• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸರ್ಕಾರದ ಸರಂಡರ್‌ ಪ್ಯಾಕೇಜು : ನಕ್ಸಲೈಟರ ಮಧ್ಯರಾತ್ರಿಯ ಆವಾಜು

By Staff
|
Ravi Belagere on Thatskannada.com ರವಿ ಬೆಳಗೆರೆ
ಬೆಂಗಳೂರಿನ ಮಹಾನಗರ ಪಾಲಿಕೆಯ ಇಬ್ಬರು ಇಂಜಿನಿಯರುಗಳು ಮನೆಯಲ್ಲೇ ಲಕ್ಷಾಂತರ ರುಪಾಯಿ ಲಂಚದ ಹಣದೊಂದಿಗೆ ಸಿಗೆ ಬೀಳುತ್ತಾರೆ. ಇವರನ್ನು ಸರ್ಕಾರ protect ಮಾಡುತ್ತದೆ. ಶಿಕ್ಷಿಸುವುದೇ ಇಲ್ಲ. ನ್ಯಾಯಾಲಯಗಳೂ ಇಂಥವರ ನೆರವಿಗೇ ಬರುತ್ತವೆ. ನಾನು ಅನಿವಾರ್ಯವಾಗಿ ಇವರ ವಿರುದ್ಧ ಹೋರಾಡಬೇಕಾಗಿ ಬಂದಿದೆ’ ಅಂತ ನಿವೃತ್ತ ನ್ಯಾಯಮೂರ್ತಿ ವೆಂಕಟಾಚಲ ಅವರು ಪತ್ರಿಕೆಗಳವರೆದುರಿಗೇ ದುಃಖ ಹೇಳಿ ಕೊಳ್ಳುತ್ತಾರೆ. ಕೋಟ್ಯಂತರ ಸೋಪುಫ್ಯಾಕ್ಟರಿ ಭಟ್ಟನಂತೆಯೇ ಈ ಹರಾಮಕೋರ ಇಂಜಿನಿಯರುಗಳು ಸಹ ಒಂದೇ ಒಂದು ದಿನಕ್ಕೂ ಜೈಲಿಗೆ ಹೋಗದೆ ದಿವಿನಾಗಿ ಓಡಾಡಿ ಕೊಂಡಿರುತ್ತಾರೆ.

ವಿನಿವಿಂಕ್‌ ಶಾಸ್ತ್ರಿ ಹದಿನೈದು ಸಾವಿರ ಮಂದಿಗೆ ವಂಚಿಸಿ ನೂರಾರು ಕೋಟಿ ರುಪಾಯಿಯಾಂದಿಗೆ ಓಡಿ ಹೋಗುತ್ತಾನೆ. ತಿಂಗಳು ಗಟ್ಟಲೆ ಮಜವಾಗಿದ್ದು, ನಂತರ ಸಿಕ್ಕ ಬಿದ್ದರೆ - ಅವನು ಸಾರ್ವಜನಿಕರ ಹಣ ಎಲ್ಲಿಟ್ಟ ಎಂಬುದೇ ಪತ್ತೆಯಾಗುವುದಲ್ಲ. ಅವನ ಮೈಮುಟ್ಟುವಂತಿಲ್ಲ, ಬಾಟಮ್ಮು ಚಿಗುಟುವಂತಿಲ್ಲ. ಈ ಕಮೀಶನರ್‌ ಅಜಯ್‌ಕುಮಾರ್‌ಸಿಂಗ್‌ ಮಂಪರು ಪರೀಕ್ಷೆ, ಬ್ರೇಯ್ಡ್‌ ಮ್ಯಾಪಿಂಗು ಅಂತ ಮಾತನಾಡುತ್ತಿದ್ದಾರೆ. ಇನ್ನೊಂದು ವಾರ-ಹತ್ತು ದಿನ ಶಾಸ್ತ್ರಿ ಹೀಗೆ ಬಾಯಿ ಬಿಡದೆಮೊಂಡು ಹರಕೊಂಡು ಕೂತನೆಂದರೆ, ಅವನನ್ನು ಗೌರವಯುತವಾಗಿ ಜೈಲಿಗೆ ಬಿಟ್ಟು ಬರಬೇಕಾಗುತ್ತದೆ. ಅವನಿಗೆ ಶಿಕ್ಷೆಯಾದೀತೆಂಬುದೂ ಖಾತರಿಯಿಲ್ಲ. ಹೊರಕ್ಕೆ ಬಂದವನು ತನ್ನ ಪಾಡಿಗೆ ತಾನು ಬಚ್ಚಿಟ್ಟ ದುಡ್ಡು ಬಿಚ್ಚಿಟ್ಟುಕೊಂಡು ಬದುಕುತ್ತಾನೆ: ಮುಗಿಯಿತು!

