• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಿಕ್ಕೆಟ್ಟ ರಾಯಲ ಸೀಮೆ ಇನ್ನು ರೆಡ್ಡಿಗಳ ಪಾಲಾಗುತ್ತದಲ್ಲ...

By Staff
|
Ravi Belagere on Thatskannada.com ರವಿ ಬೆಳಗೆರೆ
ಅನಂತಪುರಂನಲ್ಲಿ ನನ್ನ ಅಣ್ಣನ ಮನೆಯಿತ್ತಲ್ಲ ? ಅಲ್ಲಿಂದ ಬಿರುಸಾಗಿ ಹತ್ತು ನಿಮಿಷ ನಡೆದರೆ ಸಿಗುವ ತೆಲುಗುದೇಶಂ ಪಕ್ಷದ ಕಚೇರಿಯಲ್ಲೇ ಶಾಸಕ ಪರಿಟಾಲ ರವಿಯ ಕೊಲೆಯಾಗಿದ್ದು. ಬಳ್ಳಾರಿ ನೋಡಿದ್ದೀರಲ್ಲ ? ಅದರ ಸರಹದ್ದಿನಿಂದ ಬಿರುಸಾಗಿ ಹದಿನೈದು ನಿಮಿಷ ಡ್ರೆೃವ್‌ ಮಾಡಿದರೆ ಆರಂಭವಾಗುವುದೇ ಅನಂತಪುರಂ ಜಿಲ್ಲೆಯ ನೆಲ. ನಿಜ ಹೇಳಬೇಕೆಂದರೆ, ಇವತ್ತಿನ ಆಂಧ್ರರೇನು ‘ರಾಯಲ ಸೀಮ’ ಅಂತ ಹೇಳಿಕೊಳ್ಳುತ್ತಾರೆ- ಅದರಲ್ಲಿ ಒಂದು ಕಾಲಕ್ಕೆ ಬಳ್ಳಾರಿಯೂ ಸೇರಿತ್ತು. ಆ ನಾಲ್ಕು ಜಿಲ್ಲೆಗಳನ್ನು BACK ಅಂತ ಕರೆಯುತ್ತಿದ್ದರು. BACK ಅಂದರೆ ಬಳ್ಳಾರಿ, ಅನಂತಪುರಂ, ಕಡಪ (Cuddappah) ಕರ್ನೂಲು. ಒಂದು ನೂರು ವರ್ಷಗಳ ಹಿಂದೆ ಈ ಸೀಮೆಯ ಬಗ್ಗೆ ಪುಸ್ತಕ ಬರೆದ ಸರ್‌ ಮನ್ರೊ ಅದನ್ನು Lawless black cotton soil ಅಂತ ಕರೆದಿದ್ದ. ಇಲ್ಲಿನ ಪಾಳೇಗಾರಿಕೆಯ ಸಂಸ್ಕೃತಿಯ ಕುರಿತು ಬರೆದಿದ್ದ. ಇದು ವಿಜಯನಗರ ಸಾಮ್ರಾಜ್ಯ ವಿಘಟಿತಗೊಂಡ ನಂತರ ಸೃಷ್ಟಿಯಾದ ಪಾತಕಗಳ ಪ್ರದೇಶ ಅಂತ ಬರೆದಿದ್ದ. ಸರಿಯಾಗಿಯೇ ಬರೆದಿದ್ದ.

