ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರುವುದೊಂದೆ ಜೀವನ,ನಿಮ್ಮ ಬದುಕು ಹಸನಾಗಲಿ

By Staff
|
Google Oneindia Kannada News

Making the most of your prime timeಗಂಡ ಹೆಂಡತಿ ಸಂಸಾರ ಮಕ್ಕಳು ಮರಿ ಆನಂದ ಹಬ್ಬದೂಟ ಮತ್ತೆಲ್ಲ ಚೆನ್ನಾಗಿದ್ದರೆ ಅನುಭವಿಸುವಂಥವರಾಗಿರಿ. ಆಕಸ್ಮಾತ್ ಸಂಬಂಧಗಳು ನೆನೆಗುದಿಗೆ ಬಿದ್ದಿದ್ದರೆ, ಅಥವಾ ರಸಹೀನವಾಗಿದ್ದೂ ಏನೂ ಆಗಿಲ್ಲವೇನೋ ಎನ್ನುವಂತಿದ್ದರೆ ನೀವಿದನ್ನ ಓದಬಹುದು. ಇರುವುದೊಂದೆ ಜೀವನ, ಅದು ಹೇಗಿರಬೇಕು ಎಂದು ನಿರ್ಧರಿಸುವವರು ನೀವೆ. ಯಾವುದಕ್ಕೂ ಇವತ್ತೇ ಒಳ್ಳೆಯ ದಿವಸ, ನೆನಪಿರಲಿ.

ರವಿ ಬೆಳಗೆರೆ

ಇರುವುದು ಒಂದೇ ಬದುಕು. spending with a wrong person! ಇದು ಭಯಾನಕ. Wrong hands ಗೆ ಬದುಕನ್ನು ಒಪ್ಪಿಸಿಬಿಟ್ಟವರ ನರಳಿಕೆ ಒಂದೆರಡು ದಿನಗಳದಲ್ಲ. ಜೀವನ ಪರ್ಯಂತ ನರಳುತ್ತಲೇ ಇರಬೇಕಾಗುತ್ತದೆ. ನೀವು ಬೇಕಾದರೆ ನೋಡಿ: ಎಷ್ಟೋ ಮದುವೆಗಳು ಕೆಲವು ವರ್ಷಗಳು ಕೆಲವು ವರ್ಷಗಳ ನಂತರಸದ್ದಿಲ್ಲದೆ ತೀರಿಕೊಂಡು ಬಿಟ್ಟಿರುತ್ತದೆ. ದಂಪತಿಗಳು ಸುಮ್ಮನೆ ಜೊತೆಗಿರುತ್ತಾರೆ: ಇಬ್ಬರು ಗಂಡಸರು ಒಂದೇ ರೂಮಿನಲ್ಲಿದ್ದಂತೆ. ಅವರ ಮಧ್ಯೆ ಶೃಂಗಾರ ನಶಿಸಿ ಹೋಗಿರುತ್ತದೆ. ಪ್ರೇಮದ ಒಂದು ನೋಟ ಕೂಡ ಇರುವುದಿಲ್ಲ. ಒಳ್ಳೆಯ ಮಾತಿಗೂ ಕೊರತೆ. ಮದುವೆಯಾಗಿದ್ದೇವಲ್ಲಾ ಎಂಬ ಕಾರಣಕ್ಕೋಸ್ಕರಒಂದೇ ಮನೆಯಲ್ಲಿ ಇರುತ್ತಿರುತ್ತಾರೆ. ಎಷ್ಟೋ ಸಲ ಸೆಕ್ಸೂ ನಿಷ್ಕ್ರಿಯವಾಗಿ ಬಿಟ್ಟಿರುತ್ತದೆ. ಇದಕ್ಕೆ ಮುಖ್ಯ ಕಾರಣವೇ wrong selection.

