• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೀನಾಳ ಬದುಕಿನ ದಿಕ್ಕನ್ನೇ ಬದಲಾಯಿಸಿದ ಮುಂಬೈನ ಆ ವರ್ಷಧಾರೆ!

By ರಂಗಸ್ವಾಮಿ ಮೂಕನಹಳ್ಳಿ
|

ಜುಲೈ ತಿಂಗಳ ಕೊನೆಯ ವಾರದಲ್ಲಿ ಬೆಂಗಳೂರಿಗೆ ಟಿಕೆಟ್ ಬುಕ್ ಮಾಡಿದ್ದೆ. ನನ್ನ ಜೊತೆ ತಮ್ಮ ಲಕ್ಷ್ಮಿ ಕಾಂತ ಮತ್ತು ಐದಾರು ಸ್ಪ್ಯಾನಿಷ್ ಮಿತ್ರರು ಕೂಡ ನಮ್ಮ ಜೊತೆಯಲ್ಲಿ ಬೆಂಗಳೂರಿಗೆ ಹೊರಟಿದ್ದರು. ಆಗಸ್ಟ್ 3ರಂದು ನನ್ನ ಮತ್ತು ರಮ್ಯಳ ಮದುವೆ ನಿಶ್ಚಿತವಾಗಿತ್ತು. ಜುಲೈ 25ರ ಬೆಳಿಗ್ಗೆ ಬಾರ್ಸಿಲೋನಾ ದಿಂದ ಜರ್ಮನಿಯ ಫ್ರಾಂಕ್ಫರ್ಟ್ ಗೆ ವಿಮಾನವೇರಿದೆವು.

ನನ್ನ ಅಂದಿನ ಸಂಸ್ಥೆಯ ಡೈರೆಕ್ಟರ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬೀನಾ ಎನ್ನುವ ಹೆಣ್ಣು ಮಗಳನ್ನ ಮುಂಬೈ ನಲ್ಲಿ ಇಳಿಸಿ ಟ್ಯಾಕ್ಸಿ ಮಾಡಿ ಅವರ ಮನೆಗೆ ಕಳುಹಿಸು ಎನ್ನುವ ಆತನ ಕೋರಿಕೆಯನ್ನ ನಾನು ಇಲ್ಲವೆನ್ನಲಾಗದ ಸ್ಥಿತಿಯಲ್ಲಿದ್ದೆ. ನಾನು ಯಾರನ್ನ ಹೊತ್ತು ಕೊಂಡು ಹೋಗುವುದೇನಿದೆ? ವಿಮಾನದಲ್ಲಿ ಪ್ರಯಾಣ , ಮುಂಬೈಯಲ್ಲಿ ಹೇಗೂ ಡೊಮೆಸ್ಟಿಕ್ ಫ್ಲೈಟ್ ಗೆ ಅಂತ ಹೊರಬರೆಬೇಕಿತ್ತು , ಆಗ ಆಕೆಯನ್ನ ಟ್ಯಾಕ್ಸಿ ಹತ್ತಿ ಕಳಿಸಿದರಾಯ್ತು ಎಂದು 'ಯಸ್' ಅಂದಿದ್ದೆ.

ನಾಳೆಯ ಗುಟ್ಟು ಬಿಟ್ಟು ಕೊಡದ ಬದುಕು ಅಚ್ಚರಿಗಳ ಸಾಗರ!

ಆಕೆಯ ಪಾಸ್ಪೋರ್ಟ್ ಮತ್ತು ರೆಸಿಡೆನ್ಸಿ ಕಾರ್ಡ್ ಎರಡನ್ನೂ ನನ್ನ ಕೈಲಿಟ್ಟು ಆತ ಇದನ್ನ ಯಾವ ಕಾರಣಕ್ಕೂ ಬೀನಾಳಿಗೆ ಕೊಡಬೇಡ , ಕೊಟ್ಟರೆ ಮತ್ತೆ ಅವಳು ವಾಪಸ್ಸು ನಮ್ಮ ಮನೆಯಲ್ಲಿ ಕೆಲಸಕ್ಕೆ ಬರುವುದು ಸಂಶಯ , ಹೀಗಾಗಿ ಅವಳಿಗೆ ಕೊಡಬೇಡ ಎನ್ನುವ ತಾಕೀತು ಮಾಡಿದರಾತ.