ಅಲ್ಲೆಲ್ಲೋ ಶೃಂಗೇರಿ ಹತ್ತಿರದ ಕಾಡಿನಲ್ಲಿ ನಕ್ಸಲೈಟರು ನಿರ್ಮಾನುಷವಾದ ಚೆಕ್‌ಪೋಸ್ಟಿಗೆ ನೆಲಬಾಂಬಿಟ್ಟು ಉಡಾಯಿಸಿ ತಮ್ಮ ಪ್ರತಿಭಟನೆ, ಗಿರಿಜನರ ಹಕ್ಕು-ವ್ಯಕ್ತ ಪಡಿಸಿದರೆ-‘ಅವರನ್ನು ಕೊಂದು ಹಾಕಿ’ ಅಂತ ಸಂಪಾದಕೀಯ ಬರೆಯುತ್ತದೆ ‘ಕನ್ನಡ ಪ್ರಭ’. ಮುಖ್ಯಮಂತ್ರಿ ಧರಂಸಿಂಗ್‌ ‘ಶರಣಾಗುವ ನಕ್ಸಲರಿಗೆ ಪ್ಯಾಕೇಜ್‌ ಕೊಡುತ್ತೇನೆ’ ಅಂತ ಶುದ್ಧ ಯಡವಟ್ಟು ಧಾಟಿಯ ಮಾತುಗಳನ್ನಾಡುತ್ತಾರೆ. ‘ಅಯ್ಯೋ, ಇದು ಆಂಧ್ರದ ವರಸೆಗೆ ತಿರುಗಿಕೊಳ್ಳುತ್ತಿದೆ: ಇವರನ್ನು ದಕ್ಷ ಕಾರ್ಯಾಚರಣೆ ನಡೆಸಿ ಕೊಂದು ಹಾಕೀ...’ಅಂತ ಅದೇ ‘ಕನ್ನಡ ಪ್ರಭ’ಕಿರುಲಿಕೊಳ್ಳುತ್ತದೆ.

ಇದರರ್ಥವಿಷ್ಟೇ. ಕೋಟ್ಯಂತರ ರುಪಾಯಿ ತಿಂದ ಇಂಜಿನಿಯರುಗಳಿಗೆ ಶಿಕ್ಷೆಯಿಲ್ಲ: ವೆರಿಗುಡ್‌ ವೆರಿಗುಡ್‌! ನಿವೃತ್ತ ನ್ಯಾಯಮೂರ್ತಿಯ ಮಾತಿಗೇ ಆದ್ಯತೆಯಿಲ್ಲ. ವೆರಿಗುಡ್‌. ವಿನಿವಿಂಕ್‌ ಶಾಸ್ತ್ರಿಯ ಕೈಲಿ ಒದ್ದು ಬಾಯಿ ಬಿಡಿಸುವ ಹಾಗಿಲ್ಲ. ಅವನು ಬಾಯಿ ಬಿಡಿದದ್ದರೆ ಏನೂ ಮಾಡೋ ಹಾಗೂ ಇಲ್ಲ. ಅದು ಕೂಡ ವೆರಿಗುಡ್‌. ಅನಾಮತ್ತು ಎಂಬತ್ತು ರೌಡಿಗಳು ಹತ್ತಾರು ಗಾಡಿಯಲ್ಲಿ ಹೋಗಿ ನ್ಯಾಯಾಧೀಶರ ಕಾಲನಿಯಲ್ಲೇ ಇನ್ನೊಬ್ಬ ರೌಡಿಯನ್ನು ಕೊಂದು ಹಾಕುತ್ತಾರೆ. ಅಸಲಿ ಹಂತಕರನ್ನು ಬಂಧಿಸುವುದೇ ಇಲ್ಲ. ಅದೂ ವೆರಿಗುಡ್‌! ನಕ್ಸಲೈಟರು ಖಾಲಿ ಕಟ್ಟಡಕ್ಕೆ ಬಾಂಬಿಕ್ಕಿದರೆ-ಅವರನ್ನು ಕೊಂದು ಹಾಕಿ!

