ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದೃಷ್ಟ , ದುರಾದೃಷ್ಟ , ಡೆಸ್ಟಿನಿ ಪದಗಳು ಪಟಾಕಿಯಷ್ಟೇ ಯೂನಿವರ್ಸಲ್!

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ದೀಪಾವಳಿ ಹಬ್ಬ ಬಂದಷ್ಟೇ ವೇಗವಾಗಿ ಮಾಯವಾಯ್ತು . ಹಬ್ಬಗಳ ಮಜವೇ ಬೇರೆ. ದಿನ ನಿತ್ಯದ ಜಂಜಾಟಗಳನ್ನ ಮರೆಸುವ , ಬದುಕಿಗೆ ಅವಶ್ಯಕವಾಗಿ ಬೇಕಾಗುವ ಹೊಸತನವನ್ನು ಈ ಹಬ್ಬಗಳು ನಮಗೆ ನೀಡುತ್ತವೆ. ಭಕ್ತಿ -ಶ್ರದ್ದೆ -ನಂಬಿಕೆ -ಆಚರಣೆ ಮುಖ್ಯವಾಗಿ ಹಬ್ಬದ ಪ್ರಮುಖ ಲಕ್ಷಣಗಳು. ಊಟವಿಲ್ಲದ ಮೇಲೆ ಹಬ್ಬಕ್ಕೆ ಹಬ್ಬದ ರಂಗು ಹೇಗೆ ತಾನೇ ಬಂದಿತು? ಅಲ್ಲವೇ ? ನಮ್ಮ ದೇಶದಲ್ಲಿ ಇದರ ಜೊತೆಗೆ ಎಡ -ಬಲ ಸಿದ್ದಾಂತಗಳ ಕಾದಾಟ ಕೂಡ ಶುರುವಾಗುತ್ತದೆ.

ಎಲ್ಲಾ ವೇಳೆಯಲ್ಲೂ ಸುಮ್ಮನಿರುವ ಒಂದು ವರ್ಗದ ಜನ , ದೀಪಾವಳಿ ಸಮಯದಲ್ಲಿ ಇದ್ದಕಿದ್ದಂತೆ ಪಟಾಕಿ ಹೊಡೆಯಬೇಡಿ ಎನ್ನುವ ವರಾತ ಶುರು ಹಚ್ಚಿಕೊಳ್ಳುತ್ತಾರೆ. ಪ್ರತಿ ವರ್ಷವೂ ಇದೊಂದು ಮಾಮೂಲಾಗಿದೆ. ಆದರೆ ಈ ವರ್ಷ ಜನ ಇದಕ್ಕೆ ಸಿಡಿದೆದ್ದು ಪಟಾಕಿ ಸಿಡಿಸಿದರು. ಕಳೆದ ದಶಕದಲ್ಲಿ ಮಾರಾಟವಾಗದ ಪಟಾಕಿ ಈ ವರ್ಷ ಮಾರಾಟವಾಗಿದೆ ಎನ್ನುವುದನ್ನ ಅಂಕಿ ಅಂಶಗಳು ತಿಳಿಸುತ್ತಿವೆ.

ದೀಪಾವಳಿಯನ್ನ ಭಾರತದಲ್ಲಿ ಸಿಖ್ಖರು , ಜೈನರು , ಹಿಂದೂಗಳು ಬಹಳ ಆಸ್ಥೆಯಿಂದ ಆಚರಿಸುತ್ತಾರೆ. ಉತ್ತರ ಭಾರತದಲ್ಲಿ ಶ್ರೀ ರಾಮ ಮರಳಿ ರಾಜ್ಯಕ್ಕೆ ಬಂದ ದಿನವೆಂದು , ಕತ್ತಲೆಯಿಂದ ಬೆಳಗಿನೆಡೆಗಿನ ಹಬ್ಬವೆಂದೂ , ಕೆಟ್ಟದ್ದರ ಮೇಲೆ ಒಳಿತನ ವಿಜಯದ ದಿನವೆಂದೂ ಆಚರಿಸುತ್ತಾರೆ. ಬಲಿ ಚಕ್ರವರ್ತಿ ತನ್ನ ಪ್ರಜೆಗಳನ್ನ ನೋಡಲು ಬರುತ್ತಾನೆ. ಹೀಗಾಗಿ ಆತನ ಸ್ವಾಗತಕ್ಕೆ ಪಟಾಕಿಯನ್ನ ಹೊಡೆಯುತ್ತಾರೆ ಎನ್ನುವ ನಂಬಿಕೆ ಕೂಡ ಇದೆ.