Paritala Ravis Murder and Rayalseema Politicsನನ್ನ ಊರೂ ಸೇರಿದಂತೆ ಈ ಸೀಮೆ ಹೀಗಾಗಲಿಕ್ಕೆ ಕಾರಣ- ರಣ ಬಿಸಿಲು, ಮಳೆಯ ಕೊರತೆ, ಗುಡ್ಡ ಬೆಟ್ಟ, ಹುಣಿಸೆ- ಬೇವು-ನಿಂಬೆ ಬಿಟ್ಟರೆ ಮತ್ತೇನೂ ಬೆಳೆಯಲಾಗದ ಸ್ಥಿತಿ, ಕಮ್ಮ ಮತ್ತು ರೆಡ್ಡಿಗಳೆಂಬ ಎರಡು ಜಾತಿಯ ಶ್ರೀಮಂತರ ಕ್ರೌರ್ಯ ಮತ್ತು ಶಿಖಂಡಿ ಸರ್ಕಾರಗಳು! ಹಾಡಹಗಲೇ ಎಂಥವನನ್ನು ಬೇಕಾದರೂ ಮನೆಗೆ ನುಗ್ಗಿ ಹೊಡೆದು ಹಾಕುವ ಗ್ಯಾಂಗುಗಳು ಅಲ್ಲಿವೆ. ಎರಡು ಗ್ಯಾಂಗುಗಳ ಮಧ್ಯೆಯುದ್ಧ ಶುರುವಾದರೆ ಅಕ್ಷರಶಃ ಇಪ್ಪತ್ತು ಮೂವತ್ತು ಮಂದಿ ಕೈಯಲ್ಲಿ ರೈಫಲ್ಲುಗಳನ್ನು ಹಿಡಿದುಕೊಂಡು ರಸ್ತೆ ಗಿಳಿಯುತ್ತಾರೆ. ಐನೂರು- ಸಾವಿರ ಕೊಲೆಗಳಾಗುತ್ತವೆ ಅಂದರೆ, ಅದೊಂದು ಲೆಕ್ಕವೇ ಅಲ್ಲ. ಅನಂತಪುರ ಜಿಲ್ಲೆಯಾಂದರಲ್ಲೇ ಎಂಟು ತಿಂಗಳಲ್ಲಿ ಹದಿನಾರು ಜನ ತೆಲುಗುದೇಶಂ ನಾಯಕರು ಕೊಲೆಯಾಗಿದ್ದಾರೆ. ಇಲ್ಲಿನ ಇನ್ಸ್‌ಪೆಕ್ಟರ್‌ ಜನರಲ್‌ ಆಫ್‌ ಪೊಲೀಸ್‌ ಮೀನಾ ಎಂಬುವವನು ಪರಿಟಾಲ ರವಿಯ ಕೊಲೆಯಾದ ತಕ್ಷಣ ಮಾಡಿದ್ದೆಂದರೆ, ‘ನನಗೂನನ್ನ ಮಕ್ಕಳಿಗೂ ರಕ್ಷಣೆ ಕೊಡಿ’ ಅಂತ ಸರ್ಕಾರಕ್ಕೆ ಅರ್ಜಿ ಕೊಟ್ಟದ್ದು. ಹಂತಕರನ್ನು ಹಿಡಿದು ದಂಡಿಸಬೇಕಾದ ಅಧಿಕಾರಿ ತನಗೇ ರಕ್ಷಣೆ ಕೊಡಿ ಅಂತ ಕೇಳುತ್ತಾನೆಂದರೆ, ನಮ್ಮ ಪಕ್ಕದ ರಾಜ್ಯ ಹೇಗೆ ಎಕ್ಕುಟ್ಟಿ ಹೋಗಿರಬಹುದೋ ಊಹಿಸಿ.

ನಿನ್ನೆ ಮೊನ್ನೆಯ ತನಕ ಅಲ್ಲಿ ‘ಕಮ್ಮ’ಗಳ ಪ್ರಾಬಲ್ಯವಿತ್ತು. ಈಗ ವೈ. ಎಸ್‌.ರಾಜಶೇಖರ ರೆಡ್ಡಿ ಸರ್ಕಾರ ಬಂದಿದೆ. ಇನ್ನು ರೆಡ್ಡಿಗಳ ಪ್ರಾಬಲ್ಯಕ್ಕೆ ಐದು ವರ್ಷ ಮೀಸಲು. ಎರಡೂ ಬಲಿಷ್ಠ ಕೋಮುಗಳೇ. ಈಗ ಅನಂತಪುರಂ ಜಿಲ್ಲೆಯ ಅಷ್ಟೂ ಠಾಣೆಗಳಲ್ಲಿ ರೆಡ್ಡಿ ಅಧಿಕಾರಿಗಳಿದ್ದಾರೆ. ಹೆಚ್ಚಾನುಹೆಚ್ಚು ಪ್ರಬಲ ರೆಡ್ಡಿಗಳು ಕಾಂಗ್ರೆಸ್‌ ಸೇರಿದ್ದಾರೆ. ಇನ್ನು ಪುಂಡಾಟಿಕೆಗೆ ಕೊನೆ ಎಲ್ಲಿ ? Of course, ‘ನೀವು ಇಪ್ಪತ್ತು ವರ್ಷ ನಡೆಸಿದ ಪುಂಡಾಟಿಕೆಗೆ ಈಗ ಪ್ರತಿಫಲ ಉಣ್ಣುತ್ತಿದ್ದೀರಿ’ ಅಂತ ಅಲ್ಲಿನ ಮುಖ್ಯಮಂತ್ರಿ ಮಾತನಾಡುತ್ತಾನೆ. ಅದು ನಿಜವೂ ಹೌದು. ಆದರೆ ಪ್ರತಿಫಲ, ಪ್ರತೀಕಾರ- ಇವು ಸರ್ಕಾರೀ ಪದಗಳೇ ಆಗಿಹೋದರೆ ಹೇಗೆ ?