ಇದು ಯಾವ ದೇಶದ ನ್ಯಾಯ? ಇಲ್ಲಿ ಆರ್ಥಿಕ ಅಪರಾಧವೆಂಬುದು ಅಪರಾಧವೇ ಅಲ್ಲ. ನೂರಾರು ಕೋಟಿ ಮುಳುಗಿದವನ ಮೇಲೆ ಸಣ್ಣ cheating ಕೇಸು. ಕೋಟ್ಯಂತರ ರುಪಾಯಿ ಸಾರ್ವಜನಿಕರ ಹಣ ನುಂಗಿದ ಅಧಿಕಾರಿಗೆ ಶಿಕ್ಷೆಯೇ ಇಲ್ಲ. ಅಲ್ಲಿ ನ್ಯಾಯಮೂರ್ತಿಯೇ ನಿಸ್ಸಹಾಯಕರು. ರಾಜಧಾನಿಯ ನಟ್ಟ ನಡುವೆ ರೌಡಿಗಳೆಲ್ಲ ಸಂಘಟಿತರಾಗಿ ಮತ್ತೊಬ್ಬ ರೌಡಿಯನ್ನು ಹಾಡಹಗಲೇ ಕೊಂದರೆ- ಅವರಿಗೆ ರಾಜಕೀಯ ರಕ್ಷೆ. ಕಾಡಮಧ್ಯದ ನಕ್ಸಲೈಟು-ಈ ವ್ಯವಸ್ಥೆಯ ಪಾಲಿಗೆ ಭಯಂಕರ ಗುಮ್ಮ!

ಮುಖ್ಯಮಂತ್ರಿ ಧರಂಸಿಂಗ್‌ ಅಮಾಯಕರಂತೆ ಪ್ಯಾಕೇಜ್‌ ಬಗ್ಗೆ ಮಾತನಾಡಿದರು. ತಕ್ಷಣ ಧಾಟಿ ಬದಲಿಸಿ ‘ಇನ್ನು ಈಗಷ್ಟೆ ಚಳವಳಿಗೆ ಕಾಲಿಟ್ಟವರು, ತಮ್ಮ ತಪ್ಪು ತಿದ್ದಿಕೊಂಡು ವಾಪಸು ಬಂದರೆ- ಅವರಿಗೆ ಪಾಕೀಟು- ಪ್ಯಾಕೇಜು ಕೊಡುತ್ತೇನೆ’ ಅಂದರು. ತುಂಬ ದಶಕಗಳಿಂದ ರಾಜಕಾರಣ ಮಾಡುತ್ತಿರುವ ಹಾಗೂ ಎಡಪಂಥೀಯತೆಯನ್ನು ಚೆನ್ನಾಗಿ ಬಲ್ಲ ಧರಂಸಿಂಗ್‌ ಹೀಗೆ ಮಾತನಾಡಕೂಡದು. ಆಂಧ್ರದಲ್ಲಿ ನಕ್ಸಲರು ಶರಣಾದದ್ದಕ್ಕೆ ಸಾವಿರ ಕಾರಣಗಳಿವೆ. ಅಲ್ಲಿ ನಕ್ಸಲ್‌ ಚಳವಳಿ ಕೆಲವೆಡೆ ಒಡೆದಿದೆ. ಕೆಲವೆಡೆ ಹಾದಿ ತಪ್ಪಿದೆ. ಹತ್ತಾರು splinter groupಗಳಾಗಿವೆ. ಅಂಥ ಚಳವಳಿಯಲ್ಲಿ ತುಂಬ ವರ್ಷ ಇದ್ದು ಭ್ರಮನಿರಸರಾದವರು, ಚಳವಳಿಗೆ ವಂಚನೆ ಮಾಡಿ ಆಸ್ತಿ-ಅಡವು ಮಾಡಿಕೊಳ್ಳ ಬಯಸಿದವರು- ಅವರು ಸರಂಡರ್‌ ಆದರು. ಸಿದ್ಧಾಂತಕ್ಕ ಬದ್ಧರಾದ ನಿಗಿ ನಿಗಿ ನಕ್ಸಲೀಯರಲ್ಲ.

