ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಟಲೊಳಗಿನ ಗಡ್ಡೆಯಂತೆ ನಿಶ್ಶಬ್ದವನ್ನು ಧರಿಸಿಕೊಂಡು ಓಡಾಡುತ್ತಿದ್ದ ದಿನಗಳಲ್ಲಿ...

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ಅವಳು ಪತ್ರ ಬರೆದಿದ್ದಾಳೆ.

ಅವಳ ಹೆಸರು ಸ್ವಪ್ನ ಕವಿತ. ನನ್ನ ಗೆಳತಿಯಾ, ವಿದ್ಯಾರ್ಥಿನಿಯಾ, ಆತ್ಮೀಯಳಾ? ಇವತ್ತು ನಿರ್ಧರಿಸಿ ಹೇಳುವುದು ಕಷ್ಟ. ನನ್ನನ್ನು ತುಂಬಾ ಹಚ್ಚಿಕೊಂಡಿದ್ದ ಹುಡುಗಿಯದು. ‘‘ಯಾಕೋ ಗೊತ್ತಿಲ್ಲ ಸರ್‌, ನಿಮ್ಮ ಹೆಸರು ಮನಸಿನಲ್ಲಿ ಅಂದುಕೊಳ್ಳುತ್ತಿದ್ದಂತೆಯೇ ನನಗೆ ಹಿಂದಿ ಹಾಡು ನೆನಪಾಗ್ತವೆ. ಮುಖೇಶ್‌ ನೆನಪಾಗ್ತಾನೆ. ಗುಲ್ಜಾರ್‌ ತುಂಬ ನೆನಪಾಗ್ತಾನೆ. ನೀವು ತುಂಬ ನಿಧಾನವಾಗಿ ಸೈಕಲ್‌ ತುಳಿಯುತ್ತ ನನ್ನ ಮನೆಯ ಆಚೆಗಿರುವ main roadನಲ್ಲಿ ಸಾಯಂಕಾಲ ಸಾಗಿ ಹೋಗುತ್ತಿದ್ದರೆ, ‘ಏಕ್‌ ಅಕೇಲಾ ಇಸ್‌ ಷೆಹರ್‌ ಮೇ... ರತ್‌ ಮೆ ಔರ್‌ ದುಪೆಹರ್‌ ಮೇ..’ ಅನ್ನೋ ಭೂಪೇಂದ್ರನ ಹಾಡಿದೆಯಲ್ಲ- ಅದನ್ನು ನಿಮಗೋಸ್ಕರವೇ ಬರೆಯಲಾಗಿದೆ ಅನಿಸುತ್ತದೆ’’ ಅಂತೆಲ್ಲ ಬರೆಯುತ್ತಿದ್ದಳು ಸ್ವಪ್ನ ಕವಿತ. ನನ್ನೆಡೆಗೆ ತುಂಬ ಆರಾಧನೆಯಿದ್ದ ಹುಡುಗಿ.

ಮೊನ್ನೆ ಮೊನ್ನೆ ಸಂಡೂರಿನಿಂದ ನನ್ನ ವಿದ್ಯಾರ್ಥಿನಿ ಶಾರದಾ ಬಂದಾಗ ಸ್ವಪ್ನ ಕವಿತಳನ್ನು ನೆನೆಸಿಕೊಂಡು ತುಂಬ ಹೊತ್ತು ಮಾತನಾಡಿದ್ದೆವು. ಎಷ್ಟು ಚೆಂದದ ಹುಡುಗಿ, ಈಗೆಲ್ಲಿದ್ದಾಳೋ? ಅಂದುಕೊಂಡಿದ್ದೆವು. ಹಾಗೆ ನೋಡಿದರೆ ಶಾರದಾ ನನಗೆ ತುಂಬ ಆತ್ಮೀಯ ಶಿಷ್ಯೆ. ನನ್ನ ಮನೆಯ ಒಬ್ಬ ಸದಸ್ಯೆಯಂತಿದ್ದ ಹುಡುಗಿ. ಅವಳನ್ನು ಕಂಡರೆ ನನ್ನ ಅಮ್ಮನಿಗೂ, ಲಲಿತೆಗೂ ತುಂಬ ಪ್ರೀತಿಯಿತ್ತು. ಪಿಯುಸಿಯಲ್ಲಿ ಬಹುಶಃ ಸೈನ್ಸು ತೆಗೆದುಕೊಂಡಿದ್ದ ಶಾರದಾ, ಅದೇ ವರ್ಷ ತನ್ನ ತಾಯಿಯನ್ನು ಕಳೆದುಕೊಂಡಿದ್ದಳು ಅಂತ ನೆನಪು. ಎಷ್ಟೋ ಸಲ ಒಬ್ಬ ಪುರುಷನಲ್ಲೂ ನೊಂದ ಜೀವಿಗೆ ತಾಯಿ ಕಾಣಿಸಿಬಿಡುತ್ತಾಳೆ. ಶಾರದಾಳ ವಿಷಯದಲ್ಲಿ ಬಹುಶಃ ಆದದ್ದು ಅದೇ. ಕುಳ್ಳಗೆ, ಕಪ್ಪಗಿದ್ದ , ಕನ್ನಡಕ ಧರಿಸಿಕೊಂಡಿರುತ್ತಿದ್ದ, ನಿಷ್ಕಲ್ಮಶ ನಗುವಿನ ಆ ಹುಡುಗಿ ಶಾರದಾ ಯಾವಾಗ ನನ್ನನ್ನು ಭೇಟಿಯಾಗಲು ಬಂದರೂ ನನ್ನಲ್ಲೊಬ್ಬ ಅಮ್ಮನನ್ನು ಹುಡುಕಿಕೊಂಡು ಬರುತ್ತಾಳೆ ಅಂತಲೇ ನನಗೆ ಅನಿಸುತ್ತಿತ್ತು. ಬಳ್ಳಾರಿಯ ವುಮೆನ್ಸ್‌ ಕಾಲೇಜಿನಲ್ಲಿ ಶಾರದಾ ತುಂಬ ಹಚ್ಚಿಕೊಂಡಿದ್ದ ಮೂವರು ಲೆಕ್ಚರರ್‌ಗಳೆಂದರೆ ಇಕಾನಮಿಕ್ಸ್‌ನ ಶೇಷಾದ್ರಿಯವರು, ತೆಲುಗಿನ ಸುರೇಂದ್ರಬಾಬು ಮತ್ತು ಹಿಸ್ಟರಿ ಕಲಿಸುತ್ತಿದ್ದ ನಾನು.

