕ್ಕ ನೆನಪಾದಳು. ಅವಳ ಮಾತು, ಹೇಳಿದ ಕಥೆ ಮನಸ್ಸಿನಲ್ಲಿ ಸುಳಿಯಿತು.
ತಾನು ಗಂಡಸಲ್ಲವೆ ಎಂದುಕೊಂಡಿದ್ದನ್ನು ಮೈ ಕಾವು ನರಗಳ ಬಿಗಿತ ಸುಳ್ಳೆಂದು ಸಾರಿದವು. ತನ್ನೀ ಅನುಮಾನವನ್ನು ಪರಿಹರಿಸಿದ ಎಣೆಯಾಡಿದ ಸರ್ಪಗಳ ಬಗ್ಗೆ ಕೃತಜ್ಞತೆ ಮನದಲ್ಲಿ ಮೂಡಿತು. ಈ ಭಾವದಲ್ಲಿದ್ದಾಗ, ನಿನ್ನ ಮಂತ್ರ ಜಪಕ್ಕೆ ಒಲಿದೆನೆಂಬಂತೆ ನಿದ್ದೆ ಆವರಿಸಿತು.
ಕನಸು. ಹುಣ್ಣಿಮೆ ಇರುಳು. ತಾನು ನಾಗ, ತನ್ನ ತಲೆಯಲ್ಲಿ ಸೂರ್ಯ ಪ್ರಭೆ ಮೀರಿದ ನಾಗಮಣಿ. ಅದಕ್ಕೆ ಆಕರ್ಷಿತಳಾದ ನಾಗಿಣಿ ಕಾಮಕಸ್ತೂರಿ ಪೂಸಿಕೊಂಡು ಕೇದಗೆ ಪೊದೆಯಿಂದ ನಾಗಪ್ರಣಯ ಗೀತೆ ಹಾಡುತ್ತ ಬರುತ್ತಿದ್ದಾಳೆ....
ನರಸಿಂಗರಾಯನಿಗೆ ಎಚ್ಚರವಾದಾಗ ಬೆಳ್ಳನೆ ಬೆಳಗಾಗಿತ್ತು.












Click it and Unblock the Notifications