ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರಸಿಂಗರಾಯನಿಗೆ ಮಾತಂಗಿಯ ಮೌನ ಸೌಂದರ್ಯದ ಸಾಕ್ಷಾತ್ಕಾರ

By ಸ ರಘುನಾಥ, ಕೋಲಾರ
|
Google Oneindia Kannada News

ರಾತ್ರಿಯ ಕನಸಿನ ಮಾಯಕ ಸುಖದಲ್ಲಿದ್ದ ನರಸಿಂಗರಾಯ ಎದ್ದಾಗ ಒಂಬತ್ತು ಗಂಟೆ. ನಿನ್ನೆಯ ಪ್ರಸಂಗದಿಂದಾಗಿ ಯಾರೂ ಅವನನ್ನು ಎಬ್ಬಿಸಿರಲಿಲ್ಲ. ಮನೆಯ ಮುಂದೆ ಹಾಕಿದ್ದ ಹುಲ್ಲನ್ನು ದನಗಳು ಮೇಯುತ್ತಿದ್ದವು. ಅಪ್ಪ ಕೆಲಸದ ಮೇಲೆ ಮಾಲೂರಿಗೆ ಹೋಗಿಯಾಗಿತ್ತು. ಅಮ್ಮ ಅಡುಗೆಮನೆಯಲ್ಲಿದ್ದಳು. ಲಚ್ಚಿ, ಮಾತಂಗಿಯರು ಕಾಣಿಸಲಿಲ್ಲ.

ಜಗುಲಿಯಲ್ಲಿ ಕುಳಿತ. ಮನಸ್ಸಿನಲ್ಲಿ ರಾತ್ರಿ ಕಂಡ ಕನಸಿನ ರಂಗಿನಾಟ. ಭಾರವಾದುದೇನೋ ಹೊರ ಹೋದ ಹಗುರತೆ. ಎಂದೂ ಈ ಅನುಭವವಿಲ್ಲ. ಶಕುಂತಲೆ ನಾಟಕವಾಡಿಸುವ ಸಲುವಾಗಿ ಲಹರಿ ಬಂದಾಗ ಕಟ್ಟಿದ ಪದ್ಯ ನೆನಪಾಯಿತು.

ಹಾಲಿನ ಕಡಲು ನದಿಯಾಗಿ ದಿವಿಯಿಂದ ಬುವಿಯಲ್ಲಿ

ಹರಿವ ಬಳುಕು ಕುಲುಕು ಒಯ್ಯಾರ ಸಲುವಳಿಯಾಗಿ

ನಿನಗೆ ರೂಪವನಿತ್ತು ಧನ್ಯವಾದಂತಿಹುದು ಶಕುಂತಲೆ

ಅದಕೆ ಆ ಚೆಲುವು ಮೆರೆಯುತಿಹುದು ನಿನ್ನ ಮೈಯಾಗಿ

ಮಾತಂಗಿಯ ನಾಗಬಂಧದಲ್ಲಿ ನರಸಿಂಗರಾಯನಿಗೆ ಮೊದಲ ಸ್ವಪ್ನಸ್ಖಲನಮಾತಂಗಿಯ ನಾಗಬಂಧದಲ್ಲಿ ನರಸಿಂಗರಾಯನಿಗೆ ಮೊದಲ ಸ್ವಪ್ನಸ್ಖಲನ

ಚಲುವಿನ ಹೋಲಿಕೆಗೆ ಪದ್ಯ ಸರಿ. ಆದರೆ ಬಣ್ಣ? ಉತ್ಪ್ರೇಕ್ಷೆಯಾಗುವುದು. ಪದ್ಯ ಮಾತಂಗಿಗೆ ಹೊಂದದು. ನರಸಿಂಗರಾಯ ಮಾತಂಗಿಯ ಮೇಲೆ ಪದ್ಯ ಕಟ್ಟುವ ಹಠಕ್ಕೆ ಬಿದ್ದ. ಆದರೆ ಸೋತ. ಆ ಕ್ಷಣಕ್ಕೆ ಸೋತ. ಪದ್ಯ ಬಾರದ ಮೊಂಡುತನಕ್ಕೆ ಮೊಂಡನಾಗಿ, ಪದ್ಯ ಕಟ್ಟಿ, ಮಾತಂಗಿಯನ್ನು ಮೆಚ್ಚಿಸುವ ಪ್ರತಿಜ್ಞೆ ಮಾಡಲಿರುವಾಗ ದನದ ಕೊಟ್ಟಿಯಿಂದ ಸರಸರ ಸಪ್ಪಳ ಹೊರಬರುತ್ತಿತ್ತು.

Kannada Short Story: Narasingaraya Fell In Love With Matangi

ದನಕರುಗಳತ್ತ ನೋಡಿದ. ಎಲ್ಲವೂ ಅಂಗಳದಲ್ಲಿಯೇ ಇದ್ದವು. ಯಾವುದಾದರೂ ತುಡುಗು ದನ- ಕರು ಕೊಟ್ಟಿಗೆ ಹೊಕ್ಕಿ ಮೇಯುತ್ತಿರಬಹುದು ಎಂದು ಹಿಡಿದು ಕಟ್ಟಿ ಹಾಕಲು ಮೆಲ್ಲಗೆ ಹೆಜ್ಜೆ ಹಾಕಿದ.

