ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಗಳ ಲಗಾಮನ್ನು ಕಚ್ಚಿಕೊಂಡಿದೆ ಕೊರೊನಾ ಎಂಬ ಈ ಹುಚ್ಚು ಕುದುರೆ

By ಸ.ರಘುನಾಥ, ಕೋಲಾರ
|
Google Oneindia Kannada News

ಕರ್ನಾಟಕ, ಏಪ್ರಿಲ್ 06: ಹಕ್ಕುಗಳಿಗಾಗಿ ಹೋರಾಡುವುದಕ್ಕೆ ಅರ್ಥವಿದೆ. ಆ ಹಕ್ಕುಗಳಿಂದ ಪ್ರಾಪ್ತವಾಗುವ ಅವಕಾಶಗಳಿಗಾಗಿ ಹೋರಾಡುವುದು ಅವಮಾನಗಳಿಂದ ಕೂಡಿದ್ದು, ಇದರಲ್ಲಿ ಅಸಹಾಯಕತೆ, ದೀನತೆಯೂ ಇರುತ್ತದೆ. ಈ ನೋವು ಅಂಗಲಾಚುವಿಕೆಯಲ್ಲಿ ಕಾಣಿಸಿಕೊಳ್ಳುತ್ತದೆ.

ಇಂಥ ಪ್ರಸಂಗಗಳು ಇದ್ದುದೇ ಆದರೂ ಸಾಮಾನ್ಯ ದಿನಗಳಲ್ಲಿ ಅಷ್ಟೊಂದು ತೀವ್ರವಾಗಿ ಮನಕಲಕದು. ಜೀವಭಯ, ಹಸಿವೆ, ಅಭದ್ರತೆಯ ಕಾಲದಲ್ಲಿ ಈ ಎಲ್ಲವೂ ಅಸಹಾಯಕ ಬದುಕುಗಳಿಗೆ ನರಕವಾಗಿಬಿಡುತ್ತದೆ. ಬದುಕಿನ ಕ್ಷಣ ಕ್ಷಣವೂ ಭಯಕ್ಕೆ ಬೀಳಿಸುತ್ತಿರುವ ಈ ಕೊರೊನಾ ಕಾಟದ ದಿನಗಳಲ್ಲಿ ಬಡ ಕೂಲಿಕಾರ, ನಿರ್ವಸಿತ ಜನರ ಜೀವನ ಪಡೆದುಕೊಂಡ ಅನಿರೀಕ್ಷಿತ ತಿರುವು ನರಕವನ್ನು ಸೃಷ್ಟಿಸಿಬಿಟ್ಟಿದೆ.

ಆದರೆ ಇದನ್ನು ತೀವ್ರವಾಗಿಸುವ ವ್ಯವಸ್ಥೆ, ಅದರ ನಿರ್ವಾಹಕರ ಅಸಡ್ಡೆ ಯಾವ ಸೀಮೆಯ ನ್ಯಾಯ ಎಂಬ ಪ್ರಶ್ನೆಯನ್ನು ಆಡಳಿತದ ಮುಖಕ್ಕೆ ರಾಚುತ್ತಿದೆ.

ಮಾರ್ಚ್ 22 ರಂದು ಜನತಾ ಕರ್ಫ್ಯೂ ವಿಧಿಸಿದಾಗ, ಅದು ಭಾರತ ಲಾಕ್ ಡೌನ್ ಸೂಚನೆಯ ಸುಳಿವು ಕೊಡುತ್ತಿರುವಾಗ ಸಾವಿರಾರು ಕೂಲಿಕಾರರು, ಹೊತ್ತಿನ ತುತ್ತಿಗಾಗಿ ಬೆವರು ಸುರಿಸುತ್ತಿದ್ದವರು ಅಧೀರಗೊಂಡು ಗುಬ್ಬಚ್ಚಿಗಳಾದರು.

