ಆಗಷ್ಟೆ ನಿನಗೆ ಗೊತ್ತಾಗುತ್ತದೆ ಹಣವನ್ನು ತಿನ್ನಲಾಗುವುದಿಲ್ಲವೆಂದು...

Ravi Belagere on Thatskannada.com ರವಿ ಬೆಳಗೆರೆ

ಅವತ್ತು ಬರೆಯುತ್ತ ಕುಳಿತವನಿಗೆ ಗೆಳೆಯರೊಬ್ಬರು ಫೋನು ಮಾಡಿ ಹೇಳಿದ್ದರು : ಡಾ.ನಂಜುಂಡಪ್ಪ ಹೋಗಿಬಿಟ್ಟರು ಅಂತ.

ನನ್ನ ಕಣ್ಣೆದುರು ಒಬ್ಬ ಯೂರೋಪಿಯನ್‌ ಕದಲಿ ಮುಂದಕ್ಕೆ ಹೋದಂತಾಯಿತು. ನನ್ನದೇ ಜಿಲ್ಲೆಯಾದ ಚಿತ್ರದುರ್ಗದವರು ಅವರು. ನಮ್ಮ ದೊಗ್ಗನಾಳ ಗ್ರಾಮದವರು. ಪ್ರಧಾನಮಂತ್ರಿಯಾಗಿದ್ದಿದ್ದರೆ ‘ಈ ದೇಶವನ್ನು ಇಂತಿಷ್ಟು ವರ್ಷಗಳ ನಂತರ, ಇಂಥ ಇಸವಿ-ಇಂಥ ತಾರೀಖಿಗೆ ಆರ್ಥಿಕವಾಗಿ ಈ ಸ್ಥಿತಿಯಲ್ಲಿ ಇಟ್ಟಿರುತ್ತೇನೆ’ ಅಂತ ಕರಾರುವಾಕ್ಕಾಗಿ ಹೇಳಿರುತ್ತಿದ್ದ ಮಹಾನ್‌ ಮೇಧಾವಿ ಮತ್ತು ಅದಕ್ಕೋಸ್ಕರ ಆ ಕ್ಷಣದಿಂದಲೇ ದುಡಿಯಲಾರಂಭಿಸುತ್ತಿದ್ದ ಶಿಸ್ತುಗಾರರು ಆತ. ಅವರ ಆಡಳಿತದಲ್ಲಿ ಯೂನಿವರ್ಸಿಟಿಗಳು ನೆಟ್ಟಗಾದವು. ಪ್ರಾದೇಶಿಕ ಅಸಮತೋಲನದ ಬಗ್ಗೆ ಯಾರೇ ಮಾತನಾಡಿದರೂ, ಅವರು ನಂಜುಂಡಪ್ಪನವರನ್ನು ಮರೆತು ಮಾತಾಡುವಂತಿಲ್ಲ. ಬದುಕಿನ ಬಹುದೊಡ್ಡ ಗುರಿಗಳನ್ನು ತಲುಪಿಕೊಂಡ ನಂತರವೂ ಹೊಸದೊಂದು ಮೆಟ್ಟಲು ಹುಡುಕುತ್ತಿದ್ದ ಸಾತ್ವಿಕ ಮಹತ್ವಾಕಾಂಕ್ಷಿ. ಅವರ ನೆನಪು ನಮ್ಮನ್ನು ತುಂಬ ದಿನ ಎಚ್ಚರಿಕೆಯ ಮಾತಾಗಿ ಕಾಯಲಿದೆ.