ಅಂಥ ಭ್ರಮನಿರಸನ ಕರ್ನಾಟಕದ ನಕ್ಸಲ್‌ ಚಳವಳಿಗೆ ಕಾಲೇ ಇಟ್ಟಿಲ್ಲ. ಈಗಷ್ಟೇ ಕಾಡು ಹೊಕ್ಕು, ಸಶಸ್ತ್ರ ಕ್ರಾಂತಿಯ ಮಾತನಾಡುತ್ತಿರುವ ಹುಡುಗ ಹುಡುಗಿಯರು ಅದ್ಯಾಕೆ ಸರಂಡರ್‌ ಆದಾರು? ಕಾಡ ಸುತ್ತಲಿನ ಜಿಲ್ಲೆಗಳ ಪೊಲೀಸರು ಗಿರಿಜನರ ಯುವಕರಿಗೆ ಈಗ್ಗೆ ಕೆಲ ತಿಂಗಳ ಮುಂಚೆ ನಿಮಗೆ ನೌಕರಿ ಕೊಡಿಸುತ್ತೇವೆ. ‘ ನಿಮ್ಮನ್ನೇ ಪೊಲೀಸರನ್ನಾಗಿ ಮಾಡುತ್ತೇವೆ. ಸವಲತ್ತು ಕೊಡುತ್ತೇವೆ’ ಎಂದು ಮನವೊಲಿಸಿ ನಕ್ಸಲ್‌ ಚಳವಳಿಯಿಂದ ಅವರನ್ನು ವಿಮುಖರನ್ನಾಗಿ ಮಾಡಲು ನೋಡಿದರು. ಒಂದು ಸಲ ಪೊಲೀಸರನ್ನು ಯಾಮಾರಿಸಿ ಕಾಡಿನೊಳಕ್ಕೆ ಕರೆಸಿಕೊಂಡ ನಕ್ಸಲರು ಜೀಪಿನ ಬುಡಕ್ಕೆ ಬಾಂಬಿಟ್ಟು ಸುಮ್ಮನೆ ಶಬ್ದ ಮಾಡಿದರು ನೋಡಿ? ಹೇತ್ಗಾಂಡಿ ಎಸ್ಪಿಗಳು ಕಾಡೊಳಕ್ಕೆ ಕಾಲಿಡುವುದನ್ನೇ ಬಿಟ್ಟರು. ಗಿರಿಜನ ಯುವಕರಿಗೆ ನೌಕರಿ ಕೊಡುವ ಮಾತು ಅಲ್ಲೇ ಮಣ್ಣು ತಿಂದಿತು. ಈಗ ಸರ್ಕಾರ ಆ ಯುವಕರನ್ನು ‘ಸರಂಡರ್‌’ನ ಹೆಸರಿನಲ್ಲಿ ಕಾಡಿನಿಂದ ಹೊರಕ್ಕೆ ಕರೆಯಿಸಿ ಮುದ್ದು ಮಾಡಿ ಆ ಮೂಲಕ ನಕ್ಸಲ್‌ ಚಳವಳಿಯನ್ನು ಬಲಹೀನಗೊಳಿಸಲು ತಂತ್ರ ಹೂಡಿದೆ.

