ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಬ್ಬರ ಮಧ್ಯೆ ಒಂದು ತೆರೆ ಇಟ್ಟುಕೊಂಡು ಬದುಕುವ ಮೋದ!

By Staff
|
Google Oneindia Kannada News


ಒಬ್ಬರಿಗೊಬ್ಬರು ಏನನ್ನೂ ಮುಚ್ಚಿಡದೆ ಜೀವನ ಪರ್ಯಂತ ತೆರೆದ ಪುಸ್ತಕಗಳ ಹಾಗೆ ಬದುಕುತ್ತೇವೆ ಅಂತ ಅಂದುಕೊಳ್ಳುವುದೊಂದು ಭ್ರಮೆ. ಆ ಭ್ರಮೆ ಬಲು ಬೇಗ ತೊಲಗಿ ಹೋಗುತ್ತದೆ. ಒಂದಷ್ಟು ರಹಸ್ಯಗಳನ್ನು ಸಾಕಿಕೊಳ್ಳುವುದು ಅನಿವಾರ್ಯ!

Keep some Secrets from Your Life Partner!ಒಂದಿಷ್ಟಾದರೂ ರಹಸ್ಯಗಳಿರಲಿ ದಾಂಪತ್ಯದಲ್ಲಿ.

ತೀರ ಆತಂಕಕಾರಿ ರಹಸ್ಯಗಳಿರಬೇಕಿಲ್ಲ. ಆಕೆ ಗಂಡನಿಗೆ ಗೊತ್ತಿಲ್ಲದೆ ಒಂದು ರಹಸ್ಯವಾದ ಬ್ಯಾಂಕ್‌ಅಕೌಂಟ್‌ ಹೊಂದಿರಬೇಕಿಲ್ಲ. ಆಕೆಗೆ ಗೊತ್ತಿಲ್ಲದೆ ಗಂಡ ಒಂದು ಪುಟ್ಟ ಮನೆ ಕಟ್ಟಿರಬೇಕಿಲ್ಲ. ದಿನದ ಎಂಟು ತಾಸು ಆತ ಮತ್ತೆಲ್ಲೋ ಕಳೆದುಬರಬೇಕಿಲ್ಲ. ಇಬ್ಬರ ನಡುವಿನ ರಹಸ್ಯಗಳು ಯಾವತ್ತೋ ಬಯಲಾದಾಗ ಇಬ್ಬರಿಗೂ ಆಘಾತವಾಗಬೇಕಿಲ್ಲ. ನಂಗೆ ಮೋಸವಾಯಿತು ಅಂತ ಇಬ್ಬರಲ್ಲಿ ಒಬ್ಬರಿಗೆ ಅನ್ನಿಸಬೇಕಿಲ್ಲ.

ಆದರೆ ಒಂದಷ್ಟು ನಿರುಪದ್ರವಿ ರಹಸ್ಯಗಳಿರಲಿ ಅಂತೀನಿ. ನನ್ನದೇ ವಿಷಯಕ್ಕೆ ಬಂದರೆ, ಲಲಿತೆಗೆ ನಾನು ಎಲ್ಲವನ್ನೂ ಹೇಳುವುದಿಲ್ಲ. ಮದುವೆಯಾದ ಹೊಸತರಲ್ಲಿ ನಮ್ಮಿಬ್ಬರ ಮಧ್ಯೆ ಅಂಥದೊಂದು ಒಪ್ಪಂದವಿತ್ತು. ಒಬ್ಬರಿಗೆ ಗೊತ್ತಿಲ್ಲದ್ದು ಇನ್ನೊಬ್ಬರ ಬಳಿ ಏನೂ, ಯಾವುದೂ ಇರಕೂಡದು ಅಂತ. ಇವತ್ತು ಅವಳಿಗೆ ಗೊತ್ತಿಲ್ಲದ ನಂಬರಿನದೊಂದು ಮೊಬೈಲ್‌ ಫೋನು ನನ್ನ ಹತ್ತಿರ ಇದೆ. ಅದರಲ್ಲಿ ಯಾರೊಂದಿಗೋ ತುಂಬ ರಹಸ್ಯವಾಗಿ, ನಿಗೂಢವಾಗಿ, ಗುಂಭವಾಗಿ ಮಾತಾಡುತ್ತೇನೆ. ಅದಕ್ಕೆ ಬರುವ ಫೋನುಗಳು ನನ್ನವಳಿಗೆ ಗೊತ್ತಾಗಬೇಕಿಲ್ಲ. ಅದಕ್ಕೆ ಭೂಗತರು ಫೋನು ಮಾಡುತ್ತಾರೆ. ನಕ್ಸಲೀಯರು ಮಾಡುತ್ತಾರೆ. ನನಗೆ ಸುದ್ದಿ ಕೊಡುವ ಗುಪ್ತ ಇನ್ಫರ್ಮಾರ್‌ಗಳು ಮಾಡುತ್ತಾರೆ. ಅವೆಲ್ಲ ಅವಳಿಗೆ ಯಾಕೆ ಗೊತ್ತಾಗಬೇಕು? ಅವಳಿಗಷ್ಟೆ ಅಲ್ಲ, ಅವು ಮತ್ಯಾರಿಗಾದರೂ ಯಾಕೆ ಗೊತ್ತಾಗಬೇಕು.