ಇದೊಳ್ಳೆ ಪಜೀತಿಯಾಯ್ತಲ್ಲ ಎಂದು ಮನಸ್ಸಿನಲ್ಲಿ ಅಂದುಕೊಂಡರೂ ಅಯ್ಯೋ ನನಗೇನು ಬಿಡು ಎಂದು ಕೊಂಡು ಅದಕ್ಕೂ ಆಯ್ತು ಎಂದಿದ್ದೆ. ಆದರೇನು ವಿಧಿಯಾಟ ಬೇರೆಯಿತ್ತು. ಬಾರ್ಸಿಲೋನಾ ದಲ್ಲಿ ನಾವು ವಿಮಾನವೇರಿದಾಗ ಮುಂಬೈ ನಲ್ಲಿ ಧಾರಾಕಾರವಾಗಿ ಮಳೆ ಬರಬಹದು ಎನ್ನುವ ಸುಳಿವು ಕೂಡ ನಮಗಿರಲಿಲ್ಲ. ಅಷ್ಟೇಕೆ , ಫ್ರಾಂಕ್ಫರ್ಟ್ ನಿಂದ ಹೊರಟಾಗ ಕೂಡ ಅಲ್ಲಿ ವಾತಾವರಣ ಸೊಗಸಾಗಿತ್ತು.

ಅಂದಿನ ದಿನದಲ್ಲಿ ಬೆಂಗಳೂರಿಗೆ ನೇರವಾಗಿ ವಿಮಾನ ಸೌಕರ್ಯವಿರಲಿಲ್ಲ . ಮುಂಬೈ ಅಥವಾ ಚನ್ನೈ ಗೆ ಬಂದು ನಂತರ ಅಲ್ಲಿಂದ ಡೊಮೆಸ್ಟಿಕ್ ಫ್ಲೈಟ್ ಹಿಡಿಯಬೇಕಾಗಿತ್ತು. ಫ್ರಾಂಕ್ಫರ್ಟ್ ನಿಂದ ಮುಂಬೈಗೆ ಹತ್ತಿರತ್ತಿರ 8ತಾಸಿನ ಪ್ರಯಾಣ. ನಮ್ಮ ಪ್ರಯಾಣ ಸುಖಕರವಾಗಿತ್ತು. ಕ್ಯಾಪ್ಟನ್ ' ನಾವು ಮುಂಬೈ ನಗರವನ್ನ ತಲುಪಿದ್ದೇವೆ , ಆದರೆ ಇಲ್ಲಿ ಬಹಳ ಮಳೆಯಿರುವ ಕಾರಣ , ನಮಗೆ ಇಳಿಯಲು ಒಪ್ಪಿಗೆ ನೀಡಿಲ್ಲ , ಹೀಗಾಗಿ ಇಲ್ಲಿ ಒಂದರ್ಧ ತಾಸು ಸುತ್ತು ಹಾಕುತ್ತಿರುತ್ತೇವೆ ' ಎನ್ನುವ ಘೋಷಣೆಯನ್ನ ಮಾಡಿದರು.

ನಮಗಾಗಲೇ ವಿಮಾನದಿಂದ ಇಳಿದರೆ ಸಾಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಾರ್ಸಿಲೋನಾ ಬಿಟ್ಟು ಹತ್ತಿರತ್ತಿರ 18 ತಾಸು ಕಳೆದಿತ್ತು . ಹೀಗೆ ಐದಾರು ಸುತ್ತು ಹಾಕಿದ ನಂತರ ' ನಮಗೆ ಇಲ್ಲಿ ಇಳಿಯಲು ಅನುಮತಿ ಸಿಕ್ಕಿಲ್ಲ , ನಮ್ಮ ಬಳಿ ಇರುವ ಇಂಧನದ ಲೆಕ್ಕಾಚಾರದ ಮೇಲೆ ನಮಗೆ ಚೆನ್ನೈಗೆ ಹೋಗಲು ಅನುಮತಿ ನೀಡಿದ್ದಾರೆ , ಹೀಗಾಗಿ ನಾವು ಚೆನ್ನೈಗೆ ಹೋಗುತ್ತಿದ್ದೇವೆ , ನಿಮಗಾದ ತೊಂದರೆಗೆ ನಮ್ಮ ವಿಷಾದವಿದೆ ' ಎನ್ನುವ ಘೋಷಣೆಯನ್ನ ಕ್ಯಾಪ್ಟನ್ ಹೇಳಿದರು.