ಊರುಗಳತ್ತ ಮುಖ ಮಾಡಿದ ಜನರು

ಊರುಗಳತ್ತ ಮುಖ ಮಾಡಿದ ಜನರು

ಬೆಂಗಳೂರಿನ ಮತ್ತು ರಾಷ್ಟ್ರದ ಮಹಾನ್ ನಗರಗಳಲ್ಲಿ ಮುದುಡಿಕೊಂಡಿದ್ದ ಈ ಜೀವಿಗಳಿಗೆ ಇದ್ದಕ್ಕಿದ್ದಂತೆ ಊರುಗಳಿಗೆ ಹೋಗುವವರು ಹೋಗಬಹುದೆಂದು ಹೊತ್ತಲ್ಲದ ಹೊತ್ತಿನಲ್ಲಿ ಪ್ರಕಟಿಸಿದ್ದರಲ್ಲಿ ಪರಿಣಾಮಗಳ ಅರಿವಿರಲಿಲ್ಲ. ಇಷ್ಟಾದರೆ ಸಾಕಪ್ಪಾ ಅಂದುಕೊಂಡವರು ಮಕ್ಕಳ ಸಹಿತ ಪರಿವಾರಗಳೊಂದಿಗೆ ಬಟ್ಟೆಬರೆ, ಖಾಲಿ ಹೊಟ್ಟೆ, ತಣ್ಣಗಿನ ಪಾತ್ರೆಪರಡಿಗಳೊಂದಿಗೆ ತಮ್ಮ ಊರುಗಳ ದಿಕ್ಕುಗಳನ್ನು ಹುಡುಕಿ ಹೊರಟರು. ಊರುಗಳ ದಾರಿಗಳು ಕಂಡವು.

ಹಸಿವು, ಬಾಯಾರಿಕೆಯಿಂದ ಕಂಗೆಟ್ಟ ಜನರು

ಹಸಿವು, ಬಾಯಾರಿಕೆಯಿಂದ ಕಂಗೆಟ್ಟ ಜನರು

ಆದರೆ ಹೋಗುವ ಎಲ್ಲ ವ್ಯವಸ್ಥೆಗಳೂ ಬಂದಾಗಿದ್ದವು. ಬೇಡಿಕೊಂಡರೂ, ಗೋಗರೆದರೂ ವಾಹನ ವ್ಯವಸ್ಥೆ ಮಾಡುವ ಹೊಣೆಗಾರರೊಬ್ಬರನ್ನೂ ಕಾಣದೆ ಕಂಗಾಲಾಗಿ, ಸಂತೆಗೆ ಕರುಗಳನ್ನು ಎಳೆದುಕೊಂಡು ಹೋಗುವಂತೆ ಮಕ್ಕಳ ಕೈ ಹಿಡಿದೆಳೆಯುತ್ತ ಕಾಲುನಡಿಗೆ ಆರಂಭಿಸಿದರು. ಎಷ್ಟು ದೂರ? 100, 200... 400.. ಕಿಲೋಮೀಟರುಗಳಿಗೂ ಹೆಚ್ಚು ದೂರ. ಹೊಟ್ಟೆಗಳಲ್ಲಿ ಹಸಿವು, ಬಾಯಾರಿಕೆ. ನೆತ್ತಿಯ ಮೇಲೆ 30 ಡಿಗ್ರಿ ಸೆಲ್ಸಿಯಸ್ ಗೂ ಅಧಿಕ ತಾಪದ ಬಿಸಿಲ ಜ್ವಾಲೆ.

ಸಿಕ್ಕ ಸಿಕ್ಕ ವಾಹನಗಳನ್ನು ಹತ್ತಿದರು

ಸಿಕ್ಕ ಸಿಕ್ಕ ವಾಹನಗಳನ್ನು ಹತ್ತಿದರು

ಹಲವರದು ಬರಿಗಾಲು, ಕೆಲವರದು ಧೂಳು, ಸಿಮೆಂಟು ಕಚ್ಚಿ ಹಿಡಿದ ಹಳೇ ಚಪ್ಪಲಿಗಳು. ಹಸಿವು, ಬಾಯಾರಿಕೆ ಹೊತ್ತವರ ಹೆಗಲುಗಳಲ್ಲಿ ಗಂಟುಮೂಟೆ, ನಡೆಯಲಾಗದ ಕಂದಮ್ಮಗಳು. ಇವು ಸಾಲದೆಂಬಂತೆ ತಡೆಗಳು, ನಿರ್ಬಂಧಗಳು. ಸಿಕ್ಕ ವಾಹನಗಳಲ್ಲಿ ಸಂತೆಗಳಲ್ಲಿ ಕೊಂಡ ಕುರಿಗಳನ್ನು ತುಂಬಿದ ವ್ಯಾನುಗಳಲ್ಲಿ ಕಾಣುವಂಥ ದೃಶ್ಯ. ಆಗ ಕೆ.ಎಸ್.ನಿಸಾರ್ ಅಹಮದ್ ರ ‘ನಾಡದೇವಿಯೆ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯ' ಎಂಬ ಕವಿತೆ ಹಲವಾರಿಗಾಗದರೂ ನೆನಪಿಗೆ ಬಂದಿರಬೇಕು.