Dr. U.R.Ananthamurthyಈ ಸಲ ಐಟಿ ಇಂಡಸ್ಟ್ರಿಯ ಬಗ್ಗೆ ಮತ್ತೊಂದು ಸಂಪಾದಕೀಯ ಬರೆಯಬೇಕು ಅಂದುಕೊಂಡಿದ್ದೆ. ಅಷ್ಟರಲ್ಲಿ ಯು.ಆರ್‌.ಅನಂತಮೂರ್ತಿ ಅವರು ‘ಕನ್ನಡ ಪ್ರಭ’ದ ‘ಅತಿಥಿ’ ಅಂಕಣದಲ್ಲೊಂದು ಲೇಖನ ಪ್ರಕಟಿಸಿದರು. ಇತ್ತೀಚಿನ ವರ್ಷಗಳಲ್ಲಿ ನಾನು ಓದಿದ ಅತ್ಯುತ್ತಮ ಲೇಖನವದು. ಬಹುಶಃ ಈ ವಿಷಯದಲ್ಲಿ ಗಾಂಧೀಜಿಯ ನಂತರ ಇಷ್ಟೊಂದು ಸ್ಪಷ್ಟತೆ ಇಟ್ಟುಕೊಂಡು ಯೋಚಿಸಿದವರು. ಅನಂತಮೂರ್ತಿ ಒಬ್ಬರೇ ಏನೋ? ಅವರು ಅಮೆರಿಕವನ್ನೂ, ಅಮೆರಿಕನ್ನನನ್ನೂ ಬಲ್ಲವರು. ಅದಕ್ಕಿಂತ ಹೆಚ್ಚಾಗಿ ಭಾರತದ ನೆಲದ ನಿಜವಾದ ಸಕ್ಷಿಂಕಟ, ದುಗುಡ ದುಮ್ಮಾನಗಳನ್ನು ಅರ್ಥ ಮಾಡಿಕೊಂಡವರು. ‘ಕನ್ನಡ ಪ್ರಭ’ದ ಸಂಪಾದಕರ ಮತ್ತು ಅನಂತಮೂರ್ತಿಯವರ ಅನುಮತಿಯಾಂದಿಗೆ ಅವರ ಬರಹವನ್ನು ಇಲ್ಲಿ ಮತ್ತೆ ಪ್ರಕಟಿಸುತ್ತಿದ್ದೇನೆ. ಇಬ್ಬರಿಗೂ ‘ಪತ್ರಿಕೆ’ ಋಣಿ.

*

ಅಮೆರಿಕಾದ ಮೂಲ ನಿವಾಸಿಗಳಾದ ಕ್ರೀ ಎಂಬ ಜನಾಂಗದ ಒಂದು ನುಡಿ ಹೀಗಿದೆ:

ಕಟ್ಟ ಕಡೆಯ ಮರವನ್ನೂ
ಕತ್ತರಿಸಿ ಹಾಕಿದ ನಂತರ
ಕಟ್ಟಕಡೆಯ ಮೀನನ್ನೂ ಹಿಡಿದ ನಂತರ
ಆಗಷ್ಟೇ ನಿನಗೆ ಗೊತ್ತಾಗುತ್ತದೆ, ಹಣವನ್ನು ತಿನ್ನಲಾಗುವುದಿಲ್ಲ ಎಂದು.

ಅಮೆರಿಕಾದ ಟ್ರೂಮನ್‌ ತನ್ನ ಅಧ್ಯಕ್ಷೀಯ ಭಾಷಣವನ್ನು ತೃತೀಯ ಜಗತ್ತನ್ನು ಅಭಿವೃದ್ಧಿ ಪಡಿಸುವುದೇ ನಮ್ಮ ಗುರಿಯಾಗಿರಬೇಕು ಎಂದು ಎಲ್ಲರೂ ಉದಾತ್ತವೆಂದು ತಿಳಿಯುವ ಮಾತನ್ನು ಆಡಿದ್ದಾನೆ. ಹಾಗೆ, ವಿಕ್ಟೋರಿಯಾ ರಾಣಿಯ ಕಾಲದಲ್ಲಿ ಭಾರತವನ್ನು ನಾಗರಿಕ ದೇಶವಾಗಿ ಮಾಡುವುದೇ ತನ್ನ ಗುರಿಯೆಂದೇ ಮೆಕಾಲೆ ತಿಳಿದಿದ್ದನು. ಬಲಿಷ್ಠ ಪಾಶ್ಚಿಮಾತ್ಯ ದೇಶಗಳು ನಮ್ಮ ತೃತೀಯ ಜಗತ್ತನ್ನು ದೋಚಲು, ದೋಚಿ ತಾವು ಬೆಳೆಯಲು ಬಳಸುವ ಎರಡು ಮಾರ್ಗಗಳೆಂದರೆ; ಆಗ ಸಮಾ ಜೋದ್ಧಾರ. ಈಗ ಆರ್ಥಿಕ ಪ್ರಗತಿ.