ನೆಲ್ಲು ಹುಲ್ಲಿನ ಗುಡ್ಡೆಯ ಮೇಲೆ ಮಾತಂಗಿ ಸೆರಗನ್ನು ಹರಡಿ ಮಲಗಿದ್ದಳು. ಬಿಸಿಲು ಛಾವಣಿಯ ತಗಡಿನ ಒಂದು ರಂಧ್ರದಿಂದಿಳಿದು ಬಿಸಿಲಕೋಲಾಗಿತ್ತು. ಮಾತಂಗಿ ಅದನ್ನು ತನ್ನ ಮೈ ಮೇಲೆ ಹರಿದಾಡಿಸುವ ಆಟದಲ್ಲಿದ್ದಳು. ನರಸಿಂಗರಾಯ ನಿಶ್ಚಲ ವಿಗ್ರಹದಂತೆ ನಿಂತ.

ದುಂಡಗಿನ ಬೆಳಕು ಅವಳ ಬಲಗಾಲಿನ ಕಾಲುಂಗುರ ಬೆರಳಿನ ಮೇಲೆ ಬೆಳ್ಳಿಯುಂಗುರವಾಗಿತ್ತು. ಕೆಳಕ್ಕೆ ಸರಿದಳು. ಅದು ಅವಳ ಹೊಕ್ಕುಳಿಗೆ ಬಂದಿತ್ತು. ಹೊಕ್ಕುಳು ಹಾಲಿನ ಕುಡಿಕೆಯಂತೆ ಕಾಣುತ್ತಿತ್ತು. ಕೊಂಚವೇ ಕೆಳ ಸರಿದಳು. ಅದು ಅವಳ ರವಿಕೆಯ ಅಂಚಿನಲ್ಲಿ ನಿಂತಿತು. ರವಿಕೆ ಅಡಿಯಿಂದ ಹೊರಗಿಣುಕವ ಪದಕದಂತೆ ಕಂಡಿತು.

ಇನ್ನಷ್ಟು ಸರಿದಳು. ಬಿಸಿಲಕೋಲು ಅವಳೆರಡು ಮೊಲೆಗಳ ನಡುವೆ ಅರಳಿ, ಅಲ್ಲೊಂದು ಪ್ರಭಾವಳಿಯನ್ನು ನಿರ್ಮಿಸಿತು. ಕಪ್ಪು ತುಟಿಗಳ ಮಧ್ಯೆ ಬಿಸಿಲಕೋಲು. ಬೆಣ್ಣೆ ತಿಂದ ರಾಧೇಯ ತುಟಿಗಳವು ಅನ್ನಿಸಿ, ಕೃಷ್ಣನಾಗಿ ತುಟ್ಟಿಯೊತ್ತಲೆ ಅನ್ನಿಸಿತು. ಅವಳ ಏರಿಳಿವ ಎದೆ ಅವನ ಎದೆ ಬಡಿತ ಹೆಚ್ಚಿಸಿತು. ತುಟಿಯೊಣಗಿತು.

ಮುಂಭಾರವಾಗಿ ಮುಗ್ಗರಿಸುವಳೇನೋ ಅನ್ನಿಸುವಂಥ ಮಾತಂಗಿ ದರ್ಶನಮುಂಭಾರವಾಗಿ ಮುಗ್ಗರಿಸುವಳೇನೋ ಅನ್ನಿಸುವಂಥ ಮಾತಂಗಿ ದರ್ಶನ

ಮಾತಂಗಿ ಇನ್ನಷ್ಟು ಕೆಳಗೆ ಜಾರಿದಳು. ಬಿಸಿಲಕೋಲು ಅವಳ ಹಣೆ ಮೇಲೆ. ಕಾಸಗಲದ ಕೆಂಪು ಕುಂಕುಮ ಬೊಟ್ಟಿನ ಮಧ್ಯೆ. ಕೆಂಬಿಳಿ ಬೆಳಕು ಅವಳ ಮಖದ ಮೇಲೆ ಪ್ರತಿಫಲಿಸಿ ರತಿ ಕಾಂತಿ ಹೀಗಿರುವುದೇನೊ ಅನ್ನಿಸಿತು. ನರಸಿಂಗರಾಯ ಮೋಹವಶನಾದ.

