ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ಕಂಡ ಸಂಪಂಗಿ ಎಂಬ ಕೋಡಂಗಿ

By * ರವಿ ಬೆಳಗೆರೆ
|
Google Oneindia Kannada News

Sampangi the rotten KGF legislator
ಶಾಸಕ ಸಂಪಂಗಿ ಅಕ್ಕ ಪಕ್ಕದವರ ಮುಖಕ್ಕೆ ಮಸಿ ಬಳಿದು ತಾನು ಅಮೇಧ್ಯದ ಡ್ರಮ್ಮಿನಲ್ಲೇ ಮುಳುಗಿ ಜೈಲು ತಲುಪಿಕೊಂಡಿದ್ದಾನೆ. ಇಷ್ಟು ದಿನ 'ಆಪರೇಷನ್ ಕಮಲ' ಅನ್ನುತ್ತಿದ್ದವರು 'ಆಪರೇಷನ್ ಮಲ' ಅನ್ನತೊಡಗಿದ್ದಾರೆ. ದಲಿತನೆಂಬ ಯಾವ ರಿಯಾಯಿತಿಯನ್ನೂ ಕೊಡದೆ ಶಾಸಕ ಸಂಪಂಗಿಯನ್ನು ಕ್ಯಾಕರಿಸಿ ಆಚೆಗಟ್ಟಬೇಕು. ಲೋಕಾಯುಕ್ತ ಸಂತೋಷ್ ಹೆಗ್ಗಡೆ ಮತ್ತು ಅವರ ಸಿಬ್ಬಂದಿಯವರು ದೊಡ್ಡ ಬೇಟೆ ಆಡಿದ್ದಾರೆ. ಗುಮಾಸ್ತರಿಗಷ್ಟೇ ಸೀಮಿತವಾಗಿದ್ದ ನೇಣು ಕುಣಿಕೆ ಈಗ ಶಾಸಕರ ಭವನಕ್ಕೇ ಅಮರಿಕೊಂಡಿದೆ. ನಾಡಿನ ಇತಿಹಾಸದಲ್ಲೇ ಮೊದಲಬಾರಿಗೆ ಶಾಸಕನೊಬ್ಬ ಲಂಚ ತಿನ್ನುತ್ತ ಸಿಕ್ಕುಬಿದ್ದು, ಜೈಲಿಗೂ ಹೋಗಿದ್ದಾನೆ. ಆದರೆ ಟ್ರಾಪ್ ಆಗಿರುವ ಸಂಪಂಗಿಯ ಹಿಂದೆ ಕಡುಭ್ರಷ್ಟ ಎಸ್ಪಿ ವೆಂಕಟೇಶ ವ್ಯವಸ್ಥಿತವಾಗಿ ಕೆಲಸ ಮಾಡಿದ್ದಾನೆಂಬುದನ್ನು ಈತನಕ ರಹಸ್ಯವಾಗಿಯೇ ಉಳಿದಿದೆ.

