ಸ. ರಘುನಾಥ ಅಂಕಣ: ಜಾನಪದ ಕಲಾವಿದರ ಬದುಕಿಗೆ ಭಿಕ್ಷಾಟನೆಯೇ ಅಂತಿಮವೆ?
'ಏನಿಮಿಷಾನಿಕಿ ಏಮಿ ಜರುಗುನೋ ಎವರೂಹಿಂಚೆದದೋ...'(ಯಾವ ನಿಮಿಷಕೇನು ನಡೆವುದೋ ಊಹಿಸುವರಾರು- ಸಿನೆಮಾ: ಲವಕುಶ). ಭಲೆ ಮಂಚಿ ರೋಜು ಪಸಂದೈನ ರೋಜು...'(ಭಲೇ ಸುದಿನವು, ಚೆಂದವಾದ ದಿನವು- ಸಿನೆಮಾದ ಹೆಸರು ನೆನಪಿಲ್ಲ). ಹಾಡುಗಳು ಕಿವಿಗೆ ಬಿದ್ದಾಗ ಯಾರಪ್ಪಾ ಈ ಕೊರೊನಾದ ದರ್ಬಾರಿನ ದಿನಗಳಲ್ಲಿ ಹಾಡಲು ಬಂದಿರುವುದೆಂದು ಕುತೂಹಲದಿಂದ ಹೆಜ್ಜೆ ಹಾಕಿದಾಗ, ಶ್ರೀನಿವಾಸಪುರದ ರಾಮಕೃಷ್ಣ ರಸ್ತೆಯ ಟೀ ಅಂಡಿಯ ಮುಂದೆ ಇಬ್ಬರು ತಬಲ, ಹಾರ್ಮಣಿಯೊಂದಿಗೆ ಹಾಡುತ್ತಿದ್ದರು.
ಧ್ವನಿ ಭಿಕ್ಷುಕರ ಧ್ವನಿಯಂತೆ ಒಡಕೊಡಕಾಗಿರಲಿಲ್ಲ. ನನ್ನ ಅನುಭವದಂತೆ ಅವರು ಬಿದಿಭಾಗವತರೋ, ತೊಗಲು ಗೊಂಬೆಯವರೋ, ದಬ್ಬ ಬೈಸ್ಕೋಪಿನವರ ಮನೆತನದವರೋ, ಆಗಿರಬೇಕೆಂದುಕೊಂಡು ಹತ್ತಿರ ಹೋಗಿ ನಿಂತೆ. ಅವರಿಗೆ ಟೀ ಕುಡಿಸಿ ಪರಿಚಯ ಮಾಡಿಕೊಂಡು ಮಾತಿಗೆಳೆದೆ. ಅವರು ಪಾವಗಡದಿಂದ ಹಾಡುತ್ತ ಊರಿಂದೂರಿಗೆ ಬಂದ ತೊಗಲುಗೊಂಬೆ ಕಲಾವಿದರಾಗಿದ್ದರು.
ಅವರ ಹಿರಿಯರು ಕೋಲಾರ ಜಿಲ್ಲೆಯಲ್ಲಿದ್ದು, ಆಟ ಸಿಗದೆ ಪಾವಗಡಕ್ಕೆ ಹೋಗಿ ನೆಲೆಸಿದ್ದರು. ಸಂಬಂಧಿಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬೊಮ್ಮಲಾಟಪುರ, ಗುಡಿಬಂಡೆ, ಆಂಧ್ರದ ಅನಂತಪುರಂನ ಲೇಪಾಕ್ಷಿ, ನಿಮ್ಮಲಕುಂಟದಲ್ಲಿದ್ದಾರೆ. ಗೌನಿಪಲ್ಲಿಯಲ್ಲಿ ಮಾರಪ್ಪನವರ ಮರಣದ ನಂತರ ಒಂದೂ ಕುಟುಂಬವಿರಲ್ಲ.

