ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿನ್ನ ಸೆರಗು ಹಾರಾಡುವ ಲಯವನ್ನು ಮನಸಿಗೆ ಕೇಳಿಸಿದ ಗಾಳಿ

By ಸ.ರಘುನಾಥ, ಕೋಲಾರ
|
Google Oneindia Kannada News

ಪ್ರಿಯೇ
ಶಕುಂತಲೇ
ಕುಶಲವೆ?

ನಿನ್ನೆ ರಾತ್ರಿ ಕಂಡ ಕನಸು ಕುರಿತು ನಿನಗೆ ಹೇಳುವ ಮುನ್ನ ಈವರೆಗೆ ನಿನ್ನ ಮನಸು ಅರಳಲೆಂದು, ನನ್ನ ಒಳಗಿನ ಪ್ರೇಮಿ ಆಡಿಸಿದ ಮಾತುಗಳನ್ನು ಎಣಿಸಲೋ, ಅಳೆಯಲೋ ಸಾಧ್ಯವೇ ಎಂಬ ಆಲೋಚನೆಯೊಂದು ಹುಟ್ಟಿಕೊಂಡಿತು. ಇದು ನನ್ನಲ್ಲಷ್ಟೇ ಹುಟ್ಟಿದುದೊ, ಇಲ್ಲ ಬೇರೆಯವರಲ್ಲೂ ಹುಟ್ಟಿರುವುದೋ ತಿಳೆಯೆ.

ನನ್ನಲ್ಲಿ ಹುಟ್ಟಿದ್ದು ನಿಜವಾದುದರಿಂದ ಹೇಳುತ್ತಿರುವೆ. ಎಣಿಕೆಗೆ ಸಂಖ್ಯೆಗಳಿವೆ. ಎಣಿಸಲು ಸಾಧ್ಯವಾಗದಿದ್ದರೂ ಗೊಂದಲವಿಲ್ಲ. ಆದರೆ ಅಳೆಯುವುದು ಚಟಾಕು, ಸೊಲಿಗೆ, ಪಾವು, ಪಡಿ, ಸೇರು, ಬಳ್ಳ, ಇಬ್ಬಳಿಗೆ ಹೀಗೆ ಅನೇಕ. ಯಾವುದರಿಂದ ಅಳೆಯುವುದು? ಚಿಕ್ಕದರಿಂದ ಅಳೆದರೆ ಕಡಿಮೆಯೇನೋ ಎಂಬ ಕೊರಗು. ದೊಡ್ಡದರಿಂದ ಅಳೆಯುವುದಕ್ಕೆ ಸಾಲದಾದರೆ ನಿನಗೆ ಮುನಿಸು ಎಂಬ ಆತಂಕ. ತೂಕದ ವಿಚಾರವೂ ಹೀಗೆಯೇ. ಮಿಲಿಗ್ರಾಂನಿಂದ ಪ್ರಾರಂಭವಾಗಿ ಟನ್ನುಗಳವರೆಗೆ.

ಪ್ರಿಯ ಶಕುಂತಲೆ, ಯೋಚಿಸಿ, ಯೋಚಿಸಿ ನಿರ್ಣಯವಾಗದೆ, ಹೀಗೇ ಮುಂದುವರೆದರೆ ನಿನ್ನನ್ನು ಮರೆತು ಬಿಡಬಹುದು ಅಥವಾ ಈ ಅಳತೆಗಳಲ್ಲಿ ನಾನೇ ಮುಚ್ಚಿ ಹೋಗಿಬಿಡಬಹುದೆಂದು ಭಯವಾಯಿತು. ನಿನ್ನ ಚೆಲುವಿನಷ್ಟು ಅಂದುಬಿಟ್ಟರೆ ಹೇಗೆ ಅನ್ನಿಸಿತು. 'ನನ್ನ ಚೆಲುವೆಷ್ಟು' ಎಂದು ನೀನು ಕೇಳಿದರೆ ಉತ್ತರವೆಲ್ಲಿದ್ದೀತು ಅನ್ನಿಸಿತು.

Beautiful love letter by Oneindia Kannada columnist Sa Raghunatha

ನನ್ನ ಈ ಕಷ್ಟದ ಅರಿವು ನಿನಗಿದ್ದೀತೇನೊ? ಈವರೆಗೆ ನೀನು ಕೇಳಿದ್ದಿಲ್ಲ. ಮುಂದೆಯೂ ಕೇಳಲಾರೆಯೆಂಬ ಭರವಸೆ ನಿನ್ನಿಂದಲೇ ಸಿಗಬೇಕು.

ಈಗ ಕನಸನ್ನು ಹೇಳುವೆ ಕೇಳು. ಬಾನಿನಲ್ಲಿ ಒಂದು ಸಣ್ಣ ಚೂರಿನಷ್ಟೂ ಮೋಡವಿಲ್ಲ. ಕಾರ್ತೀಕದ ಹುಣ್ಣಿಮೆ ನಮಗಾಗಿ ಈ ಚಳಿ ಮಾಸದಲ್ಲೇ ಬಂದಿತ್ತು. ಗೋರಂಟಿ ಹೂ ಪರಿಮಳ ಚಳಿ ಮತ್ತು ಬೆಳದಿಂಗಳ ಮೈ ಆಗಿತ್ತು. ನೀನು ಬರುವ ದಾರಿ ಕಾಯುತ್ತ ಬಂಡೆಗಲ್ಲಿನ ಮೇಲೆ ಕುಳಿತಿದ್ದೆ. ನಿನ್ನನ್ನು ಕರೆಯುವ ಮನಸ್ಸಾಗಿ ಕರೆ ಹಾಡನ್ನು ಹಾಡಬೇಕೆನಿಸಿತು.