ನನಗಾದರೂ ಆಗಷ್ಟೆ ಮದುವೆಯಾಗಿ, ಚೇತನಾ ಹುಟ್ಟಿದ್ದಳು. ಶಾರದಾ ಮನೆಗೆ ಬಂದರೆ ನನಗೂ ಲಲಿತಗೂ ಎಂಥದೋ ಸಂಭ್ರಮ. ಮೊನ್ನೆ ಮೊನ್ನೆ ಕೂಡ ಶಾರದಾ ಬಗ್ಗೆ ಮನೆಯಲ್ಲಿ ಮಾತು ಬಂದಾಗ ‘ಅದೇ ಕನ್ನಡಕದ ಹುಡುಗಿ ಅಲ್ವೇನ್ರೀ? ಕೈಗೆ ಪುಸ್ತಕ ಸಿಕ್ಕುಬಿಟ್ರೆ ದಿನಗಟ್ಲೆ ಊಟಾನೂ ಬಿಟ್ಟು ಕೂತ್ಕೊಂಡು ಬಿಡ್ತಿದ್ದಲ್ಲ?’ ಅಂತ ಕೇಳಿದ್ದಳು ಲಲಿತಾ. ಹಾಗೆ ಪುಸ್ತಕ ಹಿಡಿದು ದಿನಗಟ್ಲೆ ಕೂಡುವುದನ್ನು ಕಲಿಸಲಿಕ್ಕೆಂದೇ ನಾವೊಂದಿಷ್ಟು ಜನ ಮೇಷ್ಟ್ರುಗಳಿದ್ದೆವು. ಒಂದೇ ಒಂದು ತಾಸು ಪಾಠ ಮಾಡಿದರೆ, ವಿದ್ಯಾರ್ಥಿನಿಯರ ಚಿಂತನೆ, ನಂಬಿಕೆ, ಅವಗಾಹನೆ, ಒಂದು ವಿಷಯವನ್ನು ಅರ್ಥಮಾಡಿಕೊಳ್ಳುವ ರೀತಿ- ಎಲ್ಲವನ್ನೂ ಬದಲಿಸಿಬಿಡಬಲ್ಲ ಲೆಕ್ಚರಿಕೆಯದು. ಇಕನಾಮಿಕ್ಸ್‌ನ ಶೇಷಾದ್ರಿಯವರಾಗಲೀ, ನಾನಾಗಲೀ ಕ್ಲಾಸಿಗೆ ನುಗ್ಗಿದೆವೆಂದರೆ, ಅಲ್ಲಿ ಇಡೀ ತಾಸು ಒಬ್ಬನೇ ವಟಗುಟ್ಟುವ ಪರಿಪಾಠವಿರುತ್ತಿರಲಿಲ್ಲ. ಪಾಠ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಅದೊಂದು ಚರ್ಚಾಗೋಷ್ಠಿಯಾಗಿ ಬಿಡುತ್ತಿತ್ತು. ಅಂತ ಗೋಷ್ಠಿಗಳಲ್ಲಿ ನಮ್ಮ ಹುಡುಗಿ ಶಾರದಾ ಯಾವತ್ತಿಗೂ ಮುಂದು.