ನಾನೆಲ್ಲೋ ಫೋನು ಟೇಬಲ್ಲಿನ ಮೇಲಿಟ್ಟು ಸ್ನಾನಕ್ಕೆ ಹೋದಾಗ ಅದಕ್ಕೊಂದು ಅಂಥ ಫೋನು ಬಂದರೆ ಅದನ್ನವಳು ರಿಸೀವ್‌ ಮಾಡುತ್ತಾಳೆ. ಅವಳಿಗೆ ಏನಂತ ಉತ್ತರಿಸಬೇಕು ಅಂತ ಗೊತ್ತಾಗುವುದಿಲ್ಲ. ಫೋನು ಮಾಡಿದ್ದು ಯಾರು ಅಂತ ಕುತೂಹಲ. ಫೋನು ಮಾಡಿದ್ದು ಇಂಥವರು ಅಂತ ಗೊತ್ತಾದರೆ ಸುಮ್ಮನೆ ಗಾಬರಿ. ಆಮೇಲೆ ನೂರೆಂಟು ಪ್ರಶ್ನೆ. ಹೀಗಾಗಿ ಅವೆಲ್ಲವುಗಳಿಗೂ ಒಂದು ತೆರೆ ಹಾಕಿದಂತೆ ಲಲಿತೆಗೆ ಗೊತ್ತಾಗದ ಹಾಗೆ ಒಂದು ಪ್ರತ್ಯೇಕ ಫೋನಿಟ್ಟುಕೊಂಡಿರುತ್ತೇನೆ.

ಇದು ತಪ್ಪಾ?

ಎಲ್ಲೋ ನಿಗೂಢ ಸ್ಥಳವೊಂದರಲ್ಲಿ ಕುಳಿತು ಯಾರೊಂದಿಗೋ ಮಾತನಾಡುತ್ತಿರುವಾಗ ನನ್ನ ಫೋನು ಆಫ್‌ ಮಾಡಿಕೊಂಡಿರುತ್ತೇನೆ. ಅದಕ್ಕೆ ಅವಳು ಫೋನ್‌ ಮಾಡಿದಾಗ ಮೀಟಿಂಗ್‌ನಲ್ಲಿದ್ದೀನಿ. ಥೇಟರ್‌ನಲ್ಲಿದೀನಿ. ಡ್ರೆೃವ್‌ ಮಾಡ್ತಿದೀನಿ ಅಂತ ಸುಳ್ಳು ಹೇಳುವ ಬದಲು ಫೋನೇ ಆಫ್‌ ಮಾಡಿಟ್ಟುಬಿಡುವುದು ಹೆಚ್ಚು ಪ್ರಾಮಾಣಿಕತೆ ಅಂತ ನನ್ನ ಅಭಿಪ್ರಾಯ. ಇದು ತಪ್ಪಾ?

ನಾನು ಮಕ್ಕಳ ರೂಮಿಗೆ ವಿನಾಕಾರಣ ಹೋಗುವುದಿಲ್ಲ. ಅವರು ಬೆಳೆದ ಮಕ್ಕಳು. ಅವರಿಗೆ ಪ್ರೆೃವೆಸಿ ಬೇಕು. ಬೆಳ್ಳ ಬೆಳಗ್ಗೆ ಎದ್ದು ‘ಏನಮ್ಮಾ ಚೇತೂ?’ ಅಂತ ನುಗ್ಗಿಬಿಟ್ಟರೆ ಮಗಳಿಗೆ ಇರುಸು ಮುರುಸಾಗುತ್ತದೆ. ಯಾರೊಂದಿಗೋ ಫೋನಿನಲ್ಲಿ ಮಾತಾಡುತ್ತಿರುತ್ತಾಳೆ. ಏನನ್ನೋ ಹೇಳಿಕೊಳ್ಳುತ್ತಿರುತ್ತಾಳೆ. ಅದು ನನ್ನ ಬಗ್ಗೆಯೇ ಇರಬಹುದು. ಅವರ ಅಮ್ಮನ ಬಗ್ಗೆಯೂ ಇರಬಹುದು. ‘ಥೈ’ ಅಂತ ಅವಳೆದುರು ಕುಳಿತುಬಿಡುವುದು ಎಷ್ಟು ಸರಿ?