ಕೆಲವು ದಿನಗಳ ಹಿಂದೆ, ಕುದುರೆಮುಖ ಗಣಿಯ ಮುಖ್ಯಸ್ಥರು ನನ್ನನ್ನು ನೋಡಲೆಂದು ಬಂದರು. ಅವರ ಮಾತಿನ ವೈಖರಿಯಲ್ಲಿ ಅವರು ಸಜ್ಜನರೂ ಸತ್ಯಪಕ್ಷಪಾತಿಗಳೂ ಎಂದು ತೋರುವಂತಿತ್ತು. ನಾವಿಬ್ಬರೂ ಬಹಳ ವಿಶ್ವಾಸದಿಂದಲೇ ಮಾತನಾಡಿದೆವು. ಕುದುರೆಮುಖದಲ್ಲಿ ಇನ್ನಷ್ಟು ವರ್ಷಗಳ ಕಾಲ ಗಣಿಗಾರಿಕೆಯನ್ನು ಮುಂದುವರಿಸುವುದು, ಆ ಪ್ರದೇಶದ ಉಳಿವಿಗೆ ಎಷ್ಟು ಅನಿವಾರ್ಯ ಎಂಬುದು ಅವರ ವಾದವಾಗಿತ್ತು. ತನ್ನನ್ನು ನನಗೆ ಪರಿಚಯಿಸಿಕೊಂಡಾಗ ತಾವು ಸೈಲೆಂಟ್‌ ವ್ಯಾಲಿ ಪ್ರದೇಶದವರೆಂದೂ, ಕೇರಳದ ಮೊದಲನೆಯ ಜ್ಞಾನಪೀಠ ಲೇಖಕರ ಅಭಿಮಾನಿಯೆಂದೂ ಹೇಳಿಕೊಂಡಿದ್ದರು.

ಇವರ ಜೊತೆ ಮಾತನಾಡುತ್ತಾ ನಾನು ‘ಕುದುರೆಮುಖದಿಂದ ಸರ್ಕಾರದ ಬೊಕ್ಕಸಕ್ಕೆ ಅದೆಷ್ಟು ಹಣ ಬಂದರೂ ನನಗದು ಮುಖ್ಯ ಎನಿಸುವುದಿಲ್ಲ’ ಎಂದು ಹೇಳಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ಉಪಯೋಗಿಸುವ ಬಡತನ ಎನ್ನುವ ಶಬ್ದದಲ್ಲೇ ನಮ್ಮನ್ನು ನಾಶ ಮಾಡುವ ಹುನ್ನಾರವಿದೆ. ಎರಡು ಹೊತ್ತು ರಾಗಿ ಮುದ್ದೆ ತಿಂದು ಹಗಲೆಲ್ಲಾ ದುಡಿದು ರಾತ್ರಿ ಚೆನ್ನಾಗಿ ನಿದ್ದೆ ಮಾಡಿ ಮಕ್ಕಳನ್ನೂ ಶಾಲೆಗೆ ಕಳುಹಿಸಿ ಪ್ರತಿಯಾಂದು ಹಬ್ಬವನ್ನೂ ಆಚರಿಸುತ್ತಾ ಇಡೀ ಸಂಸಾರ ಯಾವುದೋ ನದಿಯ ದಂಡೆಯ ಮೇಲಿರುವ ದೇವಸ್ಥಾನಕ್ಕೆ ಹರಕೆ ಹೊತ್ತು ಬದುಕುವುದು ಅಮೆರಿಕಾದ ಕಣ್ಣಲ್ಲಿ ಬಡತನವೇ. ಯಾಕೆಂದರೆ ಅವರಿಗೆ ಒಂದು ಸೈಕಲ್ಲನ್ನು ಕೊಳ್ಳುವುದೂ ಕೂಡ ಸಾಧ್ಯವಿಲ್ಲ. ಆದರೆ ನಮ್ಮ ದೇಶವನ್ನು ನಾಶವಾಗದಂತೆ ಉಳಿಸಿಕೊಂಡು ಬಂದವರು, ಜೊತೆಗೆ ತಾವೂ ಉಳಿದುಬಂದವರು ಈ ಜನರೇ.