ಪ್ರೀತಿಸುವಾಗ ಹಾಗನ್ನಿಸಿರುವುದಿಲ್ಲ. ಇವನು ಹೊಂದಿಕೊಳ್ಳುತ್ತಾನೆ .ಇವನು ಚೆನ್ನಾಗಿ ನೋಡಿಕೊಳ್ಳುತ್ತಾನೆ. ಇವಳು ಬೌದ್ಧಿಕವಾಗಿ ನನ್ನೊಂದಿಗೆ ಬೆಳೆಯುತ್ತಾಳೆ. ಮಕ್ಕಳನ್ನು ಮಟ್ಟಸವಾಗಿ ಸಲಹುತ್ತಾಳೆ. ಹಾಗಂತ ಅಂದುಕೊಂಡು, ಆ ನಂಬಿಕೆಯಿಂದಲೇ ಮದುವೆಯಾಗುತ್ತೇವೆ. ಇರುವ ಒಂದೇ ಬದುಕನ್ನು ಅವರೊಂದಿಗೆ ಕಳೆಯಲು ನಿರ್ಧರಿಸುತ್ತೇವೆ. ಸಾಮಾನ್ಯವಾಗಿ ಇಪ್ಪತ್ತೈದನೇ ವಯಸ್ಸಿನಗೆ ಮದುವೆ ಆದೇವು ಅಂತ ಇಟ್ಟುಕೊಂಡರೆ, ಮುಂದಿನ ಎಪ್ಪತ್ತೈದು ವರ್ಷ ಆ ವ್ಯಕ್ತಿಯೊಂದಿಗೆ ಕಳೆಯಬೇಕು. ಆ ಎಪ್ಪತ್ತೈದು ವರ್ಷಗಳ ಪೈಕಿ ಮೊದಲ ಇಪ್ಪತ್ತೈದು ವರ್ಷಗಳದು prime time ತಾರುಣ್ಯ, ಉತ್ಸಾಹ, ದೇಹಾಕಾಂಕ್ಷೆ, ಸಡಗರ, ಏನನಾದರೂ ಸಾಧಿಸಬೇಕು ಎಂಬ ಹಪಹಪಿ, ಮಕ್ಕಳ ಬದುಕು ರೂಪಿಸುವಿಕೆ-ಇವೆಲ್ಲ activity ಭರದಿಂದ ನಡೆಯುವ ಸಂಭ್ರಮದ ಕಾಲ. ಅದರ ಪೈಕಿ ಕೆಲವು ದಿನಗಳನ್ನು ಜಗಳಕ್ಕೆ ಅಂತ, ರುಜಿನಕ್ಕೆ , ಹೆರಿಗೆಗೆ, inevitable ತವರುಮನೆ ವಾಸಕ್ಕೆ ಅಂತ ಪ್ರತ್ಯೇಕಿಸಿ ಇಟ್ಟರೂ ಕನಿಷ್ಠ 23 ವರ್ಷಗಳನ್ನು ಒಟ್ಟಿಗೆ ಕಳೆಯಲೇಬೇಕು. ಹಾಗೆ ಕಳೆಯುವುದು wrong person ಜೊತೆಗೆ ಅಂತಾಗಿಬಿಟ್ಟರೆ ಗತಿಯೇನು?

ಪಶ್ಚಿಮ ದೇಶಗಳ ಮನುಷ್ಯ ನಮಗಿಂತ ಬುದ್ಧಿವಂತ. Wrong person ಕೈಗೆ ಬಿದ್ದೆ ಅಂತ ಗೊತ್ತಾದರೆ ಠಕ್ ಅಂತ ಡಿವೋರ್ಸಿಗೆ ಅರ್ಜಿ ಇಟ್ಟುಬಿಡುತ್ತಾನೆ. ಅದರಿಂದಾಗಿ ಅವನು ಕಳೆದುಕೊಳ್ಳುವುದು ಒಂದಷ್ಟು ರುಪಾಯಿ, ಅಷ್ಟೆ. ನಾವು ಇಡೀ ಬದುಕನ್ನೇ ಕಳೆದುಕೊಳ್ಳುತ್ತೇವಲ್ಲ? ಏಷ್ಟು ಕೋಟಿ ರುಪಾಯಿ ಕೊಟ್ಟ ಮಾತ್ರಕ್ಕೆ ಹರೆಯದ ಇಪ್ಪತ್ತೈದು ವರ್ಷ ವಾಪಾಸು ಬಂದೀತು ಹೇಳಿ? ನನ್ನಲ್ಲಿಗೆ ತಮ್ಮ ಕಷ್ಟ ಸುಖ ಹೇಳಿಕೊಳ್ಳಲಿಕ್ಕೆ, ಕೌನ್ಸಿಲಿಂಗೆ ಅಂತ ಅನೇಕ ಹೆಣ್ಣು ಮಕ್ಕಳು ಬರುತ್ತಿರುತ್ತಾರೆ. ಅವರಿಗೆ ಗಂಡನ ಮೇಲೆ ನಾನಾ ತರಹದ ದೂರು. ಕುಡೀತಾನೆ, ಹೊಡೀತಾನೆ. ಇನ್ನೊಂದು ಸಂಬಂಧವಿದೆ: ಹೀಗೆ. ಅವರಿಗೆ ಮದುವೆಗಳಾಗಿ ಹತ್ತು ಹನ್ನೆರಡು ವರ್ಷಗಳಾಗಿರುತ್ತದೆ. ಸರಿಯಾಗಿ ಪರಿಶೀಲಿಸಿ ನೋಡಿದರೆ, ಮದುವೆಯಾದ ಮೊದಲನೇ ವರ್ಷವೇ ನಾನು wrong person ಕೈಹಿಡಿದೆ ಅಂತ ಗೊತ್ತಾಗಿಬಿಟ್ಟಿರುತ್ತದೆ.