ಇದಕ್ಕಿಂತ ಅವಿವೇಕ ಮತ್ತೊಂದಿರಲಾರದು. ಶರಣಾಗತಿಯ ಮಾತನ್ನಾಡಲಿಕ್ಕೆ ಅಸಲು ಯುದ್ಧವೆಲ್ಲ ಶುರುವಾಗಿದೆ?ಈ ತನಕ ನಕ್ಸಲರು ಮಾಡಿರುವ ಹತ್ಯೆ, ಹಿಂಸಾಚಾರಗಳಾದರೂ ಎಷ್ಟು?ಒಬ್ಬ ಶೇಷಯ್ಯ ಗೌಡ್ಲುವನ್ನು ಕೊಂದರೆ, ಒಬ್ಬ ಭೂಮಾಲೀಕನ ಕಪಾಳಕ್ಕೆ ಹೊಡೆದರೆ, ಒಬ್ಬ ಪೊಲೀಸ್‌ ಇನ್ಫಾರ್ಮರ್‌ನ ತಲೆ ಮೊಟಕಿದರೆ ಅಲ್ಲಿರುವ ಅಷ್ಟೂ ಹುಡುಗರನ್ನು ಕೊಲ್ಲಬೇಕಾ? ಚೆನ್ನಾಗಿ ಅರ್ಥಮಾಡಿಕೊಳ್ಳಲಿ ಸರ್ಕಾರ: ಅವಿಷ್ಟು ಹುಡುಗರು ಮಾಡಿದ ಹಿಂಸಾಚಾರಕ್ಕೆ ಹತ್ತು ಪಟ್ಟು ಹಿಂಸಾಚಾರವನ್ನು ಬೆಂಗಳೂರಿನ ಒಬ್ಬೊಬ್ಬ ರೌಡಿ ಮಾಡಿದ್ದಾನೆ. ಗೋಪಾಲಯ್ಯ ಮಾಡಿದ್ದಾನೆ. ಕೊಲೆಯಾದ ಮಚ್ಚ ಮಾಡಿದ್ದ. ಗೂಳಿ ಬಸವ ಮಾಡಿದ್ದಾನೆ. ಹತ್ಯೆ ಮಾಡಿದವರನ್ನು ಕೊಲ್ಲಬೇಕು ಅಂತ ಸರ್ಕಾರ ನಿರ್ಧರಿಸಿದರೆ ‘ಕನ್ನಡ ಪ್ರಭ’ ಅದನ್ನು ಬೆಂಬಲಿಸಿದರೆ- ಮೊದಲು ಬೆಂಗಳೂರಿನ ರೌಡಿಗಳನ್ನು ಎಳೆದೆಳೆದು ಕೊಲ್ಲಬೇಕು.

ಎಲ್ಲೀ, ಕೊಂದು ನೋಡಿ? ಒಂದೊಂದು ರೌಡಿ ಪಡೆಯ ಹಿಂದೆಯೂ ಪೊಲಿಟಿಕಲ್‌ ಪಾರ್ಟಿಯೇ ಇದೆ. ಹಾಜೀಮಾ, ಪಾರ್ವತಿ, ಶಿವಲಿಂಗು, ಸಾಕೇತ್‌, ಕಿರಣ್‌, ಕುಸುಬಿ ಮುಂತಾದ ಹುಡುಗ-ಹುಡುಗಿಯರನ್ನು ವಿನಾಕಾರಣ, ಚಿಕ್ಕದೊಂದು ಗುಂಡಿನ ಚಕಮಕಿಯೂ ನಡೆಸದೆ ಕೊಂದು ಹಾಕಿದಾಗ ಅವರ ಹಿಂದೆ ಯಾವ ಪೊಲಿಟಿಕಲ್‌ ಪಾರ್ಟಿಯೂ ಇರಲಿಲ್ಲ. ಎಲ್ಲೀ, ಗೂಳಿ ಬಸವನಿಗೆ ಬಂದೂಕಿನ ಬಾನೆಟ್‌ ಇಕ್ಕಲೀ? ಖುದ್ದು ದೇವೇಗೌಡರೇ ಓಡಿ ಬಂದು ಎದೆ ಅಡ್ಡವಿಕ್ಕಿ ನಿಲ್ಲುತ್ತಾರೆ. ಇದು ಯಾತರ ನ್ಯಾಯ?ಎಂಥ ವ್ಯವಸ್ಥೆ?