ವಾಪಸ್ ಹೋಗಲೂ ಆಗದೇ ಪರದಾಟ

ವಾಪಸ್ ಹೋಗಲೂ ಆಗದೇ ಪರದಾಟ

ಪಾಡಿನೊಂದಿಗೆ ಪಾಡುಪಡುತ್ತ, ಇದೂ ಇತ್ತೇ ನಮ್ಮ ಹಣೆಯ ಬರಹದಲ್ಲಿ ಎಂದು ಕಣ್ಣಿನಿಂದ ಕೊಡ ಕಣ್ಣೀರು ಸುರಿಸುತ್ತ ಊರುಗಳು ಕಂಡಾಗ ನಿಟ್ಟುಸಿರು ಬಿಟ್ಟು, ಊರು ಗಡಿಗೆ ಬಂದಾಗ ಜೀವಗಳು ತಲ್ಲಣಿಸಿದವು. ತವರು ಬಾಗಿಲಲಿ ಬೇಲಿ! ದಾರಿಯಲ್ಲೇ ಕಣ್ಣೀರು ಬತ್ತಿತ್ತು. ಧ್ವನಿಗಳು ಸೊರಗಿದ್ದವು. ದುಃಖ ಎದೆಗಳಲ್ಲೇ ಬಿಕ್ಕು ತಂದಿತು. ಹೋಗಲಿ ಬದುಕು ಹುಡುಕಿಕೊಂಡು ಹೋಗಿದ್ದ ಊರಿಗಾದರೂ ಮರಳಿ ಹೋಗೋಣವೆಂದರೆ ದಾರಿ ಕಾಣದ, ಕೊರೊನಾ ಹಾಗು ಅದರ ಭೂತ ಮೆಟ್ಟಿಸಿಕೊಂಡವರ ಮುಂದಾಲೋಚನೆ ಇಲ್ಲದ ಕತ್ತಲು. ಆಗ ‘ತಲ್ಲಣಿಸದಿರು ಕಂಡ್ಯ ತಾಳು ಮನವೆ, ಎಲ್ಲರನ್ನು ಸಲಹುವನು ಇದಕೆ ಸಂಶಯವಿಲ್ಲ' ಎಂಬ ಮಾತಿನಲ್ಲಿದ್ದ ಭರವಸೆಯೇ ಬತ್ತಿ ಹೋಯಿತು.

ಹೊತ್ತಿನ ಊಟಕ್ಕಾಗಿ ಅಂಗಲಾಚಿದರು

ಹೊತ್ತಿನ ಊಟಕ್ಕಾಗಿ ಅಂಗಲಾಚಿದರು

ಯಾವುದೋ ನಿರ್ಣಯದಲ್ಲಿ ಹೋಗೆಂದವರು ಹೇಗೆ ಹೋಗುವುದಂದು ಚಿಂತಿಸಿ ವ್ಯವಸ್ಥೆ ಮಾಡಬೇಕಿತ್ತು. ಮಾಡಲಿಲ್ಲ. ಹೋಗಲಿ, ದಾರಿಯಲ್ಲೇ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಿ, ಇವರು ಕೊರೊನಾ ಸೋಂಕು ಮುಕ್ತರೆಂದು ಒಂದು ಚೀಟಿಯನ್ನು ಅವರ ಕೈಗಿತ್ತಿದ್ದರೆ ಅವರ ಗೂಡುಗಳನ್ನು ಸೇರಿಕೊಳ್ಳುತ್ತಿರಲಿಲ್ಲವೇ?