ಅದೆಲ್ಲ ಚಟುವಟಿಕೆ, ಪಾಠ, ಬೀದಿ ನಾಟಕ, ಸಂಘಟನೆ, ಪತ್ರಿಕೋದ್ಯಮ, ಜಗಳಗಳು, ಸಾಲ, ಸಂಸಾರ- ಎಲ್ಲವುಗಳ ನಡುವೆಯೂ ನನ್ನನ್ನೊಂದು ಒಬ್ಬಂಟಿತನ ಸದಾ ಕಾಡುತ್ತಿತ್ತು. ಅದು ಇವ್ತತಿಗೂ ನನ್ನನ್ನು ಕಾಡುತ್ತದೆ. ಏನೂ ಮಾತನಾಡಲಾಗದೆ ಗಂಟಲೊಳಗೊಂದು ನಿಶ್ಶಬ್ದವನ್ನು ಗಡ್ಡೆಯಂತೆ, lumpನಂತೆ ಧರಿಸಿಕೊಂಡು ಓಡಾಡುತ್ತಿರುತ್ತಿದ್ದೆನೇನೋ ಅನ್ನಿಸುತ್ತಿರುತ್ತದೆ. ಬದುಕಿನ ಆ ಒಬ್ಬಂಟಿತನ 1983- 84ರ ದಿನಗಳಲ್ಲಿ ನನ್ನನ್ನು ಯಾವ ಪರಿ ಕಾಡುತ್ತಿತ್ತೆಂದರೆ ಪದೇಪದೇ ಆ ಒಬ್ಬಂಟಿತನ ನನ್ನನ್ನು ‘ಆತ್ಮಹತ್ಯೆ ಮಾಡಿಕೊಂಡು ಬಿಡೋಣ ಬಾ...’ ಅಂತ ಕರೆದಂತೆ ಭಾಸವಾಗುತ್ತಿತ್ತು. ನಾನು ಸಾಯಂಕಾಲಗಳಲ್ಲಿ ಸುಮ್ಮನೆ ನನ್ನ ಸೈಕಲ್ಲಿನ ಪೆಡಲು ತುಳಿಯುತ್ತ ಬಳ್ಳಾರಿಯ ಗಾಂಧೀನಗರ ದಾಟಿ, ಸಂಗನಕಲ್ಲು ರಸ್ತೆಯಲ್ಲಿ ತುಂಬ ದೂರದ ತನಕ ಹೋಗಿ ಅಲ್ಲಿನ ನಿರ್ಜನ ಬಯಲುಗಳಲ್ಲೆಲ್ಲೋ ಏಕಾಂಗಿಯಾಗಿ ಕೂತಿದ್ದು ಬರುತ್ತಿದ್ದೆ. ಅದೇ ಸಂಗನಕಲ್ಲು ರಸ್ತೆಯಲ್ಲೊಂದು ಪವರ್‌ಹೌಸ್‌ ಇತ್ತು. ಅದರ ಹಿಂದೆ ವಿಶಾಲವಾದ ಬಯಲಿನಲ್ಲಿ ಬರೀ ಜಾಲಿ ಗಿಡಗಳು ಬೆಳೆದಿದ್ದವು. ಅವುಗಳ ಮಧ್ಯೆ ಕಂಡೂಕಾಣದಂತಿದ್ದ ಒಂದು ಪಾಳು ಬಾವಿ. ಆ ಬಾವಿಯಲ್ಲೇ ಭರಿಸಲಾಗದ ಒಬ್ಬಂಟಿತನಕ್ಕೆ ಸಿಕ್ಕು, ನನ್ನ ಗೆಳೆಯ ಬಾದನಟ್ಟಿ ಗುಂಡೂರಾವ್‌ ಆತ್ಮಹತ್ಯೆ ಮಾಡಿಕೊಂಡಿದ್ದ. ಕೆಲವೊಮ್ಮೆ ಆ ಬಾವಿಯನ್ನೇ ಹುಡುಕಿಕೊಂಡು ಹೋಗಿ ಸುಮ್ಮನೆ ಅದರ ಕಟ್ಟೆಯ ಮೇಲೆ ಕೂತಿದ್ದು ಬರುತ್ತಿದ್ದೆ. ಅವನಂತೆಯೇ ನಾನೂ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡುಬಿಡಲಾ ಅಂದುಕೊಳ್ಳುತ್ತಿದ್ದೆ. ಎಷ್ಟೊಂದು ಜನರ ಗುಂಪಿನ ನಡುವೆ ಇದ್ದಾಗಲೂ ನನ್ನ ಒಬ್ಬಂಟಿತನ ‘ಆತ್ಮಹತ್ಯೆ ಮಾಡಿಕೊಂಡು ಬಿಡೋಣ ಬರ್ತೀಯಾ?’ ಅಂತ ಕರೆದಂತಾಗುತ್ತಿತ್ತು. ಆ ದಿನಗಳಲ್ಲಿ ಅಂಥದೊಂದು ವಿನಾಕಾರಣದ ಡಿಪ್ರೆಷನ್‌ನಿಂದ ನನ್ನನ್ನು ಈಚೆಗೆ ತಂದವಳೇ ಸ್ವಪ್ನ ಕವಿತ. ಕೆಲವೊಮ್ಮೆ ನಾನು ಕಾಲೇಜಿಗೆ ಹೋಗುತ್ತಿರಲಿಲ್ಲ. ಎರಡು ಮೂರು ದಿನ ನಾಪತ್ತೆ. ಮತ್ತೆ ಕಾಲೇಜಿನ ಕಾರಿಡಾರುಗಳಲ್ಲಿ ಕಾಣಿಸಿಕೊಂಡಾಗ ಅವಳ ಕಡೆಯಿಂದ ಒಂದೇ ಒಂದು ಸಾಲಿನ ಚೀಟಿ ಬಂದು ನನ್ನನ್ನು ಮಾತಾಡಿಸುತ್ತಿತ್ತು :