 ಆಧುನಿಕ ಬದುಕಿನ ಸೈಡ್ ಎಫೆಕ್ಟ್ 'ಒಂಟಿತನ '! ಆಧುನಿಕ ಬದುಕಿನ ಸೈಡ್ ಎಫೆಕ್ಟ್ 'ಒಂಟಿತನ '!

ಹಲವಾರು ಸಮುದಾಯಕ್ಕೆ ಇದು ಹೊಸ ವರ್ಷ ಕೂಡ. ಮಾರ್ವಾಡಿಗಳಲ್ಲಿ ಲಕ್ಷ್ಮಿ ಪೂಜೆ ಅತ್ಯಂತ ಮಹತ್ವದ ಪೂಜೆಯಾಗಿದೆ. ಇದೆಲ್ಲಾ ನಮ್ಮೂರ ಕಥೆ ಆಯ್ತು . ವಿದೇಶಗಳಲ್ಲಿ ದೀಪವಾಳಿ ಎನ್ನುವ ಹಬ್ಬವಿದೆಯೇ ? ಖಂಡಿತ ಇದೆ. ಆದರೆ ಅದಕ್ಕೆ ದೀಪವಾಳಿ ಎನ್ನವುದಿಲ್ಲ ಹೆಸರು ಬೇರೆ , ಕಾರಣ ಬೇರೆ , ಆದರೇನು ಖುಷಿ , ಮನುಷ್ಯನ ಭಾವನೆ ಮಾತ್ರ ಒಂದೇ . ಏಕತಾನತೆಯನ್ನ ಹೊಡೆದೋಡಿಸುವುದು , ಒಳ್ಳೆಯ ಊಟ ಬಟ್ಟೆಯುಟ್ಟು ಸಂಭ್ರಮಿಸುವುದು ಯಾರಿಗೆ ಇಷ್ಟವಿಲ್ಲ ಹೇಳಿ ?

Barcelona Memories Column By Rangaswamy Mookanahalli Part 57

ನಾವು ಹಬ್ಬ ಯಾರದೇ ಇರಲಿ ಅದನ್ನ ಗೌರವಿಸುವುದನ್ನ ಕಲಿಯಬೇಕು. ಒಂದು ವರ್ಗಕ್ಕೆ ಒಂದು ನೀತಿ , ಇನ್ನೊಂದು ವರ್ಗಕ್ಕೆ ಇನ್ನೊಂದು ನೀತಿ ಎಂದಾಗ ಸಹಜವಾಗೇ ಸಂಘರ್ಷ ಶುರುವಾಗುತ್ತದೆ. ಸ್ಪೇನ್ : ಇಲ್ಲಿ ಸ್ಯಾನ್ ವಾನ್ ಎನ್ನುವ ಹಬ್ಬವನ್ನ ಪ್ರತಿ ವರ್ಷ ಜೂನ್ 23 ರಂದು ಆಚರಿಸುತ್ತಾರೆ. ಪ್ರಥಮ ವರ್ಷ ಪಟಾಕಿ ಸದ್ದು ಕೇಳಿ ಆಶ್ಚರ್ಯವಾಗಿತ್ತು. ಬೆಂಕಿಯನ್ನ ನೆಲದಲ್ಲಿ ಹಾಕಿ ಅದರ ಮೇಲೆ ಹಾರುವುದು , ಪಟಾಕಿ ಸುಡುವುದು ಮಾಡುತ್ತಾರೆ .