ಆಧುನಿಕ ಪ್ರಗತಿಯಿಂದ ಆಗಿರುವ ನಿಜವಾದ ಉಪಯೋಗ ಅಂದರೆ ಹೆಂಗಸರು ಮಕ್ಕಳನ್ನು ಹೆರುವಾಗ ಈ ದಿನಗಳಲ್ಲಿ ಸಾಯಬೇಕಾಗಿಲ್ಲ. ಇದನ್ನು ಬಿಟ್ಟರೆ ಒಂದು ಗುಡಿಸಲಲ್ಲಿ ವಾಸವಾಗಿದ್ದು ಕೊಂಡು ಆರೋಗ್ಯವಾಗಿ ಸುಖ ಸಂತೋಷದಲ್ಲಿ ಗುಂಪಿನಲ್ಲಿ ಕೂತು ಹಾಡಿ ಕುಣಿಯಬಲ್ಲ ಜನ ಪಾಶ್ಚಾತ್ಯರ ಕಣ್ಣಲ್ಲಿ ಬಡವರಾಗಿದ್ದರೂ, ನಾವು ಅವರ ಬಗ್ಗೆ ಆತಂಕ ಪಡಬೇಕಾಗಿಲ್ಲ.

ನಿಜವಾದ ಸಮಸ್ಯೆ ಎಂದರೆ ಮಕ್ಕಳು ರಾತ್ರಿ ಊಟವಿಲ್ಲದೆ ಹಸಿದುಕೊಂಡು ಮಲಗುವುದು ಮತ್ತು ಅವರ ತಂದೆ ತಾಯಂದಿರು ತಾವೂ ಹಸಿದುಕೊಂಡಿರುವುದಲ್ಲದೆ, ಮಕ್ಕಳೂ ಹಸಿದಿದ್ದಾರೆಂದು ಸಂಕಟಪಡುವುದು. ಜರ್ಮನಿಯಲ್ಲಿ ನಡೆದ ಚರ್ಚೆಯಾಂದರಲ್ಲಿ ನಾನು, ಬಡತನದ ಬಗ್ಗೆ ಮಾತಾನಾಡುವುದು ನಿಮ್ಮ ಕಪಟ ರಾಜಕೀಯ. ಆದರೆ ಹಸಿವಿನ ಬಗ್ಗೆ ಹಸಿದಿರುವವರ ಬಗ್ಗೆ ನಾವು ಸಂಕಟ ಪಡುವುದು ನಿಜವಾದ ಮಾನವೀಯತೆ ಎಂದು ಕೊಂಚ ಉತ್ಪ್ರೇಕ್ಷೆಯಲ್ಲಿಯೇ ಮಾತಾಡಿದ್ದೆ.