ಮೂಲತಃ ಸಂಪಂಗಿ ಬೆಂಗಳೂರಿನ ಬಳಿಯ ಹೊಂಗಸಂದ್ರದ ದಲಿತ ಮತ್ತು ಬಡವ. ವಯಸ್ಸಿನ್ನೂ ಮೂವತ್ತೇಳು. ನಿನ್ನೆ ಮೊನ್ನೆಯ ತನಕ ದಲಿತ ಸಂಘರ್ಷ ಸಮಿತಿಯಲ್ಲಿ ಹೋರಾಟ ಮಾಡಿಕೊಂಡಿದ್ದವನು. ಯಾವಾಗ ದಸಂಸ ಇಬ್ಭಾಗವಾಯಿತೋ, ಸದರಿ ಸಂಪಂಗಿ ದಲಿತ-ಹಿಂದುಳಿದ-ಅಲ್ಪಸಂಖ್ಯಾತರ ಸಮಿತಿ ಅಂತ ಹೊಸ ಸಂಘಟನೆ ಕಟ್ಟಿದ. ಉಪ ಮುಖ್ಯಮಂತ್ರಿಯಾಗಿದ್ದಾಗ ಯಡಿಯೂರಪ್ಪ ಅಂಬೇಡ್ಕರರ ಫೋಟೋ ತೆಗೆಸಿ ಹಾಕಿದ್ದರು ಅಂತ ವಿವಾದವಾಯಿತಲ್ಲ? ಆಗ ಭಾರೀ ಹೋರಾಟ ಮಾಡಿದ ಸಂಪಂಗಿಯನ್ನು ಹತ್ತಿರ ಕರೆದು 'ಸುಮ್ನಿರು' ಅಂತ ಸಂಜ್ಞೆ ಮಾಡಿದ ಯಡಿಯೂರಪ್ಪ, ನಂತರದ ಚುನಾವಣೆಯಲ್ಲಿ ಕೆಜಿಎಫ್ ನಿಂದ ಸಂಪಂಗಿಗೆ ಟಿಕೀಟು ಕೊಟ್ಟರು. ಫಂಡೂ ಕೊಟ್ಟರು.

ಮೊದಲು ಕೆಜಿಎಫ್ ನಗರಕ್ಕೆ ಮಾತ್ರ ಸೀಮಿತವಾಗಿದ್ದ ಈ ಕ್ಷೇತ್ರ ವಲಸಿಗ ತಮಿಳು ಕುಟುಂಬಗಳಿಂದಾಗಿ, ಸತತವಾಗಿ ತಮಿಳರನ್ನೇ ಶಾಸನ ಸಭೆಗೆ ಆಯ್ದು ಕಳಿಸುತ್ತಿತ್ತು. ಆರ್ಮಗಂ, ನರಸಿಂಹನ್, ವಾಸನ್, ಮಣಿ, ಭಕ್ತವತ್ಸಲಂ, ರಾಜೇಂದ್ರನ್ ಎಲ್ಲ ಅವರೇ. ಆದರೆ ಕ್ಷೇತ್ರ ಮರುವಿಂಗಡನೆಯಾದಾಗ ಕೆಜಿಎಫ್ ಬೇತಮಂಗಲದ ಹಳ್ಳಿಗಳು ಸೇರಿಕೊಂಡವು. ಕೆಜಿಎಫ್ ನಲ್ಲಿ ಹಲವಾರು ವರ್ಷಗಳಿಂದ ರಾಜೇಂದ್ರನ್ ಎಂಬಾತ ದುಡಿದಿದ್ದನಾದರೂ ಆತನ ಬಾಯಿಮುಚ್ಚಿಸಿದ ಯಡಿಯೂರಪ್ಪ ಸಂಪಂಗಿಗೆ ಟಿಕೀಟು ಕೊಟ್ಟರು. ಬೇತಮಂಗಲದ ಮತಗಳೆಲ್ಲ ಬಿದ್ದುದರಿಂದ ಈ ಅವಿವೇಕಿ ಸಂಪಂಗಿ ಗೆದ್ದೂಬಿಟ್ಟ.