ಅವಳಿಗೊಬ್ಬ ಗೆಳೆಯ ಅಂತ ಇರ್ತಾನೆ. ಅವನು ಕೇವಲ ಗೆಳೆಯ. ಅವನೊಂದಿಗೆ ಬೇರೆ ಯಾತರ ವ್ಯವಹಾರವೂ ಇರುವುದಿಲ್ಲ. ಆದರೆ ಅವನೊಂದಿಗೆ ಯಾವುದೋ ಪುಟ್ಟ ರಹಸ್ಯ ಹಂಚಿಕೊಳ್ಳುತ್ತಿರುತ್ತಾಲೆ. ನನ್ನೊಂದಿಗೆ, ಅವಳ ಅಮ್ಮನೊಂದಿಗೆ ಅಥವಾ ತಾನು ಮದುವೆಯಾಗಲಿರುವ ಹುಡುಗನೊಂದಿಗೆ ಸರಾಗವಾಗಿ ಹಂಚಿಕೊಳ್ಳಲಾಗದಂತಹುದು. ಅದನ್ನು ಕೂಡ ಮಗಳು ನಮ್ಮೊಂದಿಗೆ ಹೇಳಿಕೊಳ್ಳಲಿ, ಹಂಚಿಕೊಳ್ಳಲಿ, ತೀರ ನಮ್ಮ ಹತ್ರ ಮುಚ್ಚಿಡುವಂಥದ್ದು ಏನಿರುತ್ತೆ ಅಂತ ವಾದಿಸುವುದು ತಪ್ಪಲ್ಲವಾ?

ಹೇಳಿಕೊಂಡು ಬಿಟ್ಟರೆ ತೀರ ಪ್ರಪಂಚವೇ ಕಲ್ಲೋಲವಾಗಿಬಿಡುವಂತಹುದೇನೂ ಇರುವುದಿಲ್ಲ. ಹಾಗೇನೇ ಹೇಳಿಕೊಳ್ಳದಿದ್ದರೂ ಪ್ರಪಂಚ ಕಲ್ಲೋಲವಾಗಿ ಬಿಡುವುದಿಲ್ಲ. ಅದೊಂದು ಸ್ಮಾಲ್‌ ಪ್ಲೇಸ್‌ ಅಷ್ಟೆ. ನಿರುಪದ್ರವಕಾರಿ ಸ್ಪೇಸ್‌. ನನ್ನ ಹೆಂಡತಿಗೆ ಅವಳ ವಯಸ್ಸಿನವನೇ ಆದ ಸಹೃದಯಿ ಗೆಳೆಯನಿದ್ದಾನೆ. ಅವಳ ಬಗ್ಗೆ ಅವನಿಗೆ ಗೌರವವಿದೆ. ಅವಳಿಂದ ಅವನಿಗೆ ಆಗಬೇಕಾದಂಥದ್ದು ಏನೂ ಇಲ್ಲ. ಯಾವಾಗಾದರೊಮ್ಮೆ ಪೋನಿನಲ್ಲಿ ಮಾತನಾಡಿಕೊಳ್ಳುತ್ತಾರೆ. ಬಿಡುವಾದಾಗ ಯಾವುದೋ ಕಾಫಿ ಹೌಸ್‌ನಲ್ಲಿ ಭೇಟಿಯಾಗುತ್ತಾರೆ. ಇದನ್ನೆಲ್ಲ ಅವರು ತೀರ ರಹಸ್ಯವಾಗೇನೂ ಮಾಡಲಿಕ್ಕಿಲ್ಲ. ಆಕಸ್ಮಾತ್‌ ಎದುರಿಗೆ ಸಿಕ್ಕರೆ ನನ್ನಾಕೆ ಆತನನ್ನು ಪರಿಚಯ ಮಾಡಿಕೊಡುತ್ತಾಳೆ. ಆಕೆಯಲ್ಲಿ ಅಂಥದ್ದೊಂದು ಭದ್ರತೆ, ಅಂಥ ನಿರ್ಭಯ ಅಥವಾ ನಿರಾತಂಕ ಮನಸ್ಥಿತಿಯನ್ನು ನಾನು ಉಂಟು ಮಾಡಿರಬೇಕು. ಇಂಥ ಚಿಕ್ಕ ಚಿಕ್ಕ ಸ್ಪೇಸುಗಳು ದಾಂಪತ್ಯವನ್ನ, ಮಾನವೀಯ ಸಂಬಂಧಗಳನ್ನ, ಗೆಳೆಯರನ್ನ, ಅಪ್ಪ ಮಕ್ಕಳನ್ನ, ಗೆಳೆಯ ಗೆಳತಿಯರನ್ನ ಆರೋಗ್ಯವಾಗಿಡುತ್ತವೆ. ಅನುಮಾನಗಳಿಂದ ಬಚಾವು ಮಾಡುತ್ತವೆ.