ಆತ್ಮ ಶುದ್ದಿ ಮತ್ತು ಕೆಟ್ಟ ಶಕ್ತಿಗಳ ಧಮವಾಗುತ್ತದೆ ಎನ್ನುವುದು ನಂಬಿಕೆ. ಈ ಬಗ್ಗೆ ಈಗಾಗಲೇ ಇಲ್ಲೇ 'ದಟ್ಸ್ ಕನ್ನಡ'ದಲ್ಲಿ ಸುಧೀರ್ಘವಾಗಿ ಬರೆದಿದ್ದೇನೆ. ಪೋರ್ಚುಗಲ್ : ಪೋಗೊರಿಯುಸ್ ದೆ ಸ್ಯಾನ್ ವಾನ್ ಎನ್ನುವ ಹೆಸರಿನಿಂದ ಇಲ್ಲಿ ಕೂಡ ಇದೆ ದಿನದಲ್ಲಿ ಪಟಾಕಿ ಸುಡುತ್ತಾರೆ. ಕೆಟ್ಟ ಆತ್ಮಗಳನ್ನ ಓಡಿಸುವುದು ಮುಖ್ಯ ಕಾರಣ. ಇಂಡೋನೇಶಿಯಾ : ಇಲ್ಲಿನ ಬಾಲಿಯಲ್ಲಿ ದೀಪವಾಳಿ ಹಬ್ಬವನ್ನ ನೋಡಲು ಎರಡು ಕಣ್ಣು ಸಾಲದು. ಇಲ್ಲಿನ ರೀತಿ ನೀತಿಗಳು ಎಲ್ಲವೂ ಹಿಂದೂ ಸಂಸ್ಕೃತಿಯನ್ನ ಹೋಲುತ್ತವೆ.

ಚೀನಾ : ಪ್ರತಿ ವರ್ಷ ಜನವರಿ ಅಥವಾ ಫೆಬ್ರವರಿಯಲ್ಲಿ ಹೊಸ ವರ್ಷದ ಆಗಮನಕ್ಕೆ ಚೀನಿಯರು ಪಟಾಕಿ ಹೊಡೆಯುತ್ತಾರೆ. ಅದು ಕೇವಲ ಹೊಸ ವರ್ಷದ ಆಚರಣೆಯಲ್ಲ. ನಿಧನರಾದ ಹಿರಿಯರು ಮತ್ತು ತಮ್ಮ ದೇವರುಗಳನ್ನ ನೆನೆಯುವ ಕಾಯಕವೂ ಹೌದು. ನಕ್ಷತ್ರದ ಅನುಸಾರ ಈ ಹಬ್ಬವನ್ನ ಆಚರಿಸುತ್ತಾರೆ. ಹೀಗಾಗಿ ಏಷ್ಯಾದ ದೇಶಗಳಲ್ಲಿ ಹಬ್ಬ ಇದೆ ದಿನಾಂಕ ಬರುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ.

ಹಣದ ಮೌಲ್ಯ ತಿಳಿಯಬೇಕಾದರೆ ಪರಿಶ್ರಮ ಮೀರಿದ ಸವಲತ್ತು ನೀಡಬಾರದು !ಹಣದ ಮೌಲ್ಯ ತಿಳಿಯಬೇಕಾದರೆ ಪರಿಶ್ರಮ ಮೀರಿದ ಸವಲತ್ತು ನೀಡಬಾರದು !

ಅಮೇರಿಕಾ : ಜುಲೈ 4 , ಅಮೇರಿಕಾ ಇಂಡಿಪೆಂಡೆನ್ಸ್ ಡೇ ! ಫ್ಯಾಮಿಲಿ ಬಾರ್ಬಿಕ್ಯೂ , ಪಟಾಕಿ , ಮೆರವಣಿಗೆ ಪ್ರಮುಖ ಅಂಶಗಳು . ಇಂಗ್ಲೆಂಡ್ : 5ನೇ ನವೆಂಬರ್, ದೇಶದಾದ್ಯಂತ ಪಟಾಕಿ ಸಿಡಿಸುತ್ತಾರೆ . 1600ರಿಂದ ಈ ಪದ್ದತಿಯನ್ನ ಪಾಲಿಸುತ್ತ ಬಂದಿದ್ದಾರೆ. ಜಪಾನ್ : 1700ರ ಆಜುಬಾಜಿನಲ್ಲಿ ಜಪಾನ್ ದೇಶದಲ್ಲಿ ಆರ್ಥಿಕ ಮಂದಗತಿ , ರೋಗರುಜಿನಗಳು ಹೆಚ್ಚಾಗಿತ್ತು. ಬಹಳಷ್ಟು ಸಾವು ನೋವು ಕೂಡ ಆಗಿತ್ತು .