ಕೆಜಿಎಫ್ ನ ಪರಿಸ್ಥಿತಿ ನೋಡಿದರೆ ಎಂಥವರಿಗೂ ಅಸಹ್ಯ ಹುಟ್ಟುತ್ತದೆ. ಇಲ್ಲಿ ನೀರಿಗೆ ಬರವಿದೆ. ಮುಚ್ಚಿ ಹೋದ ಚಿನ್ನದ ಗಣಿಯ ಎರಡೂವರೆ ಸಾವಿರ ಕಾರ್ಮಿಕರಿಗೆ ಪರಿಹಾರ ಸಿಕ್ಕಿಲ್ಲ. ಅವರಲ್ಲಿ ಅನೇಕರಿಗೆ ರೋಗ ಬಾಧೆ. ಇಂಥ ಊರಿಗೆ ಸಂಪಂಗಿ ದೊಡ್ಡ ಉಪಕಾರವನ್ನು ಮಾಡಬಹುದಿತ್ತು. ಆದರೆ ಮಾಡಿದ ಮೊದಲ ಕೆಲಸವೆಂದರೆ, ಕೆಎಸ್ಆರ್ ಪಿಯಲ್ಲಿದ್ದ ಎಚ್.ಎಸ್.ವೆಂಕಟೇಶ್ ಎಂಬ ಕಡುಭ್ರಷ್ಟನನ್ನು ಕೆಜಿಎಫ್ ಗೆ ಎಸ್ಪಿ ಆಗಿ ತಂದದ್ದು. ಕನಕಪುರ ರಸ್ತೆಯಲ್ಲಿ ತೋಟ ಮಾಡಿರುವ ವೆಂಕಟೇಶ, ತೋಟದ ಕೆಲಸಕ್ಕೆ ಕೆಎಸ್ಆರ್ ಪಿ ಪೇದೆಗಳ ಬೆಟಾಲಿಯನ್ನನ್ನೇ ಕಳಿಸುತ್ತಿದ್ದಂತಹ ಖದೀಮ. ಮಹಾನ್ ಕೊಳಕು ಬಾಯಿಯ ಅಧಿಕಾರಿ. ಈತನಿಗೆ ಕಿತ್ತೋಗಿರುವ ಕೆಜಿಎಫ್ ಕೂಡ ಚಿನ್ನದ ಗಣಿಯಂತೆ ಕಂಡದ್ದು ನಿಜವಾದ ದುರಂತ.

ಕೆಜಿಎಫ್ ನಲ್ಲಿ ಗಣಿಕಳ್ಳರಿದ್ದಾರೆ. ಕೃಷ್ಣಗಿರಿ-ರಾಮಕುಪ್ಪಂ ಹೈವೇ ತುಂಬ ಲಾರಿಗಳು ಓಡಾಡುತ್ತವೆ. ಆಂಧ್ರ ಮತ್ತು ತಮಿಳುನಾಡಿನಿಂದ ಬರುವ ಕಳಪೆ ಅಕ್ಕಿ ಇಲ್ಲಿ ಪಾಲೀಶಾಗಿ ಮತ್ತೆ ಮಾರುಕಟ್ಟೆಗೆ ಹೋಗುತ್ತದೆ. ಇವೆಲ್ಲವುಗಳಿಂದಲೂ 'ಪೊಲೀಸ್ ಮಾಮೂಲು' ಹುಟ್ಟುತ್ತದೆ. ಇದರ ರುಚಿ ಕಂಡವನು ಎಸ್ಪಿ ವೆಂಕಟೇಶ್. ಮೊದಲೆಲ್ಲ ಸಂಪಂಗಿಗೆ ಹೋಗುತ್ತಿದ್ದ ಠಾಣೆಗಳ ಮಾಮೂಲನ್ನು ತಾನೇ ತಿಂದು ಮುಗಿಸತೊಡಗಿದ. ಇದೇ ಕಾರಣಕ್ಕಾಗಿ ಸಂಪಂಗಿ ಮತ್ತು ವೆಂಕಟೇಶ್, ಎಸ್ಪಿ ಛೇಂಬರಿನಲ್ಲೇ ಕೊರಳಪಟ್ಟಿ ಹಿಡಿದುಕೊಂಡು ಕಿತ್ತಾಡಿಬಿಟ್ಟರು.