ಹೋಲಿಸಿ ನೋಡಿದರೆ, ನಮ್ಮಲ್ಲಿ ಭ್ರಷ್ಟಾಚಾರ-ಜಾತಿ-ಮೈಗಳ್ಳತನ ಏನೇ ಇದ್ದರೂ ಕರ್ನಾಟಕದ ಸರ್ಕಾರಕ್ಕೆ ಕೆಲವು ಸಂಕೋಚಗಳಿವೆ. ಎಲ್ಲೋ ಒಂದಿಬ್ಬರು ರಾಜಕಾರಣಿಗಳು ಗೂಂಡಾಗಳಂತೆ ಮಾತನಾಡಬಹುದು. ಆದರೆ by and large ನಮ್ಮ ರಾಜಕಾರಣಿಗಳು ರಕ್ತ ಪಿಪಾಸುಗಳಲ್ಲ. ಮೊನ್ನೆ ಚಿತ್ರದುರ್ಗದಲ್ಲಿ ಸಂಸದ ಎನ್‌.ವೈ. ಹನುಮಂತಪ್ಪ ವರ್ತಿಸಿರುವುದು once again, ರಾಯಲಸೀಮಾ ರಾಜಕಾರಣದ ಪ್ರಭಾವವೇ. ಪತ್ರಕರ್ತರನ್ನ ಬಾಯಿಗೆ ಸಿಕ್ಕಂತೆ ಬೈದು, ಅವರ ಮನೆಗಳಿಗೆ ಜನ ನುಗ್ಗಿಸಿ ಅಸಹ್ಯ ಮಾಡಿಕೊಂಡಿದ್ದಾರೆ ಹನುಮಂತಪ್ಪ. ‘ನಾನು ಜಡ್ಜು ಗೊತ್ತೇನ್ರಿ?’ ಅಂತ ಅಬ್ಬರಿಸಿದರಂತೆ. ಅವರು ನಿವೃತ್ತ ನ್ಯಾಯಮೂರ್ತಿ ಅಂತ ಎಲ್ಲರಿಗೂ ಗೊತ್ತು. ನಿವೃತ್ತರಾಗಿರುವ ಸಂಗತಿ ಅವರಿಗೆ ನೆನಪಿದ್ದರೆ ಅಷ್ಟೇ ಪುಣ್ಯ. ಹೈಕೋರ್ಟ್‌ ನ್ಯಾಯಾಧೀಶರು ಉಳಿದ ಸರ್ಕಾರಿ ನೌಕರರಂತೆ ವರ್ಷದ ಕೊನೆಯಲ್ಲಿ ರಿಟೈರಾಗುವುದಿಲ್ಲ. ಇವತ್ತು 23.1.2005 ಕ್ಕೆ ಅವರಿಗೆ ಅರವತ್ತು ವರ್ಷ ತುಂಬಿತು ಅಂದರೆ, ಇವತ್ತು ರಾತ್ರಿ ಹನ್ನೆರಡು ಗಂಟೆಗೆ ಅವರು ನಿವೃತ್ತರಾಗುತ್ತಾರೆ. ನಾಳೆ ಇಪ್ಪತ್ನಾಲ್ಕನೇ ತಾರೀಕು ಅವರಿಗೆ ಬೀಳ್ಕೊಡುಗೆ ಇದ್ದರೆ, ಆ ಸಮಾರಂಭಕ್ಕವರು ನ್ಯಾಯಮೂರ್ತಿಯ ಗೌನು ಧರಿಸುವಂತಿಲ್ಲ. ಅದು ನ್ಯಾಯಾಂಗದ ನಿಯಮ. ಪರಿಸ್ಥಿತಿ ಹಾಗಿರುವಾಗ ಪತ್ರಕರ್ತರ ಮೇಲೆ ‘ನಾನು ಜಡ್ಜು ಕಣ್ರೀ...’ ಅಂತ ಹನುಮಂತಪ್ಪನವರಂಥ ಹಿರಿಯರು ಅಬ್ಬರಿಸುತ್ತಾರೆಂದರೆ ಅದಕ್ಕೇನನ್ನ ಬೇಕು?