ಕುದುರೆಮುಖದ ಗಣಿಗಾರಿಕೆಯಿಂದ ಚಿನ್ನ ಸಿಗುವುದಾದರೂ ನಮಗದು ಬೇಕಾಗಿಲ್ಲ ಎಂದು ನಾವು ತಿಳಿದುಕೊಳ್ಳಬೇಕು. ತಿಳಿದು ಕೊಂಡು ವರ್ತಿಸಬೇಕು. ನಿತ್ಯ ದುಡಿಯುವ ಒಬ್ಬ ಮನುಷ್ಯ ಮತ್ತೆ ನಾಳೆ ದುಡಿಯಲು ಬೇಕಾಗುವ ಆಹಾರವನ್ನು ಸಂಪಾದಿಸುತ್ತಾನೆ. ಹೀಗೇ ದುಡಿಮೆಯಿಂದ ಶಕ್ತಿಯನ್ನು ಪಡೆದು ಅದನ್ನು ದುಡಿಮೆಗೇ ವಿನಿಯೋಗಿಸುತ್ತಾ ಇರುವ ನಮ್ಮ ಅಸಂಖ್ಯಾತ ದುಡಿಮೆಗಾರರು ಪರಾಗಸ್ಪರ್ಶಕ್ಕೆ ಕಾದಿರುವ ಹೂವಿನಂತಿರುತ್ತಾರೆ. ಯಾವುದೋ ದುಂಬಿ ಆಕಸ್ಮಿಕವಾಗಿ ತನ್ನನ್ನು ಬಂದು ಮುಟ್ಟೀತೆನ್ನುವ ಭರವಸೆಯಲ್ಲಿ, ಗಾಳಿಯಲ್ಲಿ ಅಲ್ಲಾಡುತ್ತಾ ಇರುವ ಹೂವಿನಂತೆ ಹೂವಿನ ಹಾಗೆ ಇದ್ದು ಬಿಡುತ್ತಾರೆ. ಯಾವುದೇ ದೈವ ತಮ್ಮನ್ನು ಬಂದು ಮುಟ್ಟೀತೆನ್ನುವ ಭರವಸೆಯಲ್ಲಿ, ಹರಕೆಯಲ್ಲಿ ಬಾಳುತ್ತಾ, ನದಿಗಳ ಸಂಗಮದಲ್ಲಿ ಸಹಸ್ರ ಸಂಖ್ಯೆಯಲ್ಲಿ ಮೀಯುತ್ತಾ, ಕಾಲ್ನಡಿಗೆಯಲ್ಲಿ ಯಾತ್ರೆ ಮಾಡುತ್ತಾ ಇರುವ ಅಪಾರ ಜನ ಕೋಟಿ ನಮ್ಮ ದಿನನಿತ್ಯದ ಬದುಕನ್ನು ಅರ್ಥಪೂರ್ಣವನ್ನಾಗಿ ಮಾಡುತ್ತದೆ. ದೇವರು ಇದ್ದಾನೋ ಇಲ್ಲವೋ ತಿಳಿಯದು. ಪ್ರಾಯಶಃ ಅವನನ್ನು ಮುಟ್ಟುವ ಭರವಸೆಯಲ್ಲಿ ಎಲ್ಲರೂ ಕೊನೆಗೆ ಸಾಯುವುದೇನೋ?ಹೀಗೆ ನಿತ್ಯದ ದುಡಿಮೆಯ ಕಾಯಕ ಮತ್ತು ಅಗೋಚರವಾದದ್ದರ ಭರವಸೆಯ ಈ ಜೀವನದಲ್ಲಿ ಭಾರತದ ಅಪಾರ ಜನಸಂಖ್ಯೆಗೆ ನಿಜವಾಗಿ ಸಿಗುವ ಸುಖ ಇರುವುದು ಮಕ್ಕಳ ಪಾಲನೆ, ಲಾಲನೆ, ಹಬ್ಬಹರಿದಿನಗಳ ಊಟ, ಕೊಂಚ ಬಿಡುವಿದ್ದಾಗ ನಡೆಯುವ ಕಾಡು ಹರಟೆ ಇವುಗಳದ್ದೇ.

ಇದನ್ನು ಈ ಸಂದರ್ಭದಲ್ಲಿ ಮಾತಾಡುವುದೇ ಓದುಗರಿಗೆ ವಿಚಿತ್ರ ಅನ್ನಿಸಬಹುದು. ಆದರೆ ಬದುಕಿನ ಈ ಸ್ಥಾಯಿ ಸ್ವರೂಪವನ್ನು ಮತ್ತು ಅದರ ಸಂಚಾರೀ ಕನಸುಗಳನ್ನು ಭರವಸೆಗಳನ್ನು ಹೃದಯದಲ್ಲಿ ಅರಿತು ದುಡಿಯುವವರಿಗೆ ದೇಶದ ಉತ್ಪಾದನೆಯನ್ನು ಹೆಚ್ಚಿಸುವ ಈಚಿನ ಅನೇಕ ಯೋಜನೆಗಳು ಕ್ರಿಮಿನಲ್‌ ವಿಚಾರಗಳಾಗಿ ಭಾಸವಾಗುತ್ತವೆ. ವೇಗವಾಗಿ ಹೋಗುವ ಕಾರುಗಳಿಗಾಗಿ ನಾವು ಮಾಡುವ ರಸ್ತೆಗಳನ್ನು ಕಂಡಾಗ ಒಬ್ಬ ಮುದುಕ, ಮುದುಕಿ ಅಥವಾ ಒಂದು ಮಗು ರಸ್ತೆಯ ಈ ಬದಿಯಿಂದ ಇನ್ನೊಂದು ಬದಿಗೆ ಹೋಗುವುದೇ ಅಸಾಧ್ಯವಲ್ಲವೇ ಅನ್ನುವ ಸಂಕಟ ಉಂಟಾದರೆ ನಾವು ಮನುಷ್ಯರು. ಬದಲಾಗಿ ಎಷ್ಟು ವೇಗವಾಗಿ ಒಂದು ಕಾರು ಸಂಚರಿಸಬಲ್ಲದು ಎಂದು ಯೋಚಿಸಿದರೆ ನಾವು ರಾಕ್ಷಸರು.