ಬೇಂದ್ರೆ, ಕುವೆಂಪು, ನರಸಿಂಹಸ್ವಾಮಿ ಹೀಗೆ ಕವಿಗಳ ಪದ್ಯಗಳೇ ಮನಸ್ಸಿನಲ್ಲಿ ನೆರೆದವು. ಆದರೆ ನಿನಗಾಗಿ ನನ್ನದೇ ಹಾಡು ಚೆನ್ನವಲ್ಲವೆ? ಆದರೆ ಕವಿಯಾಗುವುದು ಅಷ್ಟು ಸುಲಭವೆ? ನಮ್ಮ ಯೋಗಾನರಸಿಂಹ, ಜಯಗೋಪಾಲ್, ಉದಯಶಂಕರ್ ಇಂಥವರು ಸಿನೆಮಾಗಾಗಿ ಬರೆದ ಹಾಡುಗಳಲ್ಲಿ ಒಂದನ್ನು ಹಾಡಿದರೆ ಅನ್ನಿಸಿತು.

ಆದರೆ, ನಿನ್ನ ಪ್ರಿಯಕರನಾಗಿ ನನ್ನದೇ ಹಾಡು ಯೋಗ್ಯವಾದುದು ಎಂದು ಮನಸ್ಸು ಹೇಳಿತು. ಮೇಲಾಗಿ ನಕಲು ನಿನ್ನದು ಹೇಗಾದೀತು ಎಂದು ನೀನು ಕೇಳಿದರೆ ಎಂಬ ಅಳುಕು ಕಾಡಿತು. ಮೌನವೂ ಒಂದು ಹಾಡೇ ಎಂದು ಯಾರೋ ಹೇಳಿದ್ದು ನೆನಪಾಗಿ ಸಮಾಧಾನಗೊಂಡೆ. ಮೌನವಾಗಿ ಕುಳಿತೆ. ಒಳಗೆ ನಿನ್ನ ರೂಪವಿತ್ತು, ಅದರಲ್ಲಿ ನಿನ್ನ ಪ್ರೀತಿಯ ಪರಿಮಳವಿತ್ತು. ಅದನ್ನು ಅನುಭವಿಸುತ್ತ ನೀ ಬರುವ ದಾರಿ ಕಾಯುತ್ತಿದ್ದೆ. ನೀನು ಬಂದೆ.

ಬರುವ ಮುಂಚೆ ಗಾಳಿ ನಿನ್ನ ಸೆರಗು ಹಾರಾಡುವ ಲಯವನ್ನು ಮನಸ್ಸಿಗೆ ಕೇಳಿಸಿತು. ತಿತ್ತಿರಿ ಹಕ್ಕಿ ಬಾನಿಗೆ ಹಾರಿ 'ತಿತ್ತಿರಿ ತಿತ್ತಿರಿ ತೀ' ಎಂದು ಹಾಡಿತು. ಅದು ನನ್ನ ಕಿವಿಗೆ ಶಕುಂತಲೆ ಬಂದಳು ಎಂದು ಕೇಳಿಸಿತು. ನೀನು ಬಂದೇಬಿಟ್ಟೆ. ನೀನು ಬೆಳದಿಂಗಳಾಗಿದ್ದೆ. ನಾನು ಚಳಿಯಾಗಿದ್ದೆ. ಬೆಳದಿಂಗಳು ಚಳಿಯನ್ನು ಅಪ್ಪಿತು. ಚಳಿ ಬೆಳದಿಂಗಳನ್ನು ತಬ್ಬಿತು.

ರಾತ್ರಿರಾಣಿ ಗಿಡದ ಮರೆಯಲ್ಲಿ ನೋಡುತ್ತಿದ್ದುದ್ದು ಕಾಳಿದಾಸನೇ ಇರಬೇಕು. ಅವನು ಶೃಂಗಾರ ಶ್ಲೋಕ ಕಟ್ಟಲು ಕಣ್ಣು ಮುಚ್ಚಿದ. ನೀನು ತೆಕ್ಕೆ ಬಿಡಿಸಿಕೊಂಡು ನನ್ನ ಕೈ ಹಿಡಿದೆ. ಚಳಿಯಷ್ಟೇ ವಿಶಾಲವಾದ ಬೆಳದಿಂಗಳಲ್ಲಿ ನಾವು ನಡೆಯತೊಡಗಿದೆವು. ಹಾಡು ಕೇಳಿಸಿತು.

'ಈ ವಿಶಾಲ ಪ್ರಶಾಂತ ಏಕಾಂತ ಸಮಯದಲಿ
ಯಾರು ರಚಿಸಿದರೊ ಪ್ರಣಯ ಪರಿಮಳದ
ರಾತ್ರಿಯನು ಮೌನ ನಿಶ್ಶಬ್ದ ಪಿಸುಮಾತುಗಳಲಿ'

ಶಕುಂತಲೇ, ಇದು ಯಾರೋ ಹಾಡುತ್ತಿರಲಿಲ್ಲ. ನಾವೇ ಹಾಡಿಕೊಳ್ಳುತ್ತಿದ್ದ ಯುಗಳ ಗೀತೆ.

English summary
Here is the beautiful and heart touching love letter by Oneindia Kannada columnist Sa Raghunatha. We can just feel the intensity of love.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X