ಇದು ಬಹಿರಂಗವಾದುದು ಸಾಲದೆಂಬಂತೆ ಶಿಕ್ಷಕರನ್ನೆಲ್ಲ ಬಾಯಿಗೆ ಸಿಕ್ಕಂತೆ ಬೈದ ಸಂಪಂಗಿ ಅಲ್ಲೂ ಅಪಹಾಸ್ಯಕ್ಕೆ ಈಡಾದ. ನಗರಸಭೆಯಲ್ಲಿ ಕದನವಾಡಿ ಮರ್ಯಾದೆ ಕಳೆದುಕೊಂಡ. ಸರ್ಕಾರಿ ಆಸ್ಪತ್ರೆಯಲ್ಲಿ ಶಾಸಕರ ಕಚೇರಿ ತೆರೆದು ಹಚ್ಯಾ ಅನ್ನಿಸಿಕೊಂಡ. ಬಸ್ ಚಾಲಕ ಕರುಣಾನಿಧಿ ಎಂಬಾತನಿಗೆ 'ನನ್ನ ಕಾರು ಓವರ್ ಟೇಕ್ ಮಾಡ್ತೀಯಾ?' ಅಂತ ನಿಲ್ಲಿಸಿ ಬಡಿದ. ಸರ್ಕಾರ ನೂರು ದಿನ ಮುಗಿಸಿದಾಗ, ಅದರ ಆಚರಣೆಗಾಗಿ ಕ್ಷೇತ್ರದ ಅಧಿಕಾರಿಗಳಿಂದೆಲ್ಲ ಹಣ ಎತ್ತಿ ಅಸಹ್ಯ ಮೂಡಿಸಿದ. ಎಲ್ಲಕ್ಕಿಂತ ಹೆಚ್ಚಾಗಿ, ಕಾರ್ಯಕ್ರಮಗಳಲ್ಲಿ ಬಿಜೆಪಿಯ ಹೆಸರನ್ನೇ ಮರೆತು ತನ್ನ ಸಂಘಟನೆಯ ಹೆಸರು ಮೆರೆಸತೊಡಗಿದ. ಸ್ಥಳೀಯ ಬಿಜೆಪಿ ಕಾರ್ಯಕರ್ತರು ಸಂಪಂಗಿಯ ಮುಖ ಕಂಡರೆ ಅಸಹ್ಯಿಸಿಕೊಳ್ಳತೊಡಗಿದರು.

ಇಷ್ಟೆಲ್ಲ ಹಿನ್ನೆಲೆಯಿರುವಾಗಲೇ ಆಂಡರ್ಸನ್ ಪೇಟೆಯ ಫರೂಕ್ ಮತ್ತು ನಯಾಜ್ ಎಂಬಿಬ್ಬರು ಮುಸ್ಲಿಮರು ಒಂದು ಸೈಟಿಗಾಗಿ ಜಗಳವಾಡಿಕೊಂಡರು. ಇದರಲ್ಲಿ ಫರೂಕ್ ಶ್ರೀಮಂತ. ಸೈಟಿನ ನಿಜವಾದ ಒಡೆಯನೂ ಅವನೇ. ಎರಡು ನ್ಯಾಯಾಲಯಗಳು ಅವನ ಪರವಾಗಿ ತೀರ್ಪು ಕೊಟ್ಟಿವೆ. ಆದರೆ ಸದರಿ ಫರೂಕ್ ತನ್ನನ್ನು ಕೊಲ್ಲಲು ಯತ್ನಿಸಿದ ಅಂತ ನಯಾಜ್ ಸುಳ್ಳು ದೂರು ಕೊಡುತ್ತಾನೆ. ಅದಕ್ಕೆ ಪ್ರತಿಯಾಗಿ ನಯಾಜ್ ವಿರುದ್ಧ ಫರೂಕ್ ವಂಚನೆಯ ದೂರು ನೀಡಿದ. ಹೀಗೆ ಸಾಬರಿಬ್ಬರು ಜಗಳವಾಡುತ್ತಿದ್ದರೆ ನಯಾಜ್ ನ ಪರವಾಗಿ ಶಾಸಕ ಸಂಪಂಗಿ ನಿಂತುಕೊಳ್ಳುತ್ತಾನೆ. ಫರೂಕ್ ಪರವಾಗಿ ಎಸ್ಪಿ ವೆಂಕಟೇಶ್ ನಿಲ್ಲುತ್ತಾನೆ. ಕೇವಲ ನಿಂತದ್ದಷ್ಟೆ ಅಲ್ಲ, ಸರಹೊತ್ತಿನಲ್ಲಿ ನಯಾಜ್ ಮನೆಗೆ ಪೊಲೀಸರನ್ನು ಕಳಿಸಿ ಹೆಂಗಸರನ್ನೆಲ್ಲ ಹಿಂಸಿಸುತ್ತಾನೆ. ಹೀಗಾಗಿ ನಯಾಜ್ ನ ಹೆಂಡತಿ ಮತ್ತು ಇಬ್ಬರು ಮಕ್ಕಳು ವಿಷ ಕುಡಿದು ಆಸ್ಪತ್ರೆ ಸೇರುತ್ತಾರೆ. ಇದನ್ನೇ ಕಾಯುತ್ತಿದ್ದ ಸಂಪಂಗಿ ಫರೂಕ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದಿಸಿದ ಅಂತ ಕೇಸು ಮಾಡಿಸುತ್ತಾನೆ. ಆದರೆ ರಂಗೋಲಿ ಕೆಳಗೆ ನುಸುಳುವ ವೆಂಕಟೇಶ, ಫರೂಕ್ ಗೆ ಜಾಮೀನು ಸಿಗುವಂತೆ ಮಾಡುತ್ತಾನೆ.

