ಸ.ರಘುನಾಥ ಅಂಕಣ: ಕೂಟೇರಪ್ಪನ ಕೋಟು, ಎಂಟು ಜೇಬಿನ ಕಥೆ

ಕೂಟೇರಪ್ಪನ ಕೋಟು ಹೊಲೆಸಿದಾಗ ಅದು ಬೆಳ್ಳಂಬಿಳಿದು. ಅವನು ತೊಟ್ಟ ಕೆಲವು ಕಾಲದವರೆಗೆ ಬಿಳಿಯದಾಗಿಯೇ ಇತ್ತು. ಅದನ್ನು ತೊಟ್ಟ ಕೂಟೇರಪ್ಪ ನಡೆಸಿದ ಚಟುವಟಿಕೆಗಳನ್ನು ತಿಳಿದಾದ ಮೇಲೆ ಅದು ತಳೆದ ಬಣ್ಣ ನಿಮಗೆ ತಿಳಿದು ಬಿಡುವುದು.

ಮಾವ ಅಳಿಯನಿಗೆ ಕೊಟ್ಟ ಬಳುವಳಿಗಳಲ್ಲಿ ಈ ಕೋಟೂ ಒಂದಂತೆ. ಕೋಟೆಂದರೆ ನಾಲ್ಕು, ಇಲ್ಲವೆ ಹೆಚ್ಚೆಂದರೆ ಐದು ಜೇಬುಗಳು. ಆದರೆ ಕೂಟೇರಪ್ಪನ ಕೋಟಿಗೆ ಎಂಟು ಜೇಬುಗಳು! ಹೊಲಿಸುವಾಗಲೇ ಎಂಟಿತ್ತೆ, ಹೊಲಿಸಿ ಅವನಿಗೆ ಕೊಟ್ಟಮೇಲೆ ಎಂಟಕ್ಕೆ ಏರಿಸಲಾಯಿತೆ, ಎಂಟೂ ಜೇಬುಗಳನ್ನು ಹೊಲೆದ ದರ್ಜಿ ಒಬ್ಬನೆ, ಹೊಲೆಯಲು ಹೇಳಿದವರಾರು, ಅವರ ಉದ್ದೇಶ ಏನಿತ್ತು ಎಂಬುದಕ್ಕೆಲ್ಲ ಉತ್ತರ ಬೇಕಿದ್ದರೆ ತನಿಖೆ ಆಗಬೇಕು.

ಆ ಕೋಟು ಅವನಿಗೆ ತುಂಬಿವೆ ಅನ್ನಬಹುದಾದಷ್ಟು ದೊಗಲೆ. ಜೇಬುಗಳೂ ಅಸಹಜ ಎಂಬಷ್ಟು ದೊಡ್ಡವು. ಎದೆ ಮೇಲಿನ ಜೇಬುಗಳನ್ನು ಬಿಟ್ಟರೆ ಉಳಿದವು ಕಡಿಮೆಯೆಂದರೂ ಪಾವು, ಪಡಿ ಹಿಡಿಸುವಷ್ಟು ದೊಡ್ಡವು. ಇಷ್ಟೆಲ್ಲ ಗಮನಕ್ಕೆ ಬಂದಿದ್ದು, ಮದುವೆಯಾದೊಂದು ಆರು ತಿಂಗಳಿಗೆ. ಅವನು ಮಡದಿಯೊಂದಿಗೆ ಬೇರೆ ಸಂಸಾರ ಹೂಡಿ, ಅದೇ ಕೋಟು ತೊಟ್ಟು ಸಂತೆಗೆ ಹೋಗಿ ಬರಲಿಟ್ಟ ಮೇಲೆ.