ಆದರೂ ಆಸೆ. ಅವನು ಸರಿ ಹೋದಾನೇನೋ ಅಂತ ನಾಲ್ಕೈದು ವರ್ಷ ಕಾಯುತ್ತಾರೆ. ಅಷ್ಟು ಹೊತ್ತಿಗೆ ಎರಡು ಮಕ್ಕಳಾಗಿರುತ್ತವೆ. ಸರಿ ಹೋಗುವುದು ಹಾಗಿರಲಿ; ಅವನು ಮತ್ತಷ್ಟು ಕೆಟ್ಟು ಕೆರ ಹಿಡಿದಿರುತ್ತಾನೆ. ಆಗಲಾದರೂ ಇವರು ಕೈ ಕೊಡವಿಕೊಂಡು ಅವನನ್ನು ಬಿಟ್ಟು ಬರುತ್ತಾರಾ ಅಂತ ನೋಡಿದರೆ, "ಮಕ್ಕಳಿಗೋಸ್ಕರವಾದರೂ ಜೊತೇಲಿರಬೇಕಲ್ಲಾ ಸಾರ್" ಅನ್ನುತ್ತಾರೆ. ಅಲ್ಲಿಗೆ ಇಡೀ ಬದುಕು ಒಬ್ಬ wrong person ಜೊತೆಗೆ lock ಆದಂತೆಯೇ.

"ನನ್ನಾಸಕ್ತಿ ಮತ್ತು ಮನಸ್ಥಿತಿಯೇ ಬೇರೆ. ಆದರೆ ನನಗೆ ಸಿಕ್ಕ ನೌಕರಿಯೇ ಬೇರೆ' ಅಂತ ಯಾರಾದರೂ ಅಂದರೆ ಅದು ಅಂಥ ಆತಂಕಕಾರಿಯಾದ ಸಂಗತಿಯಲ್ಲ. ಹೊಟ್ಟೆಪಾಡಿನ ನೌಕರಿ ಹೆಚ್ಚೆಂದರೆ ದಿನಕ್ಕೆ ಎಂಟು ತಾಸು, ವಾರದಲ್ಲಿ ಆರು ದಿನ ತಿನ್ನುತ್ತದೆ. ಉಳಿದ ಸಮಯದಲ್ಲಿ ನಮ್ಮ ರುಚಿಗೆ , ಅಭಿರುಚಿಗೆ ಮೀಸಲಿಡಬಹುದು. ಈಗ ನನ್ನನ್ನೇ ನೋಡಿ. ನಾನು ಓದಿದ್ದು ಇತಿಹಾಸ. ಮಾಡುತ್ತಿರುವುದು ಪತ್ರಿಕೋದ್ಯಮ.

ಆದರೆ ಮದುವೆ ಹಾಗಲ್ಲವಲ್ಲ? ಅದಕ್ಕೆ ರಿಟೈರ್ ಮೆಂಟೂ ಇಲ್ಲ. ದಿನದ ಇಪ್ಪತ್ನಾಲ್ಕು ಗಂಟೆ ವರ್ಷದ ಅಷ್ಟೂ ದಿನ , ಬದುಕಿನ ಅಷ್ಟೂ ವರ್ಷ ಒಟ್ಟಿಗೆ ಕಳೆಯಲೇ ಬೇಕು. ಮೈಯ ವಾಸನೆಯಿಂದ ಹಿಡಿದು, ಮಾಡುವ ಅವಿವೇಕಿಗಳ ತನಕ ಎಲ್ಲವನ್ನೂ ನಿರಂತರವಾಗಿ ಸಹಿಸಿಕೊಳ್ಳಬೇಕು. "ಥತ್ , ಹೇಗಾದರೂ ಇದ್ದುಕೊಂಡು ಹಾಳುಬಿದ್ದು ಹೋಗಲಿ, ನನ್ನ ಪಾಡಿಗೆ ನಾನಿರುತ್ತೇನೆ" ಅಂತ ತೀರ್ಮಾನಿಸಿ ಹೆಂಡತಿಯೆಡಗಿನ ಕರ್ತವ್ಯಗಳನ್ನಷ್ಟೆ ಪೂರೈಸಿ ಇದ್ದ್ದು ಬಿಡುವವರಿದ್ದಾರೆ. ಅಂಥ ದಾಂಪತ್ಯಗಳನ್ನೂ ನಾನು ನೋಡಿದ್ದೇನೆ, Once again, ಅದು ಒಂದೇ ಕೋಣೆಯಲ್ಲಿ ಇಬ್ಬರು ಗಂಡಸರಿದ್ದ ಹಾಗೆ ಎಂಬಂಥ ನೀರಸ ದಾಂಪತ್ಯ, ಆ ಮುಖಗಳಲ್ಲಿ ಉಲ್ಲಾಸವಿರುವುದಿಲ್ಲ. ಅವರ ಜೀವನಾಸಕ್ಕಿ ಕುಗ್ಗಿ ಹೋಗಿರುತ್ತದೆ. ಮುಖ ನೋಡಿದ ಕೂಡಲೆ ಈತ happy person ಅಲ್ಲ ಎಂಬುದು ಗೊತ್ತಾಗತೊಡಗುತ್ತದೆ.