ಮುಂದಡಿಯಿಡಲು ಕಾಲೆತ್ತಿ, ಇಳಿಸಿ ನಿಂತ. ಬಿಸಿಲಕೋಲ ಬೆಳಕೀಗ ಬೊಟ್ಟಿನ ಸುತ್ತ. ಚಂದ್ರ ಅದರಡಿ ಅಡಗಿ, ಬೆಳ್ಳಿಕಾಂತಿಯ ವಲಯ ರಚಿಸಿದಂತಿತ್ತು. ಮಾತಂಗಿ ಕೊಂಚವೇ ಕೊಂಚ ಮೇಲಕ್ಕೆ ಸರಿದಳು. ಆ ಎಂದು ಬಾಯಿ ತೆರೆದಳು. ಬಿಸಿಲ ಕೋಲೀಗ ಅವಳ ಬಾಯಿ ತುಂಬ. ಅವಳು ಬೆಳಕನ್ನು ಕುಡಿಯುತ್ತಿದ್ದಾಳೆ ಅನ್ನಿಸಿತು.

ಅವಳು ಅಲೌಕಿಕ ಸುಂದರಿ. ತನ್ನವಳಾದರೆ ನಾನು ಧನ್ಯ ಅಂದುಕೊಂಡ. ಅಮ್ಮ- ಅಪ್ಪನಿಗೆ ಹೇಳಿ ಒಪ್ಪಿಸಬೇಕು ಅಂದುಕೊಳ್ಳುತ್ತಿದ್ದಾಗ, 'ಅಲ್ಲಿ ನಿಂತೇನು ನೋಡುತ್ತಿದ್ದೀಯ?' ಎಂದು ಅಮ್ಮ ಕೂಗಿದ್ದು ಕೇಳಿಸಿತು. ಅದು ಮಾತಂಗಿಗೂ ಕೇಳಿಸಿತು. ಬಾಗಿಲತ್ತ ಕೊರಳು ತಿರುಗಿಸಿದಳು. ಅದು ಕರಿನಾಗಿಣಿಯ ಕೊರಳಂತೆ ಕಂಡಿತು. ಗಾಬರಿಯಿಂದ ಎದ್ದು ನಿಂತಳು.

ಆ ತಕ್ಷಣಕ್ಕೆ ಸೆರಗು ಕೈಗೆ ಸಿಗಲಿಲ್ಲ. ನರಸಿಂಗರಾಯನ ಕಣ್ಣೆದುರಲ್ಲಿ ಕನಸಿನಲ್ಲಿ ಕಂಡ ನಾಗಿಣಿಯ ಪ್ರತ್ಯಕ್ಷ ರೂಪ. ಮಾತಂಗಿಯ ಮೌನ ಸೌಂದರ್ಯದ ಸಾಕ್ಷಾತ್ಕಾರ. ಮಾದಕ ಧ್ವನಿಯಲ್ಲಿ 'ನಾಗಿಣಿ' ಎಂದ. ಅವಳು ಗಲಿಬಿಲಿಯಲ್ಲಿ ಕುಕ್ಕರಗಾಲಿನಲ್ಲಿ ಕುಳಿತು ಅವನತ್ತ ಬೆರಗಿನ ಬಟ್ಟಲುಗಣ್ಣು ತೆರೆದಳು.

'ಮಾತಂಗೀ' ಎಂದ. ಅವಳು ಕಣ್ಣು ಮುಚ್ಚಿ ಕುಳಿತಳು. 'ನನ್ನ ಮಾತಂಗಿ' ಎಂದು ಪಿಸುಗುಟ್ಟಿದ. ಅವಳು ಅವನಿಗೆ ಬೆನ್ನು ಹಾಕಿ ಕುಳಿತಳು. ಬಿಳಿ ರವಿಕೆ, ಸೊಂಟ ಬಳಸಿದ ಬಿಳಿಸೀರೆ ನಡುವೆ ಕರಿನಾಗರದ ಮೈಯಂತೆ ಹೊಳೆಯವ ಬೆತ್ತಲೆ ಸೊಂಟದ ಪಾರ್ಶ್ವ, ಬೆನ್ನು. ಹಾಗೆ ಕುಳಿತವಳನ್ನು ಹಾಗೆಯೇ ಎತ್ತಿ ಎದೆಗೊತ್ತಿಕೊಳ್ಳುವ ತುಡಿತ ಮನಸ್ಸಿನಲ್ಲಿ ಹುಟ್ಟಿತು.

'ಮಾತಂಗೀ' ಎಂದು ಮೆಲ್ಲನೆ ಕರೆದ. ಸೊಂಟದವರೆಗೆ ಅವಳ ಬೆನ್ನು ಅಲುಗಾಡಿತು. ಅದು ಮತ್ತೂ ಮೋಹಕವಾಗಿ ಕಂಡಿತು. 'ಇನ್ನೂ ಅಲ್ಲಿ ಏನು ಮಾಡ್ತಿದ್ದೀಯೊ?' ಎಂದು ಅಮ್ಮ ಕಿಟಕಿಯಲ್ಲಿ ಮುಖವಿಟ್ಟು ಕೇಳಿದಳು. ಮರು ಮಾತನಾಡದೆ ನರಸಿಂಗರಾಯ ಹೊಲದತ್ತ ನಡೆದ.

English summary
Kannada romantic story: Narasingaraya fell for beauty of Matangi and loves her. Here is the romantic story series by Sa Raghunatha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X