Sa Raghunath Column: Kooterappas Coat And The Story Of Eight Pockets

ಸಂತೆಗೆ ಹೊರಟಾಗ ಕೋಟು ಪಡವಲಕಾಯಿ

ಕೂಟೇರಪ್ಪ ಸಂತೆಗೆ ಹೊರಟಾಗ ಕೋಟು ಪಡವಲಕಾಯಿ. ಬರುವಾಗ ಕುಂಬಳಕಾಯಿ ಎಂದು ಹಲವರಿಗೆ ತಿಳಿದ ಗುಟ್ಟಲ್ಲದ ಗುಟ್ಟು. ಕೋಟಿಲ್ಲದೆ ಕೂಟೇರಪ್ಪ ಸಂತೆ ಮಾಡಿ ಬಂದುದನ್ನು ಕಂಡವರಿದ್ದರೆ ಆ ದಿನ, ದಿನಾಂಕವನ್ನು ಖಚಿತಪಡಿಸಿದರೆ ಬಹುಮಾನ ಕೊಡಬಹುದು. ಆ ಆಸೆ ಯಾರಿಗೂ ಹುಟ್ಟುತ್ತಿದ್ದುದಿಲ್ಲ. ಏಕೆಂದರೆ ಅಂಥದೊಂದು ದಿನವನ್ನು ಕಂಡೆವೆನ್ನುವವರು ಊರಿನವರಿರಲಿ, ಅವನ ಮನೆದೇವರು ತಿರುಪತಿ ತಿಮ್ಮಪ್ಪನೂ ಕಂಡಿರಲಾರನೆಂದರೆ ಯಾರೂ ನಂಬಬೇಕಾದ್ದೇ.

ಕೊಂಚ ಅತಿಶಯೋಕ್ತಿಯಲ್ಲಿ ಹೇಳಬಹುದಾದರೆ, ಸಂತೆಯೇ ಕೂಟೇರಪ್ಪನ ಕೋಟಿನಲ್ಲಿ ಮನೆಗೆ ಬರುತ್ತಿತ್ತು. ಅವನಿಗೆ ಸಂತೆ ಮಾಡಲು ಅಗತ್ಯವಾದ ಕೈಚೀಲ ಹೊಲೆಸಲಾಗದಷ್ಟು ಕಷ್ಟವಿತ್ತೆ? ಇರಲಿಲ್ಲ. ಅವನಲ್ಲಿ ಕೈ ಚೀಲ ಇರಲಿಲ್ಲವೆ? ಇತ್ತು. ಬಳಸುತ್ತಿರಲಿಲ್ಲವೆ? ಬಳಸುತ್ತಿದ್ದ. ಮತ್ತೇಕೆ ಕೋಟಿಗೆ ಶಿಕ್ಷೆ? ಪ್ರತ್ಯಕ್ಷ ಸಾಕ್ಷಿ ಪುರಾವೆಗಳಿಲ್ಲದ ಉತ್ತರ ಮುಂದಿದೆ.

ಅಲ್ಲಿದ್ದವರ ಕಣ್ಣು ತಪ್ಪಿಸಿ ಜೇಬಿಗಿಳಿಸಿ ಬಿಡುವನಂತೆ

ಅವನು ಸಂತೆಯಲ್ಲಿ ಗಿರಾಕಿಗಳ ದಟ್ಟಣೆಯಿರುವ ಅಂಗಡಿಗಳಿಗಷ್ಟೆ ಹೋಗುತ್ತಿದ್ದನಂತೆ. ಜಂಗುಳಿ ನಡುವೆ ಬೆಲೆ ಕೇಳುವ, ಗುಣಮಟ್ಟ ಪರೀಕ್ಷಿಸುವ ನೆಪದಲ್ಲಿ ಕೈಗೆ ತೆಗೆದುಕೊಂಡದ್ದನ್ನು ಅಲ್ಲಿದ್ದವರ ಕಣ್ಣು ತಪ್ಪಿಸಿ ಜೇಬಿಗಿಳಿಸಿ ಬಿಡುವನಂತೆ. ಈ 'ಅಂತೆ'ಗೆ ಪುಷ್ಟಿ ಅವನ ಕೋಟಿನ ಒಂದೇ ಜೇಬಿನಿಂದ ಹೊರಬಂದು ಮನೆಯಲ್ಲಿ ಗುಡ್ಡೆ ಬೀಳುವ ನಾಕಾರು ಸರಕುಗಳು. ವಡೆ- ಬೋಂಡಗಳೂ ಬೆತ್ತಲೆಯಾಗಿಯೇ ಹೊರಬರುತ್ತಿದ್ದವೆಂಬ ಸುದ್ದಿಯುಂಟು.

ಹೀಗೆ ಕೂಟೇರಪ್ಪ ತರುತ್ತಿದ್ದ ವಡೆ- ಚಕ್ಕುಲಿ- ಬೋಂಡಗಳಿಗೆ ಎಣ್ಣೆಯ ವಾಸನೆ ಇರುತ್ತಿರಲಿಲ್ಲ. ಕಾರಣ ಅವು ಹೊರಬರುತ್ತಿದ್ದುದ್ದು ಕೊತ್ತಂಬರಿ, ಪುದೀನ, ಹಸಿಮೆಣಸಿನಕಾಯಿ ಇರುತ್ತಿದ್ದ ಜೇಬಿನಿಂದ. ಅದರಿಂದಾಗಿ ಅವಕ್ಕೆ ಈ ಎಲ್ಲವುಗಳ ಹಸಿವಾಸನೆ ಬರುತ್ತಿತ್ತು.