ನನ್ನ ಊರಿನ ಹಿರಿಯ ವಕೀಲರೊಬ್ಬರು ಒಬ್ಬ ವಿಧವೆಯನ್ನು ಮದುವೆಯಾದರು. ಆಕೆಯಾಂದಿಗೆ ಅವರು ಮಾಡಿಕೊಂಡ ಮೊದಲ ಒಪ್ಪಂದವೆಂದರೆ, ಮದುವೆಯಾದ ಆರು ತಿಂಗಳ ತನಕ ನನ್ನ ಪತ್ರಗಳನ್ನು ನೀನು, ನಿನ್ನ ಪತ್ರಗಳನ್ನು ನಾನು ಓದುವುದು ಬೇಡ. ಆರು ತಿಂಗಳೊಳಗಾಗಿ ಇಬ್ಬರೂ ನಮ್ಮ ಉಳಿದ ಸಂಬಂಧಗಳನ್ನು ಕನ್‌ಕ್ಲೂಡ್‌ ಮಾಡಿಕೊಂಡು ಈ ನಿಚ್ಚಲ ದಾಂಪತ್ಯಕ್ಕೆ ಹಿಂತಿರುಗೋಣ -ಅಂತ. ಅವರ ಈ ಒಪ್ಪಂದ ಅದ್ಭುತವಾಗಿ ಕೆಲಸ ಮಾಡಿತು. ಈಗಲೂ ಆ ದಂಪತಿಗಳು ಚೆನ್ನಾಗಿಯೇ ಇದ್ದಾರೆ.

ಒಬ್ಬರಿಗೊಬ್ಬರು ಏನನ್ನೂ ಮುಚ್ಚಿಡದೆ ಜೀವನ ಪರ್ಯಂತ ತೆರೆದ ಪುಸ್ತಕಗಳ ಹಾಗೆ ಬದುಕುತ್ತೇವೆ ಅಂತ ಅಂದುಕೊಳ್ಳುವುದೊಂದು ಭ್ರಮೆ. ಆ ಭ್ರಮೆ ಬಲು ಬೇಗ ತೊಲಗಿ ಹೋಗುತ್ತದೆ. ಒಂದಷ್ಟು ರಹಸ್ಯಗಳನ್ನು ಸಾಕಿಕೊಳ್ಳುವುದು ಅನಿವಾರ್ಯವಾಗುತ್ತದೆ. ಮೊದಲೇ ಎಲ್ಲವನ್ನೂ ಹೇಳಿಕೊಂಡು ಬಿಟ್ಟ ಹೆಂಡತಿಯನ್ನು ಕೇಳಿ ನೋಡಿ. ಆಮೇಲೆ ಗಂಡ ಅವರನ್ನು ತೌಬಾ ತೌಬಾ ಅನ್ನಿಸಿಬಿಟ್ಟಿರುತ್ತಾನೆ.

ಮದುವೆಗೆ ಮುಂಚೆ ಹಾಗೆಲ್ಲ ಮಾಡಿದವಳು ಈಗಲೂ ಮಾಡಿರಲಿಕ್ಕಿಲ್ಲ ಅಂತ ಏನು ಗ್ಯಾರಂಟಿ ಅಂತ ಪ್ರತಿಯಾಂದಕ್ಕೂ ಪ್ರಾಣ ತಿಂದಿರುತ್ತಾನೆ. ಆಕೆಯ ಒಳ್ಳೆಯತನ ಅವನಿಗೆ ಅರ್ಥವಾಗುವುದಿಲ್ಲ. ಅದನ್ನು ಅಪ್ರಾಮಾಣಿಕತೆ ಅಂದುಕೊಳ್ಳುತ್ತಾನೆ. ಅದರ ಬದಲು ಒಂದು ನಿಗೂಢ ಉಳಿಸಿಕೊಳ್ಳುವುದೇ ವಾಸಿ. ಗಂಡಸರಿಗೂ ಇಂಥ ನಿಗೂಢಗಳಿರುತ್ತವೆ. ಮದುವೆಯಾದ ಹೊಸತರಲ್ಲಿ ಯಾವುದೋ ಖುಷಿಗೆ ಬಿದ್ದು ಹೆಂಡತಿಯೆದುರು ಅದನ್ನೆಲ್ಲ ಹೇಳಿಕೊಂಡು ಫಜೀತಿಗೊಳಗಾಗುವುದಕ್ಕಿಂತ ಒಂದು ತೆರೆ ಇಟ್ಟುಕೊಂಡು ಬದುಕುವುದೇ ಲೇಸು. ಅಲ್ಲವೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X