ವಲಸೆ ಎಂದರೆ 'ಹೊಲಸು 'ಎನ್ನುವಂತೆ ಮಾಡಿದ್ದು ವಲಸಿಗರು!

ವಿಮಾನದಲ್ಲಿ ಕುಳಿತಾಗಿದೆ , ಧುಮುಕಲು ಸಾಧ್ಯವಿಲ್ಲ , ಉಸ್ಸಪ್ಪಾ ಎಂದು ಕುಳಿತೆವು. ವಿಮಾನವನ್ನ ಚೆನೈಗೆ ದೌಡಾಯಿಸಿದರು. ಅಲ್ಲಿ ನಮಗೆ ಕೇವಲ ಮರು ಇಂಧನ ತುಂಬಿಸಿಕೊಳ್ಳಲು ಮಾತ್ರ ಅನುಮತಿ ನೀಡಲಾಗಿತ್ತು. ಈ ಸಮಯವನ್ನ ಉಪಯೋಗಿಸಿಕೊಂಡು ನಮ್ಮ ವಿಮಾನದಲ್ಲಿರುವ ಜನಕ್ಕೆ ಒಂದಷ್ಟು ಊಟ ಮತ್ತು ತಿಂಡಿಯನ್ನ ಸಹ ತರಿಸಿಕೊಂಡು ಕೊಟ್ಟರು. ಹೀಗೆ ವಿಮಾನ ನಿಂತಾಗ ಕೂಡ ಅಲ್ಲಿ ತಿಂದ ಅನುಭವ ಕೂಡ ಅಂದು ನಮ್ಮದಾಯಿತು.

ಹೊಟ್ಟೆಗೂ , ವಿಮಾನಕ್ಕೂ ಎರಡಕ್ಕೂ ಆಹಾರ ತುಂಬಿಸಿ ಮತ್ತೆ ಮುಂಬೈನತ್ತ ಪ್ರಯಾಣ ಹೊರಟೆವು. ಮತ್ತೆ ಅದೇ ಪುನರಾವರ್ತನೆ , ಐದಾರು ಸುತ್ತು ಹಾಕಿ ನಂತರ ' ಮುಂಬೈ ಏರ್ಪೋರ್ಟ್ ನಲ್ಲಿ ಇಳಿಯಲು ಸಾಧ್ಯವಿಲ್ಲ , ಮರಳಿ ಚೆನ್ನೈಗೆ ಹೊರಟ್ಟಿದ್ದೇವೆ ' ಎನ್ನುವ ಘೋಷಣೆ. ಚೆನ್ನೈ ನಲ್ಲಿ ಇಳಿದೆವು. ಆದರೆ ಚನ್ನೈ ಏರ್ಪೋರ್ಟ್ ಇಂದ ಹೊರಹೋಗುವ ಹಾಗಿಲ್ಲ !! ಏಕೆಂದರೆ ನಮ್ಮ ಇಮಿಗ್ರೇಶನ್ ಕ್ಲಿಯರ್ ಆಗಬೇಕಿರುವುದು ಮುಂಬೈ ನಿಂದ , ಚನ್ನೈನಿಂದಲ್ಲ !! .