ನಕ್ಸಲರ ಸಮಸ್ಯೆಯನ್ನು, ಅವರು ಮುಂದಿಟ್ಟಿರುವ ಸಮಸ್ಯೆಯನ್ನು ಸರ್ಕಾರ ಸರಿಯಾಗಿ ಅರ್ಥ ಮಾಡಿಕೊಳ್ಳಲಿ. ಅಸಲಿಗೆ ನಕ್ಸಲ್‌ ಉದ್ಯಮದ ಬಗ್ಗೆ ಸರಿಯಾದ ಅವಗಾಹನೆ ಇರುವ ಒಬ್ಬೇ ಒಬ್ಬ ಅಧಿಕಾರಿ ಧರಂಸಿಂಗ್‌ರ ಆಸುಪಾಸಿನಲ್ಲಿಲ್ಲ. ಚಿರಂಜೀವಿ ಸಿಂಗ್‌ರನ್ನು ಅಧ್ಯಯನಕ್ಕೆ ಕಳಿಸಿದರೆ ನಕ್ಸಲೀಯರು ಅಧಿಕಾರಕ್ಕಾಗಿ ಇದನ್ನೆಲ್ಲ ಮಾಡುತ್ತಿದ್ದಾರೆ ಎಂಬ ಮಹಾನ್‌ ಎಡವಟ್ಟು ಹೇಳಿಕೆ ಹೊತ್ತು ತಂದರು. ಇದು ಇಂಥ ಹೇಳಿಕೆಗಳ ಮೂಲಕ ಬಗೆಹರಿಯುವ ಸಮಸ್ಯೆಯಲ್ಲ. ಧರಂಸಿಂಗ್‌ ಸರ್ಕಾರ ಅಧಿಕಾರಿಗಳು ಮತ್ತು ಚಳವಳಿಗಳ ಬಗ್ಗೆ ಅವಗಾಹನೆ ಇರುವ ಚಿಂತಕರು, ಕೆಲವು ಪತ್ರಕರ್ತರು, ಸ್ಥಳೀಯ ರಾಜಕಾರಣಿಗಳಲ್ಲೇ ಸಮಚಿತ್ತ ಉಳ್ಳವರು, ಇಂಥವರನ್ನೆಲ್ಲ ಸೇರಿಸಿ ಒಂದು ಸಮಿತಿ ಅಂತ ಮಾಡಲಿ. ಇವತ್ತು ನಕ್ಸಲೀಯರು ಓಡಾಡಿಕೊಂಡಿರುವ ಪ್ರದೇಶಗಳ ಜನಕ್ಕೆ ಇರುವ ಸಂಕಷ್ಟ, ಸಮಸ್ಯೆಗಳ ಅಧ್ಯಯನ ನಡೆಸಲಿ. ಅವುಗಳಿಗೆ ತಕ್ಷಣಕ್ಕೆ ಒದಗಿಸುವ ಪರಿಹಾರಗಳನ್ನೂ ಈ ತಂಡ ಸೂಚಿಸಲಿ. ಸುಮ್ಮನೆ ಕೋಟ್ಯಂತರ ರೂಪಾಯಿಗಳ ಪ್ರಾಜೆಕ್ಟು, ಪ್ಯಾಕೇಜು ಅಂತ ಸುಳ್ಳು ಬೊಗಳದೆ areawise ಸಮಸ್ಯೆಗಳನ್ನು ಸರ್ಕಾರ ಉದ್ಧೋಪಾದಿಯಲ್ಲಿ ಬಗೆಹರಿಸಲು ಆರಂಭಿಸಲಿ. ಅದರ ಪರಿಣಾಮ ಸರ್ಕಾರಕ್ಕೆ ಅರ್ಥವಾದೀತು.