ನಮ್ಮದಲ್ಲದ ಅಮೆರಿಕನ್‌ ಉಚ್ಚಾರಣೆಯಲ್ಲಿ ಮಾತನಾಡುತ್ತಾ, ಯಾರದೋ ಹೆಸರನ್ನು ಇಟ್ಟುಕೊಂಡು, ಅಮೆರಿಕಾದ ಹಗಲು ಅವರಿಗೆ ಅರ್ಥಪೂರ್ಣವಾಗಬೇಕೆಂದು ನಮ್ಮ ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆಯುವ ಐಟಿಗಳ ನಗರ ಬೆಂಗಳೂರು ಎಂಬುದು ನಮಗೆ ಸಂತೋಷದಾಯಕ ಆಗಿರುವುದು ಮನಸ್ಸಿನ ವಿಕಾರದ ಫಲ. ನಮ್ಮ ಜಾಣ ಯುವಕ ಯುವತಿಯರು ಇನ್ನು ಮುಂದೆ ಶಾಲಾ ಶಿಕ್ಷಕರಾಗಲು ಬಿಎಡ್‌ ಮಾಡಬೇಕಾಗಿಲ್ಲ. ಅಥವಾ ಕೈಗಾರಿಕೆಗಳಲ್ಲಿ ಸೂಕ್ಷ್ಮ ವಾದ ಕೆಲಸವನ್ನು ಮಾಡಲು ಕಲಿಯಬೇಕಾಗಿಲ್ಲ. ಅಮೆರಿಕನ್ನರಿಗೆ ಸರಿ ಎಂದು ಕಾಣಿಸುವ ಉಚ್ಚಾರಣೆಯಲ್ಲಿ ಇಂಗ್ಲಿಷನ್ನು ಕಲಿತುಬಿಟ್ಟರೆ ಬೇರೆ ಯಾವ ಕೆಲಸಕ್ಕಿಂತಲೂ ಹೆಚ್ಚಿನ ಸಂಪಾದನೆ ಸಾಧ್ಯ.

ಹೀಗೆ ಬದುಕಿನ ಹಲವು ಸಾಧ್ಯತೆಗಳನ್ನು ನಾಶ ಮಾಡುವ ಅಭಿವೃದ್ಧಿಯ ಯೋಜನೆಗಳು ವಿನಾಶಕಾರಿಯಾದವು. ನಾವು ಭೂಮಿಯಿಂದ ಅಗೆದು ತೆಗೆಯುವ ಖನಿಜ ಹಾಗೂ ನಮ್ಮ ಆತ್ಮದಲ್ಲಿ ಇರುವ ರತ್ನ ಎರಡನ್ನೂ ಎಕ್ಸ್‌ಪೋರ್ಟ್‌ ಮಾಲುಗಳೆಂದು ತಿಳಿದು ಭಾರತ ಹಿಂದೆಂದೂ ಕಾಣದಂಥ ಗುಲಾಮ ರಾಷ್ಟ್ರವಾಗಿದೆ. ಅಮೆರಿಕದ ಒಬ್ಬ ಯಃಕಶ್ಚಿತ ವಿದೇಶಾಂಗ ಅಧಿಕಾರಿ ನಮ್ಮ ದೇಶದ ಪ್ರಧಾನಿಯನ್ನೂ ಎದೆಗುಂದಿಸುವಂತೆ ಮಾಡಬಲ್ಲ ಶಕ್ತಿಯನ್ನು ನಾವೇ ಅವರಿಗೆ ದಯಪಾಲಿಸಿದ್ದೇವೆ.

(ಸ್ನೇಹ ಸೇತು: ಹಾಯ್‌ ಬೆಂಗಳೂರ್‌)

ಮುಖಪುಟ / ಅಂಕಣಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+