ಚನ್ನೈ ಏರ್ಪೋರ್ಟ್ ಅಂದು ಅಕ್ಷರಂಶ ನಮ್ಮ ಕಲಾಸಿಪಾಳ್ಯ ಬಸ್ ಸ್ಟಾಂಡ್ ಆಗಿ ಪರಿವರ್ತನೆಗೊಂಡಿತ್ತು. ಸುಸ್ತಾದ ಜನ ಸಿಕ್ಕ ಸಿಕ್ಕಲ್ಲಿ ಮಲಗುತ್ತಿದ್ದರು. ಶಿಷ್ಟಾಚಾರ ಎನ್ನುವುದು ಮುದುರಿ ಮೂಲೆಯಲ್ಲಿ ಕುಳಿತ್ತಿತ್ತು. ನನಗೆ ಹೊಸ ತಲೆನೋವು ಶುರುವಾಗಿತ್ತು , ಬೀನಾಳನ್ನ ಏನು ಮಾಡುವುದು ? ಈ ಮಧ್ಯೆ ಬೀನಾ ' ಬಾಯ್ ಮೇರಾ ಕಾರ್ಡ್ ಔರ್ ಪಾಸ್ಪೋರ್ಟ್ ಮುಜೆ ದೆದೊ ಬಡಿ ಮೆಹರ್ಬಾನಿ ಹೋಗಿ ಆಪ್ಕಾ ' ಎಂದಳು.

ನಮ್ಮೆಲ್ಲಾ ಭಿನ್ನತೆಗಳ ನಡುವೆ ಕೂಡ ನಮ್ಮನ್ನ ಬೆಸೆಯುವ ಕೊಂಡಿಗಳು ಬೇಕಾದಷ್ಟಿವೆ!

ನಾನು ಹೇಗೆ ಕೊಡುವುದು ಎಂದು ಚಿಂತನೆಯಲ್ಲಿದ್ದೆ. ಬೀನಾ ಮೂರು ವರ್ಷದಲ್ಲಿ ಅವರ ಮನೆಯಲ್ಲಿ ಪಟ್ಟ ಕಷ್ಟವನ್ನ ವರ್ಣಿಸ ತೊಡಗಿದಳು . ಅವರು ಮನುಷ್ಯರೇ ಅಲ್ಲ , ಟಾಯ್ಲೆಟ್ ಗೆ ಹೋಗಿ ಫ್ಲೆಶ್ ಕೂಡ ಮಾಡುವುದಿಲ್ಲ ,ನನ್ನನ್ನ ತುಂಬಾ ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ದಯಮಾಡಿ ನನ್ನ ಕಾರ್ಡ್ ಮತ್ತು ಪಾಸ್ಪೋರ್ಟ್ ಕೊಟ್ಟರೆ ನಾನು ಮರಳಿ ಬಾರ್ಸಿಲೋನಾ ಕ್ಕೆ ಹೋಗಿ ಬೇರೆಯ ಕಡೆ ಕೆಲಸ ಹುಡುಕಿಕೊಳ್ಳುತ್ತೇನೆ ಎಂದು ಅಂಗಲಾಚ ತೊಡಗಿದಳು.

ಈ ಕಥೆಯ ಮಧ್ಯೆ ಒಂದಷ್ಟು ಜನ ನಾವು ಕಾರ್ ಮಾಡಿಕೊಂಡು ಬೆಂಗಳೂರಿಗೆ ಹೋಗುತ್ತೇವೆ ನಮಗೆ ಇಮಿಗ್ರೇಷನ್ ಕ್ಲಿಯರ್ ಮಾಡಿ ಎಂದು ಕೂಗಾಡ ತೊಡಗಿದರು. ಏರ್ಲೈನ್ಸ್ ನವರು ಒಂದು ತಾಸಿನ ನಂತರ ' ಚನ್ನೈ ನಲ್ಲಿ ಇಮಿಗ್ರೇಷನ್ ಕ್ಲಿಯರ್ ಮಾಡುತ್ತೇವೆ , ಆದರೆ ಬೆಂಗಳೂರಿಗೆ ಹೋಗುವ ಜವಾಬ್ದಾರಿ ನಿಮ್ಮದು ' ಎಂದರು.