‘ಮರುಗೇಲರಾ...ಓ ರಾಘವಾ?’
ಯಾಕೆ ಕಣ್ತಪ್ಪಿಸಿಕೊಳ್ಳುತ್ತೀಯೋ ರಾಘವಾ ಅಂತ ಕೇಳುವ ಕೀರ್ತನೆಯದು. ಸ್ವಪ್ನ ಕವಿತಳಿಗೆ ನಿಜಕ್ಕೂ ನನ್ನೆಡೆಗೆ ಅಂತದೊಂದು ಆರಾಧನೆಯಿತ್ತು. ಅವಳದೇ ವಯಸ್ಸಿನ ಶಾರದಾ ನಮ್ಮ ಹುಚ್ಚಾಟ ನೋಡಿ ನಗುತ್ತಿದ್ದಳು. ಕೆಲಬಾರಿ ನಾನು ಇದ್ದಕ್ಕಿದ್ದಂತೆ ಉಲ್ಲಸಿತನಾಗಿ ಬಿಡುತ್ತಿದ್ದೆ. ಇಸ್ತ್ರಿ ಬಟ್ಟೆ ಹಾಕಿಕೊಳ್ಳುತ್ತಿದ್ದೆ. ಸೈಕಲ್ಲಿಗೆ ಎಂಥದೋ ಚುರುಕು ಬರುತ್ತಿತ್ತು. ಒಂದಷ್ಟು ಜನ ಹುಡುಗ ಹುಡುಗಿಯರ ಹಿಂಡು ಕಟ್ಟಿಕೊಂಡು ಬಳ್ಳಾರಿಯ ಇರಕ್ಕು ಬೀದಿಗಳ ತಿರುವುಗಳಲ್ಲಿ ನಿಂತು ಕ್ರಾಂತಿಗೀತೆ ಹಾಡುತ್ತ, ಭಾಷಣಗಳನ್ನಾರಂಭಿಸುತ್ತಿದ್ದೆ. ಸ್ವಪ್ನ ಕವಿತಳಿಗೆ ಕನ್ನಡ ಬರುತ್ತಿರಲಿಲ್ಲ. ಕೂಡಿಸಿಕೊಂಡು ತೆಲುಗಿನಲ್ಲಿ ಕತೆ ಹೇಳುತ್ತಿದ್ದೆ. ‘ಎಂತ ಬಾಗರಾಸ್ತಾರು’ (ಎಷ್ಟು ಚೆನ್ನಾಗಿ ಬರೀತೀರಿ !) ಅಂತ ಕಣ್ಣರಳಿಸುತ್ತಿದ್ದಳು. ಅವಳಿಗೋಸ್ಕರ ಗುಲ್ಜಾರ್‌ ಬಗ್ಗೆ, ತಲತ್‌ ಮಹ್ಮೂದನ ಬಗ್ಗೆ, ಸಾಹಿರ್‌ ಲುಧಿಯಾನವಿಯ ಬಗ್ಗೆ ಎಲ್ಲೆಂಲ್ಲಿಂದಲೋ ಓದಿ ಸಂಗ್ರಹಿಸಿ ಕೊಂಡಿಟ್ಟಿದ್ದ ಸಂಗತಿಗಳನ್ನೆಲ್ಲ ತಂದು ಹೇಳುತ್ತಿದ್ದೆ. ಅವರು ಬರೆದ ಹಾಡು, ಕವಿತೆಗಳನ್ನೆಲ್ಲ ಅವಳಿಗೆ ಒಮ್ಮೆ ಉರ್ದುವಿನಲ್ಲಿ ಹೇಳಿ, ಮತ್ತೆ ತೆಲುಗಿಗೆ ತರ್ಜುಮೆ ಮಾಡಿ ಕೇಳಿಸುತ್ತಿದ್ದೆ. ಹಾಗೆಲ್ಲ ಹೇಳುವಾಗ, ವಿವರಿಸುವಾಗ, ಅವರೆಲ್ಲರ ಬಗ್ಗೆ ಮಾತನಾಡುವಾಗ ಒಮ್ಮೊಮ್ಮೆ ನನಗೇ ಗೊತ್ತಿಲ್ಲದೆ ಕಣ್ಣು ತುಂಬಿ ಬಂದುಬಿಡುತ್ತಿದ್ದವು.