ಹೀಗಾಗಿ ಅಂದಿನಿಂದ ಪಟಾಕಿ ಹೂಡೆಯುವುದನ್ನ ಶುರು ಮಾಡಿದರು . ಸತ್ತವರಿಗೆ ಗೌರವ ನೀಡಲು , ಇದ್ದವರ ಬದುಕಿಗೆ ಹೊಸ ಹುರುಪು ನೀಡಲು ಮತ್ತು ಆರ್ಥಿಕತೆಯಿಂದ ಕಂಗೆಟ್ಟಿದ್ದ ಜನತೆಯನ್ನ ಖುಷಿ ಪಡಿಸಲು ಇದನ್ನ ಪ್ರಾರಂಭಿಸುತ್ತಾರೆ. ಇವತ್ತಿಗೆ ಇದು ಇಲ್ಲಿನ ಸಂಸ್ಕೃತಿಯಾಗಿ ಬದಲಾವಣೆ ಹೊಂದಿದೆ. ಹೀಗೆ ಜಗತ್ತಿನಾದ್ಯಂತ ಒಂದಲ್ಲ ಒಂದು ಹೆಸರಿನಿಂದ ದೀಪಾವಳಿಯನ್ನ ಆಚರಿಸುತ್ತಾರೆ. ನಾವು ಕನ್ನಡಿಗರು ಇದನ್ನ ದೀಪಾವಳಿ ಎಂದು ಕರೆಯುತ್ತೇವೆ.

ಇತ್ತೀಚಿನ ದಿನಗಳಲ್ಲಿ ಕನ್ನಡಿಗರ ಬಾಯಲ್ಲಿ ಕೂಡ 'ದಿವಾಳಿ' ಎನ್ನುವ ಪದವನ್ನ ಕೇಳುತ್ತಿದ್ದೇವೆ ನೆನಪಿರಲಿ ಕನ್ನಡದಲ್ಲಿ ದಿವಾಳಿ ಎಂದರೆ ಪಾಪರ್ , ಬ್ಯಾಂಕ್ ಕ್ರಪ್ಟ್ ಎನ್ನುವ ಅರ್ಥವನ್ನ ಕೊಡುತ್ತದೆ. ಬಾಯಲ್ಲಿ ಆಡಿದ್ದು ಬೆನ್ನಿಗೆ ಮೂಲ ಎನ್ನುತ್ತದೆ ನಮ್ಮ ನಾಣ್ನುಡಿ. ದೋಸಾ ಅಂದಷ್ಟು ಸುಲಭವಾಗಿ ದಿವಾಳಿ ಎನ್ನಬೇಡಿ ಪ್ಲೀಸ್ . ಕನಿಷ್ಠ ಇಲ್ಲಾದರೂ ನಮ್ಮತನವನ್ನ ಕಾಪಾಡಿ.
ಇದರ ಜೊತೆಗೆ ಇನ್ನೊಂದು ಮಾತನ್ನ ಕೂಡ ನಿಮಗೆ ಹೇಳಬೇಕಿದೆ . ಮೇಲೆ ಉದಾಹರಿಸಿದ ಯಾವುದೇ ದೇಶದಲ್ಲಿ ಪಟಾಕಿ ಹೊಡೆಯಬೇಡಿ ಎಂದು ಯಾರೂ ಪ್ರವಚನ ನೀಡುವುದಿಲ್ಲ.