ಕೊನೆಗೆ ಈ ವೆಂಕಟೇಶ ತನಗೆ ಮಣಿಯುವವನಲ್ಲ ಅಂತ ಸಂಪಂಗಿಗೆ ಖಾತರಿಯಾಗಿ ತನ್ನ ಮಾಜಿ ಶಿಷ್ಯನನ್ನು ಸಿಓಡಿಗೆ ವರ್ಗಾ ಮಾಡಿಸುತ್ತಾನೆ. ಆಗ ರೂಪುಗೊಳ್ಳುವುದೇ ಸಂಪಂಗಿಯನ್ನು ಖೆಡ್ಡಾಕ್ಕೆ ಕೆಡುವುವ ಮಾಸ್ಟರ್ ಪ್ಲಾನ್. ಇದನ್ನು ಫರೂಕ್ ಮತ್ತು ವೆಂಕಟೇಶ ಸೇರಿಯೇ ಮಾಡುತ್ತಾರೆ. 'ಸಾಯೋ ತಂಕಾ ನಿಮ್ಮ ಫಾಲೋಯರ್ ಆಗಿರ್ತೀನಿ. ಕೇಸು ವಾಪಸ್ ತೆಗೆಸಿ' ಅಂತ ಸಂಪಂಗಿಗೆ ಗಂಟು ಬೀಳುತ್ತಾನೆ ಫರೂಕ್. "ಐದು ಲಕ್ಷ ಕೊಟ್ಟರೆ ಸಹಿ ಮಾಡಿಸ್ತೀನಿ" ಅಂತ ಬಾಯಿಬಿಟ್ಟು ಕೇಳುತ್ತಾನೆ ಸಂಪಂಗಿ. ಅದಕ್ಕೆ ಒಪ್ಪಿಕೊಂಡ ಫರೂಕ್, ವೆಂಕಟೇಶನ ಸಲಹೆಯ ಮೇರೆಗೆ ಲೋಕಾಯುಕ್ತರನ್ನು ಸಂಪರ್ಕಿಸುತ್ತಾನೆ.