ನಿಜ ಹೇಳಬೇಕೆಂದರೆ, ಅವೆಲ್ಲವುಗಳನ್ನೂ ನಾನು ನನ್ನ ನೆರಿಗೆ ಲಂಗದ ಹುಡುಗಿಗೆ ಕೇಳಿಸಲಿಕ್ಕೆ ಅಂತ ಎತ್ತಿಟ್ಟುಕೊಂಡಿದ್ದ ಸಂಗತಿಗಳು. ಇವತ್ತಿಗೂ ನನ್ನಲ್ಲಿ ಅಂಥ ಪುಟ್ಟ ವಿವರಗಳಿರುವ ಅಗೋಚರ ಟಿಪ್ಪಣಿಗಳು ಸಾವಿರಾರಿವೆ. ಮೀನಾಕುಮಾರಿ ಎಂಬ ನಟಿಯ ಬಗ್ಗೆ ನಾನು ಮಾತಿಗೆ ಕುಳಿತರೆ, ನನ್ನ ಬಗ್ಗೆ ಮಾತಾಡಿಕೊಂಡಷ್ಟೇ ವಿವರವಾಗಿ, ಸಾದ್ಯಂತವಾಗಿ ಆಕೆಯ ಬಗ್ಗೆಯೂ ಮಾತನಾಡಬಲ್ಲೆನೇನೋ? ಆ ಲೋಕನಿಂದಿತ ನಟಿ ಬದುಕಿದ್ದುದೇ ಹಾಗೆ. ಅವಳೊಂದು ಅರ್ಥದಲ್ಲಿ ಸ್ಪರ್ಶಮಣಿ. ಕೀರ್ತಿಯ ಉತ್ತುಂಗದಲ್ಲಿದ್ದಾಗ ಅವಳು ಏನು ಮುಟ್ಟಿದರೂ ಬಂಗಾರ. ಹಾಗಂತಲೇ ಅವಳು ಅನೇಕರನ್ನು ಸ್ಪರ್ಶಿಸಿದಳು. ಅಂತದೊಂದು ಬಂಗಾರು ಸ್ಪರ್ಶಕ್ಕೆ ಒಳಗಾದವನು ಗುಲ್ಜಾರ್‌.

ನಿಮಗೆ ಗೊತ್ತಿರಲಿಕ್ಕಿಲ್ಲ : ಗುಲ್ಜಾರ್‌ನನ್ನು ಇವತ್ತಿಗೂ ಆತನ ಪರಿಚಿತರು ಕರೆಯುವುದೇ- ಲೇಡೀಸ್‌ ಮ್ಯಾನ್‌ ಅಂತ ! ಆತ ಸದಾ ಒಬ್ಬಂಟಿ, ಸದಾ ದುಃಖಿತ ಗುಲ್ಜಾರ್‌ ಹೊರ ಜಗತ್ತಿಗೆ ಏಕಾಂಗಿಯಾಗಿ ಕಾಣಿಸಿಕೊಂಡವನಲ್ಲ. ಅವನು ಎಂಥ ಸೂಕ್ಷ್ಮ ಸಂವೇದನೆಗಳ ಕವಿ ಅಂದರೆ, ಭರಿಸಲಾಗದಂತಹ ಗಲಾಟೆಯಿರುವ ಸಿನೆಮಾ ಇಂಡಸ್ಟ್ರಿಯನ್ನು ಹೇಗಾದರೂ ಆರಿಸಿಕೊಂಡನೋ ಅಂತ ಯಾರಿಗಾದರೂ ಅನ್ನಿಸುತ್ತದೆ. ಒಂದು ಕಡೆ ಸಿನೆಮಾ tuneಗಳಿಗೆ ಹಾಡು ಬರೆಯುತ್ತಾನೆ, ಟೀವಿ ಸೀರಿಯಲ್ಲುಗಳಿಂದ ಹಿಡಿದು ಸಿನೆಮಾಗಳತನಕ ಎಲ್ಲವಕ್ಕೂ ನಿರ್ದೇಶಕನಾಗುತ್ತಾನೆ, ಡೈಲಾಗು ಸಿದ್ಧಪಡಿಸುತ್ತಾನೆ. ಇವ್ಯಾವೂ ಇಲ್ಲದಿದ್ದಾಗ ಆತ ಒಬ್ಬಳಲ್ಲ ಒಬ್ಬ ಹೆಂಗಸಿನೊಂದಿಗೆ ಕಾಣಿಸಿಕೊಳ್ಳುತ್ತಾನೆ. ಇತ್ತೀಚಿನ ದಿನಗಳಲ್ಲಿ ಗುಲ್ಜಾರ್‌ ಪದೇಪದೇ ಕಾಣಿಸಿಕೊಂಡಿದ್ದು ತನ್ನ ಮಗಳೊಂದಿಗೆ ! ಆತ ಹೆಂಗಸರ ಸಾಮಿಪ್ಯವಿಲ್ಲದೆ ಬದುಕಿದಂಥ ಕಾಲವೇ ಇಲ್ಲ. ಒಬ್ಬಳಾದ ಮೇಲೆ ಒಬ್ಬ ಹೆಂಗಸಿನ ಕದ ತಟ್ಟಿದ. ಪ್ರತೀಬಾರಿ ಹೊಸ ಕದ ತಟ್ಟಿದಾಗಲೂ, ಗುಲ್ಜಾರ್‌ ತನ್ನ ಸಾಧನೆಗಳ, ಪ್ರಸಿದ್ಧಿಯ ಒಂದೊಂದೇ ಮೆಟ್ಟಿಲನ್ನು ಏರುತ್ತ ಹೋದ. ಹಾಗೆ ಆತ ತಟ್ಟಿದ ಬಾಗಿಲುಗಳ ಪೈಕಿ ಮೊದಲನೆಯ ಬಾಗಿಲು- ನಟಿ ಮೀನಾಕುಮಾರಿಯದು.