ಇಲ್ಲಿನ ಜನ ಮನಸೋ ಇಚ್ಛೆ ತಮ್ಮ ಹಿಂದಿನ ರೀತಿ ರಿವಾಜನ್ನ ಪಾಲಿಸುತ್ತಾರೆ. ಇದು ಕೇವಲ ಪಟಾಕಿ ಹೊಡೆಯುವುದಕ್ಕೆ ಮಾತ್ರ ಸೀಮಿತವಲ್ಲ . ಇಲ್ಲಿನ ಜನತೆಯ ಮಾನಸಿಕತೆಯ ವಿರುದ್ಧ ಹೋಗುವ ಧೈರ್ಯವನ್ನ ಸರಕಾರಗಳು ಕೂಡ ಮಾಡುವುದಿಲ್ಲ. ಇದಕ್ಕೆ ಉದಾಹರಣೆಯಾಗಿ ಎರಡು ನಿದರ್ಶಗಳನ್ನ ನೀಡಬಲ್ಲೆ. ಸ್ಪೇನ್ ದೇಶದ ಸಮಯ ಜರ್ಮನಿಯನ್ನ ಹೋಲುತ್ತದೆ , ಆದರೆ ಸ್ಪೇನ್ , ಪೋರ್ಚುಗಲ್ ದೇಶದ ವೇಳೆಯನ್ನ ಅನುಸರಿಸಬೇಕಿತ್ತು .

ಈ ವೇಳೆ ಬದಲಾವಣೆ ಮಾಡಿಕೊಳ್ಳಬೇಕು ಎನ್ನುವುದು ದಶಕಗಳಿಂದ ಕೇಳಿ ಬರುತ್ತಿದೆ. ಆದರೆ, ಸಾಮಾನ್ಯ ಜನ ಇಂದು ಇರುವ ಸಮಯಕ್ಕೆ ಮನಸ್ಸನ್ನ ಒಗ್ಗಿಸಿ ಕೊಂಡಿದೆ. ಹೀಗಾಗಿ ಇಲ್ಲಿನ ಸರಕಾರ ಜನರ ವಿರುದ್ಧ ಹೋಗುವ ದಾರ್ಷ್ಟ್ಯ ತೋರುತ್ತಿಲ್ಲ . ಇನ್ನು ಸ್ಪೇನ್ ದೇಶದಲ್ಲಿ ಗೂಳಿ ಕಾಳಗ ಅತ್ಯಂತ ಪುರಾತನ ಕ್ರೀಡೆ. ಇದು ಪ್ರಾಣಿ ಹಿಂಸೆ ಇದನ್ನ ಮಾಡಬಾರದು ಎನ್ನುವುದು ಹಲವರ ಒತ್ತಾಯ. ಆದರೂ ಜನ ಸಾಮಾನ್ಯ ಇದನ್ನ ಬಯಸುತ್ತಾನೆ .

ಸಮೂಹ ಸನ್ನಿಗೆ ಸಿಲುಕುವುದು ಜನ ಸಾಮಾನ್ಯನ ಸಾಮಾನ್ಯ ಗುಣ! ಸಮೂಹ ಸನ್ನಿಗೆ ಸಿಲುಕುವುದು ಜನ ಸಾಮಾನ್ಯನ ಸಾಮಾನ್ಯ ಗುಣ!

ಹೀಗಾಗಿ ಇಂದಿಗೂ ಇದು ನಡೆಯುತ್ತದೆ. ಹಿಂದಿನ ಮಟ್ಟದಲ್ಲಿ ಇಲ್ಲದಿದ್ದರೂ , ಇಂದಿಗೂ ಇದೆ. ಪ್ರತಿ ದೇಶವೂ ತಮ್ಮ ಆಚಾರ , ವಿಚಾರ ನಂಬಿಕೆಗಳನ್ನ ಪಾಲಿಸುತ್ತವೆ. ನಾವು ಕೂಡ ನಮ್ಮ ಆಚಾರ ವಿಚಾರಗಳನ್ನ ಗೌರವಿಸಬೇಕು, ಪಾಲಿಸಬೇಕು. ನಾವು ಫೇಟ್ (fate )ಡೆಸ್ಟಿನಿ ಗಳ ಬಗ್ಗೆ ಮಾತಾಡುತ್ತೇವೆ , ಇದೆ ರೀತಿ ಇಲ್ಲಿನ ಜನರು ಕೂಡ ಫೇಟ್ , ಹಣೆಬರಹವನ್ನ ನಂಬುತ್ತಾರೆ. ಕೇವಲ ಹಬ್ಬ ಮಾತ್ರವಲ್ಲ ಹಣೆಬರಹ ಕೂಡ ಬಹಳಷ್ಟು ದೇಶಗಳ ಜನರು ನಂಬುತ್ತಾರೆ .