ಲೋಕಾಯುಕ್ತ ಸಂತೋಷ್ ಹೆಗ್ಗಡೆಯವರೊಂದಿಗೆ ರೂಪಕ್ ಕುಮಾರ್ ದತ್ತಾ ಮತ್ತು ಮಧುಕರ ಶೆಟ್ಟಿಯಂತಹ ನಿಸ್ಪೃಹ ಅಧಿಕಾರಿಗಳಿದ್ದಾರೆ. ಅವರು ಫರೂಕ್ ಮತ್ತು ಸಂಪಂಗಿಯ ಮಾತುಕತೆ ರೆಕಾರ್ಡ್ ಮಾಡಿಕೊಂಡಿದ್ದಾರೆ. ಕಡು ಭ್ರಷ್ಟ ಸಂಪಂಗಿ ಪದೇ ಪದೆ ಐದು ಲಕ್ಷ ಕೇಳಿದ್ದಾನೆ. ಶಾಸಕರ ಭವನಕ್ಕೆ ತಂದುಕೊಡು ಅಂದಿದ್ದಾನೆ. ಕಡೆಗೆ ಐವತ್ತು ಸಾವಿರ ನಗದು ಮತ್ತು ನಾಲ್ಕೂವರೆ ಲಕ್ಷ ಚೆಕ್ ನೊಂದಿಗೆ ಫರೂಕ್ ಶಾಸಕರ ಭವನಕ್ಕೆ ಹೋಗಿ ಸಂಪಂಗಿಗೆ ದುಡ್ಡು ಕೊಟ್ಟಿದ್ದಾನೆ. ದುಡ್ಡು ಸಿಗುತ್ತಿದ್ದಂತೆಯೇ ಆಂಡರ್ಸನ್ ಪೇಟೆ ಪೊಲೀಸರಿಗೆ ಫೋನ್ ಮಾಡಿದ ಸಂಪಂಗಿ, "ಫರೂಕ್ ಕೇಸು ಪೆಂಡಿಂಗ್ ನಲ್ಲಿಡಿ. ನಾನು ಆಮೇಲೆ ಅದೇನೇನು ಮಾಡಬೇಕೆಂದು ಹೇಳ್ತೀನಿ" ಅಂದಿದ್ದಾನೆ. ಇದನ್ನು ರೆಕಾರ್ಡ್ ಮಾಡಿಕೊಂಡ ಲೋಕಾಯುಕ್ತ ಅಧಿಕಾರಿಗಳು, ಸಂಪಂಗಿಯನ್ನು ಹಣದ ಸಮೇತ ಹಿಡಿದು ಜೈಲಿಗೆ ಗದುಮಿದ್ದಾರೆ.

ಇದನ್ನೆಲ್ಲ ಯಾಕಿಷ್ಟು ವಿವರವಾಗಿ ಬರೆದೆ ಅಂದರೆ, ಮಹಾನ್ ಶಿಸ್ತಿನ ಪಕ್ಷ ಅನ್ನಿಸಿಕೊಂಡಿದ್ದ ಬಿಜೆಪಿಯ ಮಾನ ಮೂರಾಬಟ್ಟೆಯಾಗಿದೆ. ರಾಜಕಾರಣಿಗಳು ಅಂದರೇನೇ ಭ್ರಷ್ಟರು ಎಂಬ ಸಾರ್ವಜನಿಕ ನಂಬಿಕೆ ಈ ಘಟನೆಯಿಂದಾಗಿ ಮತ್ತಷ್ಟು ದೃಢವಾಗಿದೆ. ಈ ಹಿಂದೆ ಅಧಿಕಾರದಲ್ಲಿದ್ದ ಧರಂಸಿಂಗ್ ಮನೆಯಲ್ಲಿ ನೋಟು ಎಣಿಸಲು ಕೌಂಟಿಂಗ್ ಮಷೀನನ್ನೇ ಇಟ್ಟುಬಿಟ್ಟಿದ್ದರು. 'ಆಪರೇಷನ್ ಕಮಲ' ಎಂಬುದು ಅರಳಿದ್ದೇ ರೊಕ್ಕದ ಕೆಸರಿನಲ್ಲಿ. ಇಡೀ ಚುನಾವಣಾ ವ್ಯವಸ್ಥೆ ದುಡ್ಡಿನ ಮೇಲೆ ನಿಂತಿದೆ. ಅಂದಾಗ, ಬೇರೆಯಾದ ಯೋಗ್ಯತೆಯೂ ಇಲ್ಲದ ಸಂಪಂಗಿಯಂಥ ಪುಂಡ 'ಹೋರಾಟ'ಗಾರರಿಗೆ, ಅವರ ಬ್ಲಾಕ್ ಮೇಲ್ ಗೆ ಬಲಿಯಾದ ಯಡಿಯೂರಪ್ಪ ಈಗ, ಸಂಪಂಗಿ ಸಿಕ್ಕು ಬಿದ್ದಿರುವಾಗ ಹಣೆ ಚಚ್ಚಿಕೊಂಡು ಏನು ಪ್ರಯೋಜನ?