ಅವತ್ತಿಗಿನ್ನೂ ಆತ ಖ್ಯಾತನಾಮನಲ್ಲ. ನಿರ್ದೇಶಕ ಬಿಮಲ್‌ರಾಯ್‌ ಸಂಬಳಕ್ಕೆ ಕೆಲಸ ಮಾಡುತ್ತಿದ್ದ. ಅವತ್ತಿಗಾಗಲೇ ದೊಡ್ಡ ಹೆಸರು ಮಾಡಿದ್ದ ಮೀನಾಕುಮಾರಿ, ಅದಕ್ಕಿಂತ ದೊಡ್ಡ ಹೆಸರಿನ ನಿರ್ಮಾಪಕ ಕಮಲ್‌ ಅಮ್ರೋಹಿಯ ಹೆಂಡತಿ. ಯಾರೋ ಒಯ್ದು ಗುಲ್ಜಾರ್‌ನನ್ನು ಪರಿಚಯ ಮಾಡಿಸಿಕೊಟ್ಟರು. ‘ಎಲ್ಲಿದ್ದೆ ಇಷ್ಟು ವರ್ಷ ನನಗೆ ಪರಿಚಯವೇ ಆಗದೆ ?’ ಅಂತ ಉದ್ಗರಿಸಿದ್ದಳು ಮೀನಾ. ಆತನ ಕವಿತೆಗಳು ಹಾಗಿದ್ದವು. ಸ್ವತಃ ಮೀನಾಗೆ ಕವಿತೆ ಬರೆಯುವ ಹಂಬಲವಿತ್ತು. ಅದನ್ನು ಕಮಲ್‌ ಅಮ್ರೋಹಿ ಚೂರೂ ಇಷ್ಟಪಡುತ್ತಿರಲಿಲ್ಲ. ಕವಿತೆಗಳು ತೀರಾ ಸಾಮಾನ್ಯ ಮಟ್ಟದ್ದಾಗಿರುತ್ತಿದ್ದವು. ಆದರೆ ಗುಲ್ಜಾರ್‌ ಅವುಗಳನ್ನು ಇಷ್ಟಪಟ್ಟ. ಅವುಗಳನ್ನು ಪೂರ್ತಿಯಾಗಿ ತಿದ್ದಿಕೊಟ್ಟ. ಮೀನಾಗೆ ಹೆಸರು ತಂದುಕೊಟ್ಟ. ಅವಳು ಯಾವುದೇ ಸ್ಟುಡಿಯೋಗೆ ಹೋದರೂ, ಜೊತೆಗೆ ಗುಲ್ಜಾರ್‌ನನ್ನು ಕರೆದೊಯ್ಯುತ್ತಿದ್ದಳು. ಇದರ ಬಗ್ಗೆ ಕಮಲ್‌ ಅಮ್ರೋಹಿ ಅದೆಷ್ಟು ಸಿಟ್ಟಿಗೆದ್ದನೆಂದರೆ, ಕಡೆಗೆ ಬಾಂಬೆಯ ಭೂಗತ ಜೀವಿಗಳನ್ನು ಎದುರಿಗಿಟ್ಟು ಗುಲ್ಜಾರ್‌ನ ಸಹವಾಸ ಬಿಡುವಂತೆ ಮೀನಾಕುಮಾರಿಗೆ ಹೆದರಿಸಿದ್ದೂ ಆಯಿತು. ಆದರೆ ಮೀನಾಕುಮಾರಿ ಕಡೆಗೆ ಕಮಲ್‌ ಅಮ್ರೋಹಿಯನ್ನೇ ಬಿಟ್ಟಳು. ಗುಲ್ಜಾರ್‌ನಿಗೊಂದು ಸ್ವತಂತ್ರ ನಿರ್ದೇಶಕನ ಪಟ್ಟ ಕೊಡಿಸಿದಳು. ಗುಲ್ಜಾರ್‌ ಉದ್ಧಾರವಾಗಿ ಹೋದ. ಆದರೆ, ಸ್ಪರ್ಶಮಣಿಯ ಜರೂರತ್ತು ಮುಗಿದು ಹೋಗಿತ್ತು. ಅವನು ಮೀನಾಕುಮಾರಿಯನ್ನು ಬಿಟ್ಟು, ಅವಳನ್ನು ಮೀರಿ ಬೆಳೆದು ಹೋದ. ಒಡೆದ ನೌಕೆಯಂತಾಗಿದ್ದ ಮೀನಾ ತನ್ನ ಮೈದುನ, ಹಾಸ್ಯನಟ ಮೆಹಮೂದ್‌ನ ಮನೆ ಸೇರಿಕೊಂಡು ಹಗಲೂ- ರಾತ್ರಿ ಕುಡಿಕುಡಿದೇ ಆತ್ಮಹತ್ಯೆಯಂತಹ ಸಾವು ತಂದುಕೊಂಡು ಬಿಟ್ಟಿದ್ದಳು. ಬಹುಶಃ ಅವಳನ್ನು ಕೂಡ ‘ಆತ್ಮಹತ್ಯೆ ಮಾಡಿಕೊಳ್ಳೋಣ ಬರ್ತೀಯಾ?’ ಅಂತ ಅವಳ ಒಬ್ಬಂಟಿತನ ಪದೇಪದೇ ಕರೆದಿತ್ತು. ಮೊನ್ನೆ ಅನಿರೀಕ್ಷಿತವಾಗಿ ಪತ್ರ ಬರೆದ ಸ್ವಪ್ನ ಕವಿತಳ ನಂಬರಿಗೆ ಫೋನು ಮಾಡಿ,‘ಎಲ್ಲಿದ್ದೀಯ? ಗಂಡ ಏನು ಮಾಡ್ತಾನೆ? ಮಕ್ಕಳು’ ಅಂದೆ.