ಜಗತ್ತಿನಲ್ಲಿ ಇಷ್ಟೊಂದು ಜನರಿದ್ದೇವೆ ಒಬ್ಬಬ್ಬರ ಬದುಕು ಒಂದೊಂದು ತರ . ಒಂದೇ ತಾಯಿಯ ಹೊಟ್ಟೆಯಲ್ಲಿ ಜನಿಸಿದ ಮಕ್ಕಳಲ್ಲಿ , ಅವರ ಬದುಕಲ್ಲಿ ಬಹಳಷ್ಟು ಅಂತರವಿರುತ್ತದೆ . ಹೀಗೇಕೆ ? ಅವರು ಬೆಳೆದ ವಾತಾವರಣ , ನೀಡಿದ ಶಿಕ್ಷಣ , ಪ್ರೀತಿ , ಸುರಕ್ಷತಾ ಭಾವ ಎಲ್ಲವೂ ಒಂದೇ ಇದ್ದೂ ಬೆಳೆಯುತ್ತಾ ಅವರ ಜೀವನದಲ್ಲಿ ಬಹಳಷ್ಟು ಅಂತರ ಸೃಷ್ಟಿಯಾಗುತ್ತದೆ ಹೀಗೇಕೆ ? ಇಲ್ಲಿ ಏಕೆ ಎನ್ನವುದಕ್ಕೆ ಉತ್ತರವನ್ನ ನಿಖರವಾಗಿ ನೀಡಲು ಸಾಧ್ಯವಿಲ್ಲದ ಸಮಯದಲ್ಲಿ ' ಹಣೆಬರಹ , ಪೂರ್ವ ಜನ್ಮದ ಕರ್ಮ ಅಥವಾ ಡೆಸ್ಟಿನಿ ' ಎನ್ನುವ ಪದಗಳು ಸೃಷ್ಟಿಯಾಗಿರಬಹದು .

ಅಲ್ಲದೆ ಕೆಲವೊಮ್ಮೆ ಎಷ್ಟೇ ಕಷ್ಟಪಟ್ಟರೂ ಕೆಲವೊಂದು ವಿಷಯಗಳಿಗೆ ನಿಖರ ಉತ್ತರ ಹುಡುಕುವುದು ಅಥವಾ ಕಾರಣ ಕೊಡುವುದು ಕಷ್ಟಸಾಧ್ಯ . ನಾವು ನಂಬಲಿ ಅಥವಾ ಬಿಡಲಿ ಕೆಲವೊಂದು ವಿಷಯವನ್ನ ಇದ್ದಹಾಗೆ ಒಪ್ಪಿಕೊಳ್ಳುವುದ ಬಿಟ್ಟು ಹೆಚ್ಚಿನದೇನೂ ನಾವು ಮಾಡಲು ಸಾಧ್ಯವಿಲ್ಲ . ಜೀವನದಲ್ಲಿ ಎಲ್ಲಾ ತರದ ಸೋಲು, ನೋವು ತಿಂದ ವ್ಯಕ್ತಿಯೊಬ್ಬ ಇನ್ನು ಈ ಜೀವನ ನನಗೆ ಸಾಕು ಎಂದು ತನ್ನ ಜೀವನವನ್ನ ಕೊನೆಗೊಳಿಸಲು ಪ್ರಯತ್ನಿಸುತ್ತಾನೆ . ಅಲ್ಲಿಯೂ ಹಲವು ವಿಫಲಗಳನ್ನ ಕಂಡು ಕೊನೆಗೆ ಸಮುದ್ರದಲ್ಲಿ ಮುಳುಗಿ ಸಾಯುವ ನಿಶ್ಚಯಕ್ಕೆ ಬರುತ್ತಾನೆ .