ಮುಂಬೈ ನಿಂದ ಬೆಂಗಳೂರಿಗೆ ಕೂಡ ಟಿಕೆಟ್ ಕಾಯ್ದಿರಿಸಿದ್ದೆವು. ಈಗ ಹೊಸದಾಗಿ ಚನ್ನೈ ನಿಂದ ಬೆಂಗಳೂರಿಗೆ ಟಿಕೆಟ್ ಖರೀದಿಸಬೇಕಾಗಿತ್ತು. ಮುಂಬೈಗೆ ಮಳೆ ಇಳಿದ ನಂತರ ಕರೆದುಕೊಂಡು ಹೋಗುವುದಾಗಿ ಹೇಳಿದರು. ನಮಗೆ ಬೆಂಗಳೂರು ತಲುಪಿದರೆ ಸಾಕು ಎನ್ನುವಂತಾಗಿತ್ತು. ಚನ್ನೈ ನಿಂದ ಬೆಂಗಳೂರಿಗೆ ಹೊಸದಾಗಿ ಏರ್ ಟಿಕೆಟ್ ಖರೀದಿಸಿದೆವು.

ಬೀನಾಳಿಗೆ ಅವಳ ಪಾಸ್ಪೋರ್ಟ್ ಮತ್ತು ಕಾರ್ಡ್ ಕೊಟ್ಟು ' ಬೀನಾ ಮಳೆ ನಿನಗೆ ಅದೃಷ್ಟ ತಂದಿದೆ , ನಿಮಗೆ ಒಳಿತಾಗಲಿ ' ಎಂದೇ . ಆಕೆ ' ಭಾಯ್ ನಿಮ್ಮ ಋಣ ಎಂದೂ ಮರೆಯುವುದಿಲ್ಲ , ನನಗೆ ತಿಂಗಳ ನಂತರ ಮುಂಬೈನಿಂದ ಬಾರ್ಸಿಲೋನಾ ಗೆ ಒನ್ ವೇ ಟಿಕೆಟ್ ತೆಗೆದುಕೊಡಿ ' ಎನ್ನುವ ಹೊಸ ಬೇಡಿಕೆಯನ್ನ ಇಟ್ಟಳು. ನನಗೆ ನೆನಪಿದೆ ಅಂದಿಗೆ ಒನ್ ವೇ ಟಿಕೆಟ್ 37ಸಾವಿರ ರೂಪಾಯಿ. ಬೀನಾ ತನ್ನ ಕಷ್ಟವನ್ನ ನನ್ನ ಸ್ಪ್ಯಾನಿಷ್ ಸ್ನೇಹಿತರಿಗೂ ತನ್ನ ಹರುಕು ಮುರುಕು ಸ್ಪ್ಯಾನಿಷ್ ನಲ್ಲಿ ತೋಡಿಕೊಂಡಿದ್ದಳು.

ಅವರೆಲ್ಲ ಎಷ್ಟೇ ಆದರೂ ಸೋಷಿಯಲಿಸ್ಟ್ ಮನಸ್ಥಿತಿಯವರು. ' ಒಯ್ಯೆ ರಂಗ , ತು ತಿಯನೆಸ್ ತಾನ್ತೊ , ಸಾಕಲೋ ಉನ್ ಬಿಯತ್ತೆ ಪರ ಎಯ್ಯ ' ಎಂದರವರು . (ನಿನ್ನ ಬಳಿ ಸಾಕಷ್ಟಿದೆ ಅವಳಿಗೆ ಒಂದು ಟಿಕೆಟ್ ತೆಗೆದು ಕೊಡು ಎನ್ನುವ ಅರ್ಥ ) ನನ್ನ ಮದುವೆಗೆ ಹೊರಟ್ಟಿದ್ದೇನೆ , ಇಲ್ಲೊಬ್ಬಳು ಹೆಣ್ಣುಮಗಳು ಅಳುತ್ತಿದ್ದಾಳೆ. ಸುಮ್ಮನೆ ಹೋಗುವುದು ಸರಿಯಲ್ಲ ಎಂದು ಅಲ್ಲೇ ಕೌಂಟರ್ ನಲ್ಲಿ ಆಕೆಗೆ ಮುಂಬೈ ಟು ಬಾರ್ಸಿಲೋನಾ ಟಿಕೆಟ್ ಕೊಡಿಸಿದೆ. ನಿನಗೆ ಒಳ್ಳೆಯದಾಗಲಿ ಎನ್ನುವ ನನ್ನ ಮಾತಿಗೆ ನಿಮ್ಮ ಋಣ ಮರೆಯುವುದಿಲ್ಲ ಎಂದಳಾಕೆ.