‘ಕಮಲ್‌ ಅಮ್ರೋಹಿಯ ಬಗ್ಗೆ ಮತ್ಯಾವತ್ತಾದರೂ ಮಾತಾಡೋಣ?’ ಅಂದಳು ಸ್ವಪ್ನ ಕವಿತಾ. ದನಿಯಲ್ಲಿದ್ದುದು ವಿಷಾದವಾ? ಗೊತ್ತಿಲ್ಲ.

ಇಷ್ಟಕ್ಕೂ ಅವಳು ಪತ್ರ ಬರೆದಿರುವುದೇಕೆ ಅಂದರೆ, ಸ್ವಪ್ನ ಕವಿತಾ ಕನ್ನಡ ಕಲಿತಿದ್ದಾಳೆ. ಸುಮಾರು ಒಂಬತ್ತು ವರ್ಷ ಭಾರತದಿಂದ ಹೊರಗಿದ್ದವಳು ಬಿಡುವು ಸಿಕ್ಕಾಗಲೆಲ್ಲ ಮಾಡಿದ್ದೇ ಅದಂತೆ. ಇನ್ನೇನು ಭಾರತಕ್ಕೆ ಹಿಂತಿರುಗಬೇಕಿದೆ. ಮಗ ದೊಡ್ಡವನಾಗುತ್ತಿದ್ದಾನೆ. ಅಲ್ಲಿಯ ಕಲ್ಚರು ಬಂದುಬಿಟ್ಟರೆ ಕಷ್ಟ. ಹೇಗಿದ್ದರೂ ತಾನು ಹಲ್ಲಿನ ಡಾಕ್ಟರು. ಭಾರತಕ್ಕೆ ಬಂದು ಎಲ್ಲೇ ಷಾಪು ಹಾಕಿಕೊಂಡು ಕುಳಿತರೂ ಹಣ ಹುಟ್ಟುತ್ತದೆ. ವಾಪಸು ಬಂದುಬಿಡ್ತಿದೀನಿ. ಬಂದ ಮೇಲೆ ತುಂಬ ಅಕ್ಕರೆಯಿಂದ ಮಾಡಬೇಕಿರುವ ಕೆಲಸವೆಂದರೆ, ನಿಮ್ಮ ಕೆಲವು ಕತೆಗಳ ಅನುವಾದ- ಅಂದಳು ಸ್ವಪ್ನ ಕವಿತ. ಅವುಗಳನ್ನು ತೆಲುಗಿಗೆ ಅನುವಾದಿಸುವ ಹುಚ್ಚು ಅವಳಿಗೆ.