ಕಾಲು ನಡಿಯಲ್ಲಿ ಹೊರಟವರಿಗೆ ಕರುಣೆ ತೋರಿಸಿ ಅನ್ನ ಕೊಟ್ಟದ್ದು ‘ನೋವಿಗೆ ಮಿಡಿದ ಮಿತ್ರಭಾವ.' ಹೀಗೆ ಅನ್ನ ಪಡೆದ, ದುಡಿಮೆಯ ಬದುಕಿನ ಯುವಜೀವವೊಂದು ಕಾಗದದ ತಟ್ಟೆಯನ್ನು ರಸ್ತೆಯಲ್ಲಿ ಮುಂದಿಟ್ಟುಕೊಂಡು, ತುತ್ತು ಬಾಯಿಗಿಡಲಾಗದ ದುಃಖದೊತ್ತಡದಲ್ಲಿ ಗಳಗಳನೆ ಅತ್ತ ದೃಶ್ಯ ಮಾಧ್ಯಮದಲ್ಲಿ ಕಂಡು ನಮಗೆ ಕರುಳಿದೆಯೇ ಎಂದು ಹೊಟ್ಟೆಗೆ ಕೈ ಹಾಕಿ ಹುಡುಕಿಕೊಳ್ಳುವಂತಾಯಿತು.

ಜಾನಪದ ಕಲಾವಿದರು ಭಿಕ್ಷೆ ಬೇಡುವಂತಾಯಿತು

ಜಾನಪದ ಕಲಾವಿದರು ಭಿಕ್ಷೆ ಬೇಡುವಂತಾಯಿತು

ಸುಡುಗಾಡು ಸಿದ್ದರ ಮೂವತ್ತು ಜನರಿದ್ದ ಪರಿವಾರದ ವ್ಯಕ್ತಿಯೊಬ್ಬ ಬರಿದಾದ ಅಲ್ಯೂಮಿನಿಯಂ ಬಟ್ಟಲ ಬಾಯನ್ನು ಕ್ಯಾಮೆರಾದ ಕಣ್ಣಿಗೆ ಹಿಡಿದು, ನಮಗೆ ಅನ್ನವಿಲ್ಲದಿದ್ದರೂ ಸರಿ, ನಮ್ಮ ಮಕ್ಕಳಿಗೆ ಗಂಜಿಯಾದರೂ ಕೊಡಿ ಎಂದು ಬೇಡಿದ್ದು, ಹಸಿದ ಕಂದಮ್ಮರ ಶೂನ್ಯ ನೋಟ ಮನೆಯಲ್ಲಿ ಮುಂದಿಟ್ಟ ತಟ್ಟೆಯಲ್ಲಿನ ಅನ್ನ ಕೆಲವರಿಗಾದರೂ ವಾಕರಿಕೆ ತರಿಸಿದ್ದೀತು. ಹಾಡು, ಆಟಗಳೇ ಜೀವನ ಮಾರ್ಗವಾಗಿದ್ದ ಜಾನಪದ ಕಲಾವಿದರು ಕೊರೊನಾ ನಿರ್ಬಂಧದ ನಡುವೆಯೇ ಧೀನವಾಗಿ ಭಿಕ್ಷೆಗೆ ಹೊರಟಿದ್ದು ಕಂಡಾಗ ಯಾವ ಪಾಪ ಮಾಡಿದವರು ಇವರು ಅನ್ನಿಸಿತು.

ಬಡವರಿಗೊಂದು, ಶ್ರೀಮಂತರಿಗೊಂದು ನ್ಯಾಯ

ಬಡವರಿಗೊಂದು, ಶ್ರೀಮಂತರಿಗೊಂದು ನ್ಯಾಯ

ಲಕ್ಷ ಲಕ್ಷ ಪಗಾರದವರು, ಈ ದೇಶದ ‘ದೊಡ್ಡವರ' ಸಂತಾನ, ಬಂಧು ಬಾಂಧವರು ಇದ್ದ ದೇಶಗಳಿಗೆ ವಿಮಾನಗಳು ಹಾರಿದವು. ಇಳಿದ ಕೂಡಲೇ ಪರೀಕ್ಷೆಗಳು, ಅನುಕೂಲಗಳು ಬಾಗಿಲುಗಳನ್ನು ತೆರೆದುಕೊಂಡವು. ಇದು ಮಾಡಬಾರದ ಕೆಲಸ, ಮಾಡಬಾರದಿತ್ತು ಎಂದಲ್ಲ. ಅವರದೂ ಜೀವವೇ, ಅಗತ್ಯ ಕ್ರಮವೇ. ಆದರೆ ಇದೇ ಕ್ರಮಗಳು ತೆರೆದ ಬೀದಿಯಲ್ಲಿ ದಿನ ಕಾಣುತ್ತಿದ್ದವರ, ಕೂಲಿ ಕಾರ್ಮಿಕ, ವಲಸಿಗರಿಗೂ ಅನ್ವಯ ಮಾಡಬೇಕಿತ್ತಲ್ಲವೇ ಎಂಬುದು ನಿಜ ನಾಗರಿಕ ಮನಸ್ಸುಗಳ ಪ್ರಶ್ನೆ.