ಸಂಪಂಗಿಯದೊಂದು ಉದಾಹರಣೆಯಷ್ಟೆ. ಲೋಕಾಯುಕ್ತರು ಕೈತೊಳೆದುಕೊಂಡು ಬೆನ್ನತ್ತಿದರೆ ಶೇಕಡ 99ರಷ್ಟು ಶಾಸಕರು, ಮಂತ್ರಿಗಳು ಸಾಲುಗಟ್ಟಿ ಜೈಲಿಗೆ ಹೋಗುತ್ತಾರೆ. ಇದೊಂದು ವಿಷಯದಲ್ಲಿ ಪಕ್ಷಭೇದ ಕೂಡ ಇಲ್ಲ.

ಆದರೆ, ಸಂಪಂಗಿಯ ಬಂಧನ, ಜಾಮೀನು ನಿರಾಕರಣೆ, ಆಸ್ಪತ್ರೆಯಿಂದ ಆಸ್ಪತ್ರೆಗೆ ಅಂಡಲೆದು ಜೈಲು ತಪ್ಪಿಸಿಕೊಳ್ಳುತ್ತಿರುವ ಪರಿ-ಇದನ್ನೆಲ್ಲ ನೋಡುತ್ತಿದ್ದರೆ, ಈ ಕೆಲಸ ತುಂಬ ಮೊದಲೇ ಆಗಬೇಕಿತ್ತು ಅನ್ನಿಸದೆ ಇರಲಾರದು. ಸಂಪಂಗಿಯೊಬ್ಬ ಟ್ರಾಪ್ ಆದ ಮಾತ್ರಕ್ಕೆ ರಾಜಕಾರಣದಿಂದ ಭ್ರಷ್ಟಾಚಾರವೇ ಇಲ್ಲವಾಗಿಬಿಡುತ್ತದೆ ಅನ್ನುವುದು ಸುಳ್ಳು. ಕಡೇ ಪಕ್ಷ ಈಪರಿ ಬೀದಿಗೆ ನಿಂತು ಸುಲಿಗೆ ಮಾಡುವುದು ತಪ್ಪುತ್ತದೆ. ಸಂಪಂಗಿಯನ್ನು ಬಿಜೆಪಿಯಿಂದ ಅಮಾನತ್ತು ಮಾಡಲಾಗಿದೆ ಅಂತ ಘೋಷಿಸಿದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ತೆಗೆದುಕೊಂಡಿದ್ದಿದ್ದರೆ ಜನರಲ್ಲಿ ನಂಬಿಕೆ ಮೂಡುತ್ತಿತ್ತು. ನರ್ಸ್ ಹಗರಣದಲ್ಲಿ ಸಿಕ್ಕ ರೇಣುಕಾಚಾರ್ಯನಂಥವರು ಮುಖ ಒರೆಸಿಕೊಂಡು ಮೊದಲಿಗಿಂತ ಜರ್ಬಾಗಿ ಓಡುಡುತ್ತಿರುವಾಗ ಯಾರಿಗಾದರೂ ಪಕ್ಷದ ಬಗ್ಗೆ ಹೇಗೆ ನಂಬಿಕೆ ಹುಟ್ಟೀತು? ಯಡಿಯೂರಪ್ಪ ಯೋಚಿಸಲಿ.

(ಸ್ನೇಹಸೇತು : ಹಾಯ್ ಬೆಂಗಳೂರು)

ಪೂರಕ ಓದಿಗೆ

ಲಂಚ ತಿನ್ನುತ್ತಿದ್ದ ಬಿಜೆಪಿ ಶಾಸಕ ಬಲೆಗೆಲಂಚ ತಿನ್ನುತ್ತಿದ್ದ ಬಿಜೆಪಿ ಶಾಸಕ ಬಲೆಗೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X