ಬೊಮ್ಮಲಾಟಪುರದ ಶಂಕರಪ್ಪ- ಆಂಜಮ್ಮ (ಎಲ್. ಬಸವರಾಜು ಪ್ರತಿಷ್ಠಾನ- 2016 ಪ್ರಶಸ್ತಿ ಪಡೆದಾಕೆ), ಶ್ರೀನಿವಾಸ- ಸುಮಲತ ಮತ್ತು ನಾಕಾರು ಕುಟುಂಬಗಳು ಸಂಕ್ರಾಂತಿ ಮುಗಿದೊಡನೆ ತೊಗಲುಗೊಂಬೆಗಳನ್ನು ಹೊತ್ತು ಶ್ರೀನಿವಾಸಪುರ ತಾಲೂಕಿನ ಹಳ್ಳಿಗಳಲ್ಲಿ ಪ್ರದರ್ಶನಕ್ಕಾಗಿ ತಿರುಗಾಡುವುದುಂಟು. ಅದೃಷ್ಟವಿದ್ದು ಆಟ ಕೊಟ್ಟಲ್ಲಿ ಪ್ರದರ್ಶನ, ಬೆಳಗ್ಗೆ ಮನೆಗಳ ಮುಂದೆ ದವಸಾಟನೆ. ಇವರ ಹಾಗೂ ಪಾವಗಡದಿಂದ ಬಂದಿದ್ದವರ ಕ್ರಿಯೆಯಲ್ಲಿ ಯಾವ ವ್ಯತ್ಯಾಸವೂ ಇರದು.
ಪಾವಗಡದಿಂದ ಬಂದ ಬೊಮ್ಮಲಾಟಲ ಜಗದೀಶ, ಮುತ್ಯಲುರು 'ಪೆದ್ದ ಬಾಲಶಿಕ್ಷ' ಓದಿಕೊಂಡವರು ಕುಲವೃತ್ತಿಯನ್ನು ಕೈ ಹಿಡಿದು ಕಲೆಯೊಂದಿಗೆ ಬಡತನವನ್ನು ಹೊದ್ದವರು. 'ಮೇಮು ಇಕ್ಕಡಿ ತಳಾದಾರ್ಲು' (ನಾವು ಇಲ್ಲಿನ ಸ್ಥಳವಂದಿಗರು) ಅದಕ್ಕಾಗಿಯೇ ಬರುತ್ತೇವೆ ಎನ್ನುವ ಇವರು, ಇಲ್ಲಿ ಅಲೆದಾಡಿದಷ್ಟು ದಿನ ಹಾಡುತ್ತ ಭಿಕ್ಷೆ ಬೇಡುತ್ತಾರೆ. ಮಳೆಗಾಲದ ಹೊತ್ತಿಗೆ ಊರು ಸೇರಿಕೊಳ್ಳುತ್ತಾರೆ. ಇವರಲ್ಲಿ ಅನೇಕರು ಇಂದಿಗೂ ಮನೆಮಾರು ಇಲ್ಲದವರು.

ಇವರಂತೆ ಹಾಡಿ ತಿರುಪೆ ಪಡೆಯುವವರು ಮದನಪಲ್ಲೆ, ಕೃಷ್ಣಗಿರಿ, ಹೊಸೂರು, ಬೇರಿಕಿ ಕಡೆಗಳಿಂದಲೂ ಬರುತ್ತಾರೆ. ಇವರು ಹೆಚ್ಚಿಗೆ ಹಾಡುವುದು ಘಂಟಸಾಲ ಅವರ ಹಾಡುಗಳನ್ನು. ಬಹುಮಂದಿ ಭಿಕ್ಷುಕರು ಘಂಟಸಾಲರನ್ನು 'ಪಾಟಲ ದೇವುಡು' (ಹಾಡುಗಳ ದೇವರು) ಎಂದು ಭಕ್ತಿ ಗೌರವದಿಂದ ಸ್ಮರಿಸುತ್ತಾರೆ. ಹೆಂಗಸರು ಜೊತೆಗಿದ್ದರೆ ಘಂಟಸಾಲ- ಪಿ. ಸುಶೀಲ ಅವರ ಹಾಡುಗಳನ್ನೇ ಹಾಡುವುದು. ಇಂಥವರೂ ಸುಲಭವಾಗಿ ಹಾಡುವಂತಹ ನೂರಾರು ಹಾಡುಗಳನ್ನು ಅವರು ಹಾಡಿರುವುದರಿಂದಲೇ ಅವರು ಇವರಿಗೆ ದಶಕಗಳಿಂದ 'ಪಾಟಲ ದೇವುಡು' ಆಗಿ ಜೀವಂತವಾಗಿದ್ದಾರೆ.

ಘಂಟಸಾಲ ಇಂತಹವರಿಗೆ, ತಿರುಪೆಯವರಿಗೆ ಹಾಡುಗಳನ್ನು ಕೊಟ್ಟು ಋಣ ತೀರಿಸಿಕೊಂಡರು. ಆದರೆ ನಾವು ಇವರನ್ನು ಭಿಕ್ಷೆಗೆ ಬಿಟ್ಟು, ಆಟ ಪ್ರದರ್ಶಿಸುವ ಅವಕಾಶಗಳನ್ನೂ ಕುಗ್ಗಿಸುತ್ತ ಭಿಕ್ಷಕ ಬದುಕಿಗೆ ದೂಡುತ್ತಿದ್ದೇವೆ. ಇಂತಹ ಕಲಾವಿದರ ಬದುಕಿಗೆ ಭಿಕ್ಷಾಟನೆಯೇ ಅಂತಿಮವೆ? ಎಂಬ ಪ್ರಶ್ನೆಯ ಉತ್ತರವನ್ನು ಮುಂದೂಡುತ್ತಲೇ ಇದ್ದೇವೆ. ಜಾನಪದದ ಹೆಸರಿನ ಸಂಸ್ಥೆಗಳ, ವಿಶ್ವವಿದ್ಯಾಲಯಗಳ ವೈಭವಗಳನ್ನು ಇಂತಹ ಜಾನಪದ ಕಲಾವಿದರ ದೀನ ಬದುಕುಗಳು ಬೀದಿ ಬೀದಿಗಳಲ್ಲಿ ಅಣಕಿಸುತ್ತಿವೆ.












Click it and Unblock the Notifications