ಸಿಟ್ಟು ಸೆಡವು ಎಲ್ಲ ಮನುಷ್ಯರಿಗೂ ಇದ್ದದ್ದೇ. ತುಂಬ ವರ್ಷ ಅಂಥದ್ದೊಂದು ಗೌರವ ಅನುಭವಿಸಿ ನಿವೃತ್ತರಾದವರಿಗೆ, ಅನಂತರ ಆಗುವ ಚಿಕ್ಕ ಇರುಸು ಮುರುಸು, ಇದಿರಾಗುವ ಪ್ರತಿರೋಧಗಳು ಕೂಡ ಥಟ್ಟನೆ ಸಿಟ್ಟಿಗೇಳುವಂತೆ ಮಾಡುತ್ತವೆ. ಎನ್‌.ವೈ.ಹನುಮಂತಪ್ಪ , ರವಿ ಪಾಟೀಲ, ಡೀಕೆ ಶಿವಕುಮಾರ ಮುಂತಾದ ಬಾಯಿ ದುಡುಕಿನ ರಾಜಕಾರಣಿಗಳು ಸೀಝನ್ಡ್‌ ರಾಜಕಾರಣಿಗಳನ್ನು ನೋಡಿ ಪಾಠ ಕಲಿಯಬೇಕು. ನಮ್ಮ ಸಿಟ್ಟು ಸೆಡವು ವ್ಯಕ್ತಿಗತವಾದದ್ದೇ ಹೊರತು, ಅದು ನಾವು ಕುಳಿತ ಕುರ್ಚಿ ಮತ್ತು ಅಧಿಕಾರಗಳನ್ನೇ ಆಕ್ರಮಿಸಿಕೊಂಡು ಬಿಡಬಾರದು. ಹನುಮಂತಪ್ಪ ನ್ಯಾಯಮೂರ್ತಿಗಳಾಗಿ ನಿವೃತ್ತರಾಗಿರಬಹುದು. ಆದರೆ ಧರ್ಮಸಿಂಗ್‌, ಖರ್ಗೆ, ಘೋರ್ಪಡೆ, ರಂಗನಾಥ್‌, ಪ್ರಕಾಶ್‌- ಇವರೆಲ್ಲ ದಶಕಗಳಿಂದ ಸಾರ್ವಜನಿಕ ಜೀವನದಲ್ಲಿದ್ದಾರೆ. ಸುಲಭಕ್ಕೆ ಸಹನೆ ಕಳೆದುಕೊಂಡವರಲ್ಲ. ರಾಜಕುಮಾರ್‌ರನ್ನು ಭೇಟಿಯಾಗಲು ಧರಂಸಿಂಗ್‌ ವಿಧಾನಸೌಧದಿಂದ ಇಳಿದು ಬಂದರೆ ಯಾವನೋ ಅವಿವೇಕಿ ಅವರಿಗೆ ಚಪ್ಪಲಿ ಎಸೆದ. ಸಿಟ್ಟಿಗೆದ್ದಿದ್ದರೆ ಧರಂ, ಅಲ್ಲೇ ಲಾಠಿ ಛಾರ್ಜ್‌ ಮಾಡಿಸಿ ಮಗ್ಗಲು ಮುರಿಸಬಹುದಿತ್ತು. ಆದರೆ ಅನುಭವಿ ನಾಯಕನ ಸಹನೆ ತೋರಿಸಿದರು.