ಬದುಕು ನಮ್ಮ ಅನುಭವಗಳ ಒಟ್ಟು ಮೊತ್ತ, ಇಂದಿಗೆ ನಿಷಿದ್ಧ ಅನ್ನಿಸಿದ್ದು ನಾಳೆ ಪ್ರಸಿದ್ಧವಾಗಬಹದು!

ಬೆಂಗಳೂರು ಸೇರಿದೆವು , ಮದುವೆ ಆಯ್ತು , ನಾನು ಬಾರ್ಸಿಲೋನಾ ಸೇರಿದೆ. ಮುಂದಿನ ಮೂರು ತಿಂಗಳಲ್ಲಿ ರಮ್ಯ ಕೂಡ ರೆಸಿಡೆನ್ಸಿ ಪರ್ಮಿಟ್ ಪಡೆದು ಬಂದು ಬಾರ್ಸಿಲೋನಾ ಸೇರಿದಳು. ಶುಕ್ರವಾರ ರಾತ್ರಿ ಬೆನ್ನಿಗೆ ಬ್ಯಾಗ್ ಏರಿಸಿ ಹೊರಟರೆ ಭಾನುವಾರ ರಾತ್ರಿ ವಾಪಸ್ಸು ಬರುತ್ತಿದ್ದೆವು. ಅದು ಅಲೆಮಾರಿ ದಿನಗಳು. ಅಂದು ಕೊಂಡ ನಗರ , ದೇಶವನ್ನ ನೋಡಲು ಹಕ್ಕಿಯಂತೆ ಹಾರಿ ಹೋಗುತ್ತಿದ್ದೆವು. ಆಗಿನ್ನೂ ಸೋಶಿಯಲ್ ಮೀಡಿಯಾ ಇಲ್ಲದ ಕಾರಣ , ಯಾವುದೇ ಫೋಟೋ , ವಿಡಿಯೋ ಒತ್ತಡವಿಲ್ಲದೆ ಮುಕ್ತವಾಗಿ ಆಸ್ವಾದಿಸಿದೆವು.

ಹೀಗೆ 2007ರ ಒಂದು ದಿನ ಏರ್ಪೋರ್ಟ್ ಕಡೆಗೆ ಹೊರಟ್ಟಿದ್ದೆವು. ಪ್ಲಾಜಾ ಕತಲೋನ್ಯದಲ್ಲಿ ಮೆಟ್ರೋ ಇಂದ ಇಳಿದು , ಏರ್ಪೋರ್ಟ್ ಗೆ ಹೋಗುವ ಟ್ರೈನ್ ಹಿಡಿಯಲು ಸಾಗುತ್ತಿದ್ದೆವು. ಯಾರೋ ಕಾಲನ್ನ ಕಟ್ಟಿದಂತೆ ಭಾಸವಾಯ್ತು , ಇದೇನು ಎಂದು ನೋಡಿದರೆ ಬೀನಾ , ಎದ್ದವಳು ಭಾಯ್ ಎಂದು ಹಗುರವಾಗಿ ನನ್ನ ಅಪ್ಪಿದಳು. ಭಾಬಿ ಕೈಸೇ ಹೊ ಆಪ್ ಎಂದು ರಮ್ಯಳನ್ನ ಕೂಡ ಅಪ್ಪಿದಳು.