ಹೀಗೆ ಸಮುದ್ರ ಹೊಕ್ಕಾಗ ಅಲ್ಲಿನ ನೀರು ಕೂಡ ಹಿಂಗಿ ಹೋಗಿ ಕೇವಲ ಮೊಳಕಾಲವರೆಗೆ ಮಾತ್ರ ನೀರು ಇರುತ್ತದೆ . ಕೊನೆಗೆ ಅವನ ಸಾಯುವ ಪ್ರಯತ್ನಕ್ಕೆ ಸಮುದ್ರ ಹೊಕ್ಕರೂ ಜಯ ಸಿಗುವುದಿಲ್ಲ. ಇದಕ್ಕೆ ನಾವು ಪಾಪಿ ಸಮುದ್ರ ಹೊಕ್ಕರೂ ಮೊಣಕಾಲುದ್ದ ನೀರು ಎನ್ನುತ್ತೇವೆ. ಇಲ್ಲಿ ಋಣಾತ್ಮಕ ಉದಾಹರಣೆ ಕೊಡಲಾಗಿದೆ ಆದರೆ ಇದನ್ನ ಬದುಕಿನ ಎಲ್ಲಾ ಮಜಲುಗಳಲ್ಲೂ ಅನ್ವಯಿಸಬಹದು . ಅರ್ಥ ಬಹಳ ಸರಳ ಕೆಲವೊಮ್ಮೆ ಮನುಷ್ಯ ಎಷ್ಟೇ ಪ್ರಯತ್ನ ಪಟ್ಟರೂ ಅವರಿಗೆ ಅದರಲ್ಲಿ ಜಯ ಸಿಗದೇ ಹೋಗಬಹದು ಏಕೆಂದರೆ ಅವರ ಹಣೆಬರಹದಲ್ಲಿ ಅದು ಇರುವುದಿಲ್ಲ , ಅಥವಾ ಆ ವಸ್ತು ಅಥವಾ ವಿಷಯದ ಪ್ರಾಪ್ತಿ ಅಥವಾ ಲಬ್ಧತೆ ಇರುವುದಿಲ್ಲ. ಮೇಲಿನ ಮಾತು ನಮಗಿಂತ ಹೆಚ್ಚಿನ ಬಲವುಳ್ಳ ಕಣ್ಣಿಗೆ ಕಾಣದ ಶಕ್ತಿಯ ಬಗ್ಗೆ ಜೊತೆಗೆ ನಮ್ಮ ಡೆಸ್ಟಿನಿ ಬಗ್ಗೆ ನಂಬಿಕೆ ಹೆಚ್ಚಿಸುವ ಮಾತನಾಡುತ್ತದೆ . ನಾವೆಲ್ಲಾ ನಮ್ಮ ಹಣೆಬರಹವನ್ನ ಹೊತ್ತು ಬಂದಿರುತ್ತೇವೆ ಎನ್ನವುದು ಸಾಮಾನ್ಯ ಅರ್ಥ .

ಇದನ್ನ ಸ್ಪಾನಿಷ್ ಭಾಷಿಕರು El que nace para tamal, del cielo le caen las hojas ಎನ್ನುತ್ತಾರೆ . ( ಎಲ್ ಕೆ ನಾಸೆ ಪರ ತಮಾಲ್ , ದೆಲ್ ಸಿಯಲೋ ಕಾಯೆನ್ ಲಾಸ್ ಹೋಹಾಸ್ ) . ಇದು ನಮ್ಮ ಪಾಪಿ ಸಮುದ್ರ ಹೊಕ್ಕರೂ ಮೊಳಕಾಲುದ್ದ ನೀರು ಎನ್ನುವ ಮಾತಿನ ಯಥಾವತ್ತು ಅರ್ಥ ನೀಡುತ್ತದೆ . ಇಲ್ಲಿ ಬಳಸಿರುವ ಉಪಮೆ ಮಾತ್ರ ಬಿನ್ನವಾಗಿದೆ . ತಮಾಲ್ ಎನ್ನುವುದು ಲಾಟಿನ್ ಭಾಷಿಕರು ಮಾಡುವ ಒಂದು ಖಾದ್ಯ . ಜೋಳ ಮತ್ತು ಮಾಂಸವನ್ನ ಸೇರಿಸಿ ಬೇಯಿಸಿ ಮಾಡುವ ಒಂದು ಆಹಾರ ಪದಾರ್ಥ . ಈ ಗಾದೆ ಹೇಳುತ್ತದೆ ಕೆಲವರು ತಮಾಲ್ ಖಾದ್ಯವನ್ನ ಮಾಡಲೆಂದೇ ಹುಟ್ಟಿರುತ್ತಾರೆ ಅಂತವರಿಗೆ ಎಲೆಯಲ್ಲಿ ಕಟ್ಟಿದ ಮಾಂಸ ಮತ್ತು ಜೋಳ ಆಕಾಶದಿಂದ ಬೀಳುತ್ತದೆ .