ಇಲ್ಲಿ ರತ್ನಾಕರವರ್ಣಿಯ ಭರತೇಶವೈಭದ ಪದ್ಯ ‘ಬಡವಂಗೆ ಬಲುರೋಗ ಬಂದು ಬಾಯ್ಬಿಡಲೋರ್ವರೆಡಹಿಯು ಕಾಣರುರ್ವಿಯೊಳು, ಒಡವೆಯುಳ್ಳವಗಲ್ಪ ರುಜೆಬರೆ ವಿಸ್ಮಯ ಬಡುತ ಸಾರುವರದು ಸಹಜ' ನೆನಪಾಗುತ್ತದೆ. ಇದು ಇಲ್ಲಿಗೂ ಅನ್ವಯ.

ಇನ್ನೂ ವಿತರಿಸದ ಎರಡು ತಿಂಗಳ ಪಡಿತರ

ಇನ್ನೂ ವಿತರಿಸದ ಎರಡು ತಿಂಗಳ ಪಡಿತರ

ಬಹುತೇಕ ನೆರವುಗಳು ತಕ್ಷಣವೇ ನಗರ, ಪಟ್ಟಣ ಪ್ರದೇಶಗಳಲ್ಲಿ ಕಷ್ಟಕ್ಕೆ ಬಿದ್ದವರಿಗೆ ಸಿಕ್ಕಿಬಿಡುತ್ತವೆ. ಆದರೆ ಗ್ರಾಮಾಂತರ ಪ್ರದೇಶಗಳಲ್ಲಿಯೂ ಇಂತಹವರು, ಇನ್ನೂ ದಾರುಣ ಸ್ಥಿತಿಯಲ್ಲಿರುವವರು ಇದ್ದಾರೆಂಬುದು ಅಷ್ಟಾಗಿ ಗಮನಕ್ಕೆ ಬಾರದೇ ಇರುವುದು ವಿಷಾದ ಸಂಗತಿ. ಎರಡು ತಿಂಗಳ ಪಡಿತರ ಧಾನ್ಯ ಕೊಡುವುದಾಗಿ ಹೇಳಿ ವಾರಗಳೇ ಕಳೆದವು. ವಿತರಿಸಿದ ಕೆಲವೇ ಕಡೆ ಮುಗ್ಗು, ಹುಳುಕಿನದೆಂಬ ದೂರುಗಳು ಮಾಧ್ಯಮಗಳಲ್ಲಿ ಧ್ವನಿ ಮಾಡಿತು. ‘ಹಳಸಲು ಅನ್ನ ಸವತಿ ಮಕ್ಕಳಿಗೆ' ಎಂಬಂತೇನೊ ಇದು ಅನ್ನಿಸುತ್ತದೆ. ಹಳ್ಳಿಗಳ ದಾರಿಗಳಿಗೆ ದವಸ ಹೊತ್ತ ಲಾರಿಗಳು ಇನ್ನೂ ಇಳಿದಿಲ್ಲ.

ಕಾಸು ತರುವ ಆಸೆಯಲ್ಲಿದ್ದವರಿಗೆ ನಿರಾಸೆ

ಕಾಸು ತರುವ ಆಸೆಯಲ್ಲಿದ್ದವರಿಗೆ ನಿರಾಸೆ

ರೈತನ ಬದುಕಿನಲ್ಲಿ ಕೊರೊನಾ ತಂದಿಟ್ಟಿರುವ ಸಮಸ್ಯೆ, ಕಷ್ಟ ಇನ್ನೊಂದು ರೀತಿಯದು. ಹಣ್ಣು, ತರಕಾರಿ, ಹೂವುಗಳು ಕೊಯ್ಲಿಗೆ ನಿಂತಿವೆ. ಕೂಲಿಯಾಳುಗಳು ಮನೆಗಳಲ್ಲಿ ನಿರ್ಬಂಧಿಗಳು. ಅವರಿಲ್ಲದೆ ಕೆಲಸವಾಗದು. ಹೀಗೆಂದು ಫಸಲು ಗಿಡದಲ್ಲೇ ನಿಲ್ಲದು. ಮೂರುನಾಲ್ಕು ದಿನಗಳಲ್ಲಿ ನೆಲಕಚ್ಚುತ್ತವೆ. ಕಣ್ಣು ತುಂಬಿದ ಬೆಳೆ, ಕಾಸು ತರುವ ಆಸೆ ತಂದ ಫಲ ನಿರಾಸೆಯಲ್ಲಿ ಮುಳುಗಿಸುತ್ತಿವೆ.