ಗಿರಿಜನರಿಗೊಂದು ಬದುಕು ಬೇಕು, ಅವರ ಹಸಿವು ನೀಗಬೇಕು, ಅವರ ನೆಲ ಅವರಿಗುಳಿಯಬೇಕು ಅಂತ ಹೋರಾಟಕ್ಕಿಳಿದಿರುವ ನಕ್ಸಲೈಟರನ್ನು ದಮನ ಮಾಡಲು ಕಾಡಿನೊಳಕ್ಕೆ ಬಂದೂಕು ನುಗ್ಗಿಸಿದರೆ-ಮುಗಿದು ಹೋಗುವುದು ಗಿರಿಜನರ ಬದುಕು! ಇನ್ನೂ ಐವತ್ತು ಜನ ನಕ್ಸಲೀಯರನ್ನು ಕೊಂದರೂ ಸಮಸ್ಯೆಯಾಗುವುದಿಲ್ಲ. ಸಮಸ್ಯೆ ಬಗೆಹರಿಸಿದರೆ ಪಶ್ಚಿಮ ಘಟ್ಟಗಳಲ್ಲಿ ನಕ್ಸಲ್‌ ಚಳವಳಿ ತಾನಾಗಿಯೇ ತನ್ನ ಸ್ವರೂಪ ಬದಲಿಸಿಕೊಳ್ಳುತ್ತದೆ. ಸಮಸ್ಯೆ ಪರಿಹರಿಸಿದ ನಂತರವೂ ನಕ್ಸಲರು ಬಂದೂಕು ಹಿಡಿದರೆ, ಕೊಂದರೆ-ಆಗ ಎನ್‌ಕೌಂಟರ್‌, ಎಸ್ಟಿಎಫ್‌, ಕಾರ್ಯಾಚರಣೆ, ಸರಂಡರು-ಇತ್ಯಾದಿಗಳ ಬಗ್ಗೆ ಮಾತಾಡೋಣ. ಅದು ಬಿಟ್ಟುಕೊಂಡು, ಬಡವರ ಜಮೀನಿಗೆ ಬೇಲಿ ಸುತ್ತುವ ರೌಡಿಗಳನ್ನಿಟ್ಟುಕೊಂಡು, ಅವರನ್ನು ರಕ್ಷಿಸುತ್ತಾ-ಕಾಡಮಧ್ಯದ ಆವೇಶವಂತ ಯುವತಿ-ಯುವಕರನ್ನು ಕೊಂದು ಹಾಕಿದರೆ-ಇವತ್ತು ಕನ್ನಡ ಪ್ರಭ ಮೆಚ್ಚಿ ಉಘೕ ಅನ್ನಬಹುದು. ನಾಳೆ ಇತಿಹಾಸ ಕ್ಯಾಕರಿಸುತ್ತದೆ.

ನಕ್ಸಲೀಯರು ಕೂಡ ಗಿರಿಜನರ ಮನಸ್ಸು ಗೆಲ್ಲಲಿಕ್ಕೆ ಅವರಿಗೇನಿಷ್ಟವೋ ಅದನ್ನು ಮಾಡಲಿಕ್ಕೆ, ಆಂಧ್ರದ ಅಣ್ಣಂದಿರನ್ನು ಇಮಿಟೇಟ್‌ ಮಾಡಲಿಕ್ಕೆ ಅಂತ ಹೊರಟು ಈ ಚೆಕ್‌ಪೋಸ್ಟು ಉಡಾಯಿಸುವಂತಹ ಹುಡುಗಾಟ ಬಿಡಬೇಕು. ಗಿರಿಜನರ ಓಡಾಟ ನಿರ್ಬಂಧಿಸಿ, ಅವರನ್ನು ಕಾಡಿನಿಂದ ಎತ್ತಂಗಡಿ ಮಾಡಲೆಂದೇ ಈ ಚೆಕ್‌ಪೋಸ್ಟ್‌ಗಳನ್ನು ಏರ್ಪಡಿಸಲಾಗಿದೆ ನಿಜ. ಆದರೆ, ಕಟ್ಟಡ ಧ್ವಂಸ-ಹಿಂದೆ 1969ರಲ್ಲಿ ಕಲ್ಕತ್ತಾದಲ್ಲಿ ಮಾಡಿದಂತಹ ಪ್ರತಿಮೆಗಳ ಧ್ವಂಸ-ನಕ್ಸಲರ ಪಾಲಿನ strategy ಆಗಬಾರದು. ಅವರು ತಮ್ಮ ದಳಗಳನ್ನ, ಶಸ್ತ್ರಗಳನ್ನ ಏನೇ ವಿಸ್ತರಿಸಲಿ, ಹೆಚ್ಚಿಸಿಕೊಳ್ಳಲಿ. ಪ್ರಚಂಡವಾದುದೊಂದು ಜನಪರ ಚಳವಳಿ, ಒಂದು mass movement ಕಟ್ಟದ ಹೊರತು ಸಮಾಜದ ಕಣ್ಣಿಗೆ ಗುಮ್ಮಣ್ಣಗಳಾಗಿಯೇ ಕಾಣುತ್ತಾರೆ.

ಅಪ್ರಚೋದಿತ, ಅನವಶ್ಯಕ ಹಿಂಸಾಚಾರ ಜನರಲ್ಲಿ ಹೆದರಿಕೆ ಹುಟ್ಟಿಸುತ್ತದೆಯೇ ಹೊರತು, ಕಾಡಿನಾಚೆಗಿರುವ ಜನರ ಪ್ರೀತಿ ಗಳಿಸಲಾರದು.

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more