ವಿರಹ ಮಾಸದಲ್ಲಿ ನುಗ್ಗಿ ಬರುತಿರುವ ಶಕುಂತಲೆಯ ನೆನಪಲ್ಲಿ ಪ್ರೇಮ ಪತ್ರ

ಪ್ರೇಮಪತ್ರಗಳದೊಂದು ಸರಣಿಯನ್ನೇ ಒನ್ಇಂಡಿಯಾ ಕನ್ನಡಕ್ಕಾಗಿ ಬರೆದಿದ್ದಾರೆ ಸ.ರಘುನಾಥ. "ಈ ವಯಸ್ಸಿನಲ್ಲಿ ಬರೆದ ಪ್ರೇಮಪತ್ರಕ್ಕೆ ಓದುಗರ ಪ್ರತಿಕ್ರಿಯೆ ಹೇಗಿದೆ ಎಂದು ತಿಳಿಸಲೇಬೇಕು" ಎಂಬುದು ಅವರ ಆಗ್ರಹಪೂರ್ವಕ ಒತ್ತಾಯ. ಇನ್ನು ನೀವುಂಟು ಹಾಗೂ ಸ ರಘುನಾಥರ ಪ್ರೇಮ ಪತ್ರವುಂಟು- ಸಂಪಾದಕ

ಹೃದಯ ಪ್ರಿಯೆ ಶಕುಂತಲೇ,
ತವರಿನಲಿ ಹೇಗಿರುವೆ?

ಇಲ್ಲಿ ನಾನಿರುವೆ ಕೆಲಸಗಳ ನಡುವೆ ಸಿಗುವ ಬಿಡುವುಗಳಲ್ಲಿ ನಿನ್ನ ನೆನಪಿನಲ್ಲಿ. ನಾವೀಗ ನಿನ್ನಿಂದ ತಿಂಗಳಿನಷ್ಟು ದೂರದಲ್ಲಿದ್ದೇವೆ. ಈ ತಿಂಗಳೆಂದರೆ ಚಂದಿರ. ನೋಡಲು ಹತ್ತಿರ, ಯೋಚಿಸಿದರೆ ಎಷ್ಟೊಂದು ದೂರ! ನೀನು ನೆನಪಿನಲ್ಲಿರುವೆ ಹತ್ತಿರ. ಅಗಲಿಕೆಯಲ್ಲಿ ಆ ಚಂದ್ರನಷ್ಟು ದೂರ. ಈ ಮಾತಿಗೆ ನೀನು ಮದುವೆಗೆ ಮುಂಚೆ ನಿಮ್ಮೂರು ನನಗೆ ಎಷ್ಟು ದೂರವಿತ್ತೋ ಈಗ ನಮ್ಮೂರು ನಿನಗೆ ಅಷ್ಟೇ ದೂರವೆಂದು ಹೇಳುತ್ತಿಯೆಂದು ಬಲ್ಲೆ. ಕೊಂಚ ಹುಬ್ಬಿಳಿಸು ನೋಡು. ಅಳತೆಯ ದೂರ ನೀನಂದಂತೆ ಸರಿ. ಈಗ ಹಾಗಲ್ಲ ಮನಸ್ಸಿಗೆ ನೀನು ಅತಿ ದೂರದಲ್ಲಿರುವೆ ಅನ್ನಿಸುವುದು. ಇದು ವಿರಹ ಮಾಸದ ಭಾವದೂರ ಶಕುಂತಲೆ.

ಆಷಾಢವೆಂದು ನೀನು ಊರಿಗೆ ಹೋದೆ. ನನ್ನ ಹೊರತು ನೀನು ಹೋದುದು ಬಹು ದೂರವೆಂದು ಯಾರಿಗೂ ತಿಳಿದಿಲ್ಲ. ನನ್ನ ಅಗಲಿ ಹೋಗುವುದೆಂದಾಗ ನಿನ್ನ ಹೃದಯದ ಭಾರ ನನಗೆ ತಿಳಿದಿತ್ತು. ಹೊರಟ ಮೇಲೆ ತವರಿನ ಪ್ರೀತಿ ನಿನ್ನೆದೆಯಲ್ಲಿ ತುಳುಕಿ ನೀನು ಗೆಲುವಾಗಿದ್ದೆ. ಹೊರಡುವ ಹಾಗೂ ಹೊರಟ ಕಾಲದ ನಡುವಿನ ಕೆಲ ನಿಮಿಷಗಳಲ್ಲಿ, 'ವಸಂತ ರಾಜಾ, ಶ್ರಾವಣಕೆ ಜೇನಾಗಿ ನಿನ್ನ ಬಳಿ ಬರಲು ಈಗ ಹೋಗುವುದು ಬೇಡವೆ' ಎಂದು ರಮಿಸಿದಾಗ ಸರಿಯೆಂದು ತೋರಿತ್ತು.