ಇಂಥ ಸಹನೆ ರಾಯಲಸೀಮೆಯ ಯಾವ ಚಿಕ್ಕ ನಾಯಕನಲ್ಲೂ ಇಲ್ಲ. ಇದೇ ಪರಿಟಾಲ ರವಿ ಅಧಿಕಾರದಲ್ಲಿದ್ದಾಗ ಸಾಲುಗಟ್ಟಿ ಕೊಲೆಗಳನ್ನು ಮಾಡಿಸಿದ. ಬಳ್ಳಾರಿ, ತುಮಕೂರು ಜಿಲ್ಲೆಗಳ ಮೇಲೂ ಪ್ರಾಬಲ್ಯ ಸ್ಥಾಪಿಸಿದ. ಅನೇಕರನ್ನು ಬೆದರಿಸಿದ. ಅಲ್ಲಿ ಒಬ್ಬಪರಿಟಾಲ ರವಿಯಷ್ಟೇ ಅಲ್ಲ : ಚಿಕ್ಕ ಹಳ್ಳಿಯಾಂದರ ಸರಪಂಚನೂ ಹಾಗೆ ವರ್ತಿಸುತ್ತಾನೆ. ಆ ನೆಲದಲ್ಲೇ ಅಂಥ ಗುಣವಿದೆ. ಅದನ್ನೆಲ್ಲ ರಂಜನೀಯವಾಗಿ ಸಿನಿಮಾದಲ್ಲಿ ನೋಡಲಿಕ್ಕೆ ಚೆಂದ. ಆ ಕಾರಣಕ್ಕೇ ಆಂಧ್ರರು ‘ಆದಿ’, ‘ ಸಮರಸಿಂಹಾ ರೆಡ್ಡಿ’ ಮುಂತಾದ ಸಿನಿಮಾಗಳನ್ನು ಇಷ್ಟಪಡುತ್ತಾರೆ. ಆದರೆ ಅಂಥ ನಾಯಕರನ್ನಿಟ್ಟುಕೊಂಡ ಅನಂತಪುರ, ಕಡಪ, ಕರ್ನೂಲುಗಳು ಇವತ್ತು ಏನಾಗಿ ಹೋಗಿವೆ ನೋಡಿ ? ಚಂದ್ರಬಾಬು ನಾಯುಡು ಐ.ಟಿ. ಇಂಡಸ್ಟ್ರಿಗಾಗಿ ಅಂತ ಹಾಕಿಸಿದ ಕೆಲವು ಟಾರು ರಸ್ತೆಗಳನ್ನು ಬಿಟ್ಟರೆ, ಸಾಯಿಬಾಬಾ ನೀರು ಹನಿಸಿದ ಕೆಲವು ಹಳ್ಳಿಗಳನ್ನು ಬಿಟ್ಟರೆ ರಾಯಲಸೀಮೆಯಲ್ಲಿ ಯಾವುದೇ ಪ್ರಗತಿ ಆಗಿಲ್ಲ. ಒಂದೇ ಒಂದು ಇಂಡಸ್ಟ್ರೀ ಅಲ್ಲಿ ಎದ್ದು ನಿಂತಿಲ್ಲ, ನಿಲ್ಲುವುದೂ ಇಲ್ಲ. ಇದೇ ಅನಂತಪುರದ ಗಡಿಸೀಮೆಯ ಜನ ಬಳ್ಳಾರಿಯ ಸ್ಪಿನ್ನಿಂಗ್‌ ಮಿಲ್‌ ಮುಚ್ಚಿದರು. ಇದೇ ಜನ ಹಗರಿಯ ಕಾರ್ಬೈಡ್‌ ಫ್ಯಾಕ್ಟರಿ ಮುಚ್ಚಿಸಿದರು. ಹೊಡೆದಾಡಿ ಸತ್ತರು. ಮನೆಮನೆಗಳೂ ಬಾಂಬು ಸುತ್ತುವ ಕಾರ್ಖಾನೆಗಳಾದವು. ಯಾವನ ಬಾಯಲ್ಲಿ ನೋಡಿದರೂ ವೀರಾ ವೇಶದ ಮಾತೇ. ನೆತ್ತರ ಹೊಳೆ ಹರಿಸುವ ಪ್ರತಾಪವೇ. ಅದೆಲ್ಲದರ ಪರಿಣಾಮ ಏನಾಯಿತು ಅಂತ ನೋಡಲು ಅವರ ಮನೆಗಳಿಗೆ ಹೋದರೆ, ಅಲ್ಲಿ ಗಂಡು ದಿಕ್ಕೇ ಇಲ್ಲ. ಚಿಕ್ಕಚಿಕ್ಕ ವಿಧವೆಯರು, ಮಕ್ಕಳನ್ನು ಕೆಳೆದುಕೊಂಡ ತಾಯಂದಿರು, ಬೀಳುಬಿದ್ದ ಹೊಲಗಳು -ಅಷ್ಟೆ ! ಇದೇ ಪರಿಟಾಲ ರವಿಯ ಮನೆಗೆ ಇವತ್ತು ಗಂಡು ದಿಕ್ಕಿಲ್ಲ. ಪರಿಟಾಲ ಶ್ರೀರಾಮುಲು, ಪರಿಟಾಲ ಹರಿ, ಪರಿಟಾಲ ರವಿ- ಯಾರೂ ಸಹಜ ಸಾವು ಸಾಯಲಿಲ್ಲ. ಐವತ್ತರ ಹುಟ್ಟು ಹಬ್ಬ ಮಾಡಿಕೊಳ್ಳಲಿಲ್ಲ.