ಇದರರ್ಥ ಕೆಲವರ ಹಣೆಬರಹ ಅಥವಾ ಅದೃಷ್ಟ ಎಷ್ಟು ಚನ್ನಾಗಿರುತ್ತದೆ ಎಂದರೆ ಅವರ ನಿಂತ ಜಾಗಕ್ಕೆ ಆ ಖಾದ್ಯ ತಯಾರಿಸಲು ಬೇಕಾದ ವಸ್ತು ಸಿಗುತ್ತದೆ . ಅದೇ ಕೆಲವರು ಎಷ್ಟೇ ಕಷ್ಟ ಪಟ್ಟರೂ ಅವರಿಗೆ ತಮಾಲ್ ತಯಾರಿಸುವ , ತಿನ್ನುವ ಯೋಗ ವಿರುವುದಿಲ್ಲ . ವೇಳೆ , ಹಣೆಬರಹ ಚೆನ್ನಾಗಿದ್ದರೆ ಮುಟ್ಟಿದ್ದೆಲ್ಲಾ ಚಿನ್ನ ಇಲ್ಲವೇ ಎಲ್ಲವೂ ವಿರುದ್ಧ ಎನ್ನುವುದು ಅರ್ಥ .

ಇನ್ನು ಇಂಗ್ಲಿಷ್ ಭಾಷಿಕರು ' He who was born to be unlucky, will always be so.' ಎನ್ನುತ್ತಾರೆ . ಒಟ್ಟಿನಲ್ಲಿ ನಾವು ನಮ್ಮ ಅದೃಷ್ಟ , ದುರಾದೃಷ್ಟ ಕೇಳಿಕೊಂಡು ಬಂದಿರುತ್ತೇವೆ ಎನ್ನುವುದು ನಮ್ಮ ಹಿರಿಯರು ನಂಬಿದ ವಿಷಯವಾಗಿತ್ತು . ಇಂದಿಗೂ ಇಂತಹ ಮಾತುಗಳಲ್ಲಿ ಪೂರ್ಣವಾಗಿ ನಂಬಿಕೆಯಿಲ್ಲ ಎನ್ನವುದು ಅಸಾಧ್ಯ . ನಮ್ಮ ಕಣ್ಣ ಮುಂದೆ ನಮಗಿಂತ ಎಲ್ಲಾ ಕೋನದಲ್ಲೂ ಕಡಿಮೆ ಎನಿಸಿಕೊಂಡ ವ್ಯಕ್ತಿ ನಮ್ಮ ಮುಂದೆಯೇ ನಮ್ಮ ಮೀರಿ ಬೆಳೆದಾಗ , ಅದೃಷ್ಟ , ಹಣೆಬರಹ ಮತ್ತೆ ಮುಂಚೂಣಿಗೆ ಬರುತ್ತವೆ .

ಎಲ್ಲವನ್ನೂ , ಎಲ್ಲರನ್ನೂ ಸಮಚಿತ್ತದಿಂದ ನೋಡುವುದನ್ನ ಬೆಳಸಿಕೊಂಡಾಗ ಈ ಜಗತ್ತು ಎಲ್ಲರೂ ಬದುಕಬಹುದಾದ ಜಾಗವಾಗುತ್ತದೆ. ಇದನ್ನ ಸ್ಪ್ಯಾನಿಶರು 'ಅಕಿ ಕಾವೇ ಮೊಸ್ ತೊದೊಸ್ ' ಎನ್ನುತ್ತಾರೆ. ಹೌದು ವಿಶಾಲವಾದ ಈ ಜಗತ್ತಿನಲ್ಲಿ ನಾವೆಲ್ಲಾ ಒಟ್ಟಾಗಿ ಬದುಕಬಹುದು.

English summary
Barcelona Memories Column By Rangaswamy Mookanahalli Part 57,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X