ನೀನಿರೋ ದೇಶಕ್ಕೂ, ನನ್ನ ಕತೆಗಳಿಗೂ ಎಂತ ಸಂಬಂಧ ? ಇಷ್ಟಕ್ಕೂ ನಾನು ಇನ್ನೂ ಬರೀತಿದೀನಿ, ಬೆಂಗಳೂರಿನಲ್ಲಿದ್ದೀನಿ, ‘ಹಾಯ್‌ ಬೆಂಗಳೂರ್‌!’ ಅಂತೊಂದು ಪತ್ರಿಕೆ ಮಾಡಿದ್ದೀನಿ- ಇವೆಲ್ಲ ನಿಂಗೆ ಹ್ಯಾಗೆ ಗೊತ್ತಾದವು ಅಂತ ಕೇಳಿದೆ. ಆಕೆ ನಕ್ಕಳು.

ಆದದ್ದೇನೆಂದರೆ, ‘ಕನ್ನಡ ಪ್ರಭ’ದಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಮಿತ್ರ ಶ್ಯಾಮಿ, ಈಗ ‘ದಟ್ಸ್‌ಕನ್ನಡ ಡಾಟ್‌ ಕಾಮ್‌’ ಎಂಬ ಪೋರ್ಟಲ್‌ ಒಂದನ್ನು ನಿರ್ವಹಿಸುತ್ತಾನೆ. ಅದರಲ್ಲಿ ಪ್ರತೀವಾರ, ‘ಹಾಯ್‌ ಬೆಂಗಳೂರ್‌!’ನಲ್ಲಿ ನಾನು ಬರೆದ ಯಾವುದಾದರೊಂದು ಅಂಕಣವನ್ನು ಎತ್ತಿ thatskannada.comನಲ್ಲಿ ಅದಕ್ಕೆ ಬೆಳಕು ಕಾಣಿಸುತ್ತಾನೆ. ವಿದೇಶಗಳಲ್ಲಿರೋ ಕನ್ನಡಿಗರಿಗೆ, ಕಣ್ಣಿಗೆ ಕನ್ನಡದ ಅಕ್ಷರ ಬಿದ್ದರೆ ಸಾಕು ಎಂಬಂಥ ಹಸಿವು. ನನ್ನ ಲೇಖನಗಳನ್ನು ಓದಿದ ಅವರು ಅಮೆರಿಕದ ಮೂಲೆಮೂಲೆಗಳಿಂದ, ಕೊಲ್ಲಿ ರಾಷ್ಟ್ರಗಳಿಂದ, ಟೋಕಿಯೋದಿಂದ, ನೈಜೀರಿಯಾದಿಂದ- ಹೀಗೆ ಜಗತ್ತಿನ ನಾನಾ ಕಡೆಗಳಿಂದ ತಮ್ಮ ಪ್ರತಿಕ್ರಿಯೆ ಕಳಿಸುತ್ತಾರೆ. ನನ್ನ mail IDಯಂತೂ ತುಂಬಿ ತುಳುಕಿಹೋಗಿದೆ. ಖಂಡಾಂತರಗಳ ಬಾಂಧವ್ಯ ಬೆಸೆದುಕೊಳ್ಳುತ್ತಿರುವುದೇ ಹಾಗೆ. ಸ್ವಪ್ನ ಕವಿತಳಿಗೆ ನಾನಿನ್ನೂ ಬದುಕಿದ್ದೇನೆ ಮತ್ತು ಬರೆಯುತ್ತಿದ್ದೇನೆ ಅಂತ ಗೊತ್ತಾದದ್ದೇ ಹಾಗೆ.

‘ಮೊದಲು ದೇಶಕ್ಕೆ ವಾಪಸ್ಸಾಗಿ ಇಲ್ಲಿ ಹಲ್ಲಿನ ದವಾಖಾನೆ ಆರಂಭಿಸು. ಕತೆಗಳ ಸಂಗತಿ ಆಮೇಲೆ ನೋಡೋಣ’ ಅಂದೆ.
‘ನಿಮ್ಮ ಹಲ್ಲು ಹೇಗಿವೆ?’ ಅಂದಳು
‘ಇನ್ನೂ ಬಿದ್ದಿಲ್ಲ. ಆದ್ದರಿಂದ ಕಟ್ಟಿಸಿಕೊಂಡಿಲ್ಲ’ ಅಂದೆ.
‘ಮೊದಲಿನಂತೆ ಮುಖೇಶನ ಹಾಡೆಲ್ಲ ಕೇಳ್ತೀರಾ?’ ಅಂದಳು.
‘ದುರಭ್ಯಾಸಗಳು ವಯಸ್ಸಾಗ್ತಾ ಆಗ್ತಾ ಬೆಳೀತಾ ಹೋಗ್ತವೆ !’ ಅಂದೆ.
ಒಂದು ದೊಡ್ಡ ನಗೆಯ ನಂತರ ಮತ್ತೆ ನಮ್ಮಿಬ್ಬರ ಮಧ್ಯೆ ಗಂಟಲೊಳಗಿನ lumpನಂತಹ ಮೌನ ನೆಲೆಗೊಂಡಿತ್ತು. ನಾನು ಫೋನಿಟ್ಟೆ.

(ಸ್ನೇಹಸೇತು- ‘ಹಾಯ್‌ ಬೆಂಗಳೂರ್‌!’)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X