"ಸಣ್ಣದಕ್ಕೂ ಈಗಿನ ಕಾಲದವರು ಡಿವೋರ್ಸ್ ತಗೋತಾರೆ" ಅಂತ ಹಿರಿಯರು ಮಾತಾಡುವುದನ್ನು ಕೇಳಿರುತ್ತೀರಿ. ಇತ್ತೀಚೆಗೆ ಭಾರತದಲ್ಲಿಯೂ ಪಶ್ಚಿಮ ದೇಶಗಳಲ್ಲಿನಂತೆ ಡಿವೋರ್ಸ್ ಪಡೆಯುವವರ ಸಂಖ್ಯೆ ಜಾಸ್ತಿಯಾಗಿರುವುದೂ ನಿಮಗೆ ಗೊತ್ತಿರುತ್ತದೆ. "ಇದು ಕಳವಳಕಾರಿ' ಅಂತ ಮಾತಾಡುವವರನ್ನೂ ನೋಡಿರುತ್ತೀರಿ.

ಆದರೆ ಇರುವುದು ಒಂದೇ ಬದುಕು. Wrong person ಜೊತೆಗೆ ಬದುಕುವುದಕ್ಕಿಂತ ಡಿವೋರ್ಸ್ ನ ಯಾತನೆ ಸಹಿಸಿಕೊಳ್ಳುವುದು, ಆ ನಂತರ ಬದುಕನ್ನು ಒಬ್ಬಂಟಿಯಾಗಿ ಕಳೆಯುವುದುಹೆಚ್ಚು ಸುಲಭ. ಮತ್ತೊಂದು ಮದುವೆ ಆಗಲೇಬೇಕಾ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಆಗಲೂ ಅಷ್ಟೆ; ಅವರಿವತೊಂದಿಗೆ ಬದುಕು ಕಳೆಯುವುದಕ್ಕಿಂತ ನಮ್ಮೊಂದಿಗೆ ನಾವು ಹೆಚ್ಚು comfortable ಅನ್ನಿಸಿದರೆ, ಒಬ್ಬಂಟಿಯಾಗಿ ಉಳಿದುಬಿಡುವುದೂ ಸೂಕ್ತವೇ. 'ಆಕೆ ಪಾಪ, ಎಂಥ ಗಂಡನ್ನ ಕಟ್ಟಿಕೊಂಡು ಜೀವಮಾನ ಪರ್ಯಂತ ಹೆಣಗಿದಳು' ಅನ್ನಿಸಿಕೊಳ್ಳುವುದಕ್ಕಿಂತ, 'ಈ ಬದುಕನ್ನು ನಾನು ನನಗಿಷ್ಟ ಬಂದ ರೀತಿಯಲ್ಲಿ ಚೆನ್ನಾಗಿ ಬದುಕಿದೆ' ಅಂತ ನಮಗೆ ಅನ್ನಿಸುವುದು ಹೆಚ್ಚು ಮುಖ್ಯ.

ಇದೇನಿದೂ, ಡಿವೋರ್ಸ್ ನ ಪರವಾಗಿ ಬರೆಯೋದಕ್ಕೆ ಶುರುಮಾಡಿದ್ದಾನಲ್ಲಾ ಅಂದುಕೊಳ್ಳಬೇಡಿ. ನಾನು ಬದುಕಿನ quality ಯ ಬಗ್ಗೆ ಆಸಕ್ತಿಯಿರುವ ಮನುಷ್ಯ. ನಮ್ಮ ಬದುಕುಗಳ ಅತ್ಯುತ್ತಮ ಕಾಲವನ್ನು ನಾವು ಎಂಥವರೊಂದಿಗೆ , ಹೇಗೆ ಕಳೆದೆವು ಎಂಬುದು ನನ್ನ ಮಟ್ಟಿಗೆ ತುಂಬ ಮುಖ್ಯ. ನಿಮಗದನ್ನು ಸೂಚಿಸಿದೆ ಅಷ್ಟೆ.

(ಸ್ನೇಹ ಸೇತು : ಹಾಯ್ ಬೆಂಗಳೂರು)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X