ಕೋಟಿನಲ್ಲಿ ವಡೆ- ಬೋಂಡ- ಚಕ್ಕುಲಿ

ಇಂತಹ ವಡೆ- ಬೋಂಡ- ಚಕ್ಕುಲಿಗಳನ್ನು ತಿನ್ನುವುದು ನನಗೆ ಪ್ರಿಯವಾಗಿತ್ತು. ಕೂಟೇರಪ್ಪನ ಮಗ, ನನ್ನ ಗೆಳೆಯ ವರದ, ಇವನ್ನು ತಂದು ನನಗೂ ಕೊಡುತ್ತಿದ್ದ. ಇದು ಹೇಗೊ ಮಡಿಹೆಂಗಸು ನನ್ನಜ್ಜಿಗೆ ತಿಳಿದು ಹೋಗಿತ್ತು. ಸಂತೆಯ ದಿನದ ಸಂಜೆಯೆಂದರೆ, ವರದ ನನಗೆ ಇವನ್ನು ಕೊಟ್ಟಿರುತ್ತಾನೆ, ನಾನು ತಿಂದಿರುತ್ತೇನೆಂದು ಅವಳು ಬಲ್ಲಳು. ಪಂಚಗವ್ಯ ಕುಡಿಸದೆ, ಮೈಮೇಲೆ ಪ್ರೋಕ್ಷಿಸದೆ, ರಾತ್ರಿ ಊಟ ಹಾಕುತ್ತಿರಲಿಲ್ಲ. ಅಂದು ರಾತ್ರಿ ನಾನುಂಡ ತಟ್ಟೆಯನ್ನು ಬೇರೆ ಇಡಿಸಿ, ಬೆಳಿಗ್ಗೆ ಹುಣಿಸೆ ಹುಳಿಯಲ್ಲಿ ನನ್ನ ಕೈಯಲ್ಲಿ ತೊಳೆಸದೆ ಇರುತ್ತಿರಲಿಲ್ಲ. ಇಂಥ ದಿನಗಳಲ್ಲಿ ಹೀಗೆ ನನಗೆ ಕುಡಿದ ಎಳೆಗರುವಿನ ಗಂಜಲ ಏನಿಲ್ಲವೆಂದರೂ ಒಂದು ಸೇರಿನಷ್ಟಾದರೂ ನನ್ನ ಹೊಟ್ಟೆ ಸೇರಿದ್ದೀತು.

ಕೋಟನ್ನು ಯಯಾತಿಯಂತೆ ಮಾಡಿ ಹುತಾತ್ಮವಾಯಿತು

ಕೂಟೇರಪ್ಪ ಸಂತೆಗೆ ಕೈಚೀಲ ತೆಗೆದುಕೊಂಡು ಹೋಗುತ್ತಿದ್ದ. ಆದರೆ ಅದೆಂದೂ ಹೊಟ್ಟೆ ತುಂಬಿಸಿಕೊಂಡ ಪುಣ್ಯಕ್ಕೆ ಬಿದ್ದುದಿಲ್ಲ. ಅದಕ್ಕೆ ಬಾಯಿ ಇದ್ದಿದ್ದರೆ ಕೋಟು ಇನ್ನೆಷ್ಟು ಶಪಿಸುತ್ತಿತ್ತೊ ಏನೋ. ಹೀಗೆಯೇ ಅದರ ಆಯಸ್ಸು ಮುಗಿದು ಹೋಗಿತ್ತು.

ಆ ಕೈಚೀಲ ತನ್ನ ಆಯಸ್ಸನ್ನು ಕೋಟಿಗೆರೆದು, ಕೋಟನ್ನು ಯಯಾತಿಯಂತೆ ಮಾಡಿ ಹುತಾತ್ಮವಾಯಿತೆಂದು ಹೇಳಬಹುದು. ಆ ಮೇಲೆ ಕೂಟೇರಪ್ಪನ ಕೈಗೆ ಇನ್ನೊಂದು ಚೀಲ ಬಂದಿತ್ತು. ಇದೂ ಹಿಂದಿನ ಚೀಲದ ತದ್ರೂಪಿಯಾಗಿತ್ತು. ಮುಂದಿನ ದಿನಗಳಲ್ಲಿ ಇದು ಗಟ್ಟಿತನ ಉಳಿಸಿಕೊಳ್ಳಲಿಲ್ಲವಾದರೂ ತೇಪೆ ಹಾಕಿಸಿಕೊಂಡು ಕೋಟಿನೊಂದಿಗೆ ಸಂತೆ ಕಂಡು ಬರುತ್ತಿತ್ತು. ಕೋಟು ಮಾತ್ರ ಯೌವ್ವನವನ್ನು ಮರಳಿಸದ ಯಯಾತಿಯಂತೆಯೆ ಇತ್ತು.