Love

ಅಂದು ರಾತ್ರಿ ಮಂಚ ಹೇಳಿತು, 'ಪೆದ್ದೇ ಜೇನಾಗಿ ಬರಲು ನಿನ್ನವಳಲ್ಲಿ ಎಲ್ಲಿ ಬತ್ತಿತ್ತು ಜೇನು? ಶಕುಂತಲೆಯ ಮಾತಿಗೆ ಮರುಳಾದಿಯಲ್ಲೋ ಗಂಡೆ.' ಹೊರಡುವ ಮೊದಲ ಮೂರು ದಿನಗಳಲ್ಲಿ ನಿನ್ನ ಒಂದೊಂದು ಪರಿಯ ಒಯ್ಯಾರದಲ್ಲಿ ಆಷಾಢದ ಸಂಚು ಹೀಗಿರುತ್ತದೆಂದು ಅರಿವಾಗಲಿಲ್ಲ. ಈಗ ಅರಿವಾಗುತ್ತಿದೆ. ಆದರೆ ಪ್ರಯೋಜನವಿಲ್ಲ.

ಈ ಕಾಗದ ಬರೆಯುತ್ತಿರುವ ಸಮಯ ರಾತ್ರಿ ಹನ್ನೆರಡು ಗಂಟೆ. ಮನಸ್ಸಿನ ತುಂಬಾ 'ವಿರಹ ನೂರು ನೂರು ತರಹ' ಹಾಡು. ನನಗೆ ಮಾತ್ರ ಅದು ನೂರು ನೂರು ತರಹದ್ದಲ್ಲ. ಶಕುಂತಲೆ ಇಲ್ಲದ್ದು ಒಂದೇ. ನಂತರ ತಿಳಿಯಿತು ಶಕುಂತಲೇ ಇರದಿರುವುದರಲ್ಲೇ ಆ ನೂರು ನೂರು ತರಹದ್ದಾಗಿದೆ ಎಂದು.

'ಬಂತದೋ ಶೃಂಗಾರ ಮಾಸ' ಹಾಡು ನಿದ್ದೆಯಿಂದೆಬ್ಬಿಸಿತು. ಕಳೆದು ಹೋಯಿತೇ ಆಷಾಢ ಮಾಸ? ಮಲಗಿದ್ದೆನೆ ಇಡೀ ತಿಂಗಳು? ರೈಲಿನ ಕೂಗು ಕೇಳಿಸಿತು. ಹೇಳಿದಂತೆ ಜೇನಾಗಿ ಬಂದು ಬಿಟ್ಟಳೇ ಶಕುಂತಲೆ? ಬರಮಾಡಿಕೊಳ್ಳಲು, ತೋಳುಗಳಲ್ಲಿ ತಬ್ಬಿ ತುಂಬಿಕೊಳ್ಳುವುದು ತಡವಾಯಿತೆ ಎಂದು, ನಿದ್ದೆಯನ್ನು ಹಾಳಾದ್ದು ಎಂದು ತೆಗಳಿ, ದಡಬಡಿಸಿದ್ದೆ ಎದ್ದೆ. ಬೆಳಗಿನಜಾವ, ಕನಸು.

'ಬಂತದೋ ಶೃಂಗಾರ ಮಾಸ' ಮತ್ತೆ ಎದೆಗೆ ಬಂದಿತು ಹಾಡು. ನೆನಪಾಯಿತು 'ಜೇನಾಗಿ ಬರುವೆ' ಎಂದ ನಿನ್ನ ಮಾತು. ಆಷಾಢವನ್ನು ಜಪಿಸುತ್ತ, ನಿಂದಿಸುತ್ತ, ವಿರಹದಲಿ ಬೇಯುವುದಕ್ಕಿಂತ ನೀ ತವರಿಂದ ಹೊರಟ ಸುದ್ದಿಯ ಗೆಜ್ಜೆ ಕಾಲಿನ ನಾದಕ್ಕಾಗಿ ಕಾಯುವುದರಲ್ಲಿ ಸುಖವಿದೆ ಅನ್ನಿಸಿದಾಗ-

'ಬರುತಲಿದೆ ಶೃಂಗಾರ ಮಾಸ
ಮಂದಹಾಸ ತುಂಬಿ ಬರುವ
ಶಕುಂತಲೆಯ ಕರೆತರುತ
ಬರುತಲಿದೆ ಶೃಂಗಾರ ಮಾಸ'

ಎಂದು ಹಾಡು ಕಟ್ಟಿ ಹಾಡಿಕೊಂಡಾಗ, ಹಾಡಿಕೊಳ್ಳುವಾಗ ಸುಖಾನಂದ ಅನ್ನಿಸಿದರೂ 'ವಿರಹಮಾಸ'ದ ವಿರಹಿ ನಾನೆಂಬುದು ವಿರಹದ ಆಣೆ ನಿಜ ಶಂಕುತಲೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+