ಇಷ್ಟೆಲ್ಲ ಆಗಿದ್ದು, ಪೆಡಸು ಮಾತು ಮತ್ತು ಸುಳ್ಳೇ ಹಮ್ಮಿನಿಂದಾಗಿ. ನಮ್ಮ ನೆಲದ ರಾಜಕಾರಣ ಬಾರ್ಡರು ಜಿಲ್ಲೆಗಳಲ್ಲಿ ಹೊರತುಪಡಿಸಿದರೆ , ಮತ್ತೆಲ್ಲೂ ಈ ಮಟ್ಟದ ಮತಿಹೀನತೆಗೆ ಒಳಗಾಗಿಲ್ಲ. ಹಾಗೆ ಆದಾಗಲೆಲ್ಲ ನಮ್ಮ ಸಭೆ, ಸಮಾಜ, ಸಾತ್ವಿಕ ಮತದಾರ ಹಾದಿ ಬಿಟ್ಟವರಿಗೆ ಬುದ್ಧಿ ಹೇಳಿರುವ ಉದಾಹರಣೆಗಳಿವೆ. ತೋಳ್ಬಲದ ರಾಜಕಾರಣ ಗಿಟ್ಟುವುದಿಲ್ಲ. ರೌಡಿಗಳಿಗೆ ನಮ್ಮವರು ಪಟ್ಟ ಕಟ್ಟಿಲ್ಲ.

ಗುಂಡೂರಾಯರಂಥವರನ್ನು ಮತದಾರ ಮೂಲೆಗೆ ಕೂಡಿಸಿದ್ದು, ಎಷ್ಟು ವರ್ಷಗಳಾದರೂ ಉಳಿದ ರಾಜಕಾರಣಿಗಳಿಗೆ ಮರೆಯದ ಪಾಠವಾಯಿತು. ಇದಕ್ಕೆ ಸಂಬಂಧಿಸಿದ ಹಾಗೆ ಇಂಗ್ಲಿಷಿನಲ್ಲಿ ತುಂಬ ಸುಂದರವಾದುದೊಂದು ಹೇಳಿಕೆ ಇದೆ. ಯಾರೋ ನಾಲ್ವರು ರ್ಯಾಸ್ಕೆಲ್‌ಗಳು ಸೇರಿ ಮಾಡುವ ದುಷ್ಟತನ ನಮ್ಮ ಸಮಾಜವನ್ನು ಹಾಳು ಮಾಡಲಾರದು. ಅದನ್ನು ನೋಡಿಯೂ ನಿಷ್ಕಿೃಯರಾಗಿ ಕೂಡುವ ಕೋಟ್ಯಂತರ ಜನರಿರುತ್ತಾರಲ್ಲ ? ಅವರ ಮೌನದಿಂದಾಗಿ ಕೆಡುತ್ತದೆ!

ಪರಿಟಾಲ ರವಿಯ ಸಾವಿನಿಂದ ಒಂದು ಕೆಟ್ಟ ಹುಳು ಕಣ್ಮರೆಯಾದಂತಾಗಿದೆ, ನಿಜ. ಆದರೆ ದಿಕ್ಕೆಟ್ಟಿರುವ ರಾಯಲ ಸೀಮೆ ಇನ್ನು ರೆಡ್ಡಿಗಳ ಕೈಗೆ ಪೂರ್ತಿಯಾಗಿ ಹೋಗುತ್ತದಲ್ಲ ? ಅದನ್ನು ರಕ್ಷಿಸುವವರ್ಯಾರು?

(ಸ್ನೇಹಸೇತು: ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more