ಕೋಟು ವಾರಕ್ಕೊಮ್ಮೆ ಮಾಯಾಬಜಾರು ನೋಡಿ ಬರುತ್ತಿತ್ತು

ಕೂಟೇರಪ್ಪನ ಕೋಟು ವಾರಕ್ಕೊಮ್ಮೆ ಮಾಯಾಬಜಾರು. ಒಂದು ಕಿಸೆಯಿಂದ ಹಿಡಿಯಷ್ಟು ಬೆಂಡೆಕಾಯಿ, ಇನ್ನೊಮ್ಮೆ ಆಲೂಗಡ್ಡೆ, ಮತ್ತೊಮ್ಮೆ ಬದನೆಕಾಯಿ. ಇನ್ನೊಂದು ಜೇಬಿನಿಂದ ಈರುಳ್ಳಿ, ಬೆಳ್ಳುಳ್ಳಿ, ಅಡಕೆ, ಒಂದೆರಡು ಹಿಡಿ ಬೇಳೆಕಾಳು. ಮೊದಲನೇ ಜೇಬಿನಿಂದ ಹೊರಬಂದವೆ ಈ ಜೇಬಿನಿಂದಲೂ ಬರುವುದಿತ್ತು. ಹಿಚುಕಿ ನೀರಾಗಬಹುದಾದ ಟಮೋಟೊ, ಬಾಳೆಹಣ್ಣು, ಸೊಪ್ಪು ಇಂತಹವಷ್ಟೇ ಚೀಲದಿಂದ ಹೊರಬರುತ್ತಿದ್ದುದು.

ಹತ್ತು ರೂಪಾಯಿ ಖರ್ಚು ಮಾಡಿ ತರಬಹುದಾದಷ್ಟನ್ನು ಕೂಟೇರಪ್ಪ ಎರಡೇ ರೂಪಾಯಿ ಖರ್ಚುಮಾಡಿ ತರುತ್ತಾನೆ ಎಂಬ ಮಾತೂ ಕೇಳಿಬರುತ್ತಿತ್ತು. ಹಾಗೆಯೇ ಸಂತೆಯಿಂದ ಬರುವ ಕೂಟೇರಪ್ಪನದು 'ಮಾಯಲ ಮರಾಠಿ'ಯ ಕೋಟೆಂದು ಹೇಳುವವರೂ ಇದ್ದರು. ಒಟ್ಟಾರೆಯಲ್ಲಿ ಸಂತೆಯಿಂದ ಬರುವ ಕೂಟೇರಪ್ಪನು ಕೋಟಿನಲ್ಲೆ ಸರಕು ಸರಂಜಾಮು ತರುತ್ತಿದ್ದ. ಒಂದು ಸಂತೆಯ ದಿನ ನೇಗಿಲ ಕಾರೇ ಅವನ ಜೇಬಿನಿಂದ ಹೊರಬಂದಿತ್ತು.

ಕೋಟಿನ ಜೇಬುಗಳಲ್ಲಿ ತುಂಬಿಕೊಂಡ್ರೆ ಭಾರ ಒಂದೆಕಡೆ ಇರಲ್ಲ

ಕೈಚೀಲ ಇರೋದೇನಕ್ಕೆ ಅಂದರೆ ಕೋಟಿರೋದೇನಕ್ಕೆ ಅನ್ನುತ್ತಿದ್ದ ಕೂಟೇರಪ್ಪ. ಕೈಚೀಲಕ್ಕೆ ಹಾಕಿದರೆ ತೂಕ ಎಲ್ಲ ಹೆಗಲಿಗೆ ಬೀಳುತ್ತೆ. ಇಲ್ಲಾಂದ್ರೆ ಕೈಗೆ ಬಿದ್ದು ಜಗ್ಗುತ್ತೆ. ಐದು ಮೈಲಿ ನಡೀಬೇಕಲ್ಲ. ಅದೇ ಕೋಟಿನ ಜೇಬುಗಳಲ್ಲಿ ತುಂಬಿಕೊಂಡ್ರೆ ಭಾರ ಒಂದೆಕಡೆ ಇರೋಲ್ಲ. ನಡಿಗೇನೂ ಕಷ್ಟವಾಗೋಲ್ಲ ಅನ್ನುವುದು ಅವನ ಮಾತು. ಮಾತಿನಂತೆ ಕ್ರಿಯೆ.