ಲಾಕ್ ಡೌನ್ ಆದರೆ ಯಂತ್ರೋಪಕರಣ ಇತ್ಯಾದಿಗಳು ಕೊಳೆಯುವುದಿಲ್ಲ. ಅಮ್ಮಮ್ಮ ಎಂದರೆ ಓವರಾಯಿಲಿಂಗ್, ಕೊಂಚ ರಿಪೇರಿಯಲ್ಲಿ ಚಾಲನೆಗೊಳ್ಳುತ್ತವೆ. ಆದರೆ ಫಸಲಿಗೆ ಇಂಥದಾವುದೂ ಸಾಧ್ಯವಿಲ್ಲ. ನಾಶವಾದದ್ದು ನಾಶವಷ್ಟೆ. ಇದಕ್ಕೆ ಗೊಂದಲ ರಹಿತ ಪರಿಹಾರ ಕಂಡುಹಿಡಿದಿಲ್ಲ.

ರಾವಣಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ

ರಾವಣಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ

ಕೊರೊನಾದ ಭೂತ ಬಹಳ ಬೇಗ ಸಾಯುವುದಿಲ್ಲ ಎನ್ನಲಾಗುತ್ತಿದೆ. ಹೀಗಿರುವಾಗ ಈಗ ಊರುಗಳತ್ತ ಹೋಗಿರುವವರು ಹೊಟ್ಟೆಪಾಡಿಗಾಗಿ ಮರಳಲೇಬೇಕು. ಅದು ಹೇಗೆ? ಇದ್ದಲ್ಲಿಗೆ ದೀರ್ಘಕಾಲದ ನೆರವು ಸಾಧ್ಯವಿಲ್ಲದ್ದು. ಈಗಿರುವುದು ‘ರಾವಣಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ' ಎಂಬ ಗಾದೆಯಂತೆ. ಅವರ ನೆರವು, ಪರಿಹಾರಕ್ಕೆ, ಅವರು ಮರಳಲು ಮಾಡುವ ವ್ಯವಸ್ಥೆ ‘ರಾವಣ ಕಾಷ್ಟ'ವಾಗಿ ನಿಂತಿದೆ. ಈಗಿನಿಂದಲೇ ಆಡಳಿತ ವಿವೇಚನಾಯುಕ್ತ ಕಾರ್ಯ ಯೋಜನೆಗೆ ಇಳಿಯದಿದ್ದರೆ ಏನಾದೀತೆಂದು ಊಹಿಸುವುದೂ ಕಷ್ಟ.

ಚಿಕ್ಕವೀರ ರಾಜೆಂದ್ರ ಕಾದಂಬರಿಯಲ್ಲಿ ಮಾಸ್ತಿಯವರು ಹೇಳಿರುವ ಮಾತು (ಯಥಾವತ್ತು ನೆನಪಿಲ್ಲ) ನೆನಪಾಗುತ್ತಿದೆ. ‘ಲಗಾಮು ಕೈಲಿರುವಾಗ ಕುದುರೆ ಓಡಿಸುವುದು ಜಾಣ್ಮೆಯಲ್ಲ. ಕುದುರೆ ಲಗಾಮನ್ನು ಕಚ್ಚಿಕೊಂಡಾಗ ಬೀಳದಿರುವುದು ಜಾಣ್ಮೆ.' ಈಗ ಸರಕಾರಗಳ ಲಗಾಮನ್ನು ಕೊರೊನಾ ಎಂಬ ಹುಚ್ಚು ಕುದುರೆ ಕಚ್ಚಿಕೊಂಡಿದೆ. ಬೀಳದಿರುವುದೇ ಸರಕಾರಗಳು ತೋರಿಸಬೇಕಿರುವ ಜಾಣ್ಮೆ.

English summary
When the Janata curfew was imposed on March 22, when it hinted at an Indian lockdown, thousands of mercenaries, sweat-piercing for the time being, became sparrows.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X