ತಿಂಗಳ ನಂತರ ನೀವು ಕೊಡಿಸಿದ ಟಿಕೆಟ್ ನಿಂದ ವಾಪಸ್ಸು ಬಾರ್ಸಿಲೋನಾ ಗೆ ಬಂದೆ , ಕೆಲವು ಕಾಫಿ ಬಾರಿನಲ್ಲಿ , ಸೂಪರ್ ಮಾರ್ಕೆಟ್ ನಲ್ಲಿ ಕೆಲಸ ಮಾಡಿದೆ. ಎರಡು ವರ್ಷದ ನನ್ನ ಉಳಿಕೆಯ ಹಣದ ಜೊತೆಗೆ ಬ್ಯಾಂಕ್ ನಿಂದ ಕೂಡ ಒಂದಷ್ಟು ಸಾಲ ಪಡೆದು ಈಗ ನನ್ನದೇ ಒಂದು ಪುಟಾಣಿ ಕಾಫಿ ಬಾರ್ ಶುರು ಮಾಡಿದ್ದೇನೆ , ದೇವರ ದಯದಿಂದ ಚನ್ನಾಗಿ ನಡೆಯುತ್ತಿದೆ. ದಯಮಾಡಿ ನನ್ನ ಬಾರಿಗೆ ಬನ್ನಿ ಎಂದಳು. ನೀವು ಬಂದಾಗ ನಿಮ್ಮ ಹಣವನ್ನ ಕೂಡ ಕೊಡುತ್ತೇನೆ ಎಂದಳವಳು.

ರಮ್ಯಳಿಗೆ ವಿಮಾನ ಪ್ರಯಾಣದಲ್ಲಿ ಆದ ಘಟನೆಯನ್ನ ಹೇಳುವುದು ಮರೆತ್ತಿದ್ದೆ. ಏನೋ ಗುಂಡ ಈಕೆ ನಿನಗೆ ದೇವರ ಪಟ್ಟ ನೀಡುತ್ತಿದ್ದಾಳೆ ಎಂದಳು. ಘಟನೆಯನ್ನ ವಿವರಿಸಿದೆ. ಮೃದು ಹೃದಯದ ರಮ್ಯಳ ಕಣ್ಣ ತುಂಬಾ ನೀರು. ಒಂದಷ್ಟು ದಿನದ ನಂತರ ಬೀನಾಳ ಬಾರ್ ಗೆ ಹೋದೆವು. ಅವಳ ಛಾತಿ ಆಕೆಯನ್ನ ಸ್ವಉದ್ಯಮ ನಡೆಸಲು ಪ್ರೇರೇಪಿಸಿತ್ತು. ಹಣ ನೀಡಲು ಬಂದವಳಿಗೆ ನೀನು ಹೊಸ ಹೋಟೆಲ್ ತೆಗೆದಿದ್ದೀಯ ಅದಕ್ಕೆ ನನ್ನ ಕಡೆಯಿಂದ ಅದು ಸಣ್ಣ ಗಿಫ್ಟ್ ಎಂದು ನಯವಾಗಿ ಹಣವನ್ನ ನಿರಾಕರಿಸಿದೆ.

ಬೀನಾ ಇಂದಿಗೂ ಬಾರ್ಸಿಲೋನಾದಲ್ಲಿ ಕಾಫಿ ಬಾರ್ ನಡೆಸುತ್ತ ಬದುಕು ಕಟ್ಟಿಕೊಂಡಿದ್ದಾಳೆ. ಕುಡುಕ ಗಂಡನಿಂದ ಡೈವೋರ್ಸ್ ಪಡೆದು , ಒಂದು ಗಂಡು ಒಂದು ಹೆಣ್ಣು ಮಕ್ಕಳಿಬ್ಬರನ್ನೂ ಬಾರ್ಸಿಲೋನಾ ಗೆ ಕಾನೂನು ಪ್ರಕಾರ ಕರೆಸಿಕೊಂಡು ಅವರನ್ನ ಓದಿಸುತ್ತಿದ್ದಾಳೆ. ಮಾಡಬೇಕು ಎನ್ನುವ ಛಲ ಬೇಕು , ಉಳಿದದಕ್ಕೆ ದೈವ ಸಹಾಯ ಒದಗಿಬರುತ್ತದೆ. ಇಲ್ಲಿ ನಾನು ನಿಮಿತ್ತ ಮಾತ್ರ , ಅವತ್ತು ಮಳೆ ಬರದೇ ಇದ್ದಿದ್ದರೆ ..??

English summary
Barcelona Memories Coloumn By Rangaswamy Mookanahalli Part 8
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X