ಹೀಗೆ ಹಲವು ವರ್ಷಗಳು ತನಗೆ ಉಪಕಾರಿಯಾಗಿದ್ದ ಕೋಟನ್ನು ಚೌಳುಪ್ಪಿನಲ್ಲಿ ಹೊರಳಿಸಿ, ಒಗೆದು ತಂದು ಮನೆಯಂಗಳದ ಜಗುಲಿಯ ಮೇಲೆ ಒಣಗಲು ಹಾಕಿ, ಊಟ ಮುಗಿಸಿ ಹೊರಬರುವ ಹೊತ್ತಿಗೆ ಅಗಸರ ಪಾಟಮ್ಮನ ಕತ್ತೆ ಅರ್ಧದಷ್ಟನ್ನು ಜಗಿದು ಹಾಕಿತ್ತು. ಪಾಟಮ್ಮನು ಬಂದು ಜಗಳಕ್ಕೆ ನಿಲ್ಲುವಷ್ಟು ಅದನ್ನು ಬಡಿದಿದ್ದ. ತನಗೆ ಅಂತಹುದೇ ಕೋಟು ತಂದುಕೊಡಬೇಕೆಂಬ ಅವನ ವಾದಕ್ಕೆ ಅವಳು ಸೊಪ್ಪು ಹಾಕಲಿಲ್ಲ.

ಧನಲಕ್ಷ್ಮಿಯನ್ನು ಮನೆಯಿಂದ ಹೊರಗಟ್ಟುತ್ತಿರುವಂತೆ ನೊಂದುಕೊಳ್ಳುತ್ತಿದ್ದ

ಆದರೆ ಇನ್ನೊಂದು ಕೋಟನ್ನು ಹೊಲೆಸಿಕೊಳ್ಳುವುದು ಅವನಿಂದಾಗಲಿಲ್ಲ. ಸಂತೆಯ ದಿನ ಬಂದಾಗಲೆಲ್ಲ ಕೋಟನ್ನು ನೆನೆಸಿಕೊಂಡು ನೊಂದುಕೊಳ್ಳುತ್ತ ಕತ್ತೆ ಮತ್ತು ಪಾಟಮ್ಮನನ್ನು ಮನಸ್ಸಿನಲ್ಲೇ ಬೈದುಕೊಳ್ಳುತ್ತಿದ್ದ. ಅಷ್ಟು ಮಾತ್ರವಲ್ಲ, ಕೋಟಿಲ್ಲದೆ ಸಂತೆಗೆ ಹೋಗಲಾಗದೆ, ಹೆಂಡತಿಯನ್ನು ಕಳುಹಿಸುತ್ತಿದ್ದ.

ಹೆಂಡತಿ ಸಂತೆಗೆ ಹೊರಟು ನಿಂತಾಗ ಉಡುದಾರಕ್ಕೆ ಗಂಟು ಹಾಕಿದ್ದ ಬೀಗದಕೈಯನ್ನು ನಿಧಾನವಾಗಿ ತೆಗೆದು, ಪೆಟ್ಟಿಗೆಗೆ ಹಾಕಿದ್ದ ಬೀಗಕ್ಕೆ ನೋವಾದೀತೇನೋ ಎಂದು ಮೆಲ್ಲಗೆ ಅದರ ತೂತಿಗೆ ಸೇರಿಸಿ ಅತಿ ನಿಧಾನವಾಗಿ ತಿರುಗಿಸಿ ತೆಗೆಯುತ್ತಿದ್ದ. ದುಡ್ಡು ಕೊಡುವಾಗಲಂತೂ ಧನಲಕ್ಷ್ಮಿಯನ್ನು ಮನೆಯಿಂದ ಹೊರಗಟ್ಟುತ್ತಿರುವಂತೆ ನೊಂದುಕೊಳ್ಳುತ್ತಿದ್ದ. ನೋಡಿಕೊಂಡು ಖರ್ಚು ಮಾಡುವಂತೆ, ಚಿಲ್ಲರೆಯನ್ನು ತಪ್ಪದೆ ತನಗೆ ಕೊಡಬೇಕೆಂದು ತಾಕೀತು ಮಾಡಿಯೇ ಹಣ ಕೊಡುತ್ತಿದ್ದುದು. ಕೋಟು ಇದ್ದಿದ್ದರೆ ತನಗೆ ಈ ಕಷ್ಟವಿರುತ್ತಿರಲಿಲ್ಲವೆಂದು ಗೊಣಗದೆ